ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಬಲವಾದ ಜಾಗತಿಕ ಸಹಭಾಗಿತ್ವ ಮತ್ತು ಹೂಡಿಕೆ ಆಸಕ್ತಿಯನ್ನು ಆಕರ್ಷಿಸುತ್ತಿದೆ: ಶ್ರೀ ಅಶ್ವಿನಿ ವೈಷ್ಣವ್


ಸೆಮಿಕಾನ್ ಇಂಡಿಯಾ 2026ರ ಎರಡನೇ ದಿನ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯ ವಿವಿಧ ವಿಭಾಗಗಳಲ್ಲಿ 25 ಪ್ರಮುಖ ಘೋಷಣೆಗಳು ಮತ್ತು ಸಹಯೋಗಗಳಿಗೆ ಸಾಕ್ಷಿಯಾಯಿತು

ಸೆಮಿಕಂಡಕ್ಟರ್ ತಯಾರಿಕೆ, ಸಾಮಗ್ರಿಗಳು, ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ, ಚಿಪ್ ವಿನ್ಯಾಸ, ಸುಧಾರಿತ ಪ್ಯಾಕೇಜಿಂಗ್, ಪವರ್ ಎಲೆಕ್ಟ್ರಾನಿಕ್ಸ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರಗಳಲ್ಲಿ ಘೋಷಣೆಗಳು

ಸುಸ್ಥಿರತೆಗೆ ಸಚಿವರ ಒತ್ತು  - ಫ್ಯಾಬ್‌ಗಳಲ್ಲಿ ನೀರಿನ ಮರುಬಳಕೆ, ದತ್ತಾಂಶ ಕೇಂದ್ರಗಳಲ್ಲಿ ಕ್ಲೋಸ್ಡ್‑ಲೂಪ್ ಕೂಲಿಂಗ್ ವ್ಯವಸ್ಥೆ

ಪ್ರಕಟಣಾ ದಿನಾಂಕ: 18 SEP 2026 8:19PM by PIB Bengaluru

ಸೆಮಿಕಾನ್ ಇಂಡಿಯಾ 2026ರ ಎರಡನೇ ದಿನವು ಸೆಮಿಕಂಡಕ್ಟರ್ ಮೌಲ್ಯ ಸರಪಳಿಯ ವಿವಿಧ ವಿಭಾಗಗಳನ್ನು ಒಳಗೊಂಡಂತೆ ಸೆಮಿಕಂಡಕ್ಟರ್ ತಯಾರಿಕೆ, ಸಾಮಗ್ರಿಗಳು, ಸಾಗಣೆ ಮತ್ತು ಪೂರೈಕೆ ಸರಪಳಿ, ಚಿಪ್ ವಿನ್ಯಾಸ, ಸುಧಾರಿತ ಪ್ಯಾಕೇಜಿಂಗ್, ಪವರ್ ಎಲೆಕ್ಟ್ರಾನಿಕ್ಸ್ ಹಾಗೂ ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ 25 ಪ್ರಮುಖ ಘೋಷಣೆಗಳು ಮತ್ತು ಸಹಯೋಗಗಳಿಗೆ ಸಾಕ್ಷಿಯಾಯಿತು. ಈ ಕಾರ್ಯಕ್ರಮಕ್ಕೆ ಉತ್ತೇಜನಕಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನದಂದು ಸುಮಾರು 12,000 ಮಂದಿ ಭೇಟಿ ನೀಡಿದ್ದರು. ಇವರಲ್ಲಿ ಹೆಚ್ಚಿನವರು ಉದ್ಯಮ ಕ್ಷೇತ್ರದ ಪ್ರತಿನಿಧಿಗಳಾಗಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 300 ಅಂತಾರಾಷ್ಟ್ರೀಯ ಪ್ರದರ್ಶಕರು ಸೇರಿದಂತೆ 600ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಎರಡನೇ ದಿನದಂದು ಭಾಗವಹಿಸುವಿಕೆ ಇನ್ನಷ್ಟು ಹೆಚ್ಚಾಗಿತ್ತು ಎಂದು ತಿಳಿಸಿದರು. ಬಿಸಿನೆಸ್-ಟು-ಬಿಸಿನೆಸ್ (ಬಿ2ಬಿ) ಉತ್ತಮ ಮಟ್ಟದ ಸಂವಹನ ನಡೆದಿದ್ದು, ವಾಣಿಜ್ಯ ಸಭೆಗಳ ಸಂದರ್ಭದಲ್ಲಿ ಹಲವು ಒಪ್ಪಂದಗಳು ಅಂತಿಮಗೊಂಡಿವೆ. ವಿವಿಧ ಗೋಷ್ಠಿಗಳಿಗೂ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಅವರು ಹೇಳಿದರು. ದೇಶವಾರು ದುಂಡುಮೇಜಿನ ಸಭೆಗಳಿಗೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಪಾನ್ ಮತ್ತು ಸಿಂಗಾಪುರದ ತಲಾ 30ಕ್ಕೂ ಹೆಚ್ಚು ಕಂಪನಿಗಳು ತಮ್ಮ ತಮ್ಮ ಪೆವಿಲಿಯನ್‌ಗಳಲ್ಲಿ ಭಾಗವಹಿಸಿದ್ದವು. ಜೊತೆಗೆ ದಕ್ಷಿಣ ಕೊರಿಯಾ ಮತ್ತು ಬೆಲ್ಜಿಯಂ, ನೆದರ್‌ಲ್ಯಾಂಡ್ಸ್ ಹಾಗೂ ಸ್ವೀಡನ್ ಸೇರಿದಂತೆ ಹಲವು ಯುರೋಪಿಯನ್ ದೇಶಗಳೂ ಭಾಗವಹಿಸಿದ್ದವು.

ಭಾರತದಲ್ಲಿ ಸೆಮಿಕಂಡಕ್ಟರ್ ಸಂಬಂಧಿತ ಚಟುವಟಿಕೆಗಳನ್ನು ವಿಸ್ತರಿಸುವಲ್ಲಿ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಈ ಹೆಚ್ಚಿನ ಭಾಗವಹಿಸುವಿಕೆ ಪ್ರತಿಬಿಂಬಿಸುತ್ತದೆ ಎಂದು ಶ್ರೀ ವೈಷ್ಣವ್ ಹೇಳಿದರು. ಕಾರ್ಯಕ್ರಮದಲ್ಲಿ ವ್ಯಕ್ತವಾಗುತ್ತಿರುವ ಹೂಡಿಕೆ ಆಸಕ್ತಿಯ ಬಗ್ಗೆಯೂ ಅವರು ಗಮನ ಸೆಳೆದರು. ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಆಧರಿಸಿ ಹೂಡಿಕೆಯನ್ನು ಹೆಚ್ಚಿಸಲು ಸಿದ್ಧರಿರುವುದಾಗಿ ಉದ್ಯಮದ ಪ್ರಮುಖರು ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಸೆಮಿಕಂಡಕ್ಟರ್ ಪೂರೈಕೆ ಸರಪಳಿಯನ್ನು ಬಲಪಡಿಸುವುದು

ಸೆಮಿಕಂಡಕ್ಟರ್ ಪೂರೈಕೆ ಸರಪಳಿಯನ್ನು ಬಲಪಡಿಸುವ ಕುರಿತು ಮಾತನಾಡಿದ ಸಚಿವರು, ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮತ್ತು ನಿಪ್ಪಾನ್ ಎಕ್ಸ್‌ಪ್ರೆಸ್ ನಡುವಿನ ತಿಳುವಳಿಕೆ ಒಪ್ಪಂದವನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಈ ಒಪ್ಪಂದದಡಿ, ಭಾರತದಲ್ಲಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ವಿಸ್ತರಿಸುತ್ತಿರುವ ಸಂದರ್ಭದಲ್ಲಿ, ಲಾಜಿಸ್ಟಿಕ್ಸ್, ಗೋದಾಮು ನಿರ್ವಹಣೆ, ಕಸ್ಟಮ್ಸ್ ಹಾಗೂ ಪೂರೈಕೆ ಸರಪಳಿಗೆ ಸಂಬಂಧಿಸಿದ ಇತರ ಅಗತ್ಯತೆಗಳ ಕುರಿತು ನಿಪ್ಪಾನ್ ಎಕ್ಸ್‌‌ಪ್ರೆಸ್ ತನ್ನ ಪರಿಣತಿಯನ್ನು ಒದಗಿಸಲಿದೆ ಎಂದು ಅವರು ಹೇಳಿದರು.

ಭಾರತೀಯ ಉದ್ಯಮಿಗಳಿಗೆ ಲಭ್ಯವಿರುವ ಅವಕಾಶಗಳ ಬಗ್ಗೆಯೂ ಸಚಿವರು ಒತ್ತಿ ಹೇಳಿದರು. ಸೆಮಿಕಂಡಕ್ಟರ್ ಕಂಪನಿಗಳು ಜಾಗತಿಕ ಮಟ್ಟದಲ್ಲಿ ವೆಚ್ಚ ಮತ್ತು ಗುಣಮಟ್ಟದ ಆಧಾರದ ಮೇಲೆ ಸ್ಪರ್ಧಿಸಬೇಕು. ಅದೇ ಸಂದರ್ಭದಲ್ಲಿ ತಯಾರಿಕೆಯ ಸಾಧ್ಯತೆ, ಉತ್ಪನ್ನದ ಜೀವಿತಾವಧಿ ಮತ್ತು ವಿದ್ಯುತ್ ಬಳಕೆಯನ್ನೂ ಪರಿಗಣಿಸಬೇಕು ಎಂದು ಅವರು ತಿಳಿಸಿದರು.

ಸುಸ್ಥಿರ ಸೆಮಿಕಂಡಕ್ಟರ್ ಮತ್ತು ತಂತ್ರಜ್ಞಾನ ಮೂಲಸೌಕರ್ಯಕ್ಕೆ ಒತ್ತು

ಸುಸ್ಥಿರತೆಯ ಕುರಿತು ಮಾತನಾಡಿದ ಸಚಿವರು, ಸೆಮಿಕಂಡಕ್ಟರ್ ತಯಾರಿಕಾ ಘಟಕಗಳಲ್ಲಿ ವ್ಯಾಪಕವಾಗಿ ನೀರನ್ನು ಮರುಬಳಕೆ ಮಾಡುತ್ತಿರುವುದು ಹಾಗೂ ದತ್ತಾಂಶ ಕೇಂದ್ರಗಳಲ್ಲಿ ಕ್ಲೋಸ್ಡ್-ಲೂಪ್ ಕೂಲಿಂಗ್ ವ್ಯವಸ್ಥೆಗಳನ್ನು ಬಳಸುತ್ತಿರುವುದನ್ನು ಉಲ್ಲೇಖಿಸಿದರು. ಈ ಕ್ಷೇತ್ರಗಳು ವಿಸ್ತರಿಸುತ್ತಿರುವ ಸಂದರ್ಭದಲ್ಲಿ ಸಂಪನ್ಮೂಲಗಳ ಸಮರ್ಥ ಬಳಕೆಯನ್ನು ಖಚಿತಪಡಿಸುವ ತಂತ್ರಜ್ಞಾನಗಳ ಮಹತ್ವವನ್ನು ಅವರು ಒತ್ತಿಹೇಳಿದರು.

ಸೆಮಿಕಾನ್ ಇಂಡಿಯಾ 2026ರ ಎರಡನೇ ದಿನದಂದು ನಡೆದ 25 ಘೋಷಣೆಗಳು ಮತ್ತು ಸಹಯೋಗಗಳು ಸೆಮಿಕಂಡಕ್ಟರ್ ಮೌಲ್ಯ ಸರಪಳಿಯ ವಿವಿಧ ಹಂತಗಳಲ್ಲಿ ಹೆಚ್ಚುತ್ತಿರುವ ಚಟುವಟಿಕೆಗಳು ಹಾಗೂ ಹೂಡಿಕೆ, ನಾವೀನ್ಯತೆ, ತಯಾರಿಕೆ, ಕೌಶಲ್ಯಾಭಿವೃದ್ಧಿ ಮತ್ತು ಜಾಗತಿಕ ಸಹಭಾಗಿತ್ವಗಳಿಗೆ ಹೊರಹೊಮ್ಮುತ್ತಿರುವ ಅವಕಾಶಗಳನ್ನು ಉಲ್ಲೇಖಿಸಿವೆ. ಈ ಬೆಳವಣಿಗೆಗಳು ಜಾಗತಿಕ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯಲ್ಲಿ ಭಾರತದ ವಿಸ್ತರಿಸುತ್ತಿರುವ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತವೆ.

ಸೆಮಿಕಾನ್ ಇಂಡಿಯಾ 2026ರ ಎರಡನೇ ದಿನದಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರಾದ ಶ್ರೀ ಜಿತಿನ್ ಪ್ರಸಾದ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಇಂಡಿಯಾ ಸೆಮಿಕಂಡಕ್ಟರ್ ಮಿಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅಮಿತೇಶ್ ಕುಮಾರ್ ಸಿನ್ಹಾ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಸುಶೀಲ್ ಪಾಲ್ ಸಮ್ಮುಖದಲ್ಲಿ ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಕಾರ್ಯತಂತ್ರದ ತಿಳುವಳಿಕೆ ಒಪ್ಪಂದಗಳು ಮತ್ತು ಸಹಭಾಗಿತ್ವದ ಘೋಷಣೆಗಳ ಸರಣಿ ನಡೆಯಿತು. ಪೂರೈಕೆ ಸರಪಳಿಯ ಸ್ಥಳೀಕರಣ, ಸುಧಾರಿತ ಪ್ಯಾಕೇಜಿಂಗ್, ಕೌಶಲ್ಯಾಭಿವೃದ್ಧಿ ಮತ್ತು ಡೀಪ್-ಟೆಕ್ ಹೂಡಿಕೆ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಇದು ಒಳಗೊಂಡಿದೆ.

  1. ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಐನಾಕ್ಸ್ ಏರ್ ಪ್ರಾಡಕ್ಟ್ಸ್ ಲಿಮಿಟೆಡ್: ಸೆಮಿಕಂಡಕ್ಟರ್ ತಯಾರಿಕೆಗೆ ಅತ್ಯಗತ್ಯವಾದ ಅತ್ಯುನ್ನತ ಶುದ್ಧತೆಯ ಅನಿಲಗಳ ಸ್ಥಳೀಯ ಪೂರೈಕೆ ಸರಪಳಿಯನ್ನು ಬಲಪಡಿಸಲು ಸಹಯೋಗ.
  2. ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಸುಮಿಟೊಮೊ ಕೆಮಿಕಲ್ ಲಿಮಿಟೆಡ್: ಫ್ರಂಟ್-ಎಂಡ್ ಸೆಮಿಕಂಡಕ್ಟರ್ ತಯಾರಿಕೆಗೆ ಅಗತ್ಯವಿರುವ ಅತ್ಯುನ್ನತ ಶುದ್ಧತೆಯ ತೇವ ರಾಸಾಯನಿಕಗಳು ಮತ್ತು ಸುಧಾರಿತ ಸಾಮಗ್ರಿಗಳ ಉತ್ಪಾದನೆಯನ್ನು ಸ್ಥಳೀಯವಾಗಿ ಕೈಗೊಳ್ಳಲು ಸಹಭಾಗಿತ್ವ.
  3. ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಕೆಲಿಂಗ್ಟನ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್: ಅನಿಲ ವಿತರಣಾ ವ್ಯವಸ್ಥೆಗಳು, ಅತ್ಯುನ್ನತ ಶುದ್ಧತೆಯ ಪೈಪ್‌ಲೈನ್‌ಗಳು ಮತ್ತು ಪ್ರಕ್ರಿಯಾ ಉಪಕರಣಗಳ ಸಂಪರ್ಕ ವ್ಯವಸ್ಥೆಗಳ ಮೂಲಕ ಫ್ಯಾಬ್ ಸಿದ್ಧತೆಯನ್ನು ತ್ವರಿತಗೊಳಿಸಲು ಸಹಯೋಗ. ವಿಶೇಷ ಸೆಮಿಕಂಡಕ್ಟರ್ ತಯಾರಿಕಾ ಕೌಶಲ್ಯಗಳಲ್ಲಿ ಸ್ಥಳೀಯ ಪಾಲುದಾರರಿಗೆ ತರಬೇತಿ ನೀಡುವುದೂ ಇದರಲ್ಲಿ ಸೇರಿದೆ.
  4. ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಎನೊಮೊಟೊ ಕಂಪನಿ ಲಿಮಿಟೆಡ್: ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಲೀಡ್-ಫ್ರೇಮ್ ತಯಾರಿಕೆಯ ಸ್ಥಳೀಕರಣದ ಮೂಲಕ ಸುಧಾರಿತ ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ಸಾಮರ್ಥ್ಯಗಳನ್ನು ಬಲಪಡಿಸಲು ಸಹಭಾಗಿತ್ವ.
  5. ಸಿ-ಮೆಟ್, ಪುಣೆ ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್: ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಅಗತ್ಯವಿರುವ ಪ್ರಮುಖ ಕಚ್ಚಾ ಸಾಮಗ್ರಿಗಳ ಉತ್ಪಾದನೆಯನ್ನು ವಿಸ್ತರಿಸಲು ತಿಳುವಳಿಕೆ ಒಪ್ಪಂದ. ದೇಶೀಯ ಸಾಮಗ್ರಿಗಳ ಸಾಮರ್ಥ್ಯ ಮತ್ತು ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದು ಇದರ ಉದ್ದೇಶ.
  6. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ವಿದ್ಯುತ್ ಸಚಿವಾಲಯ ಮತ್ತು ಪವರ್‌ಗ್ರಿಡ್: ವೋಲ್ಟೇಜ್ ಸೋರ್ಸ್ ಕನ್ವರ್ಟರ್ (ವಿಎಸ್‌ಸಿ) ಆಧಾರಿತ ಉನ್ನತ-ವೋಲ್ಟೇಜ್ ನೇರ ವಿದ್ಯುತ್ ಪ್ರಸರಣ (ಎಚ್‌ವಿಡಿಸಿ) ವ್ಯವಸ್ಥೆಗಳಿಗೆ ಸಿಲಿಕಾನ್ ಕಾರ್ಬೈಡ್ ಪವರ್ ಮಾಡ್ಯೂಲ್‌ಗಳ ದೇಶೀಯ ಉತ್ಪಾದನೆಯನ್ನು ಬೆಂಬಲಿಸಲು ಸಹಯೋಗ. ಇದನ್ನು ಬಿಹಾರದ ಪವರ್‌ಗ್ರಿಡ್‌ನ 1,000 ಮೆಗಾವ್ಯಾಟ್ ಸಾಮರ್ಥ್ಯದ ಪುಸೌಲಿ ಯೋಜನೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು.
  7. ಎಲ್ & ಟಿ ಸೆಮಿಕಂಡಕ್ಟರ್ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ವರ್ಚುವಲ್ ಫಾರೆಸ್ಟ್ ಪ್ರೈವೇಟ್ ಲಿಮಿಟೆಡ್: ಹವಾನಿಯಂತ್ರಣ ವ್ಯವಸ್ಥೆಗಳು ಮತ್ತು ಸೌರಶಕ್ತಿ ಚಾಲಿತ ವ್ಯವಸ್ಥೆಗಳಿಗೆ ವಿದ್ಯುತ್ ಎಲೆಕ್ಟ್ರಾನಿಕ್ಸ್ ಪರಿಹಾರಗಳ ಜಂಟಿ ಅಭಿವೃದ್ಧಿ.
  8. ಎಲ್ & ಟಿ ಸೆಮಿಕಂಡಕ್ಟರ್ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ನ್ಯೂಯೆನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್: ಮುಂದಿನ ಪೀಳಿಗೆಯ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ದತ್ತಾಂಶ ಕೇಂದ್ರಗಳಿಗಾಗಿ ಸಿಲಿಕಾನ್ ಕಾರ್ಬೈಡ್ ಪವರ್ ಮಾಡ್ಯೂಲ್‌ಗಳ ಅಭಿವೃದ್ಧಿ.
  9. ಎಲ್ & ಟಿ ಸೆಮಿಕಂಡಕ್ಟರ್ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಫಿಮರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್: ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳಿಗಾಗಿ ಇನ್ಸುಲೇಟೆಡ್ ಗೇಟ್ ಬೈಪೋಲಾರ್ ಟ್ರಾನ್ಸಿಸ್ಟರ್‌ಗಳ ಅಭಿವೃದ್ಧಿ.
  10. ಎಲ್ & ಟಿ ಸೆಮಿಕಂಡಕ್ಟರ್ ಟೆಕ್ನಾಲಜೀಸ್ ಲಿಮಿಟೆಡ್ ಮತ್ತು ಕ್ಯಾಪಿಟಲ್ ಪವರ್ ಸಿಸ್ಟಮ್ಸ್ ಲಿಮಿಟೆಡ್: ಸ್ಮಾರ್ಟ್ ಮೀಟರ್‌ಗಳಿಗಾಗಿ ಐಒಟಿ ಮಾಡ್ಯೂಲ್‌ಗಳ ಅಭಿವೃದ್ಧಿಗೆ ಸಹಯೋಗ. ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ 4ಜಿ ಸಂವಹನ ಮಾಡ್ಯೂಲ್‌ನೊಂದಿಗೆ ಆರಂಭಿಸಲಾಗುವುದು.
  11. ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಎಲ್ & ಟಿ ಸೆಮಿಕಂಡಕ್ಟರ್ ಟೆಕ್ನಾಲಜೀಸ್ ಲಿಮಿಟೆಡ್: ಟಾಟಾದ ಫ್ಯಾಬ್ ಮತ್ತು ಓಸಾಟ್ ಸೌಲಭ್ಯಗಳಲ್ಲಿ ಎಲ್ & ಟಿ ಸಂಸ್ಥೆಯ ಸೆಮಿಕಂಡಕ್ಟರ್ ಉತ್ಪನ್ನಗಳ ತಯಾರಿಕೆಯನ್ನು ಪರಿಶೀಲಿಸಲು ಕಾರ್ಯತಂತ್ರದ ಸಹಭಾಗಿತ್ವ. ಗ್ರಾಹಕ ಬಳಕೆಯ ಕ್ಯಾಮೆರಾ ಮಾಡ್ಯೂಲ್‌ಗಳೊಂದಿಗೆ ಈ ಸಹಯೋಗ ಆರಂಭವಾಗಲಿದೆ.
  12. ಇಂಡಿಯಾ ಡೀಪ್ ಟೆಕ್ ಅಲಯನ್ಸ್ (ಐಡಿಟಿಎ): ಭಾರತದ 56 ಡೀಪ್-ಟೆಕ್ ಕಂಪನಿಗಳಲ್ಲಿ 263 ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆ ಮಾಡಿರುವುದಾಗಿ ತಿಳಿಸಿದೆ.
  13. ಸೆಮಿ ಮತ್ತು ಐಡಿಟಿಎ: ಕ್ಯಾಡೆನ್ಸ್, ಸಿಜಿ ಸೆಮಿ, ಡಿಕ್ಸನ್ ಟೆಕ್ನಾಲಜೀಸ್, ಮೈಕ್ರಾನ್ ಟೆಕ್ನಾಲಜಿ, ಸಿನಾಪ್ಸಿಸ್, 3ಡಿ ಗ್ಲಾಸ್ ಸೊಲ್ಯೂಷನ್ಸ್, ಯುಸಿ ಸ್ಯಾನ್ ಡಿಯಾಗೊ ಮತ್ತು ಐಐಟಿ ಕಾನ್ಪುರ ಸೇರಿದಂತೆ ಪಾಲುದಾರರ ಸಹಯೋಗದೊಂದಿಗೆ ಇಂಡಿಯಾ ಸೆಮಿಕಂಡಕ್ಟರ್ ಅಕಾಡೆಮಿ (ಐಎಸ್‌ಎ) ಎಂಬ ರಾಷ್ಟ್ರೀಯ ಉದ್ಯಮ ನೇತೃತ್ವದ ಕೌಶಲ್ಯಾಭಿವೃದ್ಧಿ ವೇದಿಕೆಯನ್ನು ಅಭಿವೃದ್ಧಿಪಡಿಸಲು ಸಹಯೋಗ.
  14. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐಎಸ್‌ಎಂ) ಮತ್ತು ನಿಪ್ಪಾನ್ ಎಕ್ಸ್‌ಪ್ರೆಸ್ ಹೋಲ್ಡಿಂಗ್ಸ್ ಇಂಕ್: ಸೆಮಿಕಂಡಕ್ಟರ್ ಲಾಜಿಸ್ಟಿಕ್ಸ್ ಮೂಲಸೌಕರ್ಯವನ್ನು ಬಲಪಡಿಸಲು ಹಾಗೂ ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ತಿಳಿವಳಿಕೆ ಒಪ್ಪಂದ.
  15. ಇಂಡಿಸೆಮಿಕ್ ಮತ್ತು ಸಿ-ಡ್ಯಾಕ್: ಭಾರತದ ಮೊದಲ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸಿಸ್ಟಮ್-ಆನ್-ಮಾಡ್ಯೂಲ್ “ಐಎಸ್‌ಸಿ-ವೇಗಾ-ಎಸ್‌ಒಎಂ” ಬಿಡುಗಡೆ. ಇದು ಸಿ-ಡ್ಯಾಕ್‌ನ ವೇಗಾ ತೇಜಸ್32 ಪ್ರೊಸೆಸರ್ ಮತ್ತು ಇಂಡಿಸೆಮಿಕ್‌ನ ಲೋರಾ ಆರ್‌ಎಫ್ ಮಾಡ್ಯೂಲ್ ಅನ್ನು ಸಂಯೋಜಿಸುತ್ತದೆ. ಸಿ-ಡ್ಯಾಕ್‌ನ ಕೈಗಾರಿಕಾ ಬೆಂಬಲ ಕೇಂದ್ರ ಉಪಕ್ರಮದಡಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
  16. ಕೇನ್ಸ್ ಸೆಮಿಕಾನ್ ಮತ್ತು ಇಂಡಿಸೆಮಿಕ್: ಸುಧಾರಿತ ಪ್ಯಾಕೇಜ್‌ಗಳ (ಕ್ಯೂಎಫ್‌ಎನ್, ಬಿಜಿಎ) ಅರ್ಹತಾ ಪರೀಕ್ಷೆ, ಜೋಡಣೆ ಮತ್ತು ಪರೀಕ್ಷೆ ಹಾಗೂ ಕಸ್ಟಮೈಸ್ ಮಾಡಿದ ಎಸ್‌ಐಪಿ ಅಭಿವೃದ್ಧಿಗಾಗಿ ಕಾರ್ಯತಂತ್ರದ ಓಸಾಟ್ ಸಹಯೋಗ.
  17. ಕೇನ್ಸ್ ಸೆಮಿಕಾನ್, ಮೈಕ್ರೋಚಿಪ್ ಟೆಕ್ನಾಲಜಿ ಮತ್ತು ಗ್ರಿಡ್‌ಕ್ರೆಸ್ಟ್ ಟೆಕ್ನಾಲಜೀಸ್: ವಿದ್ಯುತ್ ಮೀಟರಿಂಗ್ ಎಸ್‌ಒಸಿ‌ಗಳಿಗಾಗಿ ಭಾರತದಲ್ಲಿ ಎಂಡ್-ಟು-ಎಂಡ್‌ ಅಭಿವೃದ್ಧಿಪಡಿಸಬಹುದಾದ ಮಾರ್ಗವನ್ನು ಪರಿಶೀಲಿಸಲು ಸಹಯೋಗ.
  18. ಕೇನ್ಸ್ ಸೆಮಿಕಾನ್ ಮತ್ತು ಯುನೈಟೆಡ್ ಬಿಸಿ ಟೀಮ್: ಸುಧಾರಿತ ಆಂತರಿಕ ಲಾಜಿಸ್ಟಿಕ್ಸ್ ಮತ್ತು ಮಾನವ ಹಸ್ತಕ್ಷೇಪವಿಲ್ಲದೆ ಕಾರ್ಯನಿರ್ವಹಿಸುವ ಸೆಮಿಕಂಡಕ್ಟರ್ ತಯಾರಿಕೆಗಾಗಿ ಹಂತ ಹಂತದ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಸಹಭಾಗಿತ್ವ.
  19. ನೈಲಿಟ್ ಮತ್ತು ಸೀಮೆನ್ಸ್ ಇಡಿಎ: ಕೈಗಾರಿಕಾ ಮಟ್ಟದ ಇಡಿಎ ಉಪಕರಣಗಳಿಗೆ ಪ್ರವೇಶ ಮತ್ತು ವಿಶೇಷ ತರಬೇತಿಯ ಮೂಲಕ ಸೆಮಿಕಂಡಕ್ಟರ್ ವಿನ್ಯಾಸ ಶಿಕ್ಷಣವನ್ನು ಬಲಪಡಿಸಲು ತಿಳಿವಳಿಕೆ ಒಪ್ಪಂದ.
  20. ನೈಲಿಟ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್: ಕೌಶಲ್ಯ ಹೊಂದಿದ, ಕೈಗಾರಿಕಾ ಅಗತ್ಯಗಳಿಗೆ ಸಿದ್ಧವಾಗಿರುವ ಎಟಿಎಂಪಿ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸಲು ಸಹಯೋಗ.
  21. ನೈಲಿಟ್ ಮತ್ತು ಸಿಂಗಾಪುರ್ ಪಾಲಿಟೆಕ್ನಿಕ್ ಇಂಟರ್‌ನ್ಯಾಷನಲ್: ಸೆಮಿಕಂಡಕ್ಟರ್ ಶಿಕ್ಷಣ, ತರಬೇತಿ ಮತ್ತು ಕೌಶಲ್ಯಾಭಿವೃದ್ಧಿಯನ್ನು ಬಲಪಡಿಸಲು ಹಾಗೂ ಭಾರತ–ಸಿಂಗಾಪುರ ಸಹಕಾರವನ್ನು ವಿಸ್ತರಿಸಲು ತಿಳಿವಳಿಕೆ ಒಪ್ಪಂದ.
  22. ನೈಲಿಟ್ ಮತ್ತು ಎಸ್‌ಸಿಎಲ್: ನೈಲಿಟ್‌ನ ಇಚಿಪ್‌ಹಬ್ ವೇದಿಕೆಯಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ 0.8 ಮೈಕ್ರಾನ್ ಓಪನ್-ಸೋರ್ಸ್ ಪ್ರೊಸೆಸ್ ಡಿಸೈನ್ ಕಿಟ್ (ಪಿಡಿಕೆ) ಅಧಿಕೃತವಾಗಿ ಬಿಡುಗಡೆ. ಇದರಿಂದ ವಿದ್ಯಾರ್ಥಿಗಳು ಮತ್ತು ನಾವೀನ್ಯಕಾರರಿಗೆ ಚಿಪ್ ವಿನ್ಯಾಸದ ಅವಕಾಶಗಳು ಇನ್ನಷ್ಟು ಸುಲಭವಾಗಿ ಲಭ್ಯವಾಗಲಿವೆ.
  23. ನೈಲಿಟ್ ಮತ್ತು ಐಇಎಸ್‌ಎ: ಸೆಮಿಕಂಡಕ್ಟರ್ ಕ್ಷೇತ್ರದ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಬಲಪಡಿಸಲು ಹಾಗೂ ಕೈಗಾರಿಕಾ ಅಗತ್ಯಗಳಿಗೆ ಸಿದ್ಧವಾಗಿರುವ ಪ್ರತಿಭಾ ಪೂರೈಕೆ ವ್ಯವಸ್ಥೆಯನ್ನು ನಿರ್ಮಿಸಲು ತಿಳಿವಳಿಕೆ ಒಪ್ಪಂದ.
  24. ನೈಲಿಟ್ ಮತ್ತು ಸೆಮಿ ಯೂನಿವರ್ಸಿಟಿ: ಭಾರತದ ಸೆಮಿಕಂಡಕ್ಟರ್ ಪ್ರತಿಭಾ ಸಂಪನ್ಮೂಲಕ್ಕಾಗಿ ತರಬೇತಿ, ಪ್ರಮಾಣೀಕರಣ ಮತ್ತು ಬೋಧಕ ಸಿಬ್ಬಂದಿಯ ಅಭಿವೃದ್ಧಿಯನ್ನು ಮುಂದುವರಿಸಲು ತಿಳಿವಳಿಕೆ ಒಪ್ಪಂದ.
  25. ಸಿಲ್ವಾಕೊ ಇಂಕ್. ಮತ್ತು ಸಿ-ಡ್ಯಾಕ್‌ನ ಚಿಪ್‌ಇನ್ ಕೇಂದ್ರ: ಡಿಎಲ್‌ಐ ಯೋಜನೆಯಡಿ ನೋಂದಾಯಿತ ನವೋದ್ಯಮಗಳು, ಎಂಎಸ್‌ಎಂಇಗಳು ಹಾಗೂ ಸಿ-ಡ್ಯಾಕ್‌ನ ಸಂಶೋಧನೆ ಮತ್ತು ತರಬೇತಿ ಉಪಕ್ರಮಗಳಿಗೆ ಸುಧಾರಿತ ಟಿಸಿಎಡಿ ಉಪಕರಣಗಳ ಪ್ರವೇಶ ಒದಗಿಸಲು ಸಹಯೋಗ.

ಈ ಸಂದರ್ಭದಲ್ಲಿ ಸಚಿವರು ಭಾರತದ ಮೊದಲ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸಿಸ್ಟಮ್-ಆನ್-ಮಾಡ್ಯೂಲ್ ಇಂಡಿಸೆಮಿಕ್‌ನ ಐಎಸ್‌ಸಿ ವೇಗಾ ಎಸ್‌ಒಎಂ ಅನ್ನು ಘೋಷಿಸಿದರು. ಇದು ಸಿ-ಡ್ಯಾಕ್‌ನ ವೇಗಾ-ತೇಜಸ್32 ಪ್ರೊಸೆಸರ್ ಅನ್ನು ಇಂಡಿಸೆಮಿಕ್‌ನ ಜಾಗತಿಕ ಪ್ರಮಾಣೀಕರಣ ಪಡೆದ ಲೋರಾ-ಆರ್‌ಎಫ್ ಮಾಡ್ಯೂಲ್‌ನೊಂದಿಗೆ ಸಂಯೋಜಿಸುತ್ತದೆ. ಸಿ-ಡ್ಯಾಕ್‌ನ ಕೈಗಾರಿಕಾ ಬೆಂಬಲ ಕೇಂದ್ರ ಉಪಕ್ರಮದಡಿ ಅಭಿವೃದ್ಧಿಪಡಿಸಲಾದ ಈ ಸಾಧನೆಯು ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯಲ್ಲಿ ಮಹತ್ವದ ಮುನ್ನಡೆಯನ್ನು ಸೂಚಿಸುತ್ತದೆ. ಡಿಎಲ್‌ಐ ಕಾರ್ಯಕ್ರಮದ ಬೆಂಬಲದೊಂದಿಗೆ ಭಾರತೀಯ ವಿನ್ಯಾಸ ಕಂಪನಿಗಳು ಕೇವಲ ನಾವೀನ್ಯತೆಗಳನ್ನು ಮಾಡುತ್ತಿಲ್ಲ, ಬದಲಾಗಿ ತಮ್ಮ ಉತ್ಪನ್ನಗಳನ್ನು ಯಶಸ್ವಿಯಾಗಿ ಮಾರುಕಟ್ಟೆಗೆ ತರುತ್ತಿವೆ ಎಂಬುದನ್ನು ಇದು ತೋರಿಸುತ್ತದೆ. ಚಿಪ್‌ಗಳು ಈಗ ಅಂತಿಮ ಉತ್ಪನ್ನಗಳಲ್ಲಿ ಅಳವಡಿಕೆಯಾಗುತ್ತಿರುವುದರಿಂದ ಭಾರತವು ಹಂತಹಂತವಾಗಿ ಉತ್ಪನ್ನಗಳ ತಯಾರಿಕಾ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ.

ಸೆಮಿಕಾನ್ ಇಂಡಿಯಾ 2026 ಕಾರ್ಯಕ್ರಮವು ಸೆಪ್ಟೆಂಬರ್ 19ರವರೆಗೆ ನವದೆಹಲಿಯ ಯಶೋಭೂಮಿಯಲ್ಲಿ ನಡೆಯಲಿದೆ. ಇದರಲ್ಲಿ 600ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, ಸುಮಾರು 50,000 ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ. 52 ದೇಶಗಳ ಪ್ರತಿನಿಧಿಗಳು, 400ಕ್ಕೂ ಹೆಚ್ಚು ಕಾರ್ಯನಿರ್ವಾಹಕರು ಮತ್ತು 150ಕ್ಕೂ ಹೆಚ್ಚು ಭಾಷಣಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ನೆದರ್‌ಲ್ಯಾಂಡ್ಸ್, ಸಿಂಗಾಪುರ ಮತ್ತು ಸ್ವೀಡನ್‌ಗಳನ್ನು ಪ್ರತಿನಿಧಿಸುವ ಆರು ದೇಶಗಳ ಪೆವಿಲಿಯನ್‌ಗಳ ಜೊತೆಗೆ, 12 ರಾಜ್ಯಗಳ ಮಳಿಗೆಗಳು, ಸ್ಟಾರ್ಟ್‌ಅಪ್ ಪೆವಿಲಿಯನ್‌, ನಾವೀನ್ಯತೆಗಳ ಪ್ರದರ್ಶನ, ವಿದ್ಯಾರ್ಥಿಗಳ ಹ್ಯಾಕಥಾನ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮಂಟಪಗಳು ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ.

 

*****

 


(ಪ್ರಕಟಣೆ ಐ.ಡಿ.: 2312294) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Marathi , Gujarati