ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

19ನೇ ರೋಜ್ ಗಾರ್ ಮೇಳದಲ್ಲಿ 51,000ಕ್ಕೂ ಹೆಚ್ಚು ನೇಮಕಾತಿ ಪತ್ರಗಳ ವಿತರಣೆ; ಹೊಸದಾಗಿ ನೇಮಕಗೊಂಡ ಯುವಕರನ್ನುದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ

ಪ್ರಕಟಣಾ ದಿನಾಂಕ: 23 MAY 2026 3:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವರ್ಚುವಲ್ ಆಗಿ 19ನೇ ರೋಜ್ಗಾರ್ ಮೇಳ (ಉದ್ಯೋಗ ಮೇಳ)ವನ್ನು ಉದ್ದೇಶಿಸಿ ಮಾತನಾಡಿದರು ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶಾದ್ಯಂತ ಹೊಸದಾಗಿ ನೇಮಕಗೊಂಡ ಯುವಕರಿಗೆ 51,000ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿದರು. ದೇಶಾದ್ಯಂತ ಏಕಕಾಲದಲ್ಲಿ 47 ಸ್ಥಳಗಳಲ್ಲಿ ಆಯೋಜಿಸಲಾಗಿದ್ದ ಈ ಉದ್ಯೋಗ ಮೇಳವು, ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುವ ಮತ್ತು ನಾಗರಿಕ ಕೇಂದ್ರಿತ ಆಡಳಿತವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಭಾರತ ಸರ್ಕಾರದ ಪ್ರಮುಖ ಉಪಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸದಾಗಿ ನೇಮಕಗೊಂಡ ಅಭ್ಯರ್ಥಿಗಳು ರೈಲ್ವೆ, ಇಸ್ರೋ, ಗೃಹ ವ್ಯವಹಾರಗಳ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ಪ್ರಮುಖ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೇರ್ಪಡೆಗೊಂಡಿದ್ದಾರೆ. 19ನೇ ಉದ್ಯೋಗ ಮೇಳದ ಅಡಿಯಲ್ಲಿ ನಡೆದ ನೇಮಕಾತಿಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ನೇಮಕಾತಿಗಳನ್ನು ಭಾರತೀಯ ರೈಲ್ವೆಯ ವಿಸ್ತರಿಸುತ್ತಿರುವ ವಲಯಗಳಿಗೆ ಮೀಸಲಿಡಲಾಗಿತ್ತು.

ಹೊಸದಾಗಿ ನೇಮಕಗೊಂಡ ಯುವಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅವರಿಗೆ ಮತ್ತು ಅವರ ಕುಟುಂಬಗಳಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಈ ಸಂದರ್ಭವನ್ನು ಸಾವಿರಾರು ಕುಟುಂಬಗಳ ಜೀವನದಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದರು. ಹೊಸದಾಗಿ ನೇಮಕಗೊಂಡ ಯುವಕರು ದೇಶದ ಅಭಿವೃದ್ಧಿಯ ಪಯಣದಲ್ಲಿ ಜವಾಬ್ದಾರಿಯುತ ಮತ್ತು ಪ್ರಮುಖ ಪಾಲುದಾರರಾಗುತ್ತಿದ್ದಾರೆ ಮತ್ತು '2047ರ ವೇಳೆಗೆ ವಿಕಸಿತ ಭಾರತ'ದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಅವರು ಹೇಳಿದರು. ಸಮರ್ಪಿತ ಸಾರ್ವಜನಿಕ ಸೇವೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಸರ್ಕಾರಿ ಉದ್ಯೋಗವನ್ನು ಕೇವಲ ಒಂದು ಹುದ್ದೆಯನ್ನಾಗಿ  ನೋಡದೆ, ನಾಗರಿಕರ ಜೀವನವನ್ನು ಸರಳಗೊಳಿಸುವ ಮತ್ತು ರಾಷ್ಟ್ರದ ಪ್ರಗತಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಅವಕಾಶವಾಗಿ ಪರಿಗಣಿಸಬೇಕು ಎಂದು ನೇಮಕಗೊಂಡವರಿಗೆ ನೆನಪಿಸಿದರು. ನಾಗರಿಕರ ಕಲ್ಯಾಣವೇ ಆಡಳಿತದ ಕೇಂದ್ರಬಿಂದುವಾಗಿರಬೇಕು ಎನ್ನುವುದನ್ನು  ಒತ್ತಿಹೇಳುತ್ತಾ, "ನಾಗರಿಕ ದೇವೋ ಭವ" ಎಂಬ ಮಾರ್ಗದರ್ಶಿ ತತ್ವವನ್ನು ಎತ್ತಿಹಿಡಿಯುವಂತೆ ಅವರನ್ನು ಒತ್ತಾಯಿಸಿದರು .

ಭಾರತದ ಯುವಕರ ಸಾಮರ್ಥ್ಯ ಮತ್ತು ದೇಶದ ತಾಂತ್ರಿಕ ಪ್ರಗತಿಯಲ್ಲಿ ಜಾಗತಿಕವಾಗಿ ಭಾರತದ ಬೆಳೆಯುತ್ತಿರುವ ಸ್ಥಾನಮಾನ ಮತ್ತು ಅಂತರರಾಷ್ಟ್ರೀಯ  ಮಟ್ಟದಲ್ಲಿ ಹೆಚ್ಚುತ್ತಿರುವ ವಿಶ್ವಾಸವನ್ನು ಪ್ರಧಾನಮಂತ್ರಿಯವರು ಇದೇ ವೇಳೆ ಎತ್ತಿ ತೋರಿದರು. ಇತ್ತೀಚೆಗೆ ತಾವು ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ, ಯುಎಇ ಮತ್ತು ಇಟಲಿ ದೇಶಗಳಿಗೆ ನೀಡಿದ ಐದು ರಾಷ್ಟ್ರಗಳ ಭೇಟಿಯನ್ನು ಉಲ್ಲೇಖಿಸಿದ ಅವರು, ಜಾಗತಿಕ ನಾಯಕರು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಭಾರತದ ಬೆಳವಣಿಗೆಯಲ್ಲಿ ಪಾಲುದಾರರಾಗಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು. ಸೆಮಿಕಂಡಕ್ಟರ್ಗಳಂತಹ (ಅರೆವಾಹಕ) ಉದಯೋನ್ಮುಖ ವಲಯಗಳ ಬೆಳವಣಿಗೆಗಳು ಸೇರಿದಂತೆ ಪ್ರತಿಯೊಂದು ಹೊಸ ಹೂಡಿಕೆ ಮತ್ತು ತಂತ್ರಜ್ಞಾನ ಪಾಲುದಾರಿಕೆಯು ಭಾರತದ ಯುವಕರಿಗೆ ಗಣನೀಯ ಅವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ದೇಶದ ನಾವೀನ್ಯತೆ  ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತದ ಉದ್ಯಮಶೀಲತೆಯ ವೇಗವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ದೇಶದಲ್ಲಿ ಇಂದು 23.30 ಲಕ್ಷಕ್ಕೂ ಹೆಚ್ಚು ಮಾನ್ಯತೆ ಪಡೆದ ನವೋದ್ಯಮಗಳಿವೆ ಮತ್ತು ಶ್ರೇಣಿ-2 (ಟೈರ್-2) ಹಾಗೂ ಶ್ರೇಣಿ-3 (ಟೈರ್-3) ನಗರಗಳಲ್ಲಿ ನಾವೀನ್ಯತೆ ಹೆಚ್ಚಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದರು. ಮಹಿಳಾ ಉದ್ಯಮಿಗಳ ಕೊಡುಗೆಯನ್ನು ವಿಶೇಷವಾಗಿ ಶ್ಲಾಘಿಸಿದ ಅವರು, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಸ್ವಚ್ಛ ತಂತ್ರಜ್ಞಾನಗಳು, ಹಸಿರು ಜಲಜನಕ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿನ ಹೂಡಿಕೆಗಳು ಉದ್ಯೋಗ ಮತ್ತು ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ತೆರೆಯುತ್ತಿವೆ ಎಂದು ಹೇಳಿದರು. ಹೊಸದಾಗಿ ನೇಮಕಗೊಂಡ ಅಧಿಕಾರಿಗಳು ತಮ್ಮ ಸಾಮರ್ಥ್ಯಗಳನ್ನು ನಿರಂತರವಾಗಿ ನವೀಕರಿಸಿಕೊಳ್ಳಲು ಪ್ರೋತ್ಸಾಹಿಸಿದ ಅವರು, ವಿಕಸನಗೊಳ್ಳುತ್ತಿರುವ ಆಡಳಿತಾತ್ಮಕ ಅಗತ್ಯಗಳಿಗೆ ಹೊಂದಿಕೊಳ್ಳಲು ಮತ್ತು ಸಾರ್ವಜನಿಕ ಸೇವೆ ಒದಗಿಸುವಲ್ಲಿ ಅರ್ಥಪೂರ್ಣವಾಗಿ ಕೊಡುಗೆ ನೀಡಲು 'ಐಗಾಟ್ ಕರ್ಮಯೋಗಿ' (iGOT Karmayogi) ಯಂತಹ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಒತ್ತಾಯಿಸಿದರು.

ಅಹಮದಾಬಾದಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಕೇಂದ್ರ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ಖಡ್ಸೆ; ಗುಜರಾತ್ ಸರ್ಕಾರದ ನೀರು ಸರಬರಾಜು, ಜಲಸಂಪನ್ಮೂಲ, ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು, ಪಶುಸಂಗೋಪನೆ ಮತ್ತು ಗ್ರಾಮೀಣ ವಸತಿ ಸಚಿವರಾದ ಶ್ರೀ ಕನ್ವರ್ಜಿ ಬಾವಲಿಯಾ; ಮತ್ತು ಗುಜರಾತ್ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ರಾಜ್ಯ ಸಚಿವರಾದ ಶ್ರೀಮತಿ ದರ್ಶನಾ ವಘೇಲಾ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸಂಸದರಾದ ಶ್ರೀ ನರಹರಿ ಅಮಿನ್ (ರಾಜ್ಯಸಭೆ), ಶ್ರೀ ದಿನೇಶ್ ಮಕ್ವಾನಾ (ಲೋಕಸಭೆ), ಮತ್ತು ಶ್ರೀ ಹಸ್ಮುಖ್ ಪಟೇಲ್ (ಲೋಕಸಭೆ) ಸೇರಿದಂತೆ ಗುಜರಾತ್ ವಿಧಾನಸಭೆಯ ಸದಸ್ಯರಾದ ಶ್ರೀಮತಿ ಕಾಂಚನ್ಬೆನ್ ರಾಡಾಡಿಯಾ, ಡಾ. ಹರ್ಷದ್ಭಾಯ್ ಪಟೇಲ್, ಶ್ರೀ ಹಾರ್ದಿಕ್ ಪಟೇಲ್, ಶ್ರೀ ಬಾಬುಸಿನ್ಹ್ ಜಾದವ್, ಶ್ರೀ ಕಿರಿದ್ಸಿನ್ಹ್ ದಾಭಿ, ಶ್ರೀ ಕಾನುಭಾಯ್ ಪಟೇಲ್, ಶ್ರೀ ಅಲ್ಪೇಶ್ ಠಾಕೂರ್, ಶ್ರೀ ಬಾಬುಭಾಯ್ ಪಟೇಲ್, ಶ್ರೀ ಕೌಶಿಕ್ ಭಾಯ್ ಜೈನ್, ಶ್ರೀ ದಿನೇಶ್ ಸಿನ್ಹ್ ಕುಶ್ವಾಹ, ಶ್ರೀ ಅಮುಲ್ ಭಟ್, ಶ್ರೀ ಜಗದೀಶ್ ವಿಶ್ವಕರ್ಮ, ಶ್ರೀ ಅಮಿತ್ ಶಾ, ಶ್ರೀ ಜಿತೇಂದ್ರಕುಮಾರ್ ಪಟೇಲ್ ಮತ್ತು ಶ್ರೀ ಅಮಿತ್ ಠಾಕರ್ ಉಪಸ್ಥಿತರಿದ್ದರು. ಅಹಮದಾಬಾದ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್ ಎಂ) ಮತ್ತು ಹಿರಿಯ ಆಡಳಿತಾಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹೊಸದಾಗಿ ನೇಮಕಗೊಂಡ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದ ಶ್ರೀಮತಿ ರಕ್ಷಾ ಖಡ್ಸೆ ಅವರು, ಹೊಸದಾಗಿ ನೇಮಕಗೊಂಡ ಯುವಕರಿಗೆ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದ ಯುವಶಕ್ತಿಯೇ ದೇಶದ ದೊಡ್ಡ ಶಕ್ತಿಯಾಗಿದ್ದು, ಅವರಿಗೆ ಸರಿಯಾದ ಅವಕಾಶಗಳು, ಕೌಶಲ್ಯಗಳು ಮತ್ತು ವೇದಿಕೆಗಳನ್ನು ಒದಗಿಸುವುದು ಅವರ ಸಂಪೂರ್ಣ ಸಾಮರ್ಥ್ಯವನ್ನು ಹೊರತರಲು ಅತ್ಯಗತ್ಯವಾಗಿದೆ ಎಂದು ಹೇಳಿದರು. ಉದ್ಯೋಗ ಮೇಳವು ಕೇವಲ ನೇಮಕಾತಿ ಉಪಕ್ರಮವಲ್ಲ, ಬದಲಿಗೆ ಪ್ರತಿಭಾವಂತ ಯುವಕರನ್ನು ಅರ್ಥಪೂರ್ಣ ಅವಕಾಶಗಳೊಂದಿಗೆ ಜೋಡಿಸುವ ಹಾಗು  ಕೌಶಲ್ಯ ಮತ್ತು ಉದ್ಯೋಗದ ನಡುವಿನ ಸೇತುವೆಯನ್ನು ಬಲಪಡಿಸುವ ಪ್ರಮುಖ ವೇದಿಕೆಯಾಗಿದೆ ಎಂದು ಅವರು ಹೇಳಿದರು.

ಶ್ರೀಮತಿ ಖಡ್ಸೆ ಅವರು ವಿಕಸನಗೊಳ್ಳುತ್ತಿರುವ ಉದ್ಯೋಗದ ವಾತಾವರಣದಲ್ಲಿ, ವಿಶೇಷವಾಗಿ ಉದಯೋನ್ಮುಖ ಮತ್ತು ತಂತ್ರಜ್ಞಾನ ಆಧಾರಿತ ವಲಯಗಳಲ್ಲಿ ನಿರಂತರ ಕಲಿಕೆ ಮತ್ತು ಕೌಶಲ್ಯಾಭಿವೃದ್ಧಿಯ ಪ್ರಾಮುಖ್ಯತೆಯ ಬಗ್ಗೆ ಒತ್ತಿಹೇಳಿದರು. ಹೊಸದಾಗಿ ನೇಮಕಗೊಂಡ ಅಭ್ಯರ್ಥಿಗಳು ತಮ್ಮ ಜವಾಬ್ದಾರಿಗಳನ್ನು ಆತ್ಮವಿಶ್ವಾಸ, ಸಮರ್ಪಣಾಭಾವ ಮತ್ತು ಶ್ರೇಷ್ಠತೆಯೆಡೆಗೆ ಬದ್ಧತೆಯೊಂದಿಗೆ ನಿರ್ವಹಿಸುವಂತೆ ಪ್ರೋತ್ಸಾಹಿಸಿದ ಅವರು, ಸಾರ್ವಜನಿಕ ಸೇವೆಗೆ ಅವರ ಕೊಡುಗೆಯು 'ವಿಕಸಿತ ಭಾರತ 2047' ರ ಸಾಮೂಹಿಕ ದೂರದೃಷ್ಟಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಅಕ್ಟೋಬರ್ 2022 ರಲ್ಲಿ ಪ್ರಾರಂಭವಾದಾಗಿನಿಂದ, ಉದ್ಯೋಗ ಮೇಳ (ರೋಜ್ಗಾರ್ ಮೇಳ) ಉಪಕ್ರಮವು ದೇಶಾದ್ಯಂತ ಯುವಕರಿಗೆ ಲಕ್ಷಾಂತರ ನೇಮಕಾತಿ ಪತ್ರಗಳ ವಿತರಣೆಯನ್ನು ಸುಗಮಗೊಳಿಸಿದೆ, ಇದು ಉದ್ಯೋಗ ಸೃಷ್ಟಿ ಮತ್ತು ಯುವ ಸಬಲೀಕರಣದ ಕಡೆಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಈ 19ನೇ ಉದ್ಯೋಗ ಮೇಳವು ಯುವ ಆಕಾಂಕ್ಷಿಗಳಿಗೆ ಸಾರ್ವಜನಿಕ ಸೇವೆಗೆ ಕೊಡುಗೆ ನೀಡಲು ಮತ್ತು ಭಾರತದ ಅಭಿವೃದ್ಧಿಯ ಪಯಣದಲ್ಲಿ ಭಾಗವಹಿಸಲು ಅವಕಾಶಗಳನ್ನು ಹೆಚ್ಚಿಸುವಲ್ಲಿ  ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ.

 

*****


(ಪ್ರಕಟಣೆ ಐ.ಡಿ.: 2264567) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , हिन्दी , Gujarati , English , Tamil