ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ನಶಾ ಮುಕ್ತ ಭಾರತ ಅಭಿಯಾನದ 6ನೇ ವಾರ್ಷಿಕೋತ್ಸವದ ಅಂಗವಾಗಿ ಮಾದಕ ದ್ರವ್ಯ ಬಳಕೆ ವಿರುದ್ಧ ರಾಷ್ಟ್ರದ ಪ್ರತಿಜ್ಞೆ
ನಶಾ ಮುಕ್ತ ಭಾರತ ಅಭಿಯಾನದಡಿಯಲ್ಲಿ 13.71 ಕೋಟಿಗೂ ಹೆಚ್ಚು ಯುವಜನರು ಮತ್ತು 10.65 ಕೋಟಿ ಮಹಿಳೆಯರು ಸೇರಿ 34.56 ಕೋಟಿಗೂ ಹೆಚ್ಚು ನಾಗರಿಕರಿಗೆ ರಾಷ್ಟ್ರವ್ಯಾಪಿ ಅಭಿಯಾನಗಳ ಮೂಲಕ ಜಾಗೃತಿ
ನಶಾ ಮುಕ್ತ ಭಾರತ ಅಭಿಯಾನದಡಿ https://nashamukt.dosje.gov.in/epledge ಮೂಲಕ ಇ-ಪ್ರತಿಜ್ಞೆ
ಪ್ರಕಟಣಾ ದಿನಾಂಕ:
03 SEP 2026 7:09PM by PIB Bengaluru
ನಶಾ ಮುಕ್ತ ಭಾರತ ಅಭಿಯಾನ (ಎನ್ ಎಂ ಬಿ ಎ) ದ 6 ನೇ ವಾರ್ಷಿಕೋತ್ಸವದ ಅಂಗವಾಗಿ ಈ ತಿಂಗಳು ಮಾದಕ ದ್ರವ್ಯ ಬಳಕೆ ವಿರುದ್ಧ ರಾಷ್ಟ್ರೀಯ ಸಾಮೂಹಿಕ ಪ್ರತಿಜ್ಞೆ ಕೈಗೊಳ್ಳುವುದನ್ನು ನಿಗದಿಪಡಿಸಲಾಗಿದೆ.
ಇದಕ್ಕಾಗಿ ವೈಯಕ್ತಿಕ ಉಪಸ್ಥಿತಿ ಮತ್ತು ಆನ್ ಲೈನ್ ಭಾಗವಹಿಸುವಿಕೆಯ ಮೂಲಕ 10 ಕೋಟಿಗೂ ಹೆಚ್ಚು ನಾಗರಿಕರನ್ನು ಸಜ್ಜುಗೊಳಿಸುವ ಗುರಿಯನ್ನು ನೋಡಲ್ ಸಚಿವಾಲಯವಾದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹೊಂದಿದೆ.
ಈ ಸಂಬಂಧ, ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾದಕ ವಸ್ತು ತಡೆಗಟ್ಟುವಿಕೆ) ಡಾ. ಸಂದೀಪ್ ರೇವಾಜಿ ರಾಥೋಡ್ ಅವರ ಅಧ್ಯಕ್ಷತೆಯಲ್ಲಿಂದು ರಾಷ್ಟ್ರ ರಾಜಧಾನಿಯಲ್ಲಿ ಎರಡು ಉನ್ನತ ಮಟ್ಟದ ಸಮನ್ವಯ ಸಭೆಗಳು ನಡೆದವು. ನಶಾ ಮುಕ್ತ ಭಾರತ ಅಭಿಯಾನದ ಉದ್ದೇಶಗಳಿಗೆ ಅನುಗುಣವಾಗಿ ವೈಯಕ್ತಿಕ ಪಾಲ್ಗೊಳ್ಳುವಿಕೆ ಮತ್ತು ಆನ್ಲೈನ್ ಭಾಗವಹಿಸುವಿಕೆ ವಿಧಾನದ ಮೂಲಕ ರಾಷ್ಟ್ರೀಯ ಪ್ರತಿಜ್ಞೆ ಕೈಗೊಳ್ಳಲು ನಿಗದಿತ ಗುರಿಯಷ್ಟು ಸಂಖ್ಯೆಯ ನಾಗರಿಕರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಯೋಜನೆ ಮತ್ತು ಸಮಗ್ರ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ (DoSJE)ಯ ಮಾದಕ ವಸ್ತು ವಿಭಾಗದ (DP) ನಿರ್ದೇಶಕರಾದ ಶ್ರೀ ಆಸ್ತಿಕ್ ಕುಮಾರ್ ಪಾಂಡೆ, ಅಧೀನ ಕಾರ್ಯದರ್ಶಿ ಶ್ರೀ ಅರುಣ್ ಕುಮಾರ್ ಕರ್ಣ್ ಮತ್ತು ಸಚಿವಾಲಯದ ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಸಭೆಯಲ್ಲಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಪ್ರತಿನಿಧಿಗಳು ಅನುಷ್ಠಾನ ಕಾರ್ಯತಂತ್ರಕ್ಕಾಗಿ ಪ್ರಗತಿಯಲ್ಲಿರುವ ಕೆಲಸಗಳನ್ನು ಪರಿಶೀಲಿಸಿದರು. ರಾಷ್ಟ್ರವ್ಯಾಪಿ ಪ್ರತಿಜ್ಞೆಗಾಗಿ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು, ಸ್ವಯಂಸೇವಕರು ಮತ್ತು ಇತರ ಪಾಲುದಾರರನ್ನು ಸಜ್ಜುಗೊಳಿಸುವಲ್ಲಿ ಸಂಬಂಧಪಟ್ಟ ಸಚಿವಾಲಯಗಳು ಮತ್ತು ಇಲಾಖೆಗಳ ಪಾತ್ರವನ್ನು ಚರ್ಚಿಸಲಾಯಿತು.

ಸಾಮಾಜಿಕ ಸಂಸ್ಥೆ, ಸ್ವಯಂಸೇವಕ ಸಂಸ್ಥೆಗಳು, ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ಸಾಮಾಜಿಕ ಪ್ರಭಾವಿಗಳು ಮಾತ್ರವಲ್ಲದೇ ರೈಲ್ವೆ, ರಕ್ಷಣೆ, ನಾಗರಿಕ ರಕ್ಷಣೆ, ಯುವ ವ್ಯವಹಾರಗಳು ಮತ್ತು ಕ್ರೀಡೆ, ಶಾಲೆ ಮತ್ತು ಉನ್ನತ ಶಿಕ್ಷಣ, ಅಂಚೆ, ಪೊಲೀಸ್, ಸಿಎಪಿಎಫ್, ಎನ್ ಸಿ ಸಿ, ಆಯುಷ್, ಗ್ರಾಮೀಣಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಂದಾಯ ಸೇರಿದಂತೆ ಆಯಾ ಸಚಿವಾಲಯಗಳು ಮತ್ತು ಇಲಾಖೆಗಳಡಿಯಲ್ಲಿ ಬರುವ ಎಲ್ಲಾ ಅಂಗಸಂಸ್ಥೆ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪ್ರತಿಜ್ಞೆ ಸಮಾರಂಭಗಳನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಪಾಲ್ಗೊಳ್ಳುವಿಕೆಯ ವಿವರಗಳು ಮತ್ತು ಕ್ಷೇತ್ರಕಾರ್ಯಗಳ ಏಕರೂಪದ ವರದಿಗೆ ಕಾರ್ಯವಿಧಾನದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಯೋಜನೆ ಮತ್ತು ಸಂಘಟಿತ ಕಾರ್ಯತಂತ್ರದ ಕುರಿತಾಗಿ ಪವರ್ ಪಾಯಿಂಟ್ ಪ್ರಸ್ತುತಿಯೊಂದಿಗೆ ವಿವರವಾಗಿ ಚರ್ಚಿಸಲಾಯಿತು. ಇದರಲ್ಲಿ ಸಂಬಂಧಪಟ್ಟ ಇಲಾಖೆಗಳು ಮತ್ತು ಸಚಿವಾಲಯಗಳ ಎಲ್ಲಾ ಪ್ರತಿನಿಧಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಎನ್ ಎಂ ಬಿ ಎ ಪ್ರತಿಜ್ಞೆಯು ಮಾದಕ ವ್ಯಸನಿಗಳನ್ನು ಪತ್ತೆ ಮಾಡಿ ಸಂಪರ್ಕಿಸಲು ಸ್ವಯಂಸೇವಕರಾಗಲು ಒಂದು ಉಪಕ್ರಮವಾಗಿದೆ. ಮಾದಕ ದ್ರವ್ಯಗಳಿಂದ ದೂರವಿರಲು ಜನರಲ್ಲಿ ಹೊಣೆಗಾರಿಕೆಯ ಪ್ರಜ್ಞೆಯನ್ನು ತುಂಬಲು ಜವಾಬ್ದಾರಿಯುತ ನಡವಳಿಕೆಯನ್ನು ಉತ್ತೇಜಿಸುವುದು ಹಾಗೂ ಪಾಲುದಾರರು ಸಾಮಾನ್ಯ ಗುರಿಯತ್ತ ಒಟ್ಟಾಗಿ ಕಾರ್ಯನಿರ್ವಹಿಸುವುದನ್ನು ಪ್ರೋತ್ಸಾಹಿಸಲು ಏಕತೆ ಮತ್ತು ಬದ್ಧತೆಯ ಪ್ರಜ್ಞೆಯನ್ನು ಉತ್ತೇಜಿಸುವುದು ಮತ್ತು ಪೋಷಿಸುವುದು ಈ ಪ್ರತಿಜ್ಞೆಯ ಉದ್ದೇಶವಾಗಿದೆ. ಮುಂದುವರಿದು, ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಿಸಲು ಸಕ್ರಿಯವಾಗಿ ಕೊಡುಗೆ ನೀಡಲು ಯುವಜನರನ್ನು ಸಬಲಗೊಳಿಸುವುದು ಕೂಡ ಈ ಪ್ರತಿಜ್ಞೆಯ ಉದ್ದೇಶವಾಗಿದೆ.
ಎನ್ ಎಮ್ ಬಿ ಎಯ ಇ-ಪ್ರತಿಜ್ಞೆಯ ಲಿಂಕ್ ಇಲ್ಲಿದೆ: https://nashamukt.dosje.gov.in/epledge
ಸಹಾಯವಾಣಿ ಸಂಖ್ಯೆ 14446 ರ ಮೂಲಕ ಮಾದಕ ವ್ಯಸನದಿಂದ ಹೊರಬರುವುದನ್ನು ಉತ್ತೇಜಿಸುವ ಮತ್ತು ಪ್ರೋತ್ಸಾಹಿಸುವ ಮಹತ್ವದ ಸಂದೇಶ ನೀಡುವ ಬಗ್ಗೆಯೂ ಕೇಂದ್ರೀಕರಿಸಲು ಸಭೆಯು ಗಮನ ಹರಿಸಿತು.

ನಶೆಯಿಂದ ಮುಕ್ತಗೊಳಿಸುವ ಮಿತ್ರರಾಗಲು ಇಲಾಖೆಯ ಅಧಿಕೃತ ಜಾಲತಾಣ https://nashamukt.dosje.gov.in/nasha-mukti-mitr ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಮೂಲಕ ನಾಗರಿಕರಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವ ಮನೋಭಾವವನ್ನು ಹೊರತರುವ ಬಗ್ಗೆಯೂ ಸಭೆ ಗಮನ ಕೇಂದ್ರೀಕರಿಸಿತು.
ದೇಶದಲ್ಲಿ ಮಾದಕ ವಸ್ತುಗಳ ಬೇಡಿಕೆಯನ್ನು ನಿಗ್ರಹಿಸಲು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2020ರ ಆಗಸ್ಟ್ 15 ರಂದು ನಶಾ ಮುಕ್ತ ಭಾರತ ಅಭಿಯಾನ (ಎನ್ ಎಂ ಬಿ ಎ) ಅನ್ನು ಪ್ರಾರಂಭಿಸಿತು. ಸಾಮೂಹಿಕ ಕ್ರಮದ ತುರ್ತು ಅಗತ್ಯವನ್ನು ಗುರುತಿಸಿರುವ ಸಚಿವಾಲಯವು, ತಡೆಗಟ್ಟುವಿಕೆ, ಮೌಲ್ಯಮಾಪನ, ಚಿಕಿತ್ಸೆ, ಪುನರ್ವಸತಿ, ನಂತರದ ಆರೈಕೆ, ಸಾರ್ವಜನಿಕ ಮಾಹಿತಿ ಪ್ರಸರಣ, ಸಮುದಾಯ ಜಾಗೃತಿ ಸೇರಿದಂತೆ ವಿವಿಧ ಉಪಕ್ರಮಗಳನ್ನು ಸಂಘಟಿಸುತ್ತದೆ.
ಮಾದಕ ದ್ರವ್ಯ ಬೇಡಿಕೆ ಕಡಿತಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್ ಎ ಪಿ ಡಿ ಡಿ ಆರ್) ಅಡಿಯಲ್ಲಿ ಸಚಿವಾಲಯವು ಸಮಗ್ರ ಮತ್ತು ಪುರಾವೆ ಆಧಾರಿತ ಕಾರ್ಯತಂತ್ರವನ್ನು ಜಾರಿಗೆ ತರುತ್ತಿದೆ. ಈ ಕಾರ್ಯತಂತ್ರವು ನವದೆಹಲಿಯ ಎಐಐಎಂಎಸ್ ನಲ್ಲಿರುವ ರಾಷ್ಟ್ರೀಯ ಔಷಧ ಅವಲಂಬನಾ ಚಿಕಿತ್ಸಾ ಕೇಂದ್ರ (ಎನ್ ಡಿ ಡಿ ಟಿ ಸಿ) ನಡೆಸಿದ ಭಾರತದಲ್ಲಿ ನಶೆಯ ವಸ್ತುವಿನ ಬಳಕೆಯ ಪ್ರಮಾಣ ಮತ್ತು ಮಾದರಿಯ ಕುರಿತಾದ ಮೊದಲ ರಾಷ್ಟ್ರೀಯ ಸಮೀಕ್ಷೆಯ ಮಾಹಿತಿಯನ್ನು ಆಧರಿಸಿದೆ.
ಮಾದದ ದ್ರವ್ಯ ಬಳಕೆ ತಡೆಗಟ್ಟುವಿಕೆಯ ಬಗ್ಗೆ ಶಿಕ್ಷಣ, ಜಾಗೃತಿ ಮೂಡಿಸುವಿಕೆ, ಸಮಾಲೋಚನೆ, ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಸಚಿವಾಲಯವು ಎನ್ ಎ ಪಿ ಡಿ ಡಿ ಆರ್ ಅಡಿಯಲ್ಲಿ, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಎನ್ ಜಿ ಒ ಗಳು ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಹಣಕಾಸಿನ ನೆರವು ನೀಡುತ್ತದೆ.
ಈವರೆಗೆ, ಈ ಅಭಿಯಾನವು ರಾಷ್ಟ್ರವ್ಯಾಪಿ ಜಾಗೃತಿ ಚಟುವಟಿಕೆಗಳ ಮೂಲಕ 13.71 ಕೋಟಿಗೂ ಹೆಚ್ಚು ಯುವಜನರು ಮತ್ತು 10.65 ಕೋಟಿ ಮಹಿಳೆಯರು ಸೇರಿದಂತೆ 34.56 ಕೋಟಿಗೂ ಹೆಚ್ಚು ನಾಗರಿಕರನ್ನು ತಲುಪಿದೆ. ಸಮುದಾಯ ಪಾಲ್ಗೊಳ್ಳುವಿಕೆಯನ್ನು ಬಲಪಡಿಸಲು 1.64 ಲಕ್ಷಕ್ಕೂ ಹೆಚ್ಚು ನಶಾ ಮುಕ್ತಿ ಮಿತ್ರರು (ಎನ್ ಎಂ ಎಂ) ಸಹ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.
ಇದು ಎನ್ ಎಂ ಬಿ ಎ ಪೋರ್ಟಲ್: https://www.dosje.gov.in/organisation/nasha-mukt-bharat-abhiyaan/
ಸಚಿವಾಲಯವು ಚಿಕಿತ್ಸಾ ಸೇವೆಗಳ ಲಭ್ಯತೆಯನ್ನು ಸುಧಾರಿಸಲು, ಎನ್ ಎಂ ಬಿ ಎ 2.0 ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಿದ್ದು, ನಾಗರಿಕರು ಹತ್ತಿರದ ವ್ಯಸನದಿಂದ ಮುಕ್ತಗೊಳಿಸುವ ಕೇಂದ್ರದ ವಿಳಾಸ ತಿಳಿಯಬಹುದಾಗಿದೆ.

ಈ ಲಿಂಕ್ ಮೂಲಕ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು: https://play.google.com/store/apps/details?id=com.dosje.nmba_app&hl=en_IN
ಪುನರ್ವಸತಿ ಮೂಲಸೌಕರ್ಯ ವಿಸ್ತರಿಸುತ್ತಾ, ತಡೆಗಟ್ಟುವಿಕೆಗೆ ಮಧ್ಯಸ್ಥಿಕೆ ಹೆಚ್ಚಿಸುವುದು, ಅನುಷ್ಠಾನ ಕಾರ್ಯವಿಧಾನಗಳನ್ನು ಸರಳೀಕರಿಸುವುದು ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಸರ್ಕಾರವು ಮಾದಕವಸ್ತು ಮುಕ್ತ ಮತ್ತು ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಂಡ ಭಾರತವಾಗುವತ್ತ ತನ್ನ ಬದ್ಧತೆಯನ್ನು ಬಲಪಡಿಸುವುದನ್ನು ಮುಂದುವರೆಸಿದೆ. ನಿರಂತರ ಸಮುದಾಯ ಪಾಲ್ಗೊಳ್ಳುವಿಕೆ, ಸುಧಾರಿತ ಆಡಳಿತ ಮತ್ತು ತಂತ್ರಜ್ಞಾನ-ಸಕ್ರಿಯ ಸೇವಾ ವಿತರಣೆಯ ಮೂಲಕ, ಸಚಿವಾಲಯವು ದುರ್ಬಲ ಸಮುದಾಯಗಳನ್ನು ರಕ್ಷಿಸಲು ಮತ್ತು ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುವುದನ್ನು ಉತ್ತೇಜಿಸಲು ಬದ್ಧವಾಗಿದೆ.
*****
(ಪ್ರಕಟಣೆ ಐ.ಡಿ.: 2306607)
ವಿಸಿಟರ್ ಕೌಂಟರ್ : 9