ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಮಕ್ಕಳ ಆನ್‌ಲೈನ್ ಸುರಕ್ಷತೆಗಾಗಿ ನೀತಿ ಮತ್ತು ಕಾನೂನು ಚೌಕಟ್ಟು ಪರಿಶೀಲನೆ: ಸರ್ಕಾರವು ಜಾಗತಿಕ ಬೆಳವಣಿಗೆಗಳನ್ನು ಪರಿಗಣಿಸುತ್ತದೆ


ಐಟಿ ಕಾಯಿದೆ, ಐಟಿ ನಿಯಮಗಳು ಮತ್ತು ಡಿಪಿಡಿಪಿ ಕಾಯಿದೆಯು ಡಿಜಿಟಲ್ ಯೋಗಕ್ಷೇಮ, ಬಳಕೆದಾರರ ರಕ್ಷಣೆ ಮತ್ತು ಆನ್‌ಲೈನ್‌ ನಲ್ಲಿ ಮಕ್ಕಳ ಗೌಪ್ಯತೆಯ ರಕ್ಷಣೆಗೆ ಚೌಕಟ್ಟನ್ನು ಒದಗಿಸುತ್ತವೆ

प्रविष्टि तिथि: 05 AUG 2026 4:41PM by PIB Bengaluru

ಡಿಜಿಟಲ್ ತಂತ್ರಜ್ಞಾನಗಳು ಶಿಕ್ಷಣ, ಸಂವಹನ ಮತ್ತು ನಾವೀನ್ಯತೆಗಳನ್ನು ಸುಲಭವಾಗಿ ತಲುಪಲು ಸಹಾಯ ಮಾಡಿವೆಯಾದರೂ, ಆನ್‌ಲೈನ್‌ ನಲ್ಲಿ ಮಕ್ಕಳಿಗೆ ಎದುರಾಗುತ್ತಿರುವ ಅಪಾಯಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ. ಹಾನಿಕಾರಕ ವಿಷಯಗಳನ್ನು ವೀಕ್ಷಿಸುವುದು, ಸೈಬರ್ ಕಿರುಕುಳ, ಆನ್‌ಲೈನ್ ಶೋಷಣೆ ಹಾಗೂ ಡಿಜಿಟಲ್ ಚಟಕ್ಕೆ ಮಕ್ಕಳು ಬಲಿಯಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಆನ್‌ಲೈನ್ ಸುರಕ್ಷತೆ ಮತ್ತು ಡಿಜಿಟಲ್ ವಾತಾವರಣದಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಜಾಗತಿಕವಾಗಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಅಂತರರಾಷ್ಟ್ರೀಯ ನಿಯಮಗಳನ್ನು ಸರ್ಕಾರ ನಿರಂತರವಾಗಿ ಗಮನಿಸುತ್ತಿದೆ. ಭಾರತದ ಸಾಂವಿಧಾನಿಕ ಚೌಕಟ್ಟು, ಕಾನೂನು ಅಗತ್ಯಗಳು ಹಾಗೂ ತಾಂತ್ರಿಕ ವಾತಾವರಣಕ್ಕೆ ತಕ್ಕಂತೆ, ಬಳಕೆದಾರರ ಸುರಕ್ಷತೆ, ನಾವೀನ್ಯತೆ, ಗೌಪ್ಯತೆ ಮತ್ತು ಡಿಜಿಟಲ್ ಸೇರ್ಪಡೆಯನ್ನು ಸಮತೋಲನಗೊಳಿಸುತ್ತಾ ದೇಶದ ನೀತಿ-ನಿಯಮಗಳನ್ನು ರೂಪಿಸುವಾಗ ಅಥವಾ ಮರುಪರಿಶೀಲಿಸುವಾಗ ಈ ಜಾಗತಿಕ ಮಾದರಿಗಳನ್ನು ಅಧ್ಯಯನ ಮಾಡಲಾಗುತ್ತದೆ.

ಎಲ್ಲಾ ಬಳಕೆದಾರರಿಗೆ ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಹೊಣೆಗಾರಿಕೆಯುಳ್ಳ ಇಂಟರ್ನೆಟ್ ಒದಗಿಸುವ ಉದ್ದೇಶದಿಂದ, ಡಿಜಿಟಲ್ ವಲಯದ ಕಾನೂನು ನಿಯಮಗಳನ್ನು ರೂಪಿಸುವಾಗ ಸರ್ಕಾರವು ಸಮಾಲೋಚನಾ ಮಾರ್ಗವನ್ನು ಅನುಸರಿಸುತ್ತದೆ. ಹೊಸ ತಂತ್ರಜ್ಞಾನಗಳು ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಆನ್‌ಲೈನ್‌ ನ ಹೊಸ ಸವಾಲುಗಳನ್ನು ಎದುರಿಸಲು ಸಂಬಂಧಪಟ್ಟ ಕ್ಷೇತ್ರದ ತಜ್ಞರು ಹಾಗೂ ಪಾಲುದಾರರೊಂದಿಗೆ ಸರ್ಕಾರ ನಿರಂತರವಾಗಿ ಚರ್ಚಿಸುತ್ತದೆ.

ಮಾಹಿತಿ ತಂತ್ರಜ್ಞಾನ ಕಾಯಿದೆ 2000 (ಐಟಿ ಕಾಯಿದೆ) ಮತ್ತು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗದರ್ಶಿ ಸೂತ್ರಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು 2021 (ಐಟಿ ನಿಯಮಗಳು), ಇವೆರಡೂ ಸೇರಿ ಡಿಜಿಟಲ್ ಯೋಗಕ್ಷೇಮ, ಬಳಕೆದಾರರ ಸುರಕ್ಷತೆ ಮತ್ತು ಜವಾಬ್ದಾರಿಯುತ ಆನ್‌ಲೈನ್ ಬಳಕೆಗೆ ಅಗತ್ಯವಾದ ವ್ಯವಸ್ಥೆಯನ್ನು ರೂಪಿಸಿವೆ.

ಐಟಿ ನಿಯಮಗಳ ಪ್ರಕಾರ, ಮಧ್ಯವರ್ತಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಸೂಕ್ತ ಮುನ್ನೆಚ್ಚರಿಕೆಯನ್ನು ವಹಿಸಬೇಕು ಮತ್ತು ಮಕ್ಕಳಿಗೆ ಹಾನಿಕಾರಕವಾದ ಅಥವಾ ಜಾರಿಯಲ್ಲಿರುವ ಯಾವುದೇ ಕಾನೂನನ್ನು ಉಲ್ಲಂಘಿಸುವ ಯಾವುದೇ ಮಾಹಿತಿಯನ್ನು ಹೋಸ್ಟ್ ಮಾಡದಂತೆ, ಪ್ರದರ್ಶಿಸದಂತೆ, ಅಪ್‌ಲೋಡ್ ಮಾಡದಂತೆ, ಮಾರ್ಪಡಿಸದಂತೆ, ಪ್ರಕಟಿಸದಂತೆ, ರವಾನಿಸದಂತೆ, ನವೀಕರಿಸದಂತೆ ಅಥವಾ ಹಂಚಿಕೊಳ್ಳದಂತೆ ಕಂಪ್ಯೂಟರ್ ಸಂಪನ್ಮೂಲಗಳ ಬಳಕೆದಾರರಿಗೆ ತಿಳಿಸಬೇಕು.

ಭಾರತೀಯ ನ್ಯಾಯ ಸಂಹಿತಾ, 2023 ಜೊತೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023, ಅಥವಾ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ, 2012 ನಂತಹ ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವನ್ನು ಮಾಡುವ ಪ್ರಕರಣಗಳಲ್ಲಿ ಮಧ್ಯವರ್ತಿಗಳು, ವರದಿ ಮಾಡುವುದನ್ನು ಕಡ್ಡಾಯಗೊಳಿಸುವ ಅಂತಹ ಅಪರಾಧವನ್ನು ಅನ್ವಯಿಸುವ ಕಾನೂನಿನ ನಿಬಂಧನೆಗಳಿಗೆ ಅನುಗುಣವಾಗಿ ಸೂಕ್ತ ಪ್ರಾಧಿಕಾರಕ್ಕೆ ವರದಿ ಮಾಡಬೇಕು.

ಐಟಿ ನಿಯಮಗಳಿಗೆ ಇತ್ತೀಚೆಗೆ ಮಾಡಲಾದ ತಿದ್ದುಪಡಿಗಳು ಸಕ್ಷಮ ನ್ಯಾಯಾಲಯದ ಆದೇಶ ಅಥವಾ ಸೂಕ್ತ ಸರ್ಕಾರ ಅಥವಾ ಅದರ ಸಂಸ್ಥೆಯು ಸಮರ್ಥನೀಯ ಮಾಹಿತಿ ನೀಡಿದ ಮೂರು ಗಂಟೆಗಳ ಒಳಗೆ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಇತರ ಮಧ್ಯವರ್ತಿಗಳಿಗೆ ಕಡ್ಡಾಯಗೊಳಿಸುತ್ತವೆ.

ಹೆಚ್ಚುವರಿಯಾಗಿ, ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯಿದೆ, 2023 (ಡಿಪಿಡಿಪಿ ಕಾಯಿದೆ) ಅನ್ನು ಜಾರಿಗೆ ತರಲಾಗಿದ್ದು, ಇದು ಡಿಜಿಟಲ್ ವೈಯಕ್ತಿಕ ದತ್ತಾಂಶದ ಸಂಸ್ಕರಣೆಯನ್ನು ನಿಯಂತ್ರಿಸಲು ಕಾನೂನು ಚೌಕಟ್ಟನ್ನು ಸ್ಥಾಪಿಸುತ್ತದೆ. ಡಿಪಿಡಿಪಿ ಕಾಯಿದೆಯು ಆನ್‌ಲೈನ್‌ ನಲ್ಲಿ ಮಕ್ಕಳ ಗೌಪ್ಯತೆಯನ್ನು ರಕ್ಷಿಸಲು ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಇದು ಮಕ್ಕಳ ವೈಯಕ್ತಿಕ ದತ್ತಾಂಶವನ್ನು ಪ್ರಕ್ರಿಯೆಗೊಳಿಸಲು ಪೋಷಕರ ಸಮ್ಮತಿಯನ್ನು ಕಡ್ಡಾಯಗೊಳಿಸುತ್ತದೆ ಮತ್ತು ಮಕ್ಕಳನ್ನು ಟ್ರ್ಯಾಕ್ ಮಾಡುವುದು, ನಡವಳಿಕೆಯ ಮೇಲ್ವಿಚಾರಣೆ ಅಥವಾ ಅವರನ್ನೇ ಗುರಿಯಾಗಿಸಿಕೊಂಡು ಜಾಹೀರಾತು ನೀಡುವುದರಂತಹ ಅವರ ಯೋಗಕ್ಷೇಮಕ್ಕೆ ಹಾನಿಕರವಾದ ಅಭ್ಯಾಸಗಳನ್ನು ನಿಷೇಧಿಸುತ್ತದೆ.

ಮಾಹಿತಿ ತಂತ್ರಜ್ಞಾನದಲ್ಲಿ ಮಾನವ ಸಂಪನ್ಮೂಲವನ್ನು ಸೃಷ್ಟಿಸಲು ಮತ್ತು ಸಾರ್ವಜನಿಕರಲ್ಲಿ ಸೈಬರ್ ನೈರ್ಮಲ್ಯ ಮತ್ತು ಸೈಬರ್ ಭದ್ರತೆಯ ವಿವಿಧ ಮೌಲ್ಯಗಳ ಬಗ್ಗೆ ಸಾಮಾನ್ಯ ಅರಿವು ಮೂಡಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 'ಮಾಹಿತಿ ಭದ್ರತಾ ಶಿಕ್ಷಣ ಮತ್ತು ಜಾಗೃತಿ (ಐ ಎಸ್‌ ಇ ಎ)' ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇಲ್ಲಿಯವರೆಗೆ, ದೇಶಾದ್ಯಂತ 6,650 ಜಾಗೃತಿ ಕಾರ್ಯಾಗಾರಗಳನ್ನು ನಡೆಸಲಾಗಿದ್ದು, ಶಾಲೆ/ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಕಾನೂನು ಜಾರಿ ಸಂಸ್ಥೆಗಳು, ಸರ್ಕಾರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಸೇರಿದಂತೆ 11.37 ಲಕ್ಷಕ್ಕೂ ಹೆಚ್ಚು ಭಾಗವಹಿಸುವವರನ್ನು ತಲುಪಲಾಗಿದೆ.

ಇದಲ್ಲದೆ, ಕೈಪಿಡಿಗಳು, ಕಿರು ವೀಡಿಯೊಗಳು, ಪೋಸ್ಟರ್‌ ಗಳು, ಕರಪತ್ರಗಳು, ಮಕ್ಕಳಿಗಾಗಿ ಕಾರ್ಟೂನ್ ಕಥೆಗಳು ಇತ್ಯಾದಿಗಳ ರೂಪದಲ್ಲಿ ಬಹುಭಾಷಾ ಜಾಗೃತಿ ಸಾಮಗ್ರಿಗಳನ್ನು ಮುದ್ರಣ, ಎಲೆಕ್ಟ್ರಾನಿಕ್, ಸಾಮಾಜಿಕ ಮಾಧ್ಯಮ ಮತ್ತು www.isea.gov.in ಹಾಗೂ https://staysafeonline.in/ ಮೂಲಕ ಪ್ರಕಟಿಸಲಾಗಿದೆ ಮತ್ತು ಪ್ರಸಾರ ಮಾಡಲಾಗಿದೆ.

ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (CERT-In) ಸಹ ತನ್ನ ಅಧಿಕೃತ ವೆಬ್‌ಸೈಟ್‌ ಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸುರಕ್ಷತೆ ಮತ್ತು ಭದ್ರತಾ ಸಲಹೆಗಳು ಹಾಗೂ ಜಾಗೃತಿ ಪೋಸ್ಟರ್‌ ಗಳು, ಇನ್ಫೋಗ್ರಾಫಿಕ್ಸ್ ಮತ್ತು ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತದೆ. ಇದು ಮಕ್ಕಳ ಆನ್‌ಲೈನ್ ಸುರಕ್ಷತಾ ಕ್ರಮಗಳು ಸೇರಿದಂತೆ ಸೈಬರ್ ಭದ್ರತಾ ದಾಳಿಗಳು ಮತ್ತು ವಂಚನೆಗಳ ಕುರಿತು ಅಂತರ್ಜಾಲ ಬಳಕೆದಾರರನ್ನು ಸಂವೇದನಾಶೀಲಗೊಳಿಸುವ ಗುರಿಯನ್ನು ಹೊಂದಿದೆ.

ಶಿಕ್ಷಣ ಸಚಿವಾಲಯವು ಜುಲೈ 2020ರಲ್ಲಿ ಡಿಜಿಟಲ್ ಶಿಕ್ಷಣದ ಕುರಿತು 'ಪ್ರಜ್ಞಾತಾ' (PRAGYATA) ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದು, ಇದು ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಉತ್ತೇಜಿಸುವುದು ಮತ್ತು ಸಾಮಾಜಿಕ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಸಾಧನಗಳ ಜವಾಬ್ದಾರಿಯುತ ಬಳಕೆಯನ್ನು ಒಳಗೊಂಡಂತೆ ಸುರಕ್ಷಿತ ಮತ್ತು ಪರಿಣಾಮಕಾರಿ ಆನ್‌ಲೈನ್ ಕಲಿಕೆಗೆ ಚೌಕಟ್ಟನ್ನು ಒದಗಿಸುತ್ತದೆ. ಡಿಜಿಟಲ್ ಶಿಷ್ಟಾಚಾರದ ಕುರಿತಾದ ಮಾರ್ಗದರ್ಶಿ ಸೂತ್ರಗಳು, ಶಿಕ್ಷಕರಿಗೆ ಸೈಬರ್-ಭದ್ರತಾ ತರಬೇತಿ, 'ಸೈಬರ್ ಭದ್ರತೆ ಕೈಪಿಡಿ' ಪ್ರಕಟಣೆ ಮತ್ತು ಸೈಬರ್ ಸುರಕ್ಷತೆಯ ಜಾಗೃತಿಯನ್ನು ಉತ್ತೇಜಿಸಲು ಸೈಬರ್ ಕ್ಲಬ್‌ ಗಳನ್ನು ಸ್ಥಾಪಿಸಲು ಶಾಲೆಗಳಿಗೆ ನೀಡಿದ ಸಲಹೆಗಳ ಮೂಲಕ ಸಿ ಬಿ ಎಸ್‌ ಇ ಪ್ರಯತ್ನಗಳಿಗೆ ಬೆಂಬಲವಾಗಿದೆ. ಎನ್‌ ಸಿ ಆರ್‌ ಟಿ ಕೂಡ XI ಮತ್ತು XII ತರಗತಿಗಳಲ್ಲಿ "ಸಮಾಜದ ಮೇಲಿನ ಪರಿಣಾಮಗಳು" ಎಂಬ ಅಧ್ಯಾಯ ಸೇರಿದಂತೆ ತನ್ನ ಪಠ್ಯಕ್ರಮದಲ್ಲಿ ಸೈಬರ್ ಸುರಕ್ಷತೆಯನ್ನು ಸಂಯೋಜಿಸಿದೆ ಮತ್ತು ಸಿಐಇಟಿ-ಎನ್‌ ಸಿ ಆರ್‌ ಟಿ ಸೈಬರ್ ಸುರಕ್ಷತೆಯ ಕುರಿತು ಸಂಪನ್ಮೂಲ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಪ್ರಚುರಪಡಿಸಿದೆ.

ಮಾಹಿತಿಯನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು 05.08.2026 ರಂದು ಲೋಕಸಭೆಯಲ್ಲಿ ಒದಗಿಸಿದರು.

 

*****

 


(रिलीज़ आईडी: 2295023) आगंतुक पटल : 18
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati