ಲೋಕಸಭಾ ಸಚಿವಾಲಯ
ಗುಣಮಟ್ಟದ ಆರೋಗ್ಯ ಸೇವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು: ಲೋಕಸಭಾ ಸ್ಪೀಕರ್
ಆರೋಗ್ಯ ರಕ್ಷಣೆ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಬಲಪಡಿಸಲು ಸರ್ಕಾರಿ ಮತ್ತು ಖಾಸಗಿ ವಲಯ ಒಟ್ಟಾಗಿ ಕೆಲಸ ಮಾಡಬೇಕು: ಲೋಕಸಭಾ ಸ್ಪೀಕರ್
ಪ್ರಚಲಿತದಲ್ಲಿರುವ ಮತ್ತು ಉದಯೋನ್ಮುಖ ರೋಗಗಳಿಂದ ಎದುರಾಗುವ ಸವಾಲುಗಳಿಗೆ ವೈದ್ಯಕೀಯ ಸಂಸ್ಥೆಗಳು ಸಿದ್ಧರಾಗಬೇಕು: ಲೋಕಸಭಾ ಸ್ಪೀಕರ್
ನಾಸಿಕ್ ನಲ್ಲಿ ಅಶೋಕ ಹೆಲ್ತ್ ಸಿಟಿ ಉದ್ಘಾಟಿಸಿ ಲೋಕಸಭಾ ಸ್ಪೀಕರ್
प्रविष्टि तिथि:
12 JUL 2026 7:27PM by PIB Bengaluru
ಗುಣಮಟ್ಟದ ಆರೋಗ್ಯ ಸೇವೆಯು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಬೇಕು ಎಂದು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಇಂದು ಹೇಳಿದರು. ಈ ಉದ್ದೇಶವನ್ನು ಸಾಧಿಸಲು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದವರು ಅಭಿಪ್ರಾಯಪಟ್ಟರು, ಮಹಾರಾಷ್ಟ್ರದ ನಾಸಿಕ್ ನಲ್ಲಿ ಅಶೋಕ ಆರೋಗ್ಯ ನಗರವನ್ನು (ಅಶೋಕ ಹೆಲ್ತ್ ಸಿಟಿ) ಉದ್ಘಾಟಿಸಿ ಅವರು ಈ ಹೇಳಿಕೆ ನೀಡಿದ್ದಾರೆ.
ನಾಸಿಕ್ ಅನ್ನು ಆಧ್ಯಾತ್ಮಿಕ ಪ್ರಜ್ಞೆ, ಸಾಮಾಜಿಕ ಜಾಗೃತಿ ಮತ್ತು ಅಸಾಧಾರಣ ಶೌರ್ಯದ ನಾಡು ಎಂದು ಉಲ್ಲೇಖಿಸಿದ ಶ್ರೀ ಬಿರ್ಲಾ, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಪವಿತ್ರ ತ್ರಯಂಬಕೇಶ್ವರ ಮಹಾದೇವ ದೇವಾಲಯವು ಆಧ್ಯಾತ್ಮಿಕ ಶಕ್ತಿಯನ್ನು ಒದಗಿಸುತ್ತದೆ, ಜನರಿಗೆ ಕಷ್ಟಗಳನ್ನು ಸಹಿಸಿಕೊಳ್ಳುವ ಧೈರ್ಯವನ್ನು ನೀಡುತ್ತದೆ ಮತ್ತು ಸಮಾಜಕ್ಕೆ ಸಾರ್ವಜನಿಕ ಕಲ್ಯಾಣದತ್ತ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು. ಈ ಪ್ರದೇಶದ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯನ್ನು ಸ್ಮರಿಸಿದ ಅವರು, ಸಂತ ಜ್ಞಾನೇಶ್ವರ ಮಹಾರಾಜ್ ಮತ್ತು ಸಂತ ತುಕಾರಾಂ ಮಹಾರಾಜ್ ಅವರ ಬೋಧನೆಗಳು ಸಮಾಜಕ್ಕೆ ಸ್ಫೂರ್ತಿ ನೀಡುತ್ತಲೇ ಇವೆ ಎಂದರು. ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ ಮತ್ತು ಶೌರ್ಯವು ದೇಶದ ಯುವಜನರಿಗೆ ಸ್ಫೂರ್ತಿ ಮತ್ತು ನಿರ್ದೇಶನವನ್ನು ನೀಡುತ್ತಲೇ ಇದೆ ಎಂದೂ ಅವರು ಹೇಳಿದರು.
ಭಾರತದಲ್ಲಿ ಆರೋಗ್ಯ ಸೇವೆಗಳನ್ನು ವಿಸ್ತರಿಸುವ ಅಗತ್ಯದ ಬಗ್ಗೆ ಮಾತನಾಡಿದ ಶ್ರೀ ಬಿರ್ಲಾ, ಭಾರತ ಸರ್ಕಾರವು ಎಲ್ಲರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರೋಗ್ಯಕರ ಜೀವನಶೈಲಿಯನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಯೋಗವು ಇಂದು ಪ್ರಪಂಚದಾದ್ಯಂತದ ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದರು. ಆರೋಗ್ಯಕರ ಮತ್ತು ರೋಗ ಮುಕ್ತ ಜೀವನವನ್ನು ಖಚಿತಪಡಿಸಿಕೊಳ್ಳಲು ಯೋಗ ಮತ್ತು ಪರಿಸರ ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಅವರು ಹೇಳಿದರು.
ದೇಶದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಭಾರತ ಸರ್ಕಾರವು ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ ಎಂದು ಶ್ರೀ ಬಿರ್ಲಾ ಹೇಳಿದರು. ವೈದ್ಯಕೀಯ ಮೂಲಸೌಕರ್ಯಗಳನ್ನು ವಿಸ್ತರಿಸಲಾಗಿದೆ, ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಹೆಚ್ಚಿಸಲಾಗಿದೆ ಮತ್ತು ಆಯುಷ್ಮಾನ್ ಭಾರತ್ ಸೇರಿದಂತೆ ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ. ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವುದು, ವೈದ್ಯಕೀಯ ಮೂಲಸೌಕರ್ಯಗಳನ್ನು ಬಲಪಡಿಸುವುದು ಮತ್ತು ಗಂಭೀರ ಕಾಯಿಲೆಗಳ ಚಿಕಿತ್ಸೆಯ ಜೊತೆಗೆ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಖಾಸಗಿ ವಲಯದ ಭಾಗವಹಿಸುವಿಕೆಯು ಅರ್ಥಪೂರ್ಣ ಫಲಿತಾಂಶಗಳನ್ನು ನೀಡುತ್ತಿದೆ ಎಂದು ಅವರು ಹೇಳಿದರು.
ವೈದ್ಯಕೀಯ ಸಂಶೋಧನೆಯ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಬಿರ್ಲಾ ಅವರು, ಅಶೋಕ ಹೆಲ್ತ್ ಸಿಟಿಯು ತನ್ನ ತಾಯಿ ಮತ್ತು ಶಿಶು ಆಸ್ಪತ್ರೆ, ಕ್ಯಾನ್ಸರ್ ಆರೈಕೆ ಮತ್ತು ಸೂಪರ್-ಸ್ಪೆಷಾಲಿಟಿ ಸೇವೆಗಳ ಜೊತೆಗೆ ಸಂಶೋಧನೆ ಮತ್ತು ನಾವೀನ್ಯತೆ ಸೌಲಭ್ಯಗಳನ್ನು ಸ್ಥಾಪಿಸುವಂತೆ ಕರೆ ನೀಡಿದರು. ಪ್ರಚಲಿತದಲ್ಲಿರುವ ಮತ್ತು ಭವಿಷ್ಯದಲ್ಲಿ ಬರಬಹುದಾದ ಉದಯೋನ್ಮುಖ ರೋಗಗಳಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ವೈದ್ಯಕೀಯ ವೃತ್ತಿಪರರು ಮತ್ತು ಸಂಸ್ಥೆಗಳು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಭಾರತವು ವೈದ್ಯಕೀಯ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ತನ್ನ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಹೇಳಿದರು.
ವಿಜ್ಞಾನ ಮತ್ತು ಆರೋಗ್ಯ ರಕ್ಷಣೆಯಲ್ಲಿ ಭಾರತದ ಹೆಚ್ಚುತ್ತಿರುವ ಸಾಮರ್ಥ್ಯಗಳನ್ನು ಉಲ್ಲೇಖಿಸಿದ ಅವರು, ಆರೋಗ್ಯ ರಕ್ಷಣೆಯ ಹಲವಾರು ಕ್ಷೇತ್ರಗಳಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಅವಲಂಬಿಸಿದ್ದ ಸಮಯವಿತ್ತು ಎಂಬುದನ್ನು ನೆನಪಿಸಿಕೊಂಡರು. ಆದಾಗ್ಯೂ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಭಾರತೀಯ ವಿಜ್ಞಾನಿಗಳು ಲಸಿಕೆಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದರು, ಇದು ಅಭೂತಪೂರ್ವ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಮಾನವೀಯತೆಗೆ/ಮಾನವ ಕುಲಕ್ಕೆ ಸೇವೆ ಸಲ್ಲಿಸಿತು. ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸಲು ಮತ್ತು ಉದಯೋನ್ಮುಖ ರೋಗಗಳಿಗೆ ಪರಿಣಾಮಕಾರಿ ಪ್ರತಿಕ್ರಿಯೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮತ್ತು ಖಾಸಗಿ ವಲಯವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಉಲ್ಲೇಖಿಸಿದರು.
ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವನ್ನು ಶ್ರೀ ಬಿರ್ಲಾ ಒತ್ತಿ ಹೇಳಿದರು. ಹೊಸ ರೋಗಗಳು ಅನಿರೀಕ್ಷಿತವಾಗಿ ಕಾಣಿಸಿಕೊಳ್ಳಬಹುದು ಮತ್ತು ಗಂಭೀರ ಸವಾಲುಗಳನ್ನು ಒಡ್ಡಬಹುದು ಎಂದು ಹೇಳಿದ ಅವರು, ವೈದ್ಯಕೀಯ ಮೂಲಸೌಕರ್ಯವನ್ನು ಬಲಪಡಿಸುವುದು ಸಂಶೋಧನೆ, ನಾವೀನ್ಯತೆ ಮತ್ತು ವೈಜ್ಞಾನಿಕ ಸಾಮರ್ಥ್ಯಗಳಲ್ಲಿನ ಹೂಡಿಕೆಯೊಂದಿಗೆ ಜೊತೆಜೊತೆಯಾಗಿ ಸಾಗಬೇಕು ಎಂದು ಹೇಳಿದರು.
ಸಂಸ್ಥೆಯು ಒದಗಿಸುತ್ತಿರುವ ಆರೋಗ್ಯ ಸೌಲಭ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಶ್ರೀ ಬಿರ್ಲಾ, ಅಶೋಕ ಆರೋಗ್ಯ ನಗರವು (ಹೆಲ್ತ್ ಸಿಟಿ) ನಾಸಿಕ್ ಮಾತ್ರವಲ್ಲದೆ ವ್ಯಾಪಕ ಉತ್ತರ ಮಹಾರಾಷ್ಟ್ರ ಪ್ರದೇಶಕ್ಕೂ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು. ಹೊಸದಾಗಿ ಉದ್ಘಾಟನೆಗೊಂಡ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಉಲ್ಲೇಖಿಸಿದ ಅವರು, ತಾಯಂದಿರು ಮತ್ತು ಮಕ್ಕಳ ಯೋಗಕ್ಷೇಮಕ್ಕಾಗಿ ಸಮರ್ಪಿತವಾದ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯಗಳ ಅಗತ್ಯವನ್ನು ಒತ್ತಿ ಹೇಳಿದರು. ದೇಶದಲ್ಲಿ ಶಿಶು ಮರಣವನ್ನು ಕಡಿಮೆ ಮಾಡಲು ತೀವ್ರ ರೀತಿಯ ಪ್ರಯತ್ನಗಳಿಗೆ ಅವರು ಕರೆ ನೀಡಿದರು. ಈ ಉದ್ದೇಶವನ್ನು ಸಾಧಿಸಲು ಉತ್ತಮ ಆಸ್ಪತ್ರೆಗಳು ಮತ್ತು ಗುಣಮಟ್ಟದ ಆರೋಗ್ಯ ಸೌಲಭ್ಯಗಳು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು. ಖಾಸಗಿ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ಮತ್ತು ಸಾರ್ವಜನಿಕ ಸೇವೆಯ ಮನೋಭಾವದಿಂದ ಆರೋಗ್ಯ ಸೇವೆಗಳನ್ನು ವಿಸ್ತರಿಸಬೇಕು, ಇದರಿಂದ ಅವುಗಳ ಪ್ರಯೋಜನಗಳು ಸಮಾಜದ ಎಲ್ಲಾ ವರ್ಗಗಳನ್ನು ತಲುಪುತ್ತವೆ ಎಂದು ಅವರು ಆಗ್ರಹಿಸಿದರು.
