ರೈಲ್ವೇ ಸಚಿವಾಲಯ
azadi ka amrit mahotsav

ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ವಿಭಾಗಗಳು, ವಲಯ ರೈಲ್ವೆಗಳು ಮತ್ತು ರೈಲ್ವೆ ಮಂಡಳಿಯಲ್ಲಿ ಪ್ರತ್ಯೇಕ ಪರಿಸರ ಮತ್ತು ಹೌಸ್‌ಕೀಪಿಂಗ್ ನಿರ್ವಹಣಾ ಇಲಾಖೆಗಳ ಸ್ಥಾಪನೆ: ರೈಲ್ವೆ ಸಚಿವರು


ಸಂಪೂರ್ಣ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು 1,450 ಜೋಡಿ ಸುದೀರ್ಘ ದೂರದ ರೈಲುಗಳಲ್ಲಿ ಆನ್-ಬೋರ್ಡ್ ಹೌಸ್‌ಕೀಪಿಂಗ್ ಸೇವೆ ಲಭ್ಯ

2,800 ರೈಲುಗಳನ್ನು ಒಳಗೊಂಡಂತೆ 63 ನಿಲ್ದಾಣಗಳಲ್ಲಿ ಸ್ವಚ್ಛ ರೈಲು ನಿಲ್ದಾಣ ಯೋಜನೆ ಅನುಷ್ಠಾನ, ಸ್ವಚ್ಛ ಕೋಚ್‌ಗಳು, ಸುಧಾರಿತ ನೈರ್ಮಲ್ಯ ಮತ್ತು ಪ್ರಯಾಣಿಕರ ಹೆಚ್ಚಿನ ಅನುಕೂಲತೆ ಖಚಿತ

ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆ ಮತ್ತು ಪರಿಸರ ಸ್ನೇಹಿ ಸುಸ್ಥಿರ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲು ರೈಲ್ವೆ ನಿಲ್ದಾಣಗಳಲ್ಲಿ 13 ಜೈವಿಕ ಗ್ಯಾಸ್ ಘಟಕಗಳು, 171 ಕಾಂಪೋಸ್ಟಿಂಗ್ ಘಟಕಗಳು ಮತ್ತು 8 ಸಾಮಗ್ರಿ ಮರುಪಡೆಯುವಿಕೆ ಸೌಲಭ್ಯಗಳನ್ನು ನಿಯೋಜಿಸಿದ ಭಾರತೀಯ ರೈಲ್ವೆ

प्रविष्टि तिथि: 24 JUL 2026 4:37PM by PIB Bengaluru

ರೈಲುಗಳು ಮತ್ತು ರೈಲ್ವೆ ನಿಲ್ದಾಣಗಳಿಂದ ಉತ್ಪತ್ತಿಯಾಗುವ ತ್ಯಾಜ್ಯದ ಸಂಗ್ರಹಣೆ, ಸಂಸ್ಕರಣೆ ಮತ್ತು ವಿಲೇವಾರಿಗಾಗಿ ಭಾರತೀಯ ರೈಲ್ವೆಯು ಸಮಗ್ರ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ನಿಲ್ದಾಣಗಳಲ್ಲಿ ತ್ಯಾಜ್ಯವನ್ನು ಮೂಲದಲ್ಲೇ ಸಂಗ್ರಹಿಸಲು ಮತ್ತು ಪ್ರತ್ಯೇಕಿಸಲು ಜೋಡಿ ಕಸದ ಬುಟ್ಟಿಗಳನ್ನು ಒದಗಿಸಲಾಗಿದೆ. ರೈಲುಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿಗದಿತ ತ್ಯಾಜ್ಯ ನಿರ್ವಹಣಾ ನಿಲ್ದಾಣಗಳಲ್ಲಿ ನಿಯಮಿತವಾಗಿ ಸಂಗ್ರಹಿಸಲಾಗುತ್ತದೆ. ಈ ನಿಲ್ದಾಣಗಳು ತ್ಯಾಜ್ಯದ ಸರಿಯಾದ ವಿಲೇವಾರಿಗಾಗಿ ನಗರ ಸ್ಥಳೀಯ ಸಂಸ್ಥೆಗಳು/ಪುರಸಭೆ ಪ್ರಾಧಿಕಾರಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿವೆ.

ಇದಲ್ಲದೆ, ಭಾರತೀಯ ರೈಲ್ವೆಯು ಕಾರ್ಯಾಚರಣೆಯ ಅಗತ್ಯತೆಗಳ ಆಧಾರದ ಮೇಲೆ ವಿವಿಧ ನಿಲ್ದಾಣಗಳಲ್ಲಿ ಜೈವಿಕ ಗ್ಯಾಸ್, ಕಾಂಪೋಸ್ಟಿಂಗ್ ಮತ್ತು ಪ್ಲಾಸ್ಟಿಕ್ ಬಾಟಲಿ ಪುಡಿಮಾಡುವ ಯಂತ್ರಗಳಂತಹ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದೆ. ಅಂತಹ ಸೌಲಭ್ಯಗಳ ವಿವರಗಳು ಕೆಳಗಿನಂತಿವೆ:

ಕ್ರ.ಸಂ.

ಘಟಕದ ಪ್ರಕಾರ

ಸ್ಥಾಪಿಸಲಾದ ಘಟಕಗಳ ಸಂಖ್ಯೆ

ಅನುಸ್ಥಾಪಿತ ಸಾಮರ್ಥ್ಯ

1

ಜೈವಿಕ ಗ್ಯಾಸ್ ಘಟಕ

13

ದಿನಕ್ಕೆ 5,095 ಕೆಜಿ

2

ಕಾಂಪೋಸ್ಟಿಂಗ್ ಘಟಕ

171

ದಿನಕ್ಕೆ 24,817 ಕೆಜಿ

3

ಸಾಮಗ್ರಿ ಮರುಪಡೆಯುವಿಕೆ ಸೌಲಭ್ಯ (MRF)

8

ದಿನಕ್ಕೆ 7,725 ಕೆಜಿ

4

ಪ್ಲಾಸ್ಟಿಕ್ ಬಾಟಲಿ ಪುಡಿಮಾಡುವ ಯಂತ್ರಗಳು

858 ಯಂತ್ರಗಳು

ಹೊಸ ಘನತ್ಯಾಜ್ಯ ನಿರ್ವಹಣಾ ನಿಯಮಗಳು, 2026ರ ಅನ್ವಯಿಸುವಿಕೆ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಅನುಗುಣವಾಗಿ, ಭಾರತೀಯ ರೈಲ್ವೆಯು ತನ್ನ ಎಲ್ಲಾ ಸಂಸ್ಥೆಗಳಾದ್ಯಂತ ಘನತ್ಯಾಜ್ಯ ನಿರ್ವಹಣೆಯನ್ನು ಬಲಪಡಿಸಲು ಸರಣಿ ಕ್ರಮಗಳನ್ನು ಪ್ರಾರಂಭಿಸಿದೆ.

ರೈಲ್ವೆ ಮಂಡಳಿಯು ರೈಲ್ವೆ ನಿಲ್ದಾಣಗಳು, ರೈಲುಗಳು, ರೈಲ್ವೆ ಕಾಲೋನಿಗಳು, ಆಸ್ಪತ್ರೆಗಳು, ಕಾರ್ಯಾಗಾರಗಳು, ಉತ್ಪಾದನಾ ಘಟಕಗಳು ಮತ್ತು ಇತರ ಎಲ್ಲಾ ರೈಲ್ವೆ ಸಂಸ್ಥೆಗಳನ್ನು ಒಳಗೊಂಡಂತೆ ಘನತ್ಯಾಜ್ಯ ನಿರ್ವಹಣೆಯ ಕುರಿತು ಕಡ್ಡಾಯ ಕಾರ್ಯಾಚರಣೆ ವಿಧಾನವನ್ನು (SoP) ಹೊರಡಿಸಿದೆ. ಈ ಎಸ್‌ಒಪಿ (SoP) ತ್ಯಾಜ್ಯದ ಪ್ರತ್ಯೇಕತೆ, ಸಂಗ್ರಹಣೆ, ಸಾಗಣೆ, ಸಂಸ್ಕರಣೆ ಮತ್ತು ವೈಜ್ಞಾನಿಕ ವಿಲೇವಾರಿ, ಮೇಲ್ವಿಚಾರಣಾ ವ್ಯವಸ್ಥೆಗಳು ಮತ್ತು ಎಲ್ಲಾ ಆಡಳಿತಾತ್ಮಕ ಹಂತಗಳಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಜವಾಬ್ದಾರಿಗಳ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಒದಗಿಸುತ್ತದೆ.

ವಲಯ ರೈಲ್ವೆಗಳು ಎಸ್-ಡಬ್ಲ್ಯೂ-ಎಮ್ (SWM) ನಿಯಮಗಳು, 2026ರ ಪ್ರಕಾರ ಬೃಹತ್ ತ್ಯಾಜ್ಯ ಉತ್ಪಾದಕಗಳಾಗಿ ಅರ್ಹತೆ ಪಡೆಯುವ ತನ್ನ ಘಟಕಗಳನ್ನು ಗುರುತಿಸಲು ಪ್ರಾರಂಭಿಸಿವೆ. ಎಲ್ಲಾ ಭಾರತೀಯ ರೈಲ್ವೆ ಸಂಸ್ಥೆಗಳು ಮತ್ತು ರೈಲುಗಳಲ್ಲಿ ಪ್ರಸ್ತುತ ಇರುವ ತ್ಯಾಜ್ಯ ಉತ್ಪಾದನೆಯನ್ನು ಮೌಲ್ಯಮಾಪನ ಮಾಡಲು "ಪ್ರಸ್ತುತ ಸ್ಥಿತಿಯ ತ್ಯಾಜ್ಯ ಗುಣಲಕ್ಷಣ ಮತ್ತು ಪ್ರಮಾಣೀಕರಣ ಅಧ್ಯಯನ" ವನ್ನು ಯೋಜಿಸಲಾಗಿದೆ.

ತ್ಯಾಜ್ಯ ನಿರ್ವಹಣೆಗಾಗಿ ಸಮಗ್ರ ಕ್ರಿಯಾ ಯೋಜನೆಗಳನ್ನು ತಯಾರಿಸಲು, ಆವರ್ತಕ ತನಿಖೆಗಳನ್ನು (ಆಡಿಟ್) ನಡೆಸಲು, ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಮತ್ತು ರೈಲ್ವೆ ಮಂಡಳಿಗೆ ನಿಯಮಿತವಾಗಿ ಬದ್ಧತಾ ವರದಿಗಳನ್ನು ಹಂಚಿಕೊಳ್ಳಲು ವಲಯ ರೈಲ್ವೆಗಳು ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿವೆ. ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗಾಗಿ ಕ್ರಿಯಾ ಯೋಜನೆಗಳನ್ನು ತಯಾರಿಸಲು ವಿಭಾಗಗಳಿಗೂ ನಿರ್ದೇಶನ ನೀಡಲಾಗಿದೆ. ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ವಿಭಾಗಗಳು, ವಲಯ ರೈಲ್ವೆಗಳು ಮತ್ತು ರೈಲ್ವೆ ಮಂಡಳಿಯ ಮಟ್ಟದಲ್ಲಿ ಪ್ರತ್ಯೇಕ ಪರಿಸರ ಮತ್ತು ಹೌಸ್‌ಕೀಪಿಂಗ್ ನಿರ್ವಹಣಾ (EnHM) ಇಲಾಖೆಗಳನ್ನು ಸ್ಥಾಪಿಸಲಾಗಿದೆ.

ರೈಲುಗಳಲ್ಲಿ ಸಂಪೂರ್ಣ ನೈರ್ಮಲ್ಯ ಮತ್ತು ಸ್ವಚ್ಛತೆಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ಆನ್-ಬೋರ್ಡ್ ಹೌಸ್‌ಕೀಪಿಂಗ್ ಸೇವೆಯನ್ನು (OBHS) ಒದಗಿಸಲಾಗುತ್ತಿದ್ದು, ಇದು ಪ್ರಸ್ತುತ ಗುರುತಿಸಲಾದ 1,450 (ಜೋಡಿ) ಸುದೀರ್ಘ ದೂರದ ರೈಲುಗಳಲ್ಲಿ ಲಭ್ಯವಿದೆ.

2,800 ರೈಲುಗಳನ್ನು ಒಳಗೊಂಡಂತೆ 63 ನಿಲ್ದಾಣಗಳಲ್ಲಿ ಸ್ವಚ್ಛ ರೈಲು ನಿಲ್ದಾಣ (CTS) ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ, ಸ್ವಚ್ಛತಾ ಉಪಕರಣಗಳೊಂದಿಗೆ ಸಜ್ಜುಗೊಂಡಿರುವ ಸಿಬ್ಬಂದಿಯ ಪ್ರತ್ಯೇಕ ತಂಡವು ರೈಲು ನಿಲ್ಲುವ ಸಮಯದಲ್ಲಿ ಕೋಚ್ ಟಾಯ್ಲೆಟ್‌ಗಳು ಮತ್ತು ವಾಶ್‌ಬೇಸಿನ್‌ಗಳನ್ನು ಸ್ವಚ್ಛಗೊಳಿಸುತ್ತದೆ ಹಾಗೂ ರೈಲಿನ ಕಸದ ಬುಟ್ಟಿಗಳಿಂದ ಕಸವನ್ನು ಸಂಗ್ರಹಿಸುತ್ತದೆ.

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಈ ಮಾಹಿತಿಯನ್ನು ಒದಗಿಸಿದ್ದಾರೆ.

 

*****


(रिलीज़ आईडी: 2288949) आगंतुक पटल : 18
इस विज्ञप्ति को इन भाषाओं में पढ़ें: English , Urdu , हिन्दी , Gujarati