ಸಹಕಾರ ಸಚಿವಾಲಯ
azadi ka amrit mahotsav

ಸಹಕಾರಿ ಬ್ಯಾಂಕಿಂಗ್, ಸಾವಯವ ಉತ್ಪನ್ನಗಳು ಮತ್ತು ಸಹಕಾರಿ ರಫ್ತುಗಳನ್ನು ಬಲಪಡಿಸಲು ಸಿದ್ಧಪಡಿಸಲಾದ ರಾಷ್ಟ್ರೀಯ ಮಾರ್ಗಸೂಚಿಯನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಪರಿಶೀಲಿಸಿದರು


ಸಹಕಾರಿ ಬ್ಯಾಂಕುಗಳು ಹಂಚಿಕೆಯ ಡಿಜಿಟಲ್ ವೇದಿಕೆ, ಸೈಬರ್ ಭದ್ರತಾ ವ್ಯವಸ್ಥೆ ಮತ್ತು ಸಾಮಾನ್ಯ ಸೇವೆಗಳನ್ನು ಆದಷ್ಟು ಬೇಗ ಅಳವಡಿಸಿಕೊಳ್ಳಬೇಕು

ಗ್ರಾಮೀಣ ಸಹಕಾರಿ ಬ್ಯಾಂಕುಗಳು ‘ಸಹಕಾರ್ ಸಾರಥಿ’ಯೊಂದಿಗೆ ಸಂಯೋಜನೆಗೊಳ್ಳಬೇಕು, ಮತ್ತು ನಗರ ಸಹಕಾರಿ ಬ್ಯಾಂಕುಗಳು ಎನ್ ಯು ಸಿ ಎಫ್ ಡಿ ಸಿ ಯೊಂದಿಗೆ ಜೋಡಣೆಯಾಗಬೇಕು

MuleHunter.AI ಅನ್ನು I4C ಯೊಂದಿಗೆ ಸಂಯೋಜಿಸುವುದರಿಂದ ಸಹಕಾರಿ ಬ್ಯಾಂಕುಗಳ ವಂಚನೆ ಅಪಾಯ ನಿರ್ವಹಣೆ ಮತ್ತು ಸೈಬರ್ ಭದ್ರತಾ ಸನ್ನದ್ಧತೆ ಬಲಗೊಳ್ಳಲಿದೆ

ಸಹಕಾರ್ ಸಾರಥಿ ಸಂಸ್ಥೆಯು AePS ಸೇವೆಗಳನ್ನು ಪ್ರಾರಂಭಿಸಿದೆ; ಆಯ್ದ ಸಹಕಾರಿ ಬ್ಯಾಂಕುಗಳಲ್ಲಿ ಇ-ಕೆವೈಸಿ ಈಗ ಕಾರ್ಯನಿರ್ವಹಿಸುತ್ತಿದ್ದು, ಆಗಸ್ಟ್ 2026 ರ ವೇಳೆಗೆ 100 ಸಹಕಾರಿ ಬ್ಯಾಂಕುಗಳನ್ನು ಒಳಗೊಳ್ಳುವ ಗುರಿ ಹೊಂದಲಾಗಿದೆ

ಎನ್ ಯು ಸಿ ಎಫ್ ಡಿ ಸಿ ಸಂಸ್ಥೆಯು ಎಲ್ಲಾ ನಗರ ಸಹಕಾರಿ ಬ್ಯಾಂಕುಗಳನ್ನು ಒಂದು ಸಾಮಾನ್ಯ ವೇದಿಕೆಯಡಿ ತರಲು ಕೆಲಸ ಮಾಡುತ್ತಿದ್ದು, ತಾಂತ್ರಿಕ ಪರಿಹಾರಗಳು ಮತ್ತು ಸಾಂಸ್ಥಿಕ ಬೆಂಬಲವನ್ನು ನೀಡುತ್ತದೆ

ಎನ್‌ ಸಿ ಒ ಎಲ್‌ ಸಂಸ್ಥೆಯು ಸಾವಯವ ರೈತರಿಂದ ಖರೀದಿಯನ್ನು ಹೆಚ್ಚಿಸಲಿದೆ ಮತ್ತು ತಪಾಸಣೆ, ಪ್ರಮಾಣೀಕರಣ ಹಾಗೂ ಮಾರುಕಟ್ಟೆ ಸಂಪರ್ಕಗಳನ್ನು ಬಲಪಡಿಸಲಿದೆ; ಅದೇ ಸಮಯದಲ್ಲಿ ಎನ್‌ ಸಿ ಇ ಎಲ್‌ ಸಂಸ್ಥೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಸಹಕಾರಿ ಉತ್ಪನ್ನಗಳ ವ್ಯಾಪ್ತಿಯನ್ನು ವಿಸ್ತರಿಸುತ್ತದೆ

ಡಿಜಿಟಲ್ ಮಾರುಕಟ್ಟೆಯಾದ ‘ಕೋ-ಆಪ್ ಮಾರ್ಕ್’ ಮತ್ತು ಅಂತರರಾಷ್ಟ್ರೀಯ ವಿಸ್ತರಣೆಯ ಮೂಲಕ ಸಹಕಾರಿ ಉತ್ಪನ್ನಗಳು ಬಲವಾದ ಬ್ರ್ಯಾಂಡ್ ಗುರುತಿಸುವಿಕೆ, ವ್ಯಾಪಕ ಮಾರುಕಟ್ಟೆ ಪ್ರವೇಶ ಮತ್ತು ಹೆಚ್ಚಿನ ಸ್ಪರ್ಧಾತ್ಮಕತೆಯನ್ನು ಪಡೆಯುತ್ತವೆ

प्रविष्टि तिथि: 18 JUN 2026 5:42PM by PIB Bengaluru

ಸಹಕಾರಿ ಬ್ಯಾಂಕಿಂಗ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ, ಸಹಕಾರ ಸಂಘಗಳ ಮೂಲಕ ಸಾವಯವ ಉತ್ಪನ್ನಗಳನ್ನು ಉತ್ತೇಜಿಸುವ ಮತ್ತು ರಫ್ತುಗಳ ಮೂಲಕ ಸಹಕಾರಿ ಉತ್ಪನ್ನಗಳ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದ ರಾಷ್ಟ್ರೀಯ ಮಟ್ಟದ ಸಹಕಾರಿ ಉಪಕ್ರಮಗಳ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಸರಣಿ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಿದ್ದರು.

ಈ ಸಭೆಗಳಲ್ಲಿ ಸಹಕಾರ ಇಲಾಖೆಯ ರಾಜ್ಯ ಸಚಿವರಾದ ಶ್ರೀ ಕ್ರಿಶನ್ ಪಾಲ್ ಗುರ್ಜರ್, ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭುತಾನಿ, ನಬಾರ್ಡ್ ಅಧ್ಯಕ್ಷ ಶ್ರೀ ಶಾಜಿ ಕೆ.ವಿ., ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಉದ್ದೇಶಿತ ಕೋಆಪರೇಟಿವ್ ಬ್ಯಾಂಕ್ ಆಫ್ ಇಂಡಿಯಾ (ಸಿಒಬಿಐ), ಸಹಕಾರ್ ಸಾರಥಿ ಪ್ರೈವೇಟ್ ಲಿಮಿಟೆಡ್ (ಎಸ್‌ ಎಸ್‌ ಪಿ ಎಲ್), ರಾಷ್ಟ್ರೀಯ ನಗರ ಸಹಕಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ (ಎನ್ ಯು ಸಿ ಎಫ್ ಡಿ ಸಿ), ರಾಷ್ಟ್ರೀಯ ಸಹಕಾರಿ ಸಾವಯವ ಲಿಮಿಟೆಡ್ (ಎನ್ ಸಿ ಒ ಎಲ್) ಮತ್ತು ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (ಎನ್ ಸಿ ಇ ಎಲ್) ಸೇರಿದಂತೆ ಪ್ರಮುಖ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪ್ರಮುಖ ಸಹಕಾರಿ ಬ್ಯಾಂಕಿಂಗ್ ಉಪಕ್ರಮಗಳ ಪರಿಶೀಲನೆಯ ಸಂದರ್ಭದಲ್ಲಿ, ತಂತ್ರಜ್ಞಾನದ ಅಳವಡಿಕೆ, ಸುಧಾರಿತ ಆಡಳಿತ, ಸೈಬರ್ ಭದ್ರತೆ, ಡಿಜಿಟಲ್ ಪಾವತಿಗಳು, ಸಾಮಾನ್ಯ ಸೇವಾ ವೇದಿಕೆಗಳು ಮತ್ತು ಸುಧಾರಿತ ಸೇವೆಗಳ ವಿತರಣೆಯ ಮೂಲಕ ಸಹಕಾರಿ ಬ್ಯಾಂಕಿಂಗ್ ವಲಯವನ್ನು ಬಲಪಡಿಸಲು ಕೈಗೊಳ್ಳಲಾಗುತ್ತಿರುವ ವಿವಿಧ ಕ್ರಮಗಳ ಪ್ರಗತಿಯನ್ನು ಶ್ರೀ ಅಮಿತ್ ಶಾ ಪರಿಶೀಲಿಸಿದರು. ಉದ್ದೇಶಿತ ‘ಕೋಆಪರೇಟಿವ್ ಬ್ಯಾಂಕ್ ಆಫ್ ಇಂಡಿಯಾ’ ಮತ್ತು ಮುಂಬರುವ ವರ್ಷಗಳಲ್ಲಿ ಸಹಕಾರಿ ಬ್ಯಾಂಕಿಂಗ್ ವಲಯವನ್ನು ಬೆಂಬಲಿಸುವಲ್ಲಿ ಅದರ ಪಾತ್ರದ ಕುರಿತು ಸುದೀರ್ಘ ಚರ್ಚೆಗಳು ನಡೆದವು.

ಸಹಕಾರಿ ಬ್ಯಾಂಕುಗಳಿಗಾಗಿ ಸಹಕಾರ್ ಸಾರಥಿ ಸಂಸ್ಥೆಯು ಕೈಗೊಂಡಿರುವ ತಂತ್ರಜ್ಞಾನ ಆಧಾರಿತ ಉಪಕ್ರಮಗಳ ಪ್ರಗತಿಯನ್ನೂ ಪರಿಶೀಲಿಸಲಾಯಿತು. ಸಾಮಾನ್ಯ ಡಿಜಿಟಲ್ ವೇದಿಕೆಗಳು ಮತ್ತು ಜಂಟಿ ಸೇವೆಗಳ ಕಡೆಗೆ ಸಹಕಾರಿ ಬ್ಯಾಂಕುಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದನ್ನು ಸಭೆಯಲ್ಲಿ ಗಮನಿಸಲಾಯಿತು. ನಗರ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕುಗಳಾದ್ಯಂತ ಸ್ಥಳೀಯ ತಂತ್ರಜ್ಞಾನ ಪರಿಹಾರಗಳ ವ್ಯಾಪಕ ಅಳವಡಿಕೆ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವ ಬಗ್ಗೆ ವಿಶೇಷ ಒತ್ತು ನೀಡಲಾಯಿತು.

ಸಹಕಾರಿ ಬ್ಯಾಂಕುಗಳಿಗಾಗಿಯೇ ಮೀಸಲಾದ ಬ್ಯಾಂಕಿಂಗ್ ಡೊಮೈನ್ ಉಪಕ್ರಮವಾದ 'Bank.in' ನ ಪ್ರಗತಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಸಹಕಾರಿ ಬ್ಯಾಂಕಿಂಗ್ ವಲಯದಾದ್ಯಂತ ತಂತ್ರಜ್ಞಾನ ಆಧಾರಿತ ಸೇವೆಗಳು ಮತ್ತು ಡಿಜಿಟಲ್ ಪರಿಹಾರಗಳ ವ್ಯಾಪಕ ಬಳಕೆಗೆ ನಡೆಯುತ್ತಿರುವ ಪ್ರಯತ್ನಗಳ ಬಗ್ಗೆಯೂ ಚರ್ಚಿಸಲಾಯಿತು.

ಸಹಕಾರಿ ಬ್ಯಾಂಕುಗಳಲ್ಲಿ ವಂಚನೆ ಅಪಾಯ ನಿರ್ವಹಣೆ ಮತ್ತು ಸೈಬರ್ ಭದ್ರತಾ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸಲು 'MuleHunter.AI' ಅನ್ನು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದೊಂದಿಗೆ (I4C) ಸಂಯೋಜಿಸುವ ಕೆಲಸದ ಪ್ರಗತಿಯನ್ನು ಸಭೆಯು ಗಮನಿಸಿತು. ಈ ಉಪಕ್ರಮವು ಉದಯೋನ್ಮುಖ ಡಿಜಿಟಲ್ ಬೆದರಿಕೆಗಳ ವಿರುದ್ಧ ಸಹಕಾರಿ ಬ್ಯಾಂಕುಗಳ ಸನ್ನದ್ಧತೆಯನ್ನು ಹೆಚ್ಚಿಸುವ ಮತ್ತು ಡಿಜಿಟಲ್ ಸಹಕಾರಿ ಬ್ಯಾಂಕಿಂಗ್ ಸೇವೆಗಳಲ್ಲಿ ನಂಬಿಕೆಯನ್ನು ಬಲಪಡಿಸುವ ನಿರೀಕ್ಷೆಯಿದೆ.

ವಲಯದ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ ಮತ್ತು ಸಾಮಾನ್ಯ ಸೇವಾ ವೇದಿಕೆಗಳಲ್ಲಿ ಸಹಕಾರಿ ಬ್ಯಾಂಕುಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಅಗತ್ಯವನ್ನು ಶ್ರೀ ಅಮಿತ್ ಶಾ ಒತ್ತಿಹೇಳಿದರು. ಸಹಕಾರಿ ಬ್ಯಾಂಕಿಂಗ್ ವಲಯಕ್ಕೆ ಬಲವಾದ ಸೈಬರ್ ಭದ್ರತಾ ಚೌಕಟ್ಟುಗಳು, ಆಧುನಿಕ ಬ್ಯಾಂಕಿಂಗ್ ತಂತ್ರಜ್ಞಾನ ಮತ್ತು ಸುಸ್ಥಿರ ವ್ಯವಹಾರ ಮಾದರಿಗಳ ಮಹತ್ವವನ್ನು ಅವರು ಎತ್ತಿ ತೋರಿಸಿದರು.

ನಗರ ಸಹಕಾರಿ ಬ್ಯಾಂಕುಗಳ ಸಮೂಹ ಸಂಸ್ಥೆಯಾಗಿರುವ ಎನ್ ಯು ಸಿ ಎಫ್ ಡಿ ಸಿ, ಎಲ್ಲಾ ನಗರ ಸಹಕಾರಿ ಬ್ಯಾಂಕುಗಳನ್ನು (ಯುಸಿಬಿ) ಸಾಮಾನ್ಯ ವೇದಿಕೆಯಡಿ ತರಲು ಮತ್ತು ಇಡೀ ಯುಸಿಬಿ ವಲಯವನ್ನು ಒಳಗೊಳ್ಳಲು ತನ್ನ ಸದಸ್ಯತ್ವದ ನೆಲೆಯನ್ನು ವಿಸ್ತರಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಇದು ನಗರ ಸಹಕಾರಿ ಬ್ಯಾಂಕುಗಳಿಗೆ ಜಂಟಿ ಸೇವೆಗಳು, ತಂತ್ರಜ್ಞಾನ ಪರಿಹಾರಗಳು ಮತ್ತು ಸಾಂಸ್ಥಿಕ ಬೆಂಬಲವನ್ನು ಸುಲಭವಾಗಿ ಪಡೆಯಲು ಅನುಕೂಲ ಮಾಡಿಕೊಡುತ್ತದೆ.

ಎಸ್‌ ಎಸ್‌ ಪಿ ಎಲ್ ಸಂಸ್ಥೆಯು ಈಗಾಗಲೇ AePS ಸೇವೆಗಳನ್ನು ಜಾರಿಗೆ ತಂದಿದೆ ಮತ್ತು ಆಯ್ದ ಸಹಕಾರಿ ಬ್ಯಾಂಕುಗಳಲ್ಲಿ ಇ-ಕೆವೈಸಿ ಪ್ರಕ್ರಿಯೆಯು ಚಾಲ್ತಿಯಲ್ಲಿದೆ ಎಂದು ಸಭೆಯಲ್ಲಿ ಗಮನಿಸಲಾಯಿತು. ಕೆಲವು ರಾಜ್ಯಗಳಲ್ಲಿ ಇದರ ವಿಸ್ತರಣೆ ನಡೆಯುತ್ತಿದ್ದು, ಆಗಸ್ಟ್ 2026 ರ ವೇಳೆಗೆ 100 ಸಹಕಾರಿ ಬ್ಯಾಂಕುಗಳನ್ನು ಒಳಗೊಳ್ಳುವ ಗುರಿ ಹೊಂದಲಾಗಿದೆ. ಈ ಉಪಕ್ರಮವು ಸಹಕಾರಿ ಬ್ಯಾಂಕುಗಳಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ.

ಎಲ್ಲಾ ಗ್ರಾಮೀಣ ಸಹಕಾರಿ ಬ್ಯಾಂಕುಗಳು ಸಹಕಾರ್ ಸಾರಥಿ ಪ್ರೈವೇಟ್ ಲಿಮಿಟೆಡ್‌ ನ ಸದಸ್ಯರಾಗಬೇಕು ಮತ್ತು ಎಲ್ಲಾ ನಗರ ಸಹಕಾರಿ ಬ್ಯಾಂಕುಗಳು ಎನ್ ಯು ಸಿ ಎಫ್ ಡಿ ಸಿ ಯ ಸದಸ್ಯರಾಗಬೇಕು ಹಾಗೂ ಈ ಸಂಸ್ಥೆಗಳಿಂದ ಸೇವೆಗಳನ್ನು ಪಡೆಯಬೇಕು ಎಂದು ಶ್ರೀ ಅಮಿತ್ ಶಾ ಒತ್ತಿಹೇಳಿದರು. ಮುಂಬರುವ ದಿನಗಳಲ್ಲಿ ಸಹಕಾರಿ ಬ್ಯಾಂಕಿಂಗ್ ವಲಯವನ್ನು ಬಲಪಡಿಸುವಲ್ಲಿ ಸಿಒಬಿಐ, ಎಸ್‌ ಎಸ್‌ ಪಿ ಎಲ್ ಮತ್ತು ಎನ್ ಯು ಸಿ ಎಫ್ ಡಿ ಸಿ ಯ ಪ್ರಮುಖ ಪಾತ್ರವನ್ನು ಅವರು ಒತ್ತಿಹೇಳಿದರು.

ನ್ಯಾಷನಲ್ ಕೋಆಪರೇಟಿವ್ ಆರ್ಗಾನಿಕ್ಸ್ ಲಿಮಿಟೆಡ್ (ಎನ್ ಸಿ ಒ ಎಲ್) ಮತ್ತು ನ್ಯಾಷನಲ್ ಕೋಆಪರೇಟಿವ್ ಎಕ್ಸ್‌‌ ಪೋರ್ಟ್ಸ್ ಲಿಮಿಟೆಡ್ (ಎನ್ ಸಿ ಇ ಎಲ್) ಗಳ ಪ್ರತ್ಯೇಕ ಪರಿಶೀಲನೆಯಲ್ಲಿ, ಶ್ರೀ ಅಮಿತ್ ಶಾ ಅವರು ಎರಡೂ ಸಂಸ್ಥೆಗಳ ಚಟುವಟಿಕೆಗಳು ಮತ್ತು ಭವಿಷ್ಯದ ಮಾರ್ಗಸೂಚಿಯನ್ನು ಪರಿಶೀಲಿಸಿದರು. ಈ ಪರಿಶೀಲನೆಯು ಸದಸ್ಯತ್ವ ವಿಸ್ತರಣೆ, ಸದಸ್ಯ ಸಹಕಾರ ಸಂಘಗಳು ಮತ್ತು ಉತ್ಪಾದಕರೊಂದಿಗೆ ತೊಡಗಿಸಿಕೊಳ್ಳುವಿಕೆ, ವ್ಯವಹಾರ ಅಭಿವೃದ್ಧಿ ಉಪಕ್ರಮಗಳು, ಸಾವಯವ ಉತ್ಪನ್ನಗಳ ಖರೀದಿ ಮತ್ತು ಮಾರುಕಟ್ಟೆ, ರಾಷ್ಟ್ರೀಯ ಸಹಕಾರಿ ಸಾವಯವ ಮತ್ತು ರಫ್ತು ಪರಿಸರ ವ್ಯವಸ್ಥೆಗಳ ಬಲವರ್ಧನೆ, ಮಾರುಕಟ್ಟೆ ಅವಕಾಶಗಳ ಮೌಲ್ಯಮಾಪನ ಮತ್ತು ಭವಿಷ್ಯದ ಬೆಳವಣಿಗೆಯ ಕಾರ್ಯತಂತ್ರಗಳ ಮೇಲೆ ಕೇಂದ್ರೀಕೃತವಾಗಿತ್ತು.

ಕೇಂದ್ರ ಸರ್ಕಾರದ ಸಂಸ್ಥೆಗಳ ಮೂಲಕ ವಿಸ್ತರಣೆ ಮಾಡುವ ಯೋಜನೆಗಳು, ಭೌತಿಕ ಮತ್ತು ಡಿಜಿಟಲ್ ಮಾರುಕಟ್ಟೆಗಳಲ್ಲಿ ಅಸ್ತಿತ್ವವನ್ನು ಬಲಪಡಿಸುವುದು, 'ಕೋ-ಆಪ್ ಮಾರ್ಕ್' ಪ್ರಚಾರ ಮತ್ತು ಬಿಡುಗಡೆ, ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ವಿಸ್ತರಣೆ ಮತ್ತು ಸಹಕಾರಿ ವಲಯದ ಉತ್ಪನ್ನಗಳ ತಲುಪುವಿಕೆ, ಗೋಚರತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಉದಯೋನ್ಮುಖ ಕಾರ್ಯತಂತ್ರದ ಅವಕಾಶಗಳನ್ನು ಗುರುತಿಸುವ ಯೋಜನೆಗಳನ್ನು ಗೃಹ ಮತ್ತು ಸಹಕಾರ ಸಚಿವರಾದರು ಪರಿಶೀಲಿಸಿದರು.

ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಸಾವಯವ ರೈತರಿಂದ ಸಾವಯವ ಉತ್ಪನ್ನಗಳನ್ನು ಪಡೆಯಲು ಎನ್ ಸಿ ಒ ಎಲ್ ತನ್ನ ಖರೀದಿ ಕಾರ್ಯಾಚರಣೆಗಳನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬೇಕು ಎಂದು ಸಭೆಯಲ್ಲಿ ಒತ್ತಿಹೇಳಲಾಯಿತು. ಎನ್ ಸಿ ಒ ಎಲ್ ಸಂಸ್ಥೆಯು ಸಾವಯವ ಉತ್ಪಾದಕರು ಮತ್ತು ಉತ್ಪನ್ನಗಳನ್ನು ಗುರುತಿಸಬೇಕು ಹಾಗೂ ತಪಾಸಣೆ, ಪ್ರಮಾಣೀಕರಣ, ಗುಣಮಟ್ಟದ ಭರವಸೆ, ಸಾಮರ್ಥ್ಯ ವೃದ್ಧಿ ಮತ್ತು ಸಾವಯವ ಮಾನದಂಡಗಳ ಅನುಸರಣೆಯನ್ನು ಸುಲಭಗೊಳಿಸುವ ಮೂಲಕ ಇಡೀ ಸಾವಯವ ಮೌಲ್ಯ ಸರಪಳಿಯಲ್ಲಿ ರೈತರಿಗೆ ಬೆಂಬಲ ನೀಡಬೇಕು.

ರೈತರು ಲಾಭದಾಯಕ ಮಾರುಕಟ್ಟೆಗಳನ್ನು ಪ್ರವೇಶಿಸಲು ಅನುಕೂಲವಾಗುವಂತೆ ಎನ್ ಸಿ ಒ ಎಲ್ ಸಾವಯವ ಉತ್ಪನ್ನಗಳಿಗೆ ಬಲವಾದ ಮಾರುಕಟ್ಟೆ ಸಂಪರ್ಕಗಳನ್ನು ಒದಗಿಸಬೇಕು ಎಂದು ಒತ್ತಿಹೇಳಲಾಯಿತು. ಈ ಪ್ರಯತ್ನಗಳು ಸಾವಯವ ಪರಿಸರ ವ್ಯವಸ್ಥೆಯನ್ನು ಬಲಪಡಿಸಲಿವೆ, ರೈತರ ಆದಾಯವನ್ನು ಹೆಚ್ಚಿಸಲಿವೆ ಮತ್ತು ದೇಶಾದ್ಯಂತ ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲಿವೆ.

ಎನ್ ಸಿ ಇ ಎಲ್ ಸಂಸ್ಥೆಯ ಪರಿಶೀಲನೆಯು ಬಲವಾದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೊಂದಿರುವ ಸಹಕಾರಿ ಉತ್ಪನ್ನಗಳಿಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರುಕಟ್ಟೆ ಸಂಪರ್ಕಗಳನ್ನು ವಿಸ್ತರಿಸುವುದರ ಮೇಲೆ ಕೇಂದ್ರೀಕರಿಸಿತ್ತು. ಎನ್ ಸಿ ಇ ಎಲ್ ತನ್ನ ಸದಸ್ಯ ಸಹಕಾರ ಸಂಘಗಳೊಂದಿಗೆ ವ್ಯವಹಾರಿಕ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಬೇಕು, ರಾಷ್ಟ್ರೀಯ ಸಹಕಾರಿ ರಫ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸಬೇಕು ಮತ್ತು ಸಹಕಾರಿ ರಫ್ತುಗಳನ್ನು ಉತ್ತೇಜಿಸಲು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕು ಎಂದು ಒತ್ತಿಹೇಳಲಾಯಿತು.

ವಿಶಿಷ್ಟ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ಅವಕಾಶಗಳನ್ನು ಸಕ್ರಿಯವಾಗಿ ಗುರುತಿಸಲು ಮತ್ತು ಅಭಿವೃದ್ಧಿಪಡಿಸಲು ಎನ್ ಸಿ ಇ ಎಲ್ ಗೆ ಸೂಚಿಸಲಾಯಿತು, ಇದು ಸಹಕಾರ ಸಂಘಗಳು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು ಮತ್ತು ಅವರ ಜಾಗತಿಕ ಅಸ್ತಿತ್ವವನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ.

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ "ಸಹಕಾರ್ ಸೇ ಸಮೃದ್ಧಿ" ದೂದೃಷ್ಟಿಗೆ ಅನುಗುಣವಾಗಿ, ನಾವೀನ್ಯತೆ, ಹಣಕಾಸು ಒಳಗೊಳ್ಳುವಿಕೆ, ಡಿಜಿಟಲ್ ರೂಪಾಂತರ, ಸುಸ್ಥಿರ ಕೃಷಿ, ರೈತರಿಗೆ ಉತ್ತಮ ಮಾರುಕಟ್ಟೆ ಪ್ರವೇಶ ಮತ್ತು ಸಹಕಾರಿ ಉತ್ಪನ್ನಗಳ ಜಾಗತಿಕ ಸ್ಪರ್ಧಾತ್ಮಕತೆಯ ಮೇಲೆ ಗಮನ ಕೇಂದ್ರೀಕರಿಸಿ ಸಹಕಾರಿ ವಲಯವನ್ನು ಬಲಪಡಿಸಲು ಸಹಕಾರ ಸಚಿವಾಲಯವು ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

 

*****

 


(रिलीज़ आईडी: 2274952) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Marathi