ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಹಸಿರು ಜಲಜನಕ (ಗ್ರೀನ್ ಹೈಡ್ರೋಜನ್) ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು 'ಹಸಿರು ಜಲಜನಕ ಪ್ರಮಾಣೀಕರಣ ಪೋರ್ಟಲ್' ಅನ್ನು ಉದ್ಘಾಟಿಸಿದ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು


ಆರು ರಾಜ್ಯಗಳು ಹಸಿರು ಜಲಜನಕಕ್ಕಾಗಿ ಪ್ರತ್ಯೇಕ ನೀತಿಗಳನ್ನು ಪ್ರಕಟಿಸಿವೆ; ಏಳು ರಾಜ್ಯಗಳು ತಮ್ಮ ಅಸ್ತಿತ್ವದಲ್ಲಿರುವ ನೀತಿಗಳಲ್ಲಿ ಜಲಜನಕವನ್ನು ಸೇರಿಸಿಕೊಂಡಿವೆ, ನಾಲ್ಕು ರಾಜ್ಯಗಳಲ್ಲಿ ಪ್ರಕ್ರಿಯೆ ಪ್ರಗತಿಯಲ್ಲಿದೆ: ಶ್ರೀ ಜೋಶಿ

ಭಾರತ ಸರ್ಕಾರದ 12 ವರ್ಷಗಳ ನಿರ್ಣಾಯಕ ಸಾಧನೆಯ ನೆನಪಿಗಾಗಿ ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಕುರಿತು ಕಾರ್ಯಾಗಾರವನ್ನು ಆಯೋಜಿಸಿದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

प्रविष्टि तिथि: 17 JUN 2026 7:09PM by PIB Bengaluru

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಇಂದು ಇಲ್ಲಿ ಆಯೋಜಿಸಿದ್ದ “ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಬಲಪಡಿಸುವಿಕೆ: ರಾಜ್ಯ ನೀತಿಗಳು, ಹಬ್‌ಗಳು ಮತ್ತು ಮೂಲಸೌಕರ್ಯಗಳ ಮೂಲಕ” ಎಂಬ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾರತದ 'ಹಸಿರು ಜಲಜನಕ ಪ್ರಮಾಣೀಕರಣ ಪೋರ್ಟಲ್' (Green Hydrogen Certification Portal - GHCI) ಅನ್ನು ಉದ್ಘಾಟಿಸಿದರು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಅಭಿವೃದ್ಧಿಪಡಿಸಿರುವ ಈ ಪೋರ್ಟಲ್, ಭಾರತದ ಹಸಿರು ಜಲಜನಕ ಪ್ರಮಾಣೀಕರಣ ಯೋಜನೆಯಡಿ ಪಾರದರ್ಶಕ ಪ್ರಮಾಣೀಕರಣ ಮತ್ತು ನಿಯಂತ್ರಕ ಅನುಸರಣೆಯನ್ನು ಸುಲಭಗೊಳಿಸಲಿದೆ.

“ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಬಲಪಡಿಸುವಿಕೆ: ರಾಜ್ಯ ನೀತಿಗಳು, ಹಬ್‌ಗಳು ಮತ್ತು ಮೂಲಸೌಕರ್ಯಗಳ ಮೂಲಕ” ಎಂಬ ವಿಷಯದ ಕುರಿತು ಮಾತನಾಡಿದ ಶ್ರೀ ಜೋಶಿ ಅವರು, ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಅನ್ನು ಮುನ್ನಡೆಸುವಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ರಾಜ್ಯಗಳಿಗೆ ವಿನಂತಿಸಿದರು. ಈಗಾಗಲೇ ಆರು ರಾಜ್ಯಗಳು ಪ್ರತ್ಯೇಕ ಹಸಿರು ಜಲಜನಕ ನೀತಿಗಳನ್ನು ಪ್ರಕಟಿಸಿದ್ದು, ಇತರ ಏಳು ರಾಜ್ಯಗಳು ಜಲಜನಕವನ್ನು ತಮ್ಮ ಅಸ್ತಿತ್ವದಲ್ಲಿರುವ ಕೈಗಾರಿಕಾ ಮತ್ತು ನವೀಕರಿಸಬಹುದಾದ ಇಂಧನ ನೀತಿ ಚೌಕಟ್ಟುಗಳಲ್ಲಿ ಸೇರಿಸಿಕೊಂಡಿವೆ ಎಂದು ಅವರು ಹೇಳಿದರು. ಇದರೊಂದಿಗೆ ಇನ್ನೂ ನಾಲ್ಕು ರಾಜ್ಯಗಳು ತಮ್ಮ ನೀತಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿವೆ ಎಂದು ಅವರು ತಿಳಿಸಿದರು.

ದೇಶೀಯ ಉತ್ಪಾದನೆಯನ್ನು ಬಲಪಡಿಸುವ ಪ್ರಯತ್ನಗಳನ್ನು ಒತ್ತಿ ಹೇಳಿದ ಅವರು, ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ವಾರ್ಷಿಕವಾಗಿ 3,000 ಮೆಗಾವ್ಯಾಟ್ ಸಾಮರ್ಥ್ಯದ ಸ್ಥಳೀಯ ಎಲೆಕ್ಟ್ರೋಲೈಜರ್ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸಲು 15 ಕಂಪನಿಗಳಿಗೆ ಹಣಕಾಸಿನ ಪ್ರೋತ್ಸಾಹಕಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಸಂಸ್ಕರಣಾಗಾರ (ರಿಫೈನರಿ) ವಲಯದಲ್ಲಿ, ಐ.ಒ.ಸಿ.ಎಲ್ (IOCL), ಬಿ.ಪಿ.ಸಿ.ಎಲ್ (BPCL), ಎಚ್.ಪಿ.ಸಿ.ಎಲ್ (HPCL) ಮತ್ತು ಎನ್.ಆರ್.ಎಲ್ (NRL) ಕಂಪನಿಗಳಿಗೆ ವಾರ್ಷಿಕ 30,000 ಮೆಟ್ರಿಕ್ ಟನ್ ಹಸಿರು ಜಲಜನಕವನ್ನು ಪೂರೈಸಲು ಒಪ್ಪಂದಗಳನ್ನು ನೀಡಲಾಗಿದೆ ಎಂದು ಶ್ರೀ ಜೋಶಿ ಅವರು ಹೇಳಿದರು. ಉಕ್ಕು ವಲಯದಲ್ಲಿ ಶೇ.100 ಜಲಜನಕದ ಬಳಕೆಯನ್ನು ಪರೀಕ್ಷಿಸುವ ಪ್ರಾಯೋಗಿಕ ಯೋಜನೆಗಳಿಗಾಗಿ ₹84 ಕೋಟಿ ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದರು.

ಸ್ವಚ್ಛ ಸಾರಿಗೆಯ (Clean Mobility) ಕುರಿತು ಮಾತನಾಡಿದ ಅವರು, 37 ಜಲಜನಕ ಇಂಧನ ಚಾಲಿತ ವಾಹನಗಳು ಮತ್ತು 9 ಆಯಕಟ್ಟಿನ ಇಂಧನ ಮರುಪೂರಣ ಕೇಂದ್ರಗಳನ್ನು ಬೆಂಬಲಿಸಲು ಸುಮಾರು ₹208 ಕೋಟಿ ಹಂಚಿಕೆ ಮಾಡಲಾಗಿದೆ, ಜೊತೆಗೆ ಏಳು ರಾಷ್ಟ್ರೀಯ ಪರೀಕ್ಷಾ ಕೇಂದ್ರಗಳಿಗಾಗಿ ₹193.35 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಹೇಳಿದರು.

ನಾವೀನ್ಯತೆ ಮತ್ತು ಗುಣಮಟ್ಟದ ಮಾನದಂಡಗಳ ಮೇಲಿನ ಸರ್ಕಾರದ ಗಮನವನ್ನು ಶ್ರೀ ಜೋಶಿ ಅವರು ಒತ್ತಿಹೇಳಿದರು. ₹113 ಕೋಟಿ ಮೌಲ್ಯದ ಪ್ರತ್ಯೇಕ ಸಂಶೋಧನೆ ಮತ್ತು ಅಭಿವೃದ್ಧಿ ಮಾರ್ಗಸೂಚಿಯು ಅನುಮೋದಿತ 21 ಯೋಜನೆಗಳನ್ನು ಬೆಂಬಲಿಸುತ್ತಿದೆ ಎಂದು ಅವರು ತಿಳಿಸಿದರು. ಇತ್ತೀಚಿನ ತಿಂಗಳುಗಳಲ್ಲಿ ಹಸಿರು ಜಲಜನಕ ಪ್ರಮಾಣೀಕರಣ ಯೋಜನೆಯ ಪ್ರಾರಂಭ ಮತ್ತು ಹಸಿರು ಅಮೋನಿಯಾ ಹಾಗೂ ಹಸಿರು ಮೆಥನಾಲ್‌ನ ಮಾನದಂಡಗಳನ್ನು ಅಂತಿಮಗೊಳಿಸುವುದರೊಂದಿಗೆ ನಿಯಂತ್ರಕ ಚೌಕಟ್ಟನ್ನು ಸರಳಗೊಳಿಸಲಾಗಿದೆ ಎಂದು ಅವರು ಹೇಳಿದರು.

11 ರಸಗೊಬ್ಬರ ಕಾರ್ಖಾನೆಗಳಿಗೆ ವಾರ್ಷಿಕ 6.7 ಲಕ್ಷ ಮೆಟ್ರಿಕ್ ಟನ್ ಹಸಿರು ಅಮೋನಿಯಾ ಪೂರೈಕೆಗಾಗಿ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಸಚಿವರು ಹೇಳಿದರು.

ಕಳೆದ 12 ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಶ್ವದ ಅತ್ಯಂತ ವೇಗದ ಮತ್ತು ಅತ್ಯಂತ ಮಹತ್ವಾಕಾಂಕ್ಷೆಯ ಸ್ವಚ್ಛ ಇಂಧನ ಪರಿವರ್ತನೆಗಳಲ್ಲಿ ಒಂದನ್ನು ಕೈಗೊಂಡಿದೆ ಎಂದು ಅವರು ಹೇಳಿದರು. 2023 ರಲ್ಲಿ ₹19,744 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾದ ರಾಷ್ಟ್ರೀಯ ಹಸಿರು ಜಲಜನಕ ಮಿಷನ್ ಈ ರೂಪಾಂತರವನ್ನು ಮತ್ತಷ್ಟು ಬಲಪಡಿಸಿದೆ ಎಂದು ಅವರು ಹೇಳಿದರು.

ಈ ಮಿಷನ್ 5 ಮಿಲಿಯನ್ ಮೆಟ್ರಿಕ್ ಟನ್ ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ, ಇದಕ್ಕೆ 125 ಗಿಗಾವ್ಯಾಟ್ ಪ್ರತ್ಯೇಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಬೆಂಬಲವಿರಲಿದೆ. ಇದು ₹8 ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆಯನ್ನು ಉತ್ತೇಜಿಸಲಿದೆ, 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ ಮತ್ತು ವಾರ್ಷಿಕ ಇಂಗಾಲದ ಹೊರಸೂಸುವಿಕೆಯನ್ನು 50 ಮಿಲಿಯನ್ ಟನ್‌ಗಳಷ್ಟು ಕಡಿಮೆ ಮಾಡಲಿದೆ ಎಂದು ಅವರು ಹೇಳಿದರು.

ಸೈಟ್ (SIGHT) ಕಾರ್ಯಕ್ರಮದ ಅಡಿಯಲ್ಲಿ, ವಾರ್ಷಿಕ 8,62,000 ಮೆಟ್ರಿಕ್ ಟನ್ ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯಕ್ಕಾಗಿ ಈಗಾಗಲೇ ಪ್ರೋತ್ಸಾಹಕಗಳನ್ನು ನೀಡಲಾಗಿದೆ ಎಂದು ಶ್ರೀ ಜೋಶಿ ಅವರು ಮಾಹಿತಿ ನೀಡಿದರು. ನವೆಂಬರ್ 2025 ರಲ್ಲಿ ಜೆ.ಎಸ್.ಡಬ್ಲ್ಯೂ (JSW) ಕಂಪನಿಯು ವಾರ್ಷಿಕ 3,600 ಮೆಟ್ರಿಕ್ ಟನ್ ಸಾಮರ್ಥ್ಯದ ಹಸಿರು ಜಲಜನಕ ಉತ್ಪಾದನಾ ಘಟಕವನ್ನು ಯಶಸ್ವಿಯಾಗಿ ಕಾರ್ಯಾರಂಭ ಮಾಡಿರುವುದನ್ನು ಉಲ್ಲೇಖಿಸಿ, ಉದ್ಯಮ ರಂಗದಿಂದ ವ್ಯಕ್ತವಾಗಿರುವ ಉತ್ತಮ ಪ್ರತಿಕ್ರಿಯೆಯನ್ನು ಅವರು ಶ್ಲಾಘಿಸಿದರು.

ಭಾರತ ಸರ್ಕಾರದ 12 ವರ್ಷಗಳ ನಿರ್ಣಾಯಕ ಸಾಧನೆಯ ಆಚರಣೆಯ ಭಾಗವಾಗಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಸ್ವಚ್ಛ ಇಂಧನ ಪರಿವರ್ತನೆ, ನವೀಕರಿಸಬಹುದಾದ ಇಂಧನ ನಿಯೋಜನೆ, ಹಸಿರು ಜಲಜನಕ ಮತ್ತು ಕೈಗಾರಿಕಾ ಇಂಗಾಲದ ಕಡಿತದಲ್ಲಿ ದೇಶದ ಪ್ರಗತಿಯನ್ನು ಇದು ಎತ್ತಿ ತೋರಿಸುತ್ತದೆ.

ಹಸಿರು ಜಲಜನಕ ತಂತ್ರಜ್ಞಾನಗಳ ಕುರಿತಾದ ನವೋದ್ಯಮಗಳನ್ನು ಬೆಂಬಲಿಸಲು ಹಸಿರು ಜಲಜನಕ ಮಿಷನ್ ₹100 ಕೋಟಿಗಳನ್ನು ಹಂಚಿಕೆ ಮಾಡಿದೆ ಎಂದು ಸಚಿವರು ಪ್ರಕಟಿಸಿದರು. ಒಟ್ಟು ₹22 ಕೋಟಿ ಧನಸಹಾಯದೊಂದಿಗೆ 9 ನವೋದ್ಯಮಗಳ ಮೊದಲ ಪಟ್ಟಿಯನ್ನು ಅನುಮೋದಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಾಗಾರದಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ ಅವರೊಂದಿಗೆ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ರಾಜ್ಯಗಳ ಮತ್ತು ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಹೆಚ್ಚಿನ ವಿವರಗಳಿಗಾಗಿ:

ಎ) ಹಸಿರು ಜಲಜನಕ ಪ್ರಮಾಣೀಕರಣ ಪೋರ್ಟಲ್, ಇಲ್ಲಿ ಕ್ಲಿಕ್ ಮಾಡಿ: https://docs.google.com/document/d/1bfDtgiFTjWqCuX949Hrk3RLnrgxOjx9a/edit?usp=sharing&ouid=108802509289457962907&rtpof=true&sd=true

ಬಿ) ಕಾರ್ಯಾಗಾರ, ಇಲ್ಲಿ ಕ್ಲಿಕ್ ಮಾಡಿ: https://docs.google.com/document/d/1eZz_kqHxpZHjys7JiRZHCWdwx-NK6PVY/edit?usp=sharing&ouid=108802509289457962907&rtpof=true&sd=true

****

 


(रिलीज़ आईडी: 2274287) आगंतुक पटल : 6
इस विज्ञप्ति को इन भाषाओं में पढ़ें: Urdu , English , हिन्दी , Gujarati