ಜಲ ಶಕ್ತಿ ಸಚಿವಾಲಯ
azadi ka amrit mahotsav

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು 'ಸುಜಲ ಗ್ರಾಮ ಸಂವಾದ' ದ 7ನೇ ಆವೃತ್ತಿಯನ್ನು ಆಯೋಜಿಸಿತು


ಬಹುಭಾಷಾ ಸಂವಾದದಲ್ಲಿ ಸಮುದಾಯದ ಭಾಗವಹಿಸುವಿಕೆ, ಸ್ಥಳೀಯ ಮಾಲೀಕತ್ವ ಮತ್ತು ಗ್ರಾಮೀಣ ನೀರು ಸರಬರಾಜು ಆಸ್ತಿಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಒತ್ತು ನೀಡಲಾಯಿತು

ಪ್ರಕಟಣಾ ದಿನಾಂಕ: 20 MAY 2026 7:17PM by PIB Bengaluru

ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು (ಡಿಡಿಡಬ್ಲ್ಯೂಎಸ್), ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಸಮುದಾಯದ ನೇತೃತ್ವದ ನೀರು ಆಡಳಿತಕ್ಕೆ ಸರ್ಕಾರದ ಬದ್ಧತೆಯನ್ನು ಬಲಪಡಿಸುವ ಸಲುವಾಗಿ ಇಂದು ಬಹುಭಾಷಾ 'ಸುಜಲ ಗ್ರಾಮ ಸಂವಾದ' ದ ಏಳನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿತು.

ಈ ವರ್ಚುವಲ್ ಸಂವಾದವು ಗ್ರಾಮ ಪಂಚಾಯತ್ (ಜಿಪಿ) ಪ್ರತಿನಿಧಿಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ (ವಿ ಡಬ್ಲ್ಯೂ ಎಸ್‌ ಸಿ) ಸದಸ್ಯರು, ಸಮುದಾಯದ ಭಾಗಿಗಳು, ಜಲ ಬಹಿನಿಯರು, ಜಲ ಸಖಿಯರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗ್ರಾಮ ಪಂಚಾಯತ್‌ ಗಳ ಮುಂಚೂಣಿ ಕಾರ್ಯಕರ್ತರು ಸೇರಿದಂತೆ ವೈವಿಧ್ಯಮಯ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು. ಇದರೊಂದಿಗೆ ಜೆಜೆಎಂ ರಾಜ್ಯ ಮಿಷನ್ ನಿರ್ದೇಶಕರು, ಜಿಲ್ಲಾಧಿಕಾರಿಗಳು/ಜಿಲ್ಲಾ ಮ್ಯಾಜಿಸ್ಟ್ರೇಟ್‌/ಡೆಪ್ಯುಟಿ ಕಮಿಷನರ್‌ ಗಳು, ಡಿಡಬ್ಲ್ಯೂಎಸ್‌ಎಂ ಅಧಿಕಾರಿಗಳು ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

No alternative text description for this image

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಎನ್‌ ಜೆ ಜೆ ಎಂ ಜಂಟಿ ಕಾರ್ಯದರ್ಶಿ ಶ್ರೀ ಡಿ. ಸೆಂಥಿಲ್ ಪಾಂಡಿಯನ್ ಅವರ ಸಮ್ಮುಖದಲ್ಲಿ ಡಿಡಿಡಬ್ಲ್ಯೂಎಸ್ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ ಅವರು ಸಂವಾದದ ಅಧ್ಯಕ್ಷತೆ ವಹಿಸಿದ್ದರು.

ಡಿಡಿಡಬ್ಲ್ಯೂಎಸ್ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ ಅವರು ತಮ್ಮ ಆರಂಭಿಕ ನುಡಿಗಳಲ್ಲಿ, ಸುಜಲ ಗ್ರಾಮ ಸಂವಾದವನ್ನು ಗ್ರಾಮ ಪಂಚಾಯತ್‌ ಗಳ ಅನುಭವಗಳು ಮತ್ತು ಸವಾಲುಗಳಿಂದ ಕಲಿಯುವ ಒಂದು ವೇದಿಕೆ ಎಂದು ಬಣ್ಣಿಸಿದರು. ಈ ಸಂವಾದದ ಸಮಯದಲ್ಲಿ ಹಂಚಿಕೊಳ್ಳಲಾದ ಅತ್ಯುತ್ತಮ ಪದ್ಧತಿಗಳು ಇತರ ಗ್ರಾಮ ಪಂಚಾಯತ್‌ ಗಳಿಗೆ ತಮ್ಮದೇ ಆದ ವ್ಯವಸ್ಥೆಗಳನ್ನು ಬಲಪಡಿಸಿಕೊಳ್ಳಲು ಸಹಾಯ ಮಾಡಲಿವೆ ಎಂದು ಅವರು ಹೇಳಿದರು.

ಜಲ ಜೀವನ್ ಮಿಷನ್ 2.0 ಅಡಿಯಲ್ಲಿ, ಗ್ರಾಮೀಣ ಕುಡಿಯುವ ನೀರು ವ್ಯವಸ್ಥೆಗಳ ಸಮುದಾಯದ ನೇತೃತ್ವದ ಮತ್ತು ಸುಸ್ಥಿರ ನಿರ್ವಹಣೆಗೆ ಗಮನವನ್ನು ಹರಿಸಲಾಗಿದೆ ಎಂದು ಶ್ರೀ ಅಶೋಕ್ ಕೆ.ಕೆ. ಮೀನಾ ಹೇಳಿದರು. ಸಾಂಪ್ರದಾಯಿಕವಾಗಿ, ಗ್ರಾಮೀಣ ಸಮುದಾಯಗಳೇ ತಮ್ಮ ಕುಡಿಯುವ ನೀರಿನ ಸಂಪನ್ಮೂಲಗಳನ್ನು ನಿರ್ವಹಿಸುತ್ತಿದ್ದವು ಎಂಬುದನ್ನು ಅವರು ನೆನಪಿಸಿದರು ಮತ್ತು ದೀರ್ಘಕಾಲದ ಸುಸ್ಥಿರತೆಗಾಗಿ ಈ ಸ್ಥಳೀಯ ಮಾಲೀಕತ್ವದ ಮನೋಭಾವವನ್ನು ಪುನರುಜ್ಜೀವನಗೊಳಿಸುವುದು ಅತ್ಯಗತ್ಯ ಎಂದು ಪುನರುಚ್ಚರಿಸಿದರು. ಸುರಕ್ಷಿತ ಕುಡಿಯುವ ನೀರಿನ ಸುಸ್ಥಿರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಮದ ನೀರು ಸರಬರಾಜು ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯ ಮಾಲೀಕತ್ವವನ್ನು ಗ್ರಾಮ ಪಂಚಾಯತ್‌ ಗಳು ಮತ್ತು ಸ್ಥಳೀಯ ಸಮುದಾಯಗಳು ವಹಿಸಿಕೊಳ್ಳಬೇಕು ಎಂದು ಅವರು ವಿನಂತಿಸಿದರು. ಜೊತೆಗೆ, ದಿನೇ ದಿನೇ ಹೆಚ್ಚು ತಾಂತ್ರಿಕ ಮತ್ತು ಎಂಜಿನಿಯರಿಂಗ್ ಆಧಾರಿತವಾಗುತ್ತಿರುವ ಗ್ರಾಮೀಣ ನೀರಿನ ಮೂಲಸೌಕರ್ಯಗಳನ್ನು ನಿರ್ವಹಿಸುವಲ್ಲಿ ಜಿಲ್ಲಾ ಆಡಳಿತಗಳು ಹಳ್ಳಿಗಳಿಗೆ ಬೆಂಬಲವನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.

