ರೈಲ್ವೇ ಸಚಿವಾಲಯ
ನೇಪಾಳದ ಹಠಾತ್ ಪ್ರವಾಹದ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್
'ನೇಪಾಳಗಂಜ್ ರಸ್ತೆ-ನಾನ್‌ಪಾರಾ-ಬಹ್ರೈಚ್' ಬ್ರಾಡ್ ಗೇಜ್ ರೈಲು ವಿಭಾಗವನ್ನು ಸರಳ ಕಾರ್ಯಕ್ರಮದಲ್ಲಿ ಪ್ರಾರಂಭಿಸಿದ ಮುಖ್ಯಮಂತ್ರಿ ಮತ್ತು ರೈಲ್ವೆ ಸಚಿವರು
ನೇಪಾಳಗಂಜ್ ರಸ್ತೆಯವರೆಗೆ ನಾಲ್ಕು ರೈಲುಗಳು ವಿಸ್ತರಣೆ, ಗಡಿ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಉತ್ತೇಜನ
ಪ್ರಕಟಣಾ ದಿನಾಂಕ:
31 AUG 2026 6:45PM by PIB Bengaluru
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್; ದೊಮರಿಯಾಗಂಜ್ ಸಂಸದರಾದ ಶ್ರೀ ಜಗದಂಬಿಕಾ ಪಾಲ್; ಬಹ್ರೈಚ್ ಸಂಸದರಾದ ಡಾ. ಆನಂದ್ ಕುಮಾರ್ ಗೊಂಡ್ ಮತ್ತು ಇತರ ಗಣ್ಯರೊಂದಿಗೆ ಸೇರಿ ನೇಪಾಳಗಂಜ್ ರಸ್ತೆ-ನಾನ್‌ಪಾರಾ-ಬಹ್ರೈಚ್ ರೈಲು ವಿಭಾಗದ ಗೇಜ್ ಪರಿವರ್ತನೆ ಮತ್ತು ವಿದ್ಯುದ್ದೀಕರಣವನ್ನು ಉದ್ಘಾಟಿಸಿದರು. 56.15 ಕಿಮೀ ಉದ್ದದ ಈ ವಿಭಾಗವನ್ನು ಸರಿಸುಮಾರು ₹730 ಕೋಟಿ ವೆಚ್ಚದಲ್ಲಿ ಬ್ರಾಡ್ ಗೇಜ್‌ಗೆ ಪರಿವರ್ತಿಸಲಾಗಿದೆ ಮತ್ತು ವಿದ್ಯುದ್ದೀಕರಿಸಲಾಗಿದೆ. ಚಾಲ್ತಿಯಲ್ಲಿರುವ ನಾಲ್ಕು ರೈಲು ಸೇವೆಗಳನ್ನು ನೇಪಾಳಗಂಜ್ ರಸ್ತೆಯವರೆಗೆ ವಿಸ್ತರಿಸಲಾಗಿದೆ. ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದ ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು, ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ಎರಡು ನಿಮಿಷಗಳ ಮೌನ ಆಚರಿಸಿದರು.

ನೆರೆಯ ನೇಪಾಳದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಭಾರತ ಮತ್ತು ನೇಪಾಳ ಬಲವಾದ ಸಾಂಸ್ಕೃತಿಕ ಬಾಂಧವ್ಯವನ್ನು ಹಂಚಿಕೊಂಡಿವೆ ಎಂದು ಹೇಳಿದರು. ನೇಪಾಳದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಕಂಬನಿ ಮಿಡಿದ ಅವರು, ನೆರವು ನೀಡಲು ಭಾರತ ಸರ್ಕಾರವು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು. ಬಾಧಿತ ಪ್ರದೇಶಗಳಿಂದ ರಕ್ಷಿಸಲ್ಪಟ್ಟು ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗಾಗಿ ರೈಲ್ವೆಯು ಸೂಕ್ತ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ಪ್ರಯಾಣಿಕರು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಸಹಾಯ ಮಾಡಲು ರೈಲ್ವೆಯು ವಿಶೇಷ ಬೋಗಿಗಳು ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ಅವರು ತಿಳಿಸಿದರು. ನೇಪಾಳದ ಪರಿಸ್ಥಿತಿಯಿಂದ ಬಾಧಿತರಾದ ಪ್ರಯಾಣಿಕರ ಸುರಕ್ಷಿತ ಸಂಚಾರ ಮತ್ತು ವಾಪಸಾತಿಯನ್ನು ಸುಗಮಗೊಳಿಸಲು ರೈಲ್ವೆ ಮಂಡಳಿಯು ರೈಲ್ವೆ ವಲಯಗಳು, ಜಿಲ್ಲಾ ಮತ್ತು ರಾಜ್ಯ ಪ್ರಾಧಿಕಾರಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತಿದೆ ಎಂದೂ ಶ್ರೀ ವೈಷ್ಣವ್ ಅವರು ತಿಳಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಕೂಡ ನೇಪಾಳದಲ್ಲಿ ಸಂಭವಿಸಿದ ಇತ್ತೀಚಿನ ನೈಸರ್ಗಿಕ ವಿಕೋಪಕ್ಕೆ ಸಂತಾಪ ವ್ಯಕ್ತಪಡಿಸಿದರು. ಈ ದುರಂತವು ಮಿತ್ರ ರಾಷ್ಟ್ರವಾದ ನೇಪಾಳದ ಮೇಲೆ ಮಾತ್ರವಲ್ಲದೆ ಭಾರತ ಸೇರಿದಂತೆ ಹಲವು ದೇಶಗಳ ಜನರ ಮೇಲೆಯೂ ಪರಿಣಾಮ ಬೀರಿದೆ ಎಂದು ಅವರು ಹೇಳಿದರು ಮತ್ತು ವಿಕೋಪದಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಕಂಬನಿ ಮಿಡಿದರು.
ಈಗ ಬ್ರಾಡ್ ಗೇಜ್ ರೈಲ್ವೆ ಜಾಲಕ್ಕೆ ಸಂಯೋಜನೆಗೊಂಡ ನೇಪಾಳಗಂಜ್ ರಸ್ತೆ-ನಾನ್‌ಪಾರಾ-ಬಹ್ರೈಚ್ ವಿಭಾಗ
ನೇಪಾಳಗಂಜ್ ರಸ್ತೆ-ನಾನ್‌ಪಾರಾ-ಬಹ್ರೈಚ್ ಮೀಟರ್ ಗೇಜ್ ರೈಲು ವಿಭಾಗವನ್ನು ಮೂಲತಃ 1886 ರಲ್ಲಿ ನಿರ್ಮಿಸಲಾಗಿತ್ತು. ಗೇಜ್ ಪರಿವರ್ತನೆ ಮತ್ತು ವಿದ್ಯುದ್ದೀಕರಣ ಪೂರ್ಣಗೊಂಡ ನಂತರ, ಈ ವಿಭಾಗವು ಈಗ ಬ್ರಾಡ್ ಗೇಜ್ ರೈಲ್ವೆ ಜಾಲದ ಅವಿಭಾಜ್ಯ ಅಂಗವಾಗಿದೆ, ಇದು ಬಹ್ರೈಚ್, ರಿಸಿಯಾ, ಮಟೇರಾ, ನಾನ್‌ಪಾರಾ, ಬಾಬಾಗಂಜ್ ಮತ್ತು ನೇಪಾಳಗಂಜ್ ರಸ್ತೆ ನಿಲ್ದಾಣಗಳಿಗೆ ಸುಧಾರಿತ ಸಂಪರ್ಕವನ್ನು ಒದಗಿಸುತ್ತದೆ.
ಉದ್ಘಾಟನೆಗೊಳ್ಳುತ್ತಿರುವ ರೈಲು ವಿಭಾಗದ ಬಗ್ಗೆ ಮಾತನಾಡಿದ ಶ್ರೀ ವೈಷ್ಣವ್, ನೇಪಾಳಗಂಜ್ ರಸ್ತೆ-ನಾನ್‌ಪಾರಾ-ಬಹ್ರೈಚ್ ವಿಭಾಗದ ಪರಿವರ್ತನೆಯು ಈಗ ದೇಶದ ವಿಶಾಲ ರೈಲ್ವೆ ಜಾಲದೊಂದಿಗೆ ಸಂಪರ್ಕಗೊಂಡಿದೆ ಎಂದು ಹೇಳಿದರು. ದೇಶಾದ್ಯಂತ ಬ್ರಾಡ್ ಗೇಜ್ ಪರಿವರ್ತನೆ ಕಾರ್ಯಕ್ರಮವು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಶ್ರೀ ವೈಷ್ಣವ್ ತಿಳಿಸಿದರು.

ನೇಪಾಳಗಂಜ್ ರಸ್ತೆಯವರೆಗೆ ಸುದೀರ್ಘ ದೂರದ ರೈಲು ಸೇವೆಗಳ ವಿಸ್ತರಣೆ
ಪ್ರಯಾಣಿಕರ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು, ರೈಲ್ವೆ ಸಚಿವಾಲಯವು 14213/14214 ವಾರಾಣಸಿ-ಬಹ್ರೈಚ್ ಎಕ್ಸ್‌ಪ್ರೆಸ್, 15132/15131 ವಾರಾಣಸಿ ಸಿಟಿ-ಗೋರಖ್‌ಪುರ ಎಕ್ಸ್‌ಪ್ರೆಸ್ ಮತ್ತು ಎರಡು ಜೋಡಿ 75109/75110 ಮತ್ತು 75111/75112 ಗೊಂಡಾ-ಬಹ್ರೈಚ್ ರೈಲು ಸೇವೆಗಳನ್ನು ನೇಪಾಳಗಂಜ್ ರಸ್ತೆಯವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.
ಈ ಸೇವೆಗಳೊಂದಿಗೆ, ನೇಪಾಳಗಂಜ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರು ಗೊಂಡಾ, ಗೋರಖ್‌ಪುರ, ವಾರಾಣಸಿ ಮತ್ತು ಇತರ ಪ್ರಮುಖ ನಗರಗಳಿಗೆ ನೇರ ರೈಲು ಸಂಪರ್ಕವನ್ನು ಪಡೆಯಲಿದ್ದಾರೆ. ಈ ವಿಸ್ತರಣೆಯು ಈ ಪ್ರದೇಶದ ಜನರ ಸುದೀರ್ಘ ದಿನಗಳ ಬೇಡಿಕೆಯನ್ನು ಈಡೇರಿಸುತ್ತದೆ ಮತ್ತು ಪ್ರಮುಖ ನಗರ ಹಾಗೂ ಆರ್ಥಿಕ ಕೇಂದ್ರಗಳಿಗೆ ತಲುಪುವಿಕೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಹೆಚ್ಚಿದ ಸಂಪರ್ಕವು ನೆರೆಯ ನೇಪಾಳದ ಜನರಿಗೆ, ವಿಶೇಷವಾಗಿ ಉದ್ಯೋಗ, ಶಿಕ್ಷಣ, ಆರೋಗ್ಯ, ವ್ಯಾಪಾರ ಮತ್ತು ಇತರ ಉದ್ದೇಶಗಳಿಗಾಗಿ ಗಡಿ ಪ್ರದೇಶಕ್ಕೆ ಪ್ರಯಾಣಿಸುವವರಿಗೆ ಪ್ರಯೋಜನವನ್ನು ನೀಡುತ್ತದೆ.
ರೈಲು ವಿಭಾಗದ ಉದ್ಘಾಟನೆ ಮತ್ತು ನಾಲ್ಕು ಹೊಸ ರೈಲು ಸೇವೆಗಳ ಚಾಲನೆಯು ಈ ಪ್ರದೇಶದ ಜನರ ದಶಕಗಳಷ್ಟು ಹಳೆಯ ಕನಸಿನ ಸಾಕಾರವನ್ನು ಗುರುತಿಸಿದೆ ಎಂದು ಶ್ರೀ ಆದಿತ್ಯನಾಥ್ ಹೇಳಿದರು. ಹೊಸ ರೈಲು ಸಂಪರ್ಕವು ಬಹ್ರೈಚ್, ರೂಪೈದಿಹಾ ಮತ್ತು ನೇಪಾಳಗಂಜ್ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ ಮತ್ತು ಗಡಿಯ ಎರಡೂ ಬದಿಯಲ್ಲಿರುವ ಜನರಿಗೆ ಹೆಚ್ಚಿನ ಅನುಕೂಲವನ್ನು ನೀಡುತ್ತದೆ ಎಂದು ಅವರು ಹೇಳಿದರು.
ಆಕಾಂಕ್ಷಿ ಜಿಲ್ಲೆ ಬಹ್ರೈಚ್‌ಗೆ ಹೊಸ ಅವಕಾಶಗಳು
ಆಕಾಂಕ್ಷಿ ಜಿಲ್ಲೆ ಬಹ್ರೈಚ್‌ನ ಗಡಿ ಪ್ರದೇಶದಲ್ಲಿ ಗೇಜ್ ಪರಿವರ್ತನೆ ಯೋಜನೆಯು ಪೂರ್ಣಗೊಂಡಿರುವುದು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಉತ್ತೇಜನ ನೀಡುವ ನಿರೀಕ್ಷೆಯಿದೆ. ಸುಧಾರಿತ ರೈಲು ಸಂಪರ್ಕವು ಜನರ ಮತ್ತು ಸರಕುಗಳ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ ಹಾಗೂ ಈ ಪ್ರದೇಶದಲ್ಲಿ ವ್ಯಾಪಾರ, ಉದ್ಯೋಗ, ಪ್ರವಾಸೋದ್ಯಮ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ.
ನೇರ ಬ್ರಾಡ್ ಗೇಜ್ ಸಂಪರ್ಕವು ಸ್ಥಳೀಯ ಉತ್ಪನ್ನಗಳಿಗೆ ವಿಶಾಲ ಮಾರುಕಟ್ಟೆಗಳಿಗೆ ಉತ್ತಮ ಪ್ರವೇಶವನ್ನು ಒದಗಿಸುತ್ತದೆ ಮತ್ತು ಗಡಿ ಪ್ರದೇಶಗಳು ಹಾಗೂ ಉತ್ತರ ಪ್ರದೇಶದ ಪ್ರಮುಖ ನಗರಗಳು ಮತ್ತು ಆಚೆಗಿನ ಪ್ರದೇಶಗಳ ನಡುವಿನ ಆರ್ಥಿಕ ಬಾಂಧವ್ಯವನ್ನು ಬಲಪಡಿಸುತ್ತದೆ.
ಸುಧಾರಿತ ರೈಲು ಮೂಲಸೌಕರ್ಯವು ಈ ಪ್ರದೇಶದ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಮತ್ತು ಬಹ್ರೈಚ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡುವ ನಿರೀಕ್ಷೆಯಿದೆ.
ರೈಲು ವಿಭಾಗದ ವಿದ್ಯುದ್ದೀಕರಣವು ವಿದ್ಯುತ್ ಲೋಕೋಮೋಟಿವ್-ಚಾಲಿತ ರೈಲುಗಳ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತ್ತದೆ, ಡೀಸೆಲ್ ಎಳೆತದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಈ ಉಪಕ್ರಮವು ಇಂಧನ-ದಕ್ಷ ಮತ್ತು ಪರಿಸರ ಸುಸ್ಥಿರ ರೈಲ್ವೆ ಕಾರ್ಯಾಚರಣೆಗಳತ್ತ ಭಾರತೀಯ ರೈಲ್ವೆಯ ಶ್ರಮಕ್ಕೆ ಅನುಗುಣವಾಗಿದೆ.
ಉತ್ತರ ಪ್ರದೇಶದಾದ್ಯಂತ, ವಿಶೇಷವಾಗಿ ಪೂರ್ವಾಂಚಲ ಪ್ರದೇಶದಲ್ಲಿ, ರೈಲ್ವೆ ಜಾಲವನ್ನು ಬಲಪಡಿಸಲು ಸಮಗ್ರ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಹೇಳಿದರು. ಈಗಾಗಲೇ ದ್ವಿಪಥ (ಡಬಲ್ ಲೈನ್) ಅಸ್ತಿತ್ವದಲ್ಲಿರುವ ಕಡೆಗಳಲ್ಲಿ ಮೂರನೇ ಮತ್ತು ನಾಲ್ಕನೇ ಮಾರ್ಗಗಳನ್ನು ಸೇರಿಸುವ ಮೂಲಕ ಏಳು ಪ್ರಮುಖ ರೈಲ್ವೆ ಜಾಲಗಳನ್ನು ಬಲಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಪೂರ್ವಾಂಚಲಕ್ಕೆ ಸೇವೆ ಸಲ್ಲಿಸುವ ದೆಹಲಿ-ಗಾಜಿಯಾಬಾದ್-ಮೊರಾದಾಬಾದ್-ಸೀತಾಪುರ-ಬುರ್ಹ್ವಾಲ್-ಗೊಂಡಾ-ಗೋರಖ್‌ಪುರ ಜಾಲವನ್ನು ಅವರು ಹೈಲೈಟ್ ಮಾಡಿದರು ಮತ್ತು ದೆಹಲಿಯಿಂದ ಗೊಂಡಾ ವಿಭಾಗಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.
ಹೈ-ಸ್ಪೀಡ್ ರೈಲು ಸಂಪರ್ಕದ ಅಭಿವೃದ್ಧಿಯೊಂದಿಗೆ ರಾಜ್ಯದ ರೈಲು ಸಂಪರ್ಕದಲ್ಲಿ ಪ್ರಮುಖ ರೂಪಾಂತರವು ಬರಲಿದೆ ಎಂದು ಅವರು ಮುಂದುವರಿದು ಹೇಳಿದರು. ಉದ್ದೇಶಿತ ಹೈ-ಸ್ಪೀಡ್ ರೈಲು ಸಂಪರ್ಕವನ್ನು ಉಲ್ಲೇಖಿಸಿದ ಶ್ರೀ ವೈಷ್ಣವ್, ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ತಿಳಿಸಿದರು. ದೆಹಲಿ-ಆಗ್ರಾ ಪ್ರಯಾಣಕ್ಕೆ 58 ನಿಮಿಷಗಳು, ದೆಹಲಿ-ಕಾನ್ಪುರಕ್ಕೆ 1 ಗಂಟೆ 45 ನಿಮಿಷಗಳು, ದೆಹಲಿ-ಲಕ್ನೋಗೆ 2 ಗಂಟೆ 12 ನಿಮಿಷಗಳು ಮತ್ತು ದೆಹಲಿ-ಪ್ರಯಾಗ್‌ರಾಜ್‌ಗೆ ಸುಮಾರು ಮೂರು ಗಂಟೆಗಳು ಬೇಕಾಗುತ್ತದೆ ಎಂದು ಅವರು ಹೇಳಿದರು. ದೆಹಲಿ-ವಾರಾಣಸಿಗೆ ಸುಮಾರು ಮೂರೂವರೆ ಗಂಟೆ ಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಉದ್ದೇಶಿತ ಸಂಪರ್ಕವು ಅಂತಿಮವಾಗಿ ಪಾಟ್ನಾದತ್ತ ವಿಸ್ತರಿಸಲಿದೆ ಎಂದು ಶ್ರೀ ವೈಷ್ಣವ್ ಉಲ್ಲೇಖಿಸಿದರು. ದೆಹಲಿ ಮತ್ತು ಪಾಟ್ನಾ ನಡುವಿನ 1,170 ಕಿಮೀ ಪ್ರಯಾಣವನ್ನು ಸುಮಾರು ನಾಲ್ಕೂವರೆ ಗಂಟೆಗಳಲ್ಲಿ ಪೂರ್ಣಗೊಳಿಸಬಹುದು ಎಂದು ಅವರು ತಿಳಿಸಿದರು. ಇದು ಉತ್ತರ ಪ್ರದೇಶದ ಪ್ರಮುಖ ನಗರಗಳು ಮತ್ತು ಉತ್ತರ ಭಾರತದ ಇತರ ಭಾಗಗಳ ನಡುವೆ ಅತ್ಯಂತ ಕಡಿಮೆ ಸಮಯದಲ್ಲಿ ಪ್ರಯಾಣಿಸಲು ಜನರಿಗೆ ಅನುವು ಮಾಡಿಕೊಡುತ್ತದೆ ಎಂದು ಅವರು ಒತ್ತಿಹೇಳಿದರು.
ನೇಪಾಳಗಂಜ್ ರಸ್ತೆ-ನಾನ್‌ಪಾರಾ-ಬಹ್ರೈಚ್ ರೈಲು ವಿಭಾಗದ ಪೂರ್ಣಗೊಳಿಸುವಿಕೆ ಮತ್ತು ಸುದೀರ್ಘ ದೂರದ ರೈಲು ಸೇವೆಗಳ ವಿಸ್ತರಣೆಯು ಗಡಿ ಪ್ರದೇಶದಲ್ಲಿ ರೈಲು ಸಂಪರ್ಕವನ್ನು ಬಲಪಡಿಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ. ಈ ಯೋಜನೆಯು ಈ ಪ್ರದೇಶವನ್ನು ದೇಶಾದ್ಯಂತದ ಪ್ರಮುಖ ನಗರಗಳೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಸಂಪರ್ಕಿಸುವುದು ಮಾತ್ರವಲ್ಲದೆ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ.
*****
(ಪ್ರಕಟಣೆ ಐ.ಡಿ.: 2305268)
ವಿಸಿಟರ್ ಕೌಂಟರ್ : 7