ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಬ್ರಿಕ್ಸ್ ಮಹಿಳಾ ಸಚಿವರ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮಹಿಳಾ ನೇತೃತ್ವದ ಗ್ರಾಮೀಣ ಉದ್ಯಮಗಳನ್ನು ಪ್ರದರ್ಶಿಸಿತು

प्रविष्टि तिथि: 08 JUL 2026 5:31PM by PIB Bengaluru

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು (MoRD), ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (DAY-NRLM) ಮೂಲಕ, ಭಾರತದ ಬ್ರಿಕ್ಸ್ (BRICS) ಅಧ್ಯಕ್ಷತೆಯ ಅಡಿಯಲ್ಲಿ ದೇಶಾದ್ಯಂತದ ಮಹಿಳಾ ನೇತೃತ್ವದ ಗ್ರಾಮೀಣ ಉದ್ಯಮಗಳನ್ನು ಪ್ರದರ್ಶಿಸಲು, ಕೇರಳದ ಕೊಚ್ಚಿಯಲ್ಲಿ 2026ರ ಜುಲೈ 8 ಮತ್ತು 9 ರಂದು ನಡೆಯಲಿರುವ ಬ್ರಿಕ್ಸ್ ಮಹಿಳಾ ಸಚಿವರ ಸಭೆಯ ‘ಅನುಬಂಧ ಪ್ರದರ್ಶನ’ದಲ್ಲಿ (Side Event Exhibition) ಭಾಗವಹಿಸುತ್ತಿದೆ.

ಈ ಮಹತ್ವದ ಪ್ರದರ್ಶನವನ್ನು ಭಾರತ ಸರ್ಕಾರದ ಗೌರವಾನ್ವಿತ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಮತ್ತು ಭಾರತ ಸರ್ಕಾರದ ಗೌರವಾನ್ವಿತ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ಉದ್ಘಾಟಿಸಿದರು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪೆವಿಲಿಯನ್‌ಗೆ ಆಗಮಿಸಿದ ಈ ಗಣ್ಯರನ್ನು ಸಚಿವಾಲಯದ ನಿರ್ದೇಶಕಿಯಾದ ಡಾ. ಮೋಲಿಶ್ರೀ ಅವರು ಆತ್ಮೀಯವಾಗಿ ಬರಮಾಡಿಕೊಂಡು, ಪ್ರದರ್ಶನ ಹಾಗೂ ದೇಶಾದ್ಯಂತದ ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳ ಉದ್ಯಮಗಳ ಯಶೋಗಾಥೆಯ ಕುರಿತು ವಿವರಣೆ ನೀಡಿದರು. ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಂಡೋನೇಷ್ಯಾ ದೇಶಗಳ ಸಚಿವರು ಮತ್ತು ಹಿರಿಯ ಪ್ರತಿನಿಧಿಗಳು ಸಹ ಈ ಪೆವಿಲಿಯನ್‌ಗೆ ಭೇಟಿ ನೀಡಿ, ಅಲ್ಲಿ ಪ್ರದರ್ಶಿಸಲಾದ ಗ್ರಾಮೀಣ ಉದ್ಯಮಗಳೊಂದಿಗೆ ಆಪ್ತವಾಗಿ ಸಂವಾದ ನಡೆಸಿದರು.

ಈ ಪ್ರದರ್ಶನವು ಗ್ರಾಮೀಣ ಮಹಿಳಾ ಉದ್ಯಮಿಗಳು ಮತ್ತು ಸ್ವಸಹಾಯ ಗುಂಪುಗಳ (SHG) ಉದ್ಯಮಗಳ ಸಾಧನೆಗಳನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸಲು ಒಂದು ಅಂತರರಾಷ್ಟ್ರೀಯ ವೇದಿಕೆಯನ್ನು ಒದಗಿಸುತ್ತದೆ. ಇದರೊಂದಿಗೆ, ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುವಲ್ಲಿ, ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವಲ್ಲಿ ಮತ್ತು ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳನ್ನು ಸಂರಕ್ಷಿಸುವಲ್ಲಿ ಸಾಮೂಹಿಕ ಒಕ್ಕೂಟಗಳ ಪ್ರಮುಖ ಪರಿವರ್ತನಾ ಶಕ್ತಿಯನ್ನು ಇದು ಪ್ರದರ್ಶಿಸುತ್ತದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪೆವಿಲಿಯನ್ 21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮಳಿಗೆಗಳನ್ನು ಒಳಗೊಂಡಿದೆ. ಇದರೊಂದಿಗೆ ರಾಷ್ಟ್ರೀಯ ‘ಸರಸ್ ಆಜೀವಿಕಾ ಗ್ಯಾಲರಿ’ಯೂ ಇದ್ದು, ಇದು ಮಹಿಳಾ ನೇತೃತ್ವದ ಸ್ವಸಹಾಯ ಗುಂಪುಗಳ ಉದ್ಯಮಗಳು ಅಭಿವೃದ್ಧಿಪಡಿಸಿದ ವೈವಿಧ್ಯಮಯ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ. ಈ ಪ್ರದರ್ಶನದಲ್ಲಿ ಕೈಮಗ್ಗ ಉತ್ಪನ್ನಗಳು, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಕಲೆಗಳು, ನೈಸರ್ಗಿಕ ಆಹಾರ ಪದಾರ್ಥಗಳು, ಆರೋಗ್ಯ ಮತ್ತು ಕ್ಷೇಮ ಉತ್ಪನ್ನಗಳು ಹಾಗೂ ಸುಸ್ಥಿರ ಜೀವನಶೈಲಿ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದ್ದು, ಇದು ಭಾರತದ ಗ್ರಾಮೀಣ ಉದ್ಯಮ ಪರಿಸರ ವ್ಯವಸ್ಥೆಯ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಬಿಂಬಿಸುತ್ತದೆ.

ಪೆವಿಲಿಯನ್ ಪ್ರವೇಶದ್ವಾರದಲ್ಲಿರುವ ರಾಷ್ಟ್ರೀಯ ‘ಸರಸ್ ಆಜೀವಿಕಾ ಗ್ಯಾಲರಿ’ಯು ಭಾರತದಾದ್ಯಂತದ ಪ್ರೀಮಿಯಂ ಉತ್ಪನ್ನಗಳ ಆಯ್ದ ಪ್ರದರ್ಶನವನ್ನು ನೀಡುತ್ತದೆ. ಉತ್ಪನ್ನ ಅಭಿವೃದ್ಧಿ, ವಿನ್ಯಾಸದ ಸುಧಾರಣೆಗಳು, ಬ್ರ್ಯಾಂಡಿಂಗ್, ಪ್ಯಾಕೇಜಿಂಗ್, ಗುಣಮಟ್ಟದ ಖಾತರಿ ಮತ್ತು ಮಾರುಕಟ್ಟೆ ಜೋಡಣೆಗಳ ಮೂಲಕ ಗ್ರಾಮೀಣ ಉದ್ಯಮಗಳು ಹೇಗೆ ವಿಕಸನಗೊಂಡಿವೆ ಎಂಬುದನ್ನು ಈ ಗ್ಯಾಲರಿಯು ಎತ್ತಿ ತೋರಿಸುತ್ತದೆ. ಇದು DAY-NRLM ಅಡಿಯಲ್ಲಿ ಪರಿಚಯಿಸಲಾದ ಪ್ರೀಮಿಯಂ ಉಡುಗೊರೆ ಉಪಕ್ರಮವಾದ ‘ಸರಸ್ ಶಕ್ತಿ ಸಂಗ್ರಹ’ವನ್ನು ಸಹ ಪ್ರದರ್ಶಿಸುತ್ತದೆ. ಇದು ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ತಮ ಗುಣಮಟ್ಟದ ಕರಕುಶಲ ಉತ್ಪನ್ನಗಳನ್ನು ಬ್ರಾಂಡೆಡ್ ಸಾಂಸ್ಥಿಕ ಉಡುಗೊರೆಗಳ ಸಂಗ್ರಹವನ್ನಾಗಿ ರೂಪಿಸುತ್ತದೆ. ಇದು ಗ್ರಾಮೀಣ ಕರಕುಶಲತೆಯ ಮೌಲ್ಯ ಮತ್ತು ಗೋಚರತೆಯನ್ನು ಹೆಚ್ಚಿಸುವುದಲ್ಲದೆ, ಅವುಗಳು ಸರ್ಕಾರಿ ಮತ್ತು ಸಾಂಸ್ಥಿಕ ಮಾರುಕಟ್ಟೆಗಳನ್ನು ಸುಲಭವಾಗಿ ಪ್ರವೇಶಿಸಲು ಸಹಾಯ ಮಾಡುತ್ತದೆ.

ಈ ಪ್ರದರ್ಶನವು ಮಧುಬನಿ ವರ್ಣಚಿತ್ರಗಳು, ಡೋಕ್ರಾ ಮತ್ತು ಬೆಲ್ ಮೆಟಲ್ ಕರಕುಶಲ ವಸ್ತುಗಳು, ಪೆನ್ ಕಲಂಕರಿ, ಫುಲ್ಕರಿ ಕಸೂತಿ, ತೋಡಾ ಕಸೂತಿ, ಕಾಂತಾ ಕಸೂತಿ ಕೆಲಸ, ಕಚ್ ಕರಕುಶಲ ವಸ್ತುಗಳು, ಚನ್ನಪಟ್ಟಣದ ಆಟಿಕೆಗಳು, ಐಪನ್ ಕಲೆ ಸೇರಿದಂತೆ ವ್ಯಾಪಕ ಶ್ರೇಣಿಯ ಸಾಂಪ್ರದಾಯಿಕ ಕರಕುಶಲ ಕಲೆಗಳನ್ನು ಮತ್ತು ಪ್ರಾದೇಶಿಕ ವಿಶೇಷತೆಗಳನ್ನು ಒಂದೇ ಸೂರಿನಡಿ ತಂದಿದೆ. ಇವೆಲ್ಲವೂ ಗ್ರಾಮೀಣ ಮಹಿಳಾ ಉದ್ಯಮಿಗಳಿಂದ ಸಂರಕ್ಷಿಸಲ್ಪಟ್ಟು ಮತ್ತು ಪ್ರೋತ್ಸಾಹಿಸಲ್ಪಡುತ್ತಿರುವ ಶ್ರೀಮಂತ ಕುಶಲಕರ್ಮಿ ಸಂಪ್ರದಾಯಗಳಾಗಿವೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಹಿಳಾ ನೇತೃತ್ವದ ಉದ್ಯಮಗಳನ್ನು ಒಟ್ಟುಗೂಡಿಸುವ ಈ ಪ್ರದರ್ಶನವು ಭಾರತದ ಗ್ರಾಮೀಣ ಉದ್ಯಮ ಪರಿಸರ ವ್ಯವಸ್ಥೆಯ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಜೊತೆಗೆ, ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಸ್ವಸಹಾಯ ಗುಂಪುಗಳೊಂದಿಗೆ ಗುರುತಿಸಿಕೊಂಡಿರುವ 10 ಕೋಟಿಗೂ ಹೆಚ್ಚು ಮಹಿಳೆಯರ ಕೊಡುಗೆಯನ್ನು ಇದು ಎತ್ತಿ ತೋರಿಸುತ್ತದೆ. ಇದು ಸ್ವಸಹಾಯ ಗುಂಪುಗಳ ಉದ್ಯಮಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ವಿಶಿಷ್ಟ ಉದ್ಯಮಗಳಾಗಿ ಪ್ರಸ್ತುತಪಡಿಸುತ್ತದೆ. ಇದು ಮಹಿಳಾ ನೇತೃತ್ವದ ಅಭಿವೃದ್ಧಿ, ಎಲ್ಲರನ್ನೊಳಗೊಳ್ಳುವ ಬೆಳವಣಿಗೆ ಮತ್ತು ಸುಸ್ಥಿರ ಜೀವನೋಪಾಯದ ಕಡೆಗಿನ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಈ ಪ್ರದರ್ಶನವು ಬ್ರಿಕ್ಸ್ (BRICS) ಪ್ರತಿನಿಧಿಗಳು ಮತ್ತು ಅಂತರರಾಷ್ಟ್ರೀಯ ಸಂದರ್ಶಕರಿಗೆ ಗ್ರಾಮೀಣ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ವೈವಿಧ್ಯತೆ, ಗುಣಮಟ್ಟ ಹಾಗೂ ನಾವೀನ್ಯತೆಯನ್ನು ಹತ್ತಿರದಿಂದ ಅನುಭವಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಈ ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುವ, ಸ್ವಸಹಾಯ ಗುಂಪುಗಳ ಉದ್ಯಮಗಳಿಗೆ ಮಾರುಕಟ್ಟೆ ಅವಕಾಶಗಳನ್ನು ವಿಸ್ತರಿಸುವ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತದ ಶ್ರೀಮಂತ ಸಾಂಪ್ರದಾಯಿಕ ಕುಶಲಕರ್ಮಿ ಪರಂಪರೆಯನ್ನು ಉತ್ತೇಜಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸುತ್ತದೆ.

******


(रिलीज़ आईडी: 2282610) आगंतुक पटल : 22
इस विज्ञप्ति को इन भाषाओं में पढ़ें: English , Urdu , Gujarati , Tamil , Malayalam