ಪರಿಸರ ಮತ್ತು ಅರಣ್ಯ ಸಚಿವಾಲಯ
ಪ್ರಾಜೆಕ್ಟ್ ಚೀತಾ: ಭಾರತದ ಐತಿಹಾಸಿಕ ವನ್ಯಜೀವಿ ಮರುಸ್ಥಾಪನೆ ಉಪಕ್ರಮದಲ್ಲಿ ಬಲವಾದ ಪ್ರಗತಿ ಮತ್ತು ಆಶಾದಾಯಕ ಭವಿಷ್ಯವನ್ನು ತೋರಿಸುತ್ತದೆ
ಪ್ರಕಟಣಾ ದಿನಾಂಕ:
19 MAY 2026 5:02PM by PIB Bengaluru
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಇಂದು 'ಪ್ರಾಜೆಕ್ಟ್ ಚೀತಾ'ದ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು. ಕಾರ್ಯಕ್ರಮದ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಮತ್ತು ಭವಿಷ್ಯದ ಕಾರ್ಯಸೂಚಿಯ ಬಗ್ಗೆ ಚರ್ಚಿಸಲು ಈ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEFCC) ಹಿರಿಯ ಅಧಿಕಾರಿಗಳು, ಯೋಜನಾ ತಜ್ಞರು ಮತ್ತು ದೇಶದಲ್ಲಿ ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹಿರಿಯ ಕ್ಷೇತ್ರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಾಜೆಕ್ಟ್ ಚೀತಾ, ಭಾರತದಲ್ಲಿ ಅಳಿವಿನ ಅಂಚಿನಲ್ಲಿರುವ ಚಿರುತೆಗಳನ್ನು ದೇಶಕ್ಕೆ ಮರುಪರಿಚಯಿಸುವ ಗುರಿಯನ್ನು ಹೊಂದಿರುವ ಒಂದು ಪ್ರವರ್ತಕ ಉಪಕ್ರಮವಾಗಿದೆ. ಸಂಯೋಜಿತ ಅಂತಾರಾಷ್ಟ್ರೀಯ ಸಹಕಾರ ಮತ್ತು ವೈಜ್ಞಾನಿಕ ಯೋಜನೆಯ ಮೂಲಕ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಚಿರುತೆಗಳ ಆರಂಭಿಕ ಸಮೂಹವನ್ನು ಸ್ಥಳಾಂತರಿಸುವ ಮೂಲಕ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಮತ್ತು ಬೋಟ್ಸ್ವಾನಾದಿಂದ 9 ಚಿರುತೆಗಳನ್ನು ತರುವ ಮೂಲಕ ಈ ಉಪಕ್ರಮಕ್ಕೆ ಮತ್ತಷ್ಟು ಪುಷ್ಟಿ ನೀಡಲಾಯಿತು.
ವನ್ಯಜೀವಿ ಸ್ಥಳಾಂತರಕ್ಕೆ ಸಂಬಂಧಿಸಿದ ಅಂತರ್ಗತ ಸವಾಲುಗಳ ಹೊರತಾಗಿಯೂ, ಈ ಯೋಜನೆಯು ಉತ್ತೇಜಕ ಫಲಿತಾಂಶಗಳನ್ನು ದಾಖಲಿಸಿದೆ. ಪ್ರಸ್ತುತ ಚಿರುತೆಗಳ ಸಂಖ್ಯೆಯು 53 ಕ್ಕೆ ತಲುಪಿದ್ದು, ಈ ಪೈಕಿ 33 ಚಿರುತೆಗಳು ಭಾರತದಲ್ಲೇ ಜನಿಸಿವೆ. ಭಾರತೀಯ ಪರಿಸರಕ್ಕೆ ಯಶಸ್ವಿಯಾಗಿ ಒಗ್ಗಿಕೊಂಡಿರುವುದು ಮತ್ತು ಸಂತಾನೋತ್ಪತ್ತಿಯ ಕಾರಣದಿಂದಾಗಿ ಕಂಡುಬಂದಿರುವ ಗಮನಾರ್ಹ ಬೆಳವಣಿಗೆಯನ್ನು ಇದು ಪ್ರತಿಬಿಂಬಿಸುತ್ತದೆ. ಮರುಪರಿಚಯಿಸಲಾದ ಚಿರುತೆಗಳು ಮತ್ತು ಚಿರುತೆ ಮರಿಗಳ ಬದುಕುಳಿಯುವಿಕೆಯ ಪ್ರಮಾಣವು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿದೆ ಹಾಗೂ ಕೆಲವು ಸಂದರ್ಭಗಳಲ್ಲಿ ಅದಕ್ಕಿಂತ ಉತ್ತಮವಾಗಿದೆ ಎಂದು ಕಂಡುಬಂದಿದೆ, ಇದು ವೈಜ್ಞಾನಿಕ ನಿರ್ವಹಣೆ ಮತ್ತು ಮೇಲ್ವಿಚಾರಣಾ ಪ್ರೋಟೋಕಾಲ್‌ಗಳ ಪರಿಣಾಮಕಾರಿತ್ವವನ್ನು ಪ್ರದರ್ಶಿಸುತ್ತದೆ.
ಅನುಷ್ಠಾನದ ಕಾರ್ಯತಂತ್ರವು ದೀರ್ಘಕಾಲೀನ ಸುಸ್ಥಿರತೆಗಾಗಿ ಭೂದೃಶ್ಯ ಆಧಾರಿತ (landscape-based) ವಿಧಾನವನ್ನು ಅಳವಡಿಸಿಕೊಂಡಿದೆ. ಕೂನೋ ರಾಷ್ಟ್ರೀಯ ಉದ್ಯಾನವನವನ್ನು ಚಿರುತೆಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಾಥಮಿಕ ತಾಣವಾಗಿ ಅಭಿವೃದ್ಧಿಪಡಿಸಲಾಗಿದೆ, ಆದರೆ ಗಾಂಧಿಸಾಗರ ವನ್ಯಜೀವಿ ಅಭಯಾರಣ್ಯವನ್ನು ಚಿರುತೆಗಳ ಸಂಖ್ಯೆಯ ಮುಂದಿನ ವಿಸ್ತರಣೆಗೆ ಪೂರಕವಾಗಿ ಹೆಚ್ಚುವರಿ ಆವಾಸಸ್ಥಾನವಾಗಿ ಸಿದ್ಧಪಡಿಸಲಾಗಿದೆ. ಚಿರುತೆಗಳ ಮುಕ್ತ ಸಂಚಾರ ಮತ್ತು ಆನುವಂಶಿಕ ವಿನಿಮಯವನ್ನು ಸುಗಮಗೊಳಿಸಲು ಈ ತಾಣಗಳು ಮಧ್ಯ ಭಾರತದಾದ್ಯಂತ ವಿಶಾಲವಾದ, ಪರಸ್ಪರ ಸಂಪರ್ಕ ಹೊಂದಿದ ಭೂದೃಶ್ಯದ ಭಾಗವಾಗಿವೆ. ಗುಜರಾತ್‌ನ ಬನ್ನಿ ಹುಲ್ಲುಗಾವಲು ಸೇರಿದಂತೆ ಹೊಸ ಪ್ರದೇಶಗಳಿಗೆ ಯೋಜನೆಯನ್ನು ವಿಸ್ತರಿಸಲು ಪೂರ್ವಸಿದ್ಧತಾ ಕಾರ್ಯಗಳು ಸಹ ಪ್ರಗತಿಯಲ್ಲಿವೆ, ಅಲ್ಲಿ ಆವಾಸಸ್ಥಾನದ ಸಿದ್ಧತೆ ಮತ್ತು ಬೇಟೆಯ ಲಭ್ಯತೆಯನ್ನು ಹೆಚ್ಚಿಸುವ ಕ್ರಮಗಳು ತೃಪ್ತಿಕರ ಮಟ್ಟವನ್ನು ತಲುಪಿವೆ.
ವೈಜ್ಞಾನಿಕ ಮೇಲ್ವಿಚಾರಣೆಯು ಚಿರುತೆಗಳು ಭಾರತೀಯ ಪರಿಸರಕ್ಕೆ ಚೆನ್ನಾಗಿ ಒಗ್ಗಿಕೊಳ್ಳುತ್ತಿವೆ ಎಂಬುದನ್ನು ಸೂಚಿಸುತ್ತದೆ. ವಿವಿಧ ನಿರ್ವಹಣಾ ವ್ಯವಸ್ಥೆಗಳಲ್ಲಿ ಅವುಗಳ ಸ್ಥಿರವಾದ ಸಂಚಾರ ವರ್ತನೆ, ಬೇಟೆಯ ಪರಿಣಾಮಕಾರಿ ಬಳಕೆ ಮತ್ತು ಯಾವುದೇ ಗಮನಾರ್ಹ ದೈಹಿಕ ಒತ್ತಡ ಕಂಡುಬಂದಿಲ್ಲ.
ಯೋಜನೆಯ ಮುಂದಿನ ಹಂತವು ಹೆಚ್ಚುವರಿ ಸ್ಥಳಾಂತರಗಳ ಮೂಲಕ ಬಲವರ್ಧನೆ ಮತ್ತು ವಿಸ್ತರಣೆಯ ಮೇಲೆ ಗಮನ ಕೇಂದ್ರೀಕರಿಸಲಿದೆ, ಮಧ್ಯಪ್ರದೇಶದ ನೌರಾದೇಹಿ ವನ್ಯಜೀವಿ ಅಭಯಾರಣ್ಯದಂತಹ ಹೊಸ ತಾಣಗಳ ಅಭಿವೃದ್ಧಿ ಮತ್ತು ಗುರುತಿಸಲಾದ ಭೂದೃಶ್ಯಗಳಾದ್ಯಂತ ಮೆಟಾಪಾಪ್ಯುಲೇಶನ್ ಚೌಕಟ್ಟನ್ನು ಬಲಪಡಿಸುವುದನ್ನು ಒಳಗೊಂಡಿರುತ್ತದೆ. ಆನುವಂಶಿಕ ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ಅವುಗಳ ಸಂಖ್ಯೆಯ ಹೆಚ್ಚಳಕ್ಕೆ ಸಹಾಯವಾಗಲು ಆಫ್ರಿಕನ್ ದೇಶಗಳಿಂದ ನಿರಂತರವಾಗಿ ಚಿರುತೆಗಳನ್ನು ತರಲು ಚಿಂತನೆ ನಡೆಸಲಾಗಿದೆ.
ಪ್ರಾಜೆಕ್ಟ್ ಚೀತಾ ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿದೆ ಮತ್ತು ಜಾಗತಿಕವಾಗಿ ಮಹತ್ವದ ಸಂರಕ್ಷಣಾ ಉಪಕ್ರಮವಾಗಿ ಬೆಳೆದು ನಿಂತಿದೆ. ನಿರಂತರ ವೈಜ್ಞಾನಿಕ ಮಾರ್ಗದರ್ಶನ, ಸಾಂಸ್ಥಿಕ ಬೆಂಬಲ ಮತ್ತು ಸಂಯೋಜಿತ ಅನುಷ್ಠಾನದೊಂದಿಗೆ, ಯೋಜನೆಯು ದೀರ್ಘಕಾಲೀನ ಯಶಸ್ಸಿಗೆ ಉತ್ತಮ ಸ್ಥಿತಿಯಲ್ಲಿದೆ ಮತ್ತು ದೇಶದಲ್ಲಿ ಚಿರುತೆಗಳ ಸಂರಕ್ಷಣೆ ಹಾಗೂ ಮುಕ್ತ ನೈಸರ್ಗಿಕ ಪರಿಸರ ವ್ಯವಸ್ಥೆಗಳ ಮರುಸ್ಥಾಪನೆಗೆ ಗಣನೀಯ ಕೊಡುಗೆ ನೀಡುವ ನಿರೀಕ್ಷೆಯಿದೆ.
*****
(ಪ್ರಕಟಣೆ ಐ.ಡಿ.: 2262882)
ವಿಸಿಟರ್ ಕೌಂಟರ್ : 6