ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಾರ್ವೆ ಪ್ರಧಾನಮಂತ್ರಿಯೊಂದಿಗೆ ಪ್ರಧಾನಮಂತ್ರಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು

ಪ್ರಕಟಣಾ ದಿನಾಂಕ: 18 MAY 2026 8:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಓಸ್ಲೋದಲ್ಲಿ ನಾರ್ವೆ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಜೋನಸ್ ಗಹರ್ ಸ್ಟೋರೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಭಾರತ ಮತ್ತು ನಾರ್ವೆ ನಡುವಿನ ನಿಕಟ ಸಂಬಂಧಗಳ ಸಂಕೇತವಾಗಿ, ಇಂದು ಬೆಳಿಗ್ಗೆ ಓಸ್ಲೋ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ನಾರ್ವೆ ಪ್ರಧಾನಮಂತ್ರಿ ಶ್ರೀ ಸ್ಟೋರೆ ಅವರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.

ವ್ಯಾಪಾರ ಮತ್ತು ಹೂಡಿಕೆಗಳು, ಭಾರತ-ಇಎಫ್‌ಟಿಎ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ (ಟಿಇಪಿಎ), ಹವಾಮಾನ ಕ್ರಮ ಮತ್ತು ಇಂಧನ ಪರಿವರ್ತನೆ, ನೀಲಿ ಆರ್ಥಿಕತೆ ಮತ್ತು ಸಾಗರ ಆಡಳಿತ, ಸಂಶೋಧನೆ ಮತ್ತು ಉನ್ನತ ಶಿಕ್ಷಣ, ಆರ್ಕ್ಟಿಕ್ ಮತ್ತು ಧ್ರುವ ಸಹಕಾರ, ಬಾಹ್ಯಾಕಾಶ ಮತ್ತು ಪ್ರತಿಭೆ ಚಲನಶೀಲತೆ ಸೇರಿದಂತೆ ಭಾರತ-ನಾರ್ವೆ ಸಂಬಂಧಿಸಿದ ಎಲ್ಲ ವಿಷಯಗಳ ಸಂಪೂರ್ಣ ವರ್ಣಪಟಲವನ್ನು ನಾಯಕರು ಪರಿಶೀಲಿಸಿದರು. ಸುಸ್ಥಿರತೆ ಮತ್ತು ಹಸಿರು ಬೆಳವಣಿಗೆಗೆ ಅವರ ಹಂಚಿಕೆಯ ಬದ್ಧತೆಯನ್ನು ಒತ್ತಿಹೇಳುವ ಮೂಲಕ ಹಸಿರು ಕಾರ್ಯತಂತ್ರದ ಪಾಲುದಾರಿಕೆಗೆ ಸಂಬಂಧಗಳನ್ನು ಹೆಚ್ಚಿಸಲು ಅವರು ಒಪ್ಪಿಕೊಂಡರು.

ಆರ್ಥಿಕ ಮತ್ತು ವಾಣಿಜ್ಯ ಪಾಲುದಾರಿಕೆಯನ್ನು ಹೆಚ್ಚಿಸಲು ಅಗಾಧ ಸಾಮರ್ಥ್ಯವಿದೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು. ಭಾರತದಲ್ಲಿ ನಾರ್ವೆಯ ಉದ್ಯಮಗಳಿಂದ ಹೆಚ್ಚಿನ ಹೂಡಿಕೆಗಳನ್ನು ಪ್ರಧಾನಮಂತ್ರಿ ಸ್ವಾಗತಿಸಿದರು.  2030ರ ವೇಳೆಗೆ ಭಾರತ ಮತ್ತು ನಾರ್ವೆ ನಡುವಿನ ಪ್ರಸ್ತುತ ವ್ಯಾಪಾರದ ಮೌಲ್ಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಇಬ್ಬರೂ ನಾಯಕರು ಒತ್ತಿ ಹೇಳಿದರು ಮತ್ತು ಟಿಇಪಿಎ ಅಡಿಯಲ್ಲಿ 100 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಬದ್ಧತೆಯನ್ನು ಪೂರೈಸಲು ಮತ್ತು ಭಾರತದಲ್ಲಿ ಒಂದು ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಲು ವಲಯಗಳಾದ್ಯಂತ ಕ್ರಿಯಾತ್ಮಕ ಒಪ್ಪಂದಗಳಿಗೆ ಕೆಲಸ ಮಾಡಲು ವ್ಯಾಪಾರ ಪ್ರತಿನಿಧಿಗಳನ್ನು ಅವರು ಪ್ರೋತ್ಸಾಹಿಸಿದರು.

ಸಮುದ್ರ ಪರಿಸರ ವ್ಯವಸ್ಥೆಯ ರಕ್ಷಣೆ, ಹಡಗು ನಿರ್ಮಾಣ, ಹಸಿರು ಸಾಗಣೆ, ಸುರಂಗ ಮಾರ್ಗ ಮತ್ತು ಮೂಲಸೌಕರ್ಯ, ಬಾಹ್ಯಾಕಾಶ, ಎಐ, ರೊಬೊಟಿಕ್ಸ್, ಸೈಬರ್ ಭದ್ರತೆ, ಸಮುದ್ರಯಾನ ತರಬೇತಿ, ಮೀನುಗಾರಿಕೆ ಮತ್ತು ಜಲಚರ ಸಾಕಣೆ ಸೇರಿದಂತೆ ನೀಲಿ ಆರ್ಥಿಕತೆಯಲ್ಲಿ ಸಹಕಾರವನ್ನು ಗಾಢವಾಗಿಸಲು ನಾಯಕರು ತಮ್ಮ ತಂಡಗಳಿಗೆ ಕಾರ್ಯವನ್ನು ವಹಿಸಿದರು. ಅವರು ಯು.ಎನ್.ಸಿ.ಎಲ್.ಒ.ಎಸ್. ತತ್ವಗಳನ್ನು ಪುನರುಚ್ಚರಿಸಿದರು ಮತ್ತು ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮಕ್ಕೆ ನಾರ್ವೆ ಸೇರುವುದನ್ನು ಅವರು ಸ್ವಾಗತಿಸಿದರು. ಜೂನ್ 2026 ರಲ್ಲಿ ಫ್ರಾನ್ಸ್‌ನಲ್ಲಿ ನಡೆಯಲಿರುವ ಭಾರತ್ ಇನ್ನೋವೇಟ್ಸ್ 2026 ರಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ನಾರ್ವೆಯನ್ನು ಆಹ್ವಾನಿಸಿದರು. ಎರಡೂ ದೇಶಗಳ ನಡುವೆ ಸ್ಟಾರ್ಟ್-ಅಪ್ ಇನ್ನೋವೇಟ್ಸ್ ಹಬ್ ಮತ್ತು ಗ್ರೀನ್ ಇನ್ನೋವೇಷನ್ ಹ್ಯಾಕಥಾನ್ ಅನ್ನು ಸ್ಥಾಪಿಸಲು ಅವರು ಸಲಹೆ ನೀಡಿದರು.

ಪರಿಸರ ಮತ್ತು ನವೀಕರಿಸಬಹುದಾದ ಇಂಧನದಲ್ಲಿ ಸಹಕಾರವನ್ನು ಒತ್ತಿಹೇಳುತ್ತಾ, ನಾಯಕರು ಕಾರ್ಬನ್ ಸೆರೆಹಿಡಿಯುವಿಕೆ, ಬಳಕೆ ಮತ್ತು ಸಂಗ್ರಹಣೆ (ಸಿಸಿಯುಎಸ್), ಕಡಲಾಚೆಯ ಗಾಳಿ ಮತ್ತು ಭಾರತದಲ್ಲಿ ಶುದ್ಧ ಇಂಧನ ಯೋಜನೆಗಳಲ್ಲಿ ನಾರ್ವೆಯಿಂದ ದೊಡ್ಡ ಹೂಡಿಕೆಗಳಂತಹ ಸ್ಥಾಪಿತ ತಂತ್ರಜ್ಞಾನಗಳಲ್ಲಿ ಹೆಚ್ಚಿನ ಸಹಯೋಗಕ್ಕೆ ಏ ಕರೆ ನೀಡಿದರು.

ಆರ್ಕ್ಟಿಕ್‌ ನಲ್ಲಿ ಧ್ರುವ ಸಂಶೋಧನೆ ಮತ್ತು ಲಾಜಿಸ್ಟಿಕ್ಸ್ ಅನ್ನು ಬಲಪಡಿಸಲು ನಾಯಕರು ಒಪ್ಪಿಕೊಂಡರು, ಪರಿಸರ ಜವಾಬ್ದಾರಿಯುತ ಅಭ್ಯಾಸಗಳನ್ನು ಪುನರುಚ್ಚರಿಸಿದರು. ನವೀಕರಿಸಬಹುದಾದ ಇಂಧನ, ಸಾಗರಗಳು, ಹವಾಮಾನ, ಆರೋಗ್ಯ, ನಿರ್ಣಾಯಕ ಖನಿಜಗಳು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಐಟಿ ಸೇರಿದಂತೆ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಜಂಟಿ ಕೆಲಸವನ್ನು ಅವರು ಒತ್ತಿ ಹೇಳಿದರು. ಉನ್ನತ ಶಿಕ್ಷಣದಲ್ಲಿ, ಜಂಟಿ ಪದವಿ ಕಾರ್ಯಕ್ರಮಗಳು, ಅರ್ಹತೆಗಳ ಪರಸ್ಪರ ಗುರುತಿಸುವಿಕೆ ಮತ್ತು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಚಲನಶೀಲತೆಯನ್ನು ಅನ್ವೇಷಿಸಲು ಅವರು ಒಪ್ಪಿಕೊಂಡರು.

ಬಹುಪಕ್ಷೀಯ ವೇದಿಕೆಗಳಲ್ಲಿ ಸಹಯೋಗವನ್ನು ಚರ್ಚಿಸಿದರು ಮತ್ತು ಪರಸ್ಪರ ಆಸಕ್ತಿಯ ಪ್ರಮುಖ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ನಾರ್ವೆಯ ಬೆಂಬಲವನ್ನು ನಾರ್ವೇಜಿಯನ್ ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು.

ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆಯನ್ನು ನಾಯಕರು ನಿಸ್ಸಂದಿಗ್ಧವಾಗಿ ಖಂಡಿಸಿದರು ಮತ್ತು ಬೆದರಿಕೆಯನ್ನು ಎದುರಿಸಲು ಸಂಘಟಿತ ಜಾಗತಿಕ ಕ್ರಮವನ್ನು ಅವರು ಒತ್ತಾಯಿಸಿದರು.

ರಕ್ಷಣಾ ಸಹಕಾರ ಮತ್ತು ರಕ್ಷಣಾ ಕೈಗಾರಿಕಾ ಸಹಯೋಗದಲ್ಲಿನ ಸಾಮರ್ಥ್ಯವನ್ನು ಅವರು ಗಮನಿಸಿದರು, ಡಿಜಿಟಲ್ ಸಾರ್ವಜನಿಕ ಸರಕುಗಳಲ್ಲಿ ಮೂರನೇ ರಾಷ್ಟ್ರಗಳ ಸಹಕಾರವನ್ನು ಅನ್ವೇಷಿಸಲು ಒಪ್ಪಿಕೊಂಡರು ಮತ್ತು ಡಿಜಿಟಲ್ ಪರಿವರ್ತನೆಯನ್ನು ಚಾಲನೆ ಮಾಡಲು ಡಿಜಿಟಲೀಕರಣದ ಕುರಿತು ಜಂಟಿ ಕಾರ್ಯಕಾರಿ ಗುಂಪನ್ನು ಸ್ಥಾಪಿಸಲು ಸಚಿವಾಲಯಗಳಿಗೆ ಅವರು ಜವಾಬ್ದಾರಿ ವಹಿಸಿದರು.

ಪ್ರಧಾನಮಂತ್ರಿ ಶ್ರೀ ಸ್ಟೋರೆ ಮತ್ತು ನಾರ್ವೆಯ ಜನರಿಗೆ ಅವರುಗಳು ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಪ್ರಧಾನಮಂತ್ರಿ ಶ್ರೀ ಮೋದಿ ಅವರು  ಧನ್ಯವಾದ ಅರ್ಪಿಸಿದರು. ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ಶ್ರೀ ಸ್ಟೋರೆ ಅವರನ್ನು ಆಹ್ವಾನಿಸಿದರು. ಉನ್ನತ ಮಟ್ಟದ ವಿನಿಮಯದ ವೇಗದ ತೀವ್ರತೆಯನ್ನು ಕಾಯ್ದುಕೊಳ್ಳಲು ಇಬ್ಬರೂ ನಾಯಕರು ಪರಸ್ಪರ ಒಪ್ಪಿಕೊಂಡರು.

 

*****


(ಪ್ರಕಟಣೆ ಐ.ಡಿ.: 2262537) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati , Tamil