ಕೃಷಿ ಸಚಿವಾಲಯ
ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ರಿಂದ ಉದ್ದೇಶಿತ ಪ್ರಬಲ 'ಬೀಜ ಕಾಯ್ದೆ' ಕುರಿತು ದೇಶಾದ್ಯಂತದ ರೈತ ಮುಖಂಡರೊಂದಿಗೆ ಸಮಾಲೋಚನೆ
ರೈತರೊಂದಿಗೆ ಚರ್ಚೆ ಮತ್ತು ಸಮಾಲೋಚನೆಯ ಮೂಲಕವೇ ಪ್ರತಿಯೊಂದು ಕೃಷಿ ನೀತಿಯನ್ನು ರೂಪಿಸಲು ಸರ್ಕಾರ ಬದ್ಧವಾಗಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
1966ರ ಹಳೆಯ ಕಾನೂನು ಈಗಿನ ಸವಾಲುಗಳಿಗೆ ಸೂಕ್ತವಲ್ಲ; ಪ್ರಸ್ತುತ ಕಾಯಿದೆಯ ವ್ಯಾಪ್ತಿಯ ಹೊರಗೆ ಶೇ. 70ರಷ್ಟು ಬೀಜಗಳು ಬರುತ್ತವೆ ಮತ್ತು ನಕಲಿ ಬೀಜಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯ" : ಶ್ರೀ ಶಿವರಾಜ್ ಸಿಂಗ್ ಚೌಹಾಣ್
ರೈತರ ಹಕ್ಕುಗಳಿಗೆ ಸಂಪೂರ್ಣ ರಕ್ಷಣೆ; ಪಾರಂಪರಿಕ ಮತ್ತು ರೈತರ ತಳಿಯ ಬೀಜಗಳಿಗೆ ಯಾವುದೇ ನಿರ್ಬಂಧವಿಲ್ಲ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ನಕಲಿ ಬೀಜಗಳ ದಂಧೆಗೆ ಕಡಿವಾಣ ಹಾಕಲು ಭಾರಿ ದಂಡ ಮತ್ತು ಜೈಲು ಶಿಕ್ಷೆಗೆ ಪ್ರಸ್ತಾಪ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಬೀಜಗಳ ಸಂಪೂರ್ಣ ಪತ್ತೆಹಚ್ಚುವಿಕೆಯನ್ನು ಖಚಿತಪಡಿಸಿಕೊಳ್ಳಲು ಕಡ್ಡಾಯ ನೋಂದಣಿ ಮತ್ತು ಕ್ಯೂ ಆರ್ ಕೋಡ್ ಗಳ ವ್ಯವಸ್ಥೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಹೊಸ ಬೀಜಗಳ ತಳಿಗಳನ್ನು ವೇಗವಾಗಿ ಬಿಡುಗಡೆ ಮಾಡಲು ರಾಜ್ಯಗಳಿಗೆ ಅಧಿಕಾರ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
15 ದಿನಗಳ ಒಳಗೆ ರೈತರಿಗೆ ಪರಿಹಾರ; ಪ್ರತಿ ರಾಜ್ಯದಲ್ಲೂ ‘ಬೀಜ ಭದ್ರತಾ ನಿಧಿ’ ಸ್ಥಾಪನೆಗೆ ಪ್ರಸ್ತಾಪ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಪ್ರಕಟಣಾ ದಿನಾಂಕ:
