ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಎರಡು ದಿನಗಳ ಐಸಿಎಂಆರ್-ಶೈನ್ 2026 (ICMR-SHINE 2026) ಮುಕ್ತಾಯ, ಸಾವಿರಾರು ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಕುತೂಹಲಕ್ಕೆ ಪ್ರಚೋದನೆ
ದೂರದ ಪ್ರದೇಶಗಳಿಂದ ಹಿಡಿದು ಗ್ರಾಮೀಣ ಪ್ರದೇಶಗಳವರೆಗೆ, ಐಸಿಎಂಆರ್-ಶೈನ್ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 83 ಸ್ಥಳಗಳಲ್ಲಿ ,ವೈದ್ಯಕೀಯ ಜೈವಿಕ ಸಂಶೋಧನೆಯನ್ನು ಯುವ ಮನಸ್ಸುಗಳಿಗೆ ಹತ್ತಿರವಾಗಿಸುತ್ತಿದ್ದು, ಸ್ವಸ್ಥ ಮತ್ತು ವಿಕಸಿತ ಭಾರತಕ್ಕೆ ಕೊಡುಗೆ ನೀಡುತ್ತಿದೆ
ನಾಗ್‌ಪುರ ಮತ್ತು ಗೋರಖ್‌ಪುರದಲ್ಲಿ ಮೊಬೈಲ್ BSL-3 ಪ್ರಯೋಗಾಲಯಗಳ ಪ್ರತ್ಯಕ್ಷ ವೀಕ್ಷಣೆ, ನೇರ ವೈಜ್ಞಾನಿಕ ಪ್ರಾತ್ಯಕ್ಷಿಕೆಗಳು ಮತ್ತು ದೇಶಾದ್ಯಂತ ಪ್ರಾಯೋಗಿಕ ಚಟುವಟಿಕೆಗಳ ಅನುಭವ ಪಡೆದ ವಿದ್ಯಾರ್ಥಿಗಳು
ದೆಹಲಿಯ ಅಟಲ್ ಟಿಂಕರಿಂಗ್ ಲ್ಯಾಬ್ಸ್ ಮೂಲಕ ಸಾರ್ವಜನಿಕ ಆರೋಗ್ಯ ಪರಿಹಾರಗಳನ್ನು ಪ್ರದರ್ಶಿಸಿದ ಯುವ ನಾವೀನ್ಯಕಾರರು
ಐಸಿಎಂಆರ್‌ನಿಂದ ಶೈನ್ (SHINE) ವೆಬ್‌ಸೈಟ್ ಚಾಲನೆ ಮತ್ತು ನೈಜ ಪ್ರಪಂಚದ ಸಾರ್ವಜನಿಕ ಆರೋಗ್ಯ ಸವಾಲುಗಳ ಕುರಿತು ದೇಶಾದ್ಯಂತ ಶಾಲೆಗಳ ಸ್ಪರ್ಧೆ ಘೋಷಣೆ; ಅರ್ಜಿ ಸಲ್ಲಿಸಲು 2026ರ ಸೆಪ್ಟೆಂಬರ್ 11 ರವರೆಗೆ ಅವಕಾಶ
ಸಂಶೋಧನಾ ಅವಕಾಶಗಳನ್ನು ಸ್ವಾಗತಿಸಿದ ಶಾಲೆಗಳು ಮತ್ತು ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಇನ್ನಷ್ಟು ಹೆಚ್ಚು ಸಂವಾದಗಳನ್ನು ನಡೆಸಲು ಕರೆ
प्रविष्टि तिथि:
13 AUG 2026 5:21PM by PIB Bengaluru
ಆರೋಗ್ಯ ಸಂಶೋಧನಾ ಇಲಾಖೆ - ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (DHR-ICMR) 'ಐಸಿಎಂಆರ್-ಶೈನ್' (ಮುಂದಿನ ಪೀಳಿಗೆಯ ಶೋಧಕರಿಗಾಗಿ ವಿಜ್ಞಾನ ಮತ್ತು ಆರೋಗ್ಯ ನಾವೀನ್ಯತೆ) ಯ ಎರಡನೇ ಆವೃತ್ತಿಯನ್ನು 2026ರ ಆಗಸ್ಟ್ 11-12 ರಂದು ಯಶಸ್ವಿಯಾಗಿ ಮುಕ್ತಾಯಗೊಳಿಸಿತು. ಇದು ದೇಶಾದ್ಯಂತದ ಶಾಲಾ ವಿದ್ಯಾರ್ಥಿಗಳಿಗೆ ಜೈವಿಕ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಯ ಪ್ರಪಂಚವನ್ನು ಹತ್ತಿರ ತಂದಿತು. ಪ್ರಧಾನಮಂತ್ರಿಯವರ "ಒಂದು ದಿನವನ್ನು ವಿಜ್ಞಾನಿಯಾಗಿ ಕಳೆಯಿರಿ" ಎಂಬ ಕರೆಗೆ ಸ್ಪಂದಿಸುತ್ತಾ, ಈ ದೇಶವ್ಯಾಪಿ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವು 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಐಸಿಎಂಆರ್ ಪ್ರಯೋಗಾಲಯಗಳ ಬಾಗಿಲುಗಳನ್ನು ತೆರೆಯಿತು, ಸಾರ್ವಜನಿಕ ಆರೋಗ್ಯದ ಹಿಂದಿರುವ ವಿಜ್ಞಾನವನ್ನು ನೇರವಾಗಿ ನೋಡಲು, ಅನುಭವಿಸಲು ಮತ್ತು ಸಂವಾದ ನಡೆಸಲು ಅವರಿಗೆ ಅವಕಾಶವನ್ನು ನೀಡಿತು.
ಈ ಉಪಕ್ರಮವು 83 ವಿಶಿಷ್ಟ ಸ್ಥಳಗಳ ಮೂಲಕ 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿದೆ. ಪ್ರಮುಖ ಮಹಾನಗರ ಕೇಂದ್ರಗಳನ್ನು ಮೀರಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಅಂಡಮಾನ್ ದ್ವೀಪಗಳು ಹಾಗೂ ಜಾರ್ಖಂಡ್, ಒಡಿಶಾ ಮತ್ತು ಮಧ್ಯಪ್ರದೇಶದ ಗ್ರಾಮೀಣ ಪ್ರದೇಶಗಳ ಶಾಂತ ಕಣಿವೆಗಳು ಮತ್ತು ದೂರದ ಪ್ರದೇಶಗಳವರೆಗೆ ಇದು ತಲುಪಿದೆ. ಸಂಶೋಧನಾ ವಾತಾವರಣವನ್ನು ಎಂದಿಗೂ ಅನುಭವಿಸದ ಸಾವಿರಾರು ವಿದ್ಯಾರ್ಥಿಗಳಿಗೆ, ಐಸಿಎಂಆರ್-ಶೈನ್ ಜೈವಿಕ ವೈದ್ಯಕೀಯ ತನಿಖೆಯ ಜಗತ್ತಿಗೆ ಸ್ವಾಗತಾರ್ಹ ಸೇತುವೆಯನ್ನು ಒದಗಿಸಿತು. ಸಂವಾದಾತ್ಮಕ ವೀಡಿಯೊಗಳು, ಪೋಸ್ಟರ್‌ಗಳು ಮತ್ತು ಕಟ್‌ಔಟ್‌ಗಳಲ್ಲಿ ಕಾಣಿಸಿಕೊಂಡ ಅಧಿಕೃತ ಮಾಸ್ಕಟ್ 'ಡಾ. ಕ್ಯೂರಿಯೋ' ಅವರ ಮಾರ್ಗದರ್ಶನದಲ್ಲಿ, ಸಂಕೀರ್ಣ ವಿಜ್ಞಾನವು ಆಕರ್ಷಕವಾಗಿ, ಸುಲಭವಾಗಿ ಮತ್ತು ವಿನೋದಮಯವಾಗಿ ಭಾಸವಾಗುವಂತೆ ವಾತಾವರಣವನ್ನು ವಿನ್ಯಾಸಗೊಳಿಸಲಾಗಿತ್ತು.
ನಾಗ್‌ಪುರ ಮತ್ತು ಗೋರಖ್‌ಪುರದಲ್ಲಿ, ವಿದ್ಯಾರ್ಥಿಗಳು ಚಕ್ರಗಳ ಮೇಲಿನ ಅತ್ಯಾಧುನಿಕ ಮೊಬೈಲ್ BSL-3 ಪ್ರಯೋಗಾಲಯಗಳ ಸಮೀಪಕ್ಕೆ ತೆರಳಿ, ಉನ್ನತ ಮಟ್ಟದ ಸಂಶೋಧನೆಯು ಕ್ಷೇತ್ರ ಮಟ್ಟದ ಪರಿಸ್ಥಿತಿಗಳಿಗೆ ಹೇಗೆ ನೇರವಾಗಿ ತಲುಪುತ್ತದೆ ಎಂಬುದನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದರು. ಇತರ ಕೇಂದ್ರಗಳಲ್ಲಿ, ಯುವ ವೀಕ್ಷಕರು ಜೀವಂತ ಪೋಸ್ಟರ್ ವಾಕ್‌ಗಳು, ನೇರ ವೈಜ್ಞಾನಿಕ ಪ್ರಾತ್ಯಕ್ಷಿಕೆಗಳು ಹಾಗೂ ದೇಹದ ತೂಕ ಸೂಚ್ಯಂಕ (BMI) ಲೆಕ್ಕಾಚಾರ ಮತ್ತು ಲ್ಯಾಬ್ ನೈರ್ಮಲ್ಯದ ಕುರಿತು ಪ್ರಾಯೋಗಿಕ ಅಭ್ಯಾಸಗಳಲ್ಲಿ ಭಾಗವಹಿಸಿದರು, ದೈನಂದಿನ ಆರೋಗ್ಯ ನಿರ್ಧಾರಗಳು ರಾಷ್ಟ್ರೀಯ ಸಾರ್ವಜನಿಕ ಆರೋಗ್ಯದ ವಿಶಾಲ ಚಿತ್ರಣಕ್ಕೆ ಹೇಗೆ ಸಂಪರ್ಕ ಹೊಂದಿವೆ ಎಂಬುದನ್ನು ತಿಳಿದುಕೊಂಡರು. ದೆಹಲಿಯಲ್ಲಿ, ನೀತಿ ಆಯೋಗದ ಅಡಿಯಲ್ಲಿರುವ ಅಟಲ್ ಟಿಂಕರಿಂಗ್ ಲ್ಯಾಬ್ಸ್ ಮೂಲಕ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಸೃಜನಶೀಲ ಪರಿಹಾರಗಳನ್ನು ಪ್ರದರ್ಶಿಸಿದಾಗ ಯುವ ನಾವೀನ್ಯತೆಯ ಉತ್ಸಾಹವು ಪೂರ್ಣ ಪ್ರಮಾಣದಲ್ಲಿ ಪ್ರದರ್ಶನಗೊಂಡಿತು, ಇದು ಶ್ರೇಷ್ಠ ವೈಜ್ಞಾನಿಕ ಆಲೋಚನೆಗಳಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಸಾಬೀತುಪಡಿಸಿತು.
ಈ ಉಪಕ್ರಮದ ಭಾಗವಾಗಿ, ಐಸಿಎಂಆರ್ ಅಧಿಕೃತ ಶೈನ್ (SHINE) ವೆಬ್‌ಸೈಟ್ (https://shine.icmr.org.in/) ಅನ್ನು ಪ್ರಾರಂಭಿಸಿತು, ಇದು ವಿದ್ಯಾರ್ಥಿಗಳಿಗೆ ಆರೋಗ್ಯ ಸಂಶೋಧನೆಗೆ ಸಂಬಂಧಿಸಿದ ಸಂಪನ್ಮೂಲಗಳು, ಕಾರ್ಯಕ್ರಮ ನವೀಕರಣಗಳು ಮತ್ತು ಅವಕಾಶಗಳ ಲಭ್ಯತೆಯನ್ನು ಒದಗಿಸುತ್ತದೆ. ಐಸಿಎಂಆರ್ ದೇಶಾದ್ಯಂತ ಶೈನ್ ಶಾಲಾ ಸ್ಪರ್ಧೆಯನ್ನು ಸಹ ಘೋಷಿಸಿದ್ದು, ನೈಜ ಪ್ರಪಂಚದ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ಗುರುತಿಸಲು, ಸಂಶೋಧನಾ ಪ್ರಶ್ನೆಗಳನ್ನು ರೂಪಿಸಲು ಮತ್ತು ಸಂಭಾವ್ಯ ಪರಿಹಾರಗಳನ್ನು ಪ್ರಸ್ತಾಪಿಸಲು ವಿದ್ಯಾರ್ಥಿಗಳನ್ನು ಆಹ್ವಾನಿಸಿದೆ. ಈ ಸ್ಪರ್ಧೆಯು ವೈಜ್ಞಾನಿಕ ತನಿಖೆ ಮತ್ತು ನಾವೀನ್ಯತೆಯ ದೃಷ್ಟಿಕೋನದ ಮೂಲಕ ತಮ್ಮ ಸುತ್ತಲಿನ ಆರೋಗ್ಯ ಸವಾಲುಗಳನ್ನು ನೋಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ "ಒಂದು ದಿನವನ್ನು ವಿಜ್ಞಾನಿಯಾಗಿ ಕಳೆಯಿರಿ" ಎಂಬ ಕಲ್ಪನೆಯನ್ನು ಇನ್ನಷ್ಟು ಮುನ್ನಡೆಸುತ್ತದೆ. ಅರ್ಜಿಗಳು 2026 ರ ಸೆಪ್ಟೆಂಬರ್ 11 ರವರೆಗೆ ಮುಕ್ತವಾಗಿದ್ದು, ಶೈನ್ ಪೋರ್ಟಲ್‌ನಲ್ಲಿ ಸಲ್ಲಿಸಬಹುದು.
ಈ ಉಪಕ್ರಮಕ್ಕೆ ದೇಶಾದ್ಯಂತ ಭಾಗವಹಿಸಿದ ಶಾಲೆಗಳಿಂದ ಪೋತ್ಸಾಹದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ತರಗತಿಯನ್ನು ಮೀರಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆ ಮತ್ತು ಪ್ರಯೋಗಾಲಯದ ಕೆಲಸಗಳ ಅಮೂಲ್ಯವಾದ ಪರಿಚಯವನ್ನು ನೀಡಿದ್ದಕ್ಕಾಗಿ ಶಿಕ್ಷಕರು ಕಾರ್ಯಕ್ರಮವನ್ನು ಸ್ವಾಗತಿಸಿದರು ಮತ್ತು ಆಗಾಗ್ಗೆ ಇಂತಹ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು. ಈ ಶಾಲಾ ಸ್ಪರ್ಧೆಯು ಉತ್ಸಾಹವನ್ನು ತಂದಿದ್ದು, ಭಾಗವಹಿಸಿದ ಒಂದು ಶಾಲೆಯು, ತಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಮತ್ತು ಅವರ ಸಲ್ಲಿಕೆಗಳನ್ನು ಶಾಲಾ ಪರೀಕ್ಷೆಯ ಸಮಯದಲ್ಲಿ ಆಂತರಿಕ ಪ್ರಾಜೆಕ್ಟ್ ಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದು ಎಂದು ಘೋಷಿಸಿದೆ.
ಐಸಿಎಂಆರ್-ಶೈನ್ ಮೂಲಕ, ಸಾವಿರಾರು ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಕೇವಲ ಕಲಿಯುವುದರಿಂದ ಅದನ್ನು ನೋಡುವುದು, ಅನುಭವಿಸುವುದು ಮತ್ತು ಅದರ ಬಗ್ಗೆ ಪ್ರಶ್ನೆಗಳನ್ನು ಕೇಳುವ ಹಂತಕ್ಕೆ ತಲುಪಿದ್ದಾರೆ. ಸಂಪ್ರದಾಯಿಕ ಕೇಂದ್ರಗಳನ್ನು ಮೀರಿ ದೇಶಾದ್ಯಂತದ ಶಾಲೆಗಳು ಮತ್ತು ಕ್ಷೇತ್ರ ಪ್ರದೇಶಗಳಿಗೆ ಸಂಶೋಧನಾ ಅನುಭವಗಳನ್ನು ಕೊಂಡೊಯ್ಯುವ ಮೂಲಕ, ಈ ಕಾರ್ಯಕ್ರಮವು ಯುವ ಮನಸ್ಸುಗಳು ಎಲ್ಲೇ ವಾಸಿಸುತ್ತಿದ್ದರೂ, ವಿಜ್ಞಾನವನ್ನು ಪ್ರತ್ಯಕ್ಷವಾಗಿ ಎದುರಿಸಲು ಅವಕಾಶಗಳನ್ನು ಸೃಷ್ಟಿಸುತ್ತಿದೆ. ಐಸಿಎಂಆರ್ ಯುವ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಲು ಸಹಾಯ ಮಾಡುತ್ತಿದೆ, ವಿಜ್ಞಾನವನ್ನು ಅನ್ವೇಷಿಸಲು, ನಾವೀನ್ಯತೆಯನ್ನು ಮುನ್ನಡೆಸಲು ಮತ್ತು ಸ್ವಸ್ಥ ಹಾಗೂ ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ಪಾತ್ರವಹಿಸಲು ಅವರನ್ನು ಪ್ರೋತ್ಸಾಹಿಸುತ್ತಿದೆ.









*****
(रिलीज़ आईडी: 2299249)
आगंतुक पटल : 9