ಸರ್ಕಾರ ಮತ್ತು ಖಾಸಗಿ ವಲಯದ ಪೂರಕ ಪಾತ್ರಗಳನ್ನು ಉಲ್ಲೇಖಿಸಿದ ಶ್ರೀ ಬಿರ್ಲಾ, ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಯು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಪುನರುಚ್ಚರಿಸಿದರು. ಅಶೋಕ ಆರೋಗ್ಯ ನಗರವು ಗಂಭೀರ ಕಾಯಿಲೆಗಳ ಚಿಕಿತ್ಸೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಮತ್ತು ವೈದ್ಯಕೀಯ ಸಂಶೋಧನೆಯನ್ನು ಉತ್ತೇಜಿಸುವುದರ ಜೊತೆಗೆ ಕೈಗೆಟುಕುವ ದರದ, ಗುಣಮಟ್ಟದ ಮತ್ತು ಸುಸ್ಥಿರ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀ ಬಿರ್ಲಾ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ವೈದ್ಯಕೀಯ ಶಿಕ್ಷಣವನ್ನು ಸಾರ್ವಜನಿಕ ಸೇವಾ ಮನೋಭಾವದೊಂದಿಗೆ ಜೋಡಿಸಬೇಕು ಎಂದು ಒತ್ತಿ ಹೇಳಿದರು. ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹಳ್ಳಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಪ್ರೋತ್ಸಾಹಿಸಬೇಕು, ಇದರಿಂದ ಗುಣಮಟ್ಟದ ಆರೋಗ್ಯ ರಕ್ಷಣಾ ಸೌಲಭ್ಯ ದೇಶದ ದೂರದ ಭಾಗಗಳಲ್ಲಿ ವಾಸಿಸುವ ಜನರನ್ನು ತಲುಪುತ್ತದೆ ಎಂದು ಅವರು ಹೇಳಿದರು. ಕಟ್ಟಕಡೆಯ ವ್ಯಕ್ತಿಯೂ ಸೇರಿದಂತೆ ಪ್ರತಿಯೊಬ್ಬ ನಾಗರಿಕನಿಗೂ ಗಂಭೀರ ಅನಾರೋಗ್ಯದ ಸಂದರ್ಭದಲ್ಲಿ ಉತ್ತಮ ಖಚಿತ ಚಿಕಿತ್ಸೆ ಲಭ್ಯವಾಗಬೇಕು ಎಂದು ಅವರು ಒತ್ತಿ ಹೇಳಿದರು.
ಮಹಾರಾಷ್ಟ್ರ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ರಕ್ಷಣೆ ಸಚಿವರಾದ ಶ್ರೀ ಛಗನ್ ಭುಜಬಲ್; ರಾಜಸ್ಥಾನ ಸರ್ಕಾರದ ಇಂಧನ ಸಚಿವರಾದ ಶ್ರೀ ಹಿರಾಲಾಲ್ ನಗರ; ಸಂಸತ್ ಸದಸ್ಯರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





*****
(रिलीज़ आईडी: 2283958)
आगंतुक पटल : 13