ರೈಲ್ವೇ ಸಚಿವಾಲಯ
azadi ka amrit mahotsav

ಅಶ್ವಿನಿ ವೈಷ್ಣವ್ ಅವರಿಂದ ರೈಲ್ವೆ ಸುರಕ್ಷತೆ, ತಾಂತ್ರಿಕ ಮತ್ತು ನಿರ್ವಹಣೆಗೆ ಸಂಬಂಧಿಸಿದ ಕೊರತೆಗಳ ಸುಧಾರಣೆಗೆ ನಿರ್ದೇಶನಗಳು


ಕಳಪೆ ಗುಣಮಟ್ಟದ ಪೂರೈಕೆ ಮತ್ತು ಉದ್ದೇಶಪೂರ್ವಕ ನಿರ್ಲಕ್ಷ್ಯದ ವಿರುದ್ಧ ಕಠಿಣ ಕ್ರಮ

ಪ್ರಕಟಣಾ ದಿನಾಂಕ: 03 SEP 2026 7:23PM by PIB Bengaluru

ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ರೈಲ್ವೆ ಭವನದಲ್ಲಿ ಸುದೀರ್ಘ ಸುರಕ್ಷತಾ ಪರಾಮರ್ಶೆ ಸಭೆ ನಡೆಸಿದರು. ಈ ಸಭೆಯಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO), ರೈಲ್ವೆ ಮಂಡಳಿಯ ಸದಸ್ಯರು, ವಲಯ ರೈಲ್ವೆಗಳ ಜನರಲ್ ಮ್ಯಾನೇಜರ್‌ಗಳು, ಡೈರೆಕ್ಟರ್ ಜನರಲ್‌ಗಳು (DGs) ಮತ್ತು ಡಿವಿಜನಲ್ ರೈಲ್ವೆ ಮ್ಯಾನೇಜರ್‌ಗಳು (DRMs) ಪಾಲ್ಗೊಂಡಿದ್ದರು.

ಸಿಗ್ನಲಿಂಗ್‌ಗೆ ಸಂಬಂಧಿಸಿದ ತಾಂತ್ರಿಕ ಕೊರತೆಗಳನ್ನು ಮಿಷನ್ ಮೋಡ್‌ನಲ್ಲಿ ಬಗೆಹರಿಸಲು ರೈಲ್ವೆ ಸಚಿವರು ನಿರ್ದೇಶನ ನೀಡಿದರು. ಓವರ್‌ಹೆಡ್ ಎಕ್ವಿಪ್‌ಮೆಂಟ್ (OHE) ವಿಷಯಕ್ಕೆ ಸಂಬಂಧಿಸಿದಂತೆ, ನಿಗದಿತ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ಬಿಡಿಭಾಗಗಳ ನಿರ್ವಹಣೆ ಮತ್ತು ಬದಲಾವಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.

ಕಾರ್ಖಾನೆಗಳಲ್ಲಿ (ವರ್ಕ್‌ಶಾಪ್‌ಗಳಲ್ಲಿ) ಬೋಗಿಗಳ, ವಿಶೇಷವಾಗಿ ಬೆಂಕಿ ಸುರಕ್ಷತೆಗೆ ಸಂಬಂಧಿಸಿದ ವಿದ್ಯುತ್ ಸರ್ಕ್ಯೂಟ್‌ಗಳು ಮತ್ತು ವೈರಿಂಗ್ ನಿರ್ವಹಣೆಗೆ ವಿಶೇಷ ಗಮನ ನೀಡುವ ಮೂಲಕ ನಿರ್ವಹಣಾ ಮಟ್ಟವನ್ನು ಸುಧಾರಿಸಲು ರೈಲ್ವೆ ಸಚಿವರು ಸೂಚಿಸಿದರು. ಸರಕು ಹಾಗೂ ಪ್ರಯಾಣಿಕ ಬೋಗಿಗಳ ಕಪ್ಲರ್‌ಗಳು ಮತ್ತು ಚಕ್ರಗಳ ನಿರ್ವಹಣೆಗೆ ಗಮನ ಕೊಡುವಂತೆಯೂ ಅವರು ನಿರ್ದೇಶಿಸಿದರು.

ಟ್ರ್ಯಾಕ್ (ರೈಲು ಹಳಿ) ನಿರ್ವಹಣೆಗೆ ಸಂಬಂಧಿಸಿದಂತೆ, ಪಾಯಿಂಟ್ ಮೆಷಿನ್‌ಗಳು, ಟರ್ನ್‌ಔಟ್‌ಗಳು ಮತ್ತು ಫಾಸ್ಟನರ್‌ಗಳ ಸೂಕ್ತ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಒತ್ತು ನೀಡಲಾಯಿತು. ಫಾಸ್ಟನರ್‌ಗಳು ಇಲ್ಲದಿರುವ ಕಡೆಗಳಲ್ಲಿ ಅವುಗಳನ್ನು ಅಳವಡಿಸಲು ವ್ಯವಸ್ಥೆ ಮಾಡಲು ಸೂಚಿಸಲಾಯಿತು.

ಕಳಪೆ ಗುಣಮಟ್ಟದ ವಸ್ತುಗಳ ಪೂರೈಕೆಯ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ದೇಶಿಸಲಾಯಿತು. ಸಿಗ್ನಲಿಂಗ್ ಮತ್ತು ಟೆಲಿಕಮ್ಯುನಿಕೇಶನ್ (S&T), OHE, ಟ್ರ್ಯಾಕ್, ಬೋಗಿಗಳು ಅಥವಾ ವ್ಯಾಗನ್‌ಗಳಿಗೆ ಸಂಬಂಧಿಸಿದ ವಸ್ತುಗಳ ಗುಣಮಟ್ಟದಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ, ಸಂಬಂಧಪಟ್ಟ ಪೂರೈಕೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಉದ್ದೇಶಪೂರ್ವಕ ನಿರ್ಲಕ್ಷ್ಯದ ಪ್ರಕರಣಗಳಲ್ಲಿ, ಸಂಬಂಧಪಟ್ಟ ಪೂರೈಕೆದಾರರನ್ನು ಕಾಯಂ ಆಗಿ ಬ್ಲ್ಯಾಕ್‌ಲಿಸ್ಟ್‌ಗೆ (ಕಪ್ಪು ಪಟ್ಟಿಗೆ) ಸೇರಿಸಲು ನಿರ್ದೇಶನ ನೀಡಲಾಯಿತು.

ಹಬ್ಬಗಳು ಅಥವಾ ವಿಶೇಷ ಸಂದರ್ಭಗಳ  ಕಾರಣದಿಂದಾಗಿ ಪ್ರಯಾಣಿಕರ ಜನಸಂದಣಿ ಇದ್ದಕ್ಕಿದ್ದಂತೆ ಹೆಚ್ಚಾಗುವ ಸಾಧ್ಯತೆಯಿರುವ ಸ್ಥಳಗಳಲ್ಲಿ ಸೂಕ್ತ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಲು, ಎಲ್ಲಾ ಅಧಿಕಾರಿಗಳು ಜಿಲ್ಲಾ ಮತ್ತು ರಾಜ್ಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ ಮುಂಗಡ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರೈಲ್ವೆ ಸಚಿವರು ಸೂಚಿಸಿದರು.

 

*****


(ಪ್ರಕಟಣೆ ಐ.ಡಿ.: 2306615) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Gujarati , Odia , Telugu