10 SEP 2026 8:55PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ, ನಕಲಿ ಮತ್ತು ಕಳಪೆ ಗುಣಮಟ್ಟದ ಬೀಜಗಳಿಂದ ರೈತರನ್ನು ರಕ್ಷಿಸಲು ಸರ್ಕಾರವು ಬಲವಾದ 'ಬೀಜ ಕಾಯ್ದೆ' ತರಲು ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ನವದೆಹಲಿಯ ಕೃಷಿ ಭವನದಲ್ಲಿ ದೇಶದಾದ್ಯಂತದ ರೈತ ಸಂಘಟನೆಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. ಪ್ರಸ್ತಾವಿತ ಕಾಯ್ದೆಯ ಕುರಿತು ಸುಮಾರು ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಅನುಭವ ಮತ್ತು ಸಲಹೆಗಳನ್ನು ಹಂಚಿಕೊಂಡರು. ಸಭೆಯಲ್ಲಿ ಸುಮಾರು 20 ರೈತ ಸಂಘಟನೆಗಳು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದವು. ಕೇಂದ್ರ ಕೃಷಿ ಕಾರ್ಯದರ್ಶಿ ಶ್ರೀ ಅತೀಶ್ ಚಂದ್ರ ಮತ್ತು ಹಿರಿಯ ಅಧಿಕಾರಿಗಳು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾರತೀಯ ಕಿಸಾನ್ ಸಂಘ, ಭಾರತೀಯ ಕಿಸಾನ್ ಯೂನಿಯನ್ನ ವಿವಿಧ ಬಣಗಳು, ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿ (ಎಐಕೆಸಿಸಿ), ಕಿಸಾನ್ ಮಹಾಪಂಚಾಯತ್, ಭಾರತೀಯ ಕೃಷಕ್ ಸಮಾಜ್, ಗಾಂವ್ ಕಿಸಾನ್ ಉನ್ನಯನ್, ಸೊಸೈಟಿ ಫಾರ್ ಇಂಡಿಪೆಂಡೆಂಟ್ ಫಾರ್ಮರ್ಸ್ ಅಸೋಸಿಯೇಷನ್ (ಎಸ್ ಐ ಎಫ್ ಎ), ಕರ್ನಾಟಕ ರಾಜ್ಯ ರೈತ ಸಂಘ, ತೆಲಂಗಾಣ ರೈತು ಸಂಘಂ, ಮಹಾರಾಷ್ಟ್ರದ ಶೇತ್ಕರಿ ಸಂಘಟನೆಗಳು, ಗುಜರಾತಿನ ಖೇಡುತ್ ಸಮಾಜ್, ರಾಜಸ್ಥಾನ ಮತ್ತು ಬಿಹಾರದ ನ್ಯಾಷನಲ್ ಕಿಸಾನ್ ಪ್ರೋಗ್ರೆಸಿವ್ ಅಸೋಸಿಯೇಷನ್, ತಮಿಳುನಾಡಿನ ವಿವಸಾಯಿಗಳ ಸಂಗಮ್, ಜಾರ್ಖಂಡ್ ನ ಪ್ರಗತಿಶೀಲ ಕೃಷಿ ಮಂಚ್ ಮತ್ತು ಕೇರಳದ ಕೊಟ್ಟಾಯಂನ ರೈತ ಸಂಘಟನೆಗಳು ಸೇರಿದಂತೆ ಹಲವು ಪ್ರತಿನಿಧಿಗಳು ಈ ಸಮಾಲೋಚನೆಯಲ್ಲಿ ಭಾಗವಹಿಸಿದ್ದರು.

ಅಸ್ತಿತ್ವದಲ್ಲಿರುವ 1966ರ ಕಾನೂನನ್ನು ತಿದ್ದುಪಡಿ ಮಾಡುವ ಅಗತ್ಯವಿದೆ
ಹಾಲಿ ಇರುವ ಬೀಜ ಕಾಯ್ದೆಯನ್ನು 1966 ರಲ್ಲಿ ರೂಪಿಸಲಾಗಿತ್ತು ಮತ್ತು ಬೀಜ ನಿಯಂತ್ರಣ ಆದೇಶವು 1983 ರಲ್ಲಿ ಜಾರಿಗೆ ಬಂದಿತ್ತು ಎಂದು ಶ್ರೀ ಚೌಹಾಣ್ ಹೇಳಿದರು. ಕಳೆದ ಆರು ದಶಕಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳಾಗಿದ್ದು, ಪ್ರಸ್ತುತ ಕಾನೂನು ನಕಲಿ ಹಾಗೂ ಕಳಪೆ ಗುಣಮಟ್ಟದ ಬೀಜಗಳ ಮಾರಾಟ ಮತ್ತು ಜವಾಬ್ದಾರಿಯನ್ನು ನಿಗದಿಪಡಿಸುವಲ್ಲಿನ ಕೊರತೆ ಸೇರಿದಂತೆ ಉದ್ಭವಿಸುತ್ತಿರುವ ಸವಾಲುಗಳನ್ನು ಎದುರಿಸಲು ಸಾಕಾಗುವುದಿಲ್ಲ. 'ವಿಕಸಿತ ಕೃಷಿ ಸಂಕಲ್ಪ ಅಭಿಯಾನ'ದ ಸಂದರ್ಭದಲ್ಲಿ ರೈತರು ಹೊಸ ಬೀಜ ಮತ್ತು ಕ್ರಿಮಿನಾಶಕ ಕಾಯ್ದೆಗಳ ಅಗತ್ಯವನ್ನು ಪ್ರಸ್ತಾಪಿಸಿದ್ದರು ಎಂದು ಅವರು ಹೇಳಿದರು. ಸರ್ಕಾರವು ನವೆಂಬರ್-ಡಿಸೆಂಬರ್ 2025ರಲ್ಲಿ ಕರಡು ಬೀಜ ಕಾಯ್ದೆಯ ಕುರಿತು ಸಲಹೆಗಳನ್ನು ಆಹ್ವಾನಿಸಿತ್ತು ಮತ್ತು ರೈತರು ಹಾಗೂ ರೈತ ಸಂಘಟನೆಗಳಿಂದ ಸುಮಾರು 18,000 ಸಲಹೆಗಳು ಬಂದಿದ್ದವು. ರೈತರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳಿಂದ ನೇರ ಸಲಹೆಗಳನ್ನು ಪಡೆಯಲು ಈಗ ಸಮಾಲೋಚನಾ ಪ್ರಕ್ರಿಯೆಯನ್ನು ಪುನರಾರಂಭಿಸಲಾಗಿದೆ. ಕಾನೂನನ್ನು ಅಂತಿಮಗೊಳಿಸಲು ಯಾವುದೇ ಆತುರವಿಲ್ಲ ಮತ್ತು ಯಾವುದೇ ಗಡುವು ನಿಗದಿಪಡಿಸಿಲ್ಲ ಎಂದು ಶ್ರೀ ಚೌಹಾಣ್ ಸ್ಪಷ್ಟಪಡಿಸಿದರು. ಸರ್ಕಾರವು ಮುಂದುವರಿಯುವ ಮೊದಲು ರೈತರು, ರೈತ ಸಂಘಟನೆಗಳು ಮತ್ತು ಇತರ ಪಾಲುದಾರರ ಸಲಹೆಗಳನ್ನು ಪರಿಗಣಿಸುವುದನ್ನು ಮುಂದುವರಿಸುತ್ತದೆ.
70% ರಷ್ಟು ಬೀಜಗಳು ಪ್ರಸ್ತುತ ಕಾನೂನಿನ ವ್ಯಾಪ್ತಿಯಿಂದ ಹೊರಗಿವೆ
ಪ್ರಸ್ತುತ ಸುಮಾರು 70% ಬೀಜಗಳು ಹಾಲಿ ಇರುವ ಬೀಜ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿವೆ, ಹಾಗೆಯೇ ಬೀಜ ಸಂಬಂಧಿತ ಪ್ರಕ್ರಿಯೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿವೆ ಮತ್ತು ಪ್ರಸ್ತುತ ಇರುವ ದಂಡದ ನಿಯಮಗಳು ಸಾಕಷ್ಟಿಲ್ಲ ಎಂದು ಶ್ರೀ ಚೌಹಾಣ್ ಹೇಳಿದರು. ಆದ್ದರಿಂದ, ನಕಲಿ ಮತ್ತು ಕಳಪೆ ಬೀಜಗಳ ವಿರುದ್ಧ ಬಲವಾದ, ಹೆಚ್ಚು ಪರಿಣಾಮಕಾರಿ ಮತ್ತು ಏಕರೂಪದ ನಿಯಂತ್ರಣ ಚೌಕಟ್ಟನ್ನು ಸ್ಥಾಪಿಸಲು ಹೊಸ ಶಾಸನದ ಅಗತ್ಯವಾಗಿದೆ ಎಂದು ಹೇಳಿದರು.
ರೈತರ ಸಾಂಪ್ರದಾಯಿಕ ಬೀಜಗಳ ಹಕ್ಕುಗಳನ್ನು ಸಂರಕ್ಷಿಸಲಾಗುವುದು
ಉದ್ದೇಶಿತ ಕಾನೂನು ರೈತರ ಚಾಲ್ತಿಯಲ್ಲಿರುವ ಹಕ್ಕುಗಳನ್ನು ನಿರ್ಬಂಧಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ರೈತರು ತಮ್ಮ ಸಾಂಪ್ರದಾಯಿಕ ಮತ್ತು ಸ್ವಂತ ತಳಿಯ ಬೀಜಗಳನ್ನು ಬಳಸಲು, ವಿನಿಮಯ ಮಾಡಿಕೊಳ್ಳಲು ಮತ್ತು ಮಾರಾಟ ಮಾಡಲು ಮುಕ್ತರಾಗಿರುತ್ತಾರೆ. ಸಾಂಪ್ರದಾಯಿಕ ಬೀಜಗಳಿಗೆ ನೋಂದಣಿ ಕಡ್ಡಾಯವಾಗಿರುವುದಿಲ್ಲ. ರೈತರು ಬಯಸಿದರೆ ತಮ್ಮ ತಳಿಗಳನ್ನು ಸ್ವಯಂಪ್ರೇರಿತವಾಗಿ ನೋಂದಾಯಿಸಿಕೊಳ್ಳಬಹುದು. ಸ್ವಂತ ಬಳಕೆಗೆ, ಗ್ರಾಮದೊಳಗೆ ಹಂಚಿಕೆಗೆ ಅಥವಾ ಕಂಪನಿಗೆ ಬೀಜ ಉತ್ಪಾದಿಸುವ ರೈತರು ಈ ನಿಯಮಗಳಡಿ ಡಿಜಿಟಲ್ ನೋಂದಣಿ ಮಾಡಿಕೊಳ್ಳುವ ಅಗತ್ಯವಿರುವುದಿಲ್ಲ.
ಗಂಭೀರ ಅಪರಾಧಗಳಿಗೆ ₹30 ಲಕ್ಷದವರೆಗೆ ದಂಡ ಮತ್ತು ಜೈಲು ಶಿಕ್ಷೆ
ಪ್ರಸ್ತಾವಿತ ಕಾನೂನು, ಅಪರಾಧಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸುತ್ತದೆ:
ಸಣ್ಣ ಉಲ್ಲಂಘನೆಗಳು: ಮೊದಲ ಅಪರಾಧಕ್ಕೆ ಎಚ್ಚರಿಕೆ ಮತ್ತು ಎರಡನೇ ಅಪರಾಧಕ್ಕೆ ₹50,000 ವರೆಗೆ ದಂಡ.
ಉದ್ದೇಶಪೂರ್ವಕ ಉಲ್ಲಂಘನೆಗಳು: ಕ್ಯೂ ಆರ್ ಕೋಡ್ ಅನ್ನು ಅಂಟಿಸದಿರುವುದು, ಅಗತ್ಯ ದತ್ತಾಂಶವನ್ನು ಒದಗಿಸದಿರುವುದು ಅಥವಾ ತಪ್ಪಾದ ಬ್ರ್ಯಾಂಡಿಂಗ್ ನಂತಹ ಅಪರಾಧಗಳಿಗೆ ಮೊದಲ ಉಲ್ಲಂಘನೆಗೆ ₹1 ಲಕ್ಷ ಮತ್ತು ಎರಡನೇ ಉಲ್ಲಂಘನೆಗೆ ₹2 ಲಕ್ಷ ದಂಡ ವಿಧಿಸಲಾಗುವುದು.
ಗಂಭೀರ ಅಪರಾಧಗಳು: ನಕಲಿ ಬೀಜಗಳನ್ನು ಮಾರಾಟ ಮಾಡುವುದು, ನೋಂದಣಿ ಇಲ್ಲದೆ ವ್ಯಾಪಾರ ನಡೆಸುವುದು ಅಥವಾ ಉದ್ದೇಶಪೂರ್ವಕ ವಂಚನೆಗೆ ಜೈಲು ಶಿಕ್ಷೆಯೊಂದಿಗೆ ₹30 ಲಕ್ಷದವರೆಗೆ ದಂಡ ವಿಧಿಸಲಾಗುವುದು.
ಕಠಿಣ ನಿಯಮಗಳು ಕಾನೂನುಬಾಹಿರ ಬೀಜ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಬಲವಾದ ತಡೆಗೋಡೆಯಾಗಿ ಕೆಲಸ ಮಾಡುತ್ತವೆ ಎಂದು ಶ್ರೀ ಚೌಹಾಣ್ ಹೇಳಿದರು.
100% ನೋಂದಣಿ ಮತ್ತು ಕ್ಯೂ ಆರ್ ಆಧಾರಿತ ಪತ್ತೆಹಚ್ಚುವಿಕೆ
ಪ್ರಸ್ತಾವಿತ ಶಾಸನದ ಅಡಿಯಲ್ಲಿ, ಎಲ್ಲಾ ಬೀಜಗಳು ಮತ್ತು ನಾಟಿ ಮಾಡುವ ಸಾಮಗ್ರಿಗಳನ್ನು ರಾಷ್ಟ್ರೀಯ ನೋಂದಣಿಯಲ್ಲಿ ನೋಂದಾಯಿಸಬೇಕಾಗುತ್ತದೆ. ನೋಂದಾಯಿಸದ ಬೀಜಗಳು ಅಕ್ರಮವಾಗಿದ್ದು, ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಿಲ್ಲ. ಪ್ರತಿಯೊಂದು ಬೀಜದ ಪ್ಯಾಕೆಟ್ ಕ್ಯೂ ಆರ್ ಕೋಡ್ ಅನ್ನು ಹೊಂದಿರುತ್ತದೆ, ಇದರಿಂದ ರೈತರು ಬೀಜದ ಮೂಲ, ತಯಾರಕರು, ಪ್ರಯೋಗಾಲಯದ ಅನುಮೋದನೆ ಮತ್ತು ಪೂರೈಕೆ ಸರಪಳಿಯ ವಿವರಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಈಗ ಪರಿಣಾಮಕಾರಿ ಪತ್ತೆಹಚ್ಚುವಿಕೆಯ ವ್ಯವಸ್ಥೆ ಇಲ್ಲದಿರುವುದರಿಂದ ಬೀಜಗಳು ವಿಫಲವಾದಾಗ ಜವಾಬ್ದಾರಿಯನ್ನು ನಿಗದಿಪಡಿಸುವುದು ಕಷ್ಟಕರವಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು. ಹೊಸ ಕಾನೂನು ಪತ್ತೆಹಚ್ಚುವಿಕೆಯನ್ನು ಕಡ್ಡಾಯಗೊಳಿಸುತ್ತದೆ ಮತ್ತು ಹೊಣೆಗಾರಿಕೆಯನ್ನು ಗುರುತಿಸಲು ರಚನಾತ್ಮಕ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ.
ಹೊಸ ತಳಿಗಳನ್ನು ಬಿಡುಗಡೆ ಮಾಡಲು ರಾಜ್ಯಗಳಿಗೆ ಹೆಚ್ಚಿನ ಅಧಿಕಾರ
ರಾಷ್ಟ್ರೀಯ ಮಾನದಂಡಗಳು ಅನ್ವಯವಾಗುತ್ತಿದ್ದರೂ, ರಾಜ್ಯ ಮಟ್ಟದ ಸಮಿತಿಗಳ ಶಿಫಾರಸಿನ ಮೇರೆಗೆ ಹೊಸ ಬೀಜದ ತಳಿಗಳನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರಗಳಿಗೆ ಪ್ರಸ್ತಾವಿತ ಕಾನೂನು ಅಧಿಕಾರ ನೀಡುತ್ತದೆ. ಇದು ರಾಜ್ಯಗಳಿಗೆ ತಮ್ಮ ಸ್ಥಳೀಯ ಹವಾಮಾನ ಮತ್ತು ಪ್ರಾದೇಶಿಕ ಅಗತ್ಯಗಳಿಗೆ ಸೂಕ್ತವಾದ ತಳಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಿಡುಗಡೆ ಮಾಡಲು ಅನುವು ಮಾಡಿಕೊಡುತ್ತದೆ. ಎಲ್ಲಾ ತಳಿಗಳನ್ನು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಲಭ್ಯವಿರುವ ಒಂದೇ ರಾಷ್ಟ್ರೀಯ ಆನ್ ಲೈನ್ ನೋಂದಣಿಯಲ್ಲಿ ದಾಖಲಿಸಲಾಗುತ್ತದೆ, ಇದರಿಂದ ಅನಗತ್ಯವಾಗಿ ಪುನರಾವರ್ತನೆಯಾಗುವುದು ತಪ್ಪುತ್ತದೆ.
ಬೀಜ ಭದ್ರತಾ ನಿಧಿ ಮತ್ತು 15 ದಿನಗಳಲ್ಲಿ ಪರಿಹಾರ
ರೈತರ ಬೇಡಿಕೆಗಳಿಗೆ ಸ್ಪಂದಿಸಿದ ಪ್ರಸ್ತಾವಿತ ಕಾನೂನು, ಪ್ರತಿಯೊಂದು ರಾಜ್ಯದಲ್ಲೂ ಸಂಬಂಧಿತ ರಾಜ್ಯ ಸರ್ಕಾರಗಳಿಂದ ನಿರ್ವಹಿಸಲ್ಪಡುವ ‘ಬೀಜ ಭದ್ರತಾ ನಿಧಿ’ಯನ್ನು ಒದಗಿಸುತ್ತದೆ. ಬೀಜ ಕಾಯ್ದೆಯಡಿಯಲ್ಲಿ ಸಂಗ್ರಹಿಸಲಾದ ದಂಡ ಮತ್ತು ವಸೂಲಿಗಳನ್ನು ಈ ನಿಧಿಗಳಿಗೆ ಜಮಾ ಮಾಡಲಾಗುತ್ತದೆ. ಬೀಜ ವಿಫಲತೆಯಿಂದ ರೈತನಿಗೆ ನಷ್ಟ ಉಂಟಾದ ಸಂದರ್ಭದಲ್ಲಿ, ಪರಿಶೀಲನಾ ಸಮಿತಿಯು 15 ದಿನಗಳಲ್ಲಿ ಪರಿಹಾರವನ್ನು ಖಾತ್ರಿಪಡಿಸುತ್ತದೆ. ಗ್ರಾಹಕ ಸಂರಕ್ಷಣಾ ಕಾಯ್ದೆಯಡಿಯೂ ಪರಿಹಾರವನ್ನು ಕೋರಲು ರೈತರಿಗೆ ಹಕ್ಕು ಇರುತ್ತದೆ.
ರೈತರೊಂದಿಗೆ ಸಮಾಲೋಚನೆ ಮುಂದುವರಿಯಲಿದೆ
ತಮ್ಮ ಅನುಭವ ಮತ್ತು ಸಲಹೆಗಳನ್ನು ಹಂಚಿಕೊಂಡಿದ್ದಕ್ಕಾಗಿ ರೈತ ಸಂಘಟನೆಯ ಮುಖಂಡರಿಗೆ ಶ್ರೀ ಚೌಹಾಣ್ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಎಲ್ಲಾ ಸಲಹೆಗಳನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಹೇಳಿದರು. ಸೂಕ್ತವೆನಿಸುವ ಸಲಹೆಗಳನ್ನು ಅಂತಿಮ ಕರಡಿನಲ್ಲಿ ಸೇರಿಸಲು ಪರಿಗಣಿಸಲಾಗುವುದು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ರೈತರ ಹಿತಾಸಕ್ತಿಯನ್ನು ಕೇಂದ್ರದಲ್ಲಿಟ್ಟುಕೊಂಡು, ಅವರೊಂದಿಗೆ ಸಮಾಲೋಚನೆ ಮತ್ತು ಸಂವಾದದ ಮೂಲಕ ನೀತಿಗಳನ್ನು ರೂಪಿಸಲು ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು. ಪ್ರಸ್ತಾವಿತ ಶಾಸನವು ಭಾರತೀಯ ರೈತರನ್ನು ನಕಲಿ ಮತ್ತು ಕಳಪೆ ಬೀಜಗಳಿಂದ ರಕ್ಷಿಸಲು ಹಾಗೂ ಹೆಚ್ಚು ಹೊಣೆಗಾರಿಕೆಯುಳ್ಳ ಬೀಜ ನಿಯಂತ್ರಣ ವ್ಯವಸ್ಥೆಯನ್ನು ನಿರ್ಮಿಸಲು ಪ್ರಮುಖ ಹೆಜ್ಜೆಯಾಗಿದೆ ಎಂದು ಸಚಿವರು ಹೇಳಿದರು. ಇತರ ಪಾಲುದಾರರೊಂದಿಗೂ ಸಮಾಲೋಚನೆ ನಡೆಸಲಾಗುತ್ತಿದ್ದು, ರೈತರೇ ಪ್ರಕ್ರಿಯೆಯ ಕೇಂದ್ರಬಿಂದುವಾಗಿದ್ದಾರೆ ಎಂದು ಅವರು ತಿಳಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮೃದ್ಧ, ಸಶಕ್ತ ಮತ್ತು ಸ್ವಾವಲಂಬಿ ರೈತರ ಪರಿಕಲ್ಪನೆಯನ್ನು ನನಸಾಗಿಸುವ ಪ್ರಯತ್ನದ ಭಾಗವೇ ಈ ಪ್ರಸ್ತಾವಿತ ಶಾಸನವಾಗಿದೆ ಎಂದು ಶ್ರೀ ಚೌಹಾಣ್ ಹೇಳಿದರು.
*****
(ಪ್ರಕಟಣೆ ಐ.ಡಿ.: 2309048)
ವಿಸಿಟರ್ ಕೌಂಟರ್ : 10