ಹಣಕಾಸು ಸಚಿವಾಲಯ
ಜೈಪುರದಲ್ಲಿ ಇಂದು ನಡೆದ "ಸದಸ್ಯ ರಾಷ್ಟ್ರಗಳಲ್ಲಿ ಖಾಸಗಿ ಬಂಡವಾಳವನ್ನು ಒಟ್ಟುಗೂಡಿಸುವಲ್ಲಿ ಹೊಸ ಅಭಿವೃದ್ಧಿ ಬ್ಯಾಂಕಿನ ಪಾತ್ರ" ಎಂಬ ವಿಚಾರ ಸಂಕಿರಣದಲ್ಲಿ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ (ಕಾರ್ಪೊರೇಟ್) ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ದಿಕ್ಸೂಚಿ ಭಾಷಣ ಮಾಡಿದರು
ಬ್ರಿಕ್ಸ್ ಆರ್ಥಿಕತೆಗಳು ಜಾಗತಿಕ ಆರ್ಥಿಕತೆಯ ಪ್ರಮುಖ ಬೆಳವಣಿಗೆಯ ಎಂಜಿನ್‌ಗಳನ್ನು ಪ್ರತಿನಿಧಿಸುತ್ತವೆ ಮತ್ತು ಖಾಸಗಿ ಬಂಡವಾಳವನ್ನು ವ್ಯಾಪಕ ಪ್ರಮಾಣದಲ್ಲಿ ಸಂಗ್ರಹಿಸುವಲ್ಲಿ ಸಾಮಾನ್ಯ ರಚನಾತ್ಮಕ ನಿರ್ಬಂಧಗಳನ್ನು ಎದುರಿಸುತ್ತಿವೆ: ಹಣಕಾಸು ಸಚಿವರಾದ ಶ್ರೀಮತಿ ಸೀತಾರಾಮನ್
प्रविष्टि तिथि:
12 AUG 2026 2:44PM by PIB Bengaluru
ಜೈಪುರದಲ್ಲಿ ಇಂದು ನಡೆಯುತ್ತಿರುವ ಬ್ರಿಕ್ಸ್ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ಸಭೆಯ ನೇಪಥ್ಯದಲ್ಲಿ ಆಯೋಜನೆಯಾದ, "ಸದಸ್ಯ ರಾಷ್ಟ್ರಗಳಲ್ಲಿ ಖಾಸಗಿ ಬಂಡವಾಳವನ್ನು ಒಟ್ಟುಗೂಡಿಸುವಲ್ಲಿ ಹೊಸ ಅಭಿವೃದ್ಧಿ ಬ್ಯಾಂಕಿನ ಪಾತ್ರ" ಎಂಬ ವಿಚಾರ ಸಂಕಿರಣದಲ್ಲಿ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ (ಕಾರ್ಪೊರೇಟ್) ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ದಿಕ್ಸೂಚಿ ಭಾಷಣ ಮಾಡಿದರು.

ಗೌರವಾನ್ವಿತರಾದ ಶ್ರೀಮತಿ ದಿಲ್ಮಾ ರೌಸೆಫ್ ಅವರು ವಿಶೇಷ ಭಾಷಣ ಮಾಡಿದರು, ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ (ಡಿ.ಇ.ಎ.-DEA) ಕಾರ್ಯದರ್ಶಿ ಶ್ರೀಮತಿ ಅನುರಾಧ ಠಾಕೂರ್ ಮತ್ತು ಎಫ್.ಐ.ಸಿ.ಸಿ.ಐ.( FICCI) ಹಿರಿಯ ಉಪಾಧ್ಯಕ್ಷರಾದ ಶ್ರೀ ವಿಜಯ್ ಶಂಕರ್ ಅವರು ಭಾಗವಹಿಸಿದ್ದರು.

ತಮ್ಮ ದಿಕ್ಸೂಚಿ ಭಾಷಣದಲ್ಲಿ, ಕೇಂದ್ರ ಹಣಕಾಸು ಸಚಿವರು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು ಹೂಡಿಕೆಗಳನ್ನು ಅಪಾಯದಿಂದ ಮುಕ್ತಗೊಳಿಸುವಲ್ಲಿ, ಯೋಜನೆಯ ಬ್ಯಾಂಕಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮತ್ತು ಖಾಸಗಿ ಬಂಡವಾಳವನ್ನು ದೊಡ್ಡ ಪ್ರಮಾಣದಲ್ಲಿ ಒಟ್ಟುಗೂಡಿಸಲು ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸುವಲ್ಲಿ ವಹಿಸುವ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸುವ ಮೂಲಕ ಪ್ರಸ್ತುತ ಸಂದರ್ಭದ ಬಗ್ಗೆ ಬೆಳಕು ಚೆಲ್ಲಿದರು.
ಭಾರತದ ಅನುಭವದ ಬಗ್ಗೆ ಮಾತನಾಡಿದ ಶ್ರೀಮತಿ ಸೀತಾರಾಮನ್, ಭಾರತ ಸರ್ಕಾರವು ನಿರಂತರ ಸಾರ್ವಜನಿಕ ಬಂಡವಾಳ ವೆಚ್ಚ ಮತ್ತು ಪೂರಕ ರಚನಾತ್ಮಕ ಸುಧಾರಣೆಗಳ ಮೂಲಕ ತನ್ನ ಮೂಲಸೌಕರ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಿದೆ ಎಂದು ಹೇಳಿದರು. ಒಂದು ದಶಕದ ಹಿಂದಿನದಕ್ಕೆ ಹೋಲಿಸಿದರೆ ಸಾರ್ವಜನಿಕ ಹೂಡಿಕೆ ಗಮನಾರ್ಹವಾಗಿ ವಿಸ್ತರಿಸಿದೆ, ಹೆದ್ದಾರಿಗಳು, ರೈಲ್ವೆಗಳು, ಬಂದರುಗಳು, ಲಾಜಿಸ್ಟಿಕ್ಸ್ ವ್ಯವಸ್ಥೆಗಳು, ಡಿಜಿಟಲ್ ಮೂಲಸೌಕರ್ಯ ಮತ್ತು ಇಂಧನ ಜಾಲಗಳಲ್ಲಿ ಉತ್ಪಾದಕ ರಾಷ್ಟ್ರೀಯ ಸ್ವತ್ತುಗಳನ್ನು ಸೃಷ್ಟಿಸುವ ಗುರಿ ಕೇಂದ್ರಿತ ಕಾರ್ಯತಂತ್ರವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಸಾರ್ವಜನಿಕ ಬಂಡವಾಳವು ವೇಗವರ್ಧಕವಾಗಿ ಕಾರ್ಯನಿರ್ವಹಿಸಬೇಕು – ಹೊರತು ಅದು ಖಾಸಗಿ ಹೂಡಿಕೆಗೆ ಪರ್ಯಾಯವಾಗಿ ಅಲ್ಲ ಎಂದು ಭಾರತ ಸರ್ಕಾರ ನಂಬುತ್ತದೆ ಎಂದು ಹಣಕಾಸು ಸಚಿವರಾದ ಶ್ರೀಮತಿ ಸೀತಾರಾಮನ್ ಹೇಳಿದರಲ್ಲದೆ ಈ ತತ್ವವನ್ನು ಬೆಂಬಲಿಸಿ, ಭಾರತ ಸರ್ಕಾರವು ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ ಎಂದು ಹೇಳಿದರು.
- ಆರ್ಥಿಕವಾಗಿ ನಿರ್ಬಂಧಿತ ಆದರೆ ಸಾಮಾಜಿಕವಾಗಿ ಅಪೇಕ್ಷಣೀಯ ಯೋಜನೆಗಳನ್ನು ಬೆಂಬಲಿಸಲು ಕಾರ್ಯಸಾಧ್ಯತಾ ಅಂತರ ನಿಧಿ (VGF);
- ರಸ್ತೆ ಮೂಲಸೌಕರ್ಯದಲ್ಲಿ ಸಮತೋಲಿತ ಅಪಾಯ-ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಹೈಬ್ರಿಡ್ ಲಾಭಾಂಶ/ವರ್ಷಾಶನ ಮಾದರಿ (HAM).
- ಯೋಜನೆಯ ಬ್ಯಾಂಕಿಂಗ್ ಸಾಧ್ಯತಾ ಸಾಮರ್ಥ್ಯವನ್ನು ಸುಧಾರಿಸಲು ಸಾಲ ವರ್ಧನೆಯ ಕಾರ್ಯವಿಧಾನಗಳು;
- ಬಂಡವಾಳವನ್ನು ಮರುಬಳಕೆ ಮಾಡಲು ಮತ್ತು ದೀರ್ಘಕಾಲೀನ ಸಾಂಸ್ಥಿಕ ಹೂಡಿಕೆದಾರರನ್ನು ಆಕರ್ಷಿಸಲು ಮೂಲಸೌಕರ್ಯ ಹೂಡಿಕೆ ಟ್ರಸ್ಟ್ಗಳು (ಐ.ಎನ್.ವಿ.ಐ.ಟಿ.ಗಳು);
- ಹೂಡಿಕೆದಾರರಿಗೆ ದೀರ್ಘಕಾಲೀನ ಗೋಚರತೆಯನ್ನು ಒದಗಿಸುವ ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್;
- ಪಿ.ಎಂ. ಗತಿ ಶಕ್ತಿ - ಬಹುಮಾದರಿ ಸಂಪರ್ಕಕ್ಕಾಗಿ ರಾಷ್ಟ್ರೀಯ ಮಹಾ ಯೋಜನೆ (ಮಾಸ್ಟರ್ ಪ್ಲಾನ್), ಈ ಮೂಲಕ ಸಮನ್ವಯ ಮತ್ತು ದಕ್ಷತೆಯನ್ನು ಸುಧಾರಿಸುವುದು.
ಈ ಅಡಿಪಾಯದ ಮೇಲೆ, ಕೇಂದ್ರ ಹಣಕಾಸು ಸಚಿವರು 2026-27ರ ಕೇಂದ್ರ ಬಜೆಟ್ ಖಾಸಗಿ ವಲಯದ ಹೂಡಿಕೆಯನ್ನು ಸುಗಮಗೊಳಿಸಲು ಹಲವಾರು ಉದ್ದೇಶಿತ ಕ್ರಮಗಳನ್ನು ಪರಿಚಯಿಸಿದೆ ಎಂದು ಮಾಹಿತಿ ನೀಡಿದರು, ಅವುಗಳೆಂದರೆ:
- ಹೊಸ ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗಳು
- ಹೊಸ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು
- ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು ಕಾರ್ಯಗತಗೊಳಿಸಲು, ಮತ್ತು
- ಕರಾವಳಿ ಸರಕು ಸಾಗಣೆ ಉತ್ತೇಜನ ಯೋಜನೆ
ಬ್ರಿಕ್ಸ್ ಆರ್ಥಿಕತೆಗಳು ಜಾಗತಿಕ ಆರ್ಥಿಕತೆಯ ಪ್ರಮುಖ ಬೆಳವಣಿಗೆಯ ಎಂಜಿನ್‌ಗಳನ್ನು ಪ್ರತಿನಿಧಿಸುತ್ತವೆಯಾದರೂ, ಖಾಸಗಿ ಬಂಡವಾಳವನ್ನು ದೊಡ್ಡ ಪ್ರಮಾಣದಲ್ಲಿ ಸಜ್ಜುಗೊಳಿಸುವಲ್ಲಿ ಅವು ಸಾಮಾನ್ಯ ರಚನಾತ್ಮಕ ನಿರ್ಬಂಧಗಳನ್ನು ಎದುರಿಸುತ್ತವೆ ಎಂಬುದನ್ನು ಹಣಕಾಸು ಸಚಿವರಾದ ಶ್ರೀಮತಿ ಸೀತಾರಾಮನ್ ಗುರುತಿಸಿದರು. ಸವಾಲು ಕೇವಲ ಬಂಡವಾಳದ ಲಭ್ಯತೆ ಮಾತ್ರವಲ್ಲ, ಬದಲಾಗಿ ಸದಸ್ಯ ರಾಷ್ಟ್ರಗಳಲ್ಲಿ ನಿರಂತರ ಖಾಸಗಿ ಭಾಗವಹಿಸುವಿಕೆಯನ್ನು ಅನ್‌ಲಾಕ್ ಮಾಡಲು ಅಗತ್ಯವಾದ ವಿಶ್ವಾಸ, ಸ್ಥಿರತೆ, ಮುನ್ಸೂಚನೆ ಮತ್ತು ವಿಶ್ವಾಸಾರ್ಹ ದೀರ್ಘಕಾಲೀನ ಚೌಕಟ್ಟುಗಳ ಸೃಷ್ಟಿಯಾಗಬೇಕಾಗಿದೆ ಎಂದು ಪ್ರತಿಪಾದಿಸಿದರು..
ಅಭಿವೃದ್ಧಿ ಹಣಕಾಸಿನ ಭವಿಷ್ಯವು ಸಹಭಾಗಿತ್ವದಲ್ಲಿದೆ ಎಂದು ಒತ್ತಿ ಹೇಳುವ ಮೂಲಕ ಕೇಂದ್ರ ಹಣಕಾಸು ಸಚಿವರು ತಮ್ಮ ದಿಕ್ಸೂಚಿ ಭಾಷಣವನ್ನು ಮುಕ್ತಾಯಗೊಳಿಸಿದರು. ಬಹುಪಕ್ಷೀಯ ಸಂಸ್ಥೆಗಳು, ರಾಷ್ಟ್ರೀಯ ಸರ್ಕಾರಗಳು ಮತ್ತು ಖಾಸಗಿ ವಲಯಗಳು ಹೀಗೆ ಇವು ಪ್ರತಿಯೊಂದೂ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿವೆ ಎಂದು ನುಡಿದರು.

ಇದಕ್ಕೂ ಮೊದಲು ತಮ್ಮ ಸ್ವಾಗತ ಭಾಷಣದಲ್ಲಿ, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಅನುರಾಧಾ ಠಾಕೂರ್ ಅವರು, ಅಭಿವೃದ್ಧಿ ಹಣಕಾಸು ಪ್ರಮಾಣವು ಸ್ಥಿತಿಸ್ಥಾಪಕತ್ವದೊಂದಿಗೆ ಹೊಂದಾಣಿಕೆಯಾಗಬೇಕಾದ ಹಂತಕ್ಕೆ ಸಾಗುತ್ತಿರುವಾಗ ಇಂದಿನ ವಿಚಾರ ಸಂಕಿರಣವು ವಿಶೇಷವಾಗಿ ಪ್ರಸ್ತುತವಾಗಿದೆ ಎಂದು ಹೇಳಿದರು. ಬಂಡವಾಳ ಕ್ರೋಢೀಕರಣವು ಅನುಕೂಲಕರ ಪರಿಸ್ಥಿತಿಗಳ ಮೇಲೆ ಮಾತ್ರ ಅವಲಂಬಿತವಾಗಿರುವುದಿಲ್ಲ; ಅದು ಬಾಳಿಕೆ ಬರುವ ಚೌಕಟ್ಟುಗಳಲ್ಲಿ ನೆಲೆಗೊಂಡಿರಬೇಕು. ಅಂತಹ ಚೌಕಟ್ಟುಗಳನ್ನು ಬಲಪಡಿಸುವುದರಿಂದ ಬಹುಪಕ್ಷೀಯ ಸಹಯೋಗವು ಶಾಶ್ವತ ಮೌಲ್ಯವನ್ನು ಸೇರಿಸಬಲ್ಲುದು ಎಂದು ಅಭಿಪ್ರಾಯಪಟ್ಟರು.

ಈ ವಿಚಾರ ಸಂಕಿರಣವು ಹಿರಿಯ ನೀತಿ ನಿರೂಪಕರು, ಬಹುಪಕ್ಷೀಯ ಸಂಸ್ಥೆಗಳು ಮತ್ತು ಖಾಸಗಿ ವಲಯದ ನಾಯಕರನ್ನು ಒಟ್ಟುಗೂಡಿಸಿತು. ಬಳಿಕ ಐಆರ್‌ಡಿಎಐ ಅಧ್ಯಕ್ಷರಾದ ಶ್ರೀ ಅಜಯ್ ಸೇಠ್; ಎನ್‌ಡಿಬಿ ಉಪಾಧ್ಯಕ್ಷರಾದ ಶ್ರೀ ರೋಮನ್ ಸೆರೋವ್; ಸೆರ್ಟ್ರೇಡಿಂಗ್‌ನಿಂದ ಶ್ರೀ ಅಲೆಸ್ಸಾಂಡ್ರೊ ಟೀಕ್ಸೀರಾ; ಟೆನ್ಸೆಂಟ್ ಹಿರಿಯ ಸಲಹೆಗಾರರಾದ ಶ್ರೀ ಯೋಂಗ್‌ಪಿಂಗ್ ಝೈ; ಟಾಟಾ ಕ್ಯಾಪಿಟಲ್ ಡಿಕಾರ್ಬೊನೈಸೇಶನ್ ಫಂಡ್‌ನಿಂದ ಶ್ರೀ ಪಂಕಜ್ ಸಿಂದ್ವಾನಿ; ಮತ್ತು ಬ್ರಿಕ್ಸ್ ದೇಶಗಳು, ಹಣಕಾಸು ಸಂಸ್ಥೆಗಳು, ಚಿಂತಕರ ಚಾವಡಿಗಳು ಹಾಗು ಶೈಕ್ಷಣಿಕ ವಲಯದ ಇತರ ಪ್ರತಿನಿಧಿಗಳೊಂದಿಗೆ ಆಳವಾದ ಚರ್ಚೆ ನಡೆಯಿತು.

*****
(रिलीज़ आईडी: 2298259)
आगंतुक पटल : 14