ಕೃಷಿ ಸಚಿವಾಲಯ
ಎಲ್ ನಿನೊ ಆತಂಕದ ನಡುವೆ ಮುಂಗಾರು ಸಿದ್ಧತೆಗಳ ಪರಿಶೀಲನೆ ನಡೆಸಿದ ಕೇಂದ್ರ ಸರ್ಕಾರ; ರಾಜ್ಯಗಳೊಂದಿಗೆ ಶಿವರಾಜ್ ಸಿಂಗ್ ಚೌಹಾಣ್ ಉನ್ನತ ಮಟ್ಟದ ಸಭೆ
ದುರ್ಬಲ ಮುಂಗಾರು, ಬಲಿಷ್ಠ ಕಾರ್ಯತಂತ್ರ: ಸಂಕಷ್ಟಕ್ಕೆ ಸಿಲುಕಬಹುದಾದ 315 ಜಿಲ್ಲೆಗಳಿಗಾಗಿ ಕೇಂದ್ರದಿಂದ ವಿಶೇಷ ತುರ್ತು ಯೋಜನೆ ಜಾರಿ
“ನಾವು ಮುಂಚಿತವಾಗಿಯೇ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ, ಸಂಕಷ್ಟ ಬರುವವರೆಗೆ ಕಾಯುತ್ತಿಲ್ಲ”: ರೈತರಿಗೆ ಶಿವರಾಜ್ ಸಿಂಗ್ ಚೌಹಾಣ್ ಭರವಸೆ
ಎಲ್ ನಿನೊ ಸವಾಲು, ರೈತರೇ ಮೊದಲು: ಕೇಂದ್ರದಿಂದ ಬಹುಸ್ತರದ ಸಿದ್ಧತಾ ಕಾರ್ಯತಂತ್ರ ಪ್ರಕಟ
ಪ್ರತಿ ಹನಿಯೂ ಅಮೂಲ್ಯ: ಕೆರೆಗಳು, ಚೆಕ್ ಡ್ಯಾಂಗಳು ಮತ್ತು ಕೃಷಿ ಹೊಂಡಗಳ ಮೂಲಕ ಜಲ ಸಂರಕ್ಷಣೆಗೆ ಭಾರಿ ಒತ್ತು
ಕಡಿಮೆ ಅವಧಿಯ, ಕಡಿಮೆ ನೀರು ಬೇಡುವ ಬೆಳೆಗಳತ್ತ ಗಮನ; ದ್ವಿದಳ ಧಾನ್ಯಗಳು, ಸಿರಿಧಾನ್ಯಗಳು ಮತ್ತು ಎಣ್ಣೆಕಾಳುಗಳಿಗೆ ಆದ್ಯತೆ
ಬೀಜ, ರಸಗೊಬ್ಬರ ಮತ್ತು ಮೇವಿನ ದಾಸ್ತಾನು ಸುಭದ್ರ; ದುರ್ಬಲ ಮುಂಗಾರಿನ ನಡುವೆಯೂ ಕೃಷಿ ಪರಿಕರಗಳ ಕೊರತೆಯಿಲ್ಲ
ಎಲ್ ನಿನೊ ಪರಿಸ್ಥಿತಿಯಲ್ಲಿ ರೈತರಿಗೆ ಮೂರು ಪ್ರಮುಖ ರಕ್ಷಾ ಕವಚಗಳಾಗಲಿರುವ ಪಿ ಎಂ ಎಫ್ ಬಿ ವೈ, ಕೆಸಿಸಿ ಮತ್ತು ಪಿಎಂ-ಕಿಸಾನ್ ಯೋಜನೆಗಳು
प्रविष्टि तिथि:
23 JUN 2026 7:12PM by PIB Bengaluru
ಈ ವರ್ಷ ಎಲ್ ನಿನೊ ಪ್ರಭಾವ ಹಾಗೂ ದುರ್ಬಲ ಅಥವಾ ಅನಿಶ್ಚಿತ ಮುಂಗಾರು ಮಳೆಯಾಗುವ ಸಾಧ್ಯತೆ ಇರುವುದರಿಂದ, ಕೇಂದ್ರ ಸರ್ಕಾರವು ಮುಂಗಾರು ಹಂಗಾಮಿನ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ದೇಶಾದ್ಯಂತ ಇರುವ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ರಾಜ್ಯಗಳ ಕೃಷಿ ಸಚಿವರು, ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಐಸಿಎಆರ್, ಐಸಿಎಆರ್-ಸಿ ಆರ್ ಐ ಡಿ ಎ ಮತ್ತು ಭಾರತೀಯ ಹವಾಮಾನ ಇಲಾಖೆಯ ತಜ್ಞರೊಂದಿಗೆ ಉನ್ನತ ಮಟ್ಟದ ವರ್ಚುವಲ್ (ವಿಡಿಯೋ ಕಾನ್ಫರೆನ್ಸ್) ಸಭೆ ನಡೆಸಿದರು. ಯಾವುದೇ ಸವಾಲನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಅವರು ರೈತರಿಗೆ ಭರವಸೆ ನೀಡಿದರು.
ದುರ್ಬಲ ಮುಂಗಾರು ಪರಿಸ್ಥಿತಿ ಮತ್ತು ಅದರ ಸಂಭವನೀಯ ಪರಿಣಾಮ
ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀ ಚೌಹಾಣ್, ಈ ವರ್ಷ ನೈಋತ್ಯ ಮುಂಗಾರು ಮಾರುತಗಳು ಗಣನೀಯವಾಗಿ ತಡವಾಗಿದ್ದು, ಇದುವರೆಗೆ ವಾಡಿಕೆಗಿಂತ ಸುಮಾರು 43 ಪ್ರತಿಶತ ಕಡಿಮೆ ಮಳೆಯಾಗಿದೆ ಎಂದು ಹೇಳಿದರು. ಹವಾಮಾನ ಇಲಾಖೆಯ ಮುನ್ಸೂಚನೆಗಳ ಪ್ರಕಾರ, ಜುಲೈ 2 ಕ್ಕೆ ಕೊನೆಗೊಳ್ಳುವ ವಾರದವರೆಗೂ ಮಳೆ ದುರ್ಬಲವಾಗಿಯೇ ಉಳಿಯುವ ಸಾಧ್ಯತೆಯಿದೆ. ಇದು ಮುಂಗಾರು ಬೆಳೆಗಳ ಮೇಲೆ, ವಿಶೇಷವಾಗಿ ಕೃಷಿಗಾಗಿ ಸಂಪೂರ್ಣವಾಗಿ ಮುಂಗಾರು ಮಳೆಯನ್ನೇ ಆಶ್ರಯಿಸಿರುವ ಮಳೆ ಆಶ್ರಿತ ಪ್ರದೇಶಗಳ ಮೇಲೆ ನೇರ ಪರಿಣಾಮ ಬೀರಬಹುದು. ಈ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರವು ಕಳೆದ ಹಲವು ದಿನಗಳಿಂದ ಮುಂಚಿತವಾಗಿಯೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗುವವರೆಗೆ ಸರ್ಕಾರ ಕಾಯುತ್ತ ಕುಳಿತಿಲ್ಲ, ಬದಲಿಗೆ ಇದರ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ರೈತರ ಜೀವನೋಪಾಯವನ್ನು ರಕ್ಷಿಸಲು ವೈಜ್ಞಾನಿಕ ಯೋಜನೆ ಹಾಗೂ ತಳಮಟ್ಟದ ಸಿದ್ಧತೆಗಳನ್ನು ಮುಂಚಿತವಾಗಿಯೇ ಜಾರಿಗೆ ತರುತ್ತಿದೆ ಎಂದು ಶ್ರೀ ಚೌಹಾಣ್ ಹೇಳಿದರು.

ತೊಂದರೆಗೆ ಸಿಲುಕಬಹುದಾದ 315 ಜಿಲ್ಲೆಗಳ ಗುರುತಿಸುವಿಕೆ
ಕೃಷಿ ಸಚಿವಾಲಯ ಮತ್ತು ಐಸಿಎಆರ್ ಜಂಟಿಯಾಗಿ ವೈಜ್ಞಾನಿಕ ದತ್ತಾಂಶಗಳ ಆಧಾರದ ಮೇಲೆ ಕಡಿಮೆ ಮಳೆ ಮತ್ತು ಅಪೂರ್ಣ ನೀರಾವರಿ ಸೌಲಭ್ಯದಿಂದಾಗಿ ತೊಂದರೆಗೆ ಸಿಲುಕಬಹುದಾದ ಜಿಲ್ಲೆಗಳನ್ನು ಗುರುತಿಸಿವೆ ಎಂದು ಶ್ರೀ ಚೌಹಾಣ್ ತಿಳಿಸಿದರು. ದುರ್ಬಲ ಮುಂಗಾರು ಪರಿಸ್ಥಿತಿಯಿಂದ ತೊಂದರೆಗೊಳಗಾಗಬಹುದಾದ ಸುಮಾರು 315 ಜಿಲ್ಲೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ, ನೀರಾವರಿ ಸೌಲಭ್ಯವು 25 ಪ್ರತಿಶತಕ್ಕಿಂತ ಕಡಿಮೆ ಇರುವ 111 ಜಿಲ್ಲೆಗಳನ್ನು 'ಹೆಚ್ಚಿನ ಆದ್ಯತೆಯ') ವರ್ಗಕ್ಕೆ ಸೇರಿಸಲಾಗಿದೆ. ನೀರಾವರಿ ಸೌಲಭ್ಯವು 25 ರಿಂದ 50 ಪ್ರತಿಶತದಷ್ಟಿರುವ 76 ಜಿಲ್ಲೆಗಳನ್ನು 'ಮಧ್ಯಮ ಆದ್ಯತೆಯ' ವರ್ಗಕ್ಕೆ ಸೇರಿಸಲಾಗಿದ್ದರೆ, ಅಣೆಕಟ್ಟುಗಳು ಮತ್ತು ಇತರ ಮೂಲಗಳ ಮೂಲಕ ತುಲನಾತ್ಮಕವಾಗಿ ಉತ್ತಮ ನೀರಾವರಿ ಸೌಲಭ್ಯ ಹೊಂದಿರುವ 128 ಜಿಲ್ಲೆಗಳನ್ನು 'ಕಡಿಮೆ ಆದ್ಯತೆಯ' ವರ್ಗ ಎಂದು ವರ್ಗೀಕರಿಸಲಾಗಿದೆ. ಈ ಜಿಲ್ಲೆಗಳಲ್ಲಿ ಹೆಚ್ಚಿನವು ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಕರ್ನಾಟಕ, ಬಿಹಾರ, ಜಾರ್ಖಂಡ್, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾ ಸೇರಿದಂತೆ 12 ರಾಜ್ಯಗಳಲ್ಲಿವೆ. ಈ ರಾಜ್ಯಗಳ ಕೃಷಿ ಸಚಿವರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಸ್ಥಳೀಯ ಮಟ್ಟದಲ್ಲಿ ಸಿದ್ಧತೆಗಳನ್ನು ವೇಗಗೊಳಿಸಲು ಸೂಚಿಸಲಾಗಿದೆ.

ಜಿಲ್ಲಾ ಕೃಷಿ ತುರ್ತು ಯೋಜನೆಗಳು: ಮೊದಲ ರಕ್ಷಣಾ ಕವಚ
ಐಸಿಎಆರ್ ಮತ್ತು ಐಸಿಎಆರ್-ಸಿ ಆರ್ ಐ ಡಿ ಎ ಸಂಸ್ಥೆಗಳು ಎಲ್ಲಾ ಜಿಲ್ಲೆಗಳಿಗಾಗಿ 'ಜಿಲ್ಲಾ ಕೃಷಿ ತುರ್ತು ಯೋಜನೆಗಳನ್ನು' ಸಿದ್ಧಪಡಿಸಿವೆ ಎಂದು ಶ್ರೀ ಚೌಹಾಣ್ ಮಾಹಿತಿ ನೀಡಿದರು. ಈ ಯೋಜನೆಗಳು ಆಯಾ ಜಿಲ್ಲೆಯ ಹವಾಮಾನ ಪರಿಸ್ಥಿತಿಗಳು, ಬೆಳೆ ಪದ್ಧತಿಗಳು, ಜಲಸಂಪನ್ಮೂಲಗಳು ಮತ್ತು ಅಪಾಯದ ಅಂಶಗಳನ್ನು ಒಳಗೊಂಡಿವೆ. ಕಡಿಮೆ ಮಳೆಯ ಪರಿಸ್ಥಿತಿಯಲ್ಲಿ ಸೂಕ್ತವಾದ ಪರ್ಯಾಯ ಬೆಳೆಗಳು, ಬೆಳೆ ವೈವಿಧ್ಯೀಕರಣದ ತಂತ್ರಗಳು, ಲಭ್ಯವಿರುವ ಜಲಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಅಪಾಯಗಳನ್ನು ಕಡಿಮೆ ಮಾಡಲು ಹೆಚ್ಚುವರಿ ಆದಾಯದ ಅವಕಾಶಗಳಂತಹ ಕ್ರಮಗಳನ್ನು ಇವು ಶಿಫಾರಸು ಮಾಡುತ್ತವೆ. ಈ ತುರ್ತು ಯೋಜನೆಗಳು ಕೇವಲ ಕಡತಗಳಿಗಷ್ಟೇ ಸೀಮಿತವಾಗದೆ, ಜಮೀನಿನಲ್ಲಿ ಕಾರ್ಯರೂಪಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಅವರು ರಾಜ್ಯ ಮತ್ತು ಜಿಲ್ಲಾ ಆಡಳಿತಗಳಿಗೆ ಸೂಚಿಸಿದರು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಈ ಯೋಜನೆಗಳನ್ನು ಪರಿಶೀಲಿಸಿ, ನವೀಕರಿಸಿ ಮತ್ತು ಅಗತ್ಯವಿದ್ದಾಗ ತಕ್ಷಣವೇ ಜಾರಿಗೆ ತರಲು ಸಿದ್ಧವಾಗಿಟ್ಟುಕೊಳ್ಳಬೇಕು. ಯಾವುದೇ ತುರ್ತು ಯೋಜನೆಯ ಯಶಸ್ಸು ತಳಮಟ್ಟದಲ್ಲಿ ಅದನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಒತ್ತಿಹೇಳಿದ ಅವರು, ಜಿಲ್ಲಾ ಆಡಳಿತಗಳು ಸಂಪೂರ್ಣ ಬದ್ಧತೆಯಿಂದ ಇದನ್ನು ನಿರ್ವಹಿಸಬೇಕು ಎಂದು ಕೋರಿದರು.
ಜಲ ಸಂರಕ್ಷಣೆ ಮತ್ತು ನೀರಾವರಿ ನಿರ್ವಹಣೆ
ದುರ್ಬಲ ಮುಂಗಾರಿನ ಸಾಧ್ಯತೆಯ ನಡುವೆ ಜಲ ಸಂರಕ್ಷಣೆಗೆ ಗರಿಷ್ಠ ಆದ್ಯತೆ ನೀಡಲಾಗಿದೆ. ನೀರಿನ ಪ್ರತಿ ಹನಿಯೂ ಅಮೂಲ್ಯವಾಗಿದ್ದು, ಅದೇ ಉದ್ದೇಶದಿಂದ ಯೋಜನೆ ರೂಪಿಸಲಾಗುತ್ತಿದೆ ಎಂದು ಶ್ರೀ ಚೌಹಾಣ್ ತಿಳಿಸಿದರು. ಕೆರೆಗಳು, ಜಲಾಶಯಗಳು, ತೊರೆಗಳು, ಕೃಷಿ ಹೊಂಡಗಳು, ಚೆಕ್ ಡ್ಯಾಂಗಳು, ಸ್ಟಾಪ್ ಡ್ಯಾಂಗಳು ಮತ್ತು ತಾತ್ಕಾಲಿಕ ಬದು ನಿರ್ಮಾಣ ರಚನೆಗಳನ್ನು ತಕ್ಷಣವೇ ದುರಸ್ತಿ ಮಾಡಲು ಮತ್ತು ಬಲಪಡಿಸಲು ಅವರು ನಿರ್ದೇಶನ ನೀಡಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಮುಂಬರುವ ವಿಬಿ- ಜಿ ರಾಮ್ ಜಿ ಯಂತಹ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ಜಲ ಸಂರಕ್ಷಣೆ ಮತ್ತು ನೀರು ಕೊಯ್ಲು ಕೆಲಸಗಳಿಗೆ ಆದ್ಯತೆ ನೀಡಬೇಕು, ಇದರಿಂದ ಉದ್ಯೋಗ ಸೃಷ್ಟಿ ಮತ್ತು ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಳ ಎರಡೂ ಒಟ್ಟೊಟ್ಟಿಗೆ ಸಾಗಬಹುದು. ಮಳೆಯ ಕೊರತೆಯಿರುವ ಸೂಕ್ಷ್ಮ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಲು ಮತ್ತು ಅಗತ್ಯವಿದ್ದರೆ ನೀರು ಹೆಚ್ಚಿರುವ ಪ್ರದೇಶಗಳಿಂದ ಕೊರತೆಯಿರುವ ಪ್ರದೇಶಗಳಿಗೆ ನೀರನ್ನು ಸಾಗಿಸಲು ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಸಭೆಯಲ್ಲಿ ನದಿ ಪಾತ್ರಗಳ ಆಧಾರದ ಮೇಲೆ ಜಲಾಶಯಗಳ ನೀರಿನ ಸಂಗ್ರಹಣೆಯ ಸ್ಥಿತಿಗತಿಯನ್ನೂ ಪರಿಶೀಲಿಸಲಾಯಿತು. ಕೆಲವು ಜಲಾಶಯಗಳಲ್ಲಿ ನೀರಿನ ಮಟ್ಟ ಸಾಮಾನ್ಯಕ್ಕಿಂತ ಹೆಚ್ಚಿದ್ದರೆ, ಇನ್ನು ಕೆಲವು ಕಡೆಗಳಲ್ಲಿ 20 ರಿಂದ 60 ಪ್ರತಿಶತದಷ್ಟು ಕೊರತೆಯಿದೆ. ಇದಕ್ಕೆ ಅನುಗುಣವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯಗಳಿಗೆ ಸೂಚಿಸಲಾಗಿದೆ.

ಬೆಳೆ ಕಾರ್ಯತಂತ್ರ: ಕಡಿಮೆ ಅವಧಿಯ, ಕಡಿಮೆ ನೀರು ಬೇಡುವ ಮತ್ತು ವೈವಿಧ್ಯಮಯ ಬೆಳೆಗಳು
ಮಳೆ ಆಶ್ರಿತ ಪ್ರದೇಶಗಳಲ್ಲಿ ಬೆಳೆ ಕಾರ್ಯತಂತ್ರವನ್ನು ಬದಲಾಯಿಸುವುದು ಇಂದಿನ ಅಗತ್ಯವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಕಡಿಮೆ ಅವಧಿಯ ಬೆಳೆ ತಳಿಗಳನ್ನು ಮತ್ತು ಕಡಿಮೆ ನೀರಿನ ಅವಶ್ಯಕತೆಯೊಂದಿಗೆ ಹೆಚ್ಚಿನ ಇಳುವರಿ ನೀಡುವ ಬೆಳೆಗಳನ್ನು ಉತ್ತೇಜಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ಒಂದೇ ಬೆಳೆಯನ್ನು ನಂಬಿಕೊಳ್ಳುವುದನ್ನು ಕಡಿಮೆ ಮಾಡಲು ಮತ್ತು ಅಪಾಯವನ್ನು ಹಂಚಿಕೊಳ್ಳಲು ಬೆಳೆ ವೈವಿಧ್ಯೀಕರಣವನ್ನು ಅಳವಡಿಸಿಕೊಳ್ಳಲು ರೈತರನ್ನು ಕರೆ ನೀಡಲಾಗಿದೆ. ಒಂದು ವೇಳೆ ಒಂದು ಬೆಳೆ ನಷ್ಟವಾದರೂ ರೈತರು ಇತರ ಬೆಳೆಗಳಿಂದ ಆದಾಯ ಪಡೆಯುವಂತಾಗಲು ಮಿಶ್ರ ಬೆಳೆ ಮತ್ತು ಅಂತರ ಬೆಳೆ ಪದ್ಧತಿಗಳನ್ನು ಉತ್ತೇಜಿಸಲಾಗುತ್ತಿದೆ. ಸೀಮಿತ ತೇವಾಂಶದ ಪರಿಸ್ಥಿತಿಯಲ್ಲಿಯೂ ತುಲನಾತ್ಮಕವಾಗಿ ಉತ್ತಮವಾಗಿ ಬೆಳೆಯುವ ದ್ವಿದಳ ಧಾನ್ಯಗಳು, ಶ್ರೀ ಅನ್ನ (ಸಿರಿಧಾನ್ಯಗಳು) ಮತ್ತು ಎಣ್ಣೆಕಾಳುಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಸಾಮಾನ್ಯ ಬಿತ್ತನೆ ಅವಧಿ ಮತ್ತು ಮಳೆ ಬರುವ ಸಮಯದ ನಡುವೆ ಹೆಚ್ಚಿನ ದಿನಗಳ ಅಂತರವಿದ್ದರೆ ತಕ್ಷಣವೇ ಪರ್ಯಾಯ ಬೆಳೆಗಳ ಆಯ್ಕೆಗೆ ಬದಲಾಗಲು ರಾಜ್ಯಗಳಿಗೆ ಸೂಚಿಸಲಾಗಿದೆ. "ನಾವು ಹೊಲಗಳನ್ನು ಖಾಲಿ ಬಿಡುವುದಿಲ್ಲ. ಯಾವುದೇ ಬೆಳೆ ಬೆಳೆಯಲು ಅಗತ್ಯವಿರುವಷ್ಟು ಮಳೆಯಾದರೂ ಇದ್ದೇ ಇರುತ್ತದೆ ಮತ್ತು ನಮ್ಮ ಸಿದ್ಧತೆಗಳು ಅದಕ್ಕೆ ತಕ್ಕಂತೆ ಇವೆ" ಎಂದು ಶ್ರೀ ಚೌಹಾಣ್ ಹೇಳಿದರು.
ಬೀಜಗಳು, ರಸಗೊಬ್ಬರಗಳು ಮತ್ತು ಇತರ ಪರಿಕರಗಳ ಮುಂಗಡ ವ್ಯವಸ್ಥೆ
ಕೃಷಿ ಪರಿಕರಗಳ ಲಭ್ಯತೆಯ ಬಗ್ಗೆ ವಿವರ ನೀಡಿದ ಶ್ರೀ ಚೌಹಾಣ್, ಮುಂಗಾರು ಹಂಗಾಮಿಗೆ ಅಗತ್ಯವಿರುವಷ್ಟು ಬೀಜಗಳ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ ಎಂದು ಹೇಳಿದರು. ತೊಂದರೆಗೆ ಸಿಲುಕಬಹುದಾದ ಜಿಲ್ಲೆಗಳಿಗಾಗಿ ಹೆಚ್ಚುವರಿ ಬೀಜದ ದಾಸ್ತಾನುಗಳನ್ನು ಕಾಯ್ದಿರಿಸಲಾಗಿದೆ. ಮಳೆ ಬಾರದೆ ಮರುಬಿತ್ತನೆ ಅನಿವಾರ್ಯವಾಗಬಹುದಾದ ಜಿಲ್ಲೆಗಳಿಗಾಗಿ ಸುಮಾರು ಒಂದು ಪ್ರತಿಶತ ಹೆಚ್ಚುವರಿ ಬೀಜದ ದಾಸ್ತಾನನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ರಸಗೊಬ್ಬರ ಸಚಿವಾಲಯದ ವರದಿಗಳ ಪ್ರಕಾರ, ಯೂರಿಯಾ, ಡಿಎಪಿ, ಎಂಒಪಿ, ಎನ್ ಪಿ ಕೆ ಮತ್ತು ಎಸ್ ಎಸ್ ಪಿ ಸೇರಿದಂತೆ ಎಲ್ಲಾ ಪ್ರಮುಖ ರಸಗೊಬ್ಬರಗಳ ಲಭ್ಯತೆಯು ಮುಂಗಾರು ಹಂಗಾಮಿಗೆ ತೃಪ್ತಿಕರವಾಗಿದೆ. ದುರ್ಬಲ ಮುಂಗಾರು ಪರಿಸ್ಥಿತಿ ಇರುವ ಜಿಲ್ಲೆಗಳಲ್ಲಿ ಗೊಬ್ಬರಗಳು ಸಕಾಲದಲ್ಲಿ ವಿತರಣೆಯಾಗುವಂತೆ ನೋಡಿಕೊಳ್ಳಲು ಪ್ರತ್ಯೇಕ ಉಸ್ತುವಾರಿ ವ್ಯವಸ್ಥೆ ಮಾಡಲಾಗಿದೆ, ಇದರಿಂದ ಹವಾಮಾನ ಪರಿಸ್ಥಿತಿ ಅನುಕೂಲಕರವಾದ ತಕ್ಷಣ ರೈತರು ಬಿತ್ತನೆ ಮಾಡಬಹುದು. ಒಟ್ಟಾರೆಯಾಗಿ 75 ರಿಂದ 100 ಮಿಲಿಮೀಟರ್ ನಷ್ಟು ಮಳೆಯಾಗಿ, ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಬಂದ ನಂತರವೇ ಬಿತ್ತನೆ ಮಾಡಬೇಕು ಎಂದು ಸಚಿವರು ಒತ್ತಿಹೇಳಿದರು. ಲಘು ಮಳೆಯಾದ ತಕ್ಷಣ ಆತುರದಿಂದ ಬಿತ್ತನೆ ಮಾಡಿದರೆ ಬೀಜಗಳು ಹಾಳಾಗುವ ಮತ್ತು ಮರುಬಿತ್ತನೆ ಮಾಡಬೇಕಾದ ಅಪಾಯ ಹೆಚ್ಚಿರುತ್ತದೆ.

ಕೆವಿಕೆಗಳು ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ವೈಜ್ಞಾನಿಕ ಸಲಹೆಗಳು
ಸಕಾಲದಲ್ಲಿ ವೈಜ್ಞಾನಿಕ ಸಲಹೆಗಳನ್ನು ನೀಡುವುದರ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಶ್ರೀ ಚೌಹಾಣ್, ದೇಶದ 731 ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ತಾಂತ್ರಿಕ ಮಾರ್ಗದರ್ಶನ ಮತ್ತು ಬೆಳೆ ನಿರ್ವಹಣೆಯ ಮಾಹಿತಿಯನ್ನು ತಲುಪಿಸುವ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು. ಎಲ್ ನಿನೊ ಮತ್ತು ದುರ್ಬಲ ಮುಂಗಾರು ಪರಿಸ್ಥಿತಿಯ ಸಂಭವನೀಯ ಪರಿಣಾಮಗಳ ಕುರಿತು ರೈತರಿಗೆ ನಿರಂತರವಾಗಿ ಮಾರ್ಗದರ್ಶನ ನೀಡಲು ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ-ಹವಾಮಾನ ಸಲಹಾ ಘಟಕಗಳಿಗೆ ಜಿಲ್ಲೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಸೂಚಿಸಲಾಗಿದೆ. ಹವಾಮಾನ ಸಲಹೆಗಳು, ಎಸ್ ಎಮ್ ಎಸ್ ಮತ್ತು ವಾಟ್ಸಾಪ್ ಸಂದೇಶಗಳು, ಕಾಲ್ ಸೆಂಟರ್, ರೇಡಿಯೋ ಮತ್ತು ಟೆಲಿವಿಷನ್ ಪ್ರಸಾರಗಳು ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮಾಹಿತಿ ಪ್ರಸಾರವನ್ನು ಬಲಪಡಿಸಲಾಗುವುದು. ಪ್ರತಿ ರೈತನಿಗೂ ಸಕಾಲದಲ್ಲಿ ಮಾಹಿತಿ ಮತ್ತು ವೈಜ್ಞಾನಿಕ ಮಾರ್ಗದರ್ಶನ ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ, ಇದರಿಂದ ಅವರು ಬಿತ್ತನೆ, ಬೆಳೆ ಬದಲಾವಣೆ ಮತ್ತು ಪರಿಕರಗಳ ಬಳಕೆಯ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.
ಜಾನುವಾರು ಮತ್ತು ಮೇವು ನಿರ್ವಹಣೆ
ಮುಂಗಾರು ತೀವ್ರವಾಗಿ ದುರ್ಬಲಗೊಂಡರೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಬಹುದು ಎಂದು ಶ್ರೀ ಚೌಹಾಣ್ ಹೇಳಿದರು. ಈ ಪರಿಸ್ಥಿತಿಯನ್ನು ನಿಭಾಯಿಸಲು, ಮೇವು ಹೆಚ್ಚುವರಿ ಇರುವ ಪ್ರದೇಶಗಳಿಂದ ಕೊರತೆಯಿರುವ ಪ್ರದೇಶಗಳಿಗೆ ಮೇವನ್ನು ಸಾಗಿಸಲು ಮುಂಗಡ ಪೂರೈಕೆ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಜಾನುವಾರು ಮಾಲೀಕರಿಗೆ ಹಠಾತ್ ತೊಂದರೆಯಾಗದಂತೆ ತಡೆಯಲು ಮೇವು ದಾಸ್ತಾನು, ಪರ್ಯಾಯ ಮೇವಿನ ಮೂಲಗಳು ಮತ್ತು ಪೂರೈಕೆ ಸರಪಳಿಗಳನ್ನು ಮುಂಚಿತವಾಗಿಯೇ ಯೋಜಿಸಲಾಗುತ್ತಿದೆ. ಮೇವಿನ ಕಾಳಸಂತೆ ಮತ್ತು ಅಕ್ರಮ ದಾಸ್ತಾನು ತಡೆಯಲು ಕೇಂದ್ರ ಮತ್ತು ರಾಜ್ಯಗಳು ಜಂಟಿಯಾಗಿ ಕಾವಲು ವ್ಯವಸ್ಥೆಯನ್ನು ಬಲಪಡಿಸಲಿವೆ ಎಂದು ಅವರು ಹೇಳಿದರು.

ರೈತರಿಗೆ ಆರ್ಥಿಕ ಭದ್ರತೆ: ಪಿಎಂ ಎಫ್ ಬಿ ವೈ. ಕೆಸಿಸಿ ಮತ್ತು ಪಿಎಂ-ಕಿಸಾನ್
ಸಿದ್ಧತೆಗಳು ಕೇವಲ ಬೆಳೆಗಳು ಮತ್ತು ನೀರಿಗೆ ಮಾತ್ರ ಸೀಮಿತವಾಗಿರಬಾರದು, ರೈತರ ಆರ್ಥಿಕ ಭದ್ರತೆಯೂ ಅಷ್ಟೇ ಮುಖ್ಯ ಎಂದು ಕೇಂದ್ರ ಸಚಿವರು ಒತ್ತಿಹೇಳಿದರು. ಬೆಳೆ ನಷ್ಟದ ಸಂದರ್ಭದಲ್ಲಿ ಸಕಾಲದಲ್ಲಿ ಪರಿಹಾರ ಸಿಗುವುದನ್ನು ಖಚಿತಪಡಿಸಿಕೊಳ್ಳಲು, ತೊಂದರೆಗೊಳಗಾಗಬಹುದಾದ ಜಿಲ್ಲೆಗಳಲ್ಲಿ 'ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ' (ಪಿಎಂ ಎಫ್ ಬಿ ವೈ) ಅಡಿಯಲ್ಲಿ ಹೆಚ್ಚಿನ ರೈತರನ್ನು ನೋಂದಾಯಿಸಲು ವಿಶೇಷ ಗಮನ ಹರಿಸಲಾಗುತ್ತಿದೆ. ಅರ್ಹ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು (ಕೆಸಿಸಿ) ವಿತರಿಸುವುದನ್ನು ವೇಗಗೊಳಿಸಲು ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ, ಇದರಿಂದ ರೈತರು ಬೀಜ ನಷ್ಟ, ಮರುಬಿತ್ತನೆ ಮತ್ತು ಇತರ ಕೃಷಿ ಹೂಡಿಕೆಗಳನ್ನು ನಿಭಾಯಿಸಲು ಸಾಕಷ್ಟು ಹಣಕಾಸಿನ ಸಂಪನ್ಮೂಲವನ್ನು ಹೊಂದಬಹುದು. ಇತ್ತೀಚೆಗೆ ಬಿಡುಗಡೆಯಾದ ಪಿಎಂ-ಕಿಸಾನ್ ಯೋಜನೆಯ ಕಂತನ್ನು ಉಲ್ಲೇಖಿಸಿದ ಶ್ರೀ ಚೌಹಾಣ್, ರೈತರು ಈ ಹಣವನ್ನು ಬೀಜಗಳು, ರಸಗೊಬ್ಬರಗಳು ಮತ್ತು ಇತರ ಅಗತ್ಯ ಕೃಷಿ ಪರಿಕರಗಳಿಗಾಗಿ ಬಳಸಿಕೊಳ್ಳಬಹುದು ಎಂದು ಹೇಳಿದರು. ಪಿಎಂ ಎಫ್ ಬಿ ವೈ, ಕೆಸಿಸಿ ಮತ್ತು ಪಿಎಂ-ಕಿಸಾನ್ ಈ ಮೂರೂ ಯೋಜನೆಗಳು ಒಟ್ಟಾಗಿ ಎಲ್ ನಿನೊದಂತಹ ಸವಾಲುಗಳ ಸಮಯದಲ್ಲಿ ರೈತರಿಗೆ ಸಮಗ್ರ ಬೆಂಬಲ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದರು.

ಬಹುಸ್ತರದ ಸಮನ್ವಯ ಮತ್ತು ಉಸ್ತುವಾರಿ ವ್ಯವಸ್ಥೆ
ತುರ್ತು ಕ್ರಮಗಳ ಯಶಸ್ಸು ಅಂತಿಮವಾಗಿ ಜಿಲ್ಲಾ ಮಟ್ಟದ ಅನುಷ್ಠಾನದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಶ್ರೀ ಚೌಹಾಣ್ ಹೇಳಿದರು. ಅದಕ್ಕೆ ಅನುಗುಣವಾಗಿ ಕೇಂದ್ರ, ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲಿ ಸ್ಪಷ್ಟವಾದ ಜವಾಬ್ದಾರಿಗಳೊಂದಿಗೆ ಬಹುಸ್ತರದ ಸಮನ್ವಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆಗಳು, ಜಲಸಂಪನ್ಮೂಲ ಇಲಾಖೆಗಳು, ಗ್ರಾಮೀಣಾಭಿವೃದ್ಧಿ ಇಲಾಖೆಗಳು, ಪಶುಸಂಗೋಪನೆ ಇಲಾಖೆಗಳು, ಕೆವಿಕೆಗಳು, ಆತ್ಮ (ಎ ಟಿ ಎಂ ಎ) ಮತ್ತು ಇತರ ಸಂಸ್ಥೆಗಳ ನಡುವೆ ನಿಯಮಿತ ಸಭೆಗಳು ಮತ್ತು ತಕ್ಷಣದ ದತ್ತಾಂಶ ಹಂಚಿಕೆ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ, ಮುಂಗಾರಿನ ಪ್ರಗತಿ, ಬೆಳೆ ಬಿತ್ತನೆ, ಬೆಳೆಗಳ ಸ್ಥಿತಿ, ಪರಿಕರಗಳ ಪೂರೈಕೆ ಮತ್ತು ಮಾರುಕಟ್ಟೆ ಸೂಚಕಗಳನ್ನು ನಿರಂತರವಾಗಿ ವಿಶ್ಲೇಷಿಸಲು ನವದೆಹಲಿಯಲ್ಲಿ 'ಎಲ್ ನಿನೊ ಮಾನಿಟರಿಂಗ್ ಸೆಲ್' ಮತ್ತು 'ಕ್ರಾಪ್ ವೆದರ್ ವಾಚ್ ಗ್ರೂಪ್' ಅನ್ನು ರಚಿಸಲಾಗಿದೆ. ಕೇಂದ್ರದೊಂದಿಗೆ ಸಮನ್ವಯ ಸಾಧಿಸಲು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲು ಮತ್ತು ನೋಡಲ್ ಅಧಿಕಾರಿಗಳನ್ನು ನೇಮಿಸಲು ರಾಜ್ಯಗಳಿಗೂ ಸೂಚಿಸಲಾಗಿದೆ. ಹೆಚ್ಚಿನ ರಾಜ್ಯಗಳು ಈಗಾಗಲೇ ತಮ್ಮ ನೋಡಲ್ ಅಧಿಕಾರಿಗಳನ್ನು ನೇಮಿಸಿವೆ. ಪ್ರತಿ ವಾರ ಕಾರ್ಯದರ್ಶಿ ಮಟ್ಟದ ಪರಿಶೀಲನೆಗಳು ನಡೆಯುತ್ತಿದ್ದು, ತಾವೇ ಖುದ್ದಾಗಿ ಪ್ರತಿ ಮಂಗಳವಾರ ಎಲ್ ನಿನೊ ಪರಿಸ್ಥಿತಿಯನ್ನು ಪರಿಶೀಲಿಸುತ್ತಿರುವುದಾಗಿ ಸಚಿವರು ತಿಳಿಸಿದರು.
ಉತ್ಪಾದನಾ ಗುರಿಗಳು, ದಾಸ್ತಾನು ಮತ್ತು ಆಹಾರ ಭದ್ರತೆ
ಭತ್ತ, ಜೋಳ ಮತ್ತು ಒಟ್ಟು ಆಹಾರ ಧಾನ್ಯಗಳ ಉತ್ಪಾದನೆ ಸೇರಿದಂತೆ ಮುಂಗಾರು 2025 ಕ್ಕೆ ನಿಗದಿಪಡಿಸಲಾಗಿದ್ದ ಹಲವಾರು ಪ್ರಮುಖ ಉತ್ಪಾದನಾ ಗುರಿಗಳನ್ನು ಈಗಾಗಲೇ ಸಾಧಿಸಲಾಗಿದೆ ಅಥವಾ ಮೀರಲಾಗಿದೆ. ಮುಂಗಾರು 2026 ಕ್ಕಾಗಿ, ಮುಂಗಾರು ಮುನ್ಸೂಚನೆಗಳು, ಕನಿಷ್ಠ ಬೆಂಬಲ ಬೆಲೆ, ಬೇಡಿಕೆಯ ಟ್ರೆಂಡ್, ಹಿಂದಿನ ಸಾಧನೆ ಮತ್ತು ಚಾಲ್ತಿಯಲ್ಲಿರುವ ಸರ್ಕಾರಿ ಯೋಜನೆಗಳನ್ನು ಪರಿಗಣನೆಗೆ ತೆಗೆದುಕೊಂಡು ಸುಮಾರು 176 ಮಿಲಿಯನ್ ಟನ್ ಗಳಷ್ಟು ಆಹಾರ ಧಾನ್ಯ ಉತ್ಪಾದನೆಯ ಗುರಿಯನ್ನು ನಿಗದಿಪಡಿಸಲಾಗಿದೆ. ಅಕ್ಕಿ ಮತ್ತು ಗೋಧಿಯ ಬಫರ್ ಸ್ಟಾಕ್ (ತುರ್ತು ದಾಸ್ತಾನು) ಉತ್ತಮ ಸ್ಥಿತಿಯಲ್ಲಿದೆ, ಆದ್ದರಿಂದ ದುರ್ಬಲ ಮುಂಗಾರಿನ ಆತಂಕಗಳ ನಡುವೆಯೂ ದೇಶದ ಆಹಾರ ಭದ್ರತೆಗೆ ಯಾವುದೇ ತಕ್ಷಣದ ಭೀತಿಯಿಲ್ಲ ಎಂದು ಸಚಿವರು ಹೇಳಿದರು.
ರೈತರಿಗೆ ಸಂದೇಶ: ಸಿದ್ಧರಾಗಿರಿ, ಆತಂಕ ಪಡಬೇಡಿ
ನೇರವಾಗಿ ರೈತರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ದುರ್ಬಲ ಮುಂಗಾರಿನ ಸಾಧ್ಯತೆಯಿದ್ದರೂ, ಯಾವುದೇ ಸವಾಲನ್ನು ಸಾಮೂಹಿಕವಾಗಿ ಎದುರಿಸಲು ದೇಶವು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದರು. "ಯಾರೂ ಆತಂಕ ಪಡುವ ಅಗತ್ಯವಿಲ್ಲ. ನಮಗೆ ಬೇಕಾಗಿರುವುದು ಸಿದ್ಧತೆ ಮತ್ತು ಸಾಮೂಹಿಕ ಪ್ರಯತ್ನ. ಕೇಂದ್ರ ಮತ್ತು ರಾಜ್ಯಗಳು, ವೈಜ್ಞಾನಿಕ ಸಂಸ್ಥೆಗಳು, ಜಿಲ್ಲಾ ಆಡಳಿತಗಳು ಮತ್ತು ರೈತರು ಸಮನ್ವಯದಿಂದ ಕೆಲಸ ಮಾಡಿದರೆ, ಎಲ್ ನಿನೊ ಒಡ್ಡುವ ಸವಾಲನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಬಹುದು. ಅಲ್ಲಿ ಜಲ ಸಂರಕ್ಷಣೆ, ಬೆಳೆ ವೈವಿಧ್ಯೀಕರಣ, ವೈವಿಧ್ಯಮಯ ವೈಜ್ಞಾನಿಕ ಸಲಹೆಗಳು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳು ಒಟ್ಟಾಗಿ ರೈತರಿಗೆ ರಕ್ಷಣಾ ಕವಚವನ್ನು ಒದಗಿಸುತ್ತವೆ" ಎಂದು ಅವರು ಹೇಳಿದರು. ಎಲ್ಲಾ ಪಾಲುದಾರರ ಸಾಮೂಹಿಕ ಪ್ರಯತ್ನಗಳ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಶ್ರೀ ಚೌಹಾಣ್, ಭಾರತದ ಕೃಷಿ, ಜಾನುವಾರು ಮತ್ತು ಗ್ರಾಮೀಣ ಆರ್ಥಿಕತೆಯನ್ನು ದೊಡ್ಡ ಅಡಚಣೆಗಳಿಂದ ರಕ್ಷಿಸಬಹುದು ಮತ್ತು ಸಾಧ್ಯವಿರುವ ಎಲ್ಲ ಮಾರ್ಗಗಳ ಮೂಲಕ ರೈತರ ಜೀವನೋಪಾಯವನ್ನು ಬಲಪಡಿಸಬಹುದು ಎಂದು ಹೇಳಿದರು.
*****
(रिलीज़ आईडी: 2277292)
आगंतुक पटल : 12