ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಮೌಲ್ಯವರ್ಧನೆ, ಸುಸ್ಥಿರತೆ ಮತ್ತು ಮಾರುಕಟ್ಟೆ ಅವಕಾಶಗಳ ಮೇಲೆ ಗಮನ ಹರಿಸಿದ ಕಡಲ ಆಹಾರ ರಫ್ತು ಕುರಿತ ರಾಷ್ಟ್ರೀಯ ಕಾರ್ಯಾಗಾರ


ಒಂದು ದಶಕದಲ್ಲಿ ಕಡಲ ಉತ್ಪನ್ನಗಳ ರಫ್ತಿನಲ್ಲಿ ಸುಮಾರು 70% ರಷ್ಟು ಹೆಚ್ಚಳ; ಭಾರತವು 30 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಕಡಲ ಆಹಾರ ರಫ್ತನ್ನು ತನ್ನ  ಗುರಿಯಾಗಿಸಿಕೊಂಡಿದೆ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್

ಕಡಲ ಆಹಾರ ವಲಯದಲ್ಲಿ ಪಿಎಲ್‌ಐ ಚೌಕಟ್ಟು, ಕೋಲ್ಡ್ ಚೈನ್ ಮೂಲಸೌಕರ್ಯ ಮತ್ತು ರಫ್ತು ಅವಕಾಶಗಳ ಕುರಿತು ಕಾರ್ಯಾಗಾರದಲ್ಲಿ ಪರಿಶೀಲನೆ

प्रविष्टि तिथि: 09 JUN 2026 12:01PM by PIB Bengaluru

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಾಣಿಜ್ಯ ಇಲಾಖೆಯು, ಮೀನುಗಾರಿಕೆ ಇಲಾಖೆ ಹಾಗೂ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ (MoFPI) ಸಹಯೋಗದೊಂದಿಗೆ 2026 ರ ಜೂನ್ 5-6 ರಂದು ವಿಶಾಖಪಟ್ಟಣದಲ್ಲಿ ಕಡಲ ಆಹಾರ ರಫ್ತು ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ಕಾರ್ಯಾಗಾರವು ಮೌಲ್ಯವರ್ಧನೆ, ಸುಸ್ಥಿರತೆ, ಸುಧಾರಿತ ಮಾರುಕಟ್ಟೆ ಪ್ರವೇಶ, ನಾವೀನ್ಯತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಭಾರತದ ಕಡಲ ಆಹಾರ  ರಫ್ತನ್ನು ಹೆಚ್ಚಿಸುವ ಕುರಿತು ಚರ್ಚಿಸಲು ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಿತು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು; ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್; ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ರಾಜೀವ್ ರಂಜನ್ ಸಿಂಗ್; ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು ಮತ್ತು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಪಿಯೂಷ್ ಗೋಯಲ್ ಅವರು, ಕಡಲ ಆಹಾರ ರಫ್ತನ್ನು ಉತ್ತೇಜಿಸಲು ಇಡೀ ಸರ್ಕಾರದ ವ್ಯವಸ್ಥಿತ ವಿಧಾನದ ಕುರಿತು ಸರ್ಕಾರದ ಪ್ರಯತ್ನಗಳನ್ನು ಉಲ್ಲೇಖಿಸಿದರು ಮತ್ತು ಕಳೆದ ಒಂದು ದಶಕದಲ್ಲಿ ಭಾರತದ ಕಡಲ ಉತ್ಪನ್ನಗಳ ರಫ್ತು ಮೌಲ್ಯದ ದೃಷ್ಟಿಯಿಂದ ಸುಮಾರು ಶೇಕಡಾ 70 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು. ಭಾರತವು ಪ್ರಸ್ತುತ ಜಾಗತಿಕ ಕಡಲ ಆಹಾರ ವ್ಯಾಪಾರದಲ್ಲಿ ಸುಮಾರು ಶೇಕಡಾ 4 ರಷ್ಟು ಪಾಲನ್ನು ಹೊಂದಿದೆ ಎಂದು ಅವರು ಹೇಳಿದರು, ಹಾಗೂ ಮುಂದಿನ ಐದು ವರ್ಷಗಳಲ್ಲಿ ಮೌಲ್ಯವರ್ಧನೆ, ಬ್ರಾಂಡಿಂಗ್, ಗುಣಮಟ್ಟ ವರ್ಧನೆ, ಸುಸ್ಥಿರತೆ ಮತ್ತು ರಫ್ತು ಮಾರುಕಟ್ಟೆಗಳ ವೈವಿಧ್ಯೀಕರಣದ ಮೂಲಕ 30 ಬಿಲಿಯನ್ ಅಮೆರಿಕನ್ ಡಾಲರ್ ಕಡಲ ಆಹಾರ ರಫ್ತು ಗುರಿಯನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡುವಂತೆ ಪಾಲುದಾರರಿಗೆ ಕರೆ ನೀಡಿದರು.

ರೆಡಿ-ಟು-ಈಟ್ (ಬಳಕೆಗೆ ಸಿದ್ಧವಿರುವ) ಮತ್ತು ರೆಡಿ-ಟು-ಕುಕ್ (ಅಡುಗೆಗೆ ಸಿದ್ಧವಿರುವ) ಉತ್ಪನ್ನಗಳು ಸೇರಿದಂತೆ ಮೌಲ್ಯವರ್ಧಿತ ಕಡಲ ಆಹಾರ ಉತ್ಪನ್ನಗಳ ಪಾಲನ್ನು ಹೆಚ್ಚಿಸುವ ಅಗತ್ಯವನ್ನು ಸಚಿವರು ಒತ್ತಿಹೇಳಿದರು, ಮತ್ತು 38 ದೇಶಗಳನ್ನು ಒಳಗೊಂಡಿರುವ ಭಾರತದ ಇತ್ತೀಚಿನ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಲಭ್ಯವಾಗಿರುವ ಮಾರುಕಟ್ಟೆ ಅವಕಾಶಗಳನ್ನು ಬಳಸಿಕೊಳ್ಳಲು ರಫ್ತುದಾರರನ್ನು ಪ್ರೋತ್ಸಾಹಿಸಿದರು. ಭಾರತವನ್ನು ಜಾಗತಿಕವಾಗಿ ಉತ್ತಮ ಗುಣಮಟ್ಟದ ಮತ್ತು ಸುಸ್ಥಿರ ಕಡಲ ಆಹಾರ ಉತ್ಪನ್ನಗಳ ವಿಶ್ವಾಸಾರ್ಹ ಮೂಲವಾಗಿ ಸ್ಥಾಪಿಸುವ ಸರ್ಕಾರದ ದೃಷ್ಟಿಕೋನವನ್ನು ಅವರು ಪುನರುಚ್ಚರಿಸಿದರು.

ಮೀನುಗಾರಿಕೆ ಮತ್ತು ಜಲಚರ ಸಾಕಣೆಯಲ್ಲಿ ಆಂಧ್ರಪ್ರದೇಶದ ನಾಯಕತ್ವವನ್ನು ಹಾಗೂ ಭಾರತದ ಕಡಲ ಆಹಾರ ರಫ್ತಿಗೆ ಅದರ ಗಮನಾರ್ಹ ಕೊಡುಗೆಯನ್ನು ಶ್ರೀ ಎನ್. ಚಂದ್ರಬಾಬು ನಾಯ್ಡು ಅವರು ಎತ್ತಿ ತೋರಿಸಿದರು. ನಾವೀನ್ಯತೆ, ಮೂಲಸೌಕರ್ಯ ಅಭಿವೃದ್ಧಿ, ಬ್ರಾಂಡಿಂಗ್ ಮತ್ತು ಪಾಲುದಾರರ ಸಹಯೋಗದ ಮೂಲಕ ಆಂಧ್ರಪ್ರದೇಶವನ್ನು ಸುಸ್ಥಿರ ಜಲಚರ ಸಾಕಣೆ ಮತ್ತು ಕಡಲ ಆಹಾರ ರಫ್ತಿನ ಜಾಗತಿಕ ಕೇಂದ್ರವನ್ನಾಗಿ ಮಾಡಲು ರಾಜ್ಯ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಶ್ರೀ ರಾಜೀವ್ ರಂಜನ್ ಸಿಂಗ್ ಅವರು, ಭಾರತದ ಮೀನುಗಾರಿಕೆ ವಲಯದ ಗಮನಾರ್ಹ ಬೆಳವಣಿಗೆಯನ್ನು ಎತ್ತಿ ತೋರಿಸಿದರು, ಮೀನು ಉತ್ಪಾದನೆಯು 2012-13 ರಲ್ಲಿದ್ದ 95.8 ಲಕ್ಷ ಟನ್‌ಗಳಿಂದ 2024-25 ರಲ್ಲಿ ಸುಮಾರು 198 ಲಕ್ಷ ಟನ್‌ಗಳಿಗೆ ಹೆಚ್ಚಾಗಿದೆ ಎಂದು ತಿಳಿಸಿದರು. ಜಾಗತಿಕ ಸವಾಲುಗಳ ಹೊರತಾಗಿಯೂ, ಭಾರತದ ಕಡಲ ಆಹಾರ ರಫ್ತು ಸರಿಸುಮಾರು ₹73,890 ಕೋಟಿಗೆ (8.46 ಬಿಲಿಯನ್ ಅಮೆರಿಕನ್ ಡಾಲರ್) ತಲುಪಿದೆ, ಇದರಲ್ಲಿ ಹೆಪ್ಪುಗಟ್ಟಿದ ಸೀಗಡಿ (Frozen shrimp) ದೇಶದ ಪ್ರಮುಖ ಕಡಲ ಆಹಾರ ರಫ್ತು ವಸ್ತುವಾಗಿ ಮುಂದುವರಿದಿದೆ ಎಂದು ಅವರು ಉಲ್ಲೇಖಿಸಿದರು. ರಫ್ತು ಆಧಾರಿತ ಮೀನುಗಾರಿಕೆ ಮೂಲಸೌಕರ್ಯ, ಟ್ರೇಸ್ ಎಬಿಲಿಟಿ (ಮೂಲ ಪತ್ತೆಹಚ್ಚುವಿಕೆ), ಮೌಲ್ಯವರ್ಧನೆ ಮತ್ತು ಸುಸ್ಥಿರ ಜಲಚರ ಸಾಕಣೆಯನ್ನು ಬಲಪಡಿಸಲು ಪಿಎಂಎಂಎಸ್‌ವೈ (PMMSY) ಮತ್ತು ಪಿಎಂಕೆಎಸ್‌ಎಸ್‌ವೈ 2.0 (PMKSSY 2.0) ಅಡಿಯಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಪ್ರಯತ್ನಗಳನ್ನು ಅವರು ಒತ್ತಿ ಹೇಳಿದರು.

ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು ಅವರು, ಹೆಚ್ಚಿನ ಮೌಲ್ಯದ ಕಡಲ ಆಹಾರ ರಫ್ತಿಗೆ ಬೆಂಬಲ ನೀಡುವಲ್ಲಿ ದಕ್ಷ ಲಾಜಿಸ್ಟಿಕ್ಸ್ ಮತ್ತು ಏರ್ ಕಾರ್ಗೋ ಮೂಲಸೌಕರ್ಯಗಳ ಮಹತ್ವವನ್ನು ಒತ್ತಿಹೇಳಿದರು. ಭಾರತದ ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಕಾರ್ಗೋ ಮೂಲಸೌಕರ್ಯವನ್ನು ಬಲಪಡಿಸಲು, ಮಲ್ಟಿಮೋಡಲ್ ಸಂಪರ್ಕವನ್ನು ಸುಧಾರಿಸಲು ಮತ್ತು ಕಾರ್ಗೋ ಚಲನೆಯನ್ನು ಸುಗಮಗೊಳಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು.

ಕಡಲ ಆಹಾರ ವಲಯದಲ್ಲಿ ಮೌಲ್ಯವರ್ಧನೆಗಿರುವ ಅಪಾರ ಸಾಮರ್ಥ್ಯವನ್ನು ಶ್ರೀ ಚಿರಾಗ್ ಪಾಸ್ವಾನ್ ಅವರು ಒತ್ತಿಹೇಳಿದರು ಮತ್ತು ಸಂಸ್ಕರಣೆ, ಬ್ರಾಂಡಿಂಗ್, ತಂತ್ರಜ್ಞಾನದ ಅಳವಡಿಕೆ ಮತ್ತು ಮಾರುಕಟ್ಟೆ ವೈವಿಧ್ಯೀಕರಣದ ಕಡೆಗೆ ಹೆಚ್ಚಿನ ಗಮನ ಹರಿಸಲು ಕರೆ ನೀಡಿದರು. ಆಹಾರ ಉತ್ಪನ್ನಗಳ ವಿಶ್ವಾಸಾರ್ಹ ಜಾಗತಿಕ ಪೂರೈಕೆದಾರನಾಗಿ ಭಾರತದ ಸ್ಥಾನವನ್ನು ಬಲಪಡಿಸುವಾಗ, ಕೇವಲ ಪ್ರಮಾಣದಿಂದ ಮೌಲ್ಯದ ಕಡೆಗೆ (Volume to value) ಮತ್ತು ಉತ್ಪಾದನೆಯಿಂದ ಉತ್ಪನ್ನದ ಕಡೆಗೆ (Produce to product) ಮುನ್ನಡೆಯುವ ಅಗತ್ಯವನ್ನು ಅವರು ಒತ್ತಿಹೇಳಿದರು.

ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ ಅವರು, ಭಾರತದ ಕಡಲ ಆಹಾರ ರಫ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಪಾಲುದಾರರ ನಡುವೆ ಸಂಘಟಿತ ಪ್ರಯತ್ನಗಳ ಮಹತ್ವವನ್ನು ಎತ್ತಿ ತೋರಿಸಿದರು. ಈ ವಲಯದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಪ್ರಮಾಣೀಕರಣ, ನಾವೀನ್ಯತೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಪ್ರವೇಶದ ಪಾತ್ರವನ್ನು ಅವರು ಒತ್ತಿಹೇಳಿದರು.

ಈ ಕಾರ್ಯಕ್ರಮವು ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು, ಎಂಪೆಡಾ (MPEDA), ಇಐಸಿ (EIC), ಎನ್‌ಎಫ್‌ಡಿಬಿ (NFDB), ನಬಾರ್ಡ್ (NABARD), ಎನ್‌ಸಿಡಿಸಿ (NCDC), ಎನ್‌ಸಿಇಎಲ್ (NCEL) ಮತ್ತು ಎಸ್‌ಎಫ್‌ಎಸಿ (SFAC) ಸೇರಿದಂತೆ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು, ಹಾಗೆಯೇ ಕಡಲ ಆಹಾರ ರಫ್ತುದಾರರು, ಸಂಸ್ಕಾರಕರು (Processors), ಉದ್ಯಮ ಸಂಘಗಳು, ಸ್ಟಾರ್ಟ್ಅಪ್ ಗಳು, ಸಂಶೋಧಕರು, ಜಲಚರ ಸಾಕಣೆ ರೈತರು ಮತ್ತು ಕಡಲ ಆಹಾರ ಮೌಲ್ಯ ಸರಪಳಿಯಾದ್ಯಂತದ ಇತರ ಪಾಲುದಾರರನ್ನು ಒಂದೆಡೆ ಸೇರಿಸಿತು.

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹ-ಯೋಜನೆ (PMKSSY), ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಮತ್ತು ಇತರ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.

ಸಂವಾದಾತ್ಮಕ ಗೋಷ್ಠಿಯ ಅವಧಿಯಲ್ಲಿ, ಪಾಲುದಾರರು ಮೀನುಗಾರಿಕೆ ಮೌಲ್ಯ ಸರಪಳಿಯಾದ್ಯಂತ ಎದುರಿಸುತ್ತಿರುವ ಪ್ರಮುಖ ಸವಾಲುಗಳ ಕುರಿತು ಚರ್ಚಿಸಿದರು, ಇದರಲ್ಲಿ ರೋಗ ನಿರ್ವಹಣೆ, ಹೆಚ್ಚುತ್ತಿರುವ ಹೂಡಿಕೆ ವೆಚ್ಚಗಳು, ಫಿಶ್‌ಮೀಲ್ ಲಭ್ಯತೆ, ಗುಣಮಟ್ಟದ ಬೀಜಗಳು ಮತ್ತು ಬ್ರೂಡ್‌ಸ್ಟಾಕ್‌ಗಳ ಪ್ರವೇಶ, ಕ್ವಾರಂಟೈನ್ ಮೂಲಸೌಕರ್ಯ, ಲಾಜಿಸ್ಟಿಕ್ಸ್, ಕೋಲ್ಡ್ ಚೈನ್ ಅಭಿವೃದ್ಧಿ, ಪ್ರಮಾಣೀಕರಣ ಅಗತ್ಯತೆಗಳು, ಟ್ರೇಸ್ ಎಬಿಲಿಟಿ ಮತ್ತು ಸುಸ್ಥಿರತೆಯ ಮಾನದಂಡಗಳು ಸೇರಿವೆ. ಭಾಗಿಗಳು ಮೌಲ್ಯವರ್ಧನೆಯನ್ನು ಉತ್ತೇಜಿಸುವ, ರಫ್ತು ಮಾರುಕಟ್ಟೆಗಳನ್ನು ವೈವಿಧ್ಯಗೊಳಿಸುವ, ನವೋದ್ಯಮಗಳು ಮತ್ತು ಎಂಎಸ್‌ಎಂಇಗಳನ್ನು ಬೆಂಬಲಿಸುವ ಮತ್ತು ಸುಸ್ಥಿರ ಮೀನುಗಾರಿಕೆ ಪದ್ಧತಿಗಳನ್ನು ಪ್ರೋತ್ಸಾಹಿಸುವ ಅಗತ್ಯವನ್ನೂ ಎತ್ತಿ ತೋರಿಸಿದರು.

ಕಾರ್ಯಾಗಾರದ ಎರಡನೇ ದಿನವು ಪತ್ತೆಹಚ್ಚುವಿಕೆ  ವ್ಯವಸ್ಥೆಗಳು, ಸುಸ್ಥಿರ ಪ್ರಮಾಣೀಕರಣ, ಮೌಲ್ಯವರ್ಧನೆ, ರಫ್ತು ಉತ್ತೇಜನ, ಆಳ ಸಮುದ್ರದ ಮೀನುಗಾರಿಕೆ, ರಫ್ತು ಅವಕಾಶಗಳ ವೈವಿಧ್ಯೀಕರಣ ಮತ್ತು ಕಡಲ ಆಹಾರ ವಲಯಕ್ಕಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (PLI) ಚೌಕಟ್ಟಿನ ಸಾಮರ್ಥ್ಯದ ಕುರಿತು ಸರಣಿ ತಾಂತ್ರಿಕ ಗೋಷ್ಠಿಗಳನ್ನು ಒಳಗೊಂಡಿತ್ತು. ತಜ್ಞರು ಮತ್ತು ಪಾಲುದಾರರು ಅಂತರರಾಷ್ಟ್ರೀಯ ಮಾನದಂಡಗಳ ಅನುಸರಣೆಯನ್ನು ಬಲಪಡಿಸುವುದು, ಸಂಸ್ಕರಣೆ ಮತ್ತು ಕೋಲ್ಡ್-ಚೈನ್ ಮೂಲಸೌಕರ್ಯವನ್ನು ಹೆಚ್ಚಿಸುವುದು, ನಾವೀನ್ಯತೆಯನ್ನು ಉತ್ತೇಜಿಸುವುದು, ನವೋದ್ಯಮಗಳು ಮತ್ತು ಎಂಎಸ್‌ಎಂಇಗಳನ್ನು ಬೆಂಬಲಿಸುವುದು ಮತ್ತು ಭಾರತೀಯ ಕಡಲ ಆಹಾರ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುವ ಕುರಿತು ಚರ್ಚಿಸಿದರು.

ಭಾರತದ ವಿಶೇಷ ಆರ್ಥಿಕ ವಲಯದೊಳಗೆ, ಪ್ರಮುಖವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪಗಳಲ್ಲಿ ಹೆಚ್ಚಿನ ಮೌಲ್ಯದ ಆಳ ಸಮುದ್ರದ ಸಂಪನ್ಮೂಲಗಳ ಬಳಕೆಯಾಗದ ಸಾಮರ್ಥ್ಯವನ್ನು ಬಳಸಿಕೊಳ್ಳುವ ಬಗ್ಗೆಯೂ ಚರ್ಚೆಗಳು ಗಮನ ಹರಿಸಿದವು, ಜೊತೆಗೆ ಕಡಲಕಳೆ (Seaweed), ಅಲಂಕಾರಿಕ ಮೀನುಗಾರಿಕೆ, ಶೀತಲ ನೀರಿನ ಮೀನುಗಾರಿಕೆ ಮತ್ತು ಟ್ರೌಟ್ ಕೃಷಿ ಸೇರಿದಂತೆ ಉದಯೋನ್ಮುಖ ವಲಯಗಳ ಬಗ್ಗೆಯೂ ಚರ್ಚಿಸಲಾಯಿತು.

ಕಡಲ ಆಹಾರ ವಲಯದಾದ್ಯಂತ ನಾವೀನ್ಯತೆ, ಉದ್ಯಮಶೀಲತೆ ಮತ್ತು ವೈವಿಧ್ಯೀಕರಣವನ್ನು ಪೋಷಿಸುವ ಜೊತೆಗೆ ಸುಸ್ಥಿರತೆ, ಪತ್ತೆಹಚ್ಚುವಿಕೆ, ಮೌಲ್ಯವರ್ಧನೆ, ರಫ್ತು ಮೂಲಸೌಕರ್ಯ ಮತ್ತು ಮಾರುಕಟ್ಟೆ ಪ್ರವೇಶವನ್ನು ಬಲಪಡಿಸಲು ಪಾಲುದಾರರ ನಡುವೆ ಜಂಟಿ ಬದ್ಧತೆಯೊಂದಿಗೆ ಕಾರ್ಯಾಗಾರವು ಮುಕ್ತಾಯಗೊಂಡಿತು. ಈ ಚರ್ಚೆಗಳಿಂದ ಹೊರಹೊಮ್ಮುವ ಶಿಫಾರಸುಗಳು ಕಡಲ ಆಹಾರ ರಫ್ತಿನಲ್ಲಿ ಭಾರತದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ವಿಕಸಿತ ಭಾರತ 2047ರ ದೃಷ್ಟಿಕೋನವನ್ನು ಮುನ್ನಡೆಸಲು ಒಂದು ಸಮಗ್ರ ಮಾರ್ಗಸೂಚಿಗೆ ಕೊಡುಗೆ ನೀಡುವ ನಿರೀಕ್ಷೆಯಿದೆ.


 

*****


(रिलीज़ आईडी: 2270659) आगंतुक पटल : 15
इस विज्ञप्ति को इन भाषाओं में पढ़ें: English , Urdu , हिन्दी , Tamil , Telugu