ರೈಲ್ವೇ ಸಚಿವಾಲಯ
50 ಕಿಲೋಮೀಟರ್, ಅಪಾರ ಸಂಖ್ಯೆಯ ಫಲಾನುಭವಿಗಳು: ಮಿಜೋರಾಂನ ರೈಲ್ವೆ ಜೀವನಾಡಿಯ ಯಶಸ್ವಿ ಒಂದು ವರ್ಷ ಪೂರ್ಣ
ಕೇವಲ ಒಂದು ವರ್ಷದಲ್ಲಿ ಬೈರಾಬಿ-ಸೈರಂಗ್ ರೈಲು ಮಾರ್ಗವು ಮಿಜೋರಾಂನ ಪ್ರಯಾಣ, ಪ್ರವಾಸೋದ್ಯಮ ಮತ್ತು ಸರಕು ಸಾಗಣೆಯಲ್ಲಿ ಬದಲಾವಣೆ ತಂದಿದ್ದು, ಗಿರಿಧಾಮಗಳ ಈ ರಾಜ್ಯಕ್ಕೆ ಹೊಸ ಅವಕಾಶಗಳ ಬಾಗಿಲು ತೆರೆದಿದೆ
ಪ್ರಕಟಣಾ ದಿನಾಂಕ:
13 SEP 2026 11:27AM by PIB Bengaluru
13 ಸೆಪ್ಟೆಂಬರ್ 2025 ರಂದು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ 51.38 ಕಿಮೀ ಉದ್ದದ ಬೈರಾಬಿ-ಸೈರಂಗ್ ರೈಲು ಮಾರ್ಗ ಮತ್ತು ಸೈರಂಗ್ ರೈಲ್ವೆ ನಿಲ್ದಾಣದ ಉದ್ಘಾಟನೆಯು ಮಿಜೋರಾಂನಲ್ಲಿ ಪ್ರಗತಿ ಮತ್ತು ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಪ್ರಾರಂಭಿಸಿತು. ಕೇವಲ ಒಂದು ವರ್ಷದಲ್ಲಿ, ಈ ರೈಲು ಮಾರ್ಗವು ಈ ದೂರದ ಗುಡ್ಡಗಾಡು ರಾಜ್ಯದಲ್ಲಿ ಪರಿವರ್ತನಾತ್ಮಕ ಅಭಿವೃದ್ಧಿಯನ್ನು ತಂದಿದೆ. ರೈಲ್ವೆ ನಕ್ಷೆಯಲ್ಲಿನ ಕೇವಲ ಒಂದು ಸಾಲಾಗಿದ್ದ ಈ ಮಾರ್ಗವು ಈಗ ಸುಧಾರಿತ ಸಂಚಾರ, ಮಾರುಕಟ್ಟೆ ಪ್ರವೇಶ, ಪ್ರವಾಸೋದ್ಯಮ ಮತ್ತು ಹೊಸ ಅವಕಾಶಗಳ ಪ್ರವೇಶದ್ವಾರವಾಗಿ ಮಾರ್ಪಟ್ಟಿದೆ.
ಒಂದು ಮೈಲಿಗಲ್ಲು: ಬೆಟ್ಟ ಗುಡ್ಡಗಳನ್ನು ತಲುಪಿದ ರೈಲು ಮಾರ್ಗ
ತಲೆಮಾರುಗಳಿಂದ, ಮಿಜೋರಾಂನ ಕಠಿಣ ಭೌಗೋಳಿಕ ಸ್ವರೂಪದಿಂದಾಗಿ ಪ್ರಯಾಣವನ್ನು ಸಂಪೂರ್ಣವಾಗಿ ರಸ್ತೆಗಳ ಮೇಲೆಯೇ ಅವಲಂಬಿಸುವಂತೆ ಮಾಡಿತ್ತು. ಇದರಿಂದ ಪ್ರಯಾಣವು ಹೆಚ್ಚು ಸಮಯ ತೆಗೆದುಕೊಳ್ಳುವ ಅನಾನುಕೂಲಕರ ಮತ್ತು ಅನಿಯಮಿತವಾಗಿತ್ತು. ಬೈರಾಬಿ-ಸೈರಂಗ್ ಹೊಸ ರೈಲು ಮಾರ್ಗದ ಕಾರ್ಯಾರಂಭವು ಈ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ.

