ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಏರೋಸ್ಪೇಸ್, ರಕ್ಷಣೆ, ಬಾಹ್ಯಾಕಾಶ ಮತ್ತು ವಿದ್ಯುತ್ ಚಲನಶೀಲತೆ ಅನ್ವಯಿಕೆಗಳಿಗಾಗಿ ಸ್ವದೇಶಿ ಉನ್ನತ ವಿಶ್ವಾಸಾರ್ಹತೆಯ (High-Reliability) ಕನೆಕ್ಟರ್ ತಂತ್ರಜ್ಞಾನಗಳ ವಾಣಿಜ್ಯೀಕರಣಕ್ಕಾಗಿ ಬೆಂಗಳೂರಿನ ಟಿಐಇಎ (TIEA) ಕನೆಕ್ಟರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಟಿಡಿಬಿ-ಡಿಎಸ್‌ಟಿ (TDB-DST) ಬೆಂಬಲ
प्रविष्टि तिथि:
10 JUN 2026 3:37PM by PIB Bengaluru
ಭಾರತವು ಸುಧಾರಿತ ಉತ್ಪಾದನೆ ಮತ್ತು ಕಾರ್ಯತಂತ್ರದ ತಂತ್ರಜ್ಞಾನಗಳಿಗೆ ಜಾಗತಿಕ ಕೇಂದ್ರವಾಗುವ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸುತ್ತಿರುವಂತೆಯೇ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (DST) ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯು (TDB), ಬೆಂಗಳೂರಿನ ಟಿಐಇಎ (TIEA) ಕನೆಕ್ಟರ್ಸ್ ಪ್ರೈವೇಟ್ ಲಿಮಿಟೆಡ್‌ಗೆ "ಏರೋಸ್ಪೇಸ್ ಮತ್ತು ರಕ್ಷಣೆಗಾಗಿ ಏರ್‌ಬೋರ್ನ್ (ಏರ್-ಕ್ರಾಫ್ಟ್) ಕನೆಕ್ಟರ್‌ಗಳು ಹಾಗೂ ಇವಿ (EV) ಗಳಿಗಾಗಿ ಚಾರ್ಜಿಂಗ್ ಕನೆಕ್ಟರ್‌ಗಳ ವಾಣಿಜ್ಯೀಕರಣ" ಎಂಬ ಯೋಜನೆಗೆ ಬೆಂಬಲವನ್ನು ನೀಡಿದೆ. ಏರೋಸ್ಪೇಸ್, ರಕ್ಷಣೆ, ಬಾಹ್ಯಾಕಾಶ ಮತ್ತು ವಿದ್ಯುತ್ ಚಲನಶೀಲತೆ ಸೇರಿದಂತೆ ಕಾರ್ಯತಂತ್ರದ ಮತ್ತು ಉದಯೋನ್ಮುಖ ವಲಯಗಳಿಗೆ ಉನ್ನತ ವಿಶ್ವಾಸಾರ್ಹತೆಯ ವಿದ್ಯುತ್ ಇಂಟರ್‌ಕನೆಕ್ಟ್ ವ್ಯವಸ್ಥೆಗಳ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಭಾರತದ ಸ್ವದೇಶಿ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.

ಆಧುನಿಕ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರೋಮೆಕಾನಿಕಲ್ ವ್ಯವಸ್ಥೆಗಳಲ್ಲಿ ವಿದ್ಯುತ್ ಕನೆಕ್ಟರ್‌ಗಳು ಅತ್ಯಂತ ನಿರ್ಣಾಯಕ ಘಟಕಗಳಾಗಿದ್ದು, ಕಠಿಣ ಕಾರ್ಯಾಚರಣೆಯ ಪರಿಸ್ಥಿತಿಗಳಲ್ಲಿ ವಿದ್ಯುತ್, ಸಂಕೇತಗಳು ಮತ್ತು ದತ್ತಾಂಶಗಳ (Data) ಅಡೆತಡೆಯಿಲ್ಲದ ಪ್ರಸರಣವನ್ನು ಖಾತ್ರಿಪಡಿಸುತ್ತವೆ. ವಿಶ್ವಾಸಾರ್ಹತೆ ಮತ್ತು ಕಾರ್ಯಾಚರಣೆಯ ಸುರಕ್ಷತೆಯು ಅತ್ಯುನ್ನತವಾಗಿರುವ ಏರೋಸ್ಪೇಸ್, ರಕ್ಷಣೆ ಮತ್ತು ಬಾಹ್ಯಾಕಾಶದಂತಹ ವಲಯಗಳಿಗೆ, ಕನೆಕ್ಟರ್‌ಗಳು ತೀವ್ರ ಕಂಪನ, ಆಘಾತ, ತಾಪಮಾನ ಮತ್ತು ಪರಿಸರ ಒತ್ತಡದ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಬೇಕು.
ಟಿಐಇಎ (TIEA) ಸಂಸ್ಥೆಯಿಂದ ವಾಣಿಜ್ಯೀಕರಣಗೊಳ್ಳುತ್ತಿರುವ ತಂತ್ರಜ್ಞಾನವು ಅತ್ಯಂತ ಚಲನಶೀಲ ಪರಿಸರದಲ್ಲಿ ಸ್ಥಿರವಾದ ವಿದ್ಯುತ್ ಕಾರ್ಯಕ್ಷಮತೆಯನ್ನು ನೀಡಲು ವಿನ್ಯಾಸಗೊಳಿಸಲಾದ ಸುಧಾರಿತ ಕಂಪನ-ನಿಗ್ರಹ ವ್ಯವಸ್ಥೆಯನ್ನು ಆಧರಿಸಿದೆ. ಈ ನಾವೀನ್ಯತೆಯು ಸಂಪರ್ಕ ಧಾರಣವನ್ನು ಹೆಚ್ಚಿಸುವ, ವಿದ್ಯುತ್ ಪ್ರತಿರೋಧವನ್ನು ಕಡಿಮೆ ಮಾಡುವ ಮತ್ತು ತೀವ್ರ ಕಂಪನ ಹೊರೆಗಳ ಅಡಿಯಲ್ಲಿಯೂ ಸಂಕೇತಗಳ (Signal) ಅಡಚಣೆಯನ್ನು ತಡೆಯುವ ಸ್ವಾಮ್ಯದ ಬಹು-ಬಿಂದು ಸ್ಥಿತಿಸ್ಥಾಪಕ ಸಂಪರ್ಕ ಕಾರ್ಯವಿಧಾನವನ್ನು ಒಳಗೊಂಡಿದೆ. ಸಾಂಪ್ರದಾಯಿಕ ಸ್ಟ್ಯಾಂಪ್ಡ್-ಸಂಪರ್ಕ ಕನೆಕ್ಟರ್ ವ್ಯವಸ್ಥೆಗಳಿಗಿಂತ ಭಿನ್ನವಾಗಿ, ಈ ತಂತ್ರಜ್ಞಾನವು ಹೆಚ್ಚುವರಿ (Redundant) ಸಂಪರ್ಕ ಬಿಂದುಗಳನ್ನು ಒದಗಿಸುತ್ತದೆ, ಇದರ ಪರಿಣಾಮವಾಗಿ ಉತ್ತಮ ಕಂಪನ ಸಹಿಷ್ಣುತೆ, ಸುಧಾರಿತ ಬಾಳಿಕೆ ಮತ್ತು ವಿಸ್ತೃತ ಕಾರ್ಯಾಚರಣೆಯ ಆಯಸ್ಸು ಉಂಟಾಗುತ್ತದೆ.
ಈ ತಂತ್ರಜ್ಞಾನದ ಪ್ರಮುಖ ಲಕ್ಷಣವೆಂದರೆ 100G ವರೆಗಿನ ತೀವ್ರ ಕಂಪನ ಮಟ್ಟಗಳ ಅಡಿಯಲ್ಲಿಯೂ ವಿಶ್ವಾಸಾರ್ಹ ವಿದ್ಯುತ್ ಜೋಡಣೆಯನ್ನು (Engagement) ನಿರ್ವಹಿಸುವ ಸಾಮರ್ಥ್ಯವಾಗಿದ್ದು, ಇದು ಅತ್ಯಂತ ನಿರ್ಣಾಯಕ ಏರೋಸ್ಪೇಸ್, ರಕ್ಷಣೆ ಮತ್ತು ಬಾಹ್ಯಾಕಾಶ ಅನ್ವಯಿಕೆಗಳಿಗೆ ಅತ್ಯಂತ ಸೂಕ್ತವಾಗಿದೆ. ಈ ಕನೆಕ್ಟರ್‌ಗಳನ್ನು ಹೆಚ್ಚಿನ ಕಾರ್ಯಕ್ಷಮತೆಯ ಬೆರಿಲಿಯಮ್ ತಾಮ್ರ (BeCu) ಮಿಶ್ರಲೋಹವನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ಕಠಿಣ ಕಾರ್ಯಾಚರಣೆಯ ಪರಿಸ್ಥಿತಿಗಳಲ್ಲಿ ಸುರಕ್ಷಿತ ಜೋಡಣೆ ಹಾಗೂ ನಿರಂತರ ವಿದ್ಯುತ್ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಲಾಕಿಂಗ್ ಕಾರ್ಯವಿಧಾನಗಳನ್ನು ಸಂಯೋಜಿಸಲಾಗುತ್ತದೆ. ಕಾರ್ಯತಂತ್ರದ ಅನ್ವಯಿಕೆಗಳಿಗಾಗಿ, ಕನೆಕ್ಟರ್‌ಗಳನ್ನು ಬೆಳ್ಳಿ ಮತ್ತು ಚಿನ್ನದ ಲೇಪನದ ಮೂಲಕ ಮತ್ತಷ್ಟು ವರ್ಧಿಸಲಾಗುತ್ತದೆ, ಇದು ಉತ್ತಮ ವಾಹಕತೆ, ತುಕ್ಕು ನಿರೋಧಕತೆ ಮತ್ತು ದೀರ್ಘಕಾಲೀನ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ.
ಈ ಯೋಜನೆಯು ಭಾರತ ಸರ್ಕಾರದ 'ಆತ್ಮನಿರ್ಭರ ಭಾರತ' ದೂರದೃಷ್ಟಿ ಮತ್ತು ರಕ್ಷಣೆ, ಏರೋಸ್ಪೇಸ್ ಮತ್ತು ಸುಧಾರಿತ ಉತ್ಪಾದನಾ ವಲಯಗಳಿಗೆ ನಿರ್ಣಾಯಕ ತಂತ್ರಜ್ಞಾನಗಳ ಸ್ವದೇಶೀಕರಣದ ಮೇಲೆ ಹೆಚ್ಚುತ್ತಿರುವ ಒತ್ತುಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಟಿಐಇಎ (TIEA) ಉತ್ಪನ್ನ ವಿನ್ಯಾಸ, ಎಂಜಿನಿಯರಿಂಗ್, ಉಪಕರಣಗಳು, ಮೂಲಮಾದರಿ, ಮೌಲ್ಯೀಕರಣ, ಪರೀಕ್ಷೆ ಮತ್ತು ಉತ್ಪಾದನೆಯನ್ನು ಒಳಗೊಂಡ ಸಮಗ್ರ ಆಂತರಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿದೆ. ನಿಖರ ಉಪಕರಣಗಳು, ಹೈ-ಸ್ಪೀಡ್ ಸ್ಟ್ಯಾಂಪಿಂಗ್, ವೈಜ್ಞಾನಿಕ ಇಂಜೆಕ್ಷನ್ ಮೋಲ್ಡಿಂಗ್, ಮೇಲ್ಮೈ ಸಂಸ್ಕರಣೆ (Surface treatment) ಮತ್ತು ಕಾರ್ಯಕ್ಷಮತೆ ಪರೀಕ್ಷೆಯಂತಹ ನಿರ್ಣಾಯಕ ಪ್ರಕ್ರಿಯೆಗಳನ್ನು ದೇಶದಲ್ಲೇ ನಡೆಸಲಾಗುತ್ತಿದೆ, ಇದು ಆಮದು ಮಾಡಿಕೊಂಡ ಕನೆಕ್ಟರ್ ತಂತ್ರಜ್ಞಾನಗಳು ಮತ್ತು ಬಿಡಿಭಾಗಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಕಾರ್ಯತಂತ್ರದ ಅನ್ವಯಿಕೆಗಳನ್ನು ಮೀರಿ, ಈ ತಂತ್ರಜ್ಞಾನವು ಎಲೆಕ್ಟ್ರಿಕ್ ವಾಹನಗಳಿಗೆ ದೃಢವಾದ ಮತ್ತು ವಿಶ್ವಾಸಾರ್ಹ ಚಾರ್ಜಿಂಗ್ ಕನೆಕ್ಟರ್ ಪರಿಹಾರಗಳ ಅಭಿವೃದ್ಧಿಯನ್ನು ಬೆಂಬಲಿಸುವ ಮೂಲಕ ಭಾರತದ ವಿದ್ಯುತ್ ಚಲನಶೀಲತೆ (Electric Mobility) ಪರಿಸರ ವ್ಯವಸ್ಥೆಯ ಬೆಳೆಯುತ್ತಿರುವ ಅವಶ್ಯಕತೆಗಳನ್ನು ಸಹ ಪರಿಹರಿಸುತ್ತದೆ. ಈ ಯೋಜನೆಯು ದೇಶೀಯ ಪೂರೈಕೆ ಸರಪಳಿಗಳನ್ನು ಬಲಪಡಿಸಲು, ತಾಂತ್ರಿಕ ಸ್ವಾವಲಂಬನೆಯನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಮೌಲ್ಯದ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಉತ್ಪಾದನಾ ಸಾಮರ್ಥ್ಯಗಳನ್ನು ಸೃಷ್ಟಿಸಲು ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಟಿಡಿಬಿ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಪಾಠಕ್ ಅವರು, ”ಭಾರತವು ಏರೋಸ್ಪೇಸ್, ರಕ್ಷಣೆ, ಬಾಹ್ಯಾಕಾಶ ತಂತ್ರಜ್ಞಾನಗಳು ಮತ್ತು ವಿದ್ಯುತ್ ಚಲನಶೀಲತೆಯಲ್ಲಿ ತನ್ನ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದ್ದಂತೆ, ವಿಶ್ವಾಸಾರ್ಹ ಸ್ವದೇಶಿ ಬಿಡಿಭಾಗಗಳ ತಂತ್ರಜ್ಞಾನಗಳ ಲಭ್ಯತೆಯು ಹೆಚ್ಚು ಮುಖ್ಯವಾಗುತ್ತದೆ. ಉನ್ನತ-ಕಾರ್ಯಕ್ಷಮತೆಯ ಕನೆಕ್ಟರ್‌ಗಳು ಆಧುನಿಕ ಎಲೆಕ್ಟ್ರಾನಿಕ್ ವ್ಯವಸ್ಥೆಗಳಿಗೆ ನಿರ್ಣಾಯಕ ನಿರ್ಮಾಣ ಘಟಕಗಳಾಗಿದ್ದು, ಅವುಗಳ ದೇಶೀಯ ಅಭಿವೃದ್ಧಿಯು ತಾಂತ್ರಿಕ ಸ್ವಾವಲಂಬನೆ ಮತ್ತು ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವ ಎರಡನ್ನೂ ಬಲಪಡಿಸುತ್ತದೆ. ಕಾರ್ಯತಂತ್ರದ ಮತ್ತು ಉನ್ನತ-ಬೆಳವಣಿಗೆಯ ವಲಯಗಳಿಗೆ ಜಾಗತಿಕವಾಗಿ ಸ್ಪರ್ಧಾತ್ಮಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿರುವ ಭಾರತೀಯ ಉದ್ಯಮಗಳನ್ನು ಬೆಂಬಲಿಸಲು ಟಿಡಿಬಿ ಬದ್ಧವಾಗಿದೆ’’ ಎಂದು ತಿಳಿಸಿದರು.
ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಟಿಐಇಎ ಕನೆಕ್ಟರ್ಸ್ ಪ್ರೈವೇಟ್ ಲಿಮಿಟೆಡ್‌ನ ಪ್ರವರ್ತಕರು, ಈ ಸಹಾಯವು ಕಂಪನಿಯು ತನ್ನ ಸ್ವದೇಶಿ ಕನೆಕ್ಟರ್ ತಂತ್ರಜ್ಞಾನಗಳ ವಾಣಿಜ್ಯೀಕರಣವನ್ನು ವೇಗಗೊಳಿಸಲು ಮತ್ತು ಭಾರತ ಹಾಗೂ ವಿದೇಶಗಳಲ್ಲಿ ಏರೋಸ್ಪೇಸ್, ರಕ್ಷಣೆ, ಬಾಹ್ಯಾಕಾಶ, ವಿದ್ಯುತ್ ವಾಹನ ಮತ್ತು ಕೈಗಾರಿಕಾ ಮಾರುಕಟ್ಟೆಗಳ ಬೆಳೆಯುತ್ತಿರುವ ಅವಶ್ಯಕತೆಗಳನ್ನು ಪೂರೈಸಲು ಉತ್ಪಾದನಾ ಸಾಮರ್ಥ್ಯಗಳನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
****
(रिलीज़ आईडी: 2271307)
आगंतुक पटल : 6