'ಸುಜಲ ಗ್ರಾಮ ಸಂವಾದ'ದ ಏಳನೇ ಆವೃತ್ತಿಯು 6 ಗ್ರಾಮ ಪಂಚಾಯತ್ ಪ್ರಧಾನ ಕಚೇರಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಗ್ರಾಮ ಮಟ್ಟದ ಸಂವಾದಗಳನ್ನು ಒಳಗೊಂಡಿತ್ತು. ಈ ಉಪಕ್ರಮವು ಸುಮಾರು 4000 ಡಿಜಿಟಲ್ ಪಾಲ್ಗೊಳ್ಳುವಿಕೆಗಳನ್ನು ದಾಖಲಿಸಿದ್ದು, ಇದರಲ್ಲಿ ಮಹಿಳೆಯರು, ಮಕ್ಕಳು, ಯುವಕರು ಮತ್ತು ಹಿರಿಯ ನಾಗರಿಕರು ಸೇರಿದ್ದಾರೆ. ಇದು ಸಮುದಾಯಗಳು ಮತ್ತು ಅಧಿಕಾರಿಗಳು ಇಬ್ಬರಿಂದಲೂ ಇದ್ದ ಬಲವಾದ ತೊಡಗಿಸಿಕೊಳ್ಳುವಿಕೆಯನ್ನು ಪ್ರತಿಫಲಿಸುತ್ತದೆ. ಇದು ಕನ್ನಡ, ರಾಜಸ್ಥಾನಿ, ಮಿಜೋ, ಗರ್ವಾಲಿ, ಪಂಜಾಬಿ ಮತ್ತು ಹಿಂದಿಯಂತಹ ಭಾಷೆಗಳಲ್ಲಿ 6 ರಾಜ್ಯಗಳ ಗ್ರಾಮ ಪಂಚಾಯತ್‌ ಗಳ ಸಹಭಾಗಿತ್ವವನ್ನು ಹೊಂದಿತ್ತು. ಈ ಸಂವಾದವು ಪ್ರಾದೇಶಿಕ ಶೈಲಿಯಲ್ಲಿ ಸಂವಹನ ಶೀಲ ತೊಡಗಿಸಿಕೊಳ್ಳುವಿಕೆಯನ್ನು ತಂದಿದ್ದರಿಂದ ವಿಶಿಷ್ಟವೆಂದು ಸಾಬೀತಾಯಿತು.

No alternative text description for this image

ಗ್ರಾಮ ಪಂಚಾಯತ್ಗಳಿಂದ ಕೇಳಿಬಂದ ಧ್ವನಿಗಳು

ಗ್ರಾಮ ಪಂಚಾಯತ್ - ಖಂಡ್ವಾ ಪಟ್ಟಾ, ಜಿಲ್ಲೆ - ಚುರು, ರಾಜಸ್ಥಾನ: ಖಂಡ್ವಾ ಪಟ್ಟಾದ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಜಲ ಜೀವನ್ ಮಿಷನ್ ಅನುಷ್ಠಾನಕ್ಕೆ ಸಂಬಂಧಿಸಿದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಮನೆ ಮನೆಗೆ ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ ಮತ್ತು ಗ್ರಾಮದ ನೀರು ಸರಬರಾಜು ಆಸ್ತಿಗಳನ್ನು ನಿರ್ವಹಿಸುವಲ್ಲಿ ಮಹಿಳಾ ಸದಸ್ಯರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಪಂಚಾಯತಿಯು ಮಳೆನೀರು ಕೊಯ್ಲಿಗಾಗಿ ಸಾಂಪ್ರದಾಯಿಕ 'ಕುಂಡ್/ಟಂಕಾ' ನಿರ್ಮಾಣವನ್ನು ಎತ್ತಿ ತೋರಿಸಿತು. ಶಾಲೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಮನೆಗಳಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಯನ್ನು ನಡೆಸಲು ಗ್ರಾಮದ ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದರು. ಜಿಲ್ಲಾ ಅಧಿಕಾರಿಗಳು ಮಾತನಾಡಿ, ನೀರು ಸರಬರಾಜು ವ್ಯವಸ್ಥೆಗಳಲ್ಲಿನ ಸೋರಿಕೆಯನ್ನು ಸರಿಪಡಿಸಲು ಮತ್ತು ಗ್ರಾಮ ಪಂಚಾಯತ್‌ ಗಳು ಹಾಗೂ ಪಿ ಎಚ್‌ ಇ ಡಿ ಸಮನ್ವಯದೊಂದಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆ ಚಟುವಟಿಕೆಗಳನ್ನು ಬಲಪಡಿಸಲು ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದ 'ಜಲ ಸಂಚಯ' ಅಭಿಯಾನದಡಿಯಲ್ಲಿ ರಾಜ್ಯವು ವ್ಯಾಪಕವಾದ ನೀರು ಸಂರಕ್ಷಣೆ ಮತ್ತು ಮೂಲ ಸುಸ್ಥಿರತೆಯ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ ಮತ್ತು ಅನುಷ್ಠಾನ ಹಾಗೂ ಸುಸ್ಥಿರತೆಯ ಕ್ರಮಗಳನ್ನು ಪರಿಶೀಲಿಸಲು ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ನಿಯಮಿತ ಸಭೆಗಳನ್ನು ನಡೆಸುತ್ತಿದೆ ಎಂದು ಹೇಳಿದರು.

A group of people sitting at a tableAI-generated content may be incorrect.

ಗ್ರಾಮ ಪಂಚಾಯತ್ - ಖಮ್ರಾಂಗ್, ಜಿಲ್ಲೆ - ಕೋಲಾಸಿಬ್, ಮಿಜೋರಾಂ: ಗ್ರಾಮದ ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಮಿಜೋ ಭಾಷೆಯಲ್ಲಿ ಹಂಚಿಕೊಂಡರು, ಗ್ರಾಮದಲ್ಲಿ ಜಲ ಜೀವನ್ ಮಿಷನ್‌ ನ ಸುಸ್ಥಿರ ಅನುಷ್ಠಾನಕ್ಕಾಗಿ ಅಳವಡಿಸಿಕೊಳ್ಳಲಾದ ಬಲವಾದ ಸಮುದಾಯ ನೇತೃತ್ವದ ವಿಧಾನವನ್ನು ಒತ್ತಿ ಹೇಳಿದರು. ಗ್ರಾಮಸ್ಥರು ಪ್ರತ್ಯೇಕ ವಾಟ್ಸಾಪ್ (WhatsApp) ಗುಂಪಿನ ಮೂಲಕ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು, ಇದನ್ನು ನೀರು ಸರಬರಾಜು ವೇಳಾಪಟ್ಟಿಗಳು, ನಿರ್ವಹಣಾ ಸಮಸ್ಯೆಗಳು, ಸಮುದಾಯ ಸಭೆಗಳು ಮತ್ತು ಕುಡಿಯುವ ನೀರು ನಿರ್ವಹಣೆಗೆ ಸಂಬಂಧಿಸಿದ ಜಾಗೃತಿ ಚಟುವಟಿಕೆಗಳ ಕುರಿತು ಸಂವಹನಕ್ಕಾಗಿ ಸಕ್ರಿಯವಾಗಿ ಬಳಸಲಾಗುತ್ತಿದೆ. ಸುರಕ್ಷಿತ ಮತ್ತು ಸುಸ್ಥಿರ ಕುಡಿಯುವ ನೀರು ಸರಬರಾಜನ್ನು ಖಚಿತಪಡಿಸಿಕೊಳ್ಳಲು ನಿಯಮಿತ ಕ್ಲೋರಿನೀಕರಣ, ಸಮುದಾಯ ನೇತೃತ್ವದ ಮೇಲ್ವಿಚಾರಣೆ ಮತ್ತು 'ಜಲ ಸೇವಾ ಆಂಕಲನ್' ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. ಎರಡೂ ಜಿಲ್ಲೆಗಳು ಜೆಜೆಎಂ ಅಡಿಯಲ್ಲಿ 100 ಪ್ರತಿಶತ ಮನೆಗೆ ನಲ್ಲಿ ನೀರಿನ ವ್ಯಾಪ್ತಿಯನ್ನು ಸಾಧಿಸಿವೆ ಮತ್ತು ಸಮುದಾಯದ ಮಾಲೀಕತ್ವದ ಮೂಲಕ ಯೋಜನೆಯ ನಿರ್ವಹಣೆಗಾಗಿ ಅವರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದರು.

ಗ್ರಾಮ ಪಂಚಾಯತ್ - ಘುಲೇಖ್, ಜಿಲ್ಲೆ - ಪೌರಿ ಗರ್ವಾಲ್, ಉತ್ತರಾಖಂಡ್: ಘುಲೇಖ್‌ ಗ್ರಾಮ ಪಂಚಾಯತ್‌ ನ ಪ್ರತಿನಿಧಿಗಳೊಂದಿಗಿನ ಸಂವಾದದ ಸಮಯದಲ್ಲಿ, ಸಮುದಾಯ ಮಟ್ಟದಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಲಾಯಿತು. ದುರಸ್ತಿ ಸಾಮಗ್ರಿಗಳನ್ನು ಖರೀದಿಸಲು ಮತ್ತು ವ್ಯವಸ್ಥೆಯ ತ್ವರಿತ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಿ ಡಬ್ಲ್ಯೂ ಎಸ್‌ ಸಿ ಯಿಂದ ಬಳಕೆದಾರರ ಶುಲ್ಕವಾಗಿ ಮಾಸಿಕ ₹20 ಅನ್ನು ಸಂಗ್ರಹಿಸಲಾಗುತ್ತದೆ. ಮನೆಯಲ್ಲೇ ನಲ್ಲಿ ಸಂಪರ್ಕಗಳು ಲಭ್ಯವಿರುವುದರಿಂದ ದೂರದ ಸ್ಥಳಗಳಿಂದ ನೀರು ತರುವ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದು ಫಲಾನುಭವಿಗಳು ಹಂಚಿಕೊಂಡಡರು. ಪೌರಿ ಗರ್ವಾಲ್‌ ನ ಮುಖ್ಯ ಅಭಿವೃದ್ಧಿ ಅಧಿಕಾರಿ ಶ್ರೀ ಅಶೋಕ್ ಜೋಶಿ ಮಾತನಾಡಿ, ಸವಾಲಿನ ಪರ್ವತ ಭೂಪ್ರದೇಶ ಮತ್ತು ಕಷ್ಟಕರವಾದ ನೀರಿನ ಮೂಲ ಪರಿಸ್ಥಿತಿಗಳ ಹೊರಾಗಿಯೂ, ಜಿಲ್ಲೆಯು ಜೆಜೆಎಂ ಅಡಿಯಲ್ಲಿ ಮಂಜೂರಾದ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದು ಮಾಹಿತಿ ನೀಡಿದರು. ಸ್ಪ್ರಿಂಗ್ ಅಂಡ್ ರಿವರ್ ರಿಜುವೆನೇಷನ್ ಅಥಾರಿಟಿ (SARRA) ಮತ್ತು ಸೌರ ಸರಬರಾಜು ಆಧಾರಿತ ಯೋಜನೆಗಳ ಮೂಲಕ ರಾಜ್ಯದಲ್ಲಿ ನೀರು ಸರಬರಾಜನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಿರಂತರವಾಗಿ ಡಿ ಡಬ್ಲ್ಯೂ ಎಸ್‌ ಎಂ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಗ್ರಾಮ ಪಂಚಾಯತ್ - ಈನಹಳ್ಳಿ, ಜಿಲ್ಲೆ - ಚಿತ್ರದುರ್ಗ, ಕರ್ನಾಟಕ: ರಾಜ್ಯ ಭಾಷೆಯಾದ ಕನ್ನಡದಲ್ಲಿ ಡಿ ಡಿ ಡಬ್ಲ್ಯೂ ಎಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸುವಾಗ, ಗ್ರಾಮದ ಪ್ರತಿನಿಧಿಗಳು ಜೆಜೆಎಂ ಯಶಸ್ವಿ ಅನುಷ್ಠಾನದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಯೋಜನೆಯ ಫಲಾನುಭವಿಯೊಬ್ಬರು ಮಾತನಾಡಿ, ಜೆಜೆಎಂ ಅನುಷ್ಠಾನಕ್ಕೆ ಮೊದಲು, ನೇರ ಪಂಪ್ ಬಳಕೆ ಮತ್ತು ಅನಧಿಕೃತ ಪೈಪ್‌ಲೈನ್ ಸಂಪರ್ಕಗಳಿಂದಾಗಿ ಗ್ರಾಮವು ಅನಿಯಮಿತ ನೀರು ಸರಬರಾಜು ಮತ್ತು ಅಸಮಾನ ವಿತರಣೆಯನ್ನು ಅನುಭವಿಸುತ್ತಿತ್ತು ಎಂದು ಹೇಳಿದರು. ನಂತರ, ನಿಖರವಾದ ಯೋಜನೆಯೊಂದಿಗೆ, ಪಂಚಾಯತ್ ವಿಶ್ವಾಸಾರ್ಹ ನೀರಿನ ಮೂಲಗಳನ್ನು ಗುರುತಿಸಿತು ಮತ್ತು ಹೊಸ ಬೋರ್‌ವೆಲ್, ಓವರ್‌ ಹೆಡ್‌ ಟ್ಯಾಂಕ್‌ ಮತ್ತು ಪ್ರತ್ಯೇಕ ಪೈಪ್‌ಲೈನ್ ನೆಟ್‌ವರ್ಕ್ ನಿರ್ಮಾಣವನ್ನು ಕಾರ್ಯಗತಗೊಳಿಸಿತು. ಪ್ರತಿ ಮನೆಗೆ ₹70 ರಂತೆ ಬಳಕೆದಾರರ ವಂತಿಕೆಯನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು. ಸ್ಥಿರ ನೀರಿನ ಮೂಲಗಳು, ಸೋರಿಕೆಗಳ ನಿರ್ಮೂಲನೆ ಮತ್ತು ಜೆಜೆಎಂ ಮೂಲಸೌಕರ್ಯಗಳ ಸರಿಯಾದ ಬಳಕೆ ಸುಸ್ಥಿರತೆಗೆ ಗಮನಾರ್ಹ ಕೊಡುಗೆ ನೀಡಿದೆ ಎಂದು ಡಿ ಡಬ್ಲ್ಯೂ ಎಸ್‌ ಎಂ ಮತ್ತು ಎಸ್‌ ಡಬ್ಲ್ಯೂ ಎಸ್‌ ಎಂ ಅಧಿಕಾರಿಗಳು ಹೇಳಿದರು. ರಾಜ್ಯದ ಸುಮಾರು 260 ಹಳ್ಳಿಗಳನ್ನು 24x7 ನೀರು ಸರಬರಾಜು ಗ್ರಾಮಗಳೆಂದು ಘೋಷಿಸಲಾಗಿದ್ದು, ಈ ವರ್ಷದಲ್ಲಿ ಈ ಉಪಕ್ರಮವನ್ನು 1,000 ಹಳ್ಳಿಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಲಾಯಿತು.

ಗ್ರಾಮ ಪಂಚಾಯತ್ - ಗಿಲ್ ಕಲನ್, ಜಿಲ್ಲೆ - ಬಟಿಂಡಾ, ಪಂಜಾಬ್: ಗ್ರಾಮದ ಪ್ರತಿನಿಧಿಗಳು ಪಂಜಾಬಿ ಭಾಷೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು, ಮನೆಗಳಿಗೆ ನಿಯಮಿತ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಮತ್ತು ಮಿಷನ್ ಅಡಿಯಲ್ಲಿ ಗ್ರಾಮದಲ್ಲಿ ನೀರಿನ ಗುಣಮಟ್ಟವು ಗಣನೀಯವಾಗಿ ಸುಧಾರಿಸಿದೆ ಎಂದು ಹೇಳಿದರು. ನೀರು ಸರಬರಾಜು ನಿರ್ವಹಣೆ, ಕಾರ್ಯಾಚರಣೆ ಚಟುವಟಿಕೆಗಳು ಮತ್ತು ಸೇವಾ ವಿತರಣೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾಸಿಕ ಪರಾಮರ್ಶೆ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಜಿಲ್ಲೆಯ ಅಧಿಕಾರಿಗಳು ಮತ್ತು ಪಂಜಾಬ್ ಜೆಜೆಎಂ ಮಿಷನ್ ನಿರ್ದೇಶಕರಾದ ಡಾ. ಸೈಯದ್ ಸೆಹ್ರಿಶ್ ಅಸ್ಗರ್ ಅವರು, ಬಟಿಂಡಾದಲ್ಲಿ ಜೆಜೆಎಂ ಅಡಿಯಲ್ಲಿ ಸುಸ್ಥಿರ ಮತ್ತು ವಿಶ್ವಾಸಾರ್ಹ ಕುಡಿಯುವ ನೀರು ಸೇವೆ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಪಂಚಾಯತ್ ಕೈಗೊಳ್ಳುತ್ತಿರುವ ಸಮುದಾಯ ನೇತೃತ್ವದ ಪ್ರಯತ್ನಗಳನ್ನು ಒತ್ತಿ ಹೇಳಿದರು. ಗಿಲ್ ಕಲಾನ್ ಗ್ರಾಮ ಪಂಚಾಯತ್‌ ಯೋಜನೆಯ ಅನುಷ್ಠಾನದಲ್ಲಿ ಸಕ್ರಿಯ ಮಹಿಳಾ ಭಾಗವಹಿಸುವಿಕೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು ಮತ್ತು ಈ ಗ್ರಾಮವು ಶೀಘ್ರದಲ್ಲೇ ರಾಜ್ಯದಲ್ಲಿ 'ಮಾದರಿ ಗ್ರಾಮ'ವಾಗಲಿದೆ ಎಂದು ಶ್ಲಾಘಿಸಿದರು.

ಗ್ರಾಮ ಪಂಚಾಯತ್ - ತಿನ್ಹಾರಿ ಮಾಫಿ, ಜಿಲ್ಲೆ - ಬಂದಾ, ಉತ್ತರ ಪ್ರದೇಶ: ಸಂವಾದದ ಸಮಯದಲ್ಲಿ, ಗ್ರಾಮದ ಪ್ರತಿನಿಧಿಗಳು ಮಿಷನ್ ಅಡಿಯಲ್ಲಿ ಈಗ ಇಡೀ ಗ್ರಾಮದಾದ್ಯಂತ ಮನೆಗೆ ನಲ್ಲಿ ಸಂಪರ್ಕಗಳನ್ನು ಒದಗಿಸಲಾಗಿದೆ, ಬೆಳಿಗ್ಗೆ ಮತ್ತು ಸಂಜೆ ನಿಯಮಿತವಾಗಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು. ನಲ್ಲಿ ನೀರಿನ ಲಭ್ಯತೆಯು ಮಹಿಳೆಯರ ಮೇಲಿನ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ ಮತ್ತು ದೈನಂದಿನ ಜೀವನದಲ್ಲಿ ಒಟ್ಟಾರೆ ಸೌಕರ್ಯವನ್ನು ಸುಧಾರಿಸಿದೆ ಎಂದು ಫಲಾನುಭವಿಗಳು ಹಂಚಿಕೊಂಡರು. ಬಂದಾ ಜಿಲ್ಲಾ ಪಂಚಾಯತ್ ಸಿಇಒ ಮಾತನಾಡಿ, ಯಮುನಾ ಮತ್ತು ಕೇನ್ ನದಿಗಳ ನೀರನ್ನು ಬೃಹತ್ ಯೋಜನೆಗಳ ಮೂಲಕ ಜಿಲ್ಲೆಯಾದ್ಯಂತದ ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು. ಸುಸ್ಥಿರತೆಯನ್ನು ಬಲಪಡಿಸಲು ವಿವಿಧ ಯೋಜನೆಗಳ ಅಡಿಯಲ್ಲಿ ನಿಯಮಿತ ವಿ ಡಬ್ಲ್ಯೂ ಎಸ್‌ ಸಿ ಸಭೆಗಳು, ಜಿಲ್ಲಾ ಮಟ್ಟದ ಪರಾಮರ್ಶೆಗಳು ಮತ್ತು ಕೆರೆಗಳು, ಬದು ನಿರ್ಮಾಣ ಮತ್ತು ಕೃಷಿ ಹೊಂಡಗಳು ಸೇರಿದಂತೆ ನೀರು ಸಂರಕ್ಷಣಾ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದ ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್) ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಪ್ರವಾಶ್ ಕುಮಾರ್ ಮಾತನಾಡಿ, ಬಂದಾ ಜಿಲ್ಲೆಯ ಹಲವಾರು ಹಳ್ಳಿಗಳು ಈಗಾಗಲೇ 'ಹರ್ ಘರ್ ಜಲ್' ಪ್ರಮಾಣೀಕರಣವನ್ನು ಸಾಧಿಸಿವೆ ಎಂದು ತಿಳಿಸಿದರು ಮತ್ತು ರಾಜ್ಯದಾದ್ಯಂತ ನೈಜ-ಸಮಯದ ನೀರು ಸರಬರಾಜು ಮೇಲ್ವಿಚಾರಣೆ ಮತ್ತು ಕುಂದುಕೊರತೆ ನಿವಾರಣೆಗಾಗಿ ಮೂಲ ಸುಸ್ಥಿರತೆ ಯೋಜನೆಗಳ ಅಭಿವೃದ್ಧಿ, ನದಿ ಪುನರುಜ್ಜೀವನ ಪ್ರಯತ್ನಗಳು ಮತ್ತು 'ಜಲ್ ಸಾರಥಿ' ಮೊಬೈಲ್ ಅಪ್ಲಿಕೇಶನ್ ಬಿಡುಗಡೆಯನ್ನು ಒತ್ತಿ ಹೇಳಿದರು.

ಎನ್‌ ಜೆ ಜೆ ಎಂ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರಾದ ಶ್ರೀ ಕಮಲ್ ಕಿಶೋರ್ ಸೋನ್ ಅವರು ತಮ್ಮ ಸಮಾರೋಪ ಮಾತುಗಳಲ್ಲಿ, ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಸಮುದಾಯ ನೇತೃತ್ವದ ಗ್ರಾಮೀಣ ಕುಡಿಯುವ ನೀರು ನಿರ್ವಹಣೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳಿಗಾಗಿ ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಜಿಲ್ಲಾ ಆಡಳಿತಗಳು ಮತ್ತು ರಾಜ್ಯ ಸರ್ಕಾರಗಳಿಗೆ ತಮ್ಮ ಶ್ಲಾಘನೆಯನ್ನು ವ್ಯಕ್ತಪಡಿಸಿದರು.

No alternative text description for this image

ಇಂತಹ ಅತ್ಯುತ್ತಮ ಪದ್ಧತಿಗಳನ್ನು ವಿಸ್ತರಿಸಲು ಮತ್ತು ಹೆಚ್ಚಿನ ಪಂಚಾಯತ್‌ ಗಳನ್ನು ಇದರಲ್ಲಿ ಸೇರಿಸಲು ನಿರಂತರ ಪ್ರಯತ್ನಗಳಿಗೆ ಅವರು ಕರೆ ನೀಡಿದರು, ಇದರಿಂದಾಗಿ ಪಾರದರ್ಶಕತೆ, ಸಮುದಾಯದ ಒಳಗೊಳ್ಳುವಿಕೆ ಮತ್ತು ಹೊಣೆಗಾರಿಕೆಯ ಇಂತಹ ಮಾದರಿಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪುನರಾವರ್ತಿಸಬಹುದಾಗಿದೆ ಎಂದರು.

ಸಂವಾದವು ಎನ್‌ ಜೆ ಜೆ ಎಂ ಜಂಟಿ ಕಾರ್ಯದರ್ಶಿ ಶ್ರೀ ಡಿ. ಸೆಂಥಿಲ್ ಪಾಂಡಿಯನ್ ಅವರಿಂದ ಸಂದರ್ಭದ ಪರಿಚಯ ಮತ್ತು ಉದ್ದೇಶದ ಹಂಚಿಕೆಯೊಂದಿಗೆ ಪ್ರಾರಂಭವಾಯಿತು. ಈ ಸಂವಾದವು ಗ್ರಾಮದ ಸಮುದಾಯಗಳ ಮಾತುಗಳನ್ನು ಆಲಿಸುವುದು, ಅವರ ಅನುಭವಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಮೂಲ ಪೋಷಣೆಯ ಕುರಿತು ಸ್ಥಳೀಯ ಪದ್ಧತಿಗಳನ್ನು ಕಲಿಯುವುದು ಸಂವಾದದ ಗುರಿಯಾಗಿದೆ ಎಂದು ಅವರು ಹೇಳಿದರು.

 

*****

 


(ಪ್ರಕಟಣೆ ಐ.ಡಿ.: 2263510) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil