ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಡಿಜಿಟಲ್ ವ್ಯಸನದ ವಿರುದ್ಧ ಸರ್ಕಾರವು ಸುರಕ್ಷತಾ ಕ್ರಮಗಳ ಬಲವರ್ಧನೆ; 6,650 ಸೈಬರ್ ಜಾಗೃತಿ ಕಾರ್ಯಾಗಾರಗಳ ಮೂಲಕ 11.37 ಲಕ್ಷಕ್ಕೂ ಅಧಿಕ ನಾಗರಿಕರಲ್ಲಿ ಅರಿವು


ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು 67A ಮತ್ತು ಇತರ ಕಾನೂನು ನಿಬಂಧನೆಗಳಡಿಯಲ್ಲಿ ಅಶ್ಲೀಲ ವಿಷಯಕ್ಕಾಗಿ ಕಳೆದ 2 ವರ್ಷಗಳಲ್ಲಿ 50 ಒಟಿಟಿ ಪ್ಲಾಟ್‌ಫಾರ್ಮ್‌ಗಳ ನಿಷ್ಕ್ರಿಯ

ಸರ್ಕಾರದಿಂದ ಬಲವಾದ ಆನ್‌ಲೈನ್ ಸುರಕ್ಷತೆ, ಗೌಪ್ಯತೆ ರಕ್ಷಣೆ ಮತ್ತು ಸೈಬರ್ ಜಾಗೃತಿ ಕ್ರಮಗಳ ಮೂಲಕ ಮಕ್ಕಳಿಗೆ ಸುರಕ್ಷಿತ ಡಿಜಿಟಲ್ ಪೂರಕ ವ್ಯವಸ್ಥೆಯ ಬಲವರ್ಧನೆ

प्रविष्टि तिथि: 22 JUL 2026 1:16PM by PIB Bengaluru

ಸರ್ಕಾರದ ನೀತಿಗಳು ಮಕ್ಕಳು ಸೇರಿದಂತೆ ತನ್ನ ಬಳಕೆದಾರರಿಗೆ ಮುಕ್ತ, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಅಂತರ್ಜಾಲ (ಇಂಟರ್ನೆಟ್ )ವನ್ನು ಖಾತ್ರಿಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ.

ಕಾನೂನು ವ್ಯವಸ್ಥೆ:

ಮಾಹಿತಿ ತಂತ್ರಜ್ಞಾನ ಕಾಯ್ದೆ 2000 (ಐಟಿ ಕಾಯ್ದೆ) ಮತ್ತು ಮಾಹಿತಿ ತಂತ್ರಜ್ಞಾನ (ಇಂಟರ್ ಮೀಡಿಯರಿ (ಮಧ್ಯವರ್ತಿ) ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 (ಐಟಿ ನಿಯಮಗಳು) ಸೇರಿ ಒಟ್ಟಾರೆ ಡಿಜಿಟಲ್ ಯೋಗಕ್ಷೇಮ, ಬಳಕೆದಾರರ ಸುರಕ್ಷತೆಗಳು ಮತ್ತು ಜವಾಬ್ದಾರಿಯುತ ಡಿಜಿಟಲ್ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಒಂದು ಚೌಕಟ್ಟನ್ನು ಸ್ಥಾಪಿಸಿವೆ.

ಮಧ್ಯವರ್ತಿಗಳ ಬಾಧ್ಯತೆಗಳು:

ಐಟಿ ನಿಯಮಗಳು ಮಧ್ಯವರ್ತಿಗಳು (intermediaries)ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಸರಿಯಾದ ಶ್ರದ್ಧೆಯನ್ನು ಗಮನಿಸಬೇಕು ಮತ್ತು ಮಕ್ಕಳಿಗೆ ಹಾನಿಕಾರಕ ಅಥವಾ ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನನ್ನು ಉಲ್ಲಂಘಿಸುವ ಯಾವುದೇ ಮಾಹಿತಿಯನ್ನು ಹೋಸ್ಟ್ ಮಾಡಬಾರದು, ಪ್ರದರ್ಶಿಸಬಾರದು, ಅಪ್‌ಲೋಡ್ ಮಾಡಬಾರದು, ಮಾರ್ಪಡಿಸಬಾರದು, ಪ್ರಕಟಿಸಬಾರದು, ರವಾನಿಸಬಾರದು, ನವೀಕರಿಸಬಾರದು ಅಥವಾ ಹಂಚಿಕೊಳ್ಳಬಾರದು ಎಂದು ಕಂಪ್ಯೂಟರ್ ಸಂಪನ್ಮೂಲಗಳ ಬಳಕೆದಾರರಿಗೆ ತಿಳಿಸಬೇಕು.

ನಾಗರಿಕರ ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು ಐಟಿ ನಿಯಮಗಳಲ್ಲಿನ ಇತ್ತೀಚಿನ ತಿದ್ದುಪಡಿಗಳು:

ಐಟಿ ನಿಯಮಗಳಿಗೆ ಇತ್ತೀಚಿನ ತಿದ್ದುಪಡಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಇತರ ಮಧ್ಯವರ್ತಿಗಳು ಸಮರ್ಥ ನ್ಯಾಯವ್ಯಾಪ್ತಿಯ ನ್ಯಾಯಾಲಯದ ಆದೇಶವನ್ನು ಸ್ವೀಕರಿಸಿದ ಮೂರು ಗಂಟೆಗಳ ಒಳಗೆ ಅಥವಾ ಸೂಕ್ತ ಸರ್ಕಾರ ಅಥವಾ ಅದರ ಸಂಸ್ಥೆಯಿಂದ ತಾರ್ಕಿಕ ಮಾಹಿತಿಯ ನಂತರ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕಬೇಕಾಗುತ್ತದೆ

ದತ್ತಾಂಶ ರಕ್ಷಣೆ:

ಹೆಚ್ಚುವರಿಯಾಗಿ, ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆ, 2023 (ಡಿಪಿಡಿಪಿ ಕಾಯ್ದೆ) ಅನ್ನು ಜಾರಿಗೆ ತರಲಾಗಿದೆ, ಇದು ಡಿಜಿಟಲ್ ವೈಯಕ್ತಿಕ ದತ್ತಾಂಶದ ಸಂಸ್ಕರಣೆಯನ್ನು ನಿಯಂತ್ರಿಸಲು ಕಾನೂನು ಚೌಕಟ್ಟನ್ನು ಸ್ಥಾಪಿಸುತ್ತದೆ. ಡಿಪಿಡಿಪಿ ಕಾಯ್ದೆಯು ಮಕ್ಕಳ ಗೌಪ್ಯತೆಯನ್ನು ಆನ್‌ಲೈನ್‌ನಲ್ಲಿ ಕಾಪಾಡಲು ಕಾನೂನು ಚೌಕಟ್ಟನ್ನು ಒದಗಿಸುತ್ತದೆ.

ಇದು ಮಕ್ಕಳ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸಲು ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸುತ್ತದೆ ಮತ್ತು ಟ್ರ್ಯಾಕಿಂಗ್, ನಡವಳಿಕೆಯ ಮೇಲ್ವಿಚಾರಣೆ ಅಥವಾ ಮಕ್ಕಳ ಕಡೆಗೆ ಉದ್ದೇಶಿತ ಜಾಹೀರಾತುಗಳಂತಹ ಅವರ ಯೋಗಕ್ಷೇಮಕ್ಕೆ ಹಾನಿಕಾರಕ ಅಭ್ಯಾಸಗಳನ್ನು ನಿಷೇಧಿಸುತ್ತದೆ

ಆನ್‌ಲೈನ್ ಹಣದ ಜೂಜಾಟ ನಿಷೇಧಿಸುವುದು:

ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ 2025, ಯುವಕರಲ್ಲಿ ಡಿಜಿಟಲ್ ವ್ಯಸನ ಮತ್ತು ಆರ್ಥಿಕ ಹಾನಿಯನ್ನು ಪರಿಹರಿಸಲು ಒಂದು ಪ್ರಮುಖ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ.

ಹಾನಿಕಾರಕ ವಿಷಯ(ಕಂಟೆಂಟ್ )ನಿರ್ಬಂಧಿಸುವುದು:

ಐಟಿ ಕಾಯ್ದೆ 2000 ರ ಸೆಕ್ಷನ್ 79(3) (ಬಿ) ಕಾನೂನುಬಾಹಿರ ವಿಷಯ(ಕಂಟೆಂಟ್) ಅನ್ನು ತೆಗೆದುಹಾಕಲು/ನಿಷ್ಕ್ರಿಯಗೊಳಿಸಲು ಮಧ್ಯವರ್ತಿಗಳಿಗೆ ಅಧಿಸೂಚನೆಯನ್ನು ಒದಗಿಸುತ್ತದೆ. ದೂರುಗಳ ಆಧಾರದ ಮೇಲೆ, ಸರ್ಕಾರವು ನಿಯಮಿತವಾಗಿ ಅಂತಹ ಮಧ್ಯವರ್ತಿಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಕಳೆದ ಎರಡು ವರ್ಷಗಳಲ್ಲಿ ಸರ್ಕಾರವು ಅಶ್ಲೀಲ ವಿಷಯವನ್ನು ಪ್ರದರ್ಶಿಸಿದ್ದಕ್ಕಾಗಿ ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು 67 ಎ, ಬಿಎನ್‌ಎಸ್‌ನ ಸೆಕ್ಷನ್ 294 ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆ, 1986 ರ ಸೆಕ್ಷನ್ 4 ರ ಉಲ್ಲಂಘನೆಗಾಗಿ ಭಾರತದಲ್ಲಿ ಸಾರ್ವಜನಿಕ ಪ್ರವೇಶಕ್ಕಾಗಿ 50 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಷ್ಕ್ರಿಯಗೊಳಿಸಿದೆ.

ಡಿಜಿಟಲ್ ವ್ಯಸನ:

ಆರ್ಥಿಕ ಸಮೀಕ್ಷೆ 2025-26 ಡಿಜಿಟಲ್ ವ್ಯಸನವು ಭಾರತದ ಮಕ್ಕಳು ಮತ್ತು ಯುವಕರ ಮೇಲೆ, ವಿಶೇಷವಾಗಿ ಸಾರ್ವತ್ರಿಕ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಲಭ್ಯತೆಯನ್ನು ಆನಂದಿಸುವ 15-29 ವರ್ಷ ವಯಸ್ಸಿನವರ ಮೇಲೆ ಪರಿಣಾಮ ಬೀರುವ ಗಂಭೀರ ಸಾರ್ವಜನಿಕ ಆರೋಗ್ಯ ಸವಾಲಾಗಿದೆ ಎಂದು ಉಲ್ಲೇಖಿಸಿದೆ.

ಅರಿವಿನ ಬೆಳವಣಿಗೆ, ಶೈಕ್ಷಣಿಕ ಕಾರ್ಯಕ್ಷಮತೆ, ದುಡಿಯುವ ಸ್ಥಳದ ಉತ್ಪಾದಕತೆ, ಸಾಮಾಜಿಕ ಸಂಪರ್ಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅದರ ಆಳವಾದ ಪರಿಣಾಮಗಳನ್ನು ಸಮೀಕ್ಷೆಯು ಪ್ರಮುಖವಾಗಿ ಎತ್ತಿ ತೋರಿಸಿದೆ, ಇದು ಆತಂಕ, ಖಿನ್ನತೆ, ನಿದ್ರಾಹೀನತೆ, ಸೈಬರ್ ಅಪಾಯ ಮತ್ತು ಕಂಪಲ್ಸಿವ್ ಗೇಮಿಂಗ್, ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಜೂಜಾಟದಿಂದ ಆರ್ಥಿಕ ನಷ್ಟಗಳಾಗಿ ವ್ಯಕ್ತವಾಗುತ್ತದೆ.

ಜಾಗೃತಿ ಅಭಿಯಾನಗಳು

ಮಾಹಿತಿ ಭದ್ರತೆಯಲ್ಲಿ ಮಾನವ ಸಂಪನ್ಮೂಲಗಳನ್ನು ಉತ್ಪಾದಿಸಲು ಮತ್ತು ಜನಸಾಮಾನ್ಯರಲ್ಲಿ ಸೈಬರ್ ನೈರ್ಮಲ್ಯ ಮತ್ತು ಸೈಬರ್ ಭದ್ರತೆಯ ವಿವಿಧ ಅಂಶಗಳ ಕುರಿತು ಸಾಮಾನ್ಯ ಜಾಗೃತಿ ಮೂಡಿಸಲು ಸರ್ಕಾರವು 'ಮಾಹಿತಿ ಭದ್ರತಾ ಶಿಕ್ಷಣ ಮತ್ತು ಜಾಗೃತಿ (ಐಎಸ್ ಇಎ)' ಎಂಬ ಯೋಜನೆಯನ್ನು ಜಾರಿಗೆ ತರುತ್ತಿದೆ.

ಈವರೆಗೆ, ದೇಶಾದ್ಯಂತ 6,650 ಜಾಗೃತಿ ಕಾರ್ಯಾಗಾರಗಳನ್ನು ನಡೆಸಲಾಗಿದ್ದು, ಅದರಲ್ಲಿ ಶಾಲಾ/ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಕಾನೂನು ಜಾರಿ ಸಂಸ್ಥೆಗಳು, ಸರ್ಕಾರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಸೇರಿದಂತೆ 11.37 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ.

ಅಲ್ಲದೆ, ಕೈಪಿಡಿಗಳು, ಕಿರು ವೀಡಿಯೊಗಳು, ಪೋಸ್ಟರ್‌ಗಳು, ಕರಪತ್ರಗಳು, ಮಕ್ಕಳಿಗಾಗಿ ಕಾರ್ಟೂನ್ ಕಥೆಗಳು ಇತ್ಯಾದಿಗಳ ರೂಪದಲ್ಲಿ ಬಹುಭಾಷಾ ಜಾಗೃತಿ ಸಾಮಗ್ರಿಗಳನ್ನು ಮುದ್ರಣ, ಎಲೆಕ್ಟ್ರಾನಿಕ್, ಸಾಮಾಜಿಕ ಮಾಧ್ಯಮ ಮತ್ತು www.isea.gov.in & https://staysafeonline.in/ ಮೂಲಕ ಪ್ರಕಟಿಸಲಾಗಿದೆ ಮತ್ತು ಪ್ರಸಾರ ಮಾಡಲಾಗಿದೆ.

CERT-In ತನ್ನ ಅಧಿಕೃತ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಸುರಕ್ಷತೆ ಮತ್ತು ಸುರಕ್ಷತಾ ಸಲಹೆಗಳು ಮತ್ತು ಜಾಗೃತಿ ಪೋಸ್ಟರ್‌ಗಳು, ಮಾಹಿತಿ-ಗ್ರಾಫಿಕ್ಸ್ ಮತ್ತು ವೀಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತದೆ ಮತ್ತು ಮಕ್ಕಳಿಗಾಗಿ ಆನ್‌ಲೈನ್ ಸುರಕ್ಷತಾ ಕ್ರಮಗಳು ಸೇರಿದಂತೆ ಸೈಬರ್ ಭದ್ರತಾ ದಾಳಿಗಳು ಮತ್ತು ವಂಚನೆಗಳ ಬಗ್ಗೆ ಅಂತರ್ಜಾಲ ಬಳಕೆದಾರರನ್ನು ಜಾಗೃತಗೊಳಿಸುವ ಗುರಿಯನ್ನು ಹೊಂದಿದೆ.

ಶಿಕ್ಷಣ ಸಚಿವಾಲಯವು 2020ರ ಜುಲೈ ನಲ್ಲಿ ಡಿಜಿಟಲ್ ಶಿಕ್ಷಣದ ಕುರಿತು ಪ್ರಜ್ಞಾತಾ (PRAGYATA  ) ಮಾರ್ಗಸೂಚಿಗಳನ್ನು ಹೊರಡಿಸಿತು, ಇದು ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಸಾಮಾಜಿಕ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಜವಾಬ್ದಾರಿಯುತ ಬಳಕೆಯನ್ನು ಉತ್ತೇಜಿಸುವುದು ಸೇರಿದಂತೆ ಸುರಕ್ಷಿತ ಮತ್ತು ಪರಿಣಾಮಕಾರಿ ಆನ್‌ಲೈನ್ ಕಲಿಕೆಗೆ ಚೌಕಟ್ಟನ್ನು ಒದಗಿಸುತ್ತದೆ.

ಈ ಪ್ರಯತ್ನಗಳಿಗೆ ಪೂರಕವಾಗಿ ಸಿಬಿಎಸ್ ಇ,  ಡಿಜಿಟಲ್ ಶಿಷ್ಟಾಚಾರದ ಮಾರ್ಗಸೂಚಿಗಳು, ಶಿಕ್ಷಕರಿಗೆ ಸೈಬರ್-ಭದ್ರತಾ ತರಬೇತಿ, 'ಸೈಬರ್ ಭದ್ರತಾ ಕೈಪಿಡಿ' ಪ್ರಕಟಣೆ ಮತ್ತು ಸೈಬರ್ ಸುರಕ್ಷತೆಯ ಜಾಗೃತಿಯನ್ನು ಉತ್ತೇಜಿಸಲು ಸೈಬರ್ ಕ್ಲಬ್‌ಗಳನ್ನು ಸ್ಥಾಪಿಸಲು ಶಾಲೆಗಳಿಗೆ ಸಲಹೆಗಳ ಮೂಲಕ ಕ್ರಮ ಕೈಗೊಳ್ಳುತ್ತಿದೆ.  

ಎನ್ ಸಿಇಆರ್ ಟಿ ತನ್ನ ಪಠ್ಯಕ್ರಮದಲ್ಲಿ ಸೈಬರ್ ಸುರಕ್ಷತೆಯನ್ನು ಸಹ ಸೇರಿಸಿದೆ, ಇದರಲ್ಲಿ XI ಮತ್ತು XII ತರಗತಿಗಳಲ್ಲಿ "ಸಾಮಾಜಿಕ ಪರಿಣಾಮಗಳು" ಎಂಬ ಅಧ್ಯಾಯವೂ ಸೇರಿದೆ ಮತ್ತು CIET-NCERT ಸೈಬರ್ ಸುರಕ್ಷತೆಯ ಕುರಿತು ಸಂಪನ್ಮೂಲ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಪ್ರಸಾರ ಮಾಡಿದೆ.

ಈ ಮಾಹಿತಿಯನ್ನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು 2026ರ ಜು.22ರಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.

 

*****


(रिलीज़ आईडी: 2287693) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Gujarati , Malayalam