ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ಜಾಗತಿಕ ಇಂಧನ ಪರಿವರ್ತನೆಯ ನೇತೃತ್ವ ವಹಿಸಲು ಭಾರತವು ದೃಢವಾದ ಪೂರೈಕೆ ಸರಪಳಿಗಳನ್ನು ನಿರ್ಮಿಸಬೇಕು: ಹೆಚ್.ಡಿ. ಕುಮಾರಸ್ವಾಮಿ


ಹಸಿರು ಉಕ್ಕು ಮತ್ತು ಸುಧಾರಿತ ಉತ್ಪಾದನೆಯು ಭಾರತದ ಇಂಧನ ಭದ್ರತೆಯ ದೃಷ್ಟಿಕೋನದ ಪ್ರಮುಖ ಆಧಾರಗಳು: ಹೆಚ್.ಡಿ. ಕುಮಾರಸ್ವಾಮಿ

ಇಂದು ಇಂಧನ ಭದ್ರತೆಯನ್ನು ಕೇವಲ ಸಂಪನ್ಮೂಲಗಳಲ್ಲ, ಉತ್ಪಾದನಾ ಸಾಮರ್ಥ್ಯವು ನಿರ್ಧರಿಸುತ್ತದೆ: ಹೆಚ್.ಡಿ. ಕುಮಾರಸ್ವಾಮಿ

ಶುದ್ಧ ಇಂಧನ ತಂತ್ರಜ್ಞಾನಗಳ ಜಾಗತಿಕ ಉತ್ಪಾದಕ ರಾಷ್ಟ್ರವಾಗಿ ಭಾರತ ಹೊರಹೊಮ್ಮಬೇಕು: ಸಿಐಐ ಇಂಧನ ಸಮ್ಮೇಳನದಲ್ಲಿ ಹೆಚ್.ಡಿ. ಕುಮಾರಸ್ವಾಮಿ

ಉಕ್ಕು, ಪೂರೈಕೆ ಸರಪಳಿಗಳು ಮತ್ತು ಸ್ವಾವಲಂಬನೆಯು ಭಾರತದ ಶುದ್ಧ ಇಂಧನದ ಭವಿಷ್ಯವನ್ನು ಮುನ್ನಡೆಸಲಿವೆ: ಹೆಚ್.ಡಿ. ಕುಮಾರಸ್ವಾಮಿ

प्रविष्टि तिथि: 06 AUG 2026 3:07PM by PIB Bengaluru

ಕೇಂದ್ರ ಉಕ್ಕು ಹಾಗೂ ಭಾರೀ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರ, ಇಂಧನ ಭದ್ರತೆಯ ಪರಿಕಲ್ಪನೆಯು ಮೂಲಭೂತ ಪರಿವರ್ತನೆಗೆ ಒಳಗಾಗಿದೆ ಎಂದು ಪ್ರತಿಪಾದಿಸಿದರು. ಇಂದಿನ ವೇಗವಾಗಿ ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿಯಲ್ಲಿ, ಒಂದು ರಾಷ್ಟ್ರದ ಸಾಮರ್ಥ್ಯವು ಕೇವಲ ಇಂಧನ ಸಂಪನ್ಮೂಲಗಳ ಲಭ್ಯತೆಯಿಂದ ಮಾತ್ರ ನಿರ್ಧಾರವಾಗುವುದಿಲ್ಲ; ಬದಲಾಗಿ ಭವಿಷ್ಯಕ್ಕೆ ಶಕ್ತಿ ನೀಡಲಿರುವ ತಂತ್ರಜ್ಞಾನಗಳನ್ನು ಉತ್ಪಾದಿಸುವ, ಹೊಸತನವನ್ನು ಸೃಷ್ಟಿಸುವ ಹಾಗೂ ಅವುಗಳಿಗೆ ಅಗತ್ಯವಾದ ದೃಢವಾದ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ಸಾಮರ್ಥ್ಯದಿಂದ ನಿರ್ಧಾರವಾಗುತ್ತದೆ ಎಂದು ಹೇಳಿದರು.

ನವದೆಹಲಿದಲ್ಲಿ ನಡೆದ 7ನೇ ಸಿಐಐ ಅಂತರರಾಷ್ಟ್ರೀಯ ಇಂಧನ ಸಮ್ಮೇಳನ ಮತ್ತು ಪ್ರದರ್ಶನದ ಅಂಗವಾಗಿ ಆಯೋಜಿಸಲಾದ "ಇಂಧನ ಭದ್ರತೆ ಮತ್ತು ಪೂರೈಕೆ ಸರಪಳಿಗಳು" ಕುರಿತ ವಿಶೇಷ ಪೂರ್ಣಾಧಿವೇಶನದಲ್ಲಿ ಮುಖ್ಯ ಭಾಷಣ ಮಾಡಿದ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಶುದ್ಧ ಇಂಧನ ತಂತ್ರಜ್ಞಾನಗಳ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಲು ಅನುಸರಿಸುತ್ತಿರುವ ಕಾರ್ಯತಂತ್ರವನ್ನು ವಿವರಿಸಿದರು. ಕೈಗಾರಿಕಾ ಸಾಮರ್ಥ್ಯ ಮತ್ತು ಇಂಧನ ಭದ್ರತೆ ಈಗ ಪರಸ್ಪರ ಬೇರ್ಪಡಿಸಲಾಗದ ಅಂಶಗಳಾಗಿವೆ ಎಂದು ಅವರು ಒತ್ತಿ ಹೇಳಿದರು.

"ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತದ ಇಂಧನ ಭದ್ರತೆಯನ್ನು ಇನ್ನು ಮುಂದೆ ಕೇವಲ ಇಂಧನ ಸಂಪನ್ಮೂಲಗಳ ಲಭ್ಯತೆಯ ಆಧಾರದ ಮೇಲೆ ಮಾತ್ರ ವ್ಯಾಖ್ಯಾನಿಸಲಾಗುವುದಿಲ್ಲ. ಭವಿಷ್ಯಕ್ಕೆ ಶಕ್ತಿ ನೀಡಲಿರುವ ತಂತ್ರಜ್ಞಾನಗಳನ್ನು ಉತ್ಪಾದಿಸುವ, ಹೊಸತನವನ್ನು ಸೃಷ್ಟಿಸುವ ಮತ್ತು ಅವುಗಳಿಗೆ ಅಗತ್ಯವಾದ ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ನಮ್ಮ ಸಾಮರ್ಥ್ಯವೇ ಅದನ್ನು ಹೆಚ್ಚೆಚ್ಚು ನಿರ್ಧರಿಸುತ್ತಿದೆ," ಎಂದು ಸಚಿವರು ಹೇಳಿದರು.

ಇತ್ತೀಚಿನ ಭೌಗೋಳಿಕ ರಾಜಕೀಯ ಬೆಳವಣಿಗೆಗಳು, ಪೂರೈಕೆ ಸರಪಳಿಗಳಲ್ಲಿನ ವ್ಯತ್ಯಯಗಳು ಹಾಗೂ ನಿರ್ಣಾಯಕ ಖನಿಜಗಳಿಗಾಗಿ ಹೆಚ್ಚುತ್ತಿರುವ ಜಾಗತಿಕ ಸ್ಪರ್ಧೆಯು ವಿಶ್ವದ ಕೈಗಾರಿಕಾ ಆದ್ಯತೆಗಳನ್ನು ಮರುರೂಪಿಸಿದೆ. ಇದರ ಪರಿಣಾಮವಾಗಿ ಉತ್ಪಾದನಾ ಸ್ಥಿತಿಸ್ಥಾಪಕತೆ ಮತ್ತು ತಾಂತ್ರಿಕ ಸಾಮರ್ಥ್ಯವು ರಾಷ್ಟ್ರೀಯ ಆರ್ಥಿಕ ಭದ್ರತೆಯ ಕೇಂದ್ರಬಿಂದುವಾಗಿವೆ ಎಂದು ಅವರು ಹೇಳಿದರು.

ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಈ ಬದಲಾವಣೆಗಳಿಗೆ ಪ್ರತಿಕ್ರಿಯೆಯಾಗಿ, ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಭಾರತವು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ನಿರ್ಮಿಸುತ್ತಿದ್ದು, ಅದೇ ವೇಳೆ ವಿಶ್ವಾಸಾರ್ಹ ಅಂತರರಾಷ್ಟ್ರೀಯ ಮೌಲ್ಯ ಸರಪಳಿಗಳೊಂದಿಗೆ ಆಳವಾದ ಸಮನ್ವಯವನ್ನು ಕಾಯ್ದುಕೊಳ್ಳುತ್ತಿದೆ ಎಂದು ಶ್ರೀ ಕುಮಾರಸ್ವಾಮಿ ಹೇಳಿದರು.

"ಭಾರತವು ಕೇವಲ ವಿಶ್ವದ ಅತಿದೊಡ್ಡ ಶುದ್ಧ ಇಂಧನ ತಂತ್ರಜ್ಞಾನಗಳ ಬಳಕೆದಾರ ರಾಷ್ಟ್ರಗಳಲ್ಲಿ ಒಂದಾಗಬಾರದು. ಜಾಗತಿಕ ಇಂಧನ ಪರಿವರ್ತನೆಗೆ ಚಾಲನೆ ನೀಡಲಿರುವ ಉಪಕರಣಗಳು, ವಸ್ತುಗಳು ಮತ್ತು ತಂತ್ರಜ್ಞಾನಗಳ ಪ್ರಮುಖ ಜಾಗತಿಕ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿ ಭಾರತ ಹೊರಹೊಮ್ಮಬೇಕು" ಎಂದು ಅವರು ಹೇಳಿದರು.

ಈ ಪರಿವರ್ತನೆಯಲ್ಲಿ ಉಕ್ಕು ಸಚಿವಾಲಯ ಹಾಗೂ ಭಾರೀ ಕೈಗಾರಿಕೆಗಳ ಸಚಿವಾಲಯದ ಪಾತ್ರವನ್ನು ಪ್ರಸ್ತಾಪಿಸಿದ ಸಚಿವರು, ಉಕ್ಕು, ಭಾರೀ ಎಂಜಿನಿಯರಿಂಗ್, ಬ್ಯಾಟರಿಗಳು, ಟ್ರಾನ್ಸ್‌ಫಾರ್ಮರ್‌ ಗಳು, ವಿದ್ಯುತ್ ಉಪಕರಣಗಳು, ವಿದ್ಯುತ್ ಚಾಲಿತ ಸಂಚಾರ ವ್ಯವಸ್ಥೆ, ನಿರ್ಮಾಣ ಉಪಕರಣಗಳು ಹಾಗೂ ಸುಧಾರಿತ ಕೈಗಾರಿಕಾ ತಂತ್ರಜ್ಞಾನಗಳನ್ನು ಒಳಗೊಂಡ ಬಲಿಷ್ಠ ಉತ್ಪಾದನಾ ಪರಿಸರ ವ್ಯವಸ್ಥೆಯ ಮೂಲಕವೇ ದೇಶದ ಇಂಧನ ಮಹತ್ವಾಕಾಂಕ್ಷೆಗಳು ಸಾಕಾರಗೊಳ್ಳಲಿವೆ ಎಂದು ಹೇಳಿದರು.

ಉಕ್ಕನ್ನು ಶುದ್ದ ಇಂಧನ ಪರಿವರ್ತನೆಯ ಬೆನ್ನೆಲುಬು ಎಂದು ಬಣ್ಣಿಸಿದ ಶ್ರೀ ಕುಮಾರಸ್ವಾಮಿ ಅವರು, ಸೌರ ಪಾರ್ಕ್‌ ಗಳು, ಪವನ ವಿದ್ಯುತ್ ಟರ್ಬೈನ್‌ ಗಳು, ವಿದ್ಯುತ್ ಪ್ರಸರಣ ಜಾಲಗಳು, ಬ್ಯಾಟರಿ ಉತ್ಪಾದನಾ ಘಟಕಗಳು, ಬಂದರುಗಳು ಹಾಗೂ ಹಸಿರು ಹೈಡ್ರೋಜನ್ ಯೋಜನೆಗಳವರೆಗೆ ನವೀಕರಿಸಬಹುದಾದ ಇಂಧನ ಮೂಲಸೌಕರ್ಯದಲ್ಲಿ ನಡೆಯುವ ಪ್ರತಿಯೊಂದು ಪ್ರಮುಖ ಹೂಡಿಕೆಯೂ ಮೂಲಭೂತವಾಗಿ ಉಕ್ಕಿನ ಮೇಲೆಯೇ ಅವಲಂಬಿತವಾಗಿದೆ ಎಂದು ಹೇಳಿದರು.

ವಿಶ್ವದ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ರಾಷ್ಟ್ರವಾಗಿರುವ ಭಾರತವು ದೇಶದ ವಿಸ್ತರಿಸುತ್ತಿರುವ ಮೂಲಸೌಕರ್ಯ ಹಾಗೂ ಉತ್ಪಾದನಾ ಅಗತ್ಯಗಳನ್ನು ಪೂರೈಸುವುದರ ಜೊತೆಗೆ, ಸುಸ್ಥಿರ ಉಕ್ಕಿನ ಜಾಗತಿಕ ಬೇಡಿಕೆಯನ್ನು ಸಹ ಸಮರ್ಥವಾಗಿ ಪೂರೈಸುವ ಉತ್ತಮ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.

2030ರ ವೇಳೆಗೆ 300 ಮಿಲಿಯನ್ ಟನ್ ಉಕ್ಕು ಉತ್ಪಾದನಾ ಸಾಮರ್ಥ್ಯ ಸಾಧಿಸುವ ಭಾರತದ ಗುರಿಯನ್ನು ಸಚಿವರು ಪುನರುಚ್ಚರಿಸಿದರು. ಈ ಬೆಳವಣಿಗೆಯನ್ನು ಸುಸ್ಥಿರ ಮತ್ತು ಪರಿಸರ ಹೊಣೆಗಾರಿಕೆಯ ಉತ್ಪಾದನಾ ಪದ್ಧತಿಗಳ ಮೂಲಕವೇ ಸಾಧಿಸಬೇಕು ಎಂದು ಅವರು ಒತ್ತಿ ಹೇಳಿದರು.

"ಉಕ್ಕು ಜಾಗತಿಕ ಇಂಧನ ಪರಿವರ್ತನೆಯ ಬೆನ್ನೆಲುಬಾಗಿ ರೂಪುಗೊಂಡಿದೆ. ಉಕ್ಕು ಕ್ಷೇತ್ರದ ಭವಿಷ್ಯವನ್ನು ಕೇವಲ ಉತ್ಪಾದನಾ ಸಾಮರ್ಥ್ಯವಲ್ಲ; ಸುಸ್ಥಿರತೆ, ಸ್ಪರ್ಧಾತ್ಮಕತೆ ಹಾಗೂ ತಾಂತ್ರಿಕ ಪ್ರಗತಿಯೇ ನಿರ್ಧರಿಸಲಿವೆ" ಎಂದು ಅವರು ಹೇಳಿದರು.

ಹಸಿರು ಉಕ್ಕಿನ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಕುಮಾರಸ್ವಾಮಿ ಅವರು, ಕಡಿಮೆ ಇಂಗಾಲದ ಉಕ್ಕು ಉತ್ಪಾದನೆಯತ್ತ ಸಾಗುವ ಪರಿವರ್ತನೆಯು ಕೇವಲ ಪರಿಸರದ ಅಗತ್ಯವಾಗಿಯೇ ಅಲ್ಲ, ಆರ್ಥಿಕ ಅನಿವಾರ್ಯತೆಯಾಗಿಯೂ ಪರಿಣಮಿಸಿದೆ ಎಂದು ಹೇಳಿದರು.

ಭಾರತೀಯ ಉಕ್ಕು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಉಕ್ಕು ಉತ್ಪಾದನೆಯಲ್ಲಿ ನವೀಕರಿಸಬಹುದಾದ ಇಂಧನದ ಹೆಚ್ಚಿನ ಬಳಕೆ, ಇಂಧನ-ಕ್ಷಮತೆಯ ತಂತ್ರಜ್ಞಾನಗಳ ಅಳವಡಿಕೆ, ಸಂಪನ್ಮೂಲಗಳ ಸಮರ್ಥ ಬಳಕೆ ಹಾಗೂ ಉಕ್ಕಿನ ಮೌಲ್ಯ ಸರಪಳಿಯಾದ್ಯಂತ ಇಂಗಾಲದ ಹೊರಸೂಸುವಿಕೆ ತಗ್ಗಿಸುವಿಕೆಯನ್ನು (ಡಿಕಾರ್ಬನೈಸೇಶನ್) ಸರ್ಕಾರ ಉತ್ತೇಜಿಸುತ್ತಿದೆ ಎಂದು ಅವರು ಹೇಳಿದರು. ಭಾರೀ ಕೈಗಾರಿಕೆಗಳ ಕ್ಷೇತ್ರದ ಕುರಿತು ಮಾತನಾಡಿದ ಸಚಿವರು, ಭಾರತದ ಶುದ್ಧ ಇಂಧನ ಪರಿವರ್ತನೆಗೆ ಕೇವಲ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಹೆಚ್ಚಿಸುವುದು ಮಾತ್ರ ಸಾಕಾಗುವುದಿಲ್ಲ ಎಂದು ಒತ್ತಿ ಹೇಳಿದರು.

ಸುಧಾರಿತ ಬ್ಯಾಟರಿಗಳು, ಭಾರೀ ವಿದ್ಯುತ್ ಉಪಕರಣಗಳು, ನಿರ್ಮಾಣ ಉಪಕರಣಗಳು, ವಾಹನ ತಯಾರಿಕೆ ಹಾಗೂ ಇಂಧನ ಸಂಗ್ರಹ ವ್ಯವಸ್ಥೆಗಳು ಸೇರಿದಂತೆ ಸಂಪೂರ್ಣ ಕೈಗಾರಿಕಾ ಮೌಲ್ಯ ಸರಪಳಿಯಾದ್ಯಂತ ದೇಶೀಯ ಉತ್ಪಾದನೆಯನ್ನು ಭಾರತವು ಏಕಕಾಲದಲ್ಲಿ ಬಲಪಡಿಸಬೇಕು ಎಂದು ಅವರು ಹೇಳಿದರು.

ಸುಧಾರಿತ ನಿರ್ಮಾಣ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಉದ್ದೇಶಿತ ನೀತಿ ಮಧ್ಯಸ್ಥಿಕೆಗಳ ಮೂಲಕ ದೇಶೀಯ ಕೈಗಾರಿಕಾ ಸಾಮರ್ಥ್ಯವನ್ನು ಬಲಪಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಶ್ರೀ ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದರು.

ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ವಿದ್ಯುತ್ ಚಾಲಿತ ಸಂಚಾರ ವ್ಯವಸ್ಥೆ ಕುರಿತು ಉಲ್ಲೇಖಿಸಿದ ಸಚಿವರು, ₹10,900 ಕೋಟಿ ಹಣಕಾಸು ವೆಚ್ಚವನ್ನು ಹೊಂದಿರುವ ಪಿಎಂ -ಡ್ರೈವ್ ಯೋಜನೆ ಕೇವಲ ವಾಹನಗಳ ಅಳವಡಿಕೆಯನ್ನು ಉತ್ತೇಜಿಸುವುದಲ್ಲ; ಬದಲಾಗಿ ಸಂಪೂರ್ಣ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸರ್ಕಾರದ ಸಮಗ್ರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಈ ಯೋಜನೆಯು ಒಂದೆಡೆ ಬೇಡಿಕೆಯನ್ನು ಸೃಷ್ಟಿಸುತ್ತಿದ್ದರೆ, ಮತ್ತೊಂದೆಡೆ ದೇಶೀಯ ಉತ್ಪಾದನಾ ಸಾಮರ್ಥ್ಯ, ಸ್ಥಳೀಕರಣ ಹಾಗೂ ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತೆಯನ್ನು ಬಲಪಡಿಸುತ್ತಿದೆ ಎಂದು ಅವರು ತಿಳಿಸಿದರು.

ಸುಧಾರಿತ ರಸಾಯನಿಕ ಕೋಶ ಬ್ಯಾಟರಿಗಳಿಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ ಯೋಜನೆಯನ್ನು ಸಚಿವರು ಪ್ರಸ್ತಾಪಿಸಿದರು. ಈ ಯೋಜನೆಯಡಿ 50 GWh ದೇಶೀಯ ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸಲು ಸರ್ಕಾರ ₹18,100 ಕೋಟಿ ಮೀಸಲಿಟ್ಟಿದೆ ಎಂದು ಅವರು ಹೇಳಿದರು.

ಈ ಹೂಡಿಕೆಗಳು ಆಮದು ಮಾಡಿಕೊಳ್ಳುವ ಬ್ಯಾಟರಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಉತ್ಪಾದನಾ ಸಾಮರ್ಥ್ಯವನ್ನು ನಿರ್ಮಿಸುವ ಮೂಲಕ ಭಾರತದ ದೀರ್ಘಾವಧಿಯ ಇಂಧನ ಭದ್ರತೆಗೆ ಭದ್ರ ಬುನಾದಿ ಹಾಕುತ್ತಿವೆ ಎಂದು ಹೇಳಿದರು.

ನಿರ್ಣಾಯಕ ಖನಿಜಗಳ ಲಭ್ಯತೆಯು ಈಗ ಕಾರ್ಯತಂತ್ರದ ಅಗತ್ಯವಾಗಿ ಹೊರಹೊಮ್ಮಿದೆ ಎಂಬುದನ್ನು ಉಲ್ಲೇಖಿಸಿದ ಶ್ರೀ ಕುಮಾರಸ್ವಾಮಿ, ಅಪರೂಪದ ಭೂಮಿಯ ಖನಿಜಗಳು, ಸುಧಾರಿತ ವಸ್ತುಗಳು ಹಾಗೂ ಖನಿಜ ಸಂಸ್ಕರಣೆ ಮೊದಲಾದ ಕ್ಷೇತ್ರಗಳಲ್ಲಿ ದೇಶೀಯ ಸಾಮರ್ಥ್ಯವನ್ನು ಬಲಪಡಿಸುವುದರ ಜೊತೆಗೆ ಅಂತರರಾಷ್ಟ್ರೀಯ ಸಹಕಾರವನ್ನು ಭಾರತ ಸಕ್ರಿಯವಾಗಿ ವಿಸ್ತರಿಸುತ್ತಿದೆ ಎಂದು ಹೇಳಿದರು.

ಸಿಂಟರ್ಡ್ ಅಪರೂಪದ ಭೂಮಿಯ ಶಾಶ್ವತ ಕಾಂತಗಳ ಉತ್ಪಾದನೆ ಉತ್ತೇಜಿಸುವ ₹7,280 ಕೋಟಿ ಮೊತ್ತದ ಯೋಜನೆಯನ್ನೂ ಅವರು ಉಲ್ಲೇಖಿಸಿದರು. ವಾಹನೋದ್ಯಮ, ರಕ್ಷಣಾ ಕ್ಷೇತ್ರ, ನವೀಕರಿಸಬಹುದಾದ ಇಂಧನ ಹಾಗೂ ವೈಮಾನಿಕ-ಬಾಹ್ಯಾಕಾಶ ಕ್ಷೇತ್ರ ಸೇರಿದಂತೆ ಹಲವು ವಲಯಗಳಿಗೆ ಅಗತ್ಯವಿರುವ ನಿರ್ಣಾಯಕ ಪೂರೈಕೆ ಸರಪಳಿಗಳನ್ನು ಭದ್ರಪಡಿಸುವ ಹಾಗೂ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ವಿವರಿಸಿದರು.

ಸರ್ಕಾರ, ಕೈಗಾರಿಕೆ, ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಹಾಗೂ ಹಣಕಾಸು ಸಂಸ್ಥೆಗಳ ನಡುವೆ ಇನ್ನಷ್ಟು ಗಾಢವಾದ ಸಹಭಾಗಿತ್ವಕ್ಕೆ ಕರೆ ನೀಡಿದ ಸಚಿವರು, ಕೇವಲ ನೀತಿ ಮಧ್ಯಸ್ಥಿಕೆಗಳ ಮೂಲಕವೇ ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.

"ಮೌಲ್ಯವನ್ನು ಸೃಷ್ಟಿಸುವ ಮತ್ತು ಉದ್ಯೋಗಾವಕಾಶಗಳನ್ನು ನಿರ್ಮಿಸುವ ಸಂಪೂರ್ಣ ದೇಶೀಯ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದೇ ನಮ್ಮ ಉದ್ದೇಶವಾಗಿದೆ. ಇಪ್ಪತ್ತೊಂದನೇ ಶತಮಾನದಲ್ಲಿ ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳ ಮೂಲತತ್ವ ಇದೇ ಆಗಿದೆ" ಎಂದರು.

ಭಾರತದ ಕೈಗಾರಿಕಾ ಪರಿವರ್ತನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕೈಗಾರಿಕಾ ವಲಯಕ್ಕೆ ಆಹ್ವಾನ ನೀಡಿದ ಕುಮಾರಸ್ವಾಮಿ ಅವರು, ಈ ಸಮ್ಮೇಳನದಲ್ಲಿ ನಡೆದ ಚರ್ಚೆಗಳು ಭಾರತದ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ದೇಶದ ಶುದ್ಧ ಇಂಧನ ಮಹತ್ವಾಕಾಂಕ್ಷೆಗಳನ್ನು ವೇಗಗೊಳಿಸಲು ಅರ್ಥಪೂರ್ಣ ಸಹಭಾಗಿತ್ವಗಳಿಗೆ ದಾರಿ ಮಾಡಿಕೊಡಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

"ಭಾರತವನ್ನು ಆತ್ಮನಿರ್ಭರವಾಗಿಸಲು ಮತ್ತು 2047ರ ವೇಳೆಗೆ 'ವಿಕಸಿತ ಭಾರತ'ದ ಕನಸನ್ನು ನನಸಾಗಿಸಲು ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಲು ಕೈಗಾರಿಕಾ ವಲಯ ಹಾಗೂ ಎಲ್ಲ ಪಾಲುದಾರರನ್ನು ನಾನು ಆಹ್ವಾನಿಸುತ್ತೇನೆ" ಎಂದು ಸಚಿವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

*****

 


(रिलीज़ आईडी: 2295518) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Marathi , Tamil