ಕೃಷಿ ಸಚಿವಾಲಯ
ನವದೆಹಲಿಯಲ್ಲಿ ನಡೆದ ಕೃಷಿ ಮತ್ತು ಅರಣ್ಯ ಕುರಿತ 9ನೇ ಆಸಿಯಾನ್–ಭಾರತ ಸಚಿವ ಮಟ್ಟದ ಸಭೆ ಮತ್ತು 10ನೇ ಆಸಿಯಾನ್–ಭಾರತ ಕೃಷಿ ಕಾರ್ಯಾಚರಣೆ ತಂಡದ ತಂಡದ ಸಭೆ
ಪ್ರಕಟಣಾ ದಿನಾಂಕ:
09 SEP 2026 8:09PM by PIB Bengaluru
2026ರ ಸೆಪ್ಟೆಂಬರ್ 9 ರಂದು ನವದೆಹಲಿಯಲ್ಲಿ ನಡೆದ ಕೃಷಿ ಮತ್ತು ಅರಣ್ಯ ಕುರಿತ 9ನೇ ಆಸಿಯಾನ್-ಭಾರತ ಸಚಿವ ಮಟ್ಟದ ಸಭೆಯು, ಹೆಚ್ಚು ಆಹಾರ-ಸುರಕ್ಷಿತ, ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಕೃಷಿ ಭವಿಷ್ಯವನ್ನು ನಿರ್ಮಿಸುವ ಭಾರತ ಮತ್ತು ಆಸಿಯಾನ್ ದೇಶಗಳ ಜಂಟಿ ಬದ್ಧತೆಯನ್ನು ಪುನರುಚ್ಚರಿಸಿತು. ಫಿಲಿಪೈನ್ಸ್‌ನ ಕೃಷಿ ಇಲಾಖೆಯ ಕಾರ್ಯದರ್ಶಿ ಗೌರವಾನ್ವಿತ ಫ್ರಾನ್ಸಿಸ್ಕೋ ಪಿ. ತಿಯು ಲಾರೆಲ್ ಮತ್ತು ಭಾರತದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯು ಕೃಷಿ ಮತ್ತು ಅರಣ್ಯ ಕ್ಷೇತ್ರದಲ್ಲಿ ಪ್ರಾಯೋಗಿಕ, ರೈತ-ಕೇಂದ್ರಿತ ಸಹಕಾರ ಮತ್ತು ಆಸಿಯಾನ್-ಭಾರತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ಹೆಚ್ಚಿನ ಒತ್ತು ನೀಡಿತು.
ಸುಸ್ಥಿರ ಮತ್ತು ಸ್ಥಿತಿಸ್ಥಾಪಕ ಅಭಿವೃದ್ಧಿಯನ್ನು ಮುನ್ನಡೆಸಲು 'ಆಸಿಯಾನ್ 2045: ನಮ್ಮ ಹಂಚಿಕೆಯ ಭವಿಷ್ಯ' ಮತ್ತು 'ಆಸಿಯಾನ್ ಆಹಾರ, ಕೃಷಿ ಮತ್ತು ಅರಣ್ಯ ವಲಯದ ಯೋಜನೆ 2026–2030' ಅನ್ನು ಕಾರ್ಯತಂತ್ರದ ಚೌಕಟ್ಟುಗಳಾಗಿ ಸಚಿವರು ಸ್ವಾಗತಿಸಿದರು. ನೀತಿ ಸಂವಾದ, ಡಿಜಿಟಲ್ ನಾವೀನ್ಯತೆ, ತಂತ್ರಜ್ಞಾನ ಸಹಕಾರ, ಜಂಟಿ ಸಂಶೋಧನೆ, ಸಾಮರ್ಥ್ಯ ವರ್ಧನೆ ಮತ್ತು ರೈತರ ವಿನಿಮಯವನ್ನು ಒಳಗೊಂಡ ಆದ್ಯತೆಗಳೊಂದಿಗೆ 'ಕೃಷಿ ಮತ್ತು ಅರಣ್ಯ ಸಹಕಾರಕ್ಕಾಗಿ ಆಸಿಯಾನ್-ಭಾರತ ಮಧ್ಯಮ-ಅವಧಿ ಕ್ರಿಯಾ ಯೋಜನೆ 2026–2030' ರ ಅಳವಡಿಕೆ ಮತ್ತು ಅನುಷ್ಠಾನವನ್ನು ಅವರು ಎದುರುನೋಡಿದರು.
