ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಭಾರತದ ಅತಿದೊಡ್ಡ ಜಾಗತಿಕ ಜವಳಿ ಕಾರ್ಯಕ್ರಮವಾದ “ಭಾರತ್ ಟೆಕ್ಸ್ 2026”ರಲ್ಲಿ 'ಖಾದಿ ಇಂಡಿಯಾ ಪೆವಿಲಿಯನ್' ಉದ್ಘಾಟಿಸಿದ ಕೆವಿಐಸಿ ಅಧ್ಯಕ್ಷರಾದ ಶ್ರೀ ಮನೋಜ್ ಗೋಯೆಲ್
'ನಯೇ ಭಾರತ್ ಕಿ ನಯೀ ಖಾದಿ'ಯ ಆಧುನಿಕ ವ್ಯಾಖ್ಯಾನಕ್ಕೆ ಶ್ಲಾಘನೆ; ನಾವೀನ್ಯತೆ ಮತ್ತು ಸಮಕಾಲೀನ ವಿನ್ಯಾಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೆವಿಐಸಿ ಅಧ್ಯಕ್ಷರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಖಾದಿ ಭಾರತದ ಶ್ರೀಮಂತ ಪರಂಪರೆ, ಸ್ವಾವಲಂಬನೆ, ಸುಸ್ಥಿರ ಅಭಿವೃದ್ಧಿ ಮತ್ತು ಗ್ರಾಮೀಣ ಜೀವನೋಪಾಯಗಳ ಸಬಲೀಕರಣದ ಬಲಿಷ್ಠ ಸಂಕೇತವಾಗಿ ಹೊರಹೊಮ್ಮಿದೆ: ಕೆವಿಐಸಿ ಅಧ್ಯಕ್ಷರ ಹೇಳಿಕೆ
प्रविष्टि तिथि:
15 JUL 2026 12:56PM by PIB Bengaluru
ಭಾರತ ಸರ್ಕಾರದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ(ಎಂಎಸ್ಎಂಇ) ಸಚಿವಾಲಯದ ಅಧೀನದಲ್ಲಿ ಬರುವ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ(ಕೆವಿಐಸಿ)ದ ಅಧ್ಯಕ್ಷ ಶ್ರೀ ಮನೋಜ್ ಗೋಯೆಲ್ ಅವರು ಮಂಗಳವಾರ ಭಾರತ್ ಟೆಕ್ಸ್-2026ರ ಹಾಲ್ ಸಂಖ್ಯೆ 10ರಲ್ಲಿ ತೆರೆದಿರುವ 'ಖಾದಿ ಇಂಡಿಯಾ ಪೆವಿಲಿಯನ್' ಉದ್ಘಾಟಿಸಿ, ಮಂಟಪವನ್ನು ಪರಿಶೀಲಿಸಿದರು, ನಂತರ ಅವರು ಪ್ರದರ್ಶಕರು, ಕುಶಲಕರ್ಮಿಗಳು ಮತ್ತು ಖಾದಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಭಾರತದ ಅತಿದೊಡ್ಡ ಜಾಗತಿಕ ಜವಳಿ ಕಾರ್ಯಕ್ರಮವಾದ “ಭಾರತ್ ಟೆಕ್ಸ್ 2026” ಅನ್ನು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದೆ. ಕೆವಿಐಸಿ ಸ್ಥಾಪಿಸಿದ ಈ ಮಂಟಪವು ವ್ಯಾಪಕ ಶ್ರೇಣಿಯ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳು, ವಿನ್ಯಾಸಗಳಿಂದ ಕೂಡಿದ ನಾವೀನ್ಯತೆಗಳು ಮತ್ತು ದೇಶಾದ್ಯಂತದ ಖಾದಿ ಸಂಸ್ಥೆಗಳು ಪ್ರಸ್ತುತಪಡಿಸಿರುವ ವಿಶೇಷ ಖಾದಿ ಉತ್ಪನ್ನಗಳ ಸಂಗ್ರಹಗಳನ್ನು ಪ್ರದರ್ಶಿಸುತ್ತಿದೆ. ತಮ್ಮ ಭೇಟಿಯ ಸಮಯದಲ್ಲಿ ಶ್ರೀ ಗೋಯೆಲ್ ಅವರು, ವಿವಿಧ ರಾಜ್ಯಗಳ ಖಾದಿ ಸಂಸ್ಥೆಗಳು ಮತ್ತು ಕುಶಲಕರ್ಮಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ, ಅವರ ಅನುಭವಗಳು ಮತ್ತು ನಾವೀನ್ಯತೆಗಳ ಬಗ್ಗೆ ಒಳನೋಟಗಳನ್ನು ಪಡೆದರು. ಕೆವಿಐಸಿ ಮತ್ತು ಖಾದಿ ಶ್ರೇಷ್ಠತಾ ಕೇಂದ್ರದ(ಸಿಒಇಕೆ) ಹಿರಿಯ ಅಧಿಕಾರಿಗಳು ಮತ್ತು ಉದ್ಯೋಗಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಶ್ರೀ ಮನೋಜ್ ಗೋಯೆಲ್ ಅವರು ಖಾದಿ ಮನೆಯ ಲಿನೆನ್ ಮತ್ತು ಗೃಹಾಲಂಕಾರ ಉತ್ಪನ್ನಗಳು, ಸಮಕಾಲೀನ ಉಡುಪುಗಳು, ನಾವೀನ್ಯತೆಯುಳ್ಳ ಖಾದಿ ಉತ್ಪನ್ನಗಳು ಮತ್ತು ಖಾದಿ ಉತ್ಪಾದನೆಯಲ್ಲಿ ಬಳಸುವ ಸಾಂಪ್ರದಾಯಿಕ ಪರಿಕರಗಳ ವ್ಯಾಪಕ ಶ್ರೇಣಿಯನ್ನು ಅನ್ವೇಷಿಸಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಮಹಾತ್ಮ ಗಾಂಧಿ ಅವರ ಪರಂಪರೆ(ಬಳುವಳಿ)ಯಾದ ಖಾದಿಯು ಭಾರತದ ಶ್ರೀಮಂತ ಪರಂಪರೆ, ಸ್ವಾವಲಂಬನೆ, ಸುಸ್ಥಿರತೆ ಮತ್ತು ಲಕ್ಷಾಂತರ ಗ್ರಾಮೀಣ ಕುಶಲಕರ್ಮಿಗಳ ಸಬಲೀಕರಣದ ಪ್ರಬಲ ಸಂಕೇತವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.


ಪಶ್ಚಿಮ ಬಂಗಾಳದ ಘೋರನಾಶ್ ರೇಷ್ಮೆ ಖಾದಿ ಗ್ರಾಮೋದ್ಯೋಗ ಸಮಿತಿಯು ಪ್ರದರ್ಶಿಸಿದ 'ಮುಲ' ಜಮ್ದಾನಿ ಸೀರೆ ಮತ್ತು ಉಡುಪುಗಳ ಸಂಗ್ರಹವನ್ನು ಅಧ್ಯಕ್ಷರು ವೀಕ್ಷಿಸಿದರು. ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಿದ ಅವರು, ಸಾಂಪ್ರದಾಯಿಕ ಜಮ್ದಾನಿ ನೇಯ್ಗೆ ತಂತ್ರವನ್ನು ಸಮಕಾಲೀನ ವಿನ್ಯಾಸದೊಂದಿಗೆ ಸಂಯೋಜಿಸಿರುವ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು. ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಖಾದಿ ಮತ್ತು ಕರಕುಶಲ ವಸ್ತುಗಳಿಗೆ ಹೊಸ ಗುರುತು ಸ್ಥಾಪಿಸುವಲ್ಲಿ ಅಂತಹ ನಾವೀನ್ಯತೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು. ಇಂದು ಆತ್ಮನಿರ್ಭರ ಭಾರತ, ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ, ಸ್ಥಳೀಯದಿಂದ ಜಾಗತಿಕ ಮತ್ತು ವಿಕಸಿತ ಭಾರತ 2047ರ ದೃಷ್ಟಿಕೋನವನ್ನು ಸಾಕಾರಗೊಳಿಸುವ ಪ್ರಬಲ ಮಾಧ್ಯಮವಾಗಿವೆ. ಖಾದಿ ಕೇವಲ ಬಟ್ಟೆಯಲ್ಲ, ಅದು ಲಕ್ಷಾಂತರ ಕುಶಲಕರ್ಮಿಗಳು ಮತ್ತು ನೇಕಾರರ ಜೀವನೋಪಾಯವಾಗಿದೆ. ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಅದರ ಬದ್ಧತೆಯನ್ನು ಪ್ರತಿನಿಧಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಸಂಶೋಧನೆ, ವಿನ್ಯಾಸ ಮತ್ತು ನಾವೀನ್ಯತೆಗಳ ಮೂಲಕ 'ನವ ಭಾರತದ ಹೊಸ ಖಾದಿ'ಯನ್ನು ಹೊಸ ಪೀಳಿಗೆಯ ಆದ್ಯತೆಗಳು ಮತ್ತು ಜಾಗತಿಕ ಮಾರುಕಟ್ಟೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೇಗೆ ತಯಾರಿಸಲಾಗುತ್ತಿದೆ ಎಂಬುದನ್ನು ಖಾದಿ ಇಂಡಿಯಾ ಪೆವಿಲಿಯನ್ ಪ್ರದರ್ಶಿಸುತ್ತಿದೆ ಎಂದು ಕೆವಿಐಸಿ ಅಧ್ಯಕ್ಷರು ಹೇಳಿದರು. ಇಂದು ಖಾದಿಯು ಉಡುಪುಗಳನ್ನು ಮೀರಿ ವಿಸ್ತರಿಸಿದ್ದು, ಸಮಕಾಲೀನ ಜೀವನಶೈಲಿ ಉತ್ಪನ್ನಗಳು ಮತ್ತು ಜಾಗತಿಕ ಫ್ಯಾಷನ್ ಉದ್ಯಮದಲ್ಲಿ ವಿಶಿಷ್ಟವಾದ ಅಸ್ತಿತ್ವವನ್ನು ಸ್ಥಾಪಿಸಿದೆ ಎಂದರು.

"ಖಾದಿ ಪುನರ್ ಕಲ್ಪನೆ: ಸಮಕಾಲೀನ ಜೀವನದ ಸಂಪ್ರದಾಯ" ಎಂಬ ವಸ್ತು ವಿಷಯದ ಅಡಿ ಖಾದಿಯ ವೈವಿಧ್ಯಮಯ ಆಯಾಮಗಳನ್ನು ಖಾದಿಯ ಇಂಡಿಯಾ ಪೆವಿಲಿಯನ್ ಪ್ರದರ್ಶಿಸುತ್ತಿದೆ. ಮಂಟಪದ ಪ್ರಮುಖ ಮುಖ್ಯಾಂಶಗಳಲ್ಲಿ ಸಮಕಾಲೀನ ಮನೆ ಅಲಂಕಾರಿಕ ಉತ್ಪನ್ನಗಳು, ಸ್ಥಳೀಯ ನಾರುಗಳಿಂದ ತಯಾರಿಸಿದ ನಾವೀನ್ಯತೆಗಳು, ಸಾಂಪ್ರದಾಯಿಕ ಖಾದಿ ಪರಿಕರಗಳ ಪ್ರದರ್ಶನಗಳು ಮತ್ತು "ನಯೇ ಭಾರತ್ ಕಿ ನಯೀ ಖಾದಿ - ರಾಷ್ಟ್ರಕ್ಕಾಗಿ ಖಾದಿ, ಫ್ಯಾಷನ್‌ಗಾಗಿ ಖಾದಿ, ಪರಿವರ್ತನೆಗಾಗಿ ಖಾದಿ" ಎಂಬ ವಸ್ತು ವಿಷಯದ ಅಡಿ ಯುವ ಪೀಳಿಗೆಗಾಗಿ ಅಭಿವೃದ್ಧಿಪಡಿಸಲಾದ ಹೊಸ ಖಾದಿ ಉತ್ಪನ್ನಗಳ ವಿಶೇಷ ಶ್ರೇಣಿಗಳು ಇಲ್ಲಿ ಸೇರಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಚಿಂತನೆ ಮತ್ತು ನೀತಿಗಳ ಪರಿಣಾಮವಾಗಿ ಖಾದಿ ಮತ್ತು ಗ್ರಾಮೋದ್ಯೋಗ ವಲಯವು ಹಿಂದೆಂದೂ ಕಾಣದ ಪ್ರಗತಿ ಸಾಧಿಸಿದೆ ಎಂದು ಶ್ರೀ ಗೋಯಲ್ ತಿಳಿಸಿದರು. 2025–26ರ ಆರ್ಥಿಕ ವರ್ಷದಲ್ಲಿ ಈ ವಲಯವು 1.87 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ದಾಖಲಿಸಿದ್ದು, ದೇಶಾದ್ಯಂತ 2.04 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸುತ್ತಿದೆ. ಖಾದಿ ಮತ್ತು ಗ್ರಾಮೋದ್ಯೋಗ ವಲಯದ ನಿರಂತರ ಬೆಳವಣಿಗೆಯಿಂದ ಮುಂಬರುವ ವರ್ಷಗಳಲ್ಲಿ 2.51 ಲಕ್ಷ ಕೋಟಿ ರೂ. ವಹಿವಾಟು ಸಾಧಿಸಲು ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


ಭಾರತ್ ಟೆಕ್ಸ್-2026 ಜುಲೈ 14ರಂದು ಆರಂಭವಾಗಗಿದ್ದು, ಜುಲೈ 17ರ ವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿದೆ. ಈ ಜಾಗತಿಕ ಕಾರ್ಯಕ್ರಮವು ಭಾರತ ಮತ್ತು ವಿದೇಶಗಳಿಂದ ಸಾವಿರಾರು ಖರೀದಿದಾರರು, ಉದ್ಯಮ ಮುಖಂಡರು, ವಿನ್ಯಾಸಕರು, ಉದ್ಯಮಿಗಳು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸಿದೆ. ಖಾದಿ ಇಂಡಿಯಾ ಪೆವಿಲಿಯನ್ ಮೂಲಕ ಕೆವಿಐಸಿ, ಭಾರತದ ಶ್ರೀಮಂತ ಖಾದಿ ಪರಂಪರೆ, ನಾವೀನ್ಯತೆ, ವಿನ್ಯಾಸ ಶ್ರೇಷ್ಠತೆ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಯನ್ನು ಜಾಗತಿಕ ಪ್ರೇಕ್ಷಕರ ಮುಂದೆ ಪರಿಣಾಮಕಾರಿಯಾಗಿ ಪ್ರದರ್ಶಿಸುತ್ತಿದೆ.
*****
(रिलीज़ आईडी: 2284804)
आगंतुक पटल : 4