ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಮೈ ಭಾರತ್ ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ ಬಲವಾದ ಕೈಗಾರಿಕೆ–ಯುವ ಪಾಲುದಾರಿಕೆಗೆ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಕರೆ
ಮೈ ಭಾರತ್ ಪ್ಲಾಟ್ ಫಾರ್ಮ್ ಪ್ರತಿಯೊಬ್ಬ ಯುವ ಭಾರತೀಯನನ್ನು ಅವಕಾಶಗಳೊಂದಿಗೆ ಸಂಪರ್ಕಿಸಬಲ್ಲದು: ರಾಜ್ಯ ಖಾತೆ ಸಚಿವೆರಾದ ಶ್ರೀಮತಿ ರಕ್ಷಾ ಖಡ್ಸೆ
ಯುವಜನ ಅಭಿವೃದ್ಧಿಗಾಗಿ ಸರ್ಕಾರ–ಕೈಗಾರಿಕೆ ಪಾಲುದಾರಿಕೆಯನ್ನು ಬಲಪಡಿಸಿದ ಕೈಗಾರಿಕಾ ಸಂಸ್ಥೆಗಳ ಸಮಾವೇಶ
प्रविष्टि तिथि:
03 JUL 2026 4:51PM by PIB Bengaluru
ಯುವ ಸಬಲೀಕರಣಕ್ಕಾಗಿ ಸರ್ಕಾರ ಮತ್ತು ಕೈಗಾರಿಕೆಗಳ ನಡುವಿನ ಸಹಯೋಗವನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಇಲಾಖೆಯು ನವದೆಹಲಿಯ ಡಾ. ಬಿ.ಆರ್. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ʻಕೈಗಾರಿಕಾ ಸಂಸ್ಥೆಗಳ ಸಮಾವೇಶ'ವನ್ನು ಆಯೋಜಿಸಿತ್ತು. ಮೈ ಭಾರತ್ (ಮೇರಾ ಯುವ ಭಾರತ್) ಪರಿಸರ ವ್ಯವಸ್ಥೆಯ ಮೂಲಕ ಕಾರ್ಯತಂತ್ರದ ಪಾಲುದಾರಿಕೆಯನ್ನು ನಿರ್ಮಿಸಲು 20ಕ್ಕೂ ಹೆಚ್ಚು ಪ್ರಮುಖ ಉದ್ಯಮ ಸಂಸ್ಥೆಗಳು, ಕಾರ್ಪೊರೇಟ್ ಗಳು, ಸಾರ್ವಜನಿಕ ವಲಯದ ಉದ್ಯಮಗಳು, ಸಿಎಸ್ ಆರ್ ಸಂಸ್ಥೆಗಳು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಈ ಸಮಾವೇಶವು ಒಂದೆಡೆ ಸೇರಿಸಿತು. ಈ ಸಮಾವೇಶವು ಕೌಶಲ್ಯ ಅಭಿವೃದ್ಧಿ, ಸ್ವಯಂಸೇವಕ ಸೇವೆ, ಇಂಟರ್ನ್ಶಿಪ್ಗಳು, ಉದ್ಯಮಶೀಲತೆ, ನಾವೀನ್ಯತೆ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಮೂಲಕ ಯುವಕರಿಗೆ ಅವಕಾಶಗಳನ್ನು ವಿಸ್ತರಿಸುವುದರ ಜೊತೆಗೆ 'ವಿಕಸಿತ ಭಾರತ @2047' ದೃಷ್ಟಿಕೋನವನ್ನು ಮುನ್ನಡೆಸುವತ್ತ ಗಮನ ಹರಿಸಿತು.
ಉದ್ಘಾಟನಾ ಅಧಿವೇಶನದಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವೀಯ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಸಚಿವೆ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ, ಯುವ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಡಾ. ಪಲ್ಲವಿ ಜೈನ್ ಗೋವಿಲ್, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಕುಮಾರಿ ದೀಪ್ತಿ ಗೌರ್ ಮುಖರ್ಜಿ, ಯುವ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ನಿತೇಶ್ ಕುಮಾರ್ ಮಿಶ್ರಾ ಸೇರಿದಂತೆ ಪ್ರಮುಖ ಕೈಗಾರಿಕಾ ಸಂಘಗಳು ಮತ್ತು ಸಿಎಸ್ಆರ್ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಮನ್ಸುಖ್ ಮಾಂಡವೀಯ ಅವರು, ಸರ್ಕಾರ ಮತ್ತು ಕೈಗಾರಿಕೆಗಳ ನಡುವಿನ ಸಕ್ರಿಯ ಪಾಲುದಾರಿಕೆಯ ಮೂಲಕ ಯುವಕರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಟ್ಟಾಗ ಮಾತ್ರ ಭಾರತದ ಜನಸಂಖ್ಯಾ ಲಾಭಾಂಶವು ಅದರ ದೊಡ್ಡ ಶಕ್ತಿಯಾಗಲು ಸಾಧ್ಯ ಎಂದು ಹೇಳಿದರು. "ಭಾರತದ ಜನಸಂಖ್ಯೆಯ ಶೇಕಡಾ 65 ರಷ್ಟು ಭಾಗವು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ನಮ್ಮ ಯುವಕರೇ ಭಾರತದ ಶಕ್ತಿ ಮತ್ತು ಸಾಫ್ಟ್ ಪವರ್. ಮೈ ಭಾರತ್ ಪ್ಲಾಟ್ ಫಾರ್ಮ್ ಮೂಲಕ ಅವರನ್ನು ಉದ್ಯಮ ರಂಗದೊಂದಿಗೆ ಸಂಪರ್ಕಿಸುವ ಮೂಲಕ, ನಾವು ಅವರ ಸಾಮರ್ಥ್ಯವನ್ನು ಅನಾವರಣಗೊಳಿಸಬಹುದು ಮತ್ತು ವಿಕಸಿತ ಭಾರತ @2047 ಕಡೆಗಿನ ಪಯಣವನ್ನು ವೇಗಗೊಳಿಸಬಹುದು." ಎಂದು ತಿಳಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಲ್ಪಿಸಿರುವ ಮೈ ಭಾರತ್ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಯುವಜನರನ್ನು ಕಲಿಕೆ, ಸ್ವಯಂಸೇವಕ ಸೇವೆ, ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ನಾಯಕತ್ವದ ಅವಕಾಶಗಳೊಂದಿಗೆ ಸಂಪರ್ಕಿಸುವ ಏಕಗವಾಕ್ಷಿ ವೇದಿಕೆಯಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕೇಂದ್ರ ಸಚಿವರು ಉಲ್ಲೇಖಿಸಿದರು. ಯುವಕರಿಗೆ ವ್ಯವಸ್ಥಿತ ಅವಕಾಶಗಳನ್ನು ಸೃಷ್ಟಿಸಲು, ಉದ್ಯಮಶೀಲತೆ ಮತ್ತು ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸಲು, ಕೈಗಾರಿಕಾ ಕ್ಲಸ್ಟರ್ ಗಳ ಸುತ್ತ ಯುವಜನರ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಮತ್ತು ಮೈ ಭಾರತ್ ಸ್ವಯಂಸೇವಕರೊಂದಿಗೆ ʻವೈಬ್ರೆಂಟ್ ವಿಲೇಜ್ʼ ಗಳ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ತಮ್ಮ ಸಿಎಸ್ ಆರ್ ಉಪಕ್ರಮಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವಂತೆ ಅವರು ಕೈಗಾರಿಕಾ ಸಂಘಗಳಿಗೆ ಕರೆ ನೀಡಿದರು. ಯುವಕರಲ್ಲಿನ ಮಾದಕ ದ್ರವ್ಯ ವ್ಯಸನದ ಸಮಸ್ಯೆಯನ್ನು ಪರಿಹರಿಸುವ ಅಗತ್ಯವನ್ನು ಒತ್ತಿಹೇಳಿದ ಅವರು, ಯುವಶಕ್ತಿಯನ್ನು ರಚನಾತ್ಮಕ ರಾಷ್ಟ್ರ ನಿರ್ಮಾಣದ ಕಡೆಗೆ ಹರಿಸಲು ಸರ್ಕಾರ, ಉದ್ಯಮ ಮತ್ತು ನಾಗರಿಕ ಸಮಾಜ ಒಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ರಾಜ್ಯ ಖಾತೆ ಸಚಿವರಾದ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ ಅವರು, ಕೈಗಾರಿಕಾ ಸಂಘಸ್ಥೆಗಳು ಮತ್ತು ಸಂಸ್ಥೆಗಳು ತಮ್ಮ ಯುವ ಉಪಕ್ರಮಗಳನ್ನು ಮೈ ಭಾರತ್ ಡಿಜಿಟಲ್ ಪ್ಲಾಟ್ಫಾರ್ಮ್ನೊಂದಿಗೆ ಸಂಯೋಜಿಸುವಂತೆ ಕರೆ ನೀಡಿದರು. "ಯುವ ಅಭಿವೃದ್ಧಿ ಎನ್ನುವುದು ಕೇವಲ ಕೌಶಲ್ಯ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿಲ್ಲ; ಇದು ಬಲವಾದ ಮತ್ತು ಎಲ್ಲರನ್ನೊಳಗೊಳ್ಳುವ ಭಾರತವನ್ನು ನಿರ್ಮಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಜವಾಬ್ದಾರಿಯುತ ನಾಗರಿಕರನ್ನು ಸೃಷ್ಟಿಸುವುದಾಗಿದೆ. ಯುವ ಉಪಕ್ರಮಗಳನ್ನು ಮೈ ಭಾರತ್ ಪ್ಲಾಟ್ಫಾರ್ಮಿನೊಂದಿಗೆ ಜೋಡಿಸುವ ಮೂಲಕ, ದೇಶದ ಅತ್ಯಂತ ದೂರದ ಪ್ರದೇಶಗಳೂ ಸೇರಿದಂತೆ ಪ್ರತಿಯೊಬ್ಬ ಯುವ ನಾಗರಿಕನಿಗೂ ಅವಕಾಶಗಳು ತಲುಪುವುದನ್ನು ನಾವು ಖಚಿತಪಡಿಸಿಕೊಳ್ಳಬಹುದು." ಎಂದು ಹೇಳಿದರು.

ಯಾವುದೇ ಭಾಗದಲ್ಲಿರುವ ಪ್ರತಿಭಾವಂತ ಯುವಕರನ್ನು ಅವಕಾಶಗಳೊಂದಿಗೆ ಸಂಪರ್ಕಿಸುವ ಸೇತುವೆಯಾಗಿ ಮೈ ಭಾರತ್ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು ಮತ್ತು ಈ ವೇದಿಕೆಯ ಮೂಲಕ ಸಚಿವಾಲಯದ ಪ್ರಮುಖ ಉಪಕ್ರಮಗಳನ್ನು ಸಕ್ರಿಯವಾಗಿ ಪ್ರಚಾರ ಮಾಡುವಂತೆ ಸಂಸ್ಥೆಗಳನ್ನು ಒತ್ತಾಯಿಸಿದರು. ಉದ್ಯಮ ಮತ್ತು ಯುವಕರ ನಡುವಿನ ಬಲವಾದ ಸಹಯೋಗವು ನಾವೀನ್ಯತೆ, ಉದ್ಯೋಗ, ಉದ್ಯಮಶೀಲತೆ ಮತ್ತು ಸಮುದಾಯ ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಯುವ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಡಾ. ಪಲ್ಲವಿ ಜೈನ್ ಗೋವಿಲ್ ಅವರು ಮಾತನಾಡಿ, ಮೈ ಭಾರತ್ ಯುವಕರ ಆಕಾಂಕ್ಷೆಗಳನ್ನು ಗುರುತಿಸಿ, ಅವರನ್ನು ಕಲಿಕೆ, ಸ್ವಯಂಸೇವಕ ಸೇವೆ, ನಾವೀನ್ಯತೆ, ಉದ್ಯಮಶೀಲತೆ ಮತ್ತು ಉದ್ಯೋಗದ ಅವಕಾಶಗಳೊಂದಿಗೆ ಸಂಪರ್ಕಿಸುವ ಒಂದು ಸಮಗ್ರ ಡಿಜಿಟಲ್ ಪರಿಸರ ವ್ಯವಸ್ಥೆಯಾಗಿ ವಿಕಸನಗೊಳ್ಳುತ್ತಿದೆ ಎಂದು ಉಲ್ಲೇಖಿಸಿದರು. ಈ ವೇದಿಕೆಯು ಉದ್ಯೋಗಾರ್ಹತೆಯನ್ನೂ ಮೀರಿ ಜವಾಬ್ದಾರಿಯುತ ನಾಗರಿಕರನ್ನು ಮತ್ತು ಸಕ್ರಿಯ ರಾಷ್ಟ್ರ ನಿರ್ಮಾಪಕರನ್ನು ಪೋಷಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಇಂಟರ್ನ್ಶಿಪ್ ಗಳು, ಮಾರ್ಗದರ್ಶನ , ಹ್ಯಾಕಥಾನ್ಗಳು, ಕೋಡಿಂಗ್ ಸ್ಪರ್ಧೆಗಳು, ನಾವೀನ್ಯತೆ ಸವಾಲುಗಳು ಮತ್ತು ಯುವಕರಿಗೆ ಪ್ರಾಯೋಗಿಕ ಅನುಭವವನ್ನು ನೀಡುವ ಇತರ ಜ್ಞಾನ ಆಧಾರಿತ ಉಪಕ್ರಮಗಳಿಗಾಗಿ ಈ ವೇದಿಕೆಯನ್ನು ಬಳಸಿಕೊಳ್ಳುವಂತೆ ಅವರು ಉದ್ಯಮ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು. ಇದು ಕೈಗಾರಿಕೆಗಳಿಗೆ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಲು ಸಹ ಸಹಾಯ ಮಾಡುತ್ತದೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಕುಮಾರಿ ದೀಪ್ತಿ ಗೌರ್ ಮುಖರ್ಜಿ ಅವರು, ಉದ್ಯಮ ಮತ್ತು ಯುವಕರ ನಡುವಿನ ವ್ಯವಸ್ಥಿತ ಸಹಯೋಗದ ಅಪಾರ ಸಾಮರ್ಥ್ಯವನ್ನು ಉಲ್ಲೇಖಿಸಿದರು.ಯಶಸ್ವಿ ಇಂಟರ್ನ್ಶಿಪ್ ಮತ್ತು ನಾಗರಿಕರ ತೊಡಗಿಸಿಕೊಳ್ಳುವಿಕೆ ಮಾದರಿಗಳಿಂದ ಸ್ಫೂರ್ತಿ ಪಡೆದು, ತಮ್ಮ ಸದಸ್ಯ ಸಂಸ್ಥೆಗಳ ಮೂಲಕ ವ್ಯವಸ್ಥಿತ ತರಬೇತಿ, ಮಾರ್ಗದರ್ಶನ ಮತ್ತು ಪ್ರಾಯೋಗಿಕ ಕಲಿಕೆಯ ಅವಕಾಶಗಳನ್ನು ಸಕ್ರಿಯವಾಗಿ ಬೆಂಬಲಿಸಲು ಅವರು ಕೈಗಾರಿಕಾ ಸಂಸ್ಥೆಗಳಿಗೆ ಕರೆ ನೀಡಿದರು. ಇಂತಹ ಪಾಲುದಾರಿಕೆಗಳು ಯುವಕರು ಪ್ರಾಯೋಗಿಕ ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡುವುದಲ್ಲದೆ, ಭವಿಷ್ಯದ ಪ್ರತಿಭೆಗಳನ್ನು ಗುರುತಿಸಲು ಮತ್ತು ಪೋಷಿಸಲು ಕೈಗಾರಿಕಾ ಕ್ಷೇತ್ರಕ್ಕೆ ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಸಿಐಐ , ಎಫ್ ಐ ಸಿಸಿಐ , ಅಸೋಚಾಮ್ , ನಾಸ್ಕಾಂ , ಪಿಎಚ್ ಡಿಸಿಸಿಐ , ಇಂಡಿಯಾ ಎಸ್ಎಂಇ ಫೋರಮ್ , ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ , ಐಪಿಎ , ಐಎಸ್ಪಿಎ , ಎಸ್ಐಎ , ಎನ್ಎಚ್ಆರ್ ಡಿಎನ್ , ಸಿಎಐಟಿ , ಡಬ್ಲ್ಯುಟಿಸಿ ಮುಂಬೈ ಮತ್ತು ಎಐಎಐ ಸೇರಿದಂತೆ ಪ್ರಮುಖ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಪ್ರಮುಖ ಸಿಎಸ್ಆರ್ ಸಂಸ್ಥೆಗಳು ಮೈ ಭಾರತ್ ಪರಿಸರ ವ್ಯವಸ್ಥೆಯ ಮೂಲಕ ಸ್ವಯಂಸೇವಕ ಸೇವೆ, ಕೌಶಲ್ಯ, ಇಂಟರ್ನ್ಶಿಪ್ ಮತ್ತು ಯುವಜನತೆಯ ತೊಡಗಿಸಿಕೊಳ್ಳುವಿಕೆಯನ್ನು ವಿಸ್ತರಿಸಲು ಸಹಯೋಗದ ಮಾದರಿಗಳ ಬಗ್ಗೆ ಚರ್ಚಿಸಿದವು.

ಸರ್ಕಾರ-ಉದ್ಯಮ ಪಾಲುದಾರಿಕೆಯನ್ನು ಬಲಪಡಿಸಲು, ಉದ್ಯಮದ ಪಾಲುದಾರರನ್ನು ಮೈ ಭಾರತ್ ಪ್ಲಾಟ್ಫಾರ್ಮಿಗೆ ಸೇರಿಸಲು ಮತ್ತು ಯುವಕರಿಗೆ ಅವಕಾಶಗಳನ್ನು ವಿಸ್ತರಿಸುವುದರ ಜೊತೆಗೆ 'ವಿಕಸಿತ ಭಾರತ @2047' ದೃಷ್ಟಿಕೋನಕ್ಕೆ ಕೊಡುಗೆ ನೀಡುವ ಪ್ರಬಲ ರಾಷ್ಟ್ರೀಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಜಂಟಿ ಬದ್ಧತೆಯೊಂದಿಗೆ ಸಮಾವೇಶವು ಮುಕ್ತಾಯಗೊಂಡಿತು.
******
(रिलीज़ आईडी: 2280941)
आगंतुक पटल : 5