ಈ ಸಭೆಯು ಹವಾಮಾನ-ಸ್ಥಿತಿಸ್ಥಾಪಕ ಕೃಷಿ, ಕಡಿಮೆ-ಉತ್ಸರ್ಜನ ಭತ್ತದ ಬೇಸಾಯ, ನೀರಿನ ಉತ್ಪಾದಕತೆ, ಎಐ-ಚಾಲಿತ (AI) ಡಿಜಿಟಲ್ ಕೃಷಿ, ಮಣ್ಣಿನ ಆರೋಗ್ಯ, ಆಹಾರ ಸುರಕ್ಷತೆ, ಕೊಯ್ಲೋತ್ತರ ನಿರ್ವಹಣೆ, ವೃತ್ತಾಕಾರದ ಜೈವಿಕ ಅರ್ಥವ್ಯವಸ್ಥೆ, ಕೃಷಿ ಅರಣ್ಯ ಮತ್ತು ಸ್ಥಿತಿಸ್ಥಾಪಕ ಮೌಲ್ಯ ಸರಪಳಿಗಳನ್ನು ಪ್ರಾಯೋಗಿಕ ಹಾಗೂ ವಿಸ್ತರಿಸಬಹುದಾದ ಸಹಕಾರದ ಪ್ರಮುಖ ಕ್ಷೇತ್ರಗಳಾಗಿ ಗುರುತಿಸಿತು. ಕೃಷಿ ನಾವೀನ್ಯತೆಗಳ ವ್ಯಾಪಕ ಅಳವಡಿಕೆಯನ್ನು ವೇಗಗೊಳಿಸಲು ಸಂಶೋಧನಾ ಸಂಸ್ಥೆಗಳು, ತಂತ್ರಜ್ಞಾನ ಅಭಿವೃದ್ಧಿಪಡಿಸುವವರು, ವಿಸ್ತರಣಾ ಸಂಸ್ಥೆಗಳು, ಖಾಸಗಿ ವಲಯ ಮತ್ತು ರೈತರ ನಡುವೆ ಬಲವಾದ ಕೊಂಡಿಯನ್ನು ಏರ್ಪಡಿಸುವುದಕ್ಕೆ ಸಚಿವರು ಒತ್ತು ನೀಡಿದರು.
ಹವಾಮಾನ ಬದಲಾವಣೆ, ವೈಪರೀತ್ಯದ ಹವಾಮಾನ ಘಟನೆಗಳು, ಭೂರಾಜಕೀಯ ಮತ್ತು ಆರ್ಥಿಕ ಅನಿಶ್ಚಿತತೆಗಳು, ಉತ್ಪಾದನಾ ವೆಚ್ಚಗಳ ಮಾರುಕಟ್ಟೆಯ ಅಸ್ಥಿರತೆ, ವ್ಯಾಪಾರ ಅಡೆತಡೆಗಳು ಮತ್ತು ಗಡಿಯಾಚೆಗಿನ ಕೀಟಗಳು ಹಾಗೂ ರೋಗಗಳಂತಹ ಉದಯೋನ್ಮುಖ ಸವಾಲುಗಳನ್ನು ಎದುರಿಸಲು ಹೆಚ್ಚಿನ ಸಹಕಾರದ ಅಗತ್ಯವನ್ನು ಗುರುತಿಸುವ ಜೊತೆಗೆ, ಮಾರುಕಟ್ಟೆ ಸಂಪರ್ಕ, ಮೌಲ್ಯವರ್ಧನೆ ಮತ್ತು ಕೃಷಿ ಹಾಗೂ ಅರಣ್ಯ ಲಾಜಿಸ್ಟಿಕ್ಸ್ ಅನ್ನು ಬಲಪಡಿಸುವುದಕ್ಕೆ ಸಭೆಯು ಮತ್ತಷ್ಟು ಒತ್ತು ನೀಡಿತು.
ಕೃಷಿ ಮತ್ತು ಅರಣ್ಯ ಸಹಕಾರದತ್ತ ಭಾರತ ಮತ್ತು ಆಸಿಯಾನ್‌ನ ಸುದೀರ್ಘ ಪಾಲುದಾರಿಕೆ ಮತ್ತು ಜಂಟಿ ಬದ್ಧತೆಯನ್ನು ಸಂಕೇತಿಸುವ 'ಕೃಷಿ ಮತ್ತು ಅರಣ್ಯಕ್ಕಾಗಿ ಭಾರತ-ಆಸಿಯಾನ್ ಮೈತ್ರಿ ಧಾನ್ಯ ತೆನೆ' ಅನಾವರಣಗೊಳಿಸಿದ್ದು ಈ ಸಭೆಯ ಪ್ರಮುಖ ಮುಖ್ಯಾಂಶವಾಗಿತ್ತು.
ಕಾರ್ಯಕ್ರಮದ ಭಾಗವಾಗಿ, ಆಗಮಿಸಿದ್ದ ಗಣ್ಯರು ಪೂಸಾದಲ್ಲಿರುವ ಐಸಿಎಆರ್–ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಗೆ (IARI) ಭೇಟಿ ನೀಡಿದರು. ಇದರಲ್ಲಿ ಸಂರಕ್ಷಿತ ಬೇಸಾಯ ಕೇಂದ್ರ, ಸಜ್ಜೆ ಮತ್ತು ಭತ್ತದ ಗದ್ದೆಗಳು, ನಾನಾಜಿ ದೇಶ್‌ಮುಖ್ ಫಿನೋಮಿಕ್ಸ್ ಸೌಲಭ್ಯ ಮತ್ತು ಐಸಿಎಆರ್–ರಾಷ್ಟ್ರೀಯ ಸಸ್ಯ ತಳಿ ಸಂಪನ್ಮೂಲಗಳ ಬ್ಯೂರೋದ (NBPGR) ಜೀನ್ ಬ್ಯಾಂಕ್ ಒಳಗೊಂಡಿದ್ದವು. ಈ ಭೇಟಿಯು ಬೆಳೆ ಸಂಶೋಧನೆ, ಆಧುನಿಕ ಕೃಷಿ ಪದ್ಧತಿಗಳು ಮತ್ತು ಸಸ್ಯ ತಳಿ ಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಭಾರತ ಸಾಧಿಸಿರುವ ಪ್ರಗತಿಯ ಕುರಿತು ನಿಯೋಗಕ್ಕೆ ಸ್ಪಷ್ಟ ಒಳನೋಟವನ್ನು ಒದಗಿಸಿತು. ಈ ನಿಯೋಗದ ನೇತೃತ್ವವನ್ನು ಡಿಎಆರ್‌ಇ (DARE) ಕಾರ್ಯದರ್ಶಿ ಹಾಗೂ ಐಸಿಎಆರ್ (ICAR) ಮಹಾನಿರ್ದೇಶಕರಾದ ಡಾ. ಎಮ್. ಎಲ್. ಜಾಟ್ ವಹಿಸಿದ್ದರು.
ಆಸಿಯಾನ್ ಸಚಿವರು/ನಿಯೋಗದ ಮುಖ್ಯಸ್ಥರು ಭಾರತೀಯ ವಿಜ್ಞಾನಿಗಳು, ಸಂಶೋಧಕರು ಮತ್ತು ವಾಣಿಜ್ಯ/ಉದ್ಯಮ ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ಸಂವಾದ ನಡೆಸಿದರು, ಇದು ಕೃಷಿ ಮತ್ತು ಅರಣ್ಯ ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ, ತಂತ್ರಜ್ಞಾನ ವಿನಿಮಯ ಮತ್ತು ಉದ್ಯಮದ ಸಹಕಾರಕ್ಕಾಗಿ ಬಲವಾದ ಬಾಂಧವ್ಯವನ್ನು ಬೆಳೆಸಿತು.
ಕೃಷಿ ಮತ್ತು ಅರಣ್ಯ ಕುರಿತ 10ನೇ ಆಸಿಯಾನ್–ಭಾರತ ಸಚಿವ ಮಟ್ಟದ ಸಭೆಯನ್ನು 2028 ರಲ್ಲಿ ಕರೆಯಲು ಸಭೆಯಲ್ಲಿ ಸಮ್ಮತಿಸಲಾಯಿತು.
10ನೇ ಆಸಿಯಾನ್–ಭಾರತ ಕೃಷಿ ಕಾರ್ಯಾಚರಣೆ ತಂಡದ ಸಭೆ
10ನೇ ಆಸಿಯಾನ್–ಭಾರತ ಕೃಷಿ ಕಾರ್ಯಾಚರಣೆ ತಂಡದ ಸಭೆಯು 2026ರ ಸೆಪ್ಟೆಂಬರ್ 8 ರಂದು ನವದೆಹಲಿಯಲ್ಲಿ ನಡೆಯಿತು. ಕೃಷಿ ಮತ್ತು ಅರಣ್ಯ ಕ್ಷೇತ್ರದಲ್ಲಿ ಆಸಿಯಾನ್-ಭಾರತ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚಿಸಲು 11 ಆಸಿಯಾನ್ ಸದಸ್ಯ ರಾಷ್ಟ್ರಗಳ 45 ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಈ ಕಾರ್ಯಾಚರಣೆ ತಂಡದ ಸಭೆಯ ಜಂಟಿ ಅಧ್ಯಕ್ಷತೆಯನ್ನು ಭಾರತ ಮತ್ತು ಫಿಲಿಪೈನ್ಸ್ ವಹಿಸಿದ್ದವು. ಭಾರತದ ಪರವಾಗಿ ಡಿಎಆರ್‌ಇ ಕಾರ್ಯದರ್ಶಿ ಹಾಗೂ ಐಸಿಎಆರ್ ಮಹಾನಿರ್ದೇಶಕರಾದ ಡಾ. ಎಮ್. ಎಲ್. ಜಾಟ್ ನೇತೃತ್ವ ವಹಿಸಿದ್ದರೆ, ಫಿಲಿಪೈನ್ಸ್ ಆಸಿಯಾನ್ ಅಧ್ಯಕ್ಷತೆಯನ್ನು ಪ್ರತಿನಿಧಿಸಿತ್ತು.
ಸಚಿವ ಮಟ್ಟದ ಸಭೆಯ ಪಕ್ಕದಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನವು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಐಸಿಟಿ, ಪಶುಸಂಗೋಪನಾ ವಿಜ್ಞಾನ, ಮೀನುಗಾರಿಕೆ ವಿಜ್ಞಾನ ಮತ್ತು ತೋಟಗಾರಿಕೆ ವಿಜ್ಞಾನದಾದ್ಯಂತ ಐಸಿಎಆರ್ ತಂತ್ರಜ್ಞಾನಗಳನ್ನು ಪ್ರದರ್ಶಿಸಿತು, ಇದು ಸುಸ್ಥಿರ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಕೃಷಿಯಲ್ಲಿ ಭಾರತದ ಪ್ರಗತಿಯನ್ನು ಉಲ್ಲೇಖಿಸಿತು.
ಈ ಪ್ರದರ್ಶನವು ಮಣ್ಣಿನ ಆರೋಗ್ಯ ಮತ್ತು ಸ್ಥಿತಿಸ್ಥಾಪಕ ಕೃಷಿ ಪರಿಹಾರಗಳು; 3,500ಕ್ಕೂ ಹೆಚ್ಚು ಕೆವಿಕೆ ತಜ್ಞರು ಮತ್ತು 4,500 ಐಸಿಎಆರ್ ವಿಜ್ಞಾನಿಗಳ ಮೂಲಕ 13 ಭಾರತೀಯ ಭಾಷೆಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಹಳ್ಳಿಗಳಾದ್ಯಂತ 3.03 ಕೋಟಿ ನೋಂದಾಯಿತ ರೈತರಿಗೆ ಬೆಂಬಲ ನೀಡುವ 'ಕಿಸಾನ್ ಸಾರಥಿ'; ಸ್ವದೇಶಿ ಆಫ್ರಿಕನ್ ಹಂದಿ ಜ್ವರ ಲಸಿಕೆ ಮತ್ತು ರೋಗ ಮುನ್ಸೂಚನೆ ವ್ಯವಸ್ಥೆಗಳು; 40–50 ಟನ್ ಸಾಮರ್ಥ್ಯದ, 120 ದಿನಗಳ ಸೀಗಡಿ ಕೃಷಿ ಮಾದರಿ ಸೇರಿದಂತೆ ಮೀನುಗಾರಿಕೆ ನಾವೀನ್ಯತೆಗಳು; ಮತ್ತು ವೈವಿಧ್ಯಮಯ ಬೆಳೆಗಳು, ಸಾಂಬಾರ ದಿನಸಿಗಳು, ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಏರೋಪೋನಿಕ್ಸ್ ಮೂಲಕ ವೈರಸ್-ರಹಿತ ಆಲೂಗಡ್ಡೆ ಬಿತ್ತನೆ ಬೀಜ ಉತ್ಪಾದನೆಯನ್ನು ಒಳಗೊಂಡ ತೋಟಗಾರಿಕಾ ತಂತ್ರಜ್ಞಾನಗಳನ್ನು ಒಳಗೊಂಡಿತ್ತು.
ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು 2026ರ ಸೆಪ್ಟೆಂಬರ್ 8 ರಂದು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
*****
(ಪ್ರಕಟಣೆ ಐ.ಡಿ.: 2308556)
ವಿಸಿಟರ್ ಕೌಂಟರ್ : 14