ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಪೋಶ್ ಕಾಯ್ದೆಯ ಕುರಿತು ಎರಡು ದಿನಗಳ ರಾಷ್ಟ್ರೀಯ ಜಾಗೃತಿ ಕಾರ್ಯಕ್ರಮ ವಿಜ್ಞಾನ ಭವನದಲ್ಲಿ ಆರಂಭ
ದುಡಿಯುವ ಸ್ಥಳದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಮತ್ತು ಸಮಗ್ರ ರಾಷ್ಟ್ರೀಯ ಅಭಿವೃದ್ಧಿ ಸಾಧಿಸಲು ದುಡಿಯುವ ಸ್ಥಳಗಳಲ್ಲಿ ಸುರಕ್ಷತೆ ಬಲಪಡಿಸುವುದು ಮೂಲಭೂತ ಕರ್ತವ್ಯ: ಶ್ರೀಮತಿ ಅನ್ನಪೂರ್ಣ ದೇವಿ
ಆಂತರಿಕ ಮತ್ತು ಸ್ಥಳೀಯ ಸಮಿತಿಗಳಿಗೆ ವಿಚಾರಣಾ ಕಾರ್ಯವಿಧಾನಗಳ ಕುರಿತು ಕಿರುಪುಸ್ತಕ ಬಿಡುಗಡೆ
प्रविष्टि तिथि:
17 JUL 2026 1:32PM by PIB Bengaluru
ದುಡಿಯುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವುದು, ನಿಷೇಧ ಮತ್ತು ಪರಿಹಾರ) ಪೋಶ್ ಕಾಯ್ದೆ 2013ರ ಕುರಿತು ಎರಡು ದಿನಗಳ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ರಾಷ್ಟ್ರೀಯ ಜಾಗೃತಿ ಕಾರ್ಯಕ್ರಮವು ನವದೆಹಲಿಯ ವಿಜ್ಞಾನ ಭವನದಲ್ಲಿಂದು ಆರಂಭವಾಯಿತು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಮಹಿಳಾ ಆಯೋಗವು ಆಯೋಜಿಸಿದ್ದ ಈ ಕಾರ್ಯಕ್ರಮವು ಪೋಶ್ (ಪಿಒಎಸ್ಎಚ್) ಕಾಯಿದೆಯ ಅರಿವು ಮತ್ತು ಜಾರಿಯನ್ನು ಬಲಪಡಿಸಲು ಹಿರಿಯ ಸರ್ಕಾರಿ ಅಧಿಕಾರಿಗಳು, ಕಾನೂನು ತಜ್ಞರು, ಆಂತರಿಕ ಮತ್ತು ಸ್ಥಳೀಯ ಸಮಿತಿಗಳ ಪ್ರತಿನಿಧಿಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಇತರ ಪಾಲುದಾರರನ್ನು ಒಗ್ಗೂಡಿಸಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಮತಿ ಅನ್ನಪೂರ್ಣ ದೇವಿ, ಮಹಿಳಾ ನೇತೃತ್ವದ ಅಭಿವೃದ್ಧಿಯ ದೂರದೃಷ್ಟಿಯನ್ನು ಸಾಕಾರಗೊಳಿಸಲು ಸುರಕ್ಷಿತ, ಘನತೆ ಮತ್ತು ಎಲ್ಲರನ್ನೂ ಒಳಗೊಂಡ ದುಡಿಯುವ ಸ್ಥಳಗಳನ್ನು ಖಾತ್ರಿಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು. ಪ್ರತಿಯೊಬ್ಬ ಮಹಿಳೆಗೂ ಘನತೆಯಿಂದ ಮತ್ತು ಭಯವಿಲ್ಲದೆ ಕೆಲಸ ಮಾಡುವ ಹಕ್ಕಿದೆ ಮತ್ತು ಸುರಕ್ಷಿತ ಕೆಲಸದ ವಾತಾವರಣವನ್ನು ಸೃಷ್ಟಿಸುವುದು ಸರ್ಕಾರಗಳು, ಉದ್ಯೋಗದಾತರು ಮತ್ತು ಸಂಸ್ಥೆಗಳ ಸಮಾನ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿ ಹೇಳಿದರು. ದುಡಿಯುವ ಸ್ಥಳದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಎಲ್ಲರನ್ನೂ ಒಳಗೊಂಡ ರಾಷ್ಟ್ರೀಯ ಅಭಿವೃದ್ಧಿ ಸಾಧಿಸಲು ದುಡಿಯುವ ಸ್ಥಳದ ಸುರಕ್ಷತೆಯನ್ನು ಬಲಪಡಿಸುವುದು ಅತ್ಯಂತ ಮೂಲಭೂತ ಕರ್ತವ್ಯವಾಗಿದೆ ಎಂದು ಉಲ್ಲೇಖಿಸಿದರು.
POSH ಕಾಯ್ದೆಯ ಅನುಷ್ಠಾನವನ್ನು ಬಲಪಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕೈಗೊಂಡ ಹಲವು ಉಪಕ್ರಮಗಳನ್ನು ಸಚಿವರು ಪ್ರಸ್ತಾಪಿಸಿದರು. ಈ ಉಪಕ್ರಮಗಳು ಸಂಸ್ಥೆಗಳು ತಮ್ಮ ಕಾನೂನು ಜವಾಬ್ದಾರಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ದುಡಿಯುವ ಸ್ಥಳದ ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ಮತ್ತು ಪರಿಹರಿಸಲು ಪರಿಣಾಮಕಾರಿ ಸಾಂಸ್ಥಿಕ ಕಾರ್ಯವಿಧಾನಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತವೆ ಎಂದರು.


ದುಡಿಯುವ ಸ್ಥಳಗಳ ವಿಕಸನಗೊಳ್ಳುತ್ತಿರುವ ಸ್ವರೂಪವು ಸಾಂಸ್ಥಿಕ ಪ್ರತಿಕ್ರಿಯೆಗಳನ್ನು ನಿರಂತರವಾಗಿ ಬಲಪಡಿಸುವ ಅಗತ್ಯವಿರುವ ಹೊಸ ಸವಾಲುಗಳನ್ನು ಪರಿಚಯಿಸಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ನ್ಯಾಯಯುತ ವಿಚಾರಣಾ ಕಾರ್ಯವಿಧಾನಗಳು, ಗೌಪ್ಯತೆಯ ರಕ್ಷಣೆ ಮತ್ತು ದೂರುಗಳ ಸಕಾಲಿಕ ವಿಲೇವಾರಿ ಖಾತ್ರಿಪಡಿಸಿಕೊಳ್ಳುವಾಗ ಸಹಜ ನ್ಯಾಯದ ತತ್ವಗಳ ಅನುಸರಣೆಯ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.
ಪಾರದರ್ಶಕತೆ ಮತ್ತು ಸಕಾಲಿಕ ಕುಂದುಕೊರತೆ ಪರಿಹಾರ ಉತ್ತೇಜಿಸುವಲ್ಲಿ ಶೀ-ಬಾಕ್ಸ್ ಪೋರ್ಟಲ್ (SHe-Box portal) ನ ಹೆಚ್ಚುತ್ತಿರುವ ಪಾತ್ರವನ್ನು ಸಚಿವರು ಒತ್ತಿ ಹೇಳಿದರು. ಕಾಲಮಿತಿಯಲ್ಲಿ ದೂರುಗಳ ಪರಿಹಾರವನ್ನು ಸುಗಮಗೊಳಿಸಲು ಪೋರ್ಟಲ್ ಪ್ರಮುಖ ಡಿಜಿಟಲ್ ವೇದಿಕೆಯಾಗಿ ಹೊರಹೊಮ್ಮಿದೆ ಎಂದು ಅವರು ಉಲ್ಲೇಖಿಸಿದರು, ಇದು ಮಹಿಳೆಯರ ಸುರಕ್ಷತೆಗಾಗಿ ಬಲವಾದ ಸಾಂಸ್ಥಿಕ ಪೂರಕ ವ್ಯವಸ್ಥೆಯನ್ನು ರಚಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಪ್ರತಿಯೊಂದು ಸಂಸ್ಥೆಯು ಘನತೆ, ಸೂಕ್ಷ್ಮತೆ ಮತ್ತು ಲೈಂಗಿಕ ಕಿರುಕುಳದ ಬಗ್ಗೆ ಶೂನ್ಯ ಸಹಿಷ್ಣುತೆಯ ಆಧಾರದ ಮೇಲೆ ಕೆಲಸದ ಸಂಸ್ಕೃತಿಯನ್ನು ಬೆಳೆಸಬೇಕು ಎಂದ ಸಚಿವರು, ಉದ್ಯೋಗದಾತರು ಮತ್ತು ಸಾಂಸ್ಥಿಕ ನಾಯಕತ್ವವು ಹೆಚ್ಚಿನ ಹೊಣೆಗಾರಿಕೆ ಪ್ರದರ್ಶಿಸುವಂತೆ ಕರೆ ನೀಡಿದರು. ಆಂತರಿಕ ಮತ್ತು ಸ್ಥಳೀಯ ಸಮಿತಿಗಳ ಸದಸ್ಯರು ಕಾಯಿದೆಯಡಿಯಲ್ಲಿ ನಿಗದಿಪಡಿಸಲಾದ ಶಾಸನಬದ್ಧ ಕಾಲಮಿತಿಗಳನ್ನು ಪಾಲಿಸುವಾಗ ನ್ಯಾಯತತ್ಪರತೆ, ಗೌಪ್ಯತೆ ಮತ್ತು ಸಹಾನುಭೂತಿಯೊಂದಿಗೆ ವಿಚಾರಣೆಗಳನ್ನು ನಡೆಸಬೇಕೆಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ, ಕೇಂದ್ರ ಸಚಿವರು ರಾಷ್ಟ್ರೀಯ ಮಹಿಳಾ ಆಯೋಗವು ಸಿದ್ಧಪಡಿಸಿದ POSH ಕಾಯ್ದೆಯಡಿಯಲ್ಲಿ ಆಂತರಿಕ ಸಮಿತಿಗಳು (ICs) ಮತ್ತು ಸ್ಥಳೀಯ ಸಮಿತಿಗಳಿಗೆ (LCs) ವಿಚಾರಣಾ ಕಾರ್ಯವಿಧಾನಗಳ ಕುರಿತಾದ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು. POSH ಕಾಯ್ದೆಯಡಿಯಲ್ಲಿ ನ್ಯಾಯಯುತ, ಪಾರದರ್ಶಕ ಮತ್ತು ಕಾಲಮಿತಿಯಲ್ಲಿ ವಿಚಾರಣೆಗಳನ್ನು ನಡೆಸಲು ಪ್ರಾಯೋಗಿಕ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಈ ಕಿರುಪುಸ್ತಕ ಹೊಂದಿದೆ. ಕಾಯ್ದೆಯ ಅನುಷ್ಠಾನಕ್ಕಾಗಿ ಸಾಂಸ್ಥಿಕ ಕಾರ್ಯವಿಧಾನಗಳನ್ನು ಬಲಪಡಿಸುವಲ್ಲಿ ಮತ್ತು ಪಾಲುದಾರರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಪ್ರಯತ್ನಗಳನ್ನು ಸಚಿವರು ಶ್ಲಾಘಿಸಿದರು.
ಇದಕ್ಕೂ ಮುನ್ನ ಎನ್ ಸಿ ಡಬ್ಲೂ ಸದಸ್ಯ ಕಾರ್ಯದರ್ಶಿ ಶ್ರೀ ಸುದೀಪ್ ಜೈನ್ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು, ನಂತರ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ವಿಜಯಾ ರಹತ್ಕರ್ ಅವರ ಉದ್ಘಾಟನಾ ಭಾಷಣ ಮಾಡಿದರು. ದೂರುದಾರರು ಮತ್ತು ಪ್ರತಿವಾದಿಗಳ ಹಕ್ಕುಗಳು ಹಾಗೂ ಆಂತರಿಕ ಮತ್ತು ಸ್ಥಳೀಯ ಸಮಿತಿಗಳಿಗೆ ದೂರುಗಳು ಮತ್ತು ವಿಚಾರಣಾ ಕಾರ್ಯವಿಧಾನಗಳನ್ನು ನಿರ್ವಹಿಸುವುದು ಸೇರಿದಂತೆ ಪೋಶ್ ಕಾಯ್ದೆಯ ಪ್ರಮುಖ ನಿಬಂಧನೆಗಳನ್ನು ಒಳಗೊಂಡ ತಾಂತ್ರಿಕ ಗೋಷ್ಠಿಗಳನ್ನು ಈ ಕಾರ್ಯಕ್ರಮವು ಒಳಗೊಂಡಿತ್ತು.
*****
(रिलीज़ आईडी: 2285697)
आगंतुक पटल : 4