MIFF banner

ಕೆನಡಾ, ಫಿಲಿಪಿನ್ಸ್ ಮತ್ತು ಐಸ್‌ಲ್ಯಾಂಡ್‌ನ ಮೂರು ಜಾಗತಿಕ ಕಥೆಗಳೊಂದಿಗೆ ಪ್ರಾರಂಭವಾದ 19ನೇ MIFF 2026

ಮರೆಯಾಗುತ್ತಿರುವ ಶೀತಲ ಹಿಮನದಿಗಳು ಮತ್ತು ಸವಿ ನೆನಪುಗಳಿಂದ ಹಿಡಿದು ಮಾನವನ ಹಂಬಲ ಮತ್ತು ಕೃತಕ ಬುದ್ಧಿಮತ್ತೆಯ ಅನಿಶ್ಚಿತತೆಯವರೆಗೆ, 'ಟೈಮ್ ಅಂಡ್ ವಾಟರ್', 'ಅಗಾಪಿಟೊ' ಮತ್ತು 'ಗುಡ್ ಲಕ್ ಟು ಯು ಆಲ್' ಎಂಬ ಮೂರು ಚಲನಚಿತ್ರಗಳು ಇಂದು ಮುಂಬೈನಲ್ಲಿ ಉದ್ಘಾಟನೆಗೊಂಡ 19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2026ಕ್ಕೆ (MIFF) ಪ್ರತಿಧ್ವನಿಯಾದವು. ಉದ್ಘಾಟನಾ ಸಮಾರಂಭದ ನಂತರ ಮೂರು ಚಲನಚಿತ್ರಗಳ ಪ್ರದರ್ಶನಗಳು ರವೀಂದ್ರ ನಾಟ್ಯ ಮಂದಿರದಲ್ಲಿ ಪ್ರದರ್ಶನಗೊಂಡವು. ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್‌ಗಾಗಿ ಭಾರತದ ಪ್ರಮುಖ ಉತ್ಸವವಾದ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು, 2026 ರ ಜೂನ್ 15 ರಿಂದ 21 ರವರೆಗೆ ನಡೆಯಲಿದೆ.

ಸಮಯ, ಮಂಜುಗಡ್ಡೆ ಮತ್ತು ಸವಿನೆನಪಿನ ಕುರಿತಾದ ಆಧ್ಯಾತ್ಮಿಕತೆ: 'ಟೈಮ್ ಅಂಡ್ ವಾಟರ್'

ಸಾರಾ ದೋಸಾ ನಿರ್ದೇಶನದ 'ಟೈಮ್ ಅಂಡ್ ವಾಟರ್,' ಉತ್ಸವದ ಪ್ರೇಕ್ಷಕರನ್ನು ಚಿಂತನಶೀಲತೆಗೆ ಜಾರಿಸುವ ಕಥೆಯಾಗಿದೆ. ನ್ಯಾಷನಲ್ ಜಿಯಾಗ್ರಫಿಕ್ ಡಾಕ್ಯುಮೆಂಟರಿ ಫಿಲ್ಮ್ಸ್ ಮತ್ತು ಸ್ಯಾಂಡ್‌ಬಾಕ್ಸ್ ಫಿಲ್ಮ್ಸ್ ನಿನ್ಮಾ ಫೌಂಡೇಶನ್‌ನ ಸಹಯೋಗದೊಂದಿಗೆ ಪ್ರಸ್ತುತಪಡಿಸಲಾದ ಈ ಸಾಕ್ಷ್ಯಚಿತ್ರವು ಐಸ್‌ಲ್ಯಾಂಡ್‌ನ ಬರಹಗಾರ ಆಂಡ್ರಿ ಸ್ನೇರ್ ಮ್ಯಾಗ್ನಾಸನ್ ಅವರ ವೈಯಕ್ತಿಕ ಮತ್ತು ಐತಿಹಾಸಿಕ ಬತ್ತಳಿಕೆಯಿಂದ ಸಾಂಕೇತಿಕವಾಗಿ ಮೂಡಿಬಂದ ಸಮಯದ ಪರಿವರ್ತನೆಯಾಗಿದೆ. ಕರಗುತ್ತಿರುವ ಶೀತಲ ಹಿಮನದಿಗಳು ಮತ್ತು ಬದಲಾಗುತ್ತಿರುವ ಭೂದೃಶ್ಯಗಳ ಹೊಂದಿಕೆಯೊಂದಿಗೆ ಹೆಣೆಯಲಾದ ಅವರ ಪ್ರಯಾಣವು ಪರಿಸರ ಮತ್ತು ಕೌಟುಂಬಿಕ ನಷ್ಟದ ಬಗೆಗಿನ ಪ್ರತಿಬಿಂಬವಾಗಿದೆ. ಇದು ಮರೆಯಾಗುತ್ತಿರುವ ಮಂಜುಗಡ್ಡೆಯೊಂದಿಗೆ ಮಾಸುತ್ತಿರುವ ಸ್ಮರಣೆಯ ಹೋಲಿಕೆಯಾಗಿದೆ. ಸಾರಾ ದೋಸಾ ಅವರು ಆಸ್ಕರ್-ನಾಮನಿರ್ದೇಶಿತ ಅಕಾಲ್ಪನಿಕ ಚಲನಚಿತ್ರ ನಿರ್ಮಾಪಕಿಯಾಗಿದ್ದು, ಮಾನವ ಹಾಗೂ ಪ್ರಕೃತಿಯ ಸಂಬಂಧಗಳನ್ನು ಅನ್ವೇಷಿಸುವ ಪ್ರಸಿದ್ದ ನಿರ್ದೇಶಕಿಯಾಗಿದ್ದಾರೆ. ಈ ಚಿತ್ರವು ಸಮಯ, ಬದಲಾವಣೆ ಮತ್ತು ಅಂತರ-ಪೀಳಿಗೆಯ ಜವಾಬ್ದಾರಿಯ ಕುರಿತಾದ ಕಾವ್ಯಾತ್ಮಕ ಆಧ್ಯಾತ್ಮಿಕತೆಯ ಅನುಭವವನ್ನು ನೀಡುತ್ತದೆ.

ಮರೆತುಹೋದ ಶಾಂತಿ-ನೆಮ್ಮದಿಯ ನಿರೀಕ್ಷೆ: ಅಗಾಪಿಟೊ

ಅರ್ವಿನ್ ಬೆಲಾರ್ಮಿನೊ ಮತ್ತು ಕೈಲಾ ರೊಮೆರೊ ಇವರಿಬ್ಬರ ಸಹ-ನಿರ್ದೇಶನದ, ಟ್ಯಾಗಲೋಗ್ ಭಾಷೆಯ ಅಗಾಪಿಟೊ ಎಂಬ ಫಿಲಿಪಿನೋ ಕಿರುಚಿತ್ರವು ಮರೆಯಾಗುತ್ತಿರುವ ಬೌಲಿಂಗ್ ಆಟದ ಹಿನ್ನೆಲ್ಲೆಯ ಕಥೆಯಾಗಿದೆ. ಈ ಆಟದ ವ್ಯವಸ್ಥಾಪಕಿಯಾದ ಮೀರಾ ತಿಂಗಳ ಕೊನೆಯ ದಿನದಂದು ತನ್ನ ಮುಕ್ತಾಯ ದಿನಚರಿಯನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ, ಶಾಂತ, ಭಾವನಾತ್ಮಕವಾದ ಅತಿಥಿಗಳಿಗಾಗಿ ಕಾಯುತ್ತಿದ್ದಾಳೆ. ಸಂಯಮದ ಕಥೆ ಹೇಳುವಿಕೆಯ ಮೂಲಕ, ಈ ಚಲನಚಿತ್ರವು ದಿನಚರಿ ಮತ್ತು ನಿರೀಕ್ಷೆಯ ನಡುವಿನ ಉದ್ವಿಗ್ನತೆಯನ್ನು ಅನ್ವೇಷಿಸುತ್ತದೆ. ಸಾಮಾನ್ಯ ಸ್ಥಳಗಳು ಮತ್ತು ಸನ್ನೆಗಳ ಹಂಬಲ, ನೆನಪು ಮತ್ತು ಮಾನವ ಸಂಪರ್ಕದ ಆಳವಾದ ಪದರಗಳನ್ನು ಹೇಗೆ ಹಿಡಿದಿಟ್ಟುಕೊಳ್ಳಬಹುದು ಎಂಬುದನ್ನು ಈ ಚಲನಚಿತ್ರವು ತೋರಿಸುತ್ತದೆ.

ಭವಿಷ್ಯದಿಂದ ವಿಚಿತ್ರ ಎಚ್ಚರಿಕೆ: ಗುಡ್ ಲಕ್ ಟು ಯು ಆಲ್

ಕೆನಡಾದ ಚಲನಚಿತ್ರ ನಿರ್ಮಾಪಕರಾದ ಕಾರ್ಡೆಲ್ ಬಾರ್ಕರ್ ನಿರ್ದೇಶಿಸಿದ ಅನಿಮೇಟೆಡ್ ಕಿರುಚಿತ್ರ 'ಗುಡ್ ಲಕ್ ಟು ಯು ಆಲ್', ಅದರ ಹಾಸ್ಯ ಪ್ರಧಾನವಾದ, ಆದರೆ ಗೊಂದಲದ ನಿರೂಪಣೆಯ ಸ್ವರದಲ್ಲಿನ ಬದಲಾವಣೆಯನ್ನು ಪರಿಚಯಿಸುತ್ತದೆ. ಈ ಚಿತ್ರವು ತನ್ನ ಆಟಿಕೆಗಳೊಂದಿಗೆ ಕಾಲ್ಪನಿಕ ಆಟದ ಸಮಯದಲ್ಲಿ ಮುಳುಗಿರುವ, ಮಾನವೀಯತೆಯ ಅನಿಶ್ಚಿತ ಭವಿಷ್ಯದೊಂದಿಗೆ ಸಂಪರ್ಕ ಹೊಂದಿರಬಹುದಾದ ಯುವತಿಯನ್ನು ಪ್ರತಿಬಿಂಬಿಸುತ್ತದೆ.

ವಿಜ್ಞಾನಿಗಳು ಮತ್ತು ಚಿಂತಕರ ಛಿದ್ರಗೊಂಡ ಪ್ರತಿಬಿಂಬಗಳಿಂದ ಪ್ರೇರೇಪಿತವಾದ ಈ ಚಿತ್ರವು ಬಾಲ್ಯದ ಮುಗ್ಧತೆ ಮತ್ತು ತಾತ್ವಿಕ ಆತಂಕದ ನಡುವಿನ ಆಂದೋಲನವಾಗಿದೆ. ಇದು ಕೃತಕ ಬುದ್ಧಿಮತ್ತೆ, ತಾಂತ್ರಿಕ ವಿಕಸನ ಮತ್ತು ಮಾನವ ಪ್ರಗತಿಯ ಅನಿರೀಕ್ಷಿತ ಮಾರ್ಗಗಳ ಬಗ್ಗೆ ಅನಿರೀಕ್ಷಿತ ಪ್ರಶ್ನೆಗಳನ್ನು ಹುಟ್ಟುಹಾಕಿ, ಹಾಸ್ಯ, ಆಶ್ಚರ್ಯ ಮತ್ತು ಎಚ್ಚರಿಕೆಯನ್ನು ಸಮಾನ ಪ್ರಮಾಣದಲ್ಲಿ ಬೆರೆಸುತ್ತದೆ. ಬಾರ್ಕರ್ ಅವರು ಕೆನಡಾದ ರಾಷ್ಟ್ರೀಯ ಚಲನಚಿತ್ರ ಮಂಡಳಿಯ ಎರಡು ಬಾರಿ ಅಕಾಡೆಮಿ ಪ್ರಶಸ್ತಿ-ನಾಮನಿರ್ದೇಶಿತ ಅನಿಮೇಟರ್ ನಿರ್ದೇಶಕರಾಗಿದ್ದಾರೆ.

ಪರಿಸರ ಕಾಳಜಿ, ಮಾನವ ಭಾವನೆ ಮತ್ತು ತಾಂತ್ರಿಕ ಪ್ರಶ್ನೆಗಳನ್ನು ಮಿಶ್ರಣ ಮಾಡುವ ಈ ಮೂರು ಆರಂಭಿಕ ಚಿತ್ರಗಳು ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೈವಿಧ್ಯತೆ ಮತ್ತು ಜಾಗತಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಅವುಗಳ ಪ್ರದರ್ಶನಗಳು ಒಂದು ವಾರಾದ್ಯಂತ ನಡೆಯುವ ಈ ಚಲನಚಿತ್ರೋತ್ಸವ ಆಚರಣೆಗೆ ಸ್ಪೂರ್ತಿದಾಯಕ ಮತ್ತು ಚಿಂತನಶೀಲ ವೇದಿಕೆಯನ್ನು ನಿರ್ಮಿಸಿವೆ.

ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ನಾನ್-ಫೀಚರ್ ಸಿನಿಮಾಗೆ ಮೀಸಲಾಗಿರುವ ಚಲನಚಿತ್ರೋತ್ಸವವೆಂದು ಗುರುತಿಸಲ್ಪಟ್ಟ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (MIFF) ಬಹಳ ಹಿಂದಿನಿಂದಲೂ ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ಚಲನಚಿತ್ರ ನಿರ್ಮಾಣದ ರೋಮಾಂಚಕ ಆಚರಣೆಯಾಗಿದೆ. 1990ರಲ್ಲಿ ಸ್ಥಾಪನೆಯಾದ ಮತ್ತು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ ಆಯೋಜಿಸಲ್ಪಟ್ಟ MIFF, ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರು, ಕಲಾವಿದರು ಮತ್ತು ಸಿನೆಮಾ ಉತ್ಸಾಹಿಗಳನ್ನು ಆಕರ್ಷಿಸುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ವೇದಿಕೆಯಾಗಿ ಬೆಳೆದಿದೆ.

ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ಒಂದು ಲೇಖನ:

19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆವೃತ್ತಿಯು ತಲ್ಲೀನತೆಯ ಸಿನಿಮೀಯ ಅನುಭವವನ್ನು ನೀಡುತ್ತದೆ. ಈ ಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆದ ಅಂತಾರಾಷ್ಟ್ರೀಯ ಚಲನಚಿತ್ರಗಳ ಚಿಂತನಶೀಲ ಶ್ರೇಣಿಯನ್ನು ಉದ್ಯಮ-ಕೇಂದ್ರಿತ ಉಪಕ್ರಮಗಳ ಜೊತೆ ಅಳವಡಿಸಲಾಗಿದೆ.

  • ಈ ವರ್ಷ, ಉತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಭಾರತ ಸೇರಿದಂತೆ 47 ದೇಶಗಳಿಂದ 1,459 ಚಲನಚಿತ್ರ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
  • ಈ ಉತ್ಸವವು 42ಕ್ಕೂ ಹೆಚ್ಚು ಭಾರತೀಯ ಭಾಷೆಗಳು ಮತ್ತು ಭಾರತದ ಹೊರಗಿನ 30ಕ್ಕೂ ಹೆಚ್ಚು ಭಾಷೆಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಈ ನಿಲುವು ಉತ್ಸವದ ಜಾಗತಿಕ ವ್ಯಾಪ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.
  • ಪ್ರಪಂಚದಾದ್ಯಂತದ ಮೆಚ್ಚುಗೆ ಪಡೆದ ಚಲನಚಿತ್ರ ನಿರ್ಮಾಪಕರ ಕೃತಿಗಳನ್ನು ಒಳಗೊಂಡಿರುವ ಈ ಉತ್ಸವವು ಕೆಲವು ಅತ್ಯುತ್ತಮ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು, ಅನಿಮೇಷನ್‌ಗಳು, ಚೊಚ್ಚಲ ನಿರ್ದೇಶಕರ ಚಲನಚಿತ್ರಗಳು ಮತ್ತು ವಿದ್ಯಾರ್ಥಿ ಚಲನಚಿತ್ರಗಳನ್ನು ಪ್ರಸ್ತುತಪಡಿಸುತ್ತದೆ.
  • ಈ ಎಲ್ಲಾ ಪ್ರದರ್ಶನಗಳ ಜೊತೆಗೆ, ಡಾಕ್ ಬಜಾರ್‌ನ 2ನೇ ಆವೃತ್ತಿ, ಶ್ರೀಮಂತ ಮಾಸ್ಟರ್‌ಕ್ಲಾಸ್‌ಗಳು ಮತ್ತು ಭಾರತೀಯ ಸಾಕ್ಷ್ಯಚಿತ್ರ ನಿರ್ಮಾಪಕರ ಸಂಘದ ಮುಕ್ತ ವೇದಿಕೆಯು ಈ ಉತ್ಸವದಲ್ಲಿ ಸಿನಿಮೀಯ ಮತ್ತು ಸೃಜನಶೀಲ ವಿನಿಮಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2026 ಕಥೆ ಹೇಳುವ ರೋಮಾಂಚಕ ಜಗತ್ತಿನೊಂದಿಗೆ, ಪ್ರಬಲ ಸಿನಿಮಾ, ಸೃಜನಶೀಲ ಮನಸ್ಸುಗಳು ಮತ್ತು ಸ್ಪೂರ್ತಿದಾಯಕ ಧ್ವನಿಗಳು ಒಟ್ಟಾಗಿ ಸಾಕ್ಷ್ಯಚಿತ್ರ, ಅನಿಮೇಷನ್ ಮತ್ತು ಕಿರು ಕಾದಂಬರಿ ಚಲನಚಿತ್ರ ನಿರ್ಮಾಣದ ಮರೆಯಲಾಗದ ಆಚರಣೆಯನ್ನು ಸೃಷ್ಟಿಸುತ್ತವೆ.

 

*****


Great films resonate through passionate voices. Share your love for cinema with #MIFF2026. Tag us @pibmumbai on X, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at miff.mediadesk@pib.gov.in with the subject line: Take One with PIB.


रिलीज़ आईडी: 2273556   |   Visitor Counter: 10