ಭೂವಿಜ್ಞಾನ ಸಚಿವಾಲಯ
azadi ka amrit mahotsav

ಭಾರತದ ಕರಾವಳಿಯನ್ನು ಪರಿಸರ, ಭದ್ರತೆ, ಅರ್ಥವ್ಯವಸ್ಥೆ, ತಂತ್ರಜ್ಞಾನ ಮತ್ತು ಮಾನವ ಅಭಿವೃದ್ಧಿಯ ಸಂಯೋಜಿತ ಕ್ಷೇತ್ರವಾಗಿ ನೋಡಬೇಕು: ಡಾ. ಜಿತೇಂದ್ರ ಸಿಂಗ್


ಕರಾವಳಿ ಪರಿಸರ ಮತ್ತು ಭದ್ರತೆಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ; ಸಮಗ್ರ ಕರಾವಳಿ ಭಾರತದ ವಿಧಾನದ ಅಗತ್ಯವಿದೆ: ಡಾ. ಜಿತೇಂದ್ರ ಸಿಂಗ್

ಭಾರತದ 11,000–12,000 ಕಿ.ಮೀ. ಉದ್ದದ ಕರಾವಳಿಯು ಸಾಗರ ಸಂಪನ್ಮೂಲಗಳು ಮತ್ತು 'ಬ್ಲೂ ಎಕಾನಮಿ'ಗೆ (ನೀಲಿ ಅರ್ಥವ್ಯವಸ್ಥೆ) ಅಪಾರ ಸಾಧ್ಯತೆಗಳನ್ನು ನೀಡುತ್ತದೆ

ಸಾಗರ ವೀಕ್ಷಣೆ, ಕಣ್ಗಾವಲು, ಸಂಪರ್ಕ, ದೂರಸಂವೇದಿ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಕರಾವಳಿ ಭದ್ರತೆಯನ್ನು ಬಲಪಡಿಸಬಲ್ಲವು

ಆಳ ಸಾಗರ ಮಿಷನ್ ಮತ್ತು ಸ್ವದೇಶಿ ತಂತ್ರಜ್ಞಾನಗಳು ಸಾಗರ ಸಂಪನ್ಮೂಲಗಳ ಸಂಶೋಧನೆಗೆ ಹೊಸ ದಿಗಂತಗಳನ್ನು ತೆರೆಯುತ್ತಿವೆ: ಡಾ. ಜಿತೇಂದ್ರ ಸಿಂಗ್

ಪ್ರಕಟಣಾ ದಿನಾಂಕ: 11 SEP 2026 3:49PM by PIB Bengaluru

'ಕರಾವಳಿ ಪರಿಸರ, ಭದ್ರತೆ ಮತ್ತು ಸುಸ್ಥಿರತೆ' (CCESS) 2026ರ ರಾಷ್ಟ್ರೀಯ ಸಮ್ಮೇಳನವನ್ನು ಇಂದು ವರ್ಚುವಲ್ ಆಗಿ ಉದ್ದೇಶಿಸಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಸಹಾಯಕ ಸಚಿವರಾದ (ಸ್ವತಂತ್ರ ಪ್ರಭಾರ) ಹಾಗೂ ಪ್ರಧಾನಮಂತ್ರಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಸಹಾಯಕ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು, ಭಾರತದ ಕರಾವಳಿಯನ್ನು ಪರಿಸರ, ಭದ್ರತೆ, ಅರ್ಥವ್ಯವಸ್ಥೆ, ತಂತ್ರಜ್ಞಾನ ಮತ್ತು ಮಾನವ ಅಭಿವೃದ್ಧಿಯ ಪರಸ್ಪರ ಜೋಡಿಸಲ್ಪಟ್ಟ ಕ್ಷೇತ್ರವಾಗಿ ನೋಡಬೇಕು ಎಂದು ಹೇಳಿದರು. ಭಾರತದ 11,000–12,000 ಕಿಮೀ ಉದ್ದದ ಕರಾವಳಿಯು ಸಾಗರ ಸಂಪನ್ಮೂಲಗಳು ಮತ್ತು "ಬ್ಲೂ ಎಕಾನಮಿ"ಗೆ ಅಪಾರ ಸಾಧ್ಯತೆಗಳನ್ನು ನೀಡುತ್ತದೆ ಎಂದು ಕೂಡ ಅವರು ತಿಳಿಸಿದರು.

ದೇಶದ ಸುದೀರ್ಘ ಕರಾವಳಿ ಮತ್ತು ವ್ಯಾಪಕ ಸಾಗರ ಪರಿಸರ ವ್ಯವಸ್ಥೆಯು ಗಮನಾರ್ಹ ಅವಕಾಶಗಳನ್ನು ಒದಗಿಸುತ್ತದೆ, ಜೊತೆಗೆ ವೈಜ್ಞಾನಿಕ ಜ್ಞಾನ, ಪಾರಿಸರಿಕ ಸುಸ್ಥಿರತೆ, ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಸಂಯೋಜಿಸುವ ಸಮಗ್ರ ವಿಧಾನವನ್ನು ಬಯಸುತ್ತದೆ ಎಂದು ಸಚಿವರು ಹೇಳಿದರು.

ಭಾರತವು ವಿಶ್ವದಲ್ಲೇ ಅತ್ಯಂತ ಉದ್ದವಾದ 11,000–12,000 ಕಿ.ಮೀ. ಉದ್ದದ ಕರಾವಳಿ ಪ್ರದೇಶವನ್ನು ಹೊಂದಿದೆ ಎಂದು ಹೇಳಿದ ಡಾ. ಜಿತೇಂದ್ರ ಸಿಂಗ್, ದೇಶದ ಭವಿಷ್ಯದ ಅಭಿವೃದ್ಧಿಯಲ್ಲಿ ಸಾಗರ ಮತ್ತು ಕರಾವಳಿ ಪ್ರದೇಶಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಸಾಗರದೊಂದಿಗಿನ ಭಾರತದ ಐತಿಹಾಸಿಕ ಬಾಂಧವ್ಯವು ನಮ್ಮ ಪೂರ್ವಜರು ಹೊಂದಿದ್ದ ಸಾಗರ ಪರಿಸರದ ಜ್ಞಾನ ಮತ್ತು ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

'ಆಳ ಸಾಗರ ಮಿಷನ್'ನ (Deep Ocean Mission) ಮಹತ್ವವನ್ನು ಉಲ್ಲೇಖಿಸಿದ ಸಚಿವರು, ಭಾರತವು ಹೆಚ್ಚಿನ ಮಟ್ಟದಲ್ಲಿ ಅನ್ವೇಷಿಸಲ್ಪಡದ ಆಳವಾದ ಸಾಗರದ ಸಂಪನ್ಮೂಲಗಳನ್ನು ಶೋಧಿಸುವತ್ತ ಸಾಗುತ್ತಿದೆ, ಅದೇ ಸಮಯದಲ್ಲಿ ಸ್ವದೇಶಿ ಸಾಮರ್ಥ್ಯಗಳನ್ನು ನಿರ್ಮಿಸುತ್ತಿದೆ ಎಂದು ಹೇಳಿದರು. ಸಂಪೂರ್ಣ ಸ್ವದೇಶಿ ಸಂಶೋಧನಾ ನೌಕೆಯಾದ 'ಒಆರ್‌ವಿ ಸಾಗರ್ ಮಂಥನ್' ಅನ್ನು ಇತ್ತೀಚೆಗೆ ಪ್ರಾರಂಭಿಸಲಾಗಿದ್ದು, ಇದು ಆಳ ಸಾಗರ ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ಸ್ವಾವಲಂಬನೆಯತ್ತ ಕೈಗೊಂಡ ಶ್ರಮವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಸಾಗರದ ಆಳವನ್ನು ಅನ್ವೇಷಿಸಲು ರೋಬೋಟ್‌ಗಳು ಮತ್ತು ಸಬ್‌ಮರ್ಸಿಬಲ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಆಳ ಸಮುದ್ರದ ಅನ್ವೇಷಣೆಗಾಗಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಉಲ್ಲೇಖಿಸಿದ ಅವರು, ಈ ಕ್ಷೇತ್ರದಲ್ಲಿ ದೇಶ ಸಾಧಿಸುವ ಪ್ರಗತಿಯು ಸಾಗರ ಸಂಪನ್ಮೂಲಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಬಳಸಿಕೊಳ್ಳಲು ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ ಎಂದು ಹೇಳಿದರು.

ಆಳ ಸಾಗರ ಅನ್ವೇಷಣೆಯನ್ನು ಭಾರತದ ಉದಯೋನ್ಮುಖ ಆರ್ಥಿಕ ಅವಕಾಶಗಳೊಂದಿಗೆ ಜೋಡಿಸಿದ ಸಚಿವರು, ದೇಶವು ತನ್ನ ಅರ್ಥವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಾದರೆ, ಇದುವರೆಗೆ ಸಂಪೂರ್ಣವಾಗಿ ಶೋಧಿಸದ ಸಂಪನ್ಮೂಲಗಳತ್ತ ಗಮನ ಹರಿಸಬೇಕಾಗುತ್ತದೆ ಎಂದರು. ಲೋಹಗಳು, ಖನಿಜಗಳು ಮತ್ತು ಮೀನುಗಾರಿಕೆ ಸೇರಿದಂತೆ ಸಾಗರ ಮತ್ತು ಕರಾವಳಿ ಸಂಪನ್ಮೂಲಗಳನ್ನು ಅಪಾರ ಸಾಮರ್ಥ್ಯವಿರುವ ಕ್ಷೇತ್ರಗಳೆಂದು ಎಂದು ಹೇಳಿದರು.

ಪಾರಿಸರಿಕ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಸಾಗರ ಸಂಪನ್ಮೂಲಗಳ ಸಾಮರ್ಥ್ಯವನ್ನು ಡಾ. ಜಿತೇಂದ್ರ ಸಿಂಗ್ ಉಲ್ಲೇಖಿಸಿದರು. ಬ್ಲ್ಯಾಕ್ ಸಲ್ಫೈಟ್ ಮತ್ತು ಖನಿಜಗಳ ಮೇಲಿನ ಸಂಶೋಧನೆಯನ್ನು ಉಲ್ಲೇಖಿಸಿದ ಅವರು, ಭವಿಷ್ಯದಲ್ಲಿ ಸಾಗರ ಖನಿಜಗಳನ್ನು ಹೊರತೆಗೆಯುವ ಸಾಧ್ಯತೆಯು ಅನ್ವೇಷಿಸಲಾಗುತ್ತಿರುವ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ ಎಂದರು. ಮೀನುಗಾರಿಕೆಯ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದ ಕೆಲಸಗಳ ಬಗ್ಗೆಯೂ ಅವರು ಹೇಳಿದರು .

ಕರಾವಳಿ ಸಮುದಾಯಗಳು ವಿಶಾಲವಾದ ಕರಾವಳಿ ಪರಿಸರ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿವೆ ಎಂದು ಸಚಿವರು ಒತ್ತಿಹೇಳಿದರು. ಕರಾವಳಿ ಸಂಪನ್ಮೂಲಗಳ ಆರ್ಥಿಕ ಸಾಮರ್ಥ್ಯವನ್ನು ವಿಸ್ತರಿಸುವ ಶ್ರಮವು ಪರಿಸರ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಕರಾವಳಿಯುದ್ದಕ್ಕೂ ವಾಸಿಸುವ ಸಮುದಾಯಗಳ ಜೀವನೋಪಾಯವನ್ನು ಸುಧಾರಿಸುವುದರ ಮೇಲೆಯೂ ಗಮನ ಹರಿಸಬೇಕು ಎಂದರು.

ಡಾ. ಜಿತೇಂದ್ರ ಸಿಂಗ್ ಅವರು ಕರಾವಳಿ ಭದ್ರತೆಯ ಬೆಳೆಯುತ್ತಿರುವ ತಾಂತ್ರಿಕ ಆಯಾಮವನ್ನು ಉಲ್ಲೇಖಿಸಿಸಿದರು. ಸಾಗರ ವೀಕ್ಷಣೆ, ಕಣ್ಗಾವಲು, ಸಂಪರ್ಕ, ದೂರಸಂವೇದಿ (remote sensing), ದತ್ತಾಂಶ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಕರಾವಳಿ ಮತ್ತು ಸಾಗರ ಪರಿಸರದ ಕುರಿತು ಭಾರತದ ತಿಳುವಳಿಕೆ ಹಾಗೂ ಸಿದ್ಧತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲವು ಎಂದು ತಿಳಿಸಿದರು.

ಸರ್ಕಾರ ಮತ್ತು ವಿಶಾಲ ರಾಷ್ಟ್ರದ ಜಂಟಿ ಭಾಗಿತ್ವದೊಂದಿಗೆ ಸಮಗ್ರ 'ಕರಾವಳಿ ಭಾರತ' ವಿಧಾನದ ಮೂಲಕ ಈ ತಾಂತ್ರಿಕ ಸಾಮರ್ಥ್ಯಗಳನ್ನು ಒಂದೆಡೆ ತರುವ ಅಗತ್ಯವಿದೆ ಎಂದು ಸಚಿವರು ಹೇಳಿದರು. ಕರಾವಳಿಗೆ ಸಂಬಂಧಿಸಿದ ಸವಾಲುಗಳು ಮತ್ತು ಅವಕಾಶಗಳನ್ನು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಬಿಡಿ ವಲಯಗಳಿಂದ ಪರಿಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸನ್ನಿವೇಶದಲ್ಲಿ, 'ಕರಾವಳಿ ಪರಿಸರ, ಭದ್ರತೆ ಮತ್ತು ಸುಸ್ಥಿರತೆ' (CCESS) 2026ರ ರಾಷ್ಟ್ರೀಯ ಸಮ್ಮೇಳನವು ವಿವಿಧ ಕ್ಷೇತ್ರಗಳ ತಜ್ಞರನ್ನು ಒಂದೇ ವೇದಿಕೆಗೆ ತರಲು ಪ್ರಮುಖ ಅವಕಾಶವನ್ನು ಒದಗಿಸುತ್ತದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಭೂ ವಿಜ್ಞಾನ, ಶೈಕ್ಷಣಿಕ ಕ್ಷೇತ್ರ, ರಕ್ಷಣೆ, ಸಾಮುದ್ರಿಕ ಸಂಸ್ಥೆಗಳು, ಕಾನೂನು ತಜ್ಞರು, ಉದ್ಯಮ ಮತ್ತು ಕರಾವಳಿ ಪಾಲುದಾರರನ್ನು ಒಳಗೊಂಡ ಈ ಸಮ್ಮೇಳನದ ಬಹು-ವಿಷಯಾಧಾರಿತ ಸ್ವರೂಪವು ಕರಾವಳಿ ಸವಾಲುಗಳ ಕುರಿತು ಸಮಗ್ರ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ನೀಡುತ್ತದೆ.

ಕರಾವಳಿ ಪರಿಸರ ಮತ್ತು ಕರಾವಳಿ ಭದ್ರತೆಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ಎಂದು ಸಚಿವರು ಒತ್ತಿಹೇಳಿದರು. ಸ್ಥಿತಿಸ್ಥಾಪಕ ಕರಾವಳಿ ಪ್ರದೇಶಗಳಿಗೆ ಆರೋಗ್ಯಕರ ಸಾಗರ ಪರಿಸರ ವ್ಯವಸ್ಥೆಗಳು, ಜಾಗೃತ ಸಮುದಾಯಗಳು, ಪರಿಣಾಮಕಾರಿ ಆಡಳಿತ ಮತ್ತು ದೃಢವಾದ ವೈಜ್ಞಾನಿಕ ಸಾಮರ್ಥ್ಯಗಳ ಅಗತ್ಯವಿದೆ ಎಂದು ಅವರು ಹೇಳಿದರು.

ಡಾ. ಜಿತೇಂದ್ರ ಸಿಂಗ್ ಅವರು ಸಾಗರ ವಿಜ್ಞಾನವನ್ನು ರಾಷ್ಟ್ರೀಯ ನೀತಿಯೊಂದಿಗೆ ಜೋಡಿಸುವ ಮಹತ್ವವಡಾ ಬಗ್ಗೆ ಒತ್ತಿ ಹೇಳಿದರು, ಇದರಿಂದ ವೈಜ್ಞಾನಿಕ ಜ್ಞಾನವು ಕರಾವಳಿ ಯೋಜನೆ ಮತ್ತು ನಿರ್ವಹಣೆಗೆ ನೇರವಾಗಿ ಕೊಡುಗೆ ನೀಡುತ್ತದೆ. ಕರಾವಳಿ ಸಮುದಾಯಗಳ ಪಾತ್ರವನ್ನು ಒತ್ತಿಹೇಳಿದ ಅವರು, ಅವರ ಜೀವನೋಪಾಯ, ಸಾಂಪ್ರದಾಯಿಕ ಜ್ಞಾನ ಮತ್ತು ಭಾಗಿತ್ವವು ಸುಸ್ಥಿರ ಕರಾವಳಿ ಅಭಿವೃದ್ಧಿಗೆ ಅತ್ಯಗತ್ಯ ಎಂದರು.

ಭಾರತದ ಕರಾವಳಿ ಮೂಲಸೌಕರ್ಯ ಮತ್ತು ಬಂದರುಗಳು ಸಂಪರ್ಕ, ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ಕೇಂದ್ರಬಿಂದುವಾಗಿವೆ ಮತ್ತು ಈ ಆಸ್ತಿಗಳ ಸುಸ್ಥಿರ ಅಭಿವೃದ್ಧಿಗೆ ಕರಾವಳಿ ಹಾಗೂ ಸಾಗರ ಪರಿಸರಗಳ ಸರಿಯಾದ ವೈಜ್ಞಾನಿಕ ತಿಳುವಳಿಕೆ ಅಗತ್ಯವಿದೆ ಎಂದು ಅವರು ಹೇಳಿದರು.

ಕಳೆದ ಐದು ವರ್ಷಗಳಿಂದ ನಡೆಸಲಾಗುತ್ತಿರುವ "ಸ್ವಚ್ಛ ಸಾಗರ ಸುರಕ್ಷಿತ ಸಾಗರ" ಅಭಿಯಾನವನ್ನು ಡಾ. ಜಿತೇಂದ್ರ ಸಿಂಗ್ ಉಲ್ಲೇಖಿಸಿದರು. 2022ರಲ್ಲಿ 75 ದಿನಗಳ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು ಮತ್ತು ಕರಾವಳಿ ರಾಜ್ಯಗಳಾದ್ಯಂತ ನಾಗರಿಕರು ಹಾಗೂ ವಿವಿಧ ಪಾಲುದಾರರ ಭಾಗಿತ್ವವನ್ನು ಇದು ಒಳಗೊಂಡಿತ್ತು ಎಂಬುದನ್ನು ಅವರು ಸ್ಮರಿಸಿದರು.

ಈ ವರ್ಷವೂ ಸೆಪ್ಟೆಂಬರ್ 12 ರಿಂದ ಸೆಪ್ಟೆಂಬರ್ 19 ರವರೆಗೆ ನೈರ್ಮಲ್ಯ ಚಾಲನೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು (NGOs) ಹಾಗೂ ಇತರ ಸಂಸ್ಥೆಗಳ ಭಾಗಿತ್ವ ಸೇರಿದಂತೆ ವಿವಿಧ ಚಟುವಟಿಕೆಗಳೊಂದಿಗೆ ಈ ಅಭಿಯಾನವು ಮುಂದುವರಿಯಲಿದೆ ಎಂದು ಸಚಿವರು ಹೇಳಿದರು. ಭಾರತದ ಕರಾವಳಿಯನ್ನು ಸ್ವಚ್ಛವಾಗಿಡಲು ಪ್ರತಿಜ್ಞೆ ಸ್ವೀಕರಿಸುವ ಪ್ರಕ್ರಿಯೆಯನ್ನು ಪರಿಚಯಿಸಿರುವುದನ್ನು ಅವರು ಎತ್ತಿಹಿಡಿದರು, ಇದು ಅಭಿಯಾನಕ್ಕೆ ನಾಗರಿಕರ ಭಾಗಿತ್ವದ ಆಯಾಮವನ್ನು ಸೇರಿಸುತ್ತದೆ.

ಪಾರಿಸರಿಕ ಸುಸ್ಥಿರತೆ, ಆರ್ಥಿಕ ಅವಕಾಶ, ವೈಜ್ಞಾನಿಕ ಸಾಮರ್ಥ್ಯ ಮತ್ತು ಕರಾವಳಿ ಭದ್ರತೆಯು ಒಂದನ್ನೊಂದು ಬಲಪಡಿಸುವ ಸಮಗ್ರ 'ಕರಾವಳಿ ಭಾರತ' ವಿಧಾನವನ್ನು ಅಭಿವೃದ್ಧಿಪಡಿಸುವುದು ವಿಶಾಲ ಉದ್ದೇಶವಾಗಿರಬೇಕು ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಪ್ರತ್ಯೇಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದರಿಂದ ಹೊರಬಂದು, ವೈಜ್ಞಾನಿಕ ಜ್ಞಾನವನ್ನು ಸಹಯೋಗ, ಸಂಶೋಧನಾ ಆದ್ಯತೆಗಳು ಮತ್ತು ಸುರಕ್ಷಿತ, ಸುಸ್ಥಿರ ಹಾಗೂ ಸಮೃದ್ಧ ಕರಾವಳಿ ಭವಿಷ್ಯಕ್ಕಾಗಿ ಪ್ರಾಯೋಗಿಕ ಕಾರ್ಯಗಳಾಗಿ ಪರಿವರ್ತಿಸಬಲ್ಲ ಸಮಗ್ರ ಚೌಕಟ್ಟಿನತ್ತ ಸಾಗುವ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.

 

*****


(ಪ್ರಕಟಣೆ ಐ.ಡಿ.: 2309162) ವಿಸಿಟರ್ ಕೌಂಟರ್ : 24
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil