ರೈಲ್ವೇ ಸಚಿವಾಲಯ
azadi ka amrit mahotsav

ರೈಲು ಸಂಪರ್ಕದ ಬಲವರ್ಧನೆಯಿಂದ ಗ್ವಾಲಿಯರ್-ಚಂಬಲ್ ಪ್ರದೇಶಕ್ಕೆ ಹೊಸ ವೇಗ


ಕೈಲಾರಾಸ್-ಸಬಲಗಢ-ಬೀರಪುರ ಗೇಜ್ ಪರಿವರ್ತಿತ ರೈಲು ಮಾರ್ಗವನ್ನು ಉದ್ಘಾಟಿಸಿದ ಶ್ರೀ ಅಶ್ವಿನಿ ವೈಷ್ಣವ್; ಗ್ವಾಲಿಯರ್–ಕೈಲಾರಸ್ ರೈಲನ್ನು ಬೀರಪುರದವರೆಗೆ ವಿಸ್ತರಿಸಿದ ರೈಲು ಸೇವೆಗೆ ಚಾಲನೆ

ಮೊರೆನಾ ಮತ್ತು ಶಿಯೋಪುರ ಜಿಲ್ಲೆಗಳ 100ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಕೈಲಾರಸ್–ಬೀರಪುರ ಗೇಜ್‌ ಪರಿವರ್ತನೆಯಿಂದ ಪ್ರಯೋಜನ: ಶ್ರೀ ಅಶ್ವಿನಿ ವೈಷ್ಣವ್

ಬೀರಪುರ–ಸೆರೋನಿ ರಸ್ತೆ ಮತ್ತು ಸೆರೋನಿ ರಸ್ತೆ–ಶಿಯೋಪುರ ಕಲಾನ್ ಮಾರ್ಗಗಳ ಕಾಮಗಾರಿ ಬಹುತೇಕ ಪೂರ್ಣ: ಶ್ರೀ ವೈಷ್ಣವ್

2014ರಿಂದ ಭಾರತೀಯ ರೈಲ್ವೆಯಲ್ಲಿ 5.54 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ನೇಮಕ: ರೈಲ್ವೆ ಸಚಿವರು

ಮಧ್ಯಪ್ರದೇಶದ ರೈಲ್ವೆ ಬಜೆಟ್ 2009–14ರ ₹632 ಕೋಟಿಯಿಂದ 2026–27ರಲ್ಲಿ ₹15,188 ಕೋಟಿಗೆ ಏರಿಕೆ; ಸುಮಾರು 24 ಪಟ್ಟು ಹೆಚ್ಚಳ

प्रविष्टि तिथि: 18 AUG 2026 5:40PM by PIB Bengaluru

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರೊಂದಿಗೆ ಇಂದು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಧ್ಯಪ್ರದೇಶದ ಗೇಜ್‌ ಪರಿವರ್ತನೆಗೊಂಡ ಕೈಲಾರಸ್–ಸಬಲಗಢ–ಬೀರಪುರ ರೈಲು ಮಾರ್ಗವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಗ್ವಾಲಿಯರ್–ಕೈಲಾರಸ್ ರೈಲು ಸೇವೆಯನ್ನು ಬೀರಪುರದವರೆಗೆ ವಿಸ್ತರಿಸಿದ ರೈಲಿಗೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಸಿರು ನಿಶಾನೆ ತೋರಿದರು.

 

The extension of Gwalior–Kailaras Train Service upto Birpur reinforces rail connectivity between Gwalior and the surrounding region, providing better access to essential services. #RailConnectivity #RailInfra4MadhyaPradesh pic.twitter.com/H90WRRsdJ6

— Ministry of Railways (@RailMinIndia) August 18, 2026

 

ಗ್ವಾಲಿಯರ್–ಕೈಲಾರಸ್ ರೈಲು ಸೇವೆಯನ್ನು ಬೀರಪುರದವರೆಗೆ ವಿಸ್ತರಿಸಿರುವುದರಿಂದ ಬೀರಪುರ, ವಿಜಯಪುರ ಮತ್ತು ಸಬಲಗಢ ಪಟ್ಟಣಗಳಿಗೆ ಗ್ವಾಲಿಯರ್‌ ನೊಂದಿಗೆ ನೇರ ರೈಲು ಸಂಪರ್ಕ ದೊರೆಯಲಿದೆ. ಇದರಿಂದ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳ ಪ್ರಯಾಣಿಕರಿಗೆ ಹೆಚ್ಚು ಕೈಗೆಟುಕುವ ಹಾಗೂ ಅನುಕೂಲಕರ ಪ್ರಯಾಣ ಸೌಲಭ್ಯ ಲಭ್ಯವಾಗಲಿದೆ. ಶಿಕ್ಷಣ, ಆರೋಗ್ಯ ಸೇವೆ ಮತ್ತು ಉದ್ಯೋಗಾವಕಾಶಗಳಿಗಾಗಿ ಗ್ವಾಲಿಯರ್‌ ಗೆ ತೆರಳಲು ಇದು ಹೆಚ್ಚಿನ ಅನುಕೂಲ ಕಲ್ಪಿಸುವುದರ ಜೊತೆಗೆ, ಸ್ಥಳೀಯ ವ್ಯಾಪಾರ ಮತ್ತು ಈ ಪ್ರದೇಶದ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಲಿದೆ.

 

माननीय मुख्यमंत्री,मध्य प्रदेश श्री @DrMohanYadav51, माननीय केंद्रीय मंत्री श्री @AshwiniVaishnaw, माननीय केंद्रीय मंत्री श्री @JM_Scindia एवं माननीय विधानसभा अध्यक्ष,मध्य प्रदेश श्री @nstomar द्वारा ग्वालियर–कैलारस ट्रेन के बीरपुर तक विस्तार का हरी झंडी दिखाकर शुभारंभ किया गया। pic.twitter.com/ME54dxe2nJ

— Ministry of Railways (@RailMinIndia) August 18, 2026

 

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, 56 ಕಿ.ಮೀ. ಉದ್ದದ ಕೈಲಾರಸ್–ಬೀರಪುರ ಗೇಜ್‌ ಪರಿವರ್ತಿತ ರೈಲು ಮಾರ್ಗದ ಉದ್ಘಾಟನೆಯು ಗ್ವಾಲಿಯರ್–ಚಂಬಲ್ ಪ್ರದೇಶಕ್ಕೆ ಮಹತ್ವದ ಮೈಲಿಗಲ್ಲಾಗಿದೆ ಎಂದು ಹೇಳಿದರು. ಎಲ್ಲ ಪಾಲುದಾರರ ಸಾಮೂಹಿಕ ಪ್ರಯತ್ನದಿಂದ ಈ ಯೋಜನೆ ಸಾಕಾರಗೊಂಡಿದೆ ಎಂದು ಅವರು ತಿಳಿಸಿದರು. ಮೊರೆನಾ ಜಿಲ್ಲೆಯ ಬಮೋರ್, ಜೌರಾ, ಕೈಲಾರಸ್ ಮತ್ತು ಸಬಲಗಢ ತಾಲ್ಲೂಕುಗಳು ಹಾಗೂ ಶಿಯೋಪುರ ಜಿಲ್ಲೆಯ ಬೀರಪುರ, ಶಿಯೋಪುರ ಮತ್ತು ಕರಹಾಲ್ ತಾಲ್ಲೂಕುಗಳ 100ಕ್ಕೂ ಹೆಚ್ಚು ಗ್ರಾಮಗಳ ಜನರು ಈ ಗೇಜ್‌ ಪರಿವರ್ತನೆಯಿಂದ ಪ್ರಯೋಜನ ಪಡೆಯಲಿದ್ದಾರೆ ಎಂದು ಶ್ರೀ ವೈಷ್ಣವ್ ಹೇಳಿದರು.

 

कैलारस–सबलगढ़ –बीरपुर रेलखंड मुरैना और श्योपुर में रेल कनेक्टिविटी को सुदृढ़ करेगा, जिससे सुगम आवागमन और बेहतर क्षेत्रीय पहुंच सुनिश्चित होगी।#RailConnectivity #RailInfra4MadhyaPradesh pic.twitter.com/40sNAoYZwK

— Ministry of Railways (@RailMinIndia) August 18, 2026

 

ಈ ರೈಲು ಸಂಪರ್ಕವನ್ನು ಮುಂದಿನ ಹಂತದಲ್ಲಿ ಶಿಯೋಪುರ ಕಲಾನ್‌ ವರೆಗೆ ಮತ್ತು ಅಂತಿಮವಾಗಿ ಕೋಟಾವರೆಗೆ ವಿಸ್ತರಿಸಲಾಗುವುದು. ಇದರಿಂದ ಈ ಪ್ರದೇಶವು ಪ್ರಮುಖ ಶೈಕ್ಷಣಿಕ ಮತ್ತು ಕೈಗಾರಿಕಾ ಕೇಂದ್ರಗಳೊಂದಿಗೆ ಸಂಪರ್ಕ ಹೊಂದಲಿದೆ ಎಂದು ಶ್ರೀ ವೈಷ್ಣವ್ ತಿಳಿಸಿದರು. ಈ ಯೋಜನೆಗೆ ಆದ್ಯತೆ ನೀಡಲಾಗಿದ್ದು, 117 ಕಿ.ಮೀ. ಉದ್ದದ ಬಿರ್ಲಾನಗರ–ಬೀರಪುರ ರೈಲು ಮಾರ್ಗದ ಕಾಮಗಾರಿ ಇತ್ತೀಚಿನ ವರ್ಷಗಳಲ್ಲಿ ತ್ವರಿತಗತಿಯಲ್ಲಿ ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದರು. ಈ ಪ್ರದೇಶದ ವಿವಿಧ ಹಂತಗಳನ್ನು ಕ್ರಮವಾಗಿ ಸಂಚಾರಕ್ಕೆ ಮುಕ್ತಗೊಳಿಸಿರುವ ವಿವರಗಳನ್ನು ಅವರು ನೀಡಿದರು.

ಕ್ರ.ಸಂ.

ವಿಭಾಗ

ಉದ್ದ

ಪ್ರಯಾಣಿಕರ ಸಂಚಾರಕ್ಕೆ ಮುಕ್ತಗೊಳಿಸಿದ ಅವಧಿ

1

ಬಿರ್ಲಾನಗರ - ರಾಯಾರು

11 ಕಿಮೀ

ಮೇ 2023

2

ರಾಯಾರು - ಸುಮಾವಲಿ

22 ಕಿಮೀ

ಆಗಸ್ಟ್ 2023

3

ಸುಮಾವಲಿ - ಜೌರಾ

14 ಕಿಮೀ

ನವೆಂಬರ್ 2023

4

ಜೌರಾ - ಕೈಲಾರಸ್

14 ಕಿಮೀ

ಫೆಬ್ರವರಿ 2024

5

ಕೈಲಾರಸ್ - ಸಬಲಗಢ

29 ಕಿಮೀ

2025

6

ಸಬಲಗಢ – ಬೀರಪುರ

27 ಕಿಮೀ

2026

ಬೀರಪುರದಿಂದ ಸೆರೋನಿ ರಸ್ತೆವರೆಗಿನ 37 ಕಿ.ಮೀ. ಹಾಗೂ ಸೆರೋನಿ ರಸ್ತೆಯಿಂದ ಶಿಯೋಪುರ ಕಲಾನ್‌ ವರೆಗಿನ 33 ಕಿ.ಮೀ. ಮುಂದಿನ ಹಂತದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ ಎಂದು ಶ್ರೀ ವೈಷ್ಣವ್ ಹೇಳಿದರು. ಇಡೀ ಗ್ವಾಲಿಯರ್–ಶಿಯೋಪುರ ಕಲಾನ್ ರೈಲು ಮಾರ್ಗವು ಮುಂದಿನ ಕೆಲವು ತಿಂಗಳಲ್ಲಿ ಪೂರ್ಣಗೊಂಡು ಜನರ ಬಳಕೆಗೆ ಲಭ್ಯವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಈ ಯೋಜನೆಯು ಹಲವು ಪ್ರಮುಖ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಮಧ್ಯಪ್ರದೇಶದಲ್ಲಿ ರೈಲು ಮೂಲಸೌಕರ್ಯದ ಅಭಿವೃದ್ಧಿಗೆ ಕೊಡುಗೆ ನೀಡಲಿದೆ ಎಂದು ಶ್ರೀ ವೈಷ್ಣವ್ ಹೇಳಿದರು.

ಮಧ್ಯಪ್ರದೇಶದಲ್ಲಿ ರೈಲ್ವೆ ಅಭಿವೃದ್ಧಿಯ ಪ್ರಮಾಣವನ್ನು ಉಲ್ಲೇಖಿಸಿದ ಶ್ರೀ ವೈಷ್ಣವ್ ಅವರು, ರಾಜ್ಯದ ರೈಲ್ವೆ ಬಜೆಟ್ 2009–14ರ ಅವಧಿಯ ₹₹632 ಕೋಟಿಯಿಂದ 2026–27ರಲ್ಲಿ ₹₹15,188 ಕೋಟಿಗೆ ಏರಿಕೆಯಾಗಿದ್ದು, ಸುಮಾರು 24 ಪಟ್ಟು ಹೆಚ್ಚಳವಾಗಿದೆ ಎಂದು ಹೇಳಿದರು. ಮಧ್ಯಪ್ರದೇಶದಲ್ಲಿ ಸುಮಾರು ₹₹1.55 ಲಕ್ಷ ಕೋಟಿ ಮೌಲ್ಯದ ರೈಲ್ವೆ ಯೋಜನೆಗಳು ಪ್ರಸ್ತುತ ಪ್ರಗತಿಯಲ್ಲಿವೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ 80 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ನಡೆಯುತ್ತಿದ್ದು, ರಾಜ್ಯವನ್ನು ಸಂಪರ್ಕಿಸುವ ಐದು ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ಏಳು ಅಮೃತ್ ಭಾರತ್ ರೈಲುಗಳನ್ನು ಪರಿಚಯಿಸಲಾಗಿದೆ ಎಂದು ಅವರು ತಿಳಿಸಿದರು.

ಮಧ್ಯಪ್ರದೇಶದಲ್ಲಿ ಮನ್ಮಾಡ್–ಇಂದೋರ್ ಹೊಸ ರೈಲು ಮಾರ್ಗ ಸೇರಿದಂತೆ ಹಲವು ಪ್ರಮುಖ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದ ವಿವಿಧೆಡೆ ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗ ನಿರ್ಮಾಣದ ಹಲವು ಯೋಜನೆಗಳನ್ನೂ ಕೈಗೆತ್ತಿಕೊಳ್ಳಲಾಗಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ಹಾಲಿ ಸರ್ಕಾರದ ಮೂರನೇ ಅವಧಿಯಲ್ಲಿ ಮಧ್ಯಪ್ರದೇಶಕ್ಕೆ ಸಂಬಂಧಿಸಿದಂತೆ ಅನುಮೋದಿಸಲಾದ ಯೋಜನೆಗಳ ಒಟ್ಟು ಮೊತ್ತ ಸುಮಾರು ₹64,512 ಕೋಟಿಯಷ್ಟಿದೆ ಎಂದು ಅವರು ತಿಳಿಸಿದರು.

2014ರಿಂದ ಭಾರತೀಯ ರೈಲ್ವೆಯಲ್ಲಿ 5.54 ಲಕ್ಷಕ್ಕೂ ಹೆಚ್ಚು ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ರೈಲು ಮಾರ್ಗಗಳ ವಿದ್ಯುದೀಕರಣ ಮತ್ತು ಆಧುನೀಕರಣ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ ಎಂದು ಅವರು ತಿಳಿಸಿದರು. ವಿದ್ಯುದೀಕರಣದಿಂದ ಭಾರತೀಯ ರೈಲ್ವೆ ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿದ್ದು, ಆಮದು ಮಾಡಿಕೊಳ್ಳುವ ಇಂಧನದ ಮೇಲಿನ ವೆಚ್ಚವೂ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಾತನಾಡಿ, ಗ್ವಾಲಿಯರ್–ಚಂಬಲ್ ಪ್ರದೇಶಕ್ಕೆ ಇದೊಂದು ಐತಿಹಾಸಿಕ ದಿನವಾಗಿದ್ದು, ಕೈಲಾರಸ್‌ನಿಂದ ಬೀರಪುರದವರೆಗೆ ರೈಲು ಮಾರ್ಗದ ವಿಸ್ತರಣೆಯು ಈ ಪ್ರದೇಶಕ್ಕೆ ಹೊಸ ಆರಂಭವಾಗಿದೆ ಎಂದು ಹೇಳಿದರು. ಈ ಹಿಂದೆ ಗ್ವಾಲಿಯರ್, ಬಮೋರ್, ಸುಮಾವಲಿ, ಜೌರಾ ಮತ್ತು ಕೈಲಾರಸ್‌ ವರೆಗೆ ಸಾಗುತ್ತಿದ್ದ ರೈಲು ಪ್ರಯಾಣ ಇದೀಗ ಬೀರಪುರದವರೆಗೆ ವಿಸ್ತರಣೆಯಾಗಿದ್ದು, ಮುಂದಿನ ಹಂತದಲ್ಲಿ ಶಿಯೋಪುರ ಮತ್ತು ಅಂತಿಮವಾಗಿ ಕೋಟಾವರೆಗೆ ತಲುಪಲಿದೆ ಎಂದು ಅವರು ತಿಳಿಸಿದರು.

ರೈಲು ಮಾರ್ಗವು ಕೇವಲ ಸಾರಿಗೆ ವ್ಯವಸ್ಥೆಯಲ್ಲ; ಅದು ಶಿಕ್ಷಣ, ಆರೋಗ್ಯ ಸೇವೆ ಹಾಗೂ ಇತರ ಆಧುನಿಕ ಸೌಲಭ್ಯಗಳಿಗೆ ಪ್ರವೇಶವನ್ನೂ ಸುಗಮಗೊಳಿಸುತ್ತದೆ ಎಂದು ಶ್ರೀ ಸಿಂಧಿಯಾ ಒತ್ತಿ ಹೇಳಿದರು. ಬೀರಪುರದವರೆಗೆ ರೈಲು ಸೇವೆ ವಿಸ್ತರಣೆಯಿಂದ ಕೈಲಾರಸ್, ಸಬಲಗಢ, ರಾಂಪಹಾಡಿ, ವಿಜಯಪುರ ಮತ್ತು ಬೀರಪುರ ಸೇರಿದಂತೆ ಹಲವು ಪ್ರದೇಶಗಳ ಜನರಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು. ಕೈಲಾರಸ್‌ ವರೆಗೆ ಇರುವ ರೈಲು ಮಾರ್ಗವು ಪ್ರಸ್ತುತ ಪ್ರತಿದಿನ ಸುಮಾರು 10,000 ಜನರಿಗೆ ಸಾರಿಗೆ ಸೌಲಭ್ಯ ಒದಗಿಸುತ್ತಿದ್ದು, ವಿಸ್ತರಣೆಯ ಬಳಿಕ ರೈಲ್ವೆಯ ವ್ಯಾಪ್ತಿ ಇನ್ನಷ್ಟು ವಿಸ್ತರಿಸಿ ಹೆಚ್ಚಿನ ಜನಸಂಖ್ಯೆಗೆ ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದರು.

ಮಧ್ಯಪ್ರದೇಶದಲ್ಲಿ ಇಂದೋರ್–ಮನ್ಮಾಡ್ ಹೊಸ ರೈಲು ಮಾರ್ಗ ಸೇರಿದಂತೆ ರೈಲು ಜಾಲದ ವಿಸ್ತರಣೆಯಿಂದ ಹೊಸ ಮಾರ್ಗಗಳು ತೆರೆದುಕೊಳ್ಳಲಿದ್ದು, ಗ್ವಾಲಿಯರ್–ಚಂಬಲ್ ಪ್ರದೇಶ ಮತ್ತು ಮಾಲ್ವಾ ನಡುವಿನ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಹೇಳಿದರು. ಈ ಯೋಜನೆಯು ಹೊಸ ಕೈಗಾರಿಕಾ ವಲಯದ ಅಭಿವೃದ್ಧಿಗೆ ಕೊಡುಗೆ ನೀಡುವುದರ ಜೊತೆಗೆ ಪ್ರವಾಸೋದ್ಯಮ ಮತ್ತು ಇತರ ಆರ್ಥಿಕ ಚಟುವಟಿಕೆಗಳಿಗೂ ಪ್ರಯೋಜನಕಾರಿಯಾಗಲಿದೆ ಎಂದು ಅವರು ಹೇಳಿದರು.

ಕೈಗಾರಿಕೆಗಳು ಮತ್ತು ಉದ್ಯೋಗದ ಅಭಿವೃದ್ಧಿಗೆ ರೈಲು ಸಂಪರ್ಕ ಅತ್ಯಗತ್ಯ ಎಂದು ಡಾ. ಯಾದವ್ ಒತ್ತಿ ಹೇಳಿದರು. ಗ್ವಾಲಿಯರ್–ಚಂಬಲ್ ಪ್ರದೇಶದಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್, ಪಾದರಕ್ಷೆ, ಹೈಡ್ರೋಜನ್ ಉತ್ಪಾದನೆ ಮತ್ತು ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಮರ್ಥ್ಯವಿದೆ ಎಂದು ಅವರು ತಿಳಿಸಿದರು. ಸುಧಾರಿತ ರೈಲು ಸಂಪರ್ಕವು ಈ ಉದಯೋನ್ಮುಖ ಕ್ಷೇತ್ರಗಳಿಗೆ ಬೆಂಬಲ ನೀಡಲಿದೆ ಎಂದು ಹೇಳಿದರು. ಗ್ವಾಲಿಯರ್‌ ನಿಂದ ಶಿವಪುರಿ ಮತ್ತು ಶಿಯೋಪುರದತ್ತ ರೈಲು ಸಂಪರ್ಕ ವಿಸ್ತರಣೆಯಾಗುವುದರಿಂದ ಗ್ವಾಲಿಯರ್ ಮತ್ತು ವಿಶಾಲ ಪ್ರದೇಶದ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ ಎಂದು ಡಾ. ಯಾದವ್ ಹೇಳಿದರು. ರಾಜ್ಯಾದ್ಯಂತ ನಡೆಯುತ್ತಿರುವ ರೈಲು ಮಾರ್ಗಗಳ ದ್ವಿಗುಣಗೊಳಿಸುವಿಕೆ (ಡಬ್ಲಿಂಗ್), ತ್ರಿಗುಣಗೊಳಿಸುವಿಕೆ (ಟ್ರಿಪ್ಲಿಂಗ್) ಮತ್ತು ನಾಲ್ಕು ಪಟ್ಟುಗೊಳಿಸುವಿಕೆ (ಕ್ವಾಡ್ರುಪ್ಲಿಂಗ್) ಕಾಮಗಾರಿಗಳು ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಅವರು ಹೇಳಿದರು.

ಮಧ್ಯಪ್ರದೇಶ ವಿಧಾನಸಭೆಯ ಸಭಾಧ್ಯಕ್ಷ ಶ್ರೀ ನರೇಂದ್ರ ಸಿಂಗ್ ತೋಮರ್ ಮತ್ತು ಮೊರೆನಾ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಶಿವಮಂಗಲ್ ಸಿಂಗ್ ತೋಮರ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

******

 

 


(रिलीज़ आईडी: 2300976) आगंतुक पटल : 18
इस विज्ञप्ति को इन भाषाओं में पढ़ें: English , Urdu , हिन्दी