ಜಲ ಶಕ್ತಿ ಸಚಿವಾಲಯ
ಜಲ ಜೀವನ್ ಮಿಷನ್ 2.0 ಮತ್ತು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಅಡಿಯಲ್ಲಿ, ಘನತ್ಯಾಜ್ಯ ನಿರ್ವಹಣೆ ನಿಯಮಗಳು 2026 ರ ಕುರಿತು ಉಪ ಆಯುಕ್ತರು/ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು / ಜಿಲ್ಲಾಧಿಕಾರಿಗಳೊಂದಿಗೆ ರಾಷ್ಟ್ರ ಮಟ್ಟದ ಪರಿಶೀಲನಾ ಸಭೆ ನಡೆಸಿದ ಡಿಡಿಡಬ್ಲ್ಯೂಎಸ್ (DDWS)
ಸುರಕ್ಷಿತ ನೀರು ಮತ್ತು ನೈರ್ಮಲ್ಯ ಸೇವೆಗಳ ಕುರಿತಾದ ಪ್ರಧಾನಮಂತ್ರಿ ಅವರ ದೃಷ್ಟಿಕೋನವನ್ನು ಪರಿಶೀಲನಾ ಸಭೆಯು ಬಲಪಡಿಸುತ್ತದೆ ಹಾಗೂ ಸೇವಾ ವಿತರಣೆ, ನೀರಿನ ಸುಸ್ಥಿರತೆ ಮತ್ತು ಗ್ರಾಮೀಣ ನೈರ್ಮಲ್ಯ ಆಡಳಿತವನ್ನು ಬಲಪಡಿಸಲು ಜಿಲ್ಲೆಗಳಿಗೆ ಕರೆ ನೀಡುತ್ತದೆ
प्रविष्टि तिथि:
22 MAY 2026 6:42PM by PIB Bengaluru
ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು (DDWS) ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶಾದ್ಯಂತದ ಉಪ ಆಯುಕ್ತರು, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯೊಂದನ್ನು ನಡೆಸಿತು. ಜಲ ಜೀವನ್ ಮಿಷನ್ (JJM) 2.0 ರ ಅನುಷ್ಠಾನದ ಚೌಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು, 2026 ರ ಪರಿಣಾಮಕಾರಿ ಜಾರಿ ಕುರಿತು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿತ್ತು. ಈ ಪರಿಶೀಲನಾ ಸಭೆಯಲ್ಲಿ ದೇಶಾದ್ಯಂತದ ಸುಮಾರು 759 ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು.
ಈ ರಾಷ್ಟ್ರೀಯ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ಡಿಡಿಡಬ್ಲ್ಯೂಎಸ್ (DDWS) ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ ವಹಿಸಿದ್ದರು. ರಾಷ್ಟ್ರೀಯ ಜಲ ಜೀವನ್ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ಶ್ರೀ ಕಮಲ್ ಕಿಶೋರ್ ಸೋನ್, ಸ್ವಚ್ಛ ಭಾರತ್ ಮಿಷನ್-ಗ್ರಾಮೀಣದ (SBM-G) ಜಂಟಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕಿ ಶ್ರೀಮತಿ ಐಶ್ವರ್ಯಾ ಸಿಂಗ್, ಜಂಟಿ ಕಾರ್ಯದರ್ಶಿ (ನೀರು) ಶ್ರೀಮತಿ ಸ್ವಾತಿ ಮೀನಾ ನಾಯಕ್ ಮತ್ತು ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ಡಿಡಿಡಬ್ಲ್ಯೂಎಸ್ (DDWS) ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೆನ್ನಾ ಅವರು, ಜಲ ಜೀವನ್ ಮಿಷನ್ (JJM) ಮತ್ತು ಸ್ವಚ್ಛ ಭಾರತ್ ಮಿಷನ್-ಗ್ರಾಮೀಣ (SBM-G) ಎರಡೂ ಈಗ ಮೂಲಸೌಕರ್ಯ ನಿರ್ಮಾಣದ ಆಚೆಗೆ ಗಮನ ಹರಿಸಬೇಕಾದ ಹಂತವನ್ನು ತಲುಪಿವೆ ಎಂದರು. ಇನ್ನು ಮುಂದೆ ವಿಶ್ವಾಸಾರ್ಹ ಸೇವಾ ವಿತರಣೆ, ಕಾರ್ಯಾಚರಣೆ, ಸುಸ್ಥಿರತೆ ಮತ್ತು ಸಮುದಾಯದ ಮಾಲೀಕತ್ವದ ಕಡೆಗೆ ನಮ್ಮ ಗಮನ ಹರಿಯಬೇಕು ಎಂದು ಅವರು ಹೇಳಿದರು.

ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಜಲ ಜೀವನ್ ಮಿಷನ್ ಅವಧಿಯನ್ನು ಡಿಸೆಂಬರ್ 2028 ರವರೆಗೆ ವಿಸ್ತರಿಸಲು ಅನುಮೋದನೆ ನೀಡಿರುವುದನ್ನು ಉಲ್ಲೇಖಿಸಿದ ಕಾರ್ಯದರ್ಶಿಯವರು, ಜೆಜೆಎಂ (JJM) 2.0 ಗ್ರಾಮೀಣ ಭಾರತದಲ್ಲಿ ಕೇವಲ ಆಸ್ತಿ ಸೃಜನೆಯಿಂದ ಸುಸ್ಥಿರ ಕುಡಿಯುವ ನೀರು ಸರಬರಾಜು ಸೇವೆಯ ವಿತರಣೆಯ ಕಡೆಗಿನ ಪರಿವರ್ತನೆಯನ್ನು ಸೂಚಿಸುತ್ತದೆ ಎಂದು ಹೇಳಿದರು. ಈ ನವೀಕೃತ ಚೌಕಟ್ಟಿನಡಿಯಲ್ಲಿ ಜಿಲ್ಲಾ ಆಡಳಿತ ಮತ್ತು ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆಗಳ (PHEDs) ಪಾತ್ರವು ಮತ್ತಷ್ಟು ಪ್ರಮುಖವಾಗಿದೆ ಎಂದು ಅವರು ಹೇಳಿದರು.
ಇದಕ್ಕೆ ಅನುಗುಣವಾಗಿ, ಜಿಲ್ಲಾ ಮಟ್ಟದಲ್ಲಿ ಸೇವಾ ವಿತರಣೆಯನ್ನು ಮೇಲ್ವಿಚಾರಣೆ ಮಾಡಲು ಮೀಸಲಾದ 'ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್' (DWSM) ಡ್ಯಾಶ್‌ಬೋರ್ಡ್‌ನ ಪ್ರಾಮುಖ್ಯತೆಯನ್ನು ಡಿಡಿಡಬ್ಲ್ಯೂಎಸ್ ಕಾರ್ಯದರ್ಶಿಯವರು ಎತ್ತಿ ತೋರಿಸಿದರು. ಡ್ಯಾಶ್‌ಬೋರ್ಡ್ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಲು, ಸಭೆಯ ನಡಾವಳಿಗಳನ್ನು ಅಪ್‌ಲೋಡ್ ಮಾಡಲು ಮತ್ತು ಕುಡಿಯುವ ನೀರು ಸರಬರಾಜಿನ ನಿಯಮಿತತೆ, ಸಮರ್ಪಕತೆ, ನೀರಿನ ಗುಣಮಟ್ಟ, ಕುಂದುಕೊರತೆ ನಿವಾರಣೆ ಹಾಗೂ ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ (O&M) ಸಂಬಂಧಿಸಿದ ಕೊರತೆಗಳನ್ನು ನಿವಾರಿಸಲು ಅವರು ಜಿಲ್ಲಾಡಳಿತಗಳಿಗೆ ತಿಳಿಸಿದರು.
ಇದಲ್ಲದೆ, ಹಳ್ಳಿಯ ನೈರ್ಮಲ್ಯ, ಕುಡಿಯುವ ನೀರಿನ ಸುಸ್ಥಿರತೆ ಮತ್ತು ಒಟ್ಟಾರೆ ಸಾರ್ವಜನಿಕ ಆರೋಗ್ಯದ ಪ್ರಮುಖ ಅಂಶಗಳಾಗಿ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಹೇಳಿದ ಅವರು, ಘನತ್ಯಾಜ್ಯ ನಿರ್ವಹಣೆ ನಿಯಮಗಳು, 2026 ಕ್ಕೆ ಅನುಗುಣವಾಗಿ ತ್ಯಾಜ್ಯದ ವಿಂಗಡಣೆ, ಸಂಗ್ರಹಣೆ, ಸಂಸ್ಕರಣೆ ಮತ್ತು ವೈಜ್ಞಾನಿಕ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳಲು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು. ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲೂ (PIL) ಈ ನಿಯಮಗಳ ಅನುಷ್ಠಾನವನ್ನು ಪರಿಶೀಲಿಸಲಾಗುತ್ತಿದೆ ಎಂಬ ವಿಷಯವನ್ನು ಅವರು ಪ್ರಧಾನವಾಗಿ ಹೇಳಿದರು.
ಪರಿಸರ ಸಂರಕ್ಷಣಾ ಕಾಯ್ದೆಯಡಿ ವಹಿಸಿಕೊಡಲಾದ ಅಧಿಕಾರಗಳನ್ನು ಉಲ್ಲೇಖಿಸಿದ ಅವರು, ಜಾರಿ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಕೇಂದ್ರೀಕೃತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಉತ್ತೇಜಿಸಲು ಜಿಲ್ಲಾಧಿಕಾರಿಗಳಿಗೆ ಕರೆ ನೀಡಿದರು. ಗ್ರಾಮ ಪಂಚಾಯತ್‌ಗಳು ಕಸದ ವಿಂಗಡಣೆ, ಸಂಸ್ಕರಣೆ ಮತ್ತು ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಹೊಂದಿರಬೇಕು ಎಂದು ಅವರು ಹಿರಿಯ ಅಧಿಕಾರಿಗಳಿಗೆ ಒತ್ತಿಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಜಲ ಜೀವನ್ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರಾದ ಶ್ರೀ ಕಮಲ್ ಕಿಶೋರ್ ಸೋನ್ ಅವರು, ಜೆಜೆಎಂ (JJM) ಮತ್ತು ಎಸ್‌ಬಿಎಂ-ಜಿ (SBM-G) ಯೋಜನೆಗಳ ಅನುಷ್ಠಾನ ಹಾಗೂ ಮೇಲ್ವಿಚಾರಣೆಯಲ್ಲಿ ಜಿಲ್ಲಾಧಿಕಾರಿಗಳ ಪಾತ್ರದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಈ ಮಿಷನ್‌ನ ವ್ಯಾಪ್ತಿಯನ್ನು ಎತ್ತಿ ತೋರಿಸಿದ ಅವರು, ಜೆಜೆಎಂ ಸುಮಾರು 5.91 ಲಕ್ಷ ಹಳ್ಳಿಗಳು, 2.62 ಲಕ್ಷ ಗ್ರಾಮ ಪಂಚಾಯತ್‌ಗಳು, 16 ಲಕ್ಷಕ್ಕೂ ಹೆಚ್ಚು ಜನವಸತಿ ಪ್ರದೇಶಗಳು ಮತ್ತು 19.41 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳನ್ನು ಒಳಗೊಂಡಿದ್ದು, ಸುಮಾರು 96 ಕೋಟಿ ಜನರಿಗೆ ಪ್ರಯೋಜನವನ್ನು ನೀಡುತ್ತಿದೆ ಎಂದು ವಿವರಿಸಿದರು.

ಈ ಮಿಷನ್ ಗ್ರಾಮೀಣ ಭಾರತದಾದ್ಯಂತ ವ್ಯಾಪಕವಾದ ಆಸ್ತಿಗಳನ್ನು ಸೃಜಿಸಿದೆ ಮತ್ತು ಮುಂದಿನ ದಿನಗಳಲ್ಲಿ ಇದಕ್ಕೆ ಗಣನೀಯ ಪ್ರಮಾಣದ ಕಾರ್ಯಾಚರಣೆ ಮತ್ತು ನಿರ್ವಹಣಾ (O&M) ಬೆಂಬಲದ ಅಗತ್ಯವಿರುತ್ತದೆ ಎಂದು ಅವರು ತಿಳಿಸಿದರು. ಎಲ್ಲರಿಗೂ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಸುಸ್ಥಿರ ಅಭಿವೃದ್ಧಿ ಗುರಿಯನ್ನು (SDG) ಉಲ್ಲೇಖಿಸಿದ ಅವರು, ಭಾರತವು ಇದನ್ನು 2030 ಕ್ಕಿಂತ ಮುಂಚಿತವಾಗಿಯೇ, ಅಂದರೆ ಡಿಸೆಂಬರ್ 2028 ರ ವೇಳೆಗೆ ಸಾಧಿಸಲು ಸಜ್ಜಾಗಿದೆ ಎಂದರು. ಇದರಲ್ಲಿ ಜಿಲ್ಲಾಡಳಿತದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಬುಡಕಟ್ಟು ಮತ್ತು ಪಿವಿಟಿಜಿ (PVTG - ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳು) ಕುಟುಂಬಗಳನ್ನು ಹೊಂದಿರುವ ಪಿಎಂ ಜನ್ಮನ್ (PM JANMAN) ಮತ್ತು ಡಿಎ-ಜುಗಾ (DA-JUGA) ಯೋಜನೆಗಳಿಗೆ ಒತ್ತು ನೀಡಿದ ಅವರು, ಯಾರೂ ಸಹ ಇದರಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಪುನರುಚ್ಚರಿಸಿದರು. ಅಲ್ಲದೆ, 2027 ರ ವೇಳೆಗೆ ಎಲ್ಲಾ ಬುಡಕಟ್ಟು ಮತ್ತು ಪಿವಿಟಿಜಿ ಜನವಸತಿ ಪ್ರದೇಶಗಳಲ್ಲಿ ಈ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರುವದನ್ನು ಖಚಿತಪಡಿಸಿಕೊಳ್ಳಲು ಕರೆ ನೀಡಿದರು.
