ಕೃಷಿ ಸಚಿವಾಲಯ
ತೊಗರಿಯ ಅತ್ಯುತ್ತಮ ತಳಿಗಳ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟ ಐಸಿಎಆರ್ ಜೀನೋಮ್ ಆವಿಷ್ಕಾರ
ಐಸಿಎಆರ್ ಅಭಿವೃದ್ಧಿಪಡಿಸಿದ ಸೀಕ್ವೆನ್ಸ್ ಅನ್ನು ತೊಗರಿಯ ಜಾಗತಿಕ ರೆಫರೆನ್ಸ್ ಜೀನೋಮ್ ಎಂದು ಅನುಮೋದಿಸಲಾಗಿದೆ; ಇದು ಭಾರತದ ಮೊದಲ ಸಂಪೂರ್ಣ ಅನ್ವೇಷಿತ 'ಟೆಲೋಮಿಯರ್-ಟು-ಟೆಲೋಮಿಯರ್' (ಟಿ2ಟಿ) ರೆಫರೆನ್ಸ್ ಜೀನೋಮ್ ಆಗಿದೆ
ಉತ್ತಮ ಗುಣಮಟ್ಟದ ತಳಿ ನಕ್ಷೆಯು ಹವಾಮಾನ ವೈಪರೀತ್ಯವನ್ನು ತಡೆಯುವ, ಹೆಚ್ಚಿನ ಇಳುವರಿ ನೀಡುವ ಮತ್ತು ಪೌಷ್ಟಿಕಾಂಶಯುಕ್ತ ತೊಗರಿ ತಳಿಗಳ ಅಭಿವೃದ್ಧಿಯನ್ನು ವೇಗಗೊಳಿಸುವ ನಿರೀಕ್ಷೆಯಿದ್ದು, ಬೇಳೆಕಾಳುಗಳಲ್ಲಿ ಭಾರತದ ಸ್ವಾವಲಂಬನೆಯನ್ನು ಬಲಪಡಿಸಲಿದೆ
2011ರಲ್ಲಿ ಬೇಳೆಕಾಳು ಬೆಳೆಯೊಂದರ ವಿಶ್ವದ ಮೊದಲ ಕರಡು ಜೀನೋಮ್ ಸಿದ್ಧಪಡಿಸಿ ಐಸಿಎಆರ್-ಎನ್ ಐ ಪಿ ಬಿ ಮಾಡಿದ್ದ ಐತಿಹಾಸಿಕ ಸಾಧನೆಯೇ ಈ ಇತ್ತೀಚಿನ ಮೈಲಿಗಲ್ಲಿಗೆ ಪ್ರಮುಖ ಅಡಿಪಾಯವಾಗಿದೆ
प्रविष्टि तिथि:
04 AUG 2026 6:02PM by PIB Bengaluru
ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ಪ್ರಮುಖ ವೈಜ್ಞಾನಿಕ ಸಾಧನೆಯೊಂದರಲ್ಲಿ, ತೊಗರಿ ಬೆಳೆಯ (Cajanus cajan L. Millsp.) 'ಆಶಾ' ತಳಿಯ ಭಾರತದ ಮೊದಲ ಸಂಪೂರ್ಣ ಅನ್ವೇಷಿತ 'ಟೆಲೋಮಿಯರ್-ಟು-ಟೆಲೋಮಿಯರ್' (ಟಿ2ಟಿ) ರೆಫರೆನ್ಸ್ ಜೀನೋಮ್ ಅನ್ನು ಅಭಿವೃದ್ಧಿಪಡಿಸಿದೆ. ಜನಪ್ರಿಯವಾಗಿ 'ಅರ್ಹರ್' ಅಥವಾ 'ತುರ್' ಎಂದು ಕರೆಯಲ್ಪಡುವ ತೊಗರಿಯು ಭಾರತದ ಅತ್ಯಂತ ಪ್ರಮುಖ ದ್ವಿದಳ ಬೆಳೆಗಳಲ್ಲಿ ಒಂದಾಗಿದೆ ಮತ್ತು ಆಹಾರದ ಪ್ರೋಟೀನ್ ನ ಪ್ರಮುಖ ಮೂಲವಾಗಿದೆ. ಇದು ದೇಶದ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಚಿತಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಈ ಆವಿಷ್ಕಾರವು ತೊಗರಿ ಜೀನೋಮಿಕ್ಸ್ ನಲ್ಲಿ ನವದೆಹಲಿಯ ಐಸಿಎಆರ್-ರಾಷ್ಟ್ರೀಯ ಸಸ್ಯ ಜೈವಿಕ ತಂತ್ರಜ್ಞಾನ ಸಂಸ್ಥೆಯು (ಐಸಿಎಆರ್-ಎನ್ ಐ ಪಿ ಬಿ) ಕೈಗೊಂಡ ಮಾರ್ಗದರ್ಶಿ ಕಾರ್ಯವನ್ನು ಆಧರಿಸಿದೆ. 2011ರಲ್ಲಿ, ಈ ಸಂಸ್ಥೆಯು 'ಆಶಾ' ತಳಿಯ ತೊಗರಿಯ ಕರಡು ಜೀನೋಮ್ ಅನ್ನು ಪ್ರಕಟಿಸಿತು; ಇದು ದ್ವಿದಳ ಬೆಳೆಯೊಂದರ ವಿಶ್ವದ ಮೊದಲ ಕರಡು ಜೀನೋಮ್ ಆಗಿತ್ತು ಹಾಗೂ ಸಂಪೂರ್ಣವಾಗಿ ಭಾರತದಲ್ಲೇ ಸೀಕ್ವೆನ್ಸಿಂಗ್ ಮಾಡಲಾದ ಮೊದಲ ಬೆಳೆ ಜೀನೋಮ್ ಆಗಿತ್ತು. ಈ ಕರಡು ಜೀನೋಮ್ ನ ಸುಧಾರಿತ ಆವೃತ್ತಿಯನ್ನು 2017 ರಲ್ಲಿ ಪ್ರಕಟಿಸಲಾಯಿತು,ಮತ್ತು ಈ ಇತ್ತೀಚಿನ ಸಾಧನೆಯು ಅದರ ಸಂಪೂರ್ಣ ಟೆಲೋಮಿಯರ್-ಟು-ಟೆಲೋಮಿಯರ್ (ಟಿ2ಟಿ) ಜೀನೋಮ್ ಸೀಕ್ವೆನ್ಸ್ ಅನ್ನು ಪ್ರತಿನಿಧಿಸುತ್ತದೆ, ಇದು ಇಂದಿನವರೆಗಿನ ಬೆಳೆಯ ಅತ್ಯಂತ ಸಮಗ್ರ ತಳಿ ನಕ್ಷೆಯನ್ನು ಒದಗಿಸುತ್ತದೆ.
ಹೊಸದಾಗಿ ಅಭಿವೃದ್ಧಿಪಡಿಸಲಾದ ಟಿ2ಟಿ ಜೀನೋಮ್ ಸೀಕ್ವೆನ್ಸ್ 92 ಕಾಂಟಿಗ್ ಗಳಲ್ಲಿ ಜೋಡಿಸಲಾದ 752.65 ಮಿಲಿಯನ್ ಬೇಸ್ ಜೋಡಿ ಡಿ ಎನ್ ಎ ಅನ್ನು ಹೊಂದಿದ್ದು, ತೊಗರಿಯ ಎಲ್ಲಾ 11 ವರ್ಣತಂತುಗಳ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ. NIPB_Ccಟಿ2ಟಿ_4 ಎಂದು ಹೆಸರಿಸಲಾದ ಈ ಜೀನೋಮ್ ಜೋಡಣೆಯನ್ನು ಜಾಗತಿಕ ಡೇಟಾಬೇಸ್ ನಲ್ಲಿ (ಎನ್ ಸಿ ಬಿ ಐ) ಆಕ್ಸೆಸನ್ ಸಂಖ್ಯೆ GCF_000230855.1 ಅಡಿಯಲ್ಲಿ ಸಲ್ಲಿಕೆ ಮಾಡಲಾಗಿದ್ದು, ಇದನ್ನು 20 ಏಪ್ರಿಲ್ 2026 ರಂದು ಬಿಡುಗಡೆ ಮಾಡಲಾಯಿತು.
ಈ ಜೀನೋಮ್ ಜೋಡಣೆಯು ಎಲ್ಲಾ 11 ಸೆಂಟ್ರೋಮಿಯರ್ ಗಳು ಮತ್ತು 22 ಟೆಲೋಮಿಯರ್ ಗಳನ್ನು ಒಳಗೊಂಡಂತೆ ಎಲ್ಲಾ 11 ವರ್ಣತಂತುಗಳನ್ನು ಒಳಗೊಂಡಿದ್ದು, ವರ್ಣತಂತು-ಮಟ್ಟದ ಪರಿಪೂರ್ಣತೆಯನ್ನು ಪ್ರದರ್ಶಿಸುತ್ತದೆ. ಸಮಗ್ರ ಜೀನೋಮ್ ಅನ್ವೇಷಣೆಯು 36,557 ಜೀನ್ ಗಳನ್ನು ಗುರುತಿಸಿದ್ದು, 48,008 mRNA ಗಳನ್ನು (ಕೋಡಿಂಗ್ ಸೀಕ್ವೆನ್ಸ್) ಉತ್ಪಾದಿಸಿದೆ. ಟ್ರಾನ್ಸ್ ಕ್ರಿಪ್ಟೋಮ್ (ಆರ್ ಎನ್ ಎ ಸೀಕ್ವೆನ್ಸ್) ಮ್ಯಾಪಿಂಗ್ ಶೇ.99.9 ಕ್ಕಿಂತ ಹೆಚ್ಚು ರೀಡ್ ಅಲೈನ್‌ಮೆಂಟ್ ದಾಖಲಿಸಿದ್ದು, ಜೀನೋಮ್ ನ ಉನ್ನತ ನಿಖರತೆ ಮತ್ತು ಪರಿಪೂರ್ಣತೆಯನ್ನು ದೃಢೀಕರಿಸಿದೆ.
ಸಂಪೂರ್ಣವಾಗಿ ಅನ್ವೇಷಿಸಲಾದ ಟಿ2ಟಿ ರೆಫರೆನ್ಸ್ ಜೀನೋಮ್ ಭಾರತದ ದ್ವಿದಳ ಧಾನ್ಯ ಸಂಶೋಧನಾ ವ್ಯವಸ್ಥೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ. ಇದು ಸುಧಾರಿತ ಜೀನ್ ಮತ್ತು ಪ್ಯಾನ್‌ಜೀನೋಮ್ ವಿಶ್ಲೇಷಣೆಗಳು, ಪ್ರಮುಖ ಕೃಷಿ ಮತ್ತು ಪೌಷ್ಟಿಕಾಂಶದ ಗುಣಲಕ್ಷಣಗಳಿಗೆ ಸಂಬಂಧಿಸಿದ ಜೀನ್ ಗಳ ಶೋಧನೆ ಹಾಗೂ ಮಾಲಿಕ್ಯೂಲರ್ ಬ್ರೀಡಿಂಗ್ ಮತ್ತು ಜೀನೋಮ್-ಎಡಿಟಿಂಗ್ ತಂತ್ರಜ್ಞಾನಗಳ ಅನ್ವಯಕ್ಕೆ ಮೌಲ್ಯಯುತವಾದ ರಾಷ್ಟ್ರೀಯ ಜೀನೋಮಿಕ್ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಇದು ಹವಾಮಾನ ವೈಪರೀತ್ಯವನ್ನು ತಡೆಯುವ, ಹೆಚ್ಚಿನ ಇಳುವರಿ ನೀಡುವ ಮತ್ತು ಪೌಷ್ಟಿಕಾಂಶಯುಕ್ತ ತೊಗರಿ ತಳಿಗಳ ತಳಿವರ್ಧನೆಯನ್ನು ವೇಗಗೊಳಿಸುವ ನಿರೀಕ್ಷೆಯಿದ್ದು, ಆ ಮೂಲಕ ದೇಶದ ಬೇಳೆಕಾಳು ಸುಧಾರಣಾ ಕಾರ್ಯಕ್ರಮವನ್ನು ಬಲಪಡಿಸುತ್ತದೆ. ಈ ಸಾಧನೆಯು ಸಂಶೋಧನೆ ಮತ್ತು ನಾವೀನ್ಯತೆಗೆ ಭಾರಿ ಉತ್ತೇಜನವನ್ನು ನೀಡುತ್ತದೆ, ವಿಜ್ಞಾನಿಗಳು, ತಳಿವರ್ಧಕರು ಮತ್ತು ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಹಾಗೂ ಸುಧಾರಿತ ಉತ್ಪಾದಕತೆ, ರೈತರ ಸುಧಾರಿತ ಜೀವನೋಪಾಯ ಮತ್ತು ಭಾರತದ ಆಹಾರ ಹಾಗೂ ಪೌಷ್ಟಿಕಾಂಶದ ಭದ್ರತೆಗೆ ಕೊಡುಗೆ ನೀಡುತ್ತದೆ.

ಹೆಚ್ಚಿನ ಇಳುವರಿ ನೀಡುವ, ಕೀಟ ನಿರೋಧಕ ಮತ್ತು ಹವಾಮಾನ ವೈಪರೀತ್ಯವನ್ನು ತಡೆಯುವ ದ್ವಿದಳ ತಳಿಗಳನ್ನು ಅಭಿವೃದ್ಧಿಪಡಿಸುವ ಮೂಲಕ, ತಳಿವರ್ಧಕ ಬಿತ್ತನೆ ಬೀಜ ಉತ್ಪಾದನೆಯನ್ನು ಮೇಲ್ವಿಚಾರಣೆ ಮಾಡುವ ಮೂಲಕ, ಬಹು-ಸ್ಥಳಗಳ ಪ್ರಯೋಗಗಳನ್ನು ನಡೆಸುವ ಮೂಲಕ, ತನ್ನ ಸಂಸ್ಥೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ (ಕೆವಿಕೆ) ಮೂಲಕ ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ಮೂಲಕ ಹಾಗೂ ದೇಶಾದ್ಯಂತ ರೈತರಿಗೆ ಸಾಮರ್ಥ್ಯ ವರ್ಧನೆ ಮತ್ತು ತಂತ್ರಜ್ಞಾನ ಪ್ರಸಾರಕ್ಕಾಗಿ ವೈಜ್ಞಾನಿಕ ಬೆಂಬಲವನ್ನು ಒದಗಿಸುವ ಮೂಲಕ ಐಸಿಎಆರ್ ಪ್ರಮುಖ ಪಾತ್ರ ವಹಿಸುತ್ತದೆ.
ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು, ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸುಧಾರಿತ ಬಿತ್ತನೆ ಬೀಜಗಳು, ಪ್ರದೇಶ ವಿಸ್ತರಣೆ, ತಂತ್ರಜ್ಞಾನ ಅಳವಡಿಕೆ, ಖಚಿತ ಖರೀದಿ ಮತ್ತು ಬಲವರ್ಧಿತ ಕೊಯ್ಲಿನ ನಂತರದ ಮೂಲಸೌಕರ್ಯಗಳ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ಭಾರತ ಸರ್ಕಾರವು 'ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತೆ' (2025-26 ರಿಂದ 2030-31) ಮಿಷನ್ ಅನ್ನು ಪ್ರಾರಂಭಿಸಿತು. ಈ ಮಿಷನ್ ಸಂಶೋಧನೆ, ಬಿತ್ತನೆ ಬೀಜ ವ್ಯವಸ್ಥೆಗಳು ಮತ್ತು ವಿಸ್ತರಣಾ ಸೇವೆಗಳನ್ನು ಒಳಗೊಂಡ ಸಮಗ್ರ ಕಾರ್ಯತಂತ್ರದ ಮೂಲಕ 2030-31 ರ ವೇಳೆಗೆ ಬೇಳೆಕಾಳುಗಳ ಉತ್ಪಾದನೆಯನ್ನು ಸುಮಾರು 35 ಮಿಲಿಯನ್ ಟನ್ ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

- ತೊಗರಿ ಬೇಳೆಯ ರೆಫರೆನ್ಸ್ ಜೀನೋಮ್‌ಗಾಗಿ NCBI URL ಲಿಂಕ್:
https://www.ncbi.nlm.nih.gov/datasets/genome/GCF_000230855.2/
- ರಿವ್ಯೂ ಪೇಪರ್: ತೊಗರಿಯಲ್ಲಿ (Cajanus cajan L. Millsp.) ಮಾರ್ಕರ್-ಅಸಿಸ್ಟೆಡ್ ಐಡಿಯೋಟೈಪ್ ಬ್ರೀಡಿಂಗ್ ಅನ್ನು ವೇಗಗೊಳಿಸಲು ತಳಿ ಮತ್ತು ಜೀನೋಮಿಕ್ ಸಂಪನ್ಮೂಲಗಳು
*****
(रिलीज़ आईडी: 2294643)
आगंतुक पटल : 47