ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ನೇಪಾಳದಲ್ಲಿ ದಿಢೀರ್ ಪ್ರವಾಹದಿಂದ ಉಂಟಾಗಿರುವ ಪರಿಸ್ಥಿತಿಯ ಮೇಲೆ ಕೇಂದ್ರ ಸರ್ಕಾರದಿಂದ ನಿಕಟ ನಿಗಾ


ನೇಪಾಳದ ವಿಕೋಪಕ್ಕೆ ಸಂಬಂಧಿಸಿದಂತೆ ಬಿಹಾರ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ

ನೇಪಾಳದ ಪ್ರವಾಹದಿಂದ ಉಂಟಾದ ವಿನಾಶವು ಅತ್ಯಂತ ದುಃಖಕರವಾಗಿದೆ, ಈ ವಿಕೋಪದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪವಿದೆ

ಈ ಸಂಕಷ್ಟದ ಸಮಯದಲ್ಲಿ ಭಾರತ ಸರ್ಕಾರವು ನೇಪಾಳದೊಂದಿಗೆ ನಿಂತಿದೆ

ಪರಿಣಾಮ ಬೀರುವ ಸಾಧ್ಯತೆಯಿರುವ ಗಡಿ ಪ್ರದೇಶಗಳಲ್ಲಿ, ಎನ್‌ಡಿಆರ್‌ಎಫ್ (NDRF) ನೊಂದಿಗೆ ಸ್ಥಳೀಯ ಆಡಳಿತ ಮತ್ತು ರಕ್ಷಣಾ ತಂಡಗಳನ್ನು ಹೈ ಅಲರ್ಟ್‌ನಲ್ಲಿಡಲಾಗಿದೆ

ಪ್ರಕಟಣಾ ದಿನಾಂಕ: 26 AUG 2026 9:08PM by PIB Bengaluru

ನೇಪಾಳದಲ್ಲಿ ಹಠಾತ್ ಪ್ರವಾಹದಿಂದ ಉಂಟಾಗಿರುವ ಪರಿಸ್ಥಿತಿಯ ಮೇಲೆ ಕೇಂದ್ರ ಸರ್ಕಾರವು ನಿಕಟ ನಿಗಾ ವಹಿಸಿದೆ. ನೇಪಾಳದ ವಿಕೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಬಿಹಾರ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದಾರೆ.

ತಮ್ಮ 'X' ಖಾತೆಯಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವರು, ನೇಪಾಳದಲ್ಲಿ ಪ್ರವಾಹದಿಂದ ಉಂಟಾದ ವಿನಾಶವು ಅತ್ಯಂತ ದುಃಖಕರವಾಗಿದೆ ಎಂದು ಹೇಳಿದ್ದಾರೆ. ಈ ವಿಕೋಪದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಕಂಬನಿಗಳು. ಈ ಸಂಕಷ್ಟದ ಸಮಯದಲ್ಲಿ ಭಾರತ ಸರ್ಕಾರವು ನೇಪಾಳದೊಂದಿಗೆ ನಿಂತಿದೆ. ನೇಪಾಳದ ವಿಕೋಪಕ್ಕೆ ಸಂಬಂಧಿಸಿದಂತೆ ನಾನು ಬಿಹಾರ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಬಾಧಿತವಾಗುವ ಸಾಧ್ಯತೆಯಿರುವ ಗಡಿ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಯೊಂದಿಗೆ ಸ್ಥಳೀಯ ಆಡಳಿತ ಮತ್ತು ರಕ್ಷಣಾ ತಂಡಗಳನ್ನು ಹೈ ಅಲರ್ಟ್‌ನಲ್ಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಜಲ ಆಯೋಗದ (CWC) ಸಲಹೆ ಮತ್ತು ಮಾಧ್ಯಮ ವರದಿಗಳ ಪ್ರಕಾರ, ನೇಪಾಳ-ಚೀನಾ ಗಡಿಯ ಬಳಿ ದಿಢೀರ್ ಪ್ರವಾಹ/ಗ್ಲೇಷಿಯಲ್ ಸರೋವರ ಸ್ಫೋಟ (GLOF) ಚಟುವಟಿಕೆಯ ಶಂಕೆಯಿಂದಾಗಿ, ಭಾರತೀಯ ಗಡಿಯಿಂದ ಸುಮಾರು 160 ಕಿಮೀ ದೂರದಲ್ಲಿರುವ ನೇಪಾಳದ ಫುರ್ಕೆ ಖೋಲಾದಲ್ಲಿ ತ್ರಿಶೂಲಿ ನದಿಯ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ ಎಂದು ವರದಿಯಾಗಿದೆ. ಪ್ರವಾಹದ ಪ್ರಭಾವವು ಭಾರತದಲ್ಲಿ ಗಂಡಕ್ ನದಿಯ ಕೆಳಭಾಗಕ್ಕೆ ಹರಿಯುವ ಸಾಧ್ಯತೆಯಿದೆ.

ಭಾರತ-ನೇಪಾಳ ಗಡಿಯ ಬಳಿಯ ಸ್ಥಳೀಯ ಭಾರತೀಯ ಸಮುದಾಯಗಳಿಗೆ ಅಗತ್ಯವಿರುವ ಸ್ಥಳಾಂತರ ಮತ್ತು ಇತರ ಬೆಂಬಲದಂತಹ ಕ್ರಮಗಳನ್ನು ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರಗಳು ಕೈಗೊಂಡಿವೆ. ಎರಡೂ ರಾಜ್ಯಗಳಿಗೆ ಜಾಗರೂಕರಾಗಿರಲು ಮತ್ತು ಪರಿಸ್ಥಿತಿಯ ನಿಕಟ ಮೇಲ್ವಿಚಾರಣೆಯನ್ನು ಕಾಯ್ದುಕೊಳ್ಳಲು ಸೂಚಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಜಲಶಕ್ತಿ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯದೊಂದಿಗೆ ಗೃಹ ಸಚಿವಾಲಯದ ಅಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸಿಡಬ್ಲ್ಯೂಸಿ ಪ್ರಕಾರ, ನೇಪಾಳದ ಕಡೆಯ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ ಮತ್ತು ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಭೀತಿಯ ವಾತಾವರಣ ನಿರ್ಮಾಣವಾಗಿಲ್ಲ.

ನೇಪಾಳದ ಭೂಪ್ರದೇಶದಲ್ಲಿ ಭಾರತೀಯ ಪ್ರವಾಸಿಗರು ಕಾಣೆಯಾಗಿರುವ ಬಗ್ಗೆ ವರದಿಗಳಿದ್ದು, ನೇಪಾಳದಲ್ಲಿ ದಿಢೀರ್ ಪ್ರವಾಹದಿಂದ ಬಾಧಿತರಾದ ಭಾರತೀಯ ಪ್ರಜೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ನೆರವಿಗಾಗಿ ಕಾಠ್ಮಂಡುವಿನಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ/ಭಾರತೀಯ ರಾಯಭಾರ ಕಚೇರಿಯು ತುರ್ತು ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ನೆರವಿನ ಅಗತ್ಯವಿರುವ ಜನರು ರಾಯಭಾರ ಕಚೇರಿಯ ಸಹಾಯವಾಣಿ +977 985 131 6807 ಮತ್ತು +977 970 910 7500 ಅನ್ನು ಸಂಪರ್ಕಿಸಬಹುದು.

 

******


(ಪ್ರಕಟಣೆ ಐ.ಡಿ.: 2303608) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Khasi , हिन्दी , Marathi , Gujarati , Odia , Malayalam