ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸ್ವದೇಶಿ ಕಾಂಪ್ಯಾಕ್ಟ್ ಸ್ವಯಂಚಾಲಿತ ರೊಟ್ಟಿ ತಯಾರಿಕೆ ಯಂತ್ರದ ವಾಣಿಜ್ಯೀಕರಣಕ್ಕಾಗಿ ಬೆಂಗಳೂರಿನ ಫುಡ್ ಟೆಕ್ನಿಕ್ಸ್ ಪ್ರೈವೇಟ್ ಲಿಮಿಟೆಡ್ ಗೆ ಟಿಡಿಬಿ-ಡಿಎಸ್ ಟಿ ಬೆಂಬಲ

प्रविष्टि तिथि: 31 JUL 2026 12:56PM by PIB Bengaluru

ಸ್ವದೇಶಿ ಅಡುಗೆಮನೆ ನವೀಕರಣ ಮತ್ತು ಸ್ಮಾರ್ಟ್ ಆಹಾರ ಸಂಸ್ಕರಣಾ ತಂತ್ರಜ್ಞಾನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್ ಟಿ) ಅಡಿಯಲ್ಲಿರುವ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯು (ಟಿಡಿಬಿ), ಬೆಂಗಳೂರಿನ ಫುಡ್ ಟೆಕ್ನಿಕ್ಸ್ ಪ್ರೈವೇಟ್ ಲಿಮಿಟೆಡ್ ನ “ರೋಟಿದೊʼ (ROTIDO) - ಹಿಟ್ಟು ನಾದುವ, ಒತ್ತುವ ಮತ್ತು ಕಾಯಿಸುವ ವ್ಯವಸ್ಥೆಯನ್ನು ಒಳಗೊಂಡ ಕಾಂಪ್ಯಾಕ್ಟ್ ಸ್ವಯಂಚಾಲಿತ ರೊಟ್ಟಿ ತಯಾರಿಕೆ ಯಂತ್ರ” ಯೋಜನೆಗೆ ಹಣಕಾಸಿನ ನೆರವು ನೀಡಿದೆ. ಗೃಹಬಳಕೆ, ಸಣ್ಣ ಉದ್ಯಮಗಳು, ಉಪಹಾರ ಮಂದಿರಗಳು ಮತ್ತು ಸಂಸ್ಥೆಗಳ ಅಡುಗೆಮನೆಗಳಿಗಾಗಿ ವಿನ್ಯಾಸಗೊಳಿಸಲಾದ ಸಂಪೂರ್ಣ ಸ್ವದೇಶಿ, ಕಾಂಪ್ಯಾಕ್ಟ್ ಸ್ವಯಂಚಾಲಿತ ರೊಟ್ಟಿ ತಯಾರಿಕಾ ವ್ಯವಸ್ಥೆಯನ್ನು ವಾಣಿಜ್ಯೀಕರಣಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದು ಸ್ಥಳೀಯ ತಯಾರಿಕೆ ಮತ್ತು ನಾವೀನ್ಯತೆಯ ಮೂಲಕ ಭಾರತದ 'ಆತ್ಮನಿರ್ಭರ ಭಾರತ'ದ ಪರಿಕಲ್ಪನೆಗೆ ಬೆಂಬಲ ನೀಡುತ್ತದೆ.

ಈ ಯೋಜನೆಯು ಹಿಟ್ಟು ನಾದುವುದು, ಹಿಟ್ಟಿನ ಉಂಡೆ ಮಾಡುವುದು, ಒತ್ತುವುದು, ಕಾಯಿಸುವುದು ಮತ್ತು ರೊಟ್ಟಿಯನ್ನು ಸ್ವಯಂಚಾಲಿತವಾಗಿ ಹೊರತಳ್ಳುವ ಪ್ರಕ್ರಿಯೆಗಳನ್ನು ಒಂದೇ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಸಂಯೋಜಿಸುವ 'ROTIDO C-150' ಎನ್ನುವ ಕಾಂಪ್ಯಾಕ್ಟ್ ಹಾಗೂ ಚುರುಕಾದ ರೊಟ್ಟಿ ತಯಾರಿಕಾ ಯಂತ್ರದ ಅಭಿವೃದ್ಧಿ ಮತ್ತು ವಾಣಿಜ್ಯೀಕರಣದ ಮೇಲೆ ಗಮನ ಹರಿಸುತ್ತದೆ. ಗಂಟೆಗೆ 150 ರೊಟ್ಟಿಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿರುವ ಈ ಯಂತ್ರವು ದೈಹಿಕ ಶ್ರಮವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ನೈರ್ಮಲ್ಯವನ್ನು ಸುಧಾರಿಸುತ್ತದೆ ಮತ್ತು ಕೆಲಸದ ದಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಒಂದೇ ರೀತಿಯ ಉತ್ತಮ ಗುಣಮಟ್ಟದ ರೊಟ್ಟಿಗಳನ್ನು ನೀಡುತ್ತದೆ.

ಈ ತಂತ್ರಜ್ಞಾನವನ್ನು ಕಂಪನಿಯು ಸಂಪೂರ್ಣವಾಗಿ ತನ್ನ ಆಂತರಿಕ ಸಂಶೋಧನೆ ಮತ್ತು ಅಭಿವೃದ್ಧಿ (R&D) ಪ್ರಕ್ರಿಯೆಗಳ ಮೂಲಕ ಅಭಿವೃದ್ಧಿಪಡಿಸಿದೆ. ತನ್ನ ದೊಡ್ಡ ಕೈಗಾರಿಕಾ ಮಾದರಿಗಳಾದ ROTIDO R-1000 ಮತ್ತು RS-1000 ಗಳ ಯಶಸ್ವಿ ವಾಣಿಜ್ಯೀಕರಣದ ನಂತರ, ಫುಡ್ಟೆಕ್ನಿಕ್ಸ್ ಸಂಸ್ಥೆಯು ಈಗ ಗೃಹಬಳಕೆದಾರರು ಮತ್ತು ಸಣ್ಣ ವಾಣಿಜ್ಯ ಸಂಸ್ಥೆಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಾಂಪ್ಯಾಕ್ಟ್ ಪರಿಹಾರವನ್ನು ಪರಿಚಯಿಸುತ್ತಿದೆ. ಈ ಯೋಜನೆಯು ಪ್ರೊಟೊಟೈಪ್ ಅಭಿವೃದ್ಧಿಗಾಗಿ 'ನಿಧಿ ಪ್ರಯಾಸ್'  ಯೋಜನೆಯಡಿಯಲ್ಲೂ ಬೆಂಬಲವನ್ನು ಪಡೆದುಕೊಂಡಿದ್ದು, ಆರಂಭಿಕ ಹಂತದ ತಂತ್ರಜ್ಞಾನ ಅಭಿವೃದ್ಧಿಯಿಂದ ವಾಣಿಜ್ಯೀಕರಣದವರೆಗಿನ ಯಶಸ್ವಿ ನಾವೀನ್ಯತೆಯ ಪ್ರಯಾಣವನ್ನು ಪ್ರದರ್ಶಿಸುತ್ತದೆ.

ROTIDO C-150 ಯಂತ್ರದ ಪ್ರಮುಖ ನಾವೀನ್ಯತೆಯೆಂದರೆ, ಇದು 2 ಕೆಜಿ ಸಾಮರ್ಥ್ಯದ ಹಿಟ್ಟು ನಾದುವ ಯಂತ್ರ, ಸ್ವಯಂಚಾಲಿತ ಹಿಟ್ಟಿನ ಉಂಡೆ ನೀಡುವ ವ್ಯವಸ್ಥೆ, ನಿಖರವಾದ ಒತ್ತುವ ಕಾರ್ಯವಿಧಾನ ಮತ್ತು ಮೂರು ಹಂತದ ನಿಯಂತ್ರಿತ ಕಾಯಿಸುವ ತಂತ್ರಜ್ಞಾನವನ್ನು ಅತ್ಯಂತ ಕಡಿಮೆ ಜಾಗ ಮಾತ್ರ ಸಾಲುವ  ವಿನ್ಯಾಸದಲ್ಲಿ ಒಳಗೊಂಡಿದೆ. ಇದರಲ್ಲಿರುವ ಚತುರ ಪ್ರಕ್ರಿಯೆ ಸಂಯೋಜನೆ, ಪ್ರೋಗ್ರಾಂ ಮಾಡಬಹುದಾದ ನಿಯಂತ್ರಣಗಳು ಮತ್ತು ಸಂಯೋಜಿತ ಹಿಟ್ಟಿನ ತೂಕದ ವ್ಯವಸ್ಥೆಯು ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ಒಂದೇ ರೀತಿಯ ದಪ್ಪ, ಕಾಯಿಸುವಿಕೆ ಮತ್ತು ಗುಣಮಟ್ಟವನ್ನು ಖಚಿತಪಡಿಸುತ್ತದೆ. ಇದರ ಪರಿಣಾಮಕಾರಿ ಮತ್ತು ಶಕ್ತಿಯನ್ನು ಸಮರ್ಥವಾಗಿ ಬಳಸುವ ವಿನ್ಯಾಸವು ನೈರ್ಮಲ್ಯದ ಕೆಲಸವನ್ನು ಸಾಧ್ಯವಾಗಿಸುವುದಲ್ಲದೆ, ಸ್ವಯಂಚಾಲಿತ ರೊಟ್ಟಿ ತಯಾರಿಕೆಯನ್ನು ಹೆಚ್ಚಿನ ಬಳಕೆದಾರರಿಗೆ ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುತ್ತದೆ.

ಈ ಯೋಜನೆಯು ಆಮದು ಮಾಡಿಕೊಳ್ಳುವ ಸ್ವಯಂಚಾಲಿತ ಅಡುಗೆಮನೆ ಉಪಕರಣಗಳಿಗೆ ಪರ್ಯಾಯವಾಗಿ ಸ್ವದೇಶಿ ಆಯ್ಕೆಯನ್ನು ನೀಡುವ ಮೂಲಕ, ಆಹಾರ ಸಂಸ್ಕರಣಾ ಉಪಕರಣಗಳಿಗಾಗಿ ಭಾರತದ ದೇಶೀಯ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸುವ ನಿರೀಕ್ಷೆಯಿದೆ. ಅನುಕೂಲತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದರ ಜೊತೆಗೆ, ಈ ತಂತ್ರಜ್ಞಾನವು ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ, ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಮತ್ತು ಕೆಲಸದ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಹೋಟೆಲುಗಳು, ಕ್ಲೌಡ್ ಕಿಚನ್ ಗಳು, ಹಾಸ್ಟೆಲ್ ಗಳು, ಆಸ್ಪತ್ರೆಗಳು, ಕ್ಯಾಂಟೀನ್ ಗಳು ಮತ್ತು ಸಣ್ಣ ಆಹಾರ ಉದ್ಯಮಗಳಿಗೆ ಬೆಂಬಲ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಟಿಡಿಬಿಯ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಪಾಠಕ್, "ಉತ್ಪಾದಕತೆ, ನೈರ್ಮಲ್ಯ ಮತ್ತು ಜೀವನ ಶೈಲಿಯನ್ನು ಸುಲಭಗೊಳಿಸಲು ಹಾಗೂ ಭಾರತದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಉತ್ಪಾದನಾ ಸಾಮರ್ಥ್ಯಗಳನ್ನು ಸೃಷ್ಟಿಸಲು ಆಹಾರ ಸಂಸ್ಕರಣಾ ಉಪಕರಣಗಳಲ್ಲಿ ನಾವೀನ್ಯತೆ ಅತ್ಯಗತ್ಯ. ರೋಟಿದೋ (ROTIDO) ನಂತಹ ಸ್ವದೇಶಿ ತಂತ್ರಜ್ಞಾನಗಳು ಎಂಜಿನಿಯರಿಂಗ್ ನಾವೀನ್ಯತೆಯು ಕೈಗೆಟುಕುವ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ದೈನಂದಿನ ಸವಾಲುಗಳನ್ನು ಹೇಗೆ ಪರಿಹರಿಸಬಲ್ಲದು ಎಂಬುದನ್ನು ತೋರಿಸುತ್ತವೆ. ಬಲವಾದ ವಾಣಿಜ್ಯ ಸಾಮರ್ಥ್ಯ ಮತ್ತು ಸಾಮಾಜಿಕ ಪ್ರಭಾವವನ್ನು ಹೊಂದಿರುವ ಮಾರುಕಟ್ಟೆಗೆ ಸಿದ್ಧವಾಗಿರುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಉದ್ಯಮಗಳನ್ನು ಬೆಂಬಲಿಸಲು ಟಿಡಿಬಿ ಬದ್ಧವಾಗಿದೆ," ಎಂದು ತಿಳಿಸಿದರು.

ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದ ಫುಡ್ಟೆಕ್ನಿಕ್ಸ್ ಪ್ರೈವೇಟ್ ಲಿಮಿಟೆಡ್ನ ಮುಖ್ಯಸ್ಥರು, ಟಿಡಿಬಿಯ ನೆರವು ROTIDO C-150 ಯಂತ್ರದ ವಾಣಿಜ್ಯೀಕರಣವನ್ನು ವೇಗಗೊಳಿಸುತ್ತದೆ, ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ ಮತ್ತು ಭಾರತೀಯ ಕುಟುಂಬಗಳು ಹಾಗೂ ಸಣ್ಣ ಉದ್ಯಮಗಳಲ್ಲಿ ಸ್ವದೇಶಿ ಸ್ವಯಂಚಾಲಿತ ಆಹಾರ ಸಂಸ್ಕರಣಾ ತಂತ್ರಜ್ಞಾನಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.

 

*****


(रिलीज़ आईडी: 2292377) आगंतुक पटल : 3
इस विज्ञप्ति को इन भाषाओं में पढ़ें: English , हिन्दी