(ಬೈರಾಬಿ-ಸೈರಾಂಗ್ ಮಾರ್ಗವು ರಾಷ್ಟ್ರೀಯ ರೈಲ್ವೆ ಜಾಲವನ್ನು ಮಿಜೋರಾಂನ ಕಠಿಣ ಗುಡ್ಡಗಾಡು ಪ್ರದೇಶದ ಮೂಲಕ ಕೊಂಡೊಯ್ಯುತ್ತದೆ)
ಬೈರಾಬಿ-ಸೈರಂಗ್ ರೈಲು ಮಾರ್ಗವು ಮಿಜೋರಾಂನ ಕಡಿದಾದ ಬೆಟ್ಟಗಳು, ಆಳವಾದ ಕಣಿವೆಗಳು ಮತ್ತು ಕಂದರಗಳ ಮೂಲಕ ಹಾದುಹೋಗುವ ಒಂದು ಎಂಜಿನಿಯರಿಂಗ್ ಅದ್ಭುತವಾಗಿದೆ. ಈ ಯೋಜನೆಯು 55 ಪ್ರಮುಖ ಸೇತುವೆಗಳು, 88 ಸಣ್ಣ ಸೇತುವೆಗಳು ಮತ್ತು 10 ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳು ಸೇರಿದಂತೆ ಒಟ್ಟು 153 ಸೇತುವೆಗಳನ್ನು ಒಳಗೊಂಡಿದೆ. 6 ಸೇತುವೆಗಳು 70 ಮೀಟರ್ಗಿಂತ ಹೆಚ್ಚು ಎತ್ತರವಿದ್ದು, ಅತ್ಯಂತ ಎತ್ತರದ ಸೇತುವೆಯು 114 ಮೀಟರ್ ಗಳವರೆಗೆ ಎತ್ತರದಲ್ಲಿದೆ, ಇದು ದೆಹಲಿಯ ಕುತುಬ್ ಮಿನಾರಿಗಿಂತ 42 ಮೀಟರ್ ಹೆಚ್ಚು ಎತ್ತರವಾಗಿದೆ. ಈ ಮಾರ್ಗವು ಸುಮಾರು 16 ಕಿಲೋಮೀಟರ್ ಗಳಷ್ಟು ಉದ್ದದ 45 ಸುರಂಗಗಳ ಮೂಲಕವೂ ಹಾದುಹೋಗುತ್ತದೆ. ಈ ರೈಲ್ವೆ ಮಾರ್ಗವು ಬೈರಾಬಿಯಿಂದ ರಾಷ್ಟ್ರೀಯ ರೈಲ್ವೆ ಜಾಲವನ್ನು ಹೊಸದಾಗಿ ಅಭಿವೃದ್ಧಿಪಡಿಸಲಾದ ಹೋರ್ಟೋಕಿ, ಕಾವ್ನ್ಪುಯಿ, ಮುಯಾಲ್ಖಾಂಗ್ ಮತ್ತು ಸೈರಂಗ್ ರೈಲ್ವೆ ನಿಲ್ದಾಣಗಳೊಂದಿಗೆ ಸಂಪರ್ಕಿಸುತ್ತದೆ. ಆ ಮೂಲಕ ಮಿಜೋರಾಂನ ರಾಜಧಾನಿ ಐಜ್ವಾಲ್ ನ ಪ್ರವೇಶದವರೆಗೂ ರೈಲು ಸಂಪರ್ಕವನ್ನು ತಲುಪಿಸಿದೆ.
ಹೀಗಾಗಿ, 13 ಸೆಪ್ಟೆಂಬರ್ 2025 ರಂದು ಬೈರಾಬಿ-ಸೈರಂಗ್ ರೈಲು ಮಾರ್ಗದ ಉದ್ಘಾಟನೆಯು ಮಿಜೋರಾಂ ಜನರ ದೀರ್ಘಕಾಲದ ಕನಸನ್ನು ನನಸು ಮಾಡಿತು. ರಾಜ್ಯದ ಅತಿ ದೊಡ್ಡ ಜನಸಂಖ್ಯೆ, ಆಡಳಿತ, ಶಿಕ್ಷಣ ಮತ್ತು ವಾಣಿಜ್ಯ ಕೇಂದ್ರಕ್ಕೆ ಹತ್ತಿರದಲ್ಲಿಯೇ ವಿಶ್ವಾಸಾರ್ಹ ರೈಲು, ಪ್ರಯಾಣಿಕ ಮತ್ತು ಸರಕು ಸೇವೆಗಳನ್ನು ಒದಗಿಸಿತು.

(ಸೈರಾಂಗ್ ನಿಲ್ದಾಣವು ರಾಷ್ಟ್ರೀಯ ರೈಲು ಜಾಲಕ್ಕೆ ಮಿಜೋರಾಂನ ಹೊಸ ಪ್ರಯಾಣಿಕ ಮತ್ತು ಸರಕು ಸಾಗಣೆ ಪ್ರವೇಶದ್ವಾರವಾಯಿತು)
ಪ್ರಯಾಣಿಕರ ಸಂಚಾರ: ವಿಶ್ವಾಸದ ಕಥೆ ಹೇಳುವ ಅಂಕಿ ಅಂಶಗಳು
ಮೂರು ಪ್ರಮುಖ ದೀರ್ಘದೂರದ ರೈಲು ಸೇವೆಗಳು ಈಗ ಮಿಜೋರಾಂನ ರಾಜಧಾನಿಯನ್ನು ಗುವಾಹಾಟಿ, ಕೋಲ್ಕತ್ತಾ ಮತ್ತು ದೆಹಲಿ ನಗರಗಳೊಂದಿಗೆ ಸಂಪರ್ಕಿಸುತ್ತವೆ. ಸೈರಂಗ್-ಆನಂದ್ ವಿಹಾರ್ ರಾಜಧಾನಿ ಎಕ್ಸ್ಪ್ರೆಸ್ ಮಿಜೋರಾಂಗೆ ದೇಶದ ರಾಜಧಾನಿಯೊಂದಿಗೆ ಮೊದಲ ನೇರ ಪ್ರೀಮಿಯಂ ರೈಲು ಸಂಪರ್ಕವನ್ನು ನೀಡಿದರೆ, ಗುವಾಹಾಟಿ ಮತ್ತು ಕೋಲ್ಕತ್ತಾ ಸೇವೆಗಳು ದೇಶದ ಪೂರ್ವ ಮತ್ತು ಉತ್ತರ ಭಾಗಗಳ ಪ್ರಮುಖ ಶೈಕ್ಷಣಿಕ, ವಾಣಿಜ್ಯ ಮತ್ತು ವೈದ್ಯಕೀಯ ಕೇಂದ್ರಗಳೊಂದಿಗೆ ವಿಶ್ವಾಸಾರ್ಹ ಸಂಪರ್ಕವನ್ನು ಸೃಷ್ಟಿಸಿವೆ. ಜೊತೆಗೆ, ಗೌರವಾನ್ವಿತ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಜನವರಿ 2026 ರಲ್ಲಿ ಉದ್ಘಾಟಿಸಿದ ಸೈರಂಗ್ - ಸಿಲ್ಚಾರ್ ಪ್ರಯಾಣಿಕ ರೈಲು ಸೇವೆಯು ಸೈರಂಗ್ ಅನ್ನು ಅಸ್ಸಾಂನ ಬರಾಕ್ ಕಣಿವೆಯೊಂದಿಗೆ ಸಂಪರ್ಕಿಸುವ ನಿಯಮಿತ ಮತ್ತು ವಿಶ್ವಾಸಾರ್ಹ ಪ್ರಯಾಣಿಕ ರೈಲು ಸೇವೆಯನ್ನು ಒದಗಿಸಿತು.
ಕಳೆದ ಒಂದು ವರ್ಷದಲ್ಲಿ, ಈ ರೈಲು ಸೇವೆಗಳು 1100 ಕ್ಕೂ ಹೆಚ್ಚು ಪ್ರಯಾಣಗಳನ್ನು ಪೂರ್ಣಗೊಳಿಸಿದ್ದು, ಮಿಜೋರಾಂ ಜನರ ಜೀವನದ ಅವಿಭಾಜ್ಯ ಅಂಗವಾಗಿವೆ. 15 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಇದರ ಪ್ರಯೋಜನ ಪಡೆದಿದ್ದು, ಈ ರೈಲು ಸೇವೆಗಳಿಗೆ ಪ್ರಯಾಣಿಕರ ಬೇಡಿಕೆಯು ನಿರಂತರವಾಗಿ ಅತ್ಯಧಿಕವಾಗಿದ್ದು, ಪ್ರತಿ ಪ್ರಯಾಣದಲ್ಲೂ 100% ಕ್ಕಿಂತ ಹೆಚ್ಚು ಸಾಮರ್ಥ್ಯದೊಂದಿಗೆ ಸಂಚರಿಸುತ್ತಿವೆ.
ಸೈರಾಂಗ್ ನಿಂದ ಕೋಲ್ಕತ್ತಾಗೆ ವಾರಕ್ಕೆ ಮೂರು ಬಾರಿ ಸಂಚರಿಸುವ ರೈಲು 140% ಕ್ಕಿಂತ ಹೆಚ್ಚು ಸರಾಸರಿ ಶೇಕಡಾವಾರು ಪ್ರಯಾಣಿಕರನ್ನು ದಾಖಲಿಸಿದ್ದರೆ, ಸೈರಾಂಗ್ ನಿಂದ ಗುವಾಹಾಟಿಗೆ ದಿನನಿತ್ಯ ಸಂಚರಿಸುವ ರೈಲಿನ ಪ್ರಯಾಣಿಕರ ಪ್ರಮಾಣ 110% ಕ್ಕಿಂತ ಹೆಚ್ಚಿದೆ. ಸೈರಂಗ್-ಆನಂದ್ ವಿಹಾರ್ ರಾಜಧಾನಿ ಎಕ್ಸ್ಪ್ರೆಸ್ 145% ಕ್ಕಿಂತ ಹೆಚ್ಚು ಸರಾಸರಿ ಪ್ರಯಾಣಿಕರ ಪ್ರಮಾಣವನ್ನು ಸಾಧಿಸಿದೆ. ಈ ರೈಲು ಸೇವೆಗಳು ಭಾರತೀಯ ರೈಲ್ವೆಗೆ ಒಟ್ಟು 54 ಕೋಟಿ ರೂಪಾಯಿಗಳ ಟಿಕೆಟ್ ಮಾರಾಟದ ಆದಾಯವನ್ನು ಸಹ ತಂದುಕೊಟ್ಟಿವೆ.
ಈ ಕಳೆದ ಒಂದು ವರ್ಷದಲ್ಲಿ, ಸೈರಂಗ್ ರೈಲ್ವೆ ನಿಲ್ದಾಣವು 5.54 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಸಂಚಾರವನ್ನು ಯಶಸ್ವಿಯಾಗಿ ನಿರ್ವಹಿಸಿದೆ, ಪ್ರತಿದಿನ ಸರಾಸರಿ 3300 ಪ್ರಯಾಣಿಕರು ನಿಲ್ದಾಣಕ್ಕೆ ಭೇಟಿ ನೀಡುತ್ತಿದ್ದಾರೆ. ಈ ರೈಲ್ವೆ ನಿಲ್ದಾಣವು ಪ್ರಯಾಣದ ಪ್ರಮುಖ ಕೇಂದ್ರವಾಗಿ ಮಾತ್ರವಲ್ಲದೆ, ಸ್ಥಳೀಯ ನಿವಾಸಿಗಳು ನಿಲ್ದಾಣದ ಆವರಣದ ಸುತ್ತಲೂ ಮರ ನೆಡುವಿಕೆ ಮತ್ತು ಇತರ ಪರಿಸರ ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಸುತ್ತಮುತ್ತಲಿನ ಪ್ರದೇಶದ ಸಮುದಾಯ ಜೀವನದ ಅವಿಭಾಜ್ಯ ಭಾಗವಾಗಿಯೂ ಹೊರಹೊಮ್ಮಿದೆ.

ಸರಕು ಸಾಗಣೆ ಪರಿವರ್ತನೆ: ಐಜ್ವಾಲ್ ಗೆ ರೈಲಿನ ಮೂಲಕ ಸರಕು ಸಾಗಣೆ
ಬೈರಾಬಿ-ಸೈರಂಗ್ ರೈಲು ಮಾರ್ಗವು ಮಿಜೋರಾಂನಲ್ಲಿ ಸರಕು ರವಾನೆಯಲ್ಲೂ ದೊಡ್ಡ ಬದಲಾವಣೆಯನ್ನು ತಂದಿದೆ. ಅಗತ್ಯ ವಸ್ತುಗಳು, ಆಟೋಮೊಬೈಲ್ ಮತ್ತು ನಿರ್ಮಾಣ ಸಾಮಗ್ರಿಗಳು ಐಜ್ವಾಲ್ ಅನ್ನು ಸುರಕ್ಷಿತವಾಗಿ, ಸಮಯಕ್ಕೆ ಸರಿಯಾಗಿ ಮತ್ತು ಕಡಿಮೆ ವೆಚ್ಚದಲ್ಲಿ ತಲುಪಲು ಸಾಧ್ಯವಾಗಿದೆ.
ಹೊಸ ರೈಲು ಮಾರ್ಗದ ಉದ್ಘಾಟನೆಯಾದ ಮರುದಿನವೇ, ಅಂದರೆ 14 ಸೆಪ್ಟೆಂಬರ್ 2025 ರಂದು ಮೊದಲ ರೈಲು ಸರಕು ಗುವಾಹಾಟಿ ಬಳಿಯ ಟೆಟೆಲಿಯಾದಲ್ಲಿರುವ ಸ್ಟಾರ್ ಸಿಮೆಂಟ್ ಸಿಡಿಂಗ್ ನಿಂದ 26,000 ಕ್ಕೂ ಹೆಚ್ಚು ಸಿಮೆಂಟ್ ಚೀಲಗಳನ್ನು ಹೊತ್ತು ಸೈರಂಗ್ ತಲುಪಿತು. ಈ ಸರಕು ರೈಲು ಐಜ್ವಾಲ್ ನಲ್ಲಿ ಸಿಮೆಂಟ್ ಬೆಲೆಗಳ ಮೇಲೆ ತಕ್ಷಣದ ಪರಿಣಾಮ ಬೀರಿತು. ಇದು ರೈಲ್ವೆಯು ಸಾಗಾಣಿಕೆ ವೆಚ್ಚವನ್ನು ಹೇಗೆ ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಇಡೀ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ತೋರಿಸಿಕೊಟ್ಟಿತು. ಇದಲ್ಲದೆ, ನೇರ ಸರಕು ರೈಲು ಸೇವೆಗಳು ವಾಹನಗಳ ಸಾಗಣೆಯಲ್ಲಿನ ಅಂತರವನ್ನು ಕಡಿಮೆ ಮಾಡಿವೆ, ಇದರಿಂದಾಗಿ ವಾಹನಗಳ ಅಂತಿಮ ವೆಚ್ಚ (ಲ್ಯಾಂಡಿಂಗ್ ಕಾಸ್ಟ್) ಕಡಿಮೆಯಾಗಿ, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಿವೆ. ಮತ್ತೊಂದು ಮೈಲಿಗಲ್ಲಾಗಿ, ಡಿಸೆಂಬರ್ 2025 ರಲ್ಲಿ ಗುವಾಹಾಟಿ ಬಳಿಯ ಚಾಂಗ್ಸಾರಿಯಿಂದ 119 ಮಾರುತಿ ಕಾರುಗಳನ್ನು ಒಳಗೊಂಡ ಮೊದಲ ಆಟೋಮೊಬೈಲ್ ರೇಕ್ ರೈಲಿನ ಮೂಲಕ ಸೈರಂಗ್ ತಲುಪಿತು. ಇದು ಈ ಪ್ರದೇಶದಲ್ಲಿ ವಾಹನ ಸಾಗಣೆ ವ್ಯವಸ್ಥೆಯನ್ನೇ ಬದಲಾಯಿಸಿತು.
ಕಳೆದ ಒಂದು ವರ್ಷದಲ್ಲಿ, 2500 ಕ್ಕೂ ಹೆಚ್ಚು ವ್ಯಾಗನ್ ಗಳ ರೈಲ್ವೆ ಸರಕನ್ನು ಸೈರಾಂಗ್ ಗೆ ತಲುಪಿಸಲಾಗಿದೆ. ಇದರಲ್ಲಿ 70% ರಷ್ಟು ಸರಕು ಸಿಮೆಂಟ್, ಕಲ್ಲು ಮತ್ತು ಮರಳಿನಂತಹ ನಿರ್ಮಾಣ ಸಾಮಗ್ರಿಗಳಿಂದ ಕೂಡಿತ್ತು. ಈ ಸಾಮಗ್ರಿಗಳು ಮಿಜೋರಾಂನಲ್ಲಿ ವಸತಿ ಮತ್ತು ಸಾರ್ವಜನಿಕ ಕಾಮಗಾರಿಗಳಿಗೆ ಬೆಂಬಲ ನೀಡಿ, ಕಡಿಮೆ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸಿವೆ.
ಸೈರಾಂಗ್ನಲ್ಲಿ ನಿರ್ವಹಿಸಲಾದ ಇತರ ರೈಲು ಸರಕುಗಳಲ್ಲಿ ಅಕ್ಕಿ ಮತ್ತು ರಸಗೊಬ್ಬರಗಳು ಸೇರಿದಂತೆ ಅಗತ್ಯ ವಸ್ತುಗಳು ಹಾಗೂ ವಾಹನಗಳನ್ನೊಳಗೊಂಡ 156 ವ್ಯಾಗನ್ ಗಳು ಸೇರಿವೆ. ಆಟೋಮೊಬೈಲ್ ರೇಕ್ ಗಳು ವಾಹನಗಳಿಗೆ ಸುರಕ್ಷಿತ ಪೂರೈಕೆ ಮಾರ್ಗವನ್ನು ನಿರ್ಮಿಸಿದರೆ, ರಸಗೊಬ್ಬರ ಮತ್ತು ಆಹಾರ ಧಾನ್ಯಗಳು ಕೃಷಿ ಮತ್ತು ಸ್ಥಳೀಯ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ನೆರವಾಗಿವೆ.

(ಮೊದಲ ಸಿಮೆಂಟ್ ಸರಕು ರೈಲು ಸೈರಾಂಗ್ ಅನ್ನು ಸರಕು ನಿರ್ವಹಣಾ ಕೇಂದ್ರವನ್ನಾಗಿ ಸ್ಥಾಪಿಸಿತು)

(ಮಿಜೋರಾಂನಲ್ಲಿ ನಿರ್ವಹಿಸಲಾದ ಮೊದಲ ವಾಹನ ಸರಕು ರೈಲು)
ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ರೈಲ್ವೆ ಉತ್ತೇಜನ
ದೆಹಲಿ, ಕೋಲ್ಕತ್ತಾ, ಗುವಾಹಾಟಿ ಮತ್ತು ಸಿಲ್ಚಾರ್ ನಿಂದ ನೇರ ರೈಲುಗಳು ದೇಶೀಯ ಪ್ರವಾಸಿಗರು ಮಿಜೋರಾಂ ತಲುಪುವುದನ್ನು ಸುಲಭಗೊಳಿಸಿವೆ. ಈ ಮೊದಲು ವಿಮಾನ ಅಥವಾ ಸುದೀರ್ಘ ರಸ್ತೆ ಪ್ರಯಾಣವನ್ನೇ ಸಂಪೂರ್ಣವಾಗಿ ಅವಲಂಬಿಸಬೇಕಾಗಿದ್ದ ಪ್ರವಾಸಿಗರಿಗೆ ರೈಲ್ವೆ ಕೈಗೆಟುಕುವ ದರದ ಆಯ್ಕೆಯನ್ನು ನೀಡಿದೆ. ಪರಿಣಾಮವಾಗಿ, ರೈಲು ಸೇವೆ ಆರಂಭವಾದಾಗಿನಿಂದ ಮಿಜೋರಾಂನಲ್ಲಿ ಪ್ರವಾಸೋದ್ಯಮವು 86% ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಕಂಡಿದೆ.
ಇದರ ಪ್ರಯೋಜನಗಳು ಕೇವಲ ಪ್ರಯಾಣಿಕ ಟಿಕೆಟ್ಗಳಿಗೆ ಮಾತ್ರ ಸೀಮಿತವಾಗಿಲ್ಲ. ಹೆಚ್ಚಿನ ಪ್ರವಾಸಿಗರ ಸಂಚಾರವು ಹೋಟೆಲ್ ಗಳು, ಹೋಮ್ ಸ್ಟೇಗಳು, ಉಪಹಾರ ಗೃಹಗಳು, ಟ್ಯಾಕ್ಸಿಗಳು, ಮಾರ್ಗದರ್ಶಿಗಳು, ಸಾಂಸ್ಕೃತಿಕ ಉದ್ಯಮಗಳು ಮತ್ತು ಸ್ಥಳೀಯ ಮಾರುಕಟ್ಟೆಗಳಿಗೆ ಬೆಂಬಲ ನೀಡುತ್ತಿದೆ. ವಿಶ್ವಾಸಾರ್ಹ ರೈಲು ಸಂಪರ್ಕವು ರಾಷ್ಟ್ರೀಯ ಮಟ್ಟದ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಅಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸುವ ಮಿಜೋರಾಂನ ಸಾಮರ್ಥ್ಯವನ್ನು ಬಲಪಡಿಸುತ್ತಿದೆ. ಮಿಜೋರಾಂನ ವಿದ್ಯಾರ್ಥಿಗಳಿಗೆ ರೈಲ್ವೆ ಸಂಪರ್ಕವು ರಾಜ್ಯದ ಹೊರಗಿನ ವಿಶ್ವವಿದ್ಯಾನಿಲಯಗಳು, ವೃತ್ತಿಪರ ಸಂಸ್ಥೆಗಳು, ತರಬೇತಿ ಕೇಂದ್ರಗಳು, ಪರೀಕ್ಷೆಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸುಲಭ ಪ್ರವೇಶವನ್ನು ನೀಡಿದೆ.
ಸ್ಥಳೀಯ ಉದ್ಯಮ: ಮಿಜೋ ಕೈಗಳಿಂದ ರಾಷ್ಟ್ರೀಯ ಮಾರುಕಟ್ಟೆಗೆ
ಮಿಜೋರಾಂನ ಕೈಮಗ್ಗ, ಬಿದಿರು, ಬೆತ್ತ ಮತ್ತು ಕರಕುಶಲ ಪರಂಪರೆಯನ್ನು ವಿಶಾಲ ಮಾರುಕಟ್ಟೆಗಳಲ್ಲಿ ಜನಪ್ರಿಯಗೊಳಿಸುವಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸುತ್ತಿದೆ. ಸೈರಾಂಗ್ ನಿಂದ ಮೊದಲ ಪಾರ್ಸಲ್ ರವಾನೆಯು 19 ಸೆಪ್ಟೆಂಬರ್ 2025 ರಂದು ಕಾಯ್ದಿರಿಸಲ್ಪಟ್ಟಿತು. ಅದು ಸೈರಾಂಗ್ -ಆನಂದ್ ವಿಹಾರ್ ರಾಜಧಾನಿ ಎಕ್ಸ್ ಪ್ರೆಸ್ ನ ಪಾರ್ಸಲ್ ವ್ಯಾನ್ ಮೂಲಕ ದೆಹಲಿಗೆ ಆಂಥೂರಿಯಂ ಹೂವುಗಳನ್ನು ಒಯ್ದಿತು. ಆ ಸಣ್ಣ ರವಾನೆಯು ದೊಡ್ಡ ಸಂದೇಶವನ್ನು ಸಾರಿತು: ಹೆಚ್ಚಿನ ಮೌಲ್ಯದ ಸ್ಥಳೀಯ ಉತ್ಪನ್ನಗಳು ತಮ್ಮ ದೇಶದೊಳಗಿನ ಪಯಣವನ್ನು ಮಿಜೋರಾಂನಿಂದಲೇ ಪ್ರಾರಂಭಿಸಬಹುದು.

(ಆಂಥೂರಿಯಂ ಹೂವುಗಳ ಮೊದಲ ಪಾರ್ಸೆಲ್ ಸಾಗಣೆಯನ್ನು ಸೈರಾಂಗ್ನಿಂದ ದೆಹಲಿಗೆ ಕಾದಿರಿಸಲಾಯಿತು)

(ಪಾರ್ಸೆಲ್ ಸೌಲಭ್ಯವು ಸೂಕ್ಷ್ಮ ಮತ್ತು ಸಮಯಕ್ಕೆ ಸರಿಯಾಗಿ ತಲುಪಬೇಕಾದ ಸೂಕ್ಷ್ಮ ಸ್ಥಳೀಯ ಉತ್ಪನ್ನಗಳಿಗೆ ನೇರ ಮಾರ್ಗವನ್ನು ಸೃಷ್ಟಿಸಿತು)
ಒಂದು ವರ್ಷ ಮತ್ತು ಭವಿಷ್ಯದ ಹಾದಿ: ಪ್ರತ್ಯೇಕತೆಯಿಂದ ಹೊಸ ಸಾಧ್ಯತೆಗಳತ್ತ
ಒಂದು ವರ್ಷದಲ್ಲಿ, ಬೈರಾಬಿ-ಸೈರಾಂಗ್ ರೈಲು ಮಾರ್ಗವು ದೃಷ್ಟಿಕೋನವನ್ನು ಯಶಸ್ವಿಯಾಗಿ ವಾಸ್ತವವಾಗಿ ಪರಿವರ್ತಿಸಿದ ದೂರಗಾಮಿ ಪರಿಣಾಮಗಳನ್ನು ಪ್ರದರ್ಶಿಸಿದೆ. ಪ್ರಯಾಣಿಕರಿಗೆ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಒದಗಿದೆ; ವಿದ್ಯಾರ್ಥಿಗಳಿಗೆ ಸಂಸ್ಥೆಗಳು ಮತ್ತು ಪರೀಕ್ಷೆಗಳಿಗೆ ಉತ್ತಮ ಮಾರ್ಗವಿದೆ; ಪ್ರವಾಸಿಗರಿಗೆ ಕೈಗೆಟುಕುವ ದರದ ಪ್ರಯಾಣದ ಅವಕಾಶವಿದೆ; ವರ್ತಕರಿಗೆ ಮಾರುಕಟ್ಟೆಗೆ ಹತ್ತಿರದಲ್ಲೇ ಸರಕು ದೊರೆಯುತ್ತಿದೆ; ನಿರ್ಮಾಣ ಮತ್ತು ಆಹಾರ ಪೂರೈಕೆ ಸುಲಭವಾಗಿದೆ; ಮತ್ತು ಹೂವುಗಳು, ಕರಕುಶಲ ವಸ್ತುಗಳು ಹಾಗೂ ಇತರ ಸ್ಥಳೀಯ ಉತ್ಪನ್ನಗಳು ದೇಶದ ಗ್ರಾಹಕರನ್ನು ತಲುಪುವ ಹಾದಿಯನ್ನು ಪಡೆದುಕೊಂಡಿವೆ.
ಸೈರಾಂಗ್ ನ ಯೋಜನೆಯ ಪ್ರಾಮುಖ್ಯತೆಯು ಅದು ಸಾಧ್ಯವಾಗಿಸಿದ ಸಾಧನೆ ಳಲ್ಲಿದೆ. ಕಠಿಣವಾದ ಬೆಟ್ಟಗುಡ್ಡಗಳ ನಡುವೆ ನಿರ್ಮಿಸಲಾದ ರೈಲು ಮಾರ್ಗವು ಅಂತರವನ್ನು ಕಡಿಮೆ ಮಾಡಿದೆ, ಆಯ್ಕೆಗಳನ್ನು ವಿಸ್ತರಿಸಿದೆ ಮತ್ತು ಮಿಜೋರಾಂಗೆ ಹೊಸ ಸಾಗಾಣಿಕೆಯ ಮೈಲುಗಲ್ಲನ್ನು ನೀಡಿದೆ. ಇದು ಸಂಚಾರವನ್ನು ಗೌರವದೊಂದಿಗೆ, ಮೂಲಸೌಕರ್ಯವನ್ನು ಉದ್ಯಮಶೀಲತೆಯೊಂದಿಗೆ ಮತ್ತು ಸಂಪರ್ಕವನ್ನು ಅವಕಾಶಗಳೊಂದಿಗೆ ಬೆಸೆದಿದೆ.

(ಸೈರಾಂಗ್-ಆನಂದ್ ವಿಹಾರ್ ಟರ್ಮಿನಲ್ ರಾಜಧಾನಿ ಎಕ್ಸ್ ಪ್ರೆಸ್ ಮಿಜೋರಾಂಗೆ ರಾಷ್ಟ್ರೀಯ ರಾಜಧಾನಿಯೊಂದಿಗೆ ನೇರ ಮತ್ತು ಅತ್ಯುತ್ತಮ ಸಂಪರ್ಕವನ್ನು ಒದಗಿಸಿತು)

(ಸೈರಾಂಗ್ ರೈಲ್ವೆ ಸೇತುವೆಯು 114 ಮೀ ಎತ್ತರದ ಪಿಯರ್ ಅನ್ನು ಹೊಂದಿದೆ, ಇದು ದೆಹಲಿಯ ಕುತುಬ್ ಮಿನಾರ್‌ಗಿಂತ 42 ಮೀ ಎತ್ತರವಾಗಿದೆ)
*****
(ಪ್ರಕಟಣೆ ಐ.ಡಿ.: 2309710)
ವಿಸಿಟರ್ ಕೌಂಟರ್ : 8