ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸೃಜನಶೀಲ ಆರ್ಥಿಕತೆಯು ಭಾರತದ ಮುಂದಿನ ಬೆಳವಣಿಗೆಯ ಪ್ರಮುಖ ಕ್ಷೇತ್ರವಾಗಿ ಹೊರಹೊಮ್ಮುತ್ತಿದ್ದು, ಯುವ ಭಾರತೀಯರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತಿದೆ: ಡಾ. ಎಲ್. ಮುರುಗನ್


ಎವಿಜಿಸಿ ಕ್ಷೇತ್ರಕ್ಕೆ 2030ರ ವೇಳೆಗೆ ಸುಮಾರು 20 ಲಕ್ಷ ನುರಿತ ವೃತ್ತಿಪರರ ಅಗತ್ಯವಿರುವ ನಿರೀಕ್ಷೆಯಿದ್ದು, ಯುವಜನರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ

ಭವಿಷ್ಯದ ಅಗತ್ಯಗಳಿಗೆ ತಕ್ಕ ಕೌಶಲ್ಯಗಳನ್ನು ಹೊಂದಲು ಯುವಜನರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆ ಮತ್ತು ಎವಿಜಿಸಿ ಕ್ರಿಯೇಟರ್ ಲ್ಯಾಬ್‌ಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ

ಪ್ರಕಟಣಾ ದಿನಾಂಕ: 18 SEP 2026 2:39PM by PIB Bengaluru

ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ಒ.ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಲ್ಲಿ “ಕಾನೂನು, ನೀತಿ ಮತ್ತು ಸೃಜನಶೀಲ ಆರ್ಥಿಕತೆ” ಎಂಬ ವಿಷಯದ ಕುರಿತು ನಡೆದ ಜಿಂದಾಲ್ ಪಾಲಿಸಿ ಕಾನ್ಕ್ಲೇವ್‌ನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಉದ್ಘಾಟನಾ ಭಾಷಣ ಮಾಡಿದರು.

ಭಾಗವಹಿಸಿದ ಯುವಜನರನ್ನು  ಉದ್ದೇಶಿಸಿ ಮಾತನಾಡಿದ ಡಾ. ಮುರುಗನ್, ಆಲೋಚನೆಗಳು, ಕಲ್ಪನಾಶಕ್ತಿ, ಸಂಸ್ಕೃತಿ, ನಾವೀನ್ಯತೆ ಮತ್ತು ಬೌದ್ಧಿಕ ಸ್ವತ್ತಿನಿಂದ ಪ್ರೇರಿತವಾಗಿರುವ ಭಾರತದ ಸೃಜನಶೀಲ ಆರ್ಥಿಕತೆಯು ತ್ವರಿತಗತಿಯಲ್ಲಿ ಬೆಳೆಯುತ್ತಿರುವುದನ್ನು ಪ್ರಸ್ತಾಪಿಸಿದರು. ಚಲನಚಿತ್ರ, ಸಂಗೀತ, ಗೇಮಿಂಗ್, ಅನಿಮೇಷನ್, ವಿನ್ಯಾಸ, ಪ್ರಕಾಶನ, ಜಾಹೀರಾತು ಮತ್ತು ಡಿಜಿಟಲ್ ಕಂಟೆಂಟ್‌ ಸೇರಿದಂತೆ ವಿವಿಧ ಕ್ಷೇತ್ರಗಳು ಉದ್ಯೋಗ ಹಾಗೂ ಉದ್ಯಮಶೀಲತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು.

ಸೃಜನಶೀಲ ಆರ್ಥಿಕತೆಯು ಜಾಗತಿಕ ಜಿಡಿಪಿಗೆ ಶೇ.3.1ರಷ್ಟು ಹಾಗೂ ಜಾಗತಿಕ ಉದ್ಯೋಗದಲ್ಲಿ ಶೇ.6.2ರಷ್ಟು ಕೊಡುಗೆ ನೀಡುತ್ತಿದೆ ಎಂದು ಡಾ. ಮುರುಗನ್ ತಿಳಿಸಿದರು. ಈಗಾಗಲೇ ಸುಮಾರು 5.7 ಕೋಟಿ ಭಾರತೀಯರು ಸಾಂಸ್ಕೃತಿಕ ಮತ್ತು ಸೃಜನಶೀಲ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಭಾರತದ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಆರ್ಥಿಕತೆಯ ಮೌಲ್ಯ ₹2.5 ಲಕ್ಷ ಕೋಟಿಗಳಷ್ಟಿದೆ ಎಂದು ಅವರು ಹೇಳಿದರು.

ಯುವ ಭಾರತೀಯರಿಗೆ ದೊರೆಯುವ ಅವಕಾಶಗಳನ್ನು ಪ್ರಸ್ತಾಪಿಸಿದ ಅವರು, ಎವಿಜಿಸಿ ಕ್ಷೇತ್ರವೊಂದರಲ್ಲೇ 2030ರ ವೇಳೆಗೆ ಸುಮಾರು 20 ಲಕ್ಷ ನುರಿತ ವೃತ್ತಿಪರರ ಅಗತ್ಯವಿರುವ ನಿರೀಕ್ಷೆಯಿದೆ ಎಂದು ಹೇಳಿದರು. ಉದಯೋನ್ಮುಖ ಅವಕಾಶಗಳಿಗೆ ಯುವಜನರನ್ನು ಸಿದ್ಧಗೊಳಿಸುವ ಉದ್ದೇಶದಿಂದ, ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆ ಮತ್ತು 15,000 ಶಾಲೆಗಳು ಹಾಗೂ 500 ಕಾಲೇಜುಗಳಲ್ಲಿ ಎವಿಜಿಸಿ ಕ್ರಿಯೇಟರ್ ಲ್ಯಾಬ್‌ಗಳನ್ನು ಸ್ಥಾಪಿಸಲು ಬೆಂಬಲ ನೀಡುವುದಾಗಿ ಸರ್ಕಾರ ಘೋಷಿಸಿದೆ ಎಂದು ಸಚಿವರು ಹೇಳಿದರು.

ಸೃಜನಶೀಲ ಆರ್ಥಿಕತೆಯ ಬೆಳವಣಿಗೆಗೆ ಸೂಕ್ತ ಕಾನೂನು ಮತ್ತು ನೀತಿ ಚೌಕಟ್ಟುಗಳ ಬೆಂಬಲ ಅಗತ್ಯವಿದೆ ಎಂದು ಡಾ. ಮುರುಗನ್ ಒತ್ತಿ ಹೇಳಿದರು. ಇದರಲ್ಲಿ ಹಕ್ಕುಸ್ವಾಮ್ಯ ರಕ್ಷಣೆ, ಸೃಜನಶೀಲರಿಗೆ ನ್ಯಾಯಯುತ ಸಂಭಾವನೆ ಮತ್ತು ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆ ಸೇರಿವೆ ಎಂದು ಅವರು ತಿಳಿಸಿದರು. ಯುವಜನರು ಗೌರವ, ತರ್ಕ ಮತ್ತು ಸಾಕ್ಷ್ಯಾಧಾರಗಳೊಂದಿಗೆ ತಮ್ಮ ಸಂಸ್ಥೆಗಳ ಕಾರ್ಯವಿಧಾನಗಳನ್ನು ಪ್ರಶ್ನಿಸಬೇಕು ಮತ್ತು 2047ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ತಮ್ಮ ಆಲೋಚನೆಗಳು ಹಾಗೂ ಕೌಶಲ್ಯಗಳನ್ನು ಕೊಡುಗೆಯಾಗಿ ನೀಡಬೇಕು ಎಂದು ಅವರು ಕರೆ ನೀಡಿದರು.



*****


(ಪ್ರಕಟಣೆ ಐ.ಡಿ.: 2312056) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: Tamil , English , Urdu , हिन्दी , Punjabi , Gujarati , Telugu