ಗ್ರಾಮೀಣಾಭಿವೃದ್ಧಿ ಸಚಿವಾಲಯ
ದೇಶಾದ್ಯಂತ ಪಂಚ ಸಮ್ಮೇಳನಗಳ ಮೂಲಕ ವಿಬಿ-ಜಿ ರಾಮ್ ಜಿ ಕಾಯ್ದೆಯ ಬಗ್ಗೆ ಜಾಗೃತಿ
1,338 ಪಂಚ ಸಮ್ಮೇಳನಗಳಲ್ಲಿ 5.26 ಲಕ್ಷಕ್ಕೂ ಅಧಿಕ ಪಂಚಾಯತ್ ರಾಜ್ ಪ್ರತಿನಿಧಿಗಳು, ಕಾರ್ಯನಿರ್ವಾಹಕರು ಮತ್ತು ಅಧಿಕಾರಿಗಳು ಭಾಗಿ
ಪ್ರಕಟಣಾ ದಿನಾಂಕ:
31 AUG 2026 4:10PM by PIB Bengaluru
ವಿಕಸಿತ ಭಾರತ-ಖಾತರಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ): ವಿಬಿ-ಜಿ ರಾಮ್ ಜಿ (ವಿಕಸಿತ ಭಾರತ-ಜಿ ರಾಮ್ ಜಿ) ಕಾಯ್ದೆ 2025ರ ಪರಿಣಾಮಕಾರಿ ಜಾರಿ ಸುಗಮಗೊಳಿಸಲು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ (ಪಿಆರ್‌ಐ) ಚುನಾಯಿತ ಪ್ರತಿನಿಧಿಗಳು ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲು ಆಯೋಜಿಸಲಾದ ಜಿಲ್ಲಾ ಮಟ್ಟದ ಪಂಚ ಸಮ್ಮೇಳನಗಳ ರಾಷ್ಟ್ರವ್ಯಾಪಿ ಅಭಿಯಾನವು ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು, ಪಂಚಾಯತ್ ರಾಜ್ ಸಂಸ್ಥೆಗಳ ಮೂರು ಹಂತಗಳಲ್ಲಿನ ಚುನಾಯಿತ ಪ್ರತಿನಿಧಿಗಳು ಮತ್ತು ಕಾರ್ಯಕರ್ತರಿಗೆ ಕಾಯಿದೆಯ ನಿಬಂಧನೆಗಳು ಮತ್ತು ಅವರ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ತಿಳಿಸಿಕೊಡಲು ಪಂಚ ಸಮ್ಮೇಳನಗಳನ್ನು ಆಯೋಜಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಮನವಿ ಮಾಡಿತ್ತು.

ದೇಶಾದ್ಯಂತ ಈವರೆಗೆ ಒಟ್ಟು 1,338 ಪಂಚ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಸಾಧನೆಯು ವಿಬಿ ಜಿ ರಾಮ್ ಜಿ ಕಾಯ್ದೆಯ ಪರಿಣಾಮಕಾರಿ ಜಾರಿ ನಿಟ್ಟಿನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರದರ್ಶಿಸಿದ ಸಕ್ರಿಯ ಭಾಗವಹಿಸುವಿಕೆ, ಬದ್ಧತೆ ಮತ್ತು ಬಲವಾದ ಹೊಣೆಗಾರಿಕೆಯನ್ನು ಪ್ರತಿಬಿಂಬಿಸುತ್ತದೆ.

ಈ ಪಂಚ ಸಮ್ಮೇಳನಗಳ ಮೂಲಕ, 5.26 ಲಕ್ಷಕ್ಕೂ ಅಧಿಕ ಪಂಚಾಯತ್ ರಾಜ್ ಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಅಧಿಕಾರಿಗಳು/ಸಿಬ್ಬಂದಿ ಸದಸ್ಯರ ಭಾಗವಹಿಸುವಿಕೆ ಖಾತ್ರಿಪಡಿಸಲಾಗಿದೆ. ಭಾಗವಹಿಸುವಿಕೆಯ ಪ್ರಮಾಣವು ಯೋಜನೆ, ಗ್ರಾಮೀಣಾಭಿವೃದ್ಧಿ ಮತ್ತು ತಳಮಟ್ಟದ ಆಡಳಿತದಲ್ಲಿ ಗ್ರಾಮ ಪಂಚಾಯತ್‌ಗಳ ಪಾತ್ರದ ಬಗ್ಗೆ ಸ್ಥಳೀಯ ಪ್ರತಿನಿಧಿಗಳಲ್ಲಿ ಹೆಚ್ಚುತ್ತಿರುವ ಅರಿವು ಮತ್ತು ಉತ್ಸಾಹವನ್ನು ಉಲ್ಲೇಖಿಸುತ್ತದೆ.
ಈವರೆಗೆ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ನಿಗದಿತ ಪಂಚ ಸಮ್ಮೇಳನಗಳನ್ನು ಪೂರ್ಣಗೊಳಿಸಿವೆ. ಇವುಗಳಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿ ಸೇರಿವೆ. ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಕಾಲಿಕ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಗಮನಾರ್ಹ ಉದಾಹರಣೆಯಾಗಿವೆ.
ಈ ಪಂಚ ಸಮ್ಮೇಳನಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಹಲವು ರಾಜ್ಯಗಳು ನವೀನ ಮತ್ತು ಬಹು-ಶ್ರೇಣಿಯ ವಿಧಾನಗಳನ್ನು ಅಳವಡಿಸಿಕೊಂಡಿವೆ. ಗುಜರಾತ್, ಜಮ್ಮು ಮತ್ತು ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳು ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ ಇತರ ಆಡಳಿತ ಹಂತಗಳಲ್ಲಿಯೂ ಸಮ್ಮೇಳನಗಳನ್ನು ಆಯೋಜಿಸಿವೆ, ಇದರಿಂದಾಗಿ ಪಂಚಾಯತ್ ರಾಜ್ ಪ್ರತಿನಿಧಿಗಳು ಮತ್ತು ಕಾರ್ಯಕರ್ತರಲ್ಲಿ ವ್ಯಾಪಕ ಸಂಪರ್ಕವನ್ನು ಖಾತ್ರಿಪಡಿಸಿಕೊಳ್ಳಲಾಗಿದೆ. ಇದು ತಳಮಟ್ಟದಲ್ಲಿ ಜಾಗೃತಿ ಮೂಡಿಸುವಿಕೆ ಮತ್ತು ಸಾಮರ್ಥ್ಯ ವೃದ್ಧಿ ಪ್ರಯತ್ನಗಳನ್ನು ಗಮನಾರ್ಹವಾಗಿ ಬಲವರ್ಧನೆಗೊಳಿಸಿದೆ.
ವಿಬಿ-ಜಿ ರಾಮ್ ಜಿ ಕಾಯ್ದೆ 2025 ಗ್ರಾಮ ಪಂಚಾಯತ್‌ಗಳನ್ನು ಗ್ರಾಮೀಣ ಅಭಿವೃದ್ಧಿ ಪ್ರಕ್ರಿಯೆಯ ಕೇಂದ್ರ ಸ್ಥಾನದಲ್ಲಿರಿಸುತ್ತದೆ ಮತ್ತು ಯೋಜನೆ, ಅನುಷ್ಠಾನ, ಮೇಲ್ವಿಚಾರಣೆ, ಪಾರದರ್ಶಕತೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಸಂಬಂಧಿಸಿದ ಪ್ರಮುಖ ಜವಾಬ್ದಾರಿಗಳನ್ನು ಅವರಿಗೆ ವಹಿಸುತ್ತದೆ. ಚುನಾಯಿತ ಪ್ರತಿನಿಧಿಗಳು ಮತ್ತು ಕಾರ್ಯಕರ್ತರಿಗೆ ವಿಕಸಿತ ಗ್ರಾಮ ಪಂಚಾಯತ್ ಯೋಜನೆ (ವಿಜಿಪಿಪಿ), ಗ್ರಾಮೀಣ ರೋಜ್‌ಗಾರ್ ಗ್ಯಾರಂಟಿ ಕಾರ್ಡ್, ಆಸ್ತಿ ಸೃಷ್ಟಿ,ಸಂಯೋಜನೆ, ಸಾಮಾಜಿಕ ಲೆಕ್ಕಪರಿಶೋಧನೆ ಮತ್ತು ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳು ಸೇರಿದಂತೆ ಕಾಯ್ದೆಯ ವಿವಿಧ ನಿಬಂಧನೆಗಳೊಂದಿಗೆ ಪರಿಚಿತರಾಗಲು ಪಂಚ ಸಮ್ಮೇಳನಗಳು ಪರಿಣಾಮಕಾರಿ ವೇದಿಕೆಯಾಗಿ ಹೊರಹೊಮ್ಮಿವೆ.
ಒಟ್ಟಾರೆ, ಪಂಚ ಸಮ್ಮೇಳನ ಅಭಿಯಾನವು ದೇಶಾದ್ಯಂತ ಪ್ರೋತ್ಸಾಹದಾಯಕ ವೇಗದಲ್ಲಿ ಮುಂದುವರಿಯುತ್ತಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ವ್ಯಾಪಕ ಪಾಲುದಾರರ ತೊಡಗಿಸಿಕೊಳ್ಳುವಿಕೆಯ ಮೂಲಕ, ಗ್ರಾಮೀಣ ಅಭಿವೃದ್ಧಿ, ಉತ್ತಮ ಆಡಳಿತ, ಯೋಜನೆ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಬಲವರ್ಧನೆಗೆ ಭದ್ರ ಬುನಾದಿಯನ್ನು ಹಾಕಿದೆ.
*****
(ಪ್ರಕಟಣೆ ಐ.ಡಿ.: 2305020)
ವಿಸಿಟರ್ ಕೌಂಟರ್ : 23