ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಖೇಲೋ ಇಂಡಿಯಾ ಸಂವಾದದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ವಿಕಸಿತ ಭಾರತ ನಿರ್ಮಾಣದ ದೃಷ್ಟಿಕೋನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡರು


ದೇಶಾದ್ಯಂತ ಕ್ರೀಡಾ ಪ್ರತಿಭೆಗಳನ್ನು ಪೋಷಿಸಲು ಖೇಲೋ ಇಂಡಿಯಾ ಅತ್ಯುತ್ತಮ ವೇದಿಕೆಯಾಗಿ ಹೊರಹೊಮ್ಮಿದೆ; ಯುವ ಕ್ರೀಡಾಪಟುಗಳಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಅವಕಾಶ ಮತ್ತು ಅಗತ್ಯ ಬೆಂಬಲವನ್ನು ಇದು ಒದಗಿಸುತ್ತಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಕ್ರೀಡೆ ಕುರಿತು ನಾನು ಮಾತನಾಡುವಾಗ, ಅದು ಕೇವಲ ಪದಕ ಗೆಲ್ಲುವುದಕ್ಕೆ ಸಂಬಂಧಿಸಿದ್ದಲ್ಲ; ವಿಕಸಿತ ಭಾರತ ನಿರ್ಮಾಣಕ್ಕಾಗಿ ಭಾರತದ ಕ್ರೀಡಾ ಶಕ್ತಿ ಮತ್ತು ಯುವಶಕ್ತಿಯನ್ನು ಸಂಯೋಜಿಸುವ ಅಭಿಯಾನವಾಗಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಇತರ ದೇಶಗಳು ಪದಕಗಳನ್ನು ಗೆಲ್ಲುತ್ತಿರುವ ಕ್ರೀಡೆಗಳಲ್ಲಿ ಭಾರತ ಇನ್ನೂ ಭಾಗವಹಿಸುತ್ತಿಲ್ಲ; ಅಂತಹ ಕ್ರೀಡೆಗಳಲ್ಲೂ ನಾವು ಪರಿಣತಿ ಸಾಧಿಸಬೇಕು: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಭಾರತದ ಕ್ರೀಡಾ ಭವಿಷ್ಯವನ್ನು ನಿರ್ಮಿಸುವಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ

ಕ್ರೀಡಾಪಟುಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವೈಯಕ್ತಿಕ ಬಾಂಧವ್ಯ ಮತ್ತು ಚಾಂಪಿಯನ್‌ಗಳಿಗೆ ಅವರು ನೀಡುತ್ತಿರುವ ಅಚಲ ಬೆಂಬಲವನ್ನು ಡಾ. ಮಾಂಡವೀಯ ಅವರು ಶ್ಲಾಘಿಸಿದರು

ಪ್ರಕಟಣಾ ದಿನಾಂಕ: 27 AUG 2026 5:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುವಾರ, 27 ಆಗಸ್ಟ್ 2026ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಖೇಲೋ ಇಂಡಿಯಾ ಸಂವಾದದಲ್ಲಿ ಭಾಗವಹಿಸಿ, ರಾಷ್ಟ್ರೀಯ ಕ್ರೀಡಾ ದಿನ 2026ರ ಆಚರಣೆಯ ಅಂಗವಾಗಿ ದೇಶಾದ್ಯಂತ 5,000ಕ್ಕೂ ಹೆಚ್ಚು ಸಂಸ್ಥೆಗಳಿಂದ ಸಂಪರ್ಕ ಹೊಂದಿದ್ದ ಯುವಜನರು ಮತ್ತು ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದರು.

ಪ್ರತಿವರ್ಷ ಆಗಸ್ಟ್ 29ರಂದು ಭಾರತದ ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನದ ಆಚರಣೆಯ ಭಾಗವಾಗಿ ಖೇಲೋ ಇಂಡಿಯಾ ಸಂವಾದವನ್ನು ಆಯೋಜಿಸಲಾಗಿತ್ತು.

ವಿಡಿಯೊ ಕಾನ್ಫರೆನ್ಸ್ ಮೂಲಕ ದೇಶದಾದ್ಯಂತದ ಯುವಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರ ನಿರ್ಮಾಣದಲ್ಲಿ ಕ್ರೀಡೆಯ ಆಳವಾದ ಉದ್ದೇಶವನ್ನು ಪ್ರಸ್ತಾಪಿಸಿದರು. “ನಾನು ಕ್ರೀಡೆ ಕುರಿತು ಮಾತನಾಡುವಾಗ, ಅದು ಕೇವಲ ಪದಕ ಗೆಲ್ಲುವುದಕ್ಕೆ ಸಂಬಂಧಿಸಿದ್ದಲ್ಲ; ವಿಕಸಿತ ಭಾರತ ನಿರ್ಮಾಣಕ್ಕಾಗಿ ಭಾರತದ ಕ್ರೀಡಾ ಶಕ್ತಿ ಮತ್ತು ಯುವಶಕ್ತಿಯನ್ನು ಸಂಯೋಜಿಸುವ ಅಭಿಯಾನವಾಗಿದೆ. ‘ಆಡುವವರು ಅರಳುತ್ತಾರೆ’ ಎಂದು ನಾನು ಯಾವಾಗಲೂ ಹೇಳುತ್ತ ಬಂದಿದ್ದೇನೆ” ಎಂದರು.

ಜಾಗತಿಕ ಕ್ರೀಡಾ ವಿಭಾಗಗಳಲ್ಲಿ ಭಾರತ ತನ್ನ ವ್ಯಾಪ್ತಿಯನ್ನು ವಿಸ್ತರಿಸಬೇಕೆಂದು ಕರೆ ನೀಡಿದ ಪ್ರಧಾನಮಂತ್ರಿಯವರು, “ಇತರ ದೇಶಗಳು ಪದಕಗಳನ್ನು ಗೆಲ್ಲುತ್ತಿರುವ ಕ್ರೀಡೆಗಳಲ್ಲಿ ಭಾರತ ಇನ್ನೂ ಭಾಗವಹಿಸುತ್ತಿಲ್ಲ; ಅಂತಹ ಕ್ರೀಡೆಗಳಲ್ಲೂ ನಾವು ಪರಿಣತಿ ಸಾಧಿಸಬೇಕು” ಎಂದರು.

“ನಮ್ಮ ಪದಕಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದರೆ, ಈ ಕ್ರೀಡೆಗಳಲ್ಲಿ ನಾವು ಖಂಡಿತವಾಗಿಯೂ ಪರಿಣತಿ ಸಾಧಿಸಬೇಕಾಗುತ್ತದೆ” ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ, 2036ರ ಒಲಿಂಪಿಕ್ಸ್‌ಗಾಗಿ ಭಾರತದ ದೀರ್ಘಕಾಲೀನ ಕಾರ್ಯತಂತ್ರವನ್ನೂ ಪ್ರಧಾನಮಂತ್ರಿಯವರು ವಿವರಿಸಿದರು. ಇದರಿಂದ ಹೆಚ್ಚಿನ ಸಂಖ್ಯೆಯ ಭಾರತೀಯ ಕ್ರೀಡಾಪಟುಗಳು ಕೇವಲ ಅರ್ಹತೆ ಪಡೆಯುವುದಷ್ಟೇ ಅಲ್ಲದೆ, ವ್ಯಾಪಕ ಶ್ರೇಣಿಯ ಕ್ರೀಡಾ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಮರ್ಥರಾಗುತ್ತಾರೆ ಎಂದು ಅವರು ಹೇಳಿದರು.

5ರಿಂದ 15 ವರ್ಷ ವಯಸ್ಸಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಬೃಹತ್ ರಾಷ್ಟ್ರೀಯ ಪ್ರತಿಭಾನ್ವೇಷಣೆ (Talent Hunt) ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. “ಇದಕ್ಕಾಗಿ ಸರ್ಕಾರದಿಂದ ಅಗತ್ಯವಿರುವ ಯಾವುದೇ ಬೆಂಬಲ ಬೇಕಾದರೂ, ಸರ್ಕಾರ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದೆ” ಎಂದು ಶ್ರೀ ಮೋದಿ ಹೇಳಿದರು.

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರು ಗಾಂಧಿನಗರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ (ಐಐಟಿ - IIT) ಪ್ರಧಾನಮಂತ್ರಿಯವರನ್ನು ವರ್ಚುವಲ್ ಆಗಿ ಸ್ವಾಗತಿಸಿ, “ದೇಶದಲ್ಲಿ ಇದೇ ಮೊದಲ ಬಾರಿಗೆ ಕ್ರೀಡೆಯನ್ನು ಕೇವಲ ಚಟುವಟಿಕೆಯಾಗಿ ನೋಡದೆ, ರಾಷ್ಟ್ರೀಯ ಆದ್ಯತೆಯಾಗಿ ಪರಿಗಣಿಸಲಾಗಿದೆ” ಎಂದರು.

ಕ್ರೀಡಾಪಟುಗಳೊಂದಿಗೆ ಪ್ರಧಾನಮಂತ್ರಿಯವರ ವೈಯಕ್ತಿಕ ಬಾಂಧವ್ಯವನ್ನು ಕ್ರೀಡಾ ಸಚಿವರು ಶ್ಲಾಘಿಸಿದರು. ಪ್ರಧಾನಮಂತ್ರಿಯವರನ್ನುದ್ದೇಶಿಸಿ ಅವರು, “ಕ್ರೀಡಾಪಟುಗಳೊಂದಿಗೆ ನಿಮ್ಮ ವೈಯಕ್ತಿಕ ಬಾಂಧವ್ಯವೇ ನಿಮ್ಮ ಕ್ರೀಡಾ ದೃಷ್ಟಿಕೋನದ ಅತಿದೊಡ್ಡ ಶಕ್ತಿಯಾಗಿದೆ. ಚಾಂಪಿಯನ್‌ಗಳ ಗೆಲುವನ್ನು ನೀವು ಸಂಭ್ರಮಿಸಿದ್ದೀರಿ, ಅವರಿಗೆ ಸದಾ ಪ್ರಶಂಸೆ ಮತ್ತು ಪ್ರೋತ್ಸಾಹ ನೀಡಿದ್ದೀರಿ. ಹಾಗೆಯೇ ಯಾವುದೇ ಕ್ರೀಡಾಪಟು ಸೋಲನ್ನು ಎದುರಿಸಿದಾಗಲೂ ನೀವು ಅವರ ಬೆಂಬಲಕ್ಕೆ ನಿಲ್ಲುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ಇದೇ ಕಾರಣದಿಂದ ಭಾರತದ ಕ್ರೀಡಾಪಟುಗಳು ನಿಮ್ಮನ್ನು ತಮ್ಮವರಂತೆ ಪರಿಗಣಿಸುತ್ತಾರೆ” ಎಂದರು.

ಮೈಭಾರತ್ (MyBharat) ವೇದಿಕೆಯ ವ್ಯಾಪಕ ತಲುಪುವಿಕೆಯನ್ನು ಡಾ. ಮಾಂಡವೀಯ ಅವರು ಶ್ಲಾಘಿಸುತ್ತಾ, “ದೇಶಾದ್ಯಂತ 2.4 ಕೋಟಿಗೂ ಹೆಚ್ಚು ಯುವಜನರು ಈಗಾಗಲೇ ಇದಕ್ಕೆ ಸೇರ್ಪಡೆಯಾಗಿದ್ದಾರೆ ಮತ್ತು ತಮ್ಮ ವೃತ್ತಿಜೀವನದ ಜೊತೆಗೆ ರಾಷ್ಟ್ರ ನಿರ್ಮಾಣಕ್ಕೂ ಕೊಡುಗೆ ನೀಡುತ್ತಿದ್ದಾರೆ” ಎಂದರು.

ಯುವಕೇಂದ್ರಿತ ನೀತಿ ರೂಪಿಸುವ ಸರ್ಕಾರದ ವಿಧಾನ ಕುರಿತು ಮಾತನಾಡಿದ ಅವರು, “ಯುವಜನರ ಆಲೋಚನೆಗಳ ಆಧಾರದ ಮೇಲೆ ಈ ವರ್ಷದ ಬಜೆಟ್‌ ಅನ್ನು ಯುವಕೇಂದ್ರಿತ ಬಜೆಟ್ ಎಂದು ಕರೆಯಲಾಯಿತು. ಇಂದು ದೇಶದ ಯುವಜನರು ತಮ್ಮ ಆಲೋಚನೆಗಳನ್ನು ನಿರ್ಲಕ್ಷಿಸಲಾಗುತ್ತಿಲ್ಲ, ಬದಲಿಗೆ ಅವುಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂಬ ಭಾವನೆಯನ್ನು ಹೊಂದಿದ್ದಾರೆ” ಎಂದರು.

ರಾಷ್ಟ್ರೀಯ ಕ್ರೀಡಾ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವ ಮಹತ್ವವನ್ನೂ ಡಾ. ಮಾಂಡವೀಯ ಅವರು ವಿವರಿಸಿದರು. “ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯ ಮೂಲಕ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯಯುತ ಅವಕಾಶವನ್ನು ಬಲಪಡಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಪ್ರತಿಭೆಗೆ ತಕ್ಕ ಮನ್ನಣೆ ದೊರೆಯುವುದು ಖಚಿತವಾಗುತ್ತದೆ” ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರ ಭಾಷಣದ ಬಳಿಕ ಒಲಿಂಪಿಕ್ಸ್ ಪದಕ ವಿಜೇತ ಗಗನ್ ನಾರಂಗ್ ಅವರು ಐಐಟಿ ಗಾಂಧಿನಗರದಲ್ಲಿ ಉಪಸ್ಥಿತರಿದ್ದ ಯುವಜನರೊಂದಿಗೆ ಕ್ರೀಡಾಪಟುವಾಗಿ ತಮ್ಮ ಸ್ಫೂರ್ತಿದಾಯಕ ಪಯಣವನ್ನು ಹಂಚಿಕೊಂಡರು.

“ಇತ್ತೀಚಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಆಗಿರುವ ಆಡಳಿತಾತ್ಮಕ ಬದಲಾವಣೆಗಳಿಗೆ ಧನ್ಯವಾದಗಳು. ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅತ್ಯುತ್ತಮ ಗುಣಮಟ್ಟದ ಉಪಕರಣಗಳು ದೊರೆಯುತ್ತಿವೆ. ಇಂತಹ ಬದಲಾವಣೆಗಳಿಂದಾಗಿಯೇ ನಾವು ಇಲ್ಲಿಗೆ ಬರಲು ಸಾಧ್ಯವಾಗಿದೆ” ಎಂದು ನಾರಂಗ್ ಹೇಳಿದರು.

ಅವರೊಂದಿಗೆ 2024ರ ಪ್ಯಾರಾಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಶೀತಲ್ ದೇವಿ ಕೂಡ ತಮ್ಮ ಸ್ಫೂರ್ತಿದಾಯಕ ಪಯಣವನ್ನು ಅಲ್ಲಿದ್ದವರೊಂದಿಗೆ ಹಂಚಿಕೊಂಡರು. “ಇಂದು ಜನರ ಮನೋಭಾವ ಬದಲಾಗಿದೆ. ‘ಪ್ಯಾರಾ ಕ್ರೀಡಾಪಟುಗಳು ಏನು ಸಾಧಿಸಲು ಸಾಧ್ಯ?’ ಎಂದು ಪ್ರಶ್ನಿಸುತ್ತಿದ್ದವರು, ಇಂದು ‘ಹೌದು, ಅವರು ಸಾಧಿಸುತ್ತಾರೆ; ಅವರೇ ಪದಕಗಳನ್ನು ಗೆದ್ದು ತರುತ್ತಾರೆ’ ಎಂದು ಹೇಳುತ್ತಿದ್ದಾರೆ” ಎಂದರು.

ಐಐಟಿ ಗಾಂಧಿನಗರದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯುವಜನರಿಗಾಗಿ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದ ಐದು ಪ್ರಮುಖ ವಿಷಯಗಳಾದ – ಕ್ರೀಡೆ, ಒಲಿಂಪಿಕ್ಸ್‌ ಆಕಾಂಕ್ಷೆಗಳು, ಯುವ ನಾಯಕತ್ವ, ವಿಕಸಿತ ಭಾರತ ಮತ್ತು ನಶಾಮುಕ್ತ ಯುವಜನತೆ – ಇವುಗಳನ್ನು ಆಧರಿಸಿ ಪ್ರಸ್ತುತಿ ನೀಡಿದರು. ಭಾರತ ಕ್ರೀಡಾ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವತ್ತ ಸಾಗುತ್ತಿರುವ ಪಯಣದ ಮೇಲೆ ಈ ಪ್ರಸ್ತುತಿಯಲ್ಲಿ ವಿಶೇಷ ಗಮನ ಹರಿಸಲಾಯಿತು.

******


(ಪ್ರಕಟಣೆ ಐ.ಡಿ.: 2303918) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati