ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ-ನೆದರ್ ಲ್ಯಾಂಡ್ಸ್ ಕಾರ್ಯತಂತ್ರ ಪಾಲುದಾರಿಕೆಯ ಮಾರ್ಗಸೂಚಿ (2026-2030)

ಪ್ರಕಟಣಾ ದಿನಾಂಕ: 17 MAY 2026 3:15AM by PIB Bengaluru

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನೆದರ್ ಲ್ಯಾಂಡ್ಸ್ ಪ್ರಧಾನ ಮಂತ್ರಿ ಶ್ರೀ ರಾಬ್ ಜೆಟ್ಟನ್ ಅವರು 2026 ಮೇ 16ರಂದು ಹೇಗ್‌ನಲ್ಲಿ ನಡೆದ ಸಭೆಯಲ್ಲಿ ಗಮನ ಕೇಂದ್ರೀಕರಿಸಿದ ಸಮಯಬದ್ಧ ಉಪಕ್ರಮಗಳು ಮತ್ತು ಜಂಟಿ ಕ್ರಿಯಾ ಯೋಜನೆಗಳನ್ನು ಅನುಸರಿಸುವ ಮೂಲಕ ಭಾರತ- ನೆದರ್ ಲ್ಯಾಂಡ್ಸ್ ದ್ವಿಪಕ್ಷೀಯ ಸಂಬಂಧವನ್ನು ಕಾರ್ಯತಂತ್ರ ಪಾಲುದಾರಿಕೆಗೆ ಹೆಚ್ಚಿಸಲು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ಭಾರತ ಮತ್ತು ನೆದರ್ ಲ್ಯಾಂಡ್ಸ್ ಮುಂದಿನ 5 ವರ್ಷಗಳ(2026-2030) ಭಾರತ- ನೆದರ್ ಲ್ಯಾಂಡ್ಸ್ ಕಾರ್ಯತಂತ್ರ ಪಾಲುದಾರಿಕೆಯ ಮಾರ್ಗಸೂಚಿ ಅಳವಡಿಸಿಕೊಂಡವು.

ಈ ಕೆಳಕಂಡ ಪ್ರಸ್ತಾವನೆಗಳಿಗೆ ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ:

I. ರಾಜಕೀಯ ಸಂಭಾಷಣೆ ಅಥವಾ ಮಾತುಕತೆ

. ಬಹುಪಕ್ಷೀಯ ಕಾರ್ಯಕ್ರಮಗಳ ನೇಪಥ್ಯದಲ್ಲಿ ಸರ್ಕಾರ ಅಥವಾ ದೇಶದ ಮುಖ್ಯಸ್ಥರು, ವಿದೇಶಾಂಗ ವ್ಯವಹಾರಗಳ ಸಚಿವರು ಮತ್ತು ಇತರೆ ಸಂಪುಟ ಸಚಿವರ ನಡುವೆ ನಿಯಮಿತ ಸಭೆಗಳು ಮತ್ತು ಪರಸ್ಪರ ಭೇಟಿಗಳನ್ನು ನಡೆಸುವುದು.

ಬಿ. ಈ ಕಾರ್ಯತಂತ್ರ ಪಾಲುದಾರಿಕೆಯ ಮಾರ್ಗಸೂಚಿ ಪ್ರಗತಿಯನ್ನು ಪರಿಶೀಲಿಸಲು ಮತ್ತು ಭವಿಷ್ಯದ ಕ್ರಮಗಳಿಗೆ ಕಾರ್ಯತಂತ್ರ ಮಾರ್ಗದರ್ಶನ ನೀಡಲು ವಿದೇಶಾಂಗ ಸಚಿವರ ಮಟ್ಟದಲ್ಲಿ ವಾರ್ಷಿಕ ಸಭೆಗಳನ್ನು ನಡೆಸುವ ಒಂದು ಕಾರ್ಯವಿಧಾನ ಸ್ಥಾಪಿಸುವುದು.

ಸಿ. ಸಾಮಾನ್ಯ ಆಸಕ್ತಿಯ ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರ  ಗಾಢವಾಗಿಸಲು, ಸಂಬಂಧಿತ ಸಚಿವಾಲಯಗಳ ಮುಖ್ಯಸ್ಥರ ನಡುವೆ ಸಭೆಗಳು ಮತ್ತು ಸಂವಹನಗಳನ್ನು ಹೆಚ್ಚಿಸುವುದು.

II. ಆರ್ಥಿಕ ಸಹಕಾರ ಮತ್ತು ಹೂಡಿಕೆಗಳು

ಎ. ದ್ವಿಪಕ್ಷೀಯ ವ್ಯಾಪಾರ, ಮಾರುಕಟ್ಟೆ ಪ್ರವೇಶ ಮತ್ತು ಹೂಡಿಕೆ ಹೆಚ್ಚಿಸಲು ವಿಶೇಷವಾಗಿ ನವೀಕರಿಸಬಹುದಾದ ಇಂಧನ, ದೂರಸಂಪರ್ಕ, ಕಡಲು, ಮೂಲಸೌಕರ್ಯ ಮತ್ತು ನಗರಾಭಿವೃದ್ಧಿ, ನಾವೀನ್ಯತೆ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಗಳು, ಕೃಷಿ, ಔಷಧಗಳು ಮತ್ತು ವೈದ್ಯಕೀಯ ತಂತ್ರಜ್ಞಾನ, ಸಾವಯವ ರಾಸಾಯನಿಕಗಳು ಜವಳಿ, ಕಬ್ಬಿಣ ಮತ್ತು ಉಕ್ಕು, ಅಲ್ಯೂಮಿನಿಯಂ, ಜಂಟಿ ಉದ್ಯಮಗಳು, ಕೈಗಾರಿಕಾ ಪಾಲುದಾರಿಕೆಗಳು ಮತ್ತು ಪೂರೈಕೆ ಸರಪಳಿ ಚೇತರಿಕೆ ಹೆಚ್ಚಿಸುವ ಗುರಿಯೊಂದಿಗೆ ಎರಡೂ ಕಡೆಯ ಕಂಪನಿಗಳ ನಡುವೆ ತಾಂತ್ರಿಕ ಸಹಭಾಗಿತ್ವ ಸೇರಿದಂತೆ ವ್ಯಾಪಕವಾದ ಜಂಟಿ ವ್ಯಾಪಾರ ಮತ್ತು ಹೂಡಿಕೆ ಸಮಿತಿ(ಜೆಟಿಐಸಿ) ವಾರ್ಷಿಕ ಸಭೆಗಳನ್ನು ಆಯೋಜಿಸುವುದು.

ಬಿ. ಕೈಗಾರಿಕಾ ಮತ್ತು ಆರ್ಥಿಕ ಸಂಘಟನೆಗಳು ಮತ್ತು ವಾಣಿಜ್ಯ ಮಂಡಳಿಗಳ ಒಳಗೊಳ್ಳುವಿಕೆಯೊಂದಿಗೆ ಪರಸ್ಪರರ ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವಿಕೆ ಮತ್ತು ವ್ಯಾಪಾರ ವೇದಿಕೆಗಳ ಆಯೋಜನೆಯನ್ನು ಉತ್ತೇಜಿಸುವುದು.

ಸಿ. ಹೂಡಿಕೆ ಸೌಲಭ್ಯ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ದ್ವಿಪಕ್ಷೀಯ ತ್ವರಿತ ಗತಿಯ ಕಾರ್ಯವಿಧಾನವನ್ನು ನಿಯತಕಾಲಿಕವಾಗಿ ಪರಿಶೀಲಿಸುವುದು.

ಡಿ. ನಿರ್ಣಾಯಕ ಖನಿಜಗಳು, ಪರಿಶೋಧನೆ, ಸಂಶೋಧನೆ ಮತ್ತು ನಾವೀನ್ಯತೆ, ಮೌಲ್ಯ ಸರಪಳಿಗಳ ಏಕೀಕರಣ, ಪೂರೈಕೆ ಸರಪಳಿಯ ಚೇತರಿಕೆ, ಮರುಬಳಕೆ, ಪರಿಸರ, ಸಾಮಾಜಿಕ ಮತ್ತು ಆಡಳಿತ(ಇಎಸ್ ಜಿ) ಮಾನದಂಡಗಳು ಮತ್ತು ಸಂಬಂಧಿತ ಮೌಲ್ಯಮಾಪನಗಳ ಕ್ಷೇತ್ರದಲ್ಲಿ ಸಹಕಾರದ ತಿಳಿವಳಿಕೆ ಒಪ್ಪಂದದ ಅಡಿ, ಪೂರೈಕೆ ಸರಪಳಿ ವೈವಿಧ್ಯೀಕರಣಕ್ಕಾಗಿ ನಿರ್ಣಾಯಕ ಕಚ್ಚಾ ವಸ್ತುಗಳ ಮೌಲ್ಯ ಸರಪಳಿಯಾದ್ಯಂತ ದ್ವಿಪಕ್ಷೀಯ ಕಾರ್ಯತಂತ್ರ ಜಂಟಿ ಪಾಲುದಾರಿಕೆಯನ್ನು ವಿಸ್ತರಿಸುವುದು ಮತ್ತು ಸುಗಮಗೊಳಿಸುವುದು.

ಇ. ನವೀಕರಿಸಬಹುದಾದ ಇಂಧನ, ಸುಸ್ಥಿರ ಕೃಷಿ, ಸಮುದ್ರ, ಮೂಲಸೌಕರ್ಯ, ಔಷಧಗಳು, ವೈದ್ಯಕೀಯ ತಂತ್ರಜ್ಞಾನ ಮತ್ತು ಹೈ-ಟೆಕ್ ಮತ್ತು ನಾವೀನ್ಯತೆ ಮುಂತಾದ ಆದ್ಯತೆಯ ಕ್ಷೇತ್ರಗಳಲ್ಲಿ ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಡುವೆ ಗುರುತಿಸಲಾದ ದ್ವಿಮುಖ ಹೂಡಿಕೆಗಳನ್ನು ಉತ್ತೇಜಿಸುವುದು. ಈ ನಿಟ್ಟಿನಲ್ಲಿ, ಎರಡೂ ದೇಶಗಳು ವ್ಯವಹಾರದಿಂದ ವ್ಯವಹಾರಕ್ಕೆ ಹೊಂದಾಣಿಕೆಯನ್ನು ಸುಗಮಗೊಳಿಸುತ್ತಾರೆ, ಜಂಟಿ ಉದ್ಯಮಗಳು ಮತ್ತು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳನ್ನು ಬೆಂಬಲಿಸುತ್ತಾರೆ, ಶೈಕ್ಷಣಿಕ  ಮತ್ತು ಉದ್ಯಮದ ನಡುವಿನ ಸಹಭಾಗಿತ್ವವನ್ನು ಪ್ರೋತ್ಸಾಹಿಸುತ್ತಾರೆ. ಸುಸ್ಥಿರ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಚೇತರಿಕೆಯ ಮೌಲ್ಯ ಸರಪಳಿಗಳನ್ನು ಹೆಚ್ಚಿಸಲು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ(ಎಸ್ಎಂಇ)ಗಳ ಭಾಗವಹಿಸುವಿಕೆ ಸಕ್ರಿಯಗೊಳಿಸುವುದು, ಹೂಡಿಕೆ ಸೌಲಭ್ಯವನ್ನು ಹೆಚ್ಚಿಸುವುದು ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವುದರ ಮೇಲೆ ಗಮನ ಹರಿಸಲಾಗುತ್ತದೆ.

III. ನೀರು, ಕೃಷಿ ಮತ್ತು ಆರೋಗ್ಯ

ಎ. 2022 ಮಾರ್ಚ್ ನಲ್ಲಿ ಸಹಿ ಹಾಕಲಾದ ಮತ್ತು 2027 ಮಾರ್ಚ್ ವರೆಗೆ ನಡೆಯುವ ನೀರಿನ ಕಾರ್ಯತಂತ್ರ ಪಾಲುದಾರಿಕೆಯನ್ನು ನವೀಕರಿಸುವ ಹಂಚಿಕೆಯ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸುವುದು; ನೀರಿಗೆ ಸಂಬಂಧಿಸಿದ ಸಚಿವರ ಜಂಟಿ ಕಾರ್ಯಕಾರಿ ಗುಂಪಿನ ಮೂಲಕ ಅದರ ಪ್ರಗತಿಯನ್ನು ಪರಿಶೀಲಿಸುವುದು.

ಬಿ. ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ, ಸಮಗ್ರ ಕರಾವಳಿ ವಲಯ ನಿರ್ವಹಣೆ, ನಗರ ನೀರಿನ ನಿರ್ವಹಣೆ, ಪ್ರವಾಹ ಚೇತರಿಕೆ, ನದಿ ಜಲಾನಯನ ನಿರ್ವಹಣೆ ಮತ್ತು ಗಂಗಾ ಜಲಾನಯನ ಪ್ರದೇಶದಲ್ಲಿ ಸುಸ್ಥಿರ ನೀರಿನ ಗುಣಮಟ್ಟ ಮತ್ತು ಲಭ್ಯತೆಯ ಸಹಭಾಗಿತ್ವ  ಹೆಚ್ಚಿಸುವುದು.

ಸಿ. ಗಂಗಾ ನದಿ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್‌ನೊಂದಿಗೆ ನೀರಿನ ಶ್ರೇಷ್ಠತಾ ಕೇಂದ್ರವನ್ನು ಬಳಸಿಕೊಳ್ಳುವುದು, ಜ್ಞಾನ ಮತ್ತು ಪರಿಣತಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ, ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಮತ್ತು ನವೋದ್ಯಮಗಳನ್ನು ಉತ್ತೇಜಿಸುವ ಮೂಲಕ ಪ್ರಗತಿಯಲ್ಲಿರುವ ಕೆಲಸಗಳನ್ನು ಬೆಂಬಲಿಸುವುದು.

ಡಿ. ಭಾರತದಲ್ಲಿನ ಒಪ್ಪಿಗೆ ಪಡೆದ ನಗರಗಳಿಗೆ ನಗರ ನದಿ ನಿರ್ವಹಣಾ ಯೋಜನೆಗಳ ರಚನೆಯನ್ನು ಬೆಂಬಲಿಸಿ, ಅದರ ಚೌಕಟ್ಟಿನಲ್ಲಿ ನಗರ ನದಿ ನಿರ್ವಹಣಾ ಯೋಜನೆ ಮತ್ತು 'ನೀರು ಸನ್ನೆಯಂತೆ' ವಿಧಾನ ಉತ್ತೇಜಿಸುವ ಮತ್ತು ಸಂಯೋಜಿಸುವ ಮೂಲಕ ಮತ್ತು ಯೋಜನೆಗಳ ಅನ್ವಯವನ್ನು ಉತ್ತೇಜಿಸುವ ಮೂಲಕ, ಜಲ ಕ್ರಿಯಾ ಕಾರ್ಯಸೂಚಿಯ ಜಂಟಿ ಬದ್ಧತೆಯನ್ನು ಪೂರೈಸುವುದು.

ಇ. ಭಾರತ ನೇತೃತ್ವದ ವಿಪತ್ತು ಚೇತರಿಕೆಯ ಮೂಲಸೌಕರ್ಯ ಒಕ್ಕೂಟ(ಸಿಡಿಆರ್ ಐ) ನೇತೃತ್ವದ ಸಾಮರ್ಥ್ಯ ನಿರ್ಮಾಣ ಉಪಕ್ರಮಗಳ ಮೂಲಕ ಭಾರತದಲ್ಲಿ ಮತ್ತು ಜಾಗತಿಕವಾಗಿ ವಿಪತ್ತು ಚೇತರಿಕೆಯ ನಗರ ನೀರಿನ ಮೂಲಸೌಕರ್ಯದ ಅಭಿವೃದ್ಧಿ ಮತ್ತು ವರ್ಧನೆಗೆ ಬೆಂಬಲ ನೀಡುವುದು.

ಎಫ್. ಕೃಷಿ ಮತ್ತು ಪಶುಸಂಗೋಪನೆ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ಬಲಪಡಿಸಲು ಮತ್ತು ಉತ್ತೇಜಿಸಲು ಜಂಟಿ ಕೃಷಿ ಕಾರ್ಯಪಡೆ  ಮುಂದುವರಿಸುವುದು. ಇದರಲ್ಲಿ ಭಾರತ-ನೆದರ್‌ಲ್ಯಾಂಡ್ಸ್ ಶ್ರೇಷ್ಠತಾ ಕೇಂದ್ರಗಳ ಪ್ರಗತಿ ಪರಿಶೀಲಿಸುವುದು, ಸಸ್ಯ ನೈರ್ಮಲ್ಯ(ಫೈಟೊಸಾನಿಟರಿ) ಮತ್ತು ಪಶುವೈದ್ಯಕೀಯ ಮಾರುಕಟ್ಟೆ ಪ್ರವೇಶ, ಹವಾಮಾನ ಚೇತರಿಕೆಯ ಕೃಷಿಗೆ ಜಂಟಿ ಬೆಂಬಲ, ಜವಾಬ್ದಾರಿಯುತ ಮೌಲ್ಯ ಸರಪಳಿಗಳು ಮತ್ತು ಜಾಗತಿಕ ಆಹಾರ ಭದ್ರತೆ ಸೇರಿವೆ.

ಜಿ. ಕೃಷಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಜ್ಞಾನ ಹಂಚಿಕೆ ಮತ್ತು ಕೌಶಲ್ಯ ಅಭಿವೃದ್ಧಿಯ ಕುರಿತು ವಿನಿಮಯ ಉತ್ತೇಜಿಸುವುದು, ಮತ್ತು ಆರೋಗ್ಯಪೂರ್ಣ ಸಸ್ಯ ಕೇಂದ್ರಗಳ ರಚನೆಗೆ ಹೊಸ ಕೃಷಿ ತಂತ್ರಜ್ಞಾನಗಳ ಸಹ-ಅಭಿವೃದ್ಧಿಯನ್ನು ಬೆಂಬಲಿಸುವ ಜತೆಗೆ, ಇತರ ವಿಷಯಗಳ ನಡುವೆ ಸ್ಟಾರ್ಟಪ್‌ಗಳಿಗೆ ಬೆಂಬಲ ನೀಡುವುದು.

ಎಚ್. ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ತಿಳಿವಳಿಕೆ ಒಪ್ಪಂದ ಮತ್ತು ಅದರ ಜಂಟಿ ಕಾರ್ಯ ಗುಂಪಿನ ಅಡಿಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಸುಗಮಗೊಳಿಸುವ ಮೂಲಕ ಜಾಗತಿಕ ಸಾರ್ವಜನಿಕ ಆರೋಗ್ಯ ಅಪಾಯಗಳನ್ನು ಎದುರಿಸುವುದು, ಗಡಿಯಾಚೆಗಿನ ಸಾಂಕ್ರಾಮಿಕ ರೋಗಗಳು ಮತ್ತು ಸೂಕ್ಷ್ಮಜೀವಿ ವಿರೋಧಿ ಪ್ರತಿರೋಧ (ಎಎಂಆರ್), ಸಂವಹನ ಮಾಡಲಾಗದ ರೋಗಗಳು(ಎನ್‌ಸಿಡಿ), ಡಿಜಿಟಲ್ ಆರೋಗ್ಯ(ಎಐ ಮತ್ತು ಸೈಬರ್ ಭದ್ರತೆ ಸೇರಿದಂತೆ), ಹವಾಮಾನ ಬದಲಾವಣೆ ಮತ್ತು ಆರೋಗ್ಯದ ನಡುವಿನ ಪರಸ್ಪರ ಸಂಬಂಧಗಳು ಮತ್ತು ಸಾಮರ್ಥ್ಯ ವೃದ್ಧಿ ಮುಂತಾದ ಆದ್ಯತೆಯ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವುದು. ಡಚ್ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂಸ್ಥೆ (ಆರ್‌ಐವಿಎಂ) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡುವೆ ಇತ್ತೀಚೆಗೆ ಸಹಿ ಮಾಡಲಾದ ಉದ್ದೇಶ ಪತ್ರದ ಮೂಲಕ ಈ ಸಹಕಾರವನ್ನು ಮತ್ತಷ್ಟು ಬಲಪಡಿಸಲಾಗುತ್ತದೆ. ಕೇಂದ್ರೀಕೃತ ಕ್ಷೇತ್ರಗಳಲ್ಲಿ ಸಾಂಕ್ರಾಮಿಕ ರೋಗಗಳು, ವೆಕ್ಟರ್(ವಾಹಕ ಅಥವಾ ಸಾಂಕ್ರಾಮಿಕ) ಮೂಲಕ ಹರಡುವ ರೋಗಗಳು, ಒಂದು ಆರೋಗ್ಯ ಮತ್ತು ರೋಗ ಕಣ್ಗಾವಲು ಸೇರಿವೆ.

ಐ. 2025 ಜೂನ್ ನಲ್ಲಿ ಸಹಿ ಹಾಕಲಾದ ತಿಳಿವಳಿಕೆ ಒಪ್ಪಂದಕ್ಕೆ ಅನುಗುಣವಾಗಿ ಮತ್ತು ತಿಳಿವಳಿಕೆ ಒಪ್ಪಂದದ ಅಡಿ ಸ್ಥಾಪಿಸಲಾದ ಜಂಟಿ ಕಾರ್ಯಕಾರಿ ಗುಂಪಿನ ನಿಯಮಿತ ಸಭೆಗಳ ಮೂಲಕ, ಚೇತರಿಕೆಯ ಜಾಗತಿಕ ಪೂರೈಕೆ ಸರಪಳಿಗಳನ್ನು ಬೆಂಬಲಿಸಲು ಮತ್ತು ಸಂಶೋಧನೆ ಮತ್ತು ನಾವೀನ್ಯತೆಯನ್ನು ಬಲಪಡಿಸಲು ಔಷಧಗಳು ಮತ್ತು ವೈದ್ಯಕೀಯ ಸಾಧನಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸುವುದು. ಇದರಲ್ಲಿ ಶೈಕ್ಷಣಿಕ ಸಹಕಾರ, ನಿಯಂತ್ರಕ ಸಹಕಾರ, ವ್ಯವಹಾರಗಳ ನಡುವೆ ತೊಡಗಿಸಿಕೊಳ್ಳುವಿಕೆ ಮತ್ತು ಮಾರುಕಟ್ಟೆ ಪ್ರವೇಶ ಕುರಿತು ಜ್ಞಾನ ವಿನಿಮಯ ಸೇರಿವೆ.

ಜೆ. ನೆದರ್ ಲ್ಯಾಂಡ್ಸ್ ಆಹಾರ ಮತ್ತು ಗ್ರಾಹಕ ಉತ್ಪನ್ನ ಸುರಕ್ಷತಾ ಪ್ರಾಧಿಕಾರ (ಎನ್‌ವಿಡಬ್ಲ್ಯುಎ) ಮತ್ತು ಭಾರತದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಡುವೆ ಇತ್ತೀಚೆಗೆ ಸಹಿ ಹಾಕಲಾದ ತಿಳಿವಳಿಕೆ ಒಪ್ಪಂದದಲ್ಲಿ ವಿವರಿಸಿದಂತೆ, ಅಂತಾರಾಷ್ಟ್ರೀಯ ಮಾನದಂಡಗಳು, ಅಧಿಸೂಚನೆ ಮತ್ತು ಸಹಕಾರ ಕಾರ್ಯವಿಧಾನಗಳು ಮತ್ತು ಎಲೆಕ್ಟ್ರಾನಿಕ್(ಪ್ರಮಾಣೀಕರಣ) ವ್ಯವಸ್ಥೆಗಳ ಬಳಕೆಯ ಕುರಿತು ಆಹಾರ ಸುರಕ್ಷತಾ ಅಧಿಕಾರಿಗಳ ನಡುವಿನ ಸಂವಹನಗಳ ಮೂಲಕ ಜ್ಞಾನ  ವಿನಿಮಯ ಮಾಡಿಕೊಳ್ಳುವುದು.

IV. ಉದಯೋನ್ಮುಖ ತಂತ್ರಜ್ಞಾನಗಳು, ನಾವೀನ್ಯತೆ, ವಿಜ್ಞಾನ ಮತ್ತು ಶಿಕ್ಷಣ

ಎ. ಭಾರತ ಮತ್ತು ನೆದರ್‌ಲ್ಯಾಂಡ್ಸ್‌ನ ರಾಷ್ಟ್ರೀಯ ಸಂಶೋಧನಾ ಆದ್ಯತೆಗಳನ್ನು ಗಣನೆಗೆ ತೆಗೆದುಕೊಂಡು, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಹಯೋಗದ ಜಂಟಿ ಕಾರ್ಯ ಗುಂಪಿನ ಮೂಲಕ ಸರ್ಕಾರಗಳು, ಶೈಕ್ಷಣಿಕ ಮತ್ತು ಕೈಗಾರಿಕೆಗಳನ್ನು ಒಳಗೊಂಡ ