ಕೃಷಿ ಸಚಿವಾಲಯ
ಸರಿಯಾದ ವಿಜ್ಞಾನ, ನೀತಿ ಮತ್ತು ಮಾರುಕಟ್ಟೆ ಬೆಂಬಲದೊಂದಿಗೆ ಒಣಭೂಮಿಗಳು ಉತ್ತಮ ಶಕ್ತಿಯಾಗಬಲ್ಲವು: ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಒಣಭೂಮಿಯ ರೂಪಾಂತರಕ್ಕೆ ʻಸಂಪೂರ್ಣ ವ್ಯವಸ್ಥೆ, ಸಂಪೂರ್ಣ ಸಮಾಜ ಮತ್ತು ಸಂಪೂರ್ಣ ಸರ್ಕಾರʼ ವಿಧಾನದ ಅಗತ್ಯವಿದೆ: ಕಾರ್ಯದರ್ಶಿ, ಡಿ ಎ ಆರ್ ಇ
‘ಡ್ರೈಲ್ಯಾಂಡ್ ಕಾಂಗ್ರೆಸ್ 2026’ ನವದೆಹಲಿಯಲ್ಲಿ ಆರಂಭ: ಮೊದಲ ದಿನ ತಳಿ ಅಭಿವೃದ್ಧಿ, ಹವಾಮಾನ ಚೇತರಿಕೆ ಮತ್ತು ಪೋಷಕಾಂಶಗಳ ಚರ್ಚೆಗೆ ಪ್ರಮುಖ ವಿಷಯಗಳಾಗಿದ್ದವು
ಪ್ರಕಟಣಾ ದಿನಾಂಕ:
10 SEP 2026 9:02PM by PIB Bengaluru
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಒಣಭೂಮಿ ಕೃಷಿಯನ್ನು ರೂಪಾಂತರಿಸಲು, ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಬಲಪಡಿಸಲು ಹಾಗೂ ರೈತರ ಜೀವನೋಪಾಯವನ್ನು ಸುಧಾರಿಸಲು ವಿಜ್ಞಾನ, ನೀತಿ ಮತ್ತು ಮಾರುಕಟ್ಟೆ ಬೆಂಬಲವನ್ನು ಆಧರಿಸಿದ ಸಮಗ್ರ ವಿಧಾನಕ್ಕೆ ಕರೆ ನೀಡಿದರು. ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನ ಸಂಕೀರ್ಣದಲ್ಲಿ (ಎನ್ ಎ ಎಸ್ ಸಿ) ನಡೆದ ‘ಡ್ರೈಲ್ಯಾಂಡ್ ಕಾಂಗ್ರೆಸ್ 2026’ರ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಚೌಹಾಣ್, ಒಣಭೂಮಿಗಳನ್ನು ದೌರ್ಬಲ್ಯವೆಂದು ಭಾವಿಸಬಾರದು; ಸೂಕ್ತ ವೈಜ್ಞಾನಿಕ ಮಧ್ಯಸ್ಥಿಕೆಗಳು, ನೀತಿಗಳು ಮತ್ತು ಮಾರುಕಟ್ಟೆ ಬೆಂಬಲದೊಂದಿಗೆ ಅವು ಭಾರತ ಮತ್ತು ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಇತರ ಪ್ರದೇಶಗಳಿಗೆ ಶಕ್ತಿಯ ಮೂಲವಾಗಬಹುದು ಎಂದು ಹೇಳಿದರು.
ಸೆಪ್ಟೆಂಬರ್ 10, 2026 ರಿಂದ ನವದೆಹಲಿಯಲ್ಲಿ ನಡೆಯುತ್ತಿರುವ ‘ಡ್ರೈಲ್ಯಾಂಡ್ ಕಾಂಗ್ರೆಸ್ 2026’, ಸುಸ್ಥಿರ ಮತ್ತು ಸಾಮರ್ಥ್ಯವುಳ್ಳ ಒಣಭೂಮಿ ಕೃಷಿಗಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿ ಆಧಾರಿತ ಪರಿಹಾರಗಳ ಕುರಿತು ಚರ್ಚಿಸಲು ವಿಜ್ಞಾನಿಗಳು, ನೀತಿ ನಿರೂಪಕರು, ಅಭಿವೃದ್ಧಿ ಪಾಲುದಾರರು, ಉದ್ಯಮ ಪ್ರತಿನಿಧಿಗಳು, ಶಿಕ್ಷಣತಜ್ಞರು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ರೈತರು ಸೇರಿದಂತೆ 25 ಕ್ಕೂ ಹೆಚ್ಚು ದೇಶಗಳ 800 ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಒಂದೆಡೆ ಸೇರಿಸಿದೆ. ಈ ಮೂರು ದಿನಗಳ ಸಮ್ಮೇಳನವು ಬೆಳೆಗಳ ಚೇತರಿಕೆಯನ್ನು ಬಲಪಡಿಸುವುದು, ಒಣಭೂಮಿಯ ಭೂಪ್ರದೇಶಗಳ ಸುಸ್ಥಿರ ನಿರ್ವಹಣೆ, ಪೋಷಕಾಂಶ, ಮಾರುಕಟ್ಟೆಗಳು ಮತ್ತು ನೀತಿಗಳ ಮೇಲೆ ಗಮನ ಹರಿಸುವುದರ ಜೊತೆಗೆ ಒಣಭೂಮಿ ಕೃಷಿಯನ್ನು ಅವಲಂಬಿಸಿರುವ ಸಮುದಾಯಗಳ ಜೀವನೋಪಾಯದ ಅವಕಾಶಗಳನ್ನು ಸುಧಾರಿಸುವತ್ತ ಗಮನ ಹರಿಸುತ್ತದೆ.

ಕೃಷಿ ವ್ಯವಸ್ಥೆಯನ್ನು ಪರಿವರ್ತಿಸುವ ಪ್ರಯತ್ನಗಳ ಕೇಂದ್ರಬಿಂದುವಾಗಿ ಆಹಾರ ಭದ್ರತೆ, ಪೌಷ್ಟಿಕಾಂಶದ ಭದ್ರತೆ ಮತ್ತು ರೈತರ ಸಮೃದ್ಧಿ ಇರಬೇಕು ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಒತ್ತು ನೀಡಿದರು. ಕೇವಲ ಉತ್ಪಾದನೆ ಹೆಚ್ಚಳವನ್ನು ಮಾತ್ರ ಯಶಸ್ಸಿನ ಅಳತೆಗೋಲಾಗಿ ನೋಡಬಾರದು, ಬದಲಿಗೆ ಕೃಷಿ ಸಮುದಾಯಗಳ ಸುಧಾರಿತ ಜೀವನೋಪಾಯ ಮತ್ತು ಸಮೃದ್ಧಿಯೂ ಅದರ ಅಳತೆಗೋಲಾಗಬೇಕು ಎಂದು ಹೇಳಿದರು. ಅವರು, "ಒಣಭೂಮಿಗಳು ದೌರ್ಬಲ್ಯವಲ್ಲ. ಸರಿಯಾದ ವಿಜ್ಞಾನ, ಸರಿಯಾದ ನೀತಿ ಮತ್ತು ಸರಿಯಾದ ಮಾರುಕಟ್ಟೆ ಬೆಂಬಲದೊಂದಿಗೆ, ಅವು ಭಾರತ, ಆಫ್ರಿಕಾ ಮತ್ತು ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಇತರ ಪ್ರದೇಶಗಳಿಗೆ ಅತ್ಯಂತ ದೊಡ್ಡ ಶಕ್ತಿಯಾಗಬಲ್ಲವು" ಎಂದು ಹೇಳಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ (ಡಿಎಆರ್ ಇ) ಮಾಜಿ ಕಾರ್ಯದರ್ಶಿ ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಮಾಜಿ ಮಹಾನಿರ್ದೇಶಕ ಡಾ. ಆರ್. ಎಸ್. ಪರೋಡ ವಹಿಸಿದ್ದರು. ಐಸಿಎಆರ್ ಮತ್ತು ಐಸಿಆರ್ ಐಎಸ್ ಎ ಟಿ ಯ ಮಾಜಿ ನಾಯಕರುಗಳಾದ ಡಾ. ಪಂಜಾಬ್ ಸಿಂಗ್, ಡಾ. ತ್ರಿಲೋಚನ್ ಮೊಹಾಪಾತ್ರ ಮತ್ತು ಡಾ. ವಿಲಿಯಂ ಡಿ. ದಾರ್ ಅವರು ಐಸಿಆರ್ ಐಎಸ್ ನ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಕ್ಯಾಥಿ ರೀಡ್ ಮತ್ತು ಸಿಜಿಐಎಆರ್ ನ ಮುಖ್ಯ ವಿಜ್ಞಾನಿ ಡಾ. ಸ್ಯಾಂಡ್ರಾ ಮಿಲಾಚ್ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಡಿಎಆರ್ ಇ ನ ಕಾರ್ಯದರ್ಶಿ ಮತ್ತುಸಿಜಿಐಎಆರ್ ನ ಮಹಾನಿರ್ದೇಶಕ ಡಾ. ಎಮ್. ಎಲ್. ಜಾಟ್ ಹಾಗೂ ಐಸಿಆರ್ ಐಎಸ್ ಎ ಟಿಯ ಮಹಾನಿರ್ದೇಶಕ ಡಾ. ಹಿಮಾಂಶು ಪಾಠಕ್ ಅವರು ಈ ಸಮ್ಮೇಳನದ ಪೋಷಕರಾಗಿದ್ದಾರೆ. ಐಸಿಆರ್ ಐಎಸ್ ಎ ಟಿ ಯ ಸಂಶೋಧನೆ ಮತ್ತು ನಾವೀನ್ಯತೆಯ ಉಪ ಮಹಾನಿರ್ದೇಶಕ ಡಾ. ಸ್ಟ್ಯಾನ್ಫೋರ್ಡ್ ಬ್ಲೇಡ್; ಐಸಿಎಆರ್ ಬೆಳೆ ವಿಜ್ಞಾನ ವಿಭಾಗದ ಉಪ ಮಹಾನಿರ್ದೇಶಕ ಡಾ. ದೇವೇಂದ್ರ ಕುಮಾರ್ ಯಾದವ್; ಮತ್ತು ಐಸಿಆರ್ ಐಎಸ್ ಎ ಟಿ ಯ ಹೆಚ್ಚುವರಿ ಮಹಾನಿರ್ದೇಶಕ ಶ್ರೀ ಸಂಜಯ್ ಅಗರ್ವಾಲ್ ಅವರು ಈ ಸಮ್ಮೇಳನದ ಸಹ ಅಧ್ಯಕ್ಷರಾಗಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ರೈತ ಭಿಕಿಯಾ ಲಡಕ್ಯಾ ದಿಂಡಾ ಅವರು ರೈತ ದೃಷ್ಟಿಕೋನವನ್ನು ಪ್ರತಿನಿಧಿಸಿದರು, ಒಣಭೂಮಿ ಕೃಷಿಯನ್ನು ಪರಿವರ್ತಿಸುವ ತಂತ್ರಗಳಲ್ಲಿ ರೈತರ ಅನುಭವಗಳು ಮತ್ತು ಅವಶ್ಯಕತೆಗಳನ್ನು ಸೇರಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಡಾ. ಹಿಮಾಂಶು ಪಾಠಕ್ ಮತ್ತು ಡಾ. ಸ್ಟ್ಯಾನ್ಫೋರ್ಡ್ ಬ್ಲೇಡ್ ಸಂಪಾದಿಸಿದ ಹಾಗೂ ಐಸಿಆರ್ ಐಎಸ್ ಎ ಟಿ ಪ್ರಕಟಿಸಿದ ‘ಟ್ರಾನ್ಸ್ಫಾರ್ಮಿಂಗ್ ದಿ ಡ್ರೈಲ್ಯಾಂಡ್ಸ್: ದಿ ಐಸಿಆರ್ ಐ ಎಸ್ ಎ ಟಿ ಜರ್ನಿ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಪ್ರಕಟಣೆಯು ಏಷ್ಯಾ, ಆಫ್ರಿಕಾ ಮತ್ತು ಇತರ ಪ್ರದೇಶಗಳಲ್ಲಿ ವಿಜ್ಞಾನ, ನಾವೀನ್ಯತೆ, ಪಾಲುದಾರಿಕೆ ಮತ್ತು ಪ್ರಭಾವದ ಕ್ಷೇತ್ರದಲ್ಲಿ ಐಸಿಆರ್ ಐಎಸ್ ಎ ಟಿ ಯ ಐದಕ್ಕೂ ಹೆಚ್ಚು ದಶಕಗಳ ಕೆಲಸವನ್ನು ದಾಖಲಿಸುತ್ತದೆ. 250 ಕ್ಕೂ ಹೆಚ್ಚು ಸಾರಾಂಶಗಳನ್ನು ಒಳಗೊಂಡಿರುವ ‘ಡ್ರೈಲ್ಯಾಂಡ್ ಕಾಂಗ್ರೆಸ್ 2026 ಅಬಸ್ಟ್ರಾಕ್ಟ್ ಬುಕ್’ ಮತ್ತು ವೇಗವರ್ಧಿತ ಬೆಳೆ ಸುಧಾರಣೆ, ಸಾಮರ್ಥ್ಯವುಳ್ಳ ಕೃಷಿ ವ್ಯವಸ್ಥೆಗಳು ಮತ್ತು ಕೃಷಿ-ಆಹಾರ ವ್ಯವಸ್ಥೆಗಳ ರೂಪಾಂತರದಾದ್ಯಂತ ಸಂಸ್ಥೆಯ ಕೆಲಸವನ್ನು ಎತ್ತಿಹಿಡಿಯುವ ‘ಐಸಿಆರ್ಐಎಸ್ಎಟಿ ಸಂಶೋಧನಾ ಮತ್ತು ಕಾರ್ಪೊರೇಟ್ ಪ್ರೊಫೈಲ್’ ಅನ್ನು ಸಹ ಬಿಡುಗಡೆ ಮಾಡಲಾಯಿತು.
ಮೊದಲ ದಿನದ ತಾಂತ್ರಿಕ ಕಾರ್ಯಕ್ರಮದಲ್ಲಿ — "ನಾಳೆಗಾಗಿ ತಳಿ ಅಭಿವೃದ್ಧಿ: ತಳಿಶಾಸ್ತ್ರದ ಪ್ರಗತಿಯನ್ನು ವೇಗಗೊಳಿಸುವುದು", "ಹವಾಮಾನ ಚೇತರಿಕೆಯ ಒಣಭೂಮಿಗಳು" ಮತ್ತು "ಮಾರುಕಟ್ಟೆಗಳು ಮತ್ತು ನೀತಿಗಳ ಮೂಲಕ ಉತ್ತಮ ಆಹಾರ ಮತ್ತು ಪೋಷಕಾಂಶ" ಎಂಬ ಮೂರು ವಿಷಯಾಧಾರಿತ ಗೋಷ್ಠಿಗಳು ನಡೆದವು. ಈ ಗೋಷ್ಠಿಗಳು ಬೆಳೆಗಳಲ್ಲಿ ತಳಿಶಾಸ್ತ್ರದ ಪ್ರಗತಿಯನ್ನು ವೇಗಗೊಳಿಸುವುದು, ಹವಾಮಾನ ಚೇತರಿಕೆಯನ್ನು ಬಲಪಡಿಸುವುದು, ಒಣಭೂಮಿಗಳ ನಿರ್ವಹಣೆಯನ್ನು ಸುಧಾರಿಸುವುದು, ಪೋಷಕಾಂಶವನ್ನು ಹೆಚ್ಚಿಸುವುದು ಮತ್ತು ಉತ್ತಮ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಕುರಿತು ಚರ್ಚಿಸಲು ತಜ್ಞರನ್ನು ಒಟ್ಟುಗೂಡಿಸಿದವು.

ಡಿ ಎ ಆರ್ ಇ ನ ಕಾರ್ಯದರ್ಶಿ ಮತ್ತು ಐಸಿಎಆರ್ ನ ಮಹಾನಿರ್ದೇಶಕ ಡಾ. ಎಮ್. ಎಲ್. ಜಾಟ್ ಅವರು ಕೃಷಿ ವ್ಯವಸ್ಥೆಯನ್ನು ರೂಪಾಂತರಿಸುವಲ್ಲಿ ಭಾರತದ ಅನುಭವ ಮತ್ತು ಜಾಗತಿಕ ದಕ್ಷಿಣ ದೇಶಗಳಿಗೆ ಇದರಿಂದ ಸಿಗುವ ಪಾಠಗಳ ಕುರಿತು ದೂರದೃಷ್ಟಿಯ ಭಾಷಣ ಮಾಡಿದರು. ಒಣಭೂಮಿಗಳನ್ನು ರೂಪಾಂತರಿಸಲು ಕೃಷಿಯಾಚೆಗಿನ ಮಧ್ಯಸ್ಥಿಕೆಗಳು ಅಗತ್ಯವಿದೆ ಎಂದು ಅವರು ಒತ್ತು ನೀಡಿದರು ಮತ್ತು ಒಣಭೂಮಿ ಪ್ರದೇಶಗಳಲ್ಲಿ ಅವಕಾಶಗಳನ್ನು ಸೃಷ್ಟಿಸಲು ಹಾಗೂ ಜೀವನೋಪಾಯವನ್ನು ಸುಧಾರಿಸಲು ಸಂಪೂರ್ಣ-ವ್ಯವಸ್ಥೆ, ಸಂಪೂರ್ಣ-ಸಮಾಜ ಮತ್ತು ಸಂಪೂರ್ಣ-ಸರ್ಕಾರದ ವಿಧಾನಕ್ಕೆ ಕರೆ ನೀಡಿದರು. ಅವರು, "ಶಿಫಾರಸುಗಳಿಂದ ಕ್ರಿಯೆಯತ್ತ, ವಿಂಗಡಣೆಗಳಿಂದ ಸಮಗ್ರ ವ್ಯವಸ್ಥೆಯತ್ತ — ಅದೇ ಒಣಭೂಮಿ ಕೃಷಿಯನ್ನು ರೂಪಾಂತರಿಸುವ ಹಾದಿ" ಎಂದು ಹೇಳಿದರು.
ಭಾರತ ಸರ್ಕಾರದ ಭೂ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಶ್ರೀ ನರೇಂದ್ರ ಭೂಷಣ್ ಅವರು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಭೂ ಸಂಪನ್ಮೂಲಗಳ ನಿರ್ವಹಣೆ ಮತ್ತು ಸಮುದಾಯವು ಕೈಗೊಳ್ಳುವ ಕಾರ್ಯಗಳ ಮೂಲಕ ಒಣಭೂಮಿಗಳನ್ನ ಮರುಕಲ್ಪಿಸುವ ಕುರಿತು ಮಾತನಾಡಿದರು. ಅವರ ಭಾಷಣವು ಭೂಮಿ ಮತ್ತು ಸಂಪನ್ಮೂಲ ನಿರ್ವಹಣೆಯನ್ನು ಬಲಪಡಿಸುವಲ್ಲಿ ಹಾಗೂ ಒಣಭೂಮಿ ಪ್ರದೇಶಗಳ ಸಮುದಾಯಗಳನ್ನು ಬೆಂಬಲಿಸುವಲ್ಲಿ ಸಮಗ್ರ ವಿಧಾನಗಳ ಪಾತ್ರವನ್ನು ಎತ್ತಿಹಿಡಿಯಿತು.

ಐಸಿಆರ್ ಐಎಸ್ ಎ ಟಿ ಯ ಮಹಾನಿರ್ದೇಶಕ ಡಾ. ಹಿಮಾಂಶು ಪಾಠಕ್ ಅವರು ಆಹಾರ ವ್ಯವಸ್ಥೆಗಳು ಮತ್ತು ಜೀವನೋಪಾಯಕ್ಕಾಗಿ ಒಣಭೂಮಿಗಳ ಜಾಗತಿಕ ಮಹತ್ವವನ್ನು ಎತ್ತಿಹಿಡಿದರು. ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವಾಗ ಮತ್ತು ವಲಸೆಯನ್ನು ಕಡಿಮೆ ಮಾಡುವಾಗ ಒಣಭೂಮಿಗಳನ್ನು ಉತ್ಪಾದಕ, ಲಾಭದಾಯಕ ಮತ್ತು ಸಾಮರ್ಥ್ಯವುಳ್ಳದ್ದಾಗಿ ಮಾಡಲು ಕಾರ್ಯತಂತ್ರದ ಹಾದಿಯನ್ನು ಸಿದ್ಧಪಡಿಸಲು ಕರೆ ನೀಡಿದರು. ಭವಿಷ್ಯದ ಕೃಷಿ ಅಭಿವೃದ್ಧಿಗೆ ಒಣಭೂಮಿಗಳನ್ನು ಪ್ರಮುಖವಾಗಿ ಪರಿಗಣಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಡಾ. ಆರ್. ಎಸ್. ಪರೋಡ ಅವರು ಒಣಭೂಮಿ ಕೃಷಿಯಲ್ಲಿ ನೀರಿನ ನಿರ್ವಹಣೆಯ ಮಹತ್ವವನ್ನು ಒತ್ತಿಹೇಳಿದರು ಮತ್ತು ಪ್ರತಿಯೊಂದು ಹನಿ ನೀರಿನಿಂದ ಹೆಚ್ಚಿನ ಆರ್ಥಿಕ ಮತ್ತು ಪೌಷ್ಟಿಕಾಂಶದ ಮೌಲ್ಯವನ್ನು ಖಚಿತಪಡಿಸಿಕೊಳ್ಳಲು ಕರೆ ನೀಡಿದರು. ಒಣಭೂಮಿ ಅಭಿವೃದ್ಧಿಯ ಮುಂದಿನ ಹಂತವು ಲಾಭದಾಯಕ, ಚೇತರಿಕೆ, ಪರಿಸರ ಸುಸ್ಥಿರ ಮತ್ತು ಭವಿಷ್ಯದ ಪೀಳಿಗೆಗೆ ಆಕರ್ಷಕವಾಗಿರುವ ಕೃಷಿ ವ್ಯವಸ್ಥೆಗಳ ಮೇಲೆ ಗಮನ ಹರಿಸಬೇಕು ಎಂದು ಡಾ. ಪಂಜಾಬ್ ಸಿಂಗ್ ಒತ್ತಿ ಹೇಳಿದರು.
ಒಣಭೂಮಿ ಪ್ರದೇಶಗಳಾದ್ಯಂತ ಪರಿಹಾರಗಳ ಅಳವಡಿಕೆ ಮತ್ತು ವಿಸ್ತರಣೆಯನ್ನು ವೇಗಗೊಳಿಸಲು ಜ್ಞಾನ, ಪರಿಣತಿ ಮತ್ತು ಯಶಸ್ವಿ ಮಾದರಿಗಳನ್ನು ಹಂಚಿಕೊಳ್ಳುವಲ್ಲಿ ದಕ್ಷಿಣ-ದಕ್ಷಿಣ ಸಹಕಾರದ ಮಹತ್ವವನ್ನು ಡಾ. ತ್ರಿಲೋಚನ್ ಮೊಹಾಪಾತ್ರ ಎತ್ತಿಹಿಡಿದರು. ಐಸಿಆರ್ ಐಎಸ್ ಎ ಟಿಯ ಮಂಡಳಿ ಅಧ್ಯಕ್ಷೆ ಶ್ರೀಮತಿ ಕ್ಯಾಥಿ ರೀಡ್ ಅವರು ಒಣಭೂಮಿ ಕೃಷಿಯಲ್ಲಿ ಹೆಚ್ಚಿನ ಜಾಗತಿಕ ಗಮನ, ಹೂಡಿಕೆ ಮತ್ತು ಕ್ರಿಯೆಗೆ ಕರೆ ನೀಡಿದರು ಹಾಗೂ ಒಣಭೂಮಿಗಳಾದ್ಯಂತ ಚೇತರಿಕೆಯನ್ನು ಬಲಪಡಿಸುವಲ್ಲಿ ದಕ್ಷಿಣ-ದಕ್ಷಿಣ ಸಹಕಾರದ ಸಾಮರ್ಥ್ಯವನ್ನು ಎತ್ತಿಹಿಡಿದರು.
ಐಸಿಆರ್ ಐಎಸ್ ಎ ಟಿ ಯ ಮಾಜಿ ಮಹಾನಿರ್ದೇಶಕ ಡಾ. ವಿಲಿಯಂ ಡಿ. ದಾರ್ ಅವರು ದಕ್ಷಿಣ-ದಕ್ಷಿಣ ಸಹಕಾರವು ಜಾಗತಿಕ ದಕ್ಷಿಣದ ದೇಶಗಳಿಗೆ ಸಮಾನ ಪಾಲುದಾರರಾಗಿ ಒಟ್ಟಾಗಿ ಕಲಿಯಲು, ನವೀನತೆ ಕಂಡುಕೊಳ್ಳಲು ಮತ್ತು ಪರಿಹಾರಗಳನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ ಎಂದು ಒತ್ತು ನೀಡಿದರು. ಸಿಜಿಐಎಆರ್ ನ ಮುಖ್ಯ ವಿಜ್ಞಾನಿ ಡಾ. ಸ್ಯಾಂಡ್ರಾ ಮಿಲಾಚ್ ಅವರು ಭಾರತವು ಜಾಗತಿಕ ದಕ್ಷಿಣಕ್ಕೆ ಪರಿಹಾರಗಳ ಮೂಲವಾಗಿ ಬೆಳೆಯುತ್ತಿದೆ ಎಂದು ಹೇಳಿದರು, ಇಲ್ಲಿನ ನಾವೀನ್ಯತೆಗಳನ್ನು ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಒಣಭೂಮಿ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಬಹುದು ಮತ್ತು ವಿಸ್ತರಿಸಬಹುದು ಎಂದು ಹೇಳಿದರು.
‘ಡ್ರೈಲ್ಯಾಂಡ್ ಕಾಂಗ್ರೆಸ್ 2026’ ಮುಂದಿನ ಎರಡು ದಿನಗಳ ಕಾಲ ತನ್ನ ಚರ್ಚೆಗಳನ್ನು ಮುಂದುವರಿಸಲಿದ್ದು, ಒಣಭೂಮಿ ಕೃಷಿಯ ರೂಪಾಂತರಕ್ಕೆ ಬೆಂಬಲ ನೀಡಲು ವೈಜ್ಞಾನಿಕ ನಾವೀನ್ಯತೆ, ಹವಾಮಾನ ಚೇತರಿಕೆ, ಸುಸ್ಥಿರ ಕೃಷಿ ವ್ಯವಸ್ಥೆಗಳು, ಪೋಷಕಾಂಶ, ಮಾರುಕಟ್ಟೆಗಳು, ನೀತಿಗಳು ಮತ್ತು ಜೀವನೋಪಾಯದ ಅವಕಾಶಗಳ ಮೇಲೆ ಗಮನ ಹರಿಸಲಿದೆ.
*****
(ಪ್ರಕಟಣೆ ಐ.ಡಿ.: 2309052)
ವಿಸಿಟರ್ ಕೌಂಟರ್ : 7