ಜಲ ಶಕ್ತಿ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿ "ಅಖಿಲ ಭಾರತ ಜಲ ಕಾರ್ಯದರ್ಶಿಗಳ ಸಮ್ಮೇಳನ" ಆಯೋಜಿಸಿದ ಜಲ ಶಕ್ತಿ ಸಚಿವಾಲಯ

प्रविष्टि तिथि: 13 JUL 2026 8:55PM by PIB Bengaluru

ಜಲ ಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯು ಇಂದು ನವದೆಹಲಿಯಲ್ಲಿ "ಅಖಿಲ ಭಾರತ ಜಲ ಕಾರ್ಯದರ್ಶಿಗಳ ಸಮ್ಮೇಳನ"ವನ್ನು ಆಯೋಜಿಸಿತ್ತು. ಕೇಂದ್ರ ಜಲ ಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನದಲ್ಲಿ ಜಲ ಶಕ್ತಿ ರಾಜ್ಯ ಸಚಿವರಾದ ಶ್ರೀ ರಾಜ್ ಭೂಷಣ್ ಚೌಧರಿ ಅವರು ಉಪಸ್ಥಿತರಿದ್ದರು. ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ  (ಡಿಒಡಬ್ಲ್ಯೂ ಆರ್, ಆರ್ ಡಿ & ಜಿ ಆರ್) ಕಾರ್ಯದರ್ಶಿ ಶ್ರೀ ವಿ. ಎಲ್. ಕಾಂತ ರಾವ್ ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಕಾರ್ಯದರ್ಶಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಹಾಗೂ ಜಲ ಶಕ್ತಿ ಸಚಿವಾಲಯದಿಂದ ಸುಮಾರು 200 ರಾಜ್ಯ ಕಾರ್ಯದರ್ಶಿಗಳು ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಈ ಕೆಳಗಿನ ಎಂಟು ಆದ್ಯತೆಯ ಕಾರ್ಯಸೂಚಿಗಳ ಕುರಿತು ಚರ್ಚೆಗಳನ್ನು ನಡೆಸಲಾಯಿತು:

  • ಕಮಾಂಡ್ ಏರಿಯಾ ಅಭಿವೃದ್ಧಿ ಮತ್ತು ನೀರು ನಿರ್ವಹಣೆ (ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮತ್ತು ನೀರು ನಿರ್ವಹಣೆ -ಎಂ-ಸಿಅಡಿಡಬ್ಲ್ಯೂ ಎಂ)  ಯೋಜನೆಯ ಆಧುನೀಕರಣದ ಸ್ಥಿತಿಗತಿ;
  • ಜಲ ಸಂರಕ್ಷಣೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಬಲಪಡಿಸಲು ಒಂದು ತಿಂಗಳ ವಿಶೇಷ ದೇಶವ್ಯಾಪಿ #CatchTheRain (#ಮಳೆ ನೀರು ಹಿಡಿದು ಇಡಿ) ಅಭಿಯಾನ;
  • ನೀರಾವರಿ, ಬಹುಪಯೋಗಿ ಮತ್ತು ಪ್ರವಾಹ ನಿರ್ವಹಣೆ ಯೋಜನೆಗಳಿಗಾಗಿ ಪರಿಷ್ಕೃತ ಕರಡು ಯೋಜನಾ ಮೌಲ್ಯಮಾಪನ ಮಾರ್ಗಸೂಚಿಗಳು;
  • ಜಲಾಶಯಗಳ ಸುಧಾರಿತ ಕಾರ್ಯಾಚರಣೆ ಮತ್ತು ಅಣೆಕಟ್ಟು ಸುರಕ್ಷತೆಗಾಗಿ ಅಣೆಕಟ್ಟು ಜಲಾಶಯಗಳ ರೂಲ್ ಕರ್ವ್ಸ್   ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನ;
  • ರಾಜ್ಯ ಜಲ ಸುಧಾರಣೆಗಳ ಚೌಕಟ್ಟಿನ (ಎಸ್ ಡಬ್ಲ್ಯೂ ಆರ್ ಎಫ್) ಸ್ಥಿತಿಗತಿ;
  • ಅಣೆಕಟ್ಟು ಸುರಕ್ಷತೆ ಕಾಯ್ದೆ, 2021ರ ಅಡಿಯಲ್ಲಿ ಡಿಸೆಂಬರ್ 2026 ರ ವೇಳೆಗೆ ಸಮಗ್ರ ಅಣೆಕಟ್ಟು ಸುರಕ್ಷತಾ ಮೌಲ್ಯಮಾಪನವನ್ನು (ಸಿಡಿಎಸ್ ಇ) ಪೂರ್ಣಗೊಳಿಸುವುದು;
  • ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀರಾವರಿ ಗಣತಿಯ ಪ್ರಗತಿ; ಮತ್ತು
  • ಮಾದರಿ ರಾಜ್ಯ ಜಲ ಪ್ರಶಸ್ತಿಗಳ ಚೌಕಟ್ಟು.

ಆರಂಭಿಕ ನುಡಿಗಳಲ್ಲಿ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಕಾರ್ಯದರ್ಶಿ ಶ್ರೀ ವಿ. ಎಲ್. ಕಾಂತ ರಾವ್ ಅವರು ಎಲ್ಲಾ ಗಣ್ಯರನ್ನು ಸ್ವಾಗತಿಸಿದರು ಮತ್ತು ಸಮ್ಮೇಳನದ 8 ಕಾರ್ಯಸೂಚಿಗಳನ್ನು ಅವರಿಗೆ ಪರಿಚಯಿಸಿದರು. ಅವರು ಸಚಿವಾಲಯದ ಪ್ರಮುಖ ಉಪಕ್ರಮಗಳನ್ನು ಉಲ್ಲೇಖಿಸಿದರು ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯ ಅಗತ್ಯವನ್ನು ಒತ್ತಿಹೇಳಿದರು.

ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಜಲ ಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ್ ಅವರು, ಭಾರತದ ಆರ್ಥಿಕ ಬೆಳವಣಿಗೆ, ಆಹಾರ ಭದ್ರತೆ, ಪರಿಸರ ಸುಸ್ಥಿರತೆ ಮತ್ತು ಪ್ರತಿಯೊಬ್ಬ ನಾಗರಿಕನ ಯೋಗಕ್ಷೇಮಕ್ಕೆ ನೀರು ಮೂಲ ಬುನಾದಿಯಾಗಿದೆ ಎಂದು ಹೇಳಿದರು. ಹವಾಮಾನ ವೈಪರೀತ್ಯ, ಅಂತರ್ಜಲ ಕುಸಿತ ಮತ್ತು ತ್ವರಿತ ನಗರೀಕರಣದಿಂದ ಎದುರಾಗುತ್ತಿರುವ ಸವಾಲುಗಳನ್ನು ಉಲ್ಲೇಖಿಸಿದ ಅವರು, ವೈಜ್ಞಾನಿಕ, ಪರಿಣಾಮಕಾರಿ ಮತ್ತು ಸುಸ್ಥಿರ ಜಲಸಂಪನ್ಮೂಲ ನಿರ್ವಹಣೆಗೆ ಕರೆ ನೀಡಿದರು.

ಜೂನ್ 28, 2026 ರ  'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ನೀಡಿದ ಕರೆಯನ್ನು ಉಲ್ಲೇಖಿಸಿದ ಸಚಿವರು, ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ, ಸಾಂಪ್ರದಾಯಿಕ ಜಲಮೂಲಗಳ ಪುನರುಜ್ಜೀವನ, ಅರಣ್ಯೀಕರಣ ಮತ್ತು ಸಾರ್ವಜನಿಕ ಸಹಭಾಗಿತ್ವದ ಮೂಲಕ *'ಕ್ಯಾಚ್ ದಿ ರೈನ್ 2026'* ಅಭಿಯಾನವನ್ನು ತೀವ್ರಗೊಳಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಗ್ರಹಿಸಿದರು. ಅವರು ಎಂ-ಕ್ಯಾಡ್  (ಎಂ-ಸಿಎಡಿ) ಯೋಜನೆಯ ಅನುಷ್ಠಾನವನ್ನು ವೇಗಗೊಳಿಸಲು, ನೀರು ಬಳಕೆದಾರರ ಸಂಘಗಳನ್ನು ಬಲಪಡಿಸಲು, ನೀರಾವರಿ ದಕ್ಷತೆಯನ್ನು ಸುಧಾರಿಸಲು ಮತ್ತು ನೀರಾವರಿ ಹಾಗೂ ಪ್ರವಾಹ ನಿರ್ವಹಣಾ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಯೋಜನಾ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಸರಳಗೊಳಿಸುವ ಅಗತ್ಯವನ್ನು ಒತ್ತಿಹೇಳಿದರು.

ಅಣೆಕಟ್ಟು ಸುರಕ್ಷತೆ ಕಾಯ್ದೆ, 2021ರ ಪರಿಣಾಮಕಾರಿ ಅನುಷ್ಠಾನ, ಅಣೆಕಟ್ಟು ಸುರಕ್ಷತಾ ಮೌಲ್ಯಮಾಪನಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಮತ್ತು ಜಲಾಶಯಗಳಲ್ಲಿ ಹೂಳು  ಸಂಗ್ರಹವಾಗುವುದನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವಂತೆ ಅವರು ಕರೆ ನೀಡಿದರು. ರಾಜ್ಯ ಜಲ ಸುಧಾರಣೆಗಳ ಚೌಕಟ್ಟು ಮತ್ತು ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಜಲಸಂಬಂಧಿ ಗಣತಿಗಳನ್ನು ಉಲ್ಲೇಖಿಸಿದ ಅವರು, ಡಿಜಿಟಲ್ ಆಡಳಿತ, ವೈಜ್ಞಾನಿಕ ಯೋಜನೆ ಮತ್ತು ಸಾರ್ವಜನಿಕರ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿಹೇಳಿದರು.

ಸಚಿವರು ಮೂರು ಪ್ರಮುಖ ದಾಖಲೆಗಳನ್ನು ಬಿಡುಗಡೆ ಮಾಡಿದರು: City-level Action Plan for Reuse of Treated Water for Varanasi" (ವಾರಣಾಸಿಗಾಗಿ ಸಂಸ್ಕರಿಸಿದ ನೀರಿನ ಮರುಬಳಕೆಯ ನಗರ-ಮಟ್ಟದ ಕ್ರಿಯಾ ಯೋಜನೆ)- ಒಂದು ಚೌಕಟ್ಟು: ಸಂಸ್ಕರಿಸಿದ ಜಲತ್ಯಾಜ್ಯದ ಸುರಕ್ಷಿತ ಮರುಬಳಕೆ ಮತ್ತು ವೃತ್ತಾಕಾರದ ಜಲ ಆರ್ಥಿಕತೆಯನ್ನು  ಉತ್ತೇಜಿಸುವ ಮಾರ್ಗಸೂಚಿ;  O&M Manual for Artificial Recharge and Ground Water Conservation Structures" (ಕೃತಕ ಮರುಪೂರಣ ಮತ್ತು ಅಂತರ್ಜಲ ಸಂರಕ್ಷಣಾ ರಚನೆಗಳಿಗಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ ಕೈಪಿಡಿ): ಇದನ್ನು ರಾಷ್ಟ್ರೀಯ ಜಲ ಮಿಷನ್ ಮತ್ತು ಕೇಂದ್ರ ಅಂತರ್ಜಲ ಮಂಡಳಿಯಿಂದ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ; "Schedule of Rates (SoR) for Drilling and Allied Works" (ಕೊರೆಯುವಿಕೆ ಮತ್ತು ಸಂಬಂಧಿತ ಕಾಮಗಾರಿಗಳ ದರಗಳ ವೇಳಾಪಟ್ಟಿ ) - ಒಂದು ಕೈಪಿಡಿ: ಇದನ್ನು ಪಾರದರ್ಶಕತೆ ಮತ್ತು ಪ್ರಮಾಣೀಕರಣಕ್ಕಾಗಿ ಸಿಜಿಡಬ್ಲ್ಯೂಬಿ  ಸಿದ್ಧಪಡಿಸಿದೆ.

"ಜಲ ಸುರಕ್ಷಿತ, ಭಾರತ ಸುರಕ್ಷಿತ" ಗುರಿಯನ್ನು ಸಾಧಿಸಲು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವ ಸಂಕಲ್ಪದೊಂದಿಗೆ ಸಮ್ಮೇಳನವು ಮುಕ್ತಾಯಗೊಂಡಿತು.

ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಕಾರ್ಯದರ್ಶಿ ಶ್ರೀ ವಿ. ಎಲ್. ಕಾಂತ ರಾವ್ ಅವರು ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಎಲ್ಲಾ ರಾಜ್ಯಗಳಿಗೆ ಧನ್ಯವಾದ ಅರ್ಪಿಸಿದರು.

 

*****


(रिलीज़ आईडी: 2284379) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati