ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
84,084 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಕಡಲಾಚೆಯ ಅನ್ವೇಷಣಾ ಯೋಜನೆ - 'ಸಮುದ್ರ ಮಂಥನ್'ಗೆ ಸಚಿವ ಸಂಪುಟದ ಅನುಮೋದನೆ
प्रविष्टि तिथि:
01 AUG 2026 9:46AM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕೇಂದ್ರ ವಲಯದ ಯೋಜನೆ ಹಾಗೂ ರಾಷ್ಟ್ರೀಯ ಕಡಲಾಚೆಯ ಪರಿಶೋಧನಾ ಯೋಜನೆಯಾಗಿರುವ - "ಸಮುದ್ರ ಮಂಥನ್"ಗೆ ಅನುಮೋದನೆ ನೀಡಿದೆ. 2030-31ನೇ ಹಣಕಾಸು ವರ್ಷದಲ್ಲಿ ಈ ಯೋಜನೆಯ ಅನುಷ್ಠಾನಕ್ಕಾಗಿ 84,084 ಕೋಟಿ ರೂ.ಗಳ ಅನುಮೋದನೆಯನ್ನು ಸಂಪುಟ ನೀಡಿದೆ. ಇದು ಇದುವರೆಗಿನ ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಕಡಲಾಚೆಯ ಪರಿಶೋಧನಾ ಯೋಜನೆ ಎನಿಸಿದೆ.
ಈ ಅನುಮೋದನೆಯು ಭಾರತದ ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಉತ್ಪಾದನಾ ವಲಯವನ್ನು ಬಲಪಡಿಸಲು ಗೌರವಾನ್ವಿತ ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಕೈಗೊಂಡ ಕ್ರಾಂತಿಕಾರಿ ಸುಧಾರಣೆಗಳ ಪರಾಕಾಷ್ಠೆಯಾಗಿದೆ.
ಸರ್ಕಾರದ ನೀತಿಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಮತ್ತು ಇಂಧನ ಭದ್ರತೆ ಹಾಗೂ ಆತ್ಮನಿರ್ಭರ ಭಾರತದತ್ತ ದೇಶದ ಪ್ರಯಾಣದಲ್ಲಿ ಹೊಸ ಅಧ್ಯಾಯವನ್ನು ತೆರೆಯುವ ಮೂಲಕ ಕೈಗೊಂಡ ಸುಧಾರಣೆಗಳ ತಳಹದಿಯ ಮೇಲೆ ರಾಷ್ಟ್ರೀಯ ಕಡಲಾಚೆಯ ಪರಿಶೋಧನಾ ಯೋಜನೆ- ʻಸಮುದ್ರ ಮಂಥನʼ ನಿಂತಿದೆ.
ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಗ್ರಾಹಕ ದೇಶವಾಗಿದ್ದು, ವಾರ್ಷಿಕ ಆಮದು ವೆಚ್ಚ ಸುಮಾರು 144 ಶತಕೋಟಿ ಡಾಲರ್ (ಸುಮಾರು 13 ಲಕ್ಷ ಕೋಟಿ ರೂ.) ನಷ್ಟಿದೆ. ಇತ್ತೀಚಿನ ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಂದ ಸ್ಪಷ್ಟವಾದಂತೆ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಇಂಧನ ಸಂಪನ್ಮೂಲಗಳಿಗೆ ಸುರಕ್ಷಿತ ಮತ್ತು ತಡೆರಹಿತ ಪ್ರವೇಶವು ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ.
ಮುಂಬರುವ ದಶಕಗಳಲ್ಲಿ ಭಾರತದ ಇಂಧನ ಬೇಡಿಕೆಯು ಸ್ಥಿರವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಹೀಗಾಗಿ, ಆಮದು ಅವಲಂಬನೆಯನ್ನು ಕಡಿಮೆ ಮಾಡಲು, ಇಂಧನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಹಾಗೂ ರಾಷ್ಟ್ರದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯನ್ನು ಭದ್ರಪಡಿಸಲು ದೇಶೀಯ ತೈಲ ಮತ್ತು ಅನಿಲ ಉತ್ಪಾದನೆಯನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ.

ಚಿತ್ರ 1: ಸುಧಾರಿತ ಭೂಗರ್ಭ ಸಮೀಕ್ಷೆಗಳು ಭಾರತದ ಕಡಲಾಚೆಯ ಸಾಮರ್ಥ್ಯವನ್ನು ಅನಾವರಣಗೊಳಿಸಿವೆ
2014ರಿಂದ ಈಚೆಗೆ, ಸರ್ಕಾರ ಕಳೆದ ಕೆಲವು ವರ್ಷಗಳಿಂದ ಸರಣಿ ರಚನಾತ್ಮಕ ಸುಧಾರಣೆಗಳನ್ನು ಕೈಗೆತ್ತಿಕೊಂಡಿದೆ. ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಉತ್ಪಾದನೆಗೆ ಪೂರಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ.
- ಕಡಲಾಚೆಯ ಪ್ರದೇಶವನ್ನು ತೆರೆಯುವುದು: ಹಿಂದೆ ಇದ್ದ ಶೇ. 99ಕ್ಕಿಂತ ಹೆಚ್ಚಿನ "ಪ್ರವೇಶ ನಿರ್ಬಂಧ" ಪ್ರದೇಶಗಳನ್ನು ತೆಗೆದುಹಾಕಲಾಗಿದೆ, ಇದು ಭಾರತದ ವಿಶೇಷ ಆರ್ಥಿಕ ವಲಯದ ಒಂದು ದಶಲಕ್ಷ ಚದರ ಕಿಲೋಮೀಟರ್ ಪ್ರದೇಶವನ್ನು ಮೊದಲ ಬಾರಿಗೆ ಪರಿಶೋಧನೆಗೆ ಲಭ್ಯವಾಗುವಂತೆ ಮಾಡಿದೆ.
- ಒಪ್ಪಂದದ ನೀತಿಯ ಆಧುನೀಕರಣ: ಭಾರತವು ಉತ್ಪಾದನೆ ಹಂಚಿಕೆ ಒಪ್ಪಂದಗಳಿಂದ ಆದಾಯ ಹಂಚಿಕೆ ಒಪ್ಪಂದಗಳಿಗೆ ಪರಿವರ್ತನೆಗೊಂಡಿದೆ, ಹಣಕಾಸಿನ ನೀತಿಯನ್ನು ಸರಳಗೊಳಿಸಿದೆ ಮತ್ತು ಆಡಳಿತಾತ್ಮಕ ಹಸ್ತಕ್ಷೇಪವನ್ನು ಕಡಿಮೆ ಮಾಡುವ ಜೊತೆಗೆ, ಪಾರದರ್ಶಕತೆಯನ್ನು ಸುಧಾರಿಸಿದೆ.
- ಶಾಸನ ಸಂಬಂಧಿತ ಸುಧಾರಣೆಗಳು: 2025ರ ʻತೈಲ ಕ್ಷೇತ್ರಗಳು (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಕಾಯ್ದೆʼಯು ಒಪ್ಪಂದದ ಸ್ಥಿರತೆಯನ್ನು ಒದಗಿಸುವ ಮೂಲಕ, ಸಮಗ್ರ ಪೆಟ್ರೋಲಿಯಂ ಕಾರ್ಯಾಚರಣೆಗಳನ್ನು ಗುರುತಿಸುವ ಮೂಲಕ, ವಿವಾದ ಪರಿಹಾರ ಕಾರ್ಯವಿಧಾನಗಳನ್ನು ಬಲಪಡಿಸುವ ಮೂಲಕ ಮತ್ತು ಸಮಕಾಲೀನ ನಿಯಂತ್ರಕ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಈ ವಲಯವನ್ನು ನಿಯಂತ್ರಿಸುವ ಸಮಗ್ರ ಕಾನೂನು ಚೌಕಟ್ಟನ್ನು ಆಧುನೀಕರಿಸಿದೆ.
- ಹೊಸ ನಿಯಮಗಳ ಮೂಲಕ ಅನುಷ್ಠಾನ: ʼಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಮಗಳು-2025ʼರ ಜಾರಿಯು ವ್ಯವಹಾರವನ್ನು ಸುಲಭಗೊಳಿಸುವ ಮೂಲಕ, ನಿಯಂತ್ರಕ ದಕ್ಷತೆಯನ್ನು ಸುಧಾರಿಸುವ ಮೂಲಕ ಮತ್ತು ಪೆಟ್ರೋಲಿಯಂ ಗುತ್ತಿಗೆಗಳ ಆಡಳಿತವನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಈ ಸುಧಾರಣೆಗಳನ್ನು ಕಾರ್ಯಗತಗೊಳಿಸಿದೆ.
- ನಿರ್ಧಾರ ಕೈಗೊಳ್ಳುವಲ್ಲಿ ಏಕರೂಪದ ನೀತಿ: ಎಲ್ಲಾ ಒಪ್ಪಂದದ ನಿಯಮಾವಳಿಗಳಾದ್ಯಂತ 'ಕಾರ್ಯದರ್ಶಿಗಳ ಅಧಿಕಾರಯುಕ್ತ ಸಮಿತಿ'ಯ ರಚನೆ ಮತ್ತು ಆದೇಶವನ್ನು ಸರ್ಕಾರವು ಪ್ರಮಾಣೀಕರಿಸಿದೆ. ಇದು ಒಪ್ಪಂದಗಳಿಗೆ ಯಾವಾಗ ಸಹಿ ಮಾಡಲಾಗಿದೆ ಎಂಬುದನ್ನು ಪರಿಗಣಿಸದೆ, ಎಲ್ಲಾ ಆಪರೇಟರ್‌ಗಳಿಗೂ ಸ್ಥಿರತೆ ಮತ್ತು ಸಮಾನ ಅವಕಾಶವನ್ನು ಖಚಿತಪಡಿಸುತ್ತದೆ.
- ಪರಿಶೋಧನೆಯ ಮೇಲೆ ತೀಕ್ಷ್ಣ ಗಮನ: ಅನ್ವೇಷಣಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲು ʻಒಎನ್‌ಜಿಸಿʼ ಮತ್ತು ʻಆಯಿಲ್ ಇಂಡಿಯಾʼದ ಕಾರ್ಯಕ್ಷಮತೆಯ ನಿಯತಾಂಕಗಳನ್ನು ಮರುಹೊಂದಿಸಲಾಗಿದೆ. ಇದು ಭಾರತದ ದೇಶೀಯ ಹೈಡ್ರೋಕಾರ್ಬನ್ ಸಂಪನ್ಮೂಲ ನೆಲೆಯನ್ನು ವಿಸ್ತರಿಸುವ ಸರ್ಕಾರದ ಬದ್ಧತೆಯನ್ನು ಬಲಪಡಿಸಿದೆ.
ಮೊದಲು ಈಗ

ಚಿತ್ರ 2 : ಚಿತ್ರ 3:
ಈ ಹಿಂದೆ ಪರಿಶೋಧನೆಗೆ ನಿರ್ಬಂಧಿಸಲಾಗಿದ್ದ ಕಡಲಾಚೆಯ ಪ್ರದೇಶಗಳು ಭಾರತದ ಸುಮಾರು ಶೇ.99 ರಷ್ಟು ʻಇಇಝಡ್ʼ ಈಗ ಪರಿಶೋಧನೆಗೆ ಮುಕ್ತ
ಹೈಡ್ರೋಕಾರ್ಬನ್ ಪರಿಶೋಧನೆಯು ಬಂಡವಾಳ-ತೀವ್ರ ಮತ್ತು ದೀರ್ಘಾವಧಿಯ ಚಟುವಟಿಕೆಯಾಗಿದ್ದು, ಪರಿಶೋಧನಾ ಪ್ರದೇಶಕ್ಕೆ ಅನುಮೋದನೆ ನೀಡುವುದರಿಂದ ಹಿಡಿದು ವಾಣಿಜ್ಯ ಉತ್ಪಾದನೆಯ ಪ್ರಾರಂಭದವರೆಗೆ 5-10 ವರ್ಷಗಳ ವಿಶಿಷ್ಟ ಅವಧಿಯನ್ನು ಹೊಂದಿರುತ್ತದೆ. ಭಾರತದ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ನಿರಂತರ ಪರಿಶೋಧನೆಯ ಅಗತ್ಯವನ್ನು ಇದು ಒತ್ತಿಹೇಳುತ್ತದೆ.
ಇದಲ್ಲದೆ, ಅಸ್ತಿತ್ವದಲ್ಲಿರುವ ತೈಲ ಮತ್ತು ಅನಿಲ ಕ್ಷೇತ್ರಗಳು ಪ್ರತಿ ವರ್ಷ ಸುಮಾರು ಶೇ.6-7 ರಷ್ಟು ನೈಸರ್ಗಿಕ ಉತ್ಪಾದನೆಯ ಕುಸಿತಕ್ಕೆ ಸಾಕ್ಷಿಯಾಗುತ್ತವೆ, ಇದು ದೇಶೀಯ ಹೈಡ್ರೋಕಾರ್ಬನ್ ಉತ್ಪಾದನೆಯನ್ನು ಉಳಿಸಿಕೊಳ್ಳಲು ನಿರಂತರ ಪರಿಶೋಧನೆ ಮತ್ತು ಹೊಸ ಆವಿಷ್ಕಾರಗಳು ಅಗತ್ಯವನ್ನು ಒತ್ತಿ ಹೇಳುತ್ತದೆ.
ಈ ಸವಾಲುಗಳನ್ನು ಎದುರಿಸಲು, ಸರ್ಕಾರವು ಪರಿಶೋಧನೆ-ನೇತೃತ್ವದ ಬೆಳವಣಿಗೆಯ ಕಡೆಗೆ ನೀತಿಯನ್ನು ಮರುಹೊಂದಿಸಿದೆ. ರಾಷ್ಟ್ರೀಯ ಕಡಲಾಚೆಯ ಅನ್ವೇಷಣಾ ಯೋಜನೆ "ಸಮುದ್ರ ಮಂಥನ್” ಅಡಿಯಲ್ಲಿ ಸರ್ಕಾರವು ಆಳವಾದ ನೀರಿನ ಅನ್ವೇಷಣಾ ಬಾವಿಗಳನ್ನು ಕೊರೆಯುವ ವೆಚ್ಚದ ಶೇ.50ರವರೆಗೆ ಆರ್ಥಿಕ ನೆರವು ನೀಡುತ್ತದೆ. ಆ ಮೂಲಕ ಪರಿಶೋಧನೆಯ ಅಪಾಯವನ್ನು ಕಡಿಮೆ ಮಾಡುತ್ತದೆ, ಹೂಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ಭಾರತದ ಕಡಲಾಚೆಯ ಹೈಡ್ರೋಕಾರ್ಬನ್ ಸಾಮರ್ಥ್ಯದ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ.
ಭಾರತದ ಭವಿಷ್ಯದ ಹೈಡ್ರೋಕಾರ್ಬನ್ ಸಾಮರ್ಥ್ಯವು ಹೆಚ್ಚಾಗಿ ಕೃಷ್ಣಾ-ಗೋದಾವರಿ, ಕಾವೇರಿ, ಮಹಾನದಿ ಮತ್ತು ಅಂಡಮಾನ್ ಪ್ರದೇಶದಂತಹ ಆಳ ನೀರು ಮತ್ತು ಅತಿ-ಆಳದ ನೀರಿನ ಜಲಾನಯನ ಪ್ರದೇಶಗಳಲ್ಲಿದೆ. ಈ ಗಡಿ ಪ್ರದೇಶಗಳಲ್ಲಿನ ಪರಿಶೋಧನೆಗೆ ಸುಧಾರಿತ ತಂತ್ರಜ್ಞಾನ ಮತ್ತು ಗಮನಾರ್ಹ ಹೂಡಿಕೆಯ ಅಗತ್ಯವಿದೆ. ಒಂದು ಆಳವಾದ ನೀರಿನ ಪರಿಶೋಧನಾ ಬಾವಿಗೆ ಸುಮಾರು 125-150 ದಶಲಕ್ಷ ಡಾಲರ್ ವೆಚ್ಚವಾಗುತ್ತದೆ. ಅಂತಹ ಪರಿಶೋಧನೆಯ ಹೆಚ್ಚಿನ ಅಪಾಯ, ಹೆಚ್ಚಿನ ವೆಚ್ಚದ ಸ್ವರೂಪವನ್ನು ಗುರುತಿಸಿ, ಸರ್ಕಾರವು ಸುಸ್ಥಿರ ಹೂಡಿಕೆಯನ್ನು ಉತ್ತೇಜಿಸಲು, ಪರಿಶೋಧನೆಯನ್ನು ವೇಗಗೊಳಿಸಲು ಮತ್ತು ಭಾರತದ ಕಡಲಾಚೆಯ ಹೈಡ್ರೋಕಾರ್ಬನ್ ಸಂಪನ್ಮೂಲಗಳನ್ನು ಮುಕ್ತಗೊಳಿಸಲು ಅಪಾಯ-ಹಂಚಿಕೆ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ.

ಚಿತ್ರ 4: ಆಳವಾದ ನೀರು ಮತ್ತು ಅತಿ-ಆಳದ ಜಲ ಪರಿಶೋಧನೆಯನ್ನು ವೇಗಗೊಳಿಸುವುದು
ಆದ್ದರಿಂದ ಕಡಲಾಚೆಯ ಅನ್ವೇಷಣೆಯ ಅಪಾಯವನ್ನು ತಗ್ಗಿಸಲು, ಖಾಸಗಿ ಹೂಡಿಕೆಯನ್ನು ವೇಗವರ್ಧಿಸಲು, ದೇಶೀಯ ಉತ್ಪಾದನೆಯನ್ನು ಬಲಪಡಿಸಲು ಮತ್ತು ಕಡಲಾಚೆಯ ಪರಿಶೋಧನೆ ಹಾಗೂ ಉತ್ಪಾದನಾ ಮೌಲ್ಯ ಸರಪಳಿಯಲ್ಲಿ ನಿರಂತರ ರಾಷ್ಟ್ರೀಯ ಸಾಮರ್ಥ್ಯವನ್ನು ನಿರ್ಮಿಸಲು ಕಾರ್ಯತಂತ್ರದ ರಾಷ್ಟ್ರೀಯ ಮಧ್ಯಸ್ಥಿಕೆಯಾಗಿ ʻಸಮುದ್ರ ಮಂಥನ್ʼ ಅನ್ನು ಪ್ರಸ್ತಾಪಿಸಲಾಗಿದೆ.
ರಾಷ್ಟ್ರೀಯ ಕಡಲಾಚೆಯ ಪರಿಶೋಧನಾ ಯೋಜನೆ "ಸಮುದ್ರ ಮಂಥನ್” ನೀತಿ ಸುಧಾರಣೆಗಳಿಂದ ಸಮರೋಪಾದಿಯ ಅನುಷ್ಠಾನಕ್ಕೆ ಪರಿವರ್ತನೆಯನ್ನು ಸೂಚಿಸುತ್ತದೆ. ಮಾರ್ಚ್ 31, 2031ರವರೆಗೆ 84,084 ಕೋಟಿ ರೂ.ಗಳ ಮೊದಲ ಹಂತದ ಕೇಂದ್ರ ವಲಯದ ಯೋಜನೆಯಾಗಿ ಅನುಮೋದಿಸಲಾದ ಈ ಯೋಜನೆಯು ಕಡಲಾಚೆಯ ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಉತ್ಪಾದನೆಯನ್ನು ವೇಗಗೊಳಿಸಲು ಸಮಗ್ರ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆ.

ಚಿತ್ರ 5 : ವೇಗದ ಉತ್ಪಾದನೆಗಾಗಿ ಕಡಲಾಚೆಯ ಹಂಚಿಕೆಯ ಮೂಲಸೌಕರ್ಯ
ಈ ಯೋಜನೆಯು ನಾಲ್ಕು ಪ್ರಮುಖ ಅಂಶಗಳನ್ನು ಒಳಗೊಂಡಿದೆ: (i) 28,534 ಕೋಟಿ ರೂ.ಗಳ ವೆಚ್ಚದಲ್ಲಿ ಆಧುನಿಕ ಕಡಲಾಚೆಯ ಭೂಗರ್ಭ ದತ್ತಾಂಶವನ್ನು ಸಂಗ್ರಹಿಸುವುದು ಮತ್ತು ಸಂಸ್ಕರಿಸುವುದು; (ii) ಅರ್ಹ ಕೊರೆಯುವ ವೆಚ್ಚದ ಶೇ.50 ಅಥವಾ ಪ್ರತಿ ಬಾವಿಗೆ 675 ಕೋಟಿ ರೂ., ಯಾವುದು ಕಡಿಮೆಯೋ ಅದನ್ನು ಒಳಗೊಂಡಂತೆ 43,200 ಕೋಟಿ ರೂ.ಗಳ ಹಂಚಿಕೆಯೊಂದಿಗೆ 60 ಆಳವಾದ ನೀರಿನ ಪರಿಶೋಧನಾ ಬಾವಿಗಳನ್ನು ಕೊರೆಯುವುದು; (iii) ಆವಿಷ್ಕಾರಗಳ ವಾಣಿಜ್ಯೀಕರಣಕ್ಕೆ ಅನುಕೂಲವಾಗುವಂತೆ 10,000 ಕೋಟಿ ರೂ.ಗಳ ವೆಚ್ಚದೊಂದಿಗೆ ಸಾಮಾನ್ಯ ಕಡಲಾಚೆಯ ಮೂಲಸೌಕರ್ಯ ಕೇಂದ್ರಗಳ ಅಭಿವೃದ್ಧಿ; ಮತ್ತು (iv) ದೇಶೀಯ ಉತ್ಪಾದನೆ ಮತ್ತು ನಿರ್ಣಾಯಕ ಉಪಕರಣಗಳು ಮತ್ತು ಸೇವೆಗಳ ಸ್ಥಳೀಕರಣವನ್ನು ಉತ್ತೇಜಿಸಲು 2,000 ಕೋಟಿ ರೂ.ಗಳ ವೆಚ್ಚದಲ್ಲಿ ʻತೈಲ ಮತ್ತು ಅನಿಲ ಉತ್ಪಾದನೆ ಮತ್ತು ಸೇವಾ ವಲಯʼಗಳನ್ನು ಸ್ಥಾಪಿಸುವುದು.
ಘಟಕದ ಆಧಾರದ ಮೇಲೆ ವೆಚ್ಚ (ಕೋಟಿ ರೂಪಾಯಿಗಳಲ್ಲಿ)
|
ಕ್ರ.ಸಂ.
|
ಘಟಕ
|
ಮೊತ್ತ
|
|
1
|
ಕಡಲಾಚೆಯ ದತ್ತಾಂಶ ಸಂಗ್ರಹ
|
28,534
|
|
1A
|
ಜಲಾನಯನ ಪ್ರದೇಶ-ವ್ಯಾಪಕ ವ್ಯಾಪ್ತಿಗಾಗಿ 2D ಭೂಗರ್ಭ ದತ್ತಾಂಶ ಸಂಗ್ರಹ
|
12,000
|
|
1B
|
3D ಭಗರ್ಭ ದತ್ತಾಂಶ ಸಂಗ್ರಹ (ಮತ್ತು ಇತರ ತಂತ್ರಗಳು)
|
12,534
|
|
1C
|
ಎನ್‌ಡಿಆರ್ ದತ್ತಾಂಶ ಮರು-ಸಂಸ್ಕರಣೆ ಮತ್ತು ಎಐ ಪರಿಕರಗಳ ಅನುಷ್ಠಾನ
|
4,000
|
|
2
|
ಕಡಲಾಚೆಯ ಪರಿಶೋಧನೆ ಮತ್ತು ಮೂಲಸೌಕರ್ಯ ನೇತೃತ್ವದ ಉತ್ಪಾದನೆ
|
55,200
|
|
2A
|
ಕಡಲಾಚೆಯ ಪರಿಶೋಧನೆ ವೇಗವರ್ಧನೆ
|
43,200
|
|
2B
|
ಮೂಲಸೌಕರ್ಯ ಆಧಾರಿತ ಆಳನೀರಿನ ಉತ್ಪಾದನೆ ಮತ್ತು ಪರಿಶೋಧನೆ
|
10,000
|
|
2C
|
ತೈಲ ಮತ್ತು ಅನಿಲ ಉತ್ಪಾದನೆ ಹಾಗೂ ಸೇವಾ ವಲಯಗಳ ಅಭಿವೃದ್ಧಿ
|
2,000
|
|
3
|
ಮೇಲ್ವಿಚಾರಣೆ ಮತ್ತು ಬೆಂಬಲ ಚಟುವಟಿಕೆಗಳು (ಡಿಜಿಟಲ್ ಮಧ್ಯಸ್ಥಿಕೆಗಳು, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ, ಮಾನವ ಸಂಪನ್ಮೂಲ, ಜಾಗೃತಿ ಮತ್ತು ಜನಸಂಪ್ರಕ, ಕಾರ್ಯಕ್ರಮಗಳ ಆಯೋಜನೆ, ಮಾಧ್ಯಮ)
|
350
|
|
|
ಒಟ್ಟು
|
84,084
|
ಪರಿಶೋಧನೆಯ ಯಶಸ್ಸಿಗೆ ಒಳಪಟ್ಟು, ರಾಷ್ಟ್ರೀಯ ಕಡಲಾಚೆಯ ಪರಿಶೋಧನಾ ಯೋಜನೆ ʻಸಮುದ್ರ ಮಂಥನ್ʼ ಭಾರತದ ದೇಶೀಯ ತೈಲ ಮತ್ತು ಅನಿಲ ಉತ್ಪಾದನೆಯನ್ನು ವಾರ್ಷಿಕವಾಗಿ ಸುಮಾರು 62 ʻಎಂಎಂಟಿಒಇʼಯಿಂದ 80 ʻಎಂಎಂಟಿಒಇʼಗೆ ಹೆಚ್ಚಿಸುವ ನಿರೀಕ್ಷೆಯಿದೆ. ಜೊತೆಗೆ, ದೇಶದ ಹೈಡ್ರೋಕಾರ್ಬನ್ ಸಂಪನ್ಮೂಲವನ್ನು 1.6 ಶತಕೋಟಿ ʻಟಿಒಇʼಯಿಂದ 2.2 ಶತಕೋಟಿ ʻಟಿಒಇʼಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ಹೆಚ್ಚುವರಿ ಉತ್ಪಾದನೆಯು ಕಚ್ಚಾ ತೈಲ ಆಮದನ್ನು ವಾರ್ಷಿಕವಾಗಿ ಸುಮಾರು 1 ಲಕ್ಷ ಕೋಟಿ ರೂ.ಗಳಷ್ಟು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಉತ್ತಮ ದತ್ತಾಂಶ, ಅಪಾಯ ಹಂಚಿಕೆ, ಸಾಮಾನ್ಯ ಮೂಲಸೌಕರ್ಯ ಮತ್ತು ದೇಶೀಯ ಉತ್ಪಾದನಾ ಸಾಮರ್ಥ್ಯಗಳ ಮೂಲಕ ದೃಢವಾದ ಕಡಲಾಚೆಯ ಪರಿಶೋಧನಾ ಪರಿಸರ ವ್ಯವಸ್ಥೆಯನ್ನು ರಚಿಸುವ ಮೂಲಕ, ʻಸಮುದ್ರ ಮಂಥನʼ ಯೋಜನೆಯು ಆಳ ನೀರಿನ ಪರಿಶೋಧನೆ ಮತ್ತು ಉತ್ಪಾದನೆಯಲ್ಲಿ ರಾಷ್ಟ್ರೀಯ ಸಾಮರ್ಥ್ಯವನ್ನು ನಿರ್ಮಿಸಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ. ಜೊತೆಗೆ, ನಮ್ಮ ಇಂಧನ-ಭದ್ರತೆಯನ್ನು ಬಲಪಡಿಸಲು ಮತ್ತು ಆಮದಿನ ಮೇಲಿನ ನಮ್ಮ ದೀರ್ಘಕಾಲೀನ ಅವಲಂಬನೆಯನ್ನು ಕಡಿಮೆ ಮಾಡಲು ನೆರವಾಗಲಿದೆ.
*****
(रिलीज़ आईडी: 2292904)
आगंतुक पटल : 12