ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಅಭಿವೃದ್ಧಿ ಮತ್ತು ಸಂರಕ್ಷಣೆ ಸದಾ ಜೊತೆಜೊತೆಯಾಗಿ ಸಾಗಬಹುದು: ಉಪರಾಷ್ಟ್ರಪತಿ


ಭಾರತದ ಸುಸ್ಥಿರ ಭವಿಷ್ಯಕ್ಕಾಗಿ ಆಧುನಿಕ ವೈಜ್ಞಾನಿಕ ಅರಣ್ಯ ಮತ್ತು ನಾಗರಿಕ ಬುದ್ಧಿವಂತಿಕೆ ಪರಸ್ಪರ ಪೂರಕವಾಗಬೇಕು: ಉಪರಾಷ್ಟ್ರಪತಿ

ತಲೆಮಾರುಗಳಿಂದ ಅರಣ್ಯ ಭೂದೃಶ್ಯಗಳೊಂದಿಗೆ ವಾಸಿಸುವ ಸಮುದಾಯಗಳ ಜ್ಞಾನವನ್ನು ಗೌರವಿಸಿ: ಉಪರಾಷ್ಟ್ರಪತಿ

ಅರಣ್ಯಗಳ ಪುನಃಸ್ಥಾಪನೆ, ವನ್ಯಜೀವಿ ಸಂರಕ್ಷಣೆ ಮತ್ತು ಸಮುದಾಯಗಳಿಂದ ನೀವು ಗಳಿಸಿದ ವಿಶ್ವಾಸದ ಮೂಲಕ ನಿಮ್ಮ ವೃತ್ತಿಜೀವನವನ್ನು ಅಳೆಯಿರಿ: ಡೆಹ್ರಾಡೂನ್ ನಲ್ಲಿ ಐಎಫ್ಎಸ್ ಪ್ರೊಬೇಷನರಿಗಳನ್ನು ಉದ್ದೇಶಿಸಿ ಮಾತನಾಡುವಾಗ ಉಪರಾಷ್ಟ್ರಪತಿ

प्रविष्टि तिथि: 19 AUG 2026 6:10PM by PIB Bengaluru

ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಡೆಹ್ರಾಡೂನಿನ ಇಂದಿರಾ ಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿಯಲ್ಲಿ (ಐಜಿಎನ್ಎಫ್ಎ) ತರಬೇತಿ ಪಡೆಯುತ್ತಿರುವ 2025-2027 ಬ್ಯಾಚಿನ ಭಾರತೀಯ ಅರಣ್ಯ ಸೇವೆಯ (ಐಎಫ್ಎಸ್) ಪ್ರೊಬೇಷನರಿಗಳು ಮತ್ತು ರಾಯಲ್ ಭೂತಾನ್ ಅರಣ್ಯ ಸೇವೆಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ತರಬೇತಿ ನಿರತ ಅಧಿಕಾರಿಗಳನ್ನು ಅಭಿನಂದಿಸಿದ ಉಪರಾಷ್ಟ್ರಪತಿಯವರು, ವಿಕಸಿತ ಭಾರತ @2047ಕ್ಕೆ ಸಾಗುವ  ನಿರ್ಣಾಯಕ ದಶಕಗಳಲ್ಲಿ ಭಾರತದ ಅರಣ್ಯಗಳು, ವನ್ಯಜೀವಿಗಳು, ಜೀವವೈವಿಧ್ಯತೆ ಮತ್ತು ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ತಾವು ಹೊರಲಿದ್ದೀರಿ ಎಂದು ಹೇಳಿದರು.

ರಾಷ್ಟ್ರದ ಪರಿಸರ ಭದ್ರತೆಯನ್ನು ಬಲಪಡಿಸಲು ಮತ್ತು 2070ರ ವೇಳೆಗೆ ನಿವ್ವಳ-ಶೂನ್ಯ ಹೊರಸೂಸುವಿಕೆಯ ಗುರಿಯನ್ನು ಸಾಧಿಸಲು ಭಾರತೀಯ ಅರಣ್ಯ ಸೇವೆಯ ಕೊಡುಗೆ ಅವಿಭಾಜ್ಯ ಅಂಶವಾಗಿದೆ ಎಂದು ಅವರು ಒತ್ತಿ ಹೇಳಿದರು.

ಅಭಿವೃದ್ಧಿ ಮತ್ತು ಸಂರಕ್ಷಣೆ ಪರಸ್ಪರ ವಿರೋಧಿ ಶಕ್ತಿಗಳಲ್ಲ ಮತ್ತು ಅವು ಸದಾ ಜೊತೆಜೊತೆಯಾಗಿ ಸಾಗಬಹುದು ಎಂದು ಉಪರಾಷ್ಟ್ರಪತಿ ಹೇಳಿದರು. ಸಂರಕ್ಷಣೆ ಮತ್ತು ಅಭಿವೃದ್ಧಿ, ಪರಿಸರ ಭದ್ರತೆ ಮತ್ತು ಜೀವನೋಪಾಯ ಮತ್ತು ಪ್ರಸ್ತುತ ಅವಶ್ಯಕತೆಗಳು ಹಾಗು ಭವಿಷ್ಯದ ಪೀಳಿಗೆಯ ಹಿತಾಸಕ್ತಿಗಳ ನಡುವೆ ಸೂಕ್ತ ಸಮತೋಲನವನ್ನು ಕಂಡುಕೊಳ್ಳುವಂತೆ ಅವರು ಅಧಿಕಾರಿಗಳನ್ನು ಆಗ್ರಹಿಸಿದರು.

ವೈಯಕ್ತಿಕ ಉತ್ಕೃಷ್ಟತೆಗಿಂತ ತಂಡದ ಉತ್ಕೃಷ್ಟತೆಗೆ ಕರೆ ನೀಡಿದ ಶ್ರೀ ಸಿ.ಪಿ. ರಾಧಾಕೃಷ್ಣನ್, ನಿರಂತರ ಸಾಮೂಹಿಕ ಪ್ರಯತ್ನವು ರಾಷ್ಟ್ರಗಳು ಮತ್ತು ಸಂಸ್ಥೆಗಳನ್ನು ರೂಪಿಸುತ್ತದೆ ಎಂದು ಹೇಳಿದರು. ತಲೆಮಾರುಗಳಿಂದ ಕಾಡುಗಳು ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಗಳೊಂದಿಗೆ ಸಾಮರಸ್ಯದಿಂದ ಬದುಕುತ್ತಿರುವ ಸಮುದಾಯಗಳು ಗಳಿಸಿರುವ  ಸಾಂಪ್ರದಾಯಿಕ ಜ್ಞಾನವನ್ನು ಗೌರವಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಸಾರ್ವಜನಿಕ ಸೇವೆಯಲ್ಲಿ ಸಮಗ್ರತೆಯನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಯವರು, "ಸಮಗ್ರತೆ ಎಂಬುದು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲದ್ದು" ಮತ್ತು ಸಂವಿಧಾನ, ಕಾನೂನು, ವಿಜ್ಞಾನ ಮತ್ತು ವ್ಯಾಪಕ ಸಾರ್ವಜನಿಕ ಹಿತಾಸಕ್ತಿಯು ಕಠಿಣ ನಿರ್ಧಾರಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಸ್ಥಳೀಯ ವಾಸ್ತವಗಳಿಗೆ ಹೊಂದಿಕೊಳ್ಳುವಾಗ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಅವರು ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು.

ಅರಣ್ಯದಲ್ಲಿ ತಂತ್ರಜ್ಞಾನದ ಪಾತ್ರ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ಅವರು, ರಿಮೋಟ್ ಸೆನ್ಸಿಂಗ್, ಜಿಐಎಸ್, ಡ್ರೋನ್ ಗಳು, ಕೃತಕ ಬುದ್ಧಿಮತ್ತೆ ಮತ್ತು ಡೇಟಾ-ಚಾಲಿತ ವ್ಯವಸ್ಥೆಗಳನ್ನು ಕ್ಷೇತ್ರ ಅನುಭವ, ಉತ್ತಮ ನಿರ್ಧಾರ ಮತ್ತು ಜನರ ಬಗ್ಗೆ ಸೂಕ್ಷ್ಮತೆಯೊಂದಿಗೆ ಸಂಯೋಜಿಸುವಂತೆ ಅವರು ಹೊಸ ಪೀಳಿಗೆಯ ಅಧಿಕಾರಿಗಳಿಗೆ ಕರೆ ನೀಡಿದರು.

ದೇಶದ ಸುಸ್ಥಿರ ಭವಿಷ್ಯವನ್ನು ರೂಪಿಸುವಲ್ಲಿ ಆಧುನಿಕ ವೈಜ್ಞಾನಿಕ ಅರಣ್ಯ ಮತ್ತು ಭಾರತದ ನಾಗರಿಕತೆಯ ಬುದ್ಧಿವಂತಿಕೆ ಪರಸ್ಪರ ಪೂರಕವಾಗಬೇಕು ಎಂದು ಉಪರಾಷ್ಟ್ರಪತಿ ಹೇಳಿದರು.

ಅರಣ್ಯ ಸೇವೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಗಳು, ಪ್ರಸ್ತುತ ಬ್ಯಾಚ್ ನಲ್ಲಿ ಮಹಿಳೆಯರು ಸುಮಾರು ಶೇಕಡಾ 17 ರಷ್ಟಿದ್ದಾರೆ ಎಂದು ಹೇಳಿದರು, ಇದು ಉತ್ತೇಜನಕಾರಿ ಪರಿವರ್ತನೆ ಮತ್ತು ನಾರಿ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.

ಅಧಿಕಾರಿಗಳು ತಮ್ಮ ವೃತ್ತಿಜೀವನವನ್ನು ಕೇವಲ ತಾವು ಹೊಂದಿರುವ ಸ್ಥಾನಗಳಿಂದ ಅಳೆಯಬಾರದು ಎಂದು ಸಲಹೆ ನೀಡಿದ ಉಪರಾಷ್ಟ್ರಪತಿಯವರು, ಅವರು ಪುನಃಸ್ಥಾಪಿಸುವ ಅರಣ್ಯಗಳು, ಅವರು ರಕ್ಷಿಸುವ ವನ್ಯಜೀವಿಗಳು, ಅವರು ಗಳಿಸುವ ಸಮುದಾಯಗಳ ವಿಶ್ವಾಸ ಮತ್ತು ಭವಿಷ್ಯದ ಪೀಳಿಗೆಗೆ ಅವರು ಬಿಟ್ಟುಹೋಗುವ ಪರಂಪರೆಯಿಂದ ತಮ್ಮ ಕೊಡುಗೆಯನ್ನು ಅಳೆಯುವಂತೆ ಆಗ್ರಹಿಸಿದರು. "ರಾಷ್ಟ್ರ ಪ್ರಥಮ" (ರಾಷ್ಟ್ರ ಮೊದಲು) ಎಂಬ ರಾಷ್ಟ್ರೀಯ ಹಿತಾಸಕ್ತಿಗೆ ಸದಾ ಆದ್ಯತೆ ನೀಡುವಂತೆ ಒತ್ತಾಯಿಸುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಉತ್ತರಾಖಂಡ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ) ; ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ; ಐಜಿಎನ್ಎಫ್ಎ ನಿರ್ದೇಶಕ ಡಾ. ರಾಜೇಂದ್ರ ಪ್ರಸಾದ್; ಮತ್ತು ಕೋರ್ಸ್ ನಿರ್ದೇಶಕಿ ಶ್ರೀಮತಿ ಅಜೀತಾ ಲಾಂಗ್ಜಾಮ್ ಹಾಗು ಇತರ ಗಣ್ಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದಕ್ಕೂ ಮೊದಲು, ಇಂದು ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಪರಾಷ್ಟ್ರಪತಿಗಳನ್ನು ಉತ್ತರಾಖಂಡದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ (ನಿವೃತ್ತ), ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಮತ್ತು ಇತರ ಗಣ್ಯರು ಆತ್ಮೀಯವಾಗಿ ಸ್ವಾಗತಿಸಿದರು.

ರಾಜ್ಯಕ್ಕೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ, ಉಪರಾಷ್ಟ್ರಪತಿಗಳು ನಾಳೆ ಮುಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (ಎಲ್.ಬಿ.ಎಸ್.ಎನ್.ಎ.ಎ.) ಯಲ್ಲಿ ಐಎಎಸ್ ಪ್ರೊಬೆಷನರ್‌ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 

*****


(रिलीज़ आईडी: 2301389) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Gujarati , Tamil , Malayalam