ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಮುಂಬೈನಲ್ಲಿ, ಏಷ್ಯಾಟಿಕ್ ಸೊಸೈಟಿ ಆಫ್ ಮುಂಬೈ ಆಯೋಜಿಸಿದ್ದ ‘ಗಣೇಶ ಜ್ಞಾನಾರ್ಥಿ ಪ್ರದರ್ಶನ’ವನ್ನು ಉದ್ಘಾಟಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಮೋದಿ ಸರ್ಕಾರವು ಏಷ್ಯಾಟಿಕ್ ಸೊಸೈಟಿ ಆಫ್ ಮುಂಬೈಗೆ, ಸಾಧ್ಯವಿರುವ ಎಲ್ಲಾ ಬೆಂಬಲ ಮತ್ತು ಸಹಕಾರವನ್ನು ನೀಡುತ್ತಿದೆ ಮತ್ತು ಭವಿಷ್ಯದಲ್ಲೂ ಇದನ್ನು ಮುಂದುವರಿಸಲಿದೆ

ಮುಂಬರುವ ದಿನಗಳಲ್ಲಿ, ಏಷ್ಯಾಟಿಕ್ ಸೊಸೈಟಿ ಆಫ್ ಮುಂಬೈ ಭಾರತೀಯ ಜ್ಞಾನ ಪರಂಪರೆಯ ವಾಹಕವಾಗಲಿದೆ ಮತ್ತು ಅದನ್ನು ದೇಶಾದ್ಯಂತ ಪಸರಿಸಲಿದೆ

ಸರಸ್ವತಿಯ ಶಕ್ತಿಯು ಮಹಾರಾಷ್ಟ್ರದ ಮಣ್ಣಿನ ಶಕ್ತಿಯಲ್ಲೇ ಅಂತರ್ಗತವಾಗಿದೆ; ಏಷ್ಯಾಟಿಕ್ ಸೊಸೈಟಿ ಆಫ್ ಮುಂಬೈನ ಹೊಸ ತಂಡವು ಈ ಜ್ಞಾನದ ಸಂಪತ್ತನ್ನು ವಿಸ್ತರಿಸಬೇಕು

ಜ್ಞಾನವನ್ನು ಡಿಜಿಟಲೀಕರಣಗೊಳಿಸಬೇಕು ಮತ್ತು ದೇಶಾದ್ಯಂತದ ಗ್ರಂಥಾಲಯಗಳೊಂದಿಗೆ ಹಂಚಿಕೊಳ್ಳಬೇಕು ಮತ್ತು ನಮ್ಮ ಪರಂಪರೆಯನ್ನು ಸಂರಕ್ಷಿಸುವ ಸಂಸ್ಥೆಗಳು ಹಾಗೂ ಗ್ರಂಥಾಲಯಗಳಿಗಾಗಿ ಒಂದು ಸಾಧಾರಣ/ಸಾಮಾನ್ಯ ವೇದಿಕೆಯನ್ನು ರಚಿಸಬೇಕು

ಏಷ್ಯಾಟಿಕ್ ಸೊಸೈಟಿ ‘ಜ್ಞಾನ ಭಾರತಂ’ ರಾಷ್ಟ್ರೀಯ ಹಸ್ತಪ್ರತಿ ಮಿಷನ್‌ನೊಂದಿಗೂ ಜೋಡಿಸಲ್ಪಟ್ಟಿದೆ; ಇದು ಹಳ್ಳಿಗಳಲ್ಲಿ ಚದುರಿಹೋಗಿರುವ ಜ್ಞಾನ ಮತ್ತು ಹಸ್ತಪ್ರತಿಗಳನ್ನು ಸಂಗ್ರಹಿಸಬೇಕು ಹಾಗೂ ಸಂಶೋಧನೆಗಾಗಿ ವ್ಯವಸ್ಥೆಗಳನ್ನು ಮಾಡಬೇಕು

ಆರ್ಥಿಕ ಮತ್ತು ರಕ್ಷಣಾತ್ಮಕವಾಗಿ ಭಾರತವನ್ನು ವಿಶ್ವದಲ್ಲೇ ಅತ್ಯುತ್ತಮವಾಗಿಸುವ ಮಂತ್ರವು, ಈ ಹಸ್ತಪ್ರತಿಗಳಲ್ಲೇ ಅಂತರ್ಗತವಾಗಿದೆ; ಇದರ ಮೇಲಿನ ಸಂಶೋಧನೆಯನ್ನು ನಿರಂತರವಾಗಿ ಮುನ್ನಡೆಸಲಾಗುತ್ತಿದೆ

ಜನರ ಮೇಲೆ ದೀರ್ಘಕಾಲದವರೆಗೆ ಆಳ್ವಿಕೆ ನಡೆಸಲು, ಭಾರತದ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವುದು ‘ಇಂಡಾಲಜಿ’ಯ ಉದ್ದೇಶವಾಗಿತ್ತು, ಆದರೆ ಭಾರತೀಯ ಜ್ಞಾನ ಪರಂಪರೆಯ ಉದ್ದೇಶವು ಸದಾ ವಿಶ್ವ ಕಲ್ಯಾಣವಾಗಿದೆ

ವಸಾಹತುಶಾಹೀಕರಣದ ಪ್ರಕ್ರಿಯೆಯು ಇತಿಹಾಸದ ಅಳಿಸುವಿಕೆಯಲ್ಲ; ಇದು ಇತಿಹಾಸವನ್ನು ಸಂಪೂರ್ಣ, ಅಧಿಕೃತವಾಗಿ ಮತ್ತು ಭಾರತೀಯ ದೃಷ್ಟಿಕೋನದಿಂದ ಮತ್ತೊಮ್ಮೆ ಜನರ ಮುಂದೆ ಇಡುವುದಾಗಿದೆ

ತನ್ನ ಸ್ಮೃತಿ, ಇತಿಹಾಸ, ಭಾಷೆ ಮತ್ತು ಪರಂಪರೆಯನ್ನು ಸಂರಕ್ಷಿಸಲು ವಿಫಲವಾಗುವ ರಾಷ್ಟ್ರವು ಅಂತಿಮವಾಗಿ ನಾಶವಾಗುತ್ತದೆ, ಆದರೆ ಈ ಶಾಶ್ವತ ಸ್ತಂಭಗಳನ್ನು ಕಾಯ್ದುಕೊಳ್ಳುವ ರಾಷ್ಟ್ರವು ಶತಮಾನಗಳ ಗುಲಾಮಗಿರಿಯ ನಂತರವೂ ದೃಢವಾಗಿ ನಿಲ್ಲುತ್ತದೆ, ಭಾರತವು ಇದಕ್ಕೆ ಅತಿದೊಡ್ಡ ಉದಾಹರಣೆಯಾಗಿದೆ

ಒಮ್ಮೆ ಜಗತ್ತಿಗೆ ಮಾರ್ಗದರ್ಶನ ನೀಡಲು ಎದ್ದುನಿಂತಿದ್ದ ಭಾರತದ ಭಾಸ್ವರ ಜ್ಞಾನವನ್ನು ಅಳಿಸಿಹಾಕಲು ವಿವಿಧ ಶಕ್ತಿಗಳು ಪದೇ ಪದೇ ಯತ್ನಿಸಿದವು, ಆದರೆ ಅವು ಎಂದಿಗೂ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ

ನಾಳಂದದ ಗ್ರಂಥಾಲಯವನ್ನು ಸುಟ್ಟುಹಾಕ ಬಹುದಾಗಿತ್ತು, ಆದರೆ ಶ್ರುತಿ ಮತ್ತು ಸ್ಮೃತಿ ಪರಂಪರೆಗಳ ಮೂಲಕ ಜನರ ಮನಸ್ಸಿನಲ್ಲಿ ಕೆತ್ತಲ್ಪಟ್ಟ ಜ್ಞಾನವನ್ನು ಯಾರಿಂದಲೂ ಎಂದಿಗೂ ನಾಶಮಾಡಲು ಸಾಧ್ಯವಿಲ್ಲ

ಬ್ರಿಟಿಷರು ಜ್ಞಾನ ಮತ್ತು ಅಧಿಕಾರವನ್ನು ಒಂದಕ್ಕೊಂದು ಜೋಡಿಸಿದ್ದರು, ಇಂದು ನಮ್ಮ ಕೆಲಸವು, ಜ್ಞಾನವನ್ನು ಅಧಿಕಾರದಿಂದ ಮುಕ್ತಗೊಳಿಸಿ, ಜ್ಞಾನದ ಆಧಾರದ ಮೇಲೆ ಅಧಿಕಾರವನ್ನು ಸೃಷ್ಟಿಸುವುದು ಮತ್ತು ಅದೇ ಆಧಾರದ ಮೇಲೆ ದೇಶವನ್ನು ಮುನ್ನಡೆಸುವುದಾಗಿದೆ

ಪ್ರಕಟಣಾ ದಿನಾಂಕ: 13 SEP 2026 5:44PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಮುಂಬೈನಲ್ಲಿ, ಏಷ್ಯಾಟಿಕ್ ಸೊಸೈಟಿ ಆಫ್ ಮುಂಬೈ ಆಯೋಜಿಸಿದ್ದ ‘ಗಣೇಶ ಜ್ಞಾನಾರ್ಥಿ ಪ್ರದರ್ಶನ’ವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್, ಉಪ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮತ್ತು ಏಷ್ಯಾಟಿಕ್ ಸೊಸೈಟಿ ಆಫ್ ಮುಂಬೈನ ಅಧ್ಯಕ್ಷರಾದ ಡಾ. ವಿನಯ್ ಸಹಸ್ರಬುದ್ಧೆ ಅವರೊಂದಿಗೆ ಹಲವಾರು ಇತರ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅಮಿತ್ ಶಾ ಅವರು, ತಾವು ಗೃಹ ಸಚಿವರಾಗಿ ಏಷ್ಯಾಟಿಕ್ ಸೊಸೈಟಿಗೆ ಬಂದಿಲ್ಲ, ಬದಲಿಗೆ ಸಾವಿರಾರು ವರ್ಷಗಳ ಭಾರತೀಯ ಜ್ಞಾನ ಪರಂಪರೆಯನ್ನು ಮುನ್ನಡೆಸುವ ಚಳವಳಿಯಲ್ಲಿ ಭಾಗವಹಿಸುವವನಾಗಿ ಬಂದಿರುವುದಾಗಿ ಹೇಳಿದರು. ಏಷ್ಯಾಟಿಕ್ ಸೊಸೈಟಿ ಆಫ್ ಮುಂಬೈ, ಭಾರತೀಯ ಜ್ಞಾನ ಪರಂಪರೆಯ ವಾಹಕವಾಗಲಿದೆ ಮತ್ತು ಅದನ್ನು ದೇಶಾದ್ಯಂತ ಪಸರಿಸಲಿದೆ ಎಂಬ ವಿಶ್ವಾಸವನ್ನು ಶ್ರೀ ಶಾ ವ್ಯಕ್ತಪಡಿಸಿದರು.

CR5_0599.JPG (1).jpeg

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಮಾತನಾಡಿ, ತನ್ನ ಸ್ಮೃತಿ, ಇತಿಹಾಸ, ಮೌಲ್ಯಗಳು, ಭಾಷೆ, ದಾಖಲೆಗಳು ಮತ್ತು ಪರಂಪರೆಯನ್ನು ರಕ್ಷಿಸಿಕೊಳ್ಳಲಾಗದ ರಾಷ್ಟ್ರವು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಪತನಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ; ಮತ್ತು ತನ್ನ ಸ್ಮೃತಿ, ಇತಿಹಾಸ, ಪರಂಪರೆ, ಮೌಲ್ಯಗಳು, ದಾಖಲೆಗಳು, ಭಾಷೆ ಹಾಗೂ ವ್ಯಾಕರಣವನ್ನು ರಕ್ಷಿಸುವ ರಾಷ್ಟ್ರವು ಎಷ್ಟೇ ವರ್ಷಗಳ ಕಾಲ ಗುಲಾಮಗಿರಿಯಲ್ಲಿದ್ದರೂ ಅದನ್ನು ಯಾರೂ ನಿಜವಾಗಿ ಗುಲಾಮರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಜಗತ್ತಿಗೆ ಮಾರ್ಗದರ್ಶನ ನೀಡಲು ಸಿದ್ಧವಾಗಿದ್ದ ಭಾರತದ ಭಾಸ್ವರ ಜ್ಞಾನವನ್ನು ಅಳಿಸಿಹಾಕಲು ಅನೇಕ ಶಕ್ತಿಗಳು ಯತ್ನಿಸಿದವು, ಆದರೆ ಅವುಗಳಿಗೆ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ ಎಂದು ಶ್ರೀ ಶಾ ಹೇಳಿದರು. ನಾಳಂದದ ಗ್ರಂಥಾಲಯವನ್ನು ಸುಡಬಹುದು; ತಿಂಗಳುಗಟ್ಟಲೆ ಹೊಗೆ ಏಳುವಷ್ಟು ತೀವ್ರತೆಯಿಂದ ಅದನ್ನು ಭಸ್ಮೀಕರಿಸಬಹುದು, ಆದರೆ ಶ್ರುತಿ ಮತ್ತು ಸ್ಮೃತಿಯ ರೂಪದಲ್ಲಿ ಜನರ ಮನಸ್ಸಿನಲ್ಲಿ ನೆಲೆಸಿರುವ ಜ್ಞಾನವನ್ನು ಯಾರಿಂದಲೂ ನಾಶಮಾಡಲು ಸಾಧ್ಯವಿಲ್ಲ ಎಂದು ಶ್ರೀ ಶಾ ಹೇಳಿದರು.

ಶ್ರೀ ಅಮಿತ್ ಶಾ ಅವರು ಮಾತನಾಡಿ, ಸೋತಾಗ ತಾಳ್ಮೆಯಿಂದ ಮುನ್ನಡೆಯುವುದು ಮತ್ತು ಗೆದ್ದಾಗ ನಾವು ಗೆದ್ದವರ ಸ್ಮೃತಿಗಳನ್ನು ನಾಶಮಾಡದೆ ಅವರನ್ನು ನಮ್ಮ ಪರಂಪರೆಯಲ್ಲಿ ಸಂಯೋಜಿಸಲು ಯತ್ನಿಸುವುದು ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದು ಹೇಳಿದರು. ನಿಜವಾದ ಜ್ಞಾನವು ಎಂದಿಗೂ ಯಾವುದೇ ಸಿದ್ಧಾಂತದ ಒತ್ತೆಯಾಳಾಗಿರುವುದಿಲ್ಲ ಎಂದು ಅವರು ಹೇಳಿದರು. ಜ್ಞಾನವೇ ಸ್ವತಃ ಒಂದು ಸಿದ್ಧಾಂತವಾಗಿದೆ; ಅದನ್ನು ಯಾವುದೇ ರೀತಿಯಲ್ಲಿ ಕಟ್ಟಿಹಾಕಿದರೆ ಜ್ಞಾನದ ಅರ್ಥವೇ ಬದಲಾಗುತ್ತದೆ. ಜ್ಞಾನವು ಮುಕ್ತವಾಗಿರಬೇಕು, ಅಡೆತಡೆಯಿಲ್ಲದಿರಬೇಕು ಮತ್ತು ಅದರ ಪ್ರಸಾರವೂ ಉಚಿತ ಹಾಗೂ ಅಡೆತಡೆಯಿಲ್ಲದ್ದಾಗಿರಬೇಕು ಎಂದು ಶ್ರೀ ಶಾ ಹೇಳಿದರು. ಆದ್ದರಿಂದ, ಏಷ್ಯಾಟಿಕ್ ಸೊಸೈಟಿಯನ್ನು ಯಾರು ಸ್ಥಾಪಿಸಿದರು ಮತ್ತು ಯಾವ ಉದ್ದೇಶಕ್ಕಾಗಿ ಸ್ಥಾಪಿಸಿದರು ಎಂಬುದರಲ್ಲಿ ಸಿಲುಕಿಕೊಳ್ಳುವ ಬದಲು, ಇಂದು ನಮ್ಮ ಮುಂದೆ ಇರುವ ಜ್ಞಾನ ಮತ್ತು ಸಂಗ್ರಹಗಳನ್ನು ಶ್ರೇಷ್ಠ ಭಾರತದ ನಿರ್ಮಾಣದಲ್ಲಿ ಹೇಗೆ ಬಳಸಬಹುದು ಎಂಬುದನ್ನು ನಾವು ನೋಡಬೇಕು ಎಂದು ತಿಳಿಸಿದರು.

CR5_0339 (1).JPG.jpeg

ಏಷ್ಯಾಟಿಕ್ ಸೊಸೈಟಿಯನ್ನು ಅರ್ಥಮಾಡಿಕೊಳ್ಳಲು, ಮೊದಲು 'ಇಂಡಾಲಜಿ' (Indology) ಎಂಬ ಪದವನ್ನು ಅರ್ಥಮಾಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. ನಾಣ್ಯಶಾಸ್ತ್ರ (Numismatics), ಶಾಸನಶಾಸ್ತ್ರ (epigraphy), ಆಕಾರಶಾಸ್ತ್ರ (morphology), ಇತಿಹಾಸ, ಪುರಾತತ್ತ್ವ ಶಾಸ್ತ್ರ, ಭಾಷಾಶಾಸ್ತ್ರ, ತತ್ತ್ವಶಾಸ್ತ್ರ, ಸಾಹಿತ್ಯ, ಧರ್ಮಶಾಸ್ತ್ರ ಮತ್ತು ವ್ಯಾಕರಣ — ಇವೆಲ್ಲವೂ ಒಟ್ಟಾಗಿ 'ಇಂಡಾಲಜಿ'ಯನ್ನು ರೂಪಿಸುತ್ತವೆ. ಇದರ ಉದ್ದೇಶವು ಭಾರತೀಯ ಜ್ಞಾನ ಪರಂಪರೆಯ ಉದ್ದೇಶದಂತಿರಲಿಲ್ಲ; ಭಾರತೀಯ ಜ್ಞಾನ ಪರಂಪರೆಯ ಗುರಿಯು ಸದಾ ಜಗತ್ತಿನ ಮತ್ತು ವಿಶ್ವದ ಕಲ್ಯಾಣವಾಗಿದೆ. ಅಂದಿನ ಕಾಲದಲ್ಲಿ, ಈ ನೆಲದ ಜನರ ಮೇಲೆ ದೀರ್ಘಕಾಲ ಆಡಳಿತ ನಡೆಸಲು ಇಲ್ಲಿನ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳುವುದೇ ಅದರ ಮುಖ್ಯ ಉದ್ದೇಶವಾಗಿತ್ತು ಎಂದು ಶ್ರೀ ಶಾ ಹೇಳಿದರು. ಬಾಹ್ಯ ಶಕ್ತಿಯೊಂದು ನಾಗರಿಕತೆಯೊಂದನ್ನು ಅಧ್ಯಯನ ಮಾಡಿದಾಗ, ಅದು ಅದನ್ನು ಅಧ್ಯಯನ ಮಾಡುತ್ತದೆ ಅಥವಾ ಅದನ್ನು ವ್ಯಾಖ್ಯಾನಿಸುತ್ತದೆ. ಇವೆರಡರ ನಡುವೆ ಮೂಲಭೂತ ವ್ಯತ್ಯಾಸವಿದೆ. ಒಬ್ಬರು ಅದನ್ನು ಅಧ್ಯಯನ ಮಾಡಿದಾಗ, ಅದನ್ನು ಸ್ವೀಕರಿಸುತ್ತಾರೆ ಮತ್ತು ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಾರೆ. ಆದರೆ ಅದನ್ನು ವ್ಯಾಖ್ಯಾನಿಸಿದಾಗ, ಆ ವ್ಯಾಖ್ಯಾನದ ಉದ್ದೇಶವೇನು ಎಂಬ ಪ್ರಶ್ನೆ ಅತ್ಯಂತ ಪ್ರಮುಖವಾಗುತ್ತದೆ. 'ಇಂಡಾಲಜಿ' ಎಂಬ ಪದ ಜಾರಿಗೆ ಬಂದ ನಂತರ, ಆರಂಭಿಕ ವರ್ಷಗಳಲ್ಲಿ ಈ ಅಪಾಯವು ನಿರಂತರವಾಗಿ ಇತ್ತು ಎಂದು ಅವರು ಹೇಳಿದರು.

ಭಾರತದ ಜ್ಞಾನವು ಭಾರತದ ದೃಷ್ಟಿಕೋನದಲ್ಲಿ ದಾಖಲಿಸಲಾಗುತ್ತಿರಲಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಅದನ್ನು ವಸಾಹತುಶಾಹಿ ಪ್ರಭಾವದಿಂದ ಮುಕ್ತವಾಗುವ ದೃಷ್ಟಿಕೋನದ ಭಾಷೆಯಲ್ಲಿ ದಾಖಲಿಸಲಾಗುತ್ತಿತ್ತು, ಸಮಾಜದಲ್ಲಿ ಸಾಮೂಹಿಕ ಕೀಳರಿಮೆಯನ್ನು ಸೃಷ್ಟಿಸುವುದು ಮತ್ತು ನಮ್ಮ ಜನರ ಆತ್ಮವಿಶ್ವಾಸವನ್ನು ಕಡಿಮೆ ಮಾಡುವುದೇ ಅದರ ಉದ್ದೇಶವಾಗಿತ್ತು ಎಂದು ಅವರು ತಿಳಿಸಿದರು. ಜನರ ಆತ್ಮವಿಶ್ವಾಸ ಕಡಿಮೆಯಿದ್ದಾಗ, ದೀರ್ಘಕಾಲದ ಗುಲಾಮಗಿರಿಯ ವಿರುದ್ಧ ಪ್ರತಿರೋಧವು ಏಳುವುದಿಲ್ಲ ಎಂದು ಗೃಹ ಸಚಿವರು ಹೇಳಿದರು. ಜ್ಞಾನವೆಂಬ ಬಂಡವಾಳದ ವ್ಯಾಖ್ಯಾನವನ್ನು ಸಹ ಅದೇ ದೃಷ್ಟಿಕೋನದಿಂದ ಮಾಡಲಾಗಿತ್ತು, ಆದರೆ ಇಂದು ದೇಶವು ಸ್ವತಂತ್ರವಾಗಿದೆ. ಸ್ವಾತಂತ್ರ್ಯ ಬಂದು ಎಂಭತ್ತಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಸರ್ಕಾರ ಬದಲಾಗಿದೆ, ಏಷ್ಯಾಟಿಕ್ ಸೊಸೈಟಿಯ ಸಮಿತಿಯೂ ಬದಲಾಗಿದೆ, ಮತ್ತು ಈಗ ಈ ಜ್ಞಾನದ ಭಂಡಾರವನ್ನು ವಿಶ್ವದ, ಜಗತ್ತಿನ ಮತ್ತು ದೇಶದ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ ಎಂಬ ವಿಶ್ವಾಸವಿದೆ, ಹಾಗೂ ಇದನ್ನು ಖಚಿತಪಡಿಸಿಕೊಳ್ಳುವುದು ಸಂಸ್ಥೆಯ ಹೊಸ ಸಮಿತಿಯ ಜವಾಬ್ದಾರಿಯಾಗಿದೆ ಎಂದು ಶ್ರೀ ಶಾ ಹೇಳಿದರು. ಭಾರತೀಯ ಜ್ಞಾನ ಪರಂಪರೆಯ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಈ ಜ್ಞಾನವು ದೇಶಾದ್ಯಂತ ಮತ್ತು ಇಡೀ ಜಗತ್ತಿನಲ್ಲಿ ಹೇಗೆ ಹರಡಬಹುದು ಹಾಗೂ ಸಮ್ಮತಿಯನ್ನು ಪಡೆಯಬಹುದು ಎಂಬುದನ್ನು ನೋಡಬೇಕು ಎಂದು ಅವರು ತಿಳಿಸಿದರು. ಭಾರತ ರತ್ನ ಪಂಡಿತ್ ಪಾಂಡುರಂಗ ವಾಮನ ಕಾಣೆ ಅವರ ಕೃತಿಗಳ ಆಧಾರದ ಮೇಲೆ ‘ಕಾಣೆ ಸಮಗ್ರ’ವನ್ನು ಸಂಕಲಿಸಬೇಕು ಮತ್ತು ಮುಂಬರುವ ಪೀಳಿಗೆಗಾಗಿ ಅದರ ಪ್ರತಿಯೊಂದು ಪದವನ್ನು ಸಿದ್ಧಪಡಿಸಬೇಕು, ಇದರಿಂದ ನವಪೀಳಿಗೆಯನ್ನು ನಿರ್ಮಿಸಬಹುದು ಎಂದು ಅವರು ಹೇಳಿದರು. ಇಂತಹ ಅನೇಕ ನಿಧಿಗಳು ಈ ಸಂಸ್ಥೆಯಲ್ಲಿ ಇವೆ ಎಂದು ಅವರು ಉಲ್ಲೇಖಿಸಿದರು.

2V0A8600.JPG.jpeg

ಬ್ರಿಟಿಷರು ಜ್ಞಾನ ಮತ್ತು ಅಧಿಕಾರವನ್ನು ಪರಸ್ಪರ ಹೆಣೆದಿದ್ದರು ಎಂದು ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. ಜ್ಞಾನ ಮತ್ತು ಅಧಿಕಾರವನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವುದು ನಮ್ಮ ಕಾರ್ಯವಾಗಿದೆ, ಇದರಿಂದ ಜ್ಞಾನದ ಆಧಾರದ ಮೇಲೆ ಅಧಿಕಾರವು ಸೃಷ್ಟಿಯಾಗುತ್ತದೆ ಮತ್ತು ಅದೇ ಆಧಾರದ ಮೇಲೆ ದೇಶವನ್ನು ನಡೆಸಲಾಗುತ್ತದೆ. ಇಂತಹ ವ್ಯವಸ್ಥೆಯನ್ನು ನಿರ್ಮಿಸುವುದು ಏಷ್ಯಾಟಿಕ್ ಸೊಸೈಟಿಯ ಕೆಲಸವಾಗಿದೆ. ದೇಶದಲ್ಲಿ ಇತಿಹಾಸವನ್ನು ಅಳಿಸಿಹಾಕಲಾಗುತ್ತಿದೆ ಎಂದು ಆಗಾಗ್ಗೆ ಹೇಳಲಾಗುತ್ತದೆ ಎಂದು ಅವರು ತಿಳಿಸಿದರು. ತಾವು ಆ ವಿದ್ವಾಂಸರೊಂದಿಗೆ ಸಹಮತ ಹೊಂದಿಲ್ಲ ಎಂದು ಶ್ರೀ ಶಾ ಹೇಳಿದರು. ವಸಾಹತುಶಾಹಿ ಪ್ರಭಾವದಿಂದ ಮುಕ್ತವಾಗುವ ಪ್ರಕ್ರಿಯೆಯು ಇತಿಹಾಸದಳಿಸುವಿಕೆಯಲ್ಲ. ಇದು ಇತಿಹಾಸವನ್ನು ಸಂಪೂರ್ಣ, ಅಧಿಕೃತವಾಗಿ ಮತ್ತು ಭಾರತೀಯ ದೃಷ್ಟಿಕೋನದಿಂದ ಮತ್ತೊಮ್ಮೆ ಜನರ ಮುಂದೆ ಇಡುವುದಾಗಿದೆ. ಇದು ವಿ-ವಸಾಹತುಶಾಹೀಕರಣ, ಮತ್ತು ಇದು ನಡೆಯಲೇಬೇಕು. ವಸಾಹತುಶಾಹಿ ಪ್ರಭಾವದಿಂದ ಮುಕ್ತ ಎಂದರೆ ಅಳಿಸಿಹಾಕುವುದಲ್ಲ. ವಸಾಹತುಶಾಹಿ ಪ್ರಭಾವದಿಂದ ಮುಕ್ತವಾಗುವುದು ಎಂದರೆ ವಿಶ್ವದ ಕಲ್ಯಾಣಕ್ಕಾಗಿ ಸತ್ಯವನ್ನು ಪ್ರಪಂಚದ ಮುಂದೆ ಇಡುವುದು. ಇಂದು ನಾವು ವಸಾಹತುಶಾಹಿ ಪ್ರಭಾವದಿಂದ ಮುಕ್ತವಾಗುವತ್ತ ಸಾಗಿದ್ದೇವೆ. ಮುಂಬೈನ ಏಷ್ಯಾಟಿಕ್ ಸೊಸೈಟಿಯು ಮಹಾಭಾರತದ ವರ್ಣಚಿತ್ರಗಳು, ಜೈನ ಕಲ್ಪಸೂತ್ರ ಮತ್ತು ಅತ್ಯಂತ ಅಪರೂಪದ ಬೌದ್ಧ ಗ್ರಂಥಗಳನ್ನು ಹೊಂದಿದ್ದು, ಅವು ಬಹುಕಾಲದ ಹಿಂದೆಯೇ ಹೊರಬರಬೇಕಾಗಿತ್ತು ಎಂದು ಅವರು ಹೇಳಿದರು.

ಮಹಾರಾಷ್ಟ್ರವು ಸಾರಸ್ವತರ ಭೂಮಿಯಾಗಿದೆ ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. ಸರಸ್ವತಿಯ ಪ್ರಾಧಾನ್ಯತೆ ಮತ್ತು ಮಹತ್ವವು ಈ ಮಣ್ಣಿನ ಶಕ್ತಿಯಲ್ಲೇ ಅಂತರ್ಗತವಾಗಿದೆ. ಏಷ್ಯಾಟಿಕ್ ಸೊಸೈಟಿ ಆಫ್ ಮುಂಬೈನ ಹೊಸ ತಂಡವು ಇಲ್ಲಿರುವ ಜ್ಞಾನದ ಭಂಡಾರವನ್ನು ವಿಸ್ತರಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಈ ವಿಸ್ತರಣೆಯು ಮೂರು ದೃಷ್ಟಿಕೋನಗಳಿಂದ ನಡೆಯಬೇಕು. ಏಷ್ಯಾಟಿಕ್ ಸೊಸೈಟಿಯು ವಿಸ್ತಾರಗೊಳ್ಳಬೇಕು ಮತ್ತು ಇಲ್ಲಿ ಲಭ್ಯವಿರುವ ಹಸ್ತಪ್ರತಿಗಳನ್ನು ಭಾರತ ಸರ್ಕಾರವು ಪ್ರಾರಂಭಿಸಿರುವ 'ಜ್ಞಾನ ಭಾರತಂ ರಾಷ್ಟ್ರೀಯ ಹಸ್ತಪ್ರತಿ ಮಿಷನ್'ನೊಂದಿಗೆ ಸಂಪೂರ್ಣವಾಗಿ ಜೋಡಿಸಬೇಕು ಎಂದು ಅವರು ತಿಳಿಸಿದರು. ಮಹಾರಾಷ್ಟ್ರದಾದ್ಯಂತ ಇರುವ ಹಳ್ಳಿಗಳಿಂದ ಮತ್ತು ವಿದ್ವಾಂಸರ ಮನೆಗಳಿಂದ ಪಾರಂಪರಿಕ ದಾಖಲೆಗಳನ್ನು ಸಂಗ್ರಹಿಸುವ ಹಾಗೂ ಅವುಗಳನ್ನು ಜ್ಞಾನ ಭಾರತಂ ಹಸ್ತಪ್ರತಿ ಸಮೀಕ್ಷೆಯೊಂದಿಗೆ ಜೋಡಿಸುವ ಅಭಿಯಾನವನ್ನು ನಡೆಸುವ ಸಾಧ್ಯತೆಯನ್ನು ಏಷ್ಯಾಟಿಕ್ ಸೊಸೈಟಿಯು ಪರಿಶೀಲಿಸಬೇಕು. ಇಲ್ಲಿರುವ ಹಸ್ತಪ್ರತಿಗಳಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಜ್ಞಾನ ಭಾರತಂ ರಾಷ್ಟ್ರೀಯ ಹಸ್ತಪ್ರತಿ ಮಿಷನ್ ಅಡಿಯಲ್ಲಿ ಸಂಶೋಧನಾ ವ್ಯವಸ್ಥೆಗಳನ್ನು ಪರಿಗಣಿಸಬೇಕು ಎಂದು ಶ್ರೀ ಶಾ ಹೇಳಿದರು. ಹಸ್ತಪ್ರತಿಗಳಲ್ಲಿ ಅಡಕವಾಗಿರುವ ಅಪಾರ ಜ್ಞಾನದ ಕುರಿತು ಸಂಶೋಧನೆ ಅತ್ಯಗತ್ಯವಾಗಿದೆ ಎಂದು ಅವರು ತಿಳಿಸಿದರು. ಇವು ದೇಶವನ್ನು ಮುನ್ನಡೆಸುವ ಶಕ್ತಿಯನ್ನು ಹೊಂದಿವೆ. ಜ್ಞಾನ ಭಾರತಂ ಹಸ್ತಪ್ರತಿ ಮಿಷನ್‌ನ ಮೊದಲ ಔಪಚಾರಿಕವಲ್ಲದ ಸಭೆಯಲ್ಲಿ, ಆರ್ಥಿಕ ಮತ್ತು ರಕ್ಷಣಾತ್ಮಕವಾಗಿ ಭಾರತವನ್ನು ವಿಶ್ವದಲ್ಲೇ ಅತ್ಯುತ್ತಮವಾಗಿಸುವ ಬೀಜವು ಈ ಹಸ್ತಪ್ರತಿಗಳಲ್ಲೇ ಅಂತರ್ಗತವಾಗಿದೆ ಎಂದು ಜೈನ ಮುನಿಯೊಬ್ಬರು ಹೇಳಿದ್ದರು. ಇದರ ಮೇಲಿನ ಸಂಶೋಧನೆಗೆ ವ್ಯವಸ್ಥೆಗಳನ್ನು ಮಾಡಬೇಕು ಎಂದು ಅವರು ಹೇಳಿದರು.

ಏಷ್ಯಾಟಿಕ್ ಸೊಸೈಟಿಯನ್ನು ಸಬಲೀಕರಣಗೊಳಿಸುವಂತೆ, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಅವರಿಗೆ ಹೇಳಿರುವುದಾಗಿ ಶ್ರೀ ಅಮಿತ್ ಶಾ ತಿಳಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಭಾರತ ಸರ್ಕಾರವು ಏಷ್ಯಾಟಿಕ್ ಸೊಸೈಟಿ ಆಫ್ ಮುಂಬೈಗೆ ಸಾಧ್ಯವಿರುವ ಎಲ್ಲಾ ಬೆಂಬಲ ಮತ್ತು ಸಹಕಾರವನ್ನು ನೀಡುತ್ತಿದ್ದು, ಭವಿಷ್ಯದಲ್ಲೂ ಇದನ್ನು ಮುಂದುವರಿಸಲಿದೆ ಎಂದು ಅವರು ಹೇಳಿದರು. ದೇಶದ ಪ್ರತಿಯೊಂದು ಹಳ್ಳಿಯಲ್ಲಿ, ಪ್ರತಿಯೊಂದು ಪಟ್ಟಣದಲ್ಲಿ ಮತ್ತು ಪ್ರತಿಯೊಂದು ರಾಜ್ಯದಲ್ಲಿ ಇರುವ ಇಂತಹ ಎಲ್ಲಾ ಸಂಸ್ಥೆಗಳನ್ನು ಏಷ್ಯಾಟಿಕ್ ಸೊಸೈಟಿ ಆಫ್ ಮುಂಬೈನೊಂದಿಗೆ ಜೋಡಿಸಿ ಜ್ಞಾನದ ಜಂಟಿ ಭಂಡಾರವನ್ನು ಸೃಷ್ಟಿಸಬೇಕು, ಇದರಿಂದ ಅದು ಇಡೀ ದೇಶಾದ್ಯಂತದ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮತ್ತು ವಿದ್ವಾಂಸರಿಗೆ ಲಭ್ಯವಾಗುತ್ತದೆ ಎಂದು ಶ್ರೀ ಶಾ ಹೇಳಿದರು.

 

*****


(ಪ್ರಕಟಣೆ ಐ.ಡಿ.: 2309845) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati