ಸಂವಹನ ಸಚಿವಾಲಯ
ಸಿ-ಡಾಟ್ ಶ್ರೇಷ್ಠತಾ ಕೇಂದ್ರದ ಸ್ಥಾಪನೆಗಾಗಿ ಟೆಲಿಮ್ಯಾಟಿಕ್ಸ್ ಅಭಿವೃದ್ಧಿ ಕೇಂದ್ರವು (ಸಿ-ಡಾಟ್) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ) ಮತ್ತು ವಿಜ್ಞಾನ ನಾವೀನ್ಯತೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ (ಎಫ್ ಎಸ್ ಐ ಡಿ) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ
ಶ್ರೇಷ್ಠತಾ ಕೇಂದ್ರವು ಆತ್ಮನಿರ್ಭರ ಭಾರತಕ್ಕಾಗಿ ದೇಶೀಯ ಟೆಲಿಕಾಂ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲಿದೆ
ಆತ್ಮನಿರ್ಭರ ಮತ್ತು ವಿಕಸಿತ ಭಾರತಕ್ಕಾಗಿ ಟೆಲಿಕಾಂ ಕ್ಷೇತ್ರದಲ್ಲಿ ಶೈಕ್ಷಣಿಕ–ಉದ್ಯಮ ಸಹಯೋಗವನ್ನು ಉತ್ತೇಜಿಸುವ ಅತ್ಯಾಧುನಿಕ ಸಂವಹನ ತಂತ್ರಜ್ಞಾನಗಳಲ್ಲಿ ಹೆಚ್ಚು ಪರಿಣಾಮಕಾರಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಈ ಶ್ರೇಷ್ಠತಾ ಕೇಂದ್ರವು ಸಮರ್ಪಿತ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ
प्रविष्टि तिथि:
30 JUL 2026 1:46PM by PIB Bengaluru
ಕೇಂದ್ರ ಸಂವಹನ ಸಚಿವಾಲಯದ ಟೆಲಿಕಾಂ ಇಲಾಖೆಯ (ಡಿಒಟಿ) ಪ್ರಮುಖ ಟೆಲಿಕಾಂ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾದ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್), ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐ ಐ ಎಸ್ ಸಿ) ಮತ್ತು ವಿಜ್ಞಾನ ನಾವೀನ್ಯತೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ (ಎಫ್ ಎಸ್ ಐ ಡಿ) ಜೊತೆಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದವು ಸಹಯೋಗದ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಮೂಲಕ ಭಾರತದ ದೇಶೀಯ ಟೆಲಿಕಾಂ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ.
ಒಪ್ಪಂದದ ಭಾಗವಾಗಿ, ಸಿ-ಡಾಟ್ ಅತ್ಯಾಧುನಿಕ ಸಂವಹನ ತಂತ್ರಜ್ಞಾನಗಳ ದೇಶೀಯ ಸಂಶೋಧನೆ, ನಾವೀನ್ಯತೆ, ಸಾಮರ್ಥ್ಯ ವರ್ಧನೆ ಮತ್ತು ವಾಣಿಜ್ಯೀಕರಣವನ್ನು ವೇಗಗೊಳಿಸುವ ಉದ್ದೇಶದಿಂದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನ ನಾವೀನ್ಯತೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದಲ್ಲಿ ಶ್ರೇಷ್ಠತಾ ಕೇಂದ್ರವನ್ನು (ಸಿಒಇ) ಸ್ಥಾಪಿಸಿದೆ. ಈ ಶ್ರೇಷ್ಠತಾ ಕೇಂದ್ರವು ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮಕ್ಕೆ ಸಹಯೋಗದ ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು, ಭಾರತದ ಡಿಜಿಟಲ್ ಭವಿಷ್ಯಕ್ಕೆ ನಿರ್ಣಾಯಕವಾಗಿರುವ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಹೆಚ್ಚು ಪರಿಣಾಮಕಾರಿ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಪ್ರತಿಭೆಗಳ ಸೃಷ್ಟಿಯನ್ನು ಉತ್ತೇಜಿಸುತ್ತದೆ.
ನೂತನವಾಗಿ ಸ್ಥಾಪಿಸಲಾದ ಈ ಶ್ರೇಷ್ಠತಾ ಕೇಂದ್ರವು ವೈರ್‌ಲೆಸ್ ಸಂವಹನ, ಕ್ವಾಂಟಮ್ ತಂತ್ರಜ್ಞಾನಗಳು, ಸೈಬರ್ ಭದ್ರತೆ ಮತ್ತು ಎಐ-ಚಾಲಿತ ಸಂವಹನ ವ್ಯವಸ್ಥೆಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯ ಮೇಲೆ ಗಮನ ಹರಿಸಲಿದ್ದು, 5ಜಿ ಸುಧಾರಿತ/6ಜಿ ತಂತ್ರಜ್ಞಾನಗಳು, ವೆರಿ ಲಾರ್ಜ್-ಸ್ಕೇಲ್ ಎಂಐಎಂಒ ವ್ಯವಸ್ಥೆಗಳು, ಇಂಟಿಗ್ರೇಟೆಡ್ ಸೆನ್ಸಿಂಗ್ ಆಂಡ್ ಕಮ್ಯುನಿಕೇಷನ್, ಎಐ-ನೇಟಿವ್ ಕಮ್ಯುನಿಕೇಷನ್ ನೆಟ್‌ವರ್ಕ್ ಗಳು ಮತ್ತು ಸಾಧನಗಳು, ಹಾಗೂ ಕ್ವಾಂಟಮ್ ಮತ್ತು ಪೋಸ್ಟ್-ಕ್ವಾಂಟಮ್ ಸಂವಹನ ತಂತ್ರಜ್ಞಾನಗಳು ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳಲ್ಲಿ ಸುಧಾರಿತ ಸಂಶೋಧನೆಯನ್ನು ಕೈಗೊಳ್ಳಲಿದೆ. ಐ ಐ ಎಸ್ ಸಿ ಯ ಜಾಗತಿಕವಾಗಿ ಗುರುತಿಸಲ್ಪಟ್ಟ ಶೈಕ್ಷಣಿಕ ಶ್ರೇಷ್ಠತೆಯನ್ನು ಸಿ-ಡಾಟ್ ನ ದೇಶೀಯ ಟೆಲಿಕಾಂ ಸಂಶೋಧನೆ ಮತ್ತು ಅಭಿವೃದ್ಧಿಯ ವ್ಯಾಪಕ ಪರಿಣತಿಯೊಂದಿಗೆ ಸಂಯೋಜಿಸುವ ಮೂಲಕ, ಈ ಕೇಂದ್ರವು ಭವಿಷ್ಯಕ್ಕೆ ಸಿದ್ಧವಾಗಿರುವ ಸಂವಹನ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ವೇಗಗೊಳಿಸಲು, ಬೌದ್ಧಿಕ ಆಸ್ತಿಯನ್ನು (ಐಪಿ) ಸೃಷ್ಟಿಸಲು, ಡೀಪ್-ಟೆಕ್ ನವೋದ್ಯಮಗಳಿಗೆ ಬೆಂಬಲ ನೀಡಲು ಮತ್ತು ಜಂಟಿ ಸಂಶೋಧನೆ, ಕಾರ್ಯಾಗಾರಗಳು, ತರಬೇತಿ ಕಾರ್ಯಕ್ರಮಗಳು ಹಾಗೂ ಶೈಕ್ಷಣಿಕ-ಉದ್ಯಮದ ತೊಡಗಿಸಿಕೊಳ್ಳುವಿಕೆಗಳ ಮೂಲಕ ನಿರಂತರ ಜ್ಞಾನ ವಿನಿಮಯಕ್ಕೆ ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿದೆ.
ಈ ಉಪಕ್ರಮದೊಂದಿಗೆ, ಐಐಟಿ ಹೈದರಾಬಾದ್, ಐಐಟಿ ಕಾನ್ಪುರ, ಐಐಟಿ ಗಾಂಧಿನಗರ ಮತ್ತು ಐಐಟಿ ರೂರ್ಕಿಗಳೊಂದಿಗಿನ ಇದೇ ರೀತಿಯ ಸಹಯೋಗಗಳ ನಂತರ ಸಿ*ಡಾಟ್ ಈಗ ಐದು ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಿದಂತಾಗಿದೆ. ವಿಸ್ತರಿಸುತ್ತಿರುವ ಈ ಶ್ರೇಷ್ಠತಾ ಕೇಂದ್ರಗಳ ಜಾಲವು ಸಹಯೋಗದ ಮೂಲಕ ಅತ್ಯಾಧುನಿಕ ಸಂಶೋಧನೆಯನ್ನು ಪೋಷಿಸುವ, ದೇಶೀಯ ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುವ ಮತ್ತು ಮುಂದಿನ ಪೀಳಿಗೆಯ ಟೆಲಿಕಮ್ಯುನಿಕೇಷನ್ ನಲ್ಲಿ ಜಾಗತಿಕ ನಾಯಕನಾಗಿ ಭಾರತದ ಸ್ಥಾನವನ್ನು ಬಲಪಡಿಸುವ ಕ್ರಿಯಾಶೀಲ ರಾಷ್ಟ್ರೀಯ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸಿ-ಡಾಟ್ ನ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಸಿ-ಡಾಟ್ ನ ಸಿಇಒ ಡಾ. ರಾಜಕುಮಾರ್ ಉಪಾಧ್ಯಾಯ ಮತ್ತು ಎಫ್ ಎಸ್ ಐ ಡಿ ಯ ಸಿಇಒ ಶ್ರೀ ಓಂಪ್ರಕಾಶ್ ಸುಬ್ಬರಾವ್ ಅವರ ಸಮ್ಮುಖದಲ್ಲಿ, ಐ ಐ ಎಸ್ ಸಿ ಯ ಅಧ್ಯಾಪಕರು ಮತ್ತು ಸಿ-ಡಾಟ್ ನ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸಹಿ ಮಾಡುವ ಸಮಾರಂಭದ ನಂತರ, ಸಹಯೋಗದ ಮತ್ತು ಹೆಚ್ಚು ಪರಿಣಾಮಕಾರಿ ಸಂಶೋಧನೆ ಹಾಗೂ ನಾವೀನ್ಯತೆಯ ಮೂಲಕ ಸಂವಹನ ತಂತ್ರಜ್ಞಾನಗಳನ್ನು ಮುನ್ನಡೆಸಲು ಸಮರ್ಪಿತವಾದ ಶ್ರೇಷ್ಠತಾ ಕೇಂದ್ರವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ, ಸಿ-ಡಾಟ್ ನ ಸಿಇಒ ಡಾ. ರಾಜಕುಮಾರ್ ಉಪಾಧ್ಯಾಯ ಅವರು ಐ ಐ ಎಸ್ ಸಿ ಸಮುದಾಯಕ್ಕೆ "ವಿಕಸಿತ ಭಾರತಕ್ಕಾಗಿ ಸುರಕ್ಷಿತ ದೇಶೀಯ ಸಂವಹನ ತಂತ್ರಜ್ಞಾನಗಳನ್ನು ನಿರ್ಮಿಸುವಲ್ಲಿ ಸಿ-ಡಾಟ್ ನ ಪಾತ್ರ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಉಪನ್ಯಾಸವು ಭಾರತದ ಕ್ಷಿಪ್ರ ಡಿಜಿಟಲ್ ಮತ್ತು ಟೆಲಿಕಾಂ ರೂಪಾಂತರ, ವಿಶ್ವಾಸಾರ್ಹ ದೇಶೀಯ ಸಂವಹನ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯತಂತ್ರದ ಪ್ರಾಮುಖ್ಯತೆ ಮತ್ತು ಮುಂದಿನ ಪೀಳಿಗೆಯ ಟೆಲಿಕಾಂ ನೆಟ್‌ವರ್ಕ್ ಗಳು, ಸೈಬರ್ ಭದ್ರತೆ, ಎಐ-ಚಾಲಿತ ಸಂವಹನ ವ್ಯವಸ್ಥೆಗಳು ಹಾಗೂ ಕ್ವಾಂಟಮ್-ಸುರಕ್ಷಿತ ಸಂವಹನಗಳಲ್ಲಿ ಸಿ-ಡಾಟ್ ನ ಪ್ರವರ್ತಕ ಕೊಡುಗೆಗಳನ್ನು ಎತ್ತಿಹಿಡಿಯಿತು. ಈ ಗೋಷ್ಠಿಯು 6ಜಿ ತಂತ್ರಜ್ಞಾನಗಳ ಪರಿವರ್ತನಾತ್ಮಕ ಸಾಮರ್ಥ್ಯವನ್ನು ಮತ್ತು ಜಾಗತಿಕ ಟೆಲಿಕಮ್ಯುನಿಕೇಷನ್ ನ ಭವಿಷ್ಯವನ್ನು ರೂಪಿಸುವಲ್ಲಿ ಭಾರತದ ಬೆಳೆಯುತ್ತಿರುವ ನಾಯಕತ್ವವನ್ನು ಸಹ ಅನ್ವೇಷಿಸಿತು.
ಈ ಸಹಯೋಗದ ಪ್ರಾಮುಖ್ಯತೆಯನ್ನು ವಿವರಿಸಿದ ಸಿ-ಡಾಟ್ ನ ಸಿಇಒ ಡಾ. ರಾಜಕುಮಾರ್ ಉಪಾಧ್ಯಾಯ ಅವರು, ಐ ಐ ಎಸ್ ಸಿ ಬೆಂಗಳೂರಿನಲ್ಲಿ ಸಿ-ಡಾಟ್ ಶ್ರೇಷ್ಠತಾ ಕೇಂದ್ರದ ಸ್ಥಾಪನೆಯು ಭಾರತದ ಭವಿಷ್ಯದ ಟೆಲಿಕಾಂ ನಾವೀನ್ಯತಾ ಪರಿಸರ ವ್ಯವಸ್ಥೆಯಲ್ಲಿನ ಕಾರ್ಯತಂತ್ರದ ಹೂಡಿಕೆಯನ್ನು ಪ್ರತಿನಿಧಿಸುತ್ತದೆ ಎಂದರು. ಐ ಐ ಎಸ್ ಸಿ ಯ ವಿಶ್ವದರ್ಜೆಯ ಸಂಶೋಧನಾ ಸಾಮರ್ಥ್ಯಗಳನ್ನು ಸಿ-ಡಾಟ್ ನ ದೇಶೀಯ ಟೆಲಿಕಾಂ ತಂತ್ರಜ್ಞಾನಗಳ ಪರಿಣತಿಯೊಂದಿಗೆ ಒಂದುಗೂಡಿಸುವ ಮೂಲಕ, ನಾವು 5ಜಿ ಸುಆಧರಿತ, 6ಜಿ, ಎಐ, ಕ್ವಾಂಟಮ್ ಕಮ್ಯುನಿಕೇಷನ್ಸ್ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಮಹತ್ವದ ಸಂಶೋಧನೆಯನ್ನು ವೇಗಗೊಳಿಸುವ ವೇದಿಕೆಯನ್ನು ರಚಿಸುತ್ತಿದ್ದೇವೆ. ಈ ಸಹಯೋಗವು ನಿರ್ಣಾಯಕ ಸಂವಹನ ತಂತ್ರಜ್ಞಾನಗಳಲ್ಲಿ ಭಾರತದ ಆತ್ಮನಿರ್ಭರತೆಯನ್ನು ಬಲಪಡಿಸುವುದು ಮಾತ್ರವಲ್ಲದೆ, ಮುಂದಿನ ಪೀಳಿಗೆಯ ನಾವೀನ್ಯಕಾರರು, ಸಂಶೋಧಕರು, ಬೌದ್ಧಿಕ ಆಸ್ತಿ ಮತ್ತು ಡೀಪ್-ಟೆಕ್ ಉದ್ಯಮಗಳನ್ನು ಪೋಷಿಸುತ್ತದೆ, ಇದು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಗಮನಾರ್ಹ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.
ಈ ಸಹಯೋಗದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಐ ಐ ಎಸ್ ಸಿ ಬೆಂಗಳೂರಿನ ಎಲೆಕ್ಟ್ರಿಕಲ್ ಕಮ್ಯುನಿಕೇಷನ್ ಇಂಜಿನಿಯರಿಂಗ್ (ಇಸಿಇ) ವಿಭಾಗದ ಅಧ್ಯಕ್ಷರಾದ ಪ್ರೊ. ನೀಲೇಶ್ ಬಿ. ಮೆಹ್ತಾ ಅವರು, ಸಿ-ಡಾಟ್ ನೊಂದಿಗಿನ ಸಹಭಾಗಿತ್ವವು ಅತ್ಯಾಧುನಿಕ ಸಂಶೋಧನೆಯಲ್ಲಿ ತೊಡಗಿರುವ ಐ ಐ ಎಸ್ ಸಿ ಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮತ್ತು ಸಿ-ಡಾಟ್ ನ ಕ್ಷೇತ್ರ ತಜ್ಞರು ಹಾಗೂ ಇಂಜಿನಿಯರ್ ಗಳ ನಡುವೆ ದೀರ್ಘಕಾಲೀನ ಮತ್ತು ಹೆಚ್ಚು ಪರಿಣಾಮಕಾರಿ ಸಹಯೋಗವನ್ನು ಉತ್ತೇಜಿಸುತ್ತದೆ, ಇದರಿಂದಾಗಿ ಸುಧಾರಿತ ಸಂವಹನ ತಂತ್ರಜ್ಞಾನಗಳಲ್ಲಿ ನಾವೀನ್ಯತೆಯನ್ನು ವೇಗಗೊಳಿಸುತ್ತದೆ ಎಂದು ಹೇಳಿದರು.
ಸಹಯೋಗದ ಪ್ರಾಮುಖ್ಯತೆಯನ್ನು ವಿವರಿಸಿದ ಎಫ್ ಎಸ್ ಐ ಡಿ ಯ ಸಿಇಒ ಶ್ರೀ ಓಂಪ್ರಕಾಶ್ ಸುಬ್ಬರಾವ್ ಅವರು, "ಸಿ-ಡಾಟ್ ನೊಂದಿಗೆ ಈ ಪ್ರಮುಖ ಮೈಲಿಗಲ್ಲನ್ನು ತಲುಪಿರುವುದಕ್ಕೆ ನಮಗೆ ಸಂತೋಷವಾಗಿದೆ ಮತ್ತು ಐ ಐ ಎಸ್ ಸಿ ಯ ಅಸಾಧಾರಣ ಸಂಶೋಧಕರು ಹಾಗೂ ನಾವೀನ್ಯಕಾರರೊಂದಿಗೆ ಹೆಚ್ಚು ಪರಿಣಾಮಕಾರಿ ಯೋಜನೆಗಳು ಮತ್ತು ಸಹಯೋಗಗಳನ್ನು ಪ್ರಾರಂಭಿಸಲು ನಾವು ಎದುರು ನೋಡುತ್ತಿದ್ದೇವೆ. ಎಫ್ ಎಸ್ ಐ ಡಿ ಯಾವಾಗಲೂ ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯಮವನ್ನು ಬೆಸೆಯಲು ಬದ್ಧವಾಗಿದೆ, ಏಕೆಂದರೆ ಭಾರತದ ವೈಜ್ಞಾನಿಕ ಪರಿಸರ ವ್ಯವಸ್ಥೆ ಮತ್ತು ತಾಂತ್ರಿಕ ನಾಯಕತ್ವವನ್ನು ಬಲಪಡಿಸಲು ಸಹಯೋಗದ ನಾವೀನ್ಯತೆಯು ಅತ್ಯಗತ್ಯ ಎಂದು ನಾವು ದೃಢವಾಗಿ ನಂಬುತ್ತೇವೆ. ಈ ಸಹಭಾಗಿತ್ವವು ದೇಶಕ್ಕೆ ಅರ್ಥಪೂರ್ಣ ಫಲಿತಾಂಶಗಳನ್ನು ನೀಡುತ್ತದೆ ಎಂಬ ಭರವಸೆ ನಮಗಿದೆ ಎಂದು ಹೇಳಿದರು.

ಐ ಐ ಎಸ್ ಸಿ ಬೆಂಗಳೂರಿನಲ್ಲಿ ಶ್ರೇಷ್ಠತಾ ಕೇಂದ್ರವನ್ನು ಉದ್ಘಾಟಿಸುತ್ತಿರುವ ಸಿ-ಡಾಟ್ ನ ಸಿಇಒ ಡಾ. ರಾಜಕುಮಾರ್ ಉಪಾಧ್ಯಾಯ

ಸಿ-ಡಾಟ್ ನ ಸಿಇಒ ಡಾ. ರಾಜ್‌ಕುಮಾರ್ ಉಪಾಧ್ಯಾಯ ಮತ್ತು ಎಫ್ ಎಸ್ ಐ ಡಿ ಯ ಸಿಇಒ ಶ್ರೀ ಓಂಪ್ರಕಾಶ್ ಸುಬ್ಬರಾವ್ ಅವರ ಸಮ್ಮುಖದಲ್ಲಿ, ಐ ಐ ಎಸ್ ಸಿ ಯ ಅಧ್ಯಾಪಕರು ಮತ್ತು ಸಿ-ಡಾಟ್ ನ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ

ಐ ಐ ಎಸ್ ಸಿ ಸಮುದಾಯಕ್ಕೆ "ವಿಕಸಿತ ಭಾರತಕ್ಕಾಗಿ ಸುರಕ್ಷಿತ ದೇಶೀಯ ಸಂವಹನ ತಂತ್ರಜ್ಞಾನಗಳನ್ನು ನಿರ್ಮಿಸುವಲ್ಲಿ ಸಿ-ಡಾಟ್ ನ ಪಾತ್ರ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಿರುವ ಸಿ-ಡಾಟ್ ನ ಸಿಇಒ ಡಾ. ರಾಜಕುಮಾರ್ ಉಪಾಧ್ಯಾಯ
*****
(रिलीज़ आईडी: 2291711)
आगंतुक पटल : 12