ರೈಲ್ವೇ ಸಚಿವಾಲಯ
ಭಾರತೀಯ ರೈಲ್ವೆಯಿಂದ, ಆಗಸ್ಟ್ 2026ರಲ್ಲಿ ಪ್ರಯಾಣಿಕರ ಸಂಪರ್ಕ ಮತ್ತು ಸರಕು ಸಾಗಣೆ ಸಾಮರ್ಥ್ಯ ವಿಸ್ತರಣೆ; ಆಗಸ್ಟ್ 2025ಕ್ಕೆ ಹೋಲಿಸಿದರೆ ಸರಕು ಸಾಗಣಿಕೆ 5.4% ರಷ್ಟು ಏರಿಕೆ
ಕಡಿಮೆ ವೆಚ್ಚದ ರೈಲು ಸಂಪರ್ಕವನ್ನು ಬಲಪಡಿಸಲು 14 ಅಮೃತ್ ಭಾರತ್ ಸೇವೆಗಳ ಸಕ್ರಮ: ಆಗಸ್ಟ್ 2026ರಲ್ಲಿ ಉತ್ತರ ಪ್ರದೇಶ, ಬಿಹಾರ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಇತರ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಿದ ರೈಲು ಸೇವೆಗಳು
5 ಹೊಸ ಗತಿ ಶಕ್ತಿ ಕಾರ್ಗೋ ಟರ್ಮಿನಲ್ ಗಳ (GCT) ಕಾರ್ಯಾರಂಭ: ಒಟ್ಟು ಸಂಖ್ಯೆ 149ಕ್ಕೆ ಏರಿಕೆ; ಉದ್ಯಮ ಮತ್ತು ಪ್ರಾದೇಶಿಕ ಆರ್ಥಿಕ ಚಟುವಟಿಕೆಗೆ ಬೆಂಬಲ ನೀಡಲು ತ್ವರಿತ ಸರಕು ಸಾಗಣೆ
ಪ್ರಕಟಣಾ ದಿನಾಂಕ:
13 SEP 2026 12:06PM by PIB Bengaluru
ಆಗಸ್ಟ್ 2026ರಲ್ಲಿ ದೇಶದಾದ್ಯಂತ ರೈಲ್ವೆ ಸಂಪರ್ಕ ಮತ್ತು ಸೇವೆಗಳಲ್ಲಿ ಗಮನಾರ್ಹ ವಿಸ್ತರಣೆ ಕಂಡುಬಂದಿದ್ದು, ಭಾರತೀಯ ರೈಲ್ವೆಯು ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಾಣಿಕೆ ಎರಡರಲ್ಲೂ ಬೆಳವಣಿಗೆಯನ್ನು ದಾಖಲಿಸಿದೆ. ಈ ತಿಂಗಳಿನಲ್ಲಿ 14 ʻಅಮೃತ್ ಭಾರತ್ʼ ಸೇವೆಗಳನ್ನು ಕ್ರಮಬದ್ಧಗೊಳಿಸಲಾಗಿದ್ದು, ಹಲವಾರು ಪ್ರಮುಖ ಮಾರ್ಗಗಳಲ್ಲಿ ಪ್ರಯಾಣಿಕರಿಗೆ ಕೈಗೆಟುಕುವ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಗಳನ್ನು ಒದಗಿಸಲಾಗಿದೆ. ಜೊತೆಗೆ ಉದ್ಯಮಗಳಿಗೆ ಸರಕು ಸಾಗಣೆ ಸಂಪರ್ಕವನ್ನು ಸುಧಾರಿಸಲು 5 ಹೊಸ ಗತಿ ಶಕ್ತಿ ಕಾರ್ಗೋ ಟರ್ಮಿನಲ್ ಗಳನ್ನು (ಜಿಸಿಟಿ) ಪ್ರಾರಂಭಿಸಲಾಗಿದೆ.
ಆರ್ಥಿಕತೆಯ ಪ್ರಮುಖ ವಲಯಗಳಿಂದ ನಿರಂತರ ಬೇಡಿಕೆಯನ್ನು ಬಿಂಬಿಸುವಂತೆ, ಭಾರತೀಯ ರೈಲ್ವೆಯು ಸರಕು ಸಾಗಾಣಿಕೆಯಲ್ಲಿ 5.4% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಹಬ್ಬದ ಋತುವಿನಲ್ಲಿ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಹೆಚ್ಚುವರಿ ವಿಶೇಷ ರೈಲು ಸೇವೆಗಳನ್ನು ನಿರ್ವಹಿಸಿದ್ದರಿಂದ ಪ್ರಯಾಣಿಕರ ಸಂಚಾರವೂ ಹೆಚ್ಚಾಗಿದೆ.
ಹೆಚ್ಚಿನ ಸರಕು ಸಾಗಣೆ: ಉದ್ಯಮ ಮತ್ತು ಆರ್ಥಿಕತೆಗೆ ಬೆಂಬಲ
ಭಾರತೀಯ ರೈಲ್ವೆಯು ಆಗಸ್ಟ್ 2026 ರಲ್ಲಿ 137.9 ದಶಲಕ್ಷ ಟನ್ ಸರಕನ್ನು ಸಾಗಿಸಿದ್ದು , ಆಗಸ್ಟ್ 2025 ರಲ್ಲಿದ್ದ 130.9 ದಶಲಕ್ಷ ಟನ್ ಗಳಿಗೆ ಹೋಲಿಸಿದರೆ 5.4% ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ.
ಸರಕು ಸಾಗಣೆಯ ಈ ಹೆಚ್ಚಳವು ಕಲ್ಲಿದ್ದಲು, ಕಬ್ಬಿಣದ ಅದಿರು, ಉಕ್ಕು, ರಸಗೊಬ್ಬರಗಳು ಮತ್ತು ಇತರ ಸರಕುಗಳಂತಹ ಪ್ರಮುಖ ವಲಯಗಳಿಂದ ಬೆಳೆಯುತ್ತಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ. ರೈಲು ಸರಕು ಸಾಗಣೆಯ ಹೆಚ್ಚಳವು ಉದ್ಯಮಗಳಿಗೆ ವಿಶ್ವಾಸಾರ್ಹ ಸಾರಿಗೆಯನ್ನು ಒದಗಿಸುವುದರ ಜೊತೆಗೆ, ವಿವಿಧ ಪ್ರದೇಶಗಳಿಗೆ ಅತ್ಯಗತ್ಯ ಸರಕುಗಳ ಸಾಗಣೆಗೆ ಬೆಂಬಲ ನೀಡುತ್ತದೆ.
ಆಗಸ್ಟ್ 2026 ರಲ್ಲಿ ಸರಕು ಸಾಗಣೆ ಆದಾಯವು ಆಗಸ್ಟ್ 2025 ಕ್ಕೆ ಹೋಲಿಸಿದರೆ 6.27% ರಷ್ಟು ಹೆಚ್ಚಾಗಿದ್ದು, ಭಾರತೀಯ ರೈಲ್ವೆಯ ಸರಕು ಉದ್ಯಮವು ನಿರಂತರವಾಗಿ ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತದೆ.
ಪ್ರಮುಖ ಸರಕುಗಳ ಹೆಚ್ಚಿನ ಸಾಗಣೆಯಿಂದ ಉದ್ಯಮ ಮತ್ತು ಅಗತ್ಯ ಪೂರೈಕೆ ಸರಪಳಿಗೆ ಬೆಂಬಲ
ಆಗಸ್ಟ್ 2026 ರಲ್ಲಿ ಹಲವಾರು ಪ್ರಮುಖ ಸರಕು ವಿಭಾಗಗಳು ಉತ್ತಮ ಬೆಳವಣಿಗೆಯನ್ನು ದಾಖಲಿಸಿವೆ. ಕಬ್ಬಿಣದ ಅದಿರು ಸಾಗಾಣಿಕೆ 12.1%, ಕ್ಲಿಂಕರ್ 10.4%, ದೇಶೀಯ ಕಂಟೈನರ್ 9.2% ಮತ್ತು ಕಲ್ಲಿದ್ದಲು 6% ರಷ್ಟು ಹೆಚ್ಚಾಗಿದೆ. ಸಿದ್ಧ ಉಕ್ಕು ಸಾಗಾಣಿಕೆ 4.9%, ಖನಿಜ ತೈಲ 3.1%, ರಸಗೊಬ್ಬರಗಳು 1.6% ಮತ್ತು ಇತರೆ ಸರಕುಗಳು 8.2% ರಷ್ಟು ಹೆಚ್ಚಾಗಿವೆ.
ಈ ವಿಭಾಗಗಳ ಬೆಳವಣಿಗೆಯು ಉದ್ಯಮಗಳಿಗೆ ರೈಲು ಆಧಾರಿತ ಪೂರೈಕೆ ಸರಪಳಿಯನ್ನು ಬಲಪಡಿಸುತ್ತದೆ ಮತ್ತು ದೇಶದಾದ್ಯಂತ ಅಗತ್ಯ ಕಚ್ಚಾವಸ್ತು ಹಾಗೂ ಸಿದ್ಧಪಡಿಸಿದ ಸರಕುಗಳ ಸಾಗಣೆಗೆ ಬೆಂಬಲ ನೀಡುತ್ತದೆ. ವಿಶೇಷವಾಗಿ ಕಂಟೈನರ್ ಸಾಗಣೆಯ ಹೆಚ್ಚಳವು ರೈಲ್ವೆ ಜಾಲದ ಮೂಲಕ ವಿವಿಧ ರೀತಿಯ ಸರಕುಗಳ ಪರಿಣಾಮಕಾರಿ ಸಾಗಣೆಗೆ ನೆರವಾಗುತ್ತದೆ.
ಸರಕು ಸಂಪರ್ಕ ಸುಧಾರಣೆಗೆ 5 ಹೊಸ ಗತಿ ಶಕ್ತಿ ಕಾರ್ಗೋ ಟರ್ಮಿನಲ್ ಗಳು
ಆಗಸ್ಟ್ 2026ರಲ್ಲಿ 5 ಹೊಸ ಗತಿ ಶಕ್ತಿ ಕಾರ್ಗೋ ಟರ್ಮಿನಲ್ ಗಳು ಕಾರ್ಯಾರಂಭ ಮಾಡಿದ್ದು, 31 ಆಗಸ್ಟ್ 2026ರ ವೇಳೆಗೆ ಕಾರ್ಯಾರಂಭ ಮಾಡಿದ ಒಟ್ಟು ಜಿಸಿಟಿ ಗಳ ಸಂಖ್ಯೆ 149 ಕ್ಕೆ ಏರಿದೆ.
ಹೊಸದಾಗಿ ಕಾರ್ಯಾರಂಭಗೊಂಡ ಟರ್ಮಿನಲ್ ಗಳ ವಿವರ:
- ಶಿವಲಾಖಾ, ಗುಜರಾತ್
- ನಲ್ಲಿ, ತಮಿಳುನಾಡು
- ಶಕ್ತಿನಗರ, ಉತ್ತರ ಪ್ರದೇಶ
- ದೇವಾರಾಗ್ರಾಮ್, ಮಧ್ಯಪ್ರದೇಶ
- ಬ್ರಜರಾಜನಗರ, ಒಡಿಶಾ
ಗತಿ ಶಕ್ತಿ ಕಾರ್ಗೋ ಟರ್ಮಿನಲ್ ಜಾಲದ ವಿಸ್ತರಣೆಯು ಸರಕು ಸಾಗಣೆ ವ್ಯವಸ್ಥೆಯನ್ನು ಉತ್ಪಾದನಾ ಮತ್ತು ಬಳಕೆ ಕೇಂದ್ರಗಳಿಗೆ ಹತ್ತಿರ ತರುತ್ತದೆ. ಸರಕುಗಳ ನೇರ ಮತ್ತು ಸಮರ್ಥ ನಿರ್ವಹಣೆಯನ್ನು ಸಕ್ರಿಯಗೊಳಿಸುವ ಮೂಲಕ, ಈ ಟರ್ಮಿನಲ್ ಗಳು ಅನಗತ್ಯ ಸಂಚಾರವನ್ನು ಕಡಿಮೆ ಮಾಡಬಹುದು, ಸಾಗಾಣಿಕೆ ದಕ್ಷತೆಯನ್ನು ಸುಧಾರಿಸಬಹುದು ಮತ್ತು ಕೈಗಾರಿಕಾ ಹಾಗೂ ವಾಣಿಜ್ಯ ಪ್ರದೇಶಗಳಿಂದ ಸರಕುಗಳ ವೇಗದ ನಿರ್ಗಮನಕ್ಕೆ ಅನುಕೂಲ ಮಾಡಿಕೊಡುತ್ತವೆ.
ಬೆಳೆಯುತ್ತಿರುವ ಜಿಸಿಟಿ ಜಾಲವು ಭಾರತದ ಇತರ ಸಾಗಾಣಿಕೆ ಮೂಲಸೌಕರ್ಯದೊಂದಿಗೆ ರೈಲ್ವೆಯ ಸಂಯೋಜನೆಯನ್ನು ಬಲಪಡಿಸಲು ಸಹಾಯ ಮಾಡುತ್ತಿದೆ, ಇದರಿಂದ ಉದ್ಯಮಗಳಿಗೆ ರೈಲು ಆಧಾರಿತ ಸರಕು ಸಾರಿಗೆಯ ಹೆಚ್ಚಿನ ಸೌಲಭ್ಯ ದೊರೆಯುತ್ತದೆ.
ಕೈಗೆಟುಕುವ ದರದ ರೈಲು ಸಂಪರ್ಕ ವಿಸ್ತರಿಸಲು 14 ʻಅಮೃತ್ ಭಾರತ್ʼ ಸೇವೆಗಳನ್ನು ನಿಯಮಿತ ಸೇವೆಹಗಳನ್ನಾಗಿ ಪರಿವರ್ತಿಸಲಾಗಿದೆ
ಆಗಸ್ಟ್ 2026ರಲ್ಲಿ ಪ್ರಯಾಣಿಕರ ಸಂಪರ್ಕವು ಗಮನಾರ್ಹವಾಗಿ ವಿಸ್ತರಣೆಗೊಂಡಿದ್ದು, 14 ಅಮೃತ್ ಭಾರತ್ ವಿಶೇಷ ರೈಲು ಸೇವೆಗಳನ್ನು ನಿಯಮಿತ ರೈಲು ಸೇವೆಗಳಾಗಿ ಸಕ್ರಮಗೊಳಿಸಲಾಗಿದೆ. ಇದರಿಂದಾಗಿ ಒಟ್ಟು ಅಮೃತ್ ಭಾರತ್ ಸೇವೆಗಳ ಸಂಖ್ಯೆ 86 ಕ್ಕೆ ಏರಿದೆ.
ಈ ಸೇವೆಗಳು ಉತ್ತರ ಪ್ರದೇಶ, ಬಿಹಾರ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮತ್ತು ದೇಶದ ಇತರ ಪ್ರಮುಖ ಪ್ರದೇಶಗಳನ್ನು ಒಳಗೊಂಡಂತೆ ಹಲವಾರು ಪ್ರಮುಖ ನಗರಗಳು ಮತ್ತು ಇತರ ಪ್ರದೇಶಗಳನ್ನು ಸಂಪರ್ಕಿಸುತ್ತವೆ.
ಪ್ರಮುಖ ಸೇವೆಗಳ ವಿವರ:
- ಸುಬೇದಾರ್ಗಂಜ್ - ಲೋಕಮಾನ್ಯ ತಿಲಕ್ ಟರ್ಮಿನಸ್
- ಗೋರಖ್ಪುರ - ಬಾಂದ್ರಾ ಟರ್ಮಿನಸ್
- ಗೋರಖ್ಪುರ - ದೆಹಲಿ ಜಂಕ್ಷನ್
- ಅಹಮದಾಬಾದ್ - ಭಾಗಲ್ಪುರ
- ಲೋಕಮಾನ್ಯ ತಿಲಕ್ ಟರ್ಮಿನಸ್ - ಪ್ರಯಾಗ್ ರಾಜ್ ಜಂಕ್ಷನ್
- ಪ್ರಯಾಗ್ರಾಜ್ ಜಂಕ್ಷನ್ - ಉಧ್ನಾ ಜಂಕ್ಷನ್
- ಧನ್ಬಾದ್ - ಕೊಯಮತ್ತೂರು, ಹಾಗೂ ಇತರ ಮಾರ್ಗಗಳು
ಈ ಹೊಸ ಸೇವೆಗಳು ಪ್ರಯಾಣಿಕರಿಗೆ ಹೆಚ್ಚಿನ ಪ್ರಯಾಣದ ಆಯ್ಕೆಗಳು, ಪ್ರಮುಖ ನಗರ ಕೇಂದ್ರಗಳು ಮತ್ತು ಪ್ರಾದೇಶಿಕ ತಾಣಗಳ ನಡುವೆ ಸುಧಾರಿತ ಸಂಪರ್ಕ ಹಾಗೂ ಕೈಗೆಟುಕುವ ದರದಲ್ಲಿ ದೂರದ ಊರುಗಳ ರೈಲು ಪ್ರಯಾಣವನ್ನು ಒದಗಿಸುವ ನಿರೀಕ್ಷೆಯಿದೆ.
ಪೂರ್ವಾಂಚಲ ಮತ್ತು ಪೂರ್ವ ಉತ್ತರ ಪ್ರದೇಶದ ಜನರಿಗೆ, ಗೋರಖ್ ಪುರದಿಂದ ಬಾಂದ್ರಾ ಟರ್ಮಿನಸ್ ಮತ್ತು ದೆಹಲಿಗೆ ಇರುವ ಸೇವೆಗಳು ಎರಡು ಪ್ರಮುಖ ಮೆಟ್ರೋಪಾಲಿಟನ್ ಪ್ರದೇಶಗಳಿಗೆ ಹೆಚ್ಚಿನ ಸಂಪರ್ಕವನ್ನು ಕಲ್ಪಿಸುತ್ತವೆ. ಇದು ಉದ್ಯೋಗ, ಶಿಕ್ಷಣ, ವ್ಯಾಪಾರ ಮತ್ತು ಕುಟುಂಬದ ಕಾರಣಗಳಿಗಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲಕರವಾಗಿದೆ.
ಹಾಗೆಯೇ, ಅಹಮದಾಬಾದ್-ಭಾಗಲ್ಪುರ ಸಂಪರ್ಕವು ಗುಜರಾತ್ ಮತ್ತು ಬಿಹಾರ ನಡುವಿನ ರೈಲು ಸಂಪರ್ಕವನ್ನು ಬಲಪಡಿಸುತ್ತದೆ. ಧನ್ ಬಾದ್-ಕೊಯಮತ್ತೂರು ಸೇವೆಯು ಪೂರ್ವ ಭಾರತ ಮತ್ತು ದಕ್ಷಿಣ ಭಾರತದ ನಡುವಿನ ದೂರದ ಪ್ರಯಾಣದ ಸಂಪರ್ಕವನ್ನು ಸುಧಾರಿಸುತ್ತದೆ, ವಿಶೇಷವಾಗಿ ಕೈಗಾರಿಕಾ ಮತ್ತು ಉದ್ಯೋಗ ಕೇಂದ್ರಗಳ ನಡುವೆ ಪ್ರಯಾಣಿಸುವವರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.
ಪ್ರಯಾಗ್ ರಾಜ್ ಮತ್ತು ಉಧ್ನಾ ಹಾಗೂ ಪ್ರಯಾಗ್ ರಾಜ್ ಮತ್ತು ಮುಂಬೈ ನಡುವಿನ ಸಂಪರ್ಕವು ಉತ್ತರ ಪ್ರದೇಶದಿಂದ ಪಶ್ಚಿಮ ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯಾಣದ ಆಯ್ಕೆಗಳನ್ನು ಒದಗಿಸುತ್ತದೆ.
ಅಮೃತ್ ಭಾರತ್ ಸೇವೆಗಳ ವಿಸ್ತರಣೆಯು ಪ್ರಮುಖ ನಗರಗಳು ಮತ್ತು ಪ್ರಾದೇಶಿಕ ಕೇಂದ್ರಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಆರಾಮದಾಯಕ, ಕೈಗೆಟುಕುವ ಮತ್ತು ಸುಲಭವಾಗಿ ದೊರೆಯುವ ದೂರದೂರಿನ ರೈಲು ಪ್ರಯಾಣವನ್ನು ಒದಗಿಸುವ ಭಾರತೀಯ ರೈಲ್ವೆಯ ನಿರಂತರ ಪ್ರಯತ್ನದ ಭಾಗವಾಗಿದೆ.
ಪ್ರಯಾಣಿಕರ ಸಂಖ್ಯೆಯಲ್ಲಿ ನಿರಂತರ ಏರಿಕೆ
ಆಗಸ್ಟ್ 2025ರಲ್ಲಿ 64.43 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದರೆ, ಆಗಸ್ಟ್ 2026 ರಲ್ಲಿ ಭಾರತೀಯ ರೈಲ್ವೆಯು 67.27 ಕೋಟಿ ಪ್ರಯಾಣಿಕರನ್ನು ಸಾಗಿಸಿದೆ.
ಉಪನಗರ ಪ್ರಯಾಣಿಕರ ಸಂಚಾರದಲ್ಲಿ ಬಲವಾದ ಬೆಳವಣಿಗೆ ದಾಖಲಾಗಿದ್ದು, 9.02% ರಷ್ಟು ಹೆಚ್ಚಳವಾಗಿದೆ. ಆಗಸ್ಟ್ 2025ರಲ್ಲಿ 34.89 ಕೋಟಿ ಉಪನಗರ ಪ್ರಯಾಣಿಕರು ಪ್ರಯಾಣಿಸಿದ್ದರೆ, ಆಗಸ್ಟ್ 2026ರಲ್ಲಿ ಒಟ್ಟು 38.01 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ವಿಶೇಷವಾಗಿ ದಟ್ಟ ಜನಸಂದಣಿ ಇರುವ ನಗರ ಮತ್ತು ಉಪನಗರ ಪ್ರದೇಶಗಳಲ್ಲಿ ಲಕ್ಷಾಂತರ ಪ್ರಯಾಣಿಕರಿಗೆ ಕೈಗೆಟುಕುವ ದೈನಂದಿನ ಸಂಚಾರ ಸೌಲಭ್ಯವನ್ನು ಒದಗಿಸುವಲ್ಲಿ ರೈಲ್ವೆ ಜಾಲದ ನಿರಂತರ ಪ್ರಾಮುಖ್ಯತೆಯನ್ನು ಇದು ತೋರಿಸುತ್ತದೆ.
ಹಬ್ಬದ ಋತುವಿನ ದಟ್ಟಣೆ ನಿರ್ವಹಣೆಗೆ ಹೆಚ್ಚುವರಿ ವಿಶೇಷ ರೈಲುಗಳು
ಹಬ್ಬದ ಋತುವಿನಲ್ಲಿ ಹೆಚ್ಚಿದ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ, ಭಾರತೀಯ ರೈಲ್ವೆಯು 25 ರಿಂದ 31 ಆಗಸ್ಟ್ 2026ರ ನಡುವೆ 144 ರಕ್ಷಾಬಂಧನ ವಿಶೇಷ ರೈಲು ಫೆರಿಗಳನ್ನು ಕಾರ್ಯಾಚರಣೆ ಮಾಡಿದೆ. ಆಗಸ್ಟ್ 8 ರಿಂದ 14, 2025ರ ನಡುವೆ 48 ಪ್ರಯಾಣಗಳನ್ನು ನಡೆಸಲಾಗಿತ್ತು .
ವಿಶೇಷ ರೈಲು ಸೇವೆಗಳ ಈ ಗಮನಾರ್ಹ ಹೆಚ್ಚಳವು ಹಬ್ಬಗಳ ಸಮಯದಲ್ಲಿ ಹೆಚ್ಚುವರಿ ಪ್ರಯಾಣದ ಸಾಮರ್ಥ್ಯವನ್ನು ಒದಗಿಸಲು ಸಹಾಯ ಮಾಡಿದೆ, ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಪ್ರಯಾಣದ ಆಯ್ಕೆಗಳು ಲಭ್ಯವಾಗಿವೆ.
ಇಂತಹ ಹೆಚ್ಚುವರಿ ಸೇವೆಗಳು ಹಬ್ಬಗಳ ಸಮಯದಲ್ಲಿ ತಮ್ಮ ಸ್ವಂತ ಊರುಗಳಿಗೆ ಮತ್ತು ಕುಟುಂಬಗಳ ಬಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅತ್ಯಂತ ಮುಖ್ಯವಾಗಿದ್ದು, ನಿಯಮಿತ ಸೇವೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಪ್ರಯಾಣದ ಸೌಲಭ್ಯವನ್ನು ಹೆಚ್ಚಿಸಲು ನೆರವಾಗುತ್ತವೆ.
ರೈಲು ಸಂಪರ್ಕ ವಿಸ್ತರಣೆ, ದೈನಂದಿನ ಸಂಚಾರ ವ್ಯವಸ್ಥೆ ಬಲವರ್ಧನೆ
ಆಗಸ್ಟ್ 2026 ರ ಬೆಳವಣಿಗೆಗಳು ಪ್ರಯಾಣಿಕರ ಸಂಪರ್ಕವನ್ನು ವಿಸ್ತರಿಸುವುದು, ಪ್ರಯಾಣದ ಆಯ್ಕೆಗಳನ್ನು ಸುಧಾರಿಸುವುದು, ಸರಕು ಸಾಗಣೆ ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ಬದಲಾಗುತ್ತಿರುವ ಬೇಡಿಕೆಗೆ ಸ್ಪಂದಿಸುವಲ್ಲಿ ಭಾರತೀಯ ರೈಲ್ವೆಯ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತವೆ.
ಹೊಸ ಅಮೃತ್ ಭಾರತ್ ಸೇವೆಗಳ ಪರಿಚಯವು ಪ್ರಮುಖ ನಗರಗಳು ಮತ್ತು ಪ್ರಾದೇಶಿಕ ಕೇಂದ್ರಗಳ ನಡುವೆ ಕೈಗೆಟುಕುವ ದೂರದ ಪ್ರಯಾಣದ ಸಂಪರ್ಕವನ್ನು ವಿಸ್ತರಿಸುತ್ತಿದೆ. ಹೆಚ್ಚುವರಿ ಹಬ್ಬದ ಸೇವೆಗಳು ಹಬ್ಬದ ಸಮಯದ ಪ್ರಯಾಣದ ಬೇಡಿಕೆಯನ್ನು ನಿರ್ವಹಿಸಲು ನೆರವಾಗುತ್ತಿವೆ. ಅದೇ ಸಮಯದಲ್ಲಿ, ಗತಿ ಶಕ್ತಿ ಕಾರ್ಗೋ ಟರ್ಮಿನಲ್ಗಳ ವಿಸ್ತರಣೆಯು ಸಾಗಾಣಿಕೆ ಜಾಲವನ್ನು ಬಲಪಡಿಸುತ್ತಿದೆ ಮತ್ತು ಉದ್ಯಮಗಳಿಗೆ ರೈಲು ಸೌಲಭ್ಯವನ್ನು ಸುಧಾರಿಸುತ್ತಿದೆ.
ನಿರಂತರ ಸಾಮರ್ಥ್ಯ ವರ್ಧನೆ, ಸುಧಾರಿತ ಕಾರ್ಯಾಚರಣೆಯ ದಕ್ಷತೆ ಮತ್ತು ಪ್ರಯಾಣಿಕ ಹಾಗೂ ಸರಕು ಮೂಲಸೌಕರ್ಯಗಳ ವಿಸ್ತರಣೆಯ ಮೂಲಕ, ಭಾರತೀಯ ರೈಲ್ವೆಯು ರೈಲು ಪ್ರಯಾಣವನ್ನು ಹೆಚು ಸುಲಭಗೊಳಿಸಲು ಮತ್ತು ದೇಶದಾದ್ಯಂತ ಆರ್ಥಿಕ ಚಟುವಟಿಕೆ ಹಾಗೂ ಪ್ರಾದೇಶಿಕ ಸಂಪರ್ಕದ ಪ್ರಮುಖ ಚಾಲಕಶಕ್ತಿಯಾಗಿ ರೈಲ್ವೆ ಜಾಲವನ್ನು ಬಲಪಡಿಸಲು ಬದ್ಧವಾಗಿದೆ.
*****
(ಪ್ರಕಟಣೆ ಐ.ಡಿ.: 2309751)
ವಿಸಿಟರ್ ಕೌಂಟರ್ : 8