ಜೆಜೆಎಂ (JJM) ಅನುಷ್ಠಾನವನ್ನು ಬಲಪಡಿಸಲು ಜಿಲ್ಲಾಧಿಕಾರಿಗಳೊಂದಿಗೆ ರಾಜ್ಯ ಮಟ್ಟದ ಪರಿಶೀಲನಾ ಸಭೆಗಳನ್ನು ಯೋಜಿಸಲಾಗುತ್ತಿದೆ ಎಂದೂ ಸಹ ಅವರು ಮಾಹಿತಿ ನೀಡಿದರು. ಮೊದಲ ಸಭೆಯು ಮಹಾರಾಷ್ಟ್ರದಲ್ಲಿ ಮೇ 27 ರಂದು ಕೇಂದ್ರ ಜಲ ಶಕ್ತಿ ಸಚಿವರು ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಜಿಲ್ಲಾವಾರು ಪ್ರಗತಿಯನ್ನು ಪರಿಶೀಲಿಸಲು, ನ್ಯೂನತೆಗಳನ್ನು ನಿವಾರಿಸಲು ಮತ್ತು ರಾಜ್ಯ ಮಟ್ಟದಿಂದ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಲು ಮುಂದಿನ ಆರು ತಿಂಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಈ ಸಭೆಗಳ ಅಡಿಯಲ್ಲಿ ಒಳಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಎರಡೂ ಮಿಷನ್‌ಗಳ ಪ್ರಗತಿಯ ಬಗ್ಗೆ, ಪ್ರಗತಿ (PRAGATI - Pro-Active Governance And Timely Implementation) ಸಭೆಯಲ್ಲೂ ಪರಿಶೀಲಿಸಬಹುದು ಎಂದು ಅವರು ಮಾಹಿತಿ ನೀಡಿದರು.
ಜಲ ಜೀವನ್ ಮಿಷನ್‌ನ ಎರಡನೇ ಹಂತವನ್ನು ಮುನ್ನಡೆಸುವಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪಂಚಾಯತ್‌ಗಳ ಪಾತ್ರವು ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರ ಭಾಷಣದಲ್ಲಿ ಮತ್ತೊಮ್ಮೆ ಒತ್ತಿಹೇಳಲಾಯಿತು. ಈ ಮಿಷನ್ ಅನ್ನು ರಾಜ್ಯ-ವಲಯ ಪರಿಷತ್ ಸಭೆಗಳು ಸೇರಿದಂತೆ ಉನ್ನತ ಮಟ್ಟದ ಅಂತರ-ಸರ್ಕಾರಿ ವೇದಿಕೆಗಳಲ್ಲಿ ಪರಿಶೀಲಿಸಲಾಗಿದೆ ಮತ್ತು ಚರ್ಚಿಸಲಾಗಿದೆ ಎಂದು ಗಮನಿಸಲಾಯಿತು, ಅಲ್ಲಿ ಮಿಷನ್‌ನ ಪರಿಣಾಮಕಾರಿ ಅನುಷ್ಠಾನವನ್ನು ರಾಜ್ಯಗಳ ಪ್ರಮುಖ ಆದ್ಯತೆಯಾಗಿ ಗುರುತಿಸಲಾಗಿದೆ.
ಇದಲ್ಲದೇ, ಮೇ 19, 2026 ರಂದು ಛತ್ತೀಸ್‌ಗಢದಲ್ಲಿ ನಡೆದ 26ನೇ ಕೇಂದ್ರ ವಲಯ ಪರಿಷತ್ ಸಭೆಯಲ್ಲಿ, ರಾಜ್ಯಗಳು ಜೆಜೆಎಂ (JJM) 2.0 ರ ಮೇಲೆ ಗಮನ ಹರಿಸಬೇಕು ಮತ್ತು ಪ್ರತಿ ಗ್ರಾಮೀಣ ಮನೆಗೆ ನಲ್ಲಿ ನೀರನ್ನು ಒದಗಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು ಎಂದು ಒತ್ತಿಹೇಳಲಾಗಿತ್ತು ಎಂದು ಅವರು ತಿಳಿಸಿದರು.
ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (DISHA - ದಿಶಾ) ಸಭೆಗಳಲ್ಲಿ ಜೆಜೆಎಂ ಮತ್ತು ಎಸ್‌ಬಿಎಂ (ಜಿ) ಯೋಜನೆಗಳ ಪ್ರಗತಿಯನ್ನು ನಿಯಮಿತವಾಗಿ ಮಂಡಿಸಬೇಕು ಎಂದೂ ಅವರು ಒತ್ತಿಹೇಳಿದರು. ಮನೆ ಮನೆಗೆ ನಲ್ಲಿ ನೀರು ತಲುಪಿಸಿರುವ ವ್ಯಾಪ್ತಿ, ಯೋಜನೆಯ ಪ್ರಗತಿ, 'ಹರ್ ಘರ್ ಜಲ್' ಪ್ರಮಾಣೀಕರಣ, ಗ್ರಾಮೀಣ ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ, ನೀರಿನ ಗುಣಮಟ್ಟದ ಮೇಲ್ವಿಚಾರಣೆ, ಮೂರನೇ ವ್ಯಕ್ತಿ ಪರಿಶೀಲನೆ, ಡಿಡಬ್ಲ್ಯೂಎಸ್‌ಎಮ್ (DWSM) ಮೂಲಕ ಆಡಳಿತಾತ್ಮಕ ಉಸ್ತುವಾರಿ ಮತ್ತು ಎಸ್‌ಬಿಎಂ (ಜಿ) ಅಡಿಯಲ್ಲಿನ ಪ್ರಗತಿಯ ಕುರಿತಾದ ಪ್ರಮುಖ ಮಾಹಿತಿಯನ್ನು ಒಳಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ವಿನಂತಿಸಲಾಯಿತು. ಇದು ಚುನಾಯಿತ ಪ್ರತಿನಿಧಿಗಳು ಜಿಲ್ಲಾ ಮಟ್ಟದ ಪ್ರಗತಿಯನ್ನು ಪರಿಶೀಲಿಸಲು, ನ್ಯೂನತೆಗಳನ್ನು ಗುರುತಿಸಲು ಮತ್ತು ಕುಡಿಯುವ ನೀರು ಹಾಗೂ ನೈರ್ಮಲ್ಯ ಸೇವೆಗಳನ್ನು ಸುಧಾರಿಸಲು ಅಗತ್ಯ ಮಾರ್ಗದರ್ಶನ ನೀಡಲು ಅನುಕೂಲ ಮಾಡಿಕೊಡುತ್ತದೆ.

ಈ ರಾಷ್ಟ್ರೀಯ ಪರಾಮರ್ಶೆ ಸಭೆಯಲ್ಲಿ ಜೆಜೆಎಂ 2.0 ಮತ್ತು ಎಸ್‌ಬಿಎಂ-ಜಿ 2.0 ಕುರಿತು ಪ್ರಸ್ತುತಿಗಳನ್ನು (presentations) ನೀಡಲಾಯಿತು. ಜಂಟಿ ಕಾರ್ಯದರ್ಶಿ (ನೀರು) ಶ್ರೀಮತಿ ಸ್ವಾತಿ ಮೀನಾ ನಾಯಕ್ ಅವರು ಜಲ ಜೀವನ್ ಮಿಷನ್ 2.0 ರ ಸುಧಾರಣಾ ಆಧಾರಿತ ಅನುಷ್ಠಾನದ ಚೌಕಟ್ಟಿನ ಕುರಿತು ವಿವರವಾದ ಪ್ರಸ್ತುತಿಯನ್ನು ನೀಡಿದರು. ಇದರಲ್ಲಿ ಸುಸ್ಥಿರ ಸೇವಾ ವಿತರಣೆ, ಸಮುದಾಯದ ಮಾಲೀಕತ್ವ ಮತ್ತು ಜಿಲ್ಲಾ ಮಟ್ಟದ ಆಡಳಿತಕ್ಕೆ ಒತ್ತು ನೀಡಲಾಗಿತ್ತು. ಈ ಮಿಷನ್ ಈಗ ರಚನಾತ್ಮಕ ಸುಧಾರಣೆಯೊಂದಿಗೆ ಪ್ರತಿಯೊಂದು ಗ್ರಾಮೀಣ ಕುಟುಂಬವು ನಿರಂತರವಾಗಿ ಸುರಕ್ಷಿತ ಮತ್ತು ಸಮರ್ಪಕ ನೀರನ್ನು ಪಡೆಯುವುದರ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಅವರು ಎತ್ತಿ ತೋರಿಸಿದರು. ಈ ವ್ಯವಸ್ಥೆಗಳು ಮುಂದಿನ 25 ರಿಂದ 30 ವರ್ಷಗಳವರೆಗೆ ಕಾರ್ಯನಿರ್ವಹಿಸುವಂತಿರಬೇಕು ಎಂದು ಅವರು ಹೇಳಿದರು.

ಪ್ರಸ್ತುತಿಯು ಈ ಕೆಳಗಿನ ಪ್ರಮುಖ ವಿಷಯಾಧಾರಿತ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿತ್ತು:
• ಜಲ ಜೀವನ್ ಮಿಷನ್ 2.0 ಅಡಿಯಲ್ಲಿನ 11 ರಚನಾತ್ಮಕ ಸುಧಾರಣೆಗಳು – ಇದು ಆಡಳಿತ ಚಾಲಿತ, ತಂತ್ರಜ್ಞಾನ ಆಧಾರಿತ ಮತ್ತು ಗುಣಮಟ್ಟ ಖಚಿತಪಡಿಸಿದ ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಗಮನ ಹರಿಸುತ್ತದೆ.
1. ಸಾಂಸ್ಥಿಕ ರಚನೆ (Institutional Architecture): ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಪಾತ್ರಗಳು, ಹೊಣೆಗಾರಿಕೆ ಮತ್ತು ನಾಗರಿಕರಿಗೆ ಸ್ಪಂದಿಸುವ ಉಸ್ತುವಾರಿಯೊಂದಿಗೆ ಬಹು-ಸ್ತರದ ಆಡಳಿತವನ್ನು ಬಲಪಡಿಸುವುದು.
2. ಸೌಲಭ್ಯ ಆಧಾರಿತ ವಿಧಾನ: ವೃತ್ತಿಪರ ಮತ್ತು ವಿಶ್ವಾಸಾರ್ಹ ಸೇವಾ ವಿತರಣೆಗಾಗಿ ಗ್ರಾಮ ಮಟ್ಟದ ಸಣ್ಣ-ಪುಟ್ಟ ಸೌಲಭ್ಯಗಳು ಮತ್ತು ಪ್ರಾದೇಶಿಕ ಬೃಹತ್ ನೀರಿನ ಸೌಲಭ್ಯಗಗಳನ್ನು ಉತ್ತೇಜಿಸುವುದು.
3. ಗ್ರಾಮ ಪಂಚಾಯತ್‌ಗಳಿಗಾಗಿ ತಾಂತ್ರಿಕ ಚೌಕಟ್ಟು: ನೀರು ಸರಬರಾಜು ವ್ಯವಸ್ಥೆಗಳ ಕಾರ್ಯಾರಂಭ (commissioning), ಹಸ್ತಾಂತರ, ಆಸ್ತಿ ದಾಖಲೆಗಳು ಮತ್ತು ನಿಯಮಿತ ಕಾರ್ಯಾಚರಣೆ ಹಾಗೂ ನಿರ್ವಹಣೆಯಲ್ಲಿ ಗ್ರಾಮ ಪಂಚಾಯತ್‌ಗಳಿಗೆ ಬೆಂಬಲ ನೀಡುವುದು.
4. ನೀರಿನ ಗುಣಮಟ್ಟದ ಆಡಳಿತ: ನಿಯಮಿತ ನೀರು ಪರೀಕ್ಷೆ, ಸಮುದಾಯದ ಉಸ್ತುವಾರಿ, ಮಾನ್ಯತೆ ಪಡೆದ ಪ್ರಯೋಗಾಲಯಗಳು ಮತ್ತು ತ್ವರಿತ ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವುದು.
5. ಮೂಲದ ಸುಸ್ಥಿರತೆ ಮತ್ತು ನೀರಿನ ಭದ್ರತೆ: ಜಲಚರಗಳ (aquifer) ಯೋಜನೆ, ಅಂತರ್ಜಲ ಮರುಪೂರಣ, ಮೂಲಗಳ ರಕ್ಷಣೆ, ಬಜೆಟ್ ಮತ್ತು ಸಂಬಂಧಿತ ಕಾರ್ಯಕ್ರಮಗಳೊಂದಿಗೆ ಸಮನ್ವಯವನ್ನು ಉತ್ತೇಜಿಸುವುದು.
6. ಡಿಜಿಟಲ್ ದತ್ತಾಂಶ ಆಡಳಿತ: ನೈಜ-ಸಮಯದ ಮೇಲ್ವಿಚಾರಣೆ ಮತ್ತು ದತ್ತಾಂಶ ಆಧಾರಿತ ಯೋಜನೆಗಾಗಿ ಸುಜಲಾಂ ಭಾರತ್, ಸುಜಲ್ ಗಾಂವ್ ಐಡಿಗಳು (IDs), ಡ್ಯಾಶ್‌ಬೋರ್ಡ್‌ಗಳು ಮತ್ತು ನಿರ್ಧಾರ-ಬೆಂಬಲ ವ್ಯವಸ್ಥೆಗಳನ್ನು ಬಳಸುವುದು.
7. ಭಾಗವಹಿಸುವಿಕೆಯ ಆಡಳಿತ, ಜನ ಭಾಗೀದಾರಿ: ಐಇಸಿ (IEC) ಚಟುವಟಿಕೆಗಳು, ಗ್ರಾಮ ಸಭೆಯ ಪ್ರಕಟಣೆಗಳು ಮತ್ತು ಡಿಜಿಟಲ್ ಫೀಡ್‌ಬ್ಯಾಕ್ ವ್ಯವಸ್ಥೆಗಳ ಮೂಲಕ ಸಮುದಾಯದ ಮಾಲೀಕತ್ವವನ್ನು ಪ್ರೋತ್ಸಾಹಿಸುವುದು.
8. ಸಾಮರ್ಥ್ಯ ವೃದ್ಧಿ: ಹಬ್-ಆಂಡ್-ಸ್ಪೋಕ್ (hub-and-spoke) ತರಬೇತಿ ಮಾದರಿಯ ಮೂಲಕ ಗ್ರಾಮ ಪಂಚಾಯತ್‌ಗಳು, ವಿಡಬ್ಲ್ಯೂಎಸ್‌ಸಿಗಳು (VWSCs), ಜಿಲ್ಲಾ ಅಧಿಕಾರಿಗಳು ಮತ್ತು ರಾಜ್ಯ ಸಿಬ್ಬಂದಿಗೆ ತರಬೇತಿ ನೀಡುವುದು.
9. ಮಾನವ ಸಂಪನ್ಮೂಲ ಕೌಶಲ್ಯ: ನಲ್ ಜಲ್ ಮಿತ್ರರು, ಬಹು-ಕೌಶಲ್ಯದ ತಂತ್ರಜ್ಞರು ಮತ್ತು ಸ್ವಸಹಾಯ ಗುಂಪು ಆಧಾರಿತ 'ಸುಜಲಾಂ ಶಕ್ತಿ' ತೊಡಗಿಸಿಕೊಳ್ಳುವಿಕೆಯ ಮೂಲಕ ಸ್ಥಳೀಯ ತಾಂತ್ರಿಕ ಸಹಕಾರವನ್ನು ಬಲಪಡಿಸುವುದು.
10. ಕಾರ್ಯಾಚರಣೆಯ ಮತ್ತು ಆರ್ಥಿಕ ಸುಸ್ಥಿರತೆ: ಕಾರ್ಯಾಚರಣೆ ಮತ್ತು ನಿರ್ವಹಣೆಯ (O&M) ಬಜೆಟ್, ತಡೆಗಟ್ಟುವ ನಿರ್ವಹಣೆ, ವೆಚ್ಚ ವಸೂಲಾತಿ ಮತ್ತು ಸಂಪನ್ಮೂಲಗಳ ದಕ್ಷ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು.
11. ಸಂಶೋಧನೆ, ನಾವೀನ್ಯತೆ ಮತ್ತು ಜ್ಞಾನ: ಆರ್‌ಆಂಡ್ ಡಿ (R&D), ಪ್ರಾಯೋಗಿಕ ಯೋಜನೆಗಳು, ಸ್ಟಾರ್ಟ್-ಅಪ್ ಬೆಂಬಲ ಮತ್ತು ಪುರಾವೆ ಆಧಾರಿತ ಹವಾಮಾನ-ಸ್ಥಿತಿಸ್ಥಾಪಕ ಪರಿಹಾರಗಳನ್ನು ಉತ್ತೇಜಿಸುವುದು.
• ಸುಜಲಾಂ ಭಾರತ್ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ: ವಿಶಿಷ್ಟ ಜಿಐಎಸ್ (GIS) ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಗಳ ಜಾರಿ, ಅನುಕ್ರಮ ಹೈಡ್ರಾಲಿಕ್ ಹರಿವಿನ ಮ್ಯಾಪಿಂಗ್, ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಕಾರ್ಯನಿರ್ವಹಿಸದ ರಾಜ್ಯಗಳಾದ್ಯಂತ ವಿಶಿಷ್ಟ 'ಸುಜಲಾಂ ಭಾರತ್ ಐಡಿ'ಗಳು ಮತ್ತು ಜನವಸತಿ ಮಟ್ಟದ 'ಸುಜಲ್ ಗಾಂವ್ ಐಡಿ'ಗಳ ಹಂಚಿಕೆಯ ಪ್ರಗತಿಯ ಕುರಿತಾದ ವಿವರವಾದ ಅನುಷ್ಠಾನದ ನವೀಕರಣಗಳು. ಸುಜಲ್ ಗ್ರಾಮ್ ಐಡಿಯ ಪರಿಕಲ್ಪನೆ, ಉದ್ದೇಶ ಮತ್ತು ವಿವರವಾದ ಪ್ರಕ್ರಿಯೆಯನ್ನು ವಿವರಿಸಲು ಪ್ರಸ್ತುತಿಯ ಸಮಯದಲ್ಲಿ ಆಡಿಯೋ-ವಿಷುಯಲ್ ವಿಡಿಯೋ ಒಂದನ್ನು ಪ್ರದರ್ಶಿಸಲಾಯಿತು.
• ಕಟ್ಟುನಿಟ್ಟಾದ ನಾಲ್ಕು-ಹಂತದ ಕಾರ್ಯಾರಂಭ ಮತ್ತು ಹಸ್ತಾಂತರ ಶಿಷ್ಟಾಚಾರಗಳು: ಗ್ರಾಮ ಸಭೆಗಳ ಮೂಲಕ ಸಮುದಾಯದ ದೃಢೀಕರಣದೊಂದಿಗೆ ಗ್ರಾಮ ಪಂಚಾಯತ್‌ಗಳನ್ನು 'ಹರ್ ಘರ್ ಜಲ್' ಎಂದು ಪ್ರಮಾಣೀಕರಿಸುವುದು, ಕನಿಷ್ಠ 15 ದಿನಗಳ ಕಡ್ಡಾಯ ಪ್ರಾಯೋಗಿಕ ಚಾಲನೆ (trial run), ಮತ್ತು ಸೂಚಿಸಲಾದ ಹಂತ-ಹಂತದ ಐಇಸಿ (IEC) ಪ್ರಕ್ರಿಯೆಯ ಪ್ರಕಾರ 'ಜಲ ಅರ್ಪಣ್ ದಿವಸ್' ಮೂಲಕ ಸಮುದಾಯಕ್ಕೆ ಅಧಿಕೃತವಾಗಿ ಹಸ್ತಾಂತರಿಸುವುದು.
• ಜಲ ಉತ್ಸವ: ನೀರಿನ ಮೇಲಿನ ಸಮುದಾಯದ ಮಾಲೀಕತ್ವವನ್ನು ಬಲಪಡಿಸಲು ಮೂರು ಹಂತದ ಜಲ ಉತ್ಸವ ಕಾರ್ಯತಂತ್ರವನ್ನು ಪ್ರಸ್ತುತಿಯಲ್ಲಿ ಎತ್ತಿ ತೋರಿಸಲಾಯಿತು. ರಾಷ್ಟ್ರೀಯ ಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಶ್ವ ಸಂಸ್ಥೆಯ ವಿಶ್ವ ಜಲ ದಿನದೊಂದಿಗೆ ಜೋಡಿಸಿ ಪ್ರತಿ ವರ್ಷ ಮಾರ್ಚ್ 8 ರಿಂದ ಮಾರ್ಚ್ 22 ರವರೆಗೆ 'ಜಲ ಮಹೋತ್ಸವ'ವನ್ನು ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ರಾಜ್ಯಗಳು, ಜಿಲ್ಲೆಗಳು ಮತ್ತು ಗ್ರಾಮ ಪಂಚಾಯತ್‌ಗಳು ನೀರಿನ ಆಸ್ತಿಗಳನ್ನು ಪರಿಶೀಲಿಸುತ್ತವೆ, ಟ್ಯಾಂಕ್ ಸ್ವಚ್ಛಗೊಳಿಸುವಿಕೆ, ಸೋರಿಕೆ ಕಡಿತ, ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಇತರ ಇಲಾಖೆಗಳೊಂದಿಗೆ ಸಮನ್ವಯವನ್ನು ಉತ್ತೇಜಿಸುತ್ತವೆ. ರಾಜ್ಯ ಮಟ್ಟದಲ್ಲಿ, 'ರಾಜ್ಯ ಜಲ ಉತ್ಸವ'ವು ಜಲ ಸಂರಕ್ಷಣೆ, ಮೇಲ್ಮೈ ನೀರಿನ ರಕ್ಷಣೆ, ಅಂತರ್ಜಲ ಮರುಪೂರಣ ಮತ್ತು ಸ್ಥಳೀಯ ಜಲ ಸಂಪ್ರದಾಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ, 'ಲೋಕ ಜಲ ಉತ್ಸವ'ವು ಜಲ ಭದ್ರತೆ, ಸುರಕ್ಷಿತ ಕುಡಿಯುವ ನೀರು, ಸಂರಕ್ಷಣಾ ಪದ್ಧತಿಗಳು ಮತ್ತು ಜವಾಬ್ದಾರಿಯುತ ಬಳಕೆಯ ಬಗ್ಗೆ ಚರ್ಚಿಸಲು ಸ್ಥಳೀಯ ಹಬ್ಬಗಳು, ಜಾತ್ರೆಗಳು ಮತ್ತು ಸಮುದಾಯ ಕೂಟಗಳನ್ನು ಬಳಸಿಕೊಳ್ಳುತ್ತದೆ. ಭಾರತದ ರಾಷ್ಟ್ರಪತಿಗಳು ಅಲಂಕರಿಸಿದ ಜಲ ಮಹೋತ್ಸವ 2026 ಅನ್ನು ಸಹ ಒಂದು ಪ್ರಮುಖ ಮೈಲಿಗಲ್ಲಾಗಿ ಎತ್ತಿ ತೋರಿಸಲಾಯಿತು, ಜೊತೆಗೆ ಭವಿಷ್ಯದ ಆವೃತ್ತಿಗಳಲ್ಲಿ ವ್ಯಾಪಕ ಭಾಗವಹಿಸುವಿಕೆಯನ್ನು ಬಲಪಡಿಸಲು ಒತ್ತು ನೀಡಲಾಯಿತು.
• ಮೇಲ್ದರ್ಜೆಗೆ ಏರಿಸಲಾದ ನೀರಿನ ಗುಣಮಟ್ಟದ ಆಡಳಿತ ಮ್ಯಾಟ್ರಿಕ್ಸ್: ಮನೆಗಳು, ಶಾಲೆಗಳು ಮತ್ತು ಅಂಗನವಾಡಿ ಮಟ್ಟದಲ್ಲಿ ಮೇಲ್ಮೈ ನೀರು, ಅಂತರ್ಜಲ ಮೂಲಗಳು ಮತ್ತು ಸ್ಥಳೀಯ ವಿತರಣಾ ಕೇಂದ್ರಗಳಿಗಾಗಿ ಕಟ್ಟುನಿಟ್ಟಾದ, ನಿಯಮಿತ ಪರೀಕ್ಷಾ ಆವರ್ತನಗಳನ್ನು ಸಾಂಸ್ಥಿಕಗೊಳಿಸುವುದು.
• ಜನ ಭಾಗೀದಾರಿ ಸಬಲೀಕರಣ: ಕಾರ್ಯಾಚರಣೆಗಳು, ನೀರಿನ ಗುಣಮಟ್ಟದ ಕಣ್ಗಾವಲು ಮತ್ತು ಶುಲ್ಕ ಸಂಗ್ರಹಣೆಯನ್ನು ನಿರ್ವಹಿಸಲು 'ಸುಜಲಾಂ ಶಕ್ತಿ' ಗುಂಪುಗಳು ಮತ್ತು ನಲ್ ಜಲ್ ಮಿತ್ರಗಳಿಗೆ ತರಬೇತಿ ನೀಡುವ ಹಾಗೂ ನಿಯೋಜಿಸುವ ಮೂಲಕ ಸಮುದಾಯ ಮಟ್ಟದ ಆಡಳಿತವನ್ನು ವಿಸ್ತರಿಸುವ ಕಾರ್ಯತಂತ್ರಗಳು.
• ಆದ್ಯತೆಯ ಭೂಪ್ರದೇಶಗಳಲ್ಲಿ ಉದ್ದೇಶಿತ ಮಟ್ಟದವರೆಗೆ ನಲ್ಲಿ ನೀರು ಸೌಲಭ್ಯ : ಪ್ರಮುಖ ರಾಷ್ಟ್ರೀಯ ಸುಧಾರಣಾ ಉಪ-ಕಾರ್ಯಕ್ರಮಗಳಾದ್ಯಂತ ಸಾಧನೆಯ ಪರಾಮರ್ಶೆ, ಅಪಾಯದ ಗುರುತಿಸುವಿಕೆ ಮತ್ತು ದತ್ತಾಂಶ ಕೊರತೆಯ ಸಮನ್ವಯ, ಇದರಲ್ಲಿ ಸೇರಿವೆ:
o ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳ (PVTG) ಹಳ್ಳಿಗಳಿಗಾಗಿ ಪಿಎಂ-ಜನ್ಮನ್ (PM-JANMAN).
o ಆಕಾಂಕ್ಷಿ ಜಿಲ್ಲೆಗಳು ಮತ್ತು ಆಕಾಂಕ್ಷಿ ಬ್ಲಾಕ್‌ಗಳ ಕಾರ್ಯಕ್ರಮಗಳು.
o ದೂರದ ಅಂತರರಾಷ್ಟ್ರೀಯ ಗಡಿ ಪ್ರದೇಶಗಳಿಗಾಗಿ ವೈಬ್ರೆಂಟ್ ವಿಲೇಜಸ್ ಪ್ರೋಗ್ರಾಂ (VVP 1.0 ಮತ್ತು 2.0).
• ದತ್ತಾಂಶ ಚಾಲಿತ ಹೊಣೆಗಾರಿಕೆಯ ಪರಿಕರಗಳು: ಮೂಲದ ಸುಸ್ಥಿರತೆಗಾಗಿ ಸಮಗ್ರ ಅನುಷ್ಠಾನ ಮತ್ತು ಸುಧಾರಣಾ ಯೋಜನೆ (CIRP) ಮಾಡ್ಯೂಲ್, ಕೃತಕ ಬುದ್ಧಿಮತ್ತೆ (AI) ಆಧಾರಿತ ನಿರ್ಧಾರ ಬೆಂಬಲ ವ್ಯವಸ್ಥೆಗಳಂತಹ (DSS) ವಿಶೇಷ ಡಿಜಿಟಲ್ ಇಂಟರ್‌ಫೇಸ್‌ಗಳ ಸಕ್ರಿಯ ಬಳಕೆ ಮತ್ತು 'ಜಲ ಸೇವಾ ಆಂಕಲನ್' ಮೂಲಕ ನಾಗರಿಕರ ಪ್ರತಿಕ್ರಿಯೆಗಳ ಬಳಕೆಯ ಬಗ್ಗೆ ಆಡಳಿತಾಧಿಕಾರಿಗಳಿಗೆ ತರಬೇತಿ ನೀಡುವುದು.
ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಜಂಟಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕಿ ಶ್ರೀಮತಿ ಐಶ್ವರ್ಯಾ ಸಿಂಗ್ ಅವರು 'ಘನತ್ಯಾಜ್ಯ ನಿರ್ವಹಣೆ (SWM) ನಿಯಮಗಳು 2026' ರ ಕುರಿತು ಪ್ರಸ್ತುತಿಯನ್ನು ನೀಡಿದರು. ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಎಸ್‌ಬಿಎಂ(ಜಿ) ಎರಡನೇ ಹಂತವು 'ಒಡಿಎಫ್ ಪ್ಲಸ್ (ಮಾದರಿ)' ಸಾಧನೆಯ ಗುರಿಯನ್ನು ಹೊಂದಿದ್ದು, ವರದಿಯಾದ ಆಸ್ತಿಗಳ ಪರಿಶೀಲನೆ ಮತ್ತು ಪ್ರಭಾವದ ಮೌಲ್ಯಮಾಪನಗಳನ್ನು ನಡೆಸುವುಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದು ಅವರು ಹೇಳಿದರು. ಮೂಲದಲ್ಲೇ ಕಸದ ಕಡ್ಡಾಯ ವಿಂಗಡಣೆ, ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರ ಗುರುತಿಸುವಿಕೆ ಮತ್ತು ನೋಂದಣಿ, ಹಾಗೂ ಹಳೆಯ ತ್ಯಾಜ್ಯದ (legacy waste) ವೈಜ್ಞಾನಿಕ ವಿಲೇವಾರಿ ಸೇರಿದಂತೆ ಹೊಸ ಆದೇಶಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ ಎಂದು ಅವರು ಸೂಚಿಸಿದರು. ಈ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವ್ಯಾಪಕ ಅಧಿಕಾರಗಳನ್ನು ನೀಡಲಾಗಿದ್ದು, ಕಟ್ಟುನಿಟ್ಟಾದ ಮೇಲ್ವಿಚಾರಣೆ ಮತ್ತು ವರದಿ ಮಾಡುವ ಅವಶ್ಯಕತೆಗಳಿವೆ ಎಂದೂ ಸಹ ಅವರು ತಿಳಿಸಿದರು.

ವ್ಯವಸ್ಥೆಯಲ್ಲಿ ವರದಿಯಾದ ಎಲ್ಲಾ ಆಸ್ತಿಗಳನ್ನು ಪರಿಶೀಲಿಸಲು ಮತ್ತು ಅವು ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಜಿಲ್ಲೆಗಳಿಗೆ ಸಲಹೆ ನೀಡಲಾಯಿತು. ಪ್ರಸ್ತುತ ವರ್ಷದಲ್ಲಿ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣದ ಅಡಿಯಲ್ಲಿ ಕೇವಲ 'ಟ್ವಿನ್-ಪಿಟ್' (twin-pit / ಅವಳಿ ಗುಂಡಿ) ಶೌಚಾಲಯಗಳನ್ನು ಮಾತ್ರ ಮಂಜೂರು ಮಾಡಬೇಕು ಎಂದು ಪ್ರಸ್ತುತಿಯಲ್ಲಿ ಒತ್ತಿಹೇಳಲಾಯಿತು. ಪಿಎಂ ಜನ್ಮನ್/ಪಿವಿಟಿಜಿ (PM JANMAN/PVTG) ಕುಟುಂಬಗಳಿಗೆ ಸಮರ್ಪಕ ನೈರ್ಮಲ್ಯ ವ್ಯಾಪ್ತಿ ಮತ್ತು ಒಡಿಎಫ್ (ODF) ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಗಳಿಗೆ ನಿರ್ದೇಶನ ನೀಡಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ನೈರ್ಮಲ್ಯ ಫಲಿತಾಂಶಗಳು ಮತ್ತು ದೀರ್ಘಕಾಲೀನ ಪರಿಸರ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು, ಎಸ್‌ಬಿಎಂ(ಜಿ) ಪ್ರಗತಿ ಮತ್ತು ಘನತ್ಯಾಜ್ಯ ನಿರ್ವಹಣೆ ನಿಯಮಗಳ ಪಾಲನೆ ಎರಡನ್ನೂ ಪರಿಶೀಲಿಸಲು 'ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್' ಸಭೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಲಾಯಿತು.
ಸರ್ವೋಚ್ಛ ನ್ಯಾಯಾಲಯ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುತ್ತಿರುವ 'ಘನತ್ಯಾಜ್ಯ ನಿರ್ವಹಣೆ ನಿಯಮಗಳು, 2026' ರ ಅನುಷ್ಠಾನದ ಮೇಲೆ ಈ ಪ್ರಸ್ತುತಿಯ ಪ್ರಮುಖ ಗಮನವಿತ್ತು. ಜಿಲ್ಲಾ ಮಟ್ಟದಲ್ಲಿ ಈ ನಿಯಮಗಳ ಜಾರಿಗಾಗಿ ಜಿಲ್ಲಾಧಿಕಾರಿಗಳನ್ನು ಏಕೈಕ ಪ್ರಾಧಿಕಾರವನ್ನಾಗಿ (single point authority) ಗೊತ್ತುಪಡಿಸಲಾಗಿದೆ. ಈ ನಿಯಮಗಳ ಪ್ರಕಾರ ಮೂಲದಲ್ಲೇ ಕಸದ ವಿಂಗಡಣೆ, ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರ ಗುರುತಿಸುವಿಕೆ ಮತ್ತು ನೋಂದಣಿ, ಗ್ರಾಮ ಪಂಚಾಯತ್‌ಗಳಿಂದ ಪ್ರಮಾಣೀಕರಣ ಮತ್ತು ಹಳೆಯ ತ್ಯಾಜ್ಯದ (legacy waste) ಸ್ಥಳಗಳ ಗ್ರಾಮೀಣ ಮ್ಯಾಪಿಂಗ್ ಅನ್ನು ಹಂತ-ಹಂತವಾಗಿ ಜಾರಿಗೊಳಿಸಬೇಕಾಗುತ್ತದೆ.
ಅಕ್ಟೋಬರ್ 31 ರ ವೇಳೆಗೆ ಎಲ್ಲಾ ಹಳೆಯ ತ್ಯಾಜ್ಯ ಸ್ಥಳಗಳ (legacy waste sites) ಗುರುತಿಸುವಿಕೆಯನ್ನು ಪೂರ್ಣಗೊಳಿಸಲು ಮತ್ತು ನಿಗದಿತ ಕಾಲಮಿತಿಯೊಳಗೆ ಅವುಗಳ ವಿಲೇವಾರಿ ಪ್ರಕ್ರಿಯೆಯನ್ನು ಕೈಗೊಳ್ಳಲು ಜಿಲ್ಲೆಗಳಿಗೆ ಸೂಚನೆ ನೀಡಲಾಗಿದೆ. ನಿಖರವಾದ ವರದಿಗಾರಿಕೆ, ಕಟ್ಟುನಿಟ್ಟಾದ ನಿಯಮ ಪಾಲನೆ ಮತ್ತು ಸ್ಥಳೀಯ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದ ಅಗತ್ಯವನ್ನು ತೀವ್ರವಾಗಿ ಒತ್ತಿಹೇಳಲಾಯಿತು.
ಸಂವಾದದ ಸಮಯದಲ್ಲಿ, ಸಿದ್ಧಿ (ಮಧ್ಯಪ್ರದೇಶ), ವಲ್ಸಾದ್ (ಗುಜರಾತ್) ಮತ್ತು ಶಿವಸಾಗರ್ (ಅಸ್ಸಾಂ) ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜೆಜೆಎಂ (JJM) 2.0 ಅಡಿಯಲ್ಲಿನ ಪ್ರಮುಖ ಅನುಷ್ಠಾನದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಪೂರ್ಣಗೊಂಡ ನೀರು ಸರಬರಾಜು ಯೋಜನೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವುದು, ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ಯೋಜನೆ, ಗ್ರಾಮ ಮಟ್ಟದ ಆಪರೇಟರ್‌ಗಳ ಅರ್ಹತಾ ಮಾನದಂಡಗಳು, ಹಳೆಯ ಮತ್ತು ಜೆಜೆಮೇತರ ನೀರು ಸರಬರಾಜು ಆಸ್ತಿಗಳನ್ನು 'ಸುಜಲಾಂ ಭಾರತ್' ವೇದಿಕೆಯಲ್ಲಿ ಮ್ಯಾಪಿಂಗ್ ಮಾಡುವುದು ಮತ್ತು ದೀರ್ಘಕಾಲೀನ ಸುಸ್ಥಿರತೆಗಾಗಿ ಬಳಕೆದಾರರ ಶುಲ್ಕ ಸಂಗ್ರಹಣೆ ಮುಂತಾದ ವಿಷಯಗಳು ಇದರಲ್ಲಿ ಸೇರಿದ್ದವು. ಈ ಪ್ರಶ್ನೆಗಳಿಗೆ ರಾಷ್ಟ್ರೀಯ ಜಲ ಜೀವನ್ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರು (AS&MD, NJJM) ಉತ್ತರಿಸಿದರು. ಜಿಲ್ಲೆಗಳು ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಗಳನ್ನು ಮುಂಚಿತವಾಗಿಯೇ ಯೋಜಿಸಬೇಕು, ಎಲ್ಲಾ ಗ್ರಾಮೀಣ ನೀರು ಸರಬರಾಜು ಆಸ್ತಿಗಳನ್ನು ಮ್ಯಾಪಿಂಗ್ ಮಾಡಲು 'ಸುಜಲಾಂ ಭಾರತ್' ಅನ್ನು ಸಾಮಾನ್ಯ ವೇದಿಕೆಯಾಗಿ ಬಳಸಬೇಕು, ತರಬೇತಿ ಪಡೆದ ಸ್ಥಳೀಯ ಆಪರೇಟರ್‌ಗಳಿಗೆ ಸಂಬಂಧಿಸಿದ ಪ್ರಾಯೋಗಿಕ ಕಾಳಜಿಗಳನ್ನು ಪರಿಶೀಲಿಸಬೇಕು ಮತ್ತು ಬಳಕೆದಾರರ ಶುಲ್ಕ ವ್ಯವಸ್ಥೆ ಹಾಗೂ ಸಮುದಾಯದ ಮಾಲೀಕತ್ವವನ್ನು ಬಲಪಡಿಸಲು ರಾಜ್ಯಗಳು ಮತ್ತು ಗ್ರಾಮ ಪಂಚಾಯತ್‌ಗಳೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಸ್ಪಷ್ಟಪಡಿಸಿದರು.
ತಮ್ಮ ಸಮಾರೋಪ ಭಾಷಣದಲ್ಲಿ, ರಾಷ್ಟ್ರೀಯ ಜಲ ಜೀವನ್ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರಾದ ಶ್ರೀ ಕಮಲ್ ಕಿಶೋರ್ ಸೋನ್ ಅವರು, ಪ್ರತಿ ಗ್ರಾಮೀಣ ಮನೆಗೆ ಕುಡಿಯುವ ನೀರನ್ನು ಒದಗಿಸುವ ಮಿಷನ್ ಅನ್ನು ಪೂರ್ಣಗೊಳಿಸಲು ಒಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿದರು. ಈ ಸಂವಾದವು ಜೆಜೆಎಂ (JJM) ಮತ್ತು ಎಸ್‌ಬಿಎಂ (ಜಿ) ಯೋಜನೆಗಳ ನಿಯಮಿತ ಪರಿಶೀಲನಾ ಪ್ರಕ್ರಿಯೆಯೊಂದಿಗೆ ಆರಂಭವಾಗಿದೆ ಎಂದು ಅವರು ತಿಳಿಸಿದರು. ಮುಂದಿನ ಕ್ರಮಗಳು ಮತ್ತು ಮೇಲ್ವಿಚಾರಣೆಗಾಗಿ ಈ ಪ್ರಸ್ತುತಿ ಮತ್ತು ಜಿಲ್ಲಾವಾರು ಸಾಧನೆಯ ವಿವರಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿನ ಪ್ರಮುಖ ಕ್ರಿಯಾ ಅಂಶಗಳನ್ನು ಪರಿಶೀಲಿಸಲು, ಸ್ಥಳೀಯ ಅನುಷ್ಠಾನದ ಕೊರತೆಗಳನ್ನು ನಿವಾರಿಸಲು ಮತ್ತು ಕುಡಿಯುವ ನೀರು ಹಾಗೂ ನೈರ್ಮಲ್ಯ ಸೇವೆಗಳನ್ನು ಸುಧಾರಿಸಲು ಅವರು ಒತ್ತಾಯಿಸಿದರು. ಎರಡೂ ಮಿಷನ್‌ಗಳ ಅಡಿಯಲ್ಲಿ ಸೇವಾ ವಿತರಣೆಯನ್ನು ಬಲಪಡಿಸಲು ಜಿಲ್ಲಾಧಿಕಾರಿಗಳ ನಾಯಕತ್ವವು ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.
******
(रिलीज़ आईडी: 2264352)
आगंतुक पटल : 50