ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಕರ್ನಾಟಕದಿಂದ ನ್ಯೂಜಿಲ್ಯಾಂಡ್‌ಗೆ ಗಿಡಮೂಲಿಕೆ ಮಿಶ್ರಿತ ಸಿರಿಧಾನ್ಯ ಆಧಾರಿತ ಪೌಷ್ಟಿಕ ಆಹಾರಗಳ ಪ್ರಪ್ರಥಮ ಕಡಲ ರಫ್ತು ಪ್ರಕ್ರಿಯೆಯನ್ನು ಸುಗಮಗೊಳಿಸಿದ ಎ ಪಿ ಇ ಡಿ ಎ


ಎ ಪಿ ಇ ಡಿ ಎ ನೆರವು ನೀಡಿದ ಉದ್ಯಮ ಜಾಲವು ಭಾರತದ ಸಿರಿಧಾನ್ಯ ಆಧಾರಿತ ಪೌಷ್ಟಿಕ ಆಹಾರಗಳಿಗೆ ಹೊಸ ರಫ್ತು ಮಾರುಕಟ್ಟೆಯನ್ನು ಮುಕ್ತಗೊಳಿಸಿದೆ

ಮೌಲ್ಯವರ್ಧಿತ ಸಿರಿಧಾನ್ಯ ಪೌಷ್ಟಿಕ ಆಹಾರಗಳ ರಫ್ತು, ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಭಾರತದ ಕೃಷಿ ರಫ್ತು ವ್ಯವಸ್ಥೆಯನ್ನು ಬಲಪಡಿಸುವ ನಿರೀಕ್ಷೆ

प्रविष्टि तिथि: 04 JUN 2026 5:07PM by PIB Bengaluru

ಭಾರತದ ಕೃಷಿ-ಆಹಾರ ರಫ್ತಿಗೆ ಗಮನಾರ್ಹ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (ಎ ಪಿ ಇ ಡಿ ಎ) ಜೂನ್ 3, 2026 ರಂದು ಕರ್ನಾಟಕದಿಂದ ನ್ಯೂಜಿಲ್ಯಾಂಡ್‌ಗೆ ಗಿಡಮೂಲಿಕೆ ಮಿಶ್ರಿತ (Botanical-Infused), ಬಳಸಲು ಸಿದ್ಧವಿರುವ ಸಿರಿಧಾನ್ಯ ಆಧಾರಿತ ಪೌಷ್ಟಿಕ ಆಹಾರಗಳ ಪ್ರಪ್ರಥಮ ಕಡಲ ಸಾಗಣೆಯ ರಫ್ತು ಪ್ರಕ್ರಿಯೆಗೆ ಚಾಲನೆ ನೀಡಿತು.

ಒಂದು ಮೆಟ್ರಿಕ್ ಟನ್ ತೂಕದ ಮೌಲ್ಯವರ್ಧಿತ ಸಿರಿಧಾನ್ಯ ಆಧಾರಿತ ಉತ್ಪನ್ನಗಳನ್ನು ಒಳಗೊಂಡಿರುವ ಈ ರಫ್ತು ಸರಕನ್ನು ಬೆಂಗಳೂರಿನ ಮೆಸ್ಸರ್ಸ್ ಇನ್ಫಿನಿ ಆಗ್ರೋಟೆಕ್ ಎಲ್‌ಎಲ್‌ಪಿ ಸಂಸ್ಥೆಯು ರಫ್ತು ಮಾಡಿದೆ. ಈ ರಫ್ತು ಪ್ರಕ್ರಿಯೆಯು ಭಾರತದ ಸಾಂಪ್ರದಾಯಿಕ ಧಾನ್ಯಗಳಿಂದ ತಯಾರಿಸಲಾದ ನವೀನ ಸಿರಿಧಾನ್ಯ ಆಧಾರಿತ ಉತ್ಪನ್ನಗಳಿಗೆ ಜಾಗತಿಕವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ದೇಶದಿಂದ ಮೌಲ್ಯವರ್ಧಿತ ಕೃಷಿ ರಫ್ತುಗಳ ವಿಸ್ತರಣೆಯ ಅವಕಾಶಗಳನ್ನು ಉಲ್ಲೇಖಿಸುತ್ತದೆ.

ಈ ರಫ್ತುದಾರರು ಅಪೆಡಾ ಬೆಂಬಲಿತ ವ್ಯಾಪಾರ ಉತ್ತೇಜನ ಕಾರ್ಯಕ್ರಮಗಳಾದ ವರ್ಲ್ಡ್ ಫುಡ್ ಇಂಡಿಯಾ 2025, ಇಂಡಸ್ ಫುಡ್ 2025 ಮತ್ತು ಗಲ್ಫ್ ಫುಡ್ 2026 ರಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಈ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರಿಂದ ಕಂಪನಿಯು ಅಂತಾರಾಷ್ಟ್ರೀಯ ಖರೀದಿದಾರರನ್ನು ಸಂಪರ್ಕಿಸಲು, ತನ್ನ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಲು ಸಾಧ್ಯವಾಯಿತು. ನ್ಯೂಜಿಲ್ಯಾಂಡ್‌ನಿಂದ ಬಂದಿರುವ ಈ ರಫ್ತು ಆದೇಶವು ಅಪೆಡಾದ ವ್ಯಾಪಾರ ಉತ್ತೇಜನ ಉಪಕ್ರಮಗಳ ಮೂಲಕ ಸುಗಮಗೊಳಿಸಲಾದ ನಿರಂತರ ಮಾರುಕಟ್ಟೆ ಪ್ರಭಾವ ಮತ್ತು ಉದ್ಯಮ ಜಾಲದ  ಫಲಿತಾಂಶವಾಗಿದೆ.

ಈ ರಫ್ತು ಸಾಗಣೆಗೆ, ಅಪೆಡಾ (ಎ ಪಿ ಇ ಡಿ ಎ) ಅಧ್ಯಕ್ಷರಾದ ಶ್ರೀ ಅಭಿಷೇಕ್ ದೇವ್, ಐಎಎಸ್ ಅವರು ವರ್ಚುವಲ್ ಆಗಿ ಹಸಿರು ನಿಶಾನೆ ತೋರಿಸಿದರು. ಈ ಸಾಧನೆಗಾಗಿ ಕಂಪನಿಯನ್ನು ಅಭಿನಂದಿಸಿದ ಅವರು, ನವೀನ ಸಿರಿಧಾನ್ಯ ಆಧಾರಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಯಶಸ್ವಿಯಾಗಿ ವಿಸ್ತರಿಸುವಲ್ಲಿ ಕಂಪನಿಯು ಕೈಗೊಂಡ ಪ್ರಯತ್ನಗಳನ್ನು ಶ್ಲಾಘಿಸಿದರು.

ಸಂವಾದದ ಸಮಯದಲ್ಲಿ, ರಫ್ತುದಾರರಿಗೆ ಅಪೆಡಾದ ರಫ್ತು ಉತ್ತೇಜನ ಉಪಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ಮಾರುಕಟ್ಟೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಹಾಗೂ ಹೊಸ ಉದ್ಯಮ ಅವಕಾಶಗಳನ್ನು ಅನ್ವೇಷಿಸಲು ವ್ಯಾಪಾರ ಮೇಳಗಳು ಮತ್ತು ಪ್ರದರ್ಶನಗಳಲ್ಲಿ ನಿರಂತರವಾಗಿ ಭಾಗವಹಿಸುವಂತೆ ಉತ್ತೇಜಿಸಲಾಯಿತು.

ಗಿಡಮೂಲಿಕೆ ಮಿಶ್ರಿತ ಸಿರಿಧಾನ್ಯ ಪೌಷ್ಟಿಕ ಆಹಾರಗಳ ರಫ್ತು, ಭಾರತದ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಬೆಳೆಯುತ್ತಿರುವ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ ಮತ್ತು ಹೆಚ್ಚಿದ ಬೇಡಿಕೆ ಹಾಗೂ ಸುಧಾರಿತ ಮಾರುಕಟ್ಟೆ ಪ್ರವೇಶದ ಮೂಲಕ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ. ಇಂತಹ ಉಪಕ್ರಮಗಳು ಸಿರಿಧಾನ್ಯ ಮೌಲ್ಯ ಸರಪಳಿಯಾದ್ಯಂತ ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ಭಾರತದ ಕೃಷಿ-ರಫ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಕೊಡುಗೆ ನೀಡುತ್ತವೆ.

ಮಾರುಕಟ್ಟೆ ಅಭಿವೃದ್ಧಿ ಉಪಕ್ರಮಗಳು, ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು ಮತ್ತು ಪ್ರಮುಖ ದೇಶೀಯ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅಪೆಡಾ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತನ್ನು ಸುಗಮಗೊಳಿಸುವುದನ್ನು ಮುಂದುವರೆಸಿದೆ. ಈ ಯಶಸ್ವಿ ರಫ್ತು ಪ್ರಕ್ರಿಯೆಯು ನವೀನ ಸಿರಿಧಾನ್ಯ ಆಧಾರಿತ ಉತ್ಪನ್ನಗಳಿಗೆ ಜಾಗತಿಕವಾಗಿ ಹೆಚ್ಚುತ್ತಿರುವ ಸ್ವೀಕಾರವನ್ನು ಪ್ರದರ್ಶಿಸುತ್ತದೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತದ ಸಿರಿಧಾನ್ಯ ವಲಯದ ಬೆಳೆಯುತ್ತಿರುವ ಸಾಮರ್ಥ್ಯವನ್ನು ಪುನರುಚ್ಚರಿಸುತ್ತದೆ.

ಸಿರಿಧಾನ್ಯಗಳು ತಮ್ಮ ಪೌಷ್ಟಿಕಾಂಶದ ಪ್ರಯೋಜನಗಳು, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯಿಂದಾಗಿ ಭಾರತದ ಕೃಷಿ ರಫ್ತು ಉತ್ಪನ್ನಗಳಲ್ಲಿ ಒಂದು ಪ್ರಮುಖ ಅಂಶವಾಗಿ ಹೊರಹೊಮ್ಮಿವೆ. ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳ ಅಭಿವೃದ್ಧಿ ಮತ್ತು ರಫ್ತು ಪ್ರಕ್ರಿಯೆಯು, ರೈತರು, ಆಹಾರ ಸಂಸ್ಕಾರಕರು ಮತ್ತು ರಫ್ತುದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಹಾಗೂ ಭಾರತದ ಕೃಷಿ-ಆಹಾರ ರಫ್ತುಗಳ ವೈವಿಧ್ಯೀಕರಣ ಮತ್ತು ವಿಸ್ತರಣೆಗೆ ಕೊಡುಗೆ ನೀಡುತ್ತಿದೆ.


*****


(रिलीज़ आईडी: 2268976) आगंतुक पटल : 30
इस विज्ञप्ति को इन भाषाओं में पढ़ें: English , Urdu , हिन्दी , Marathi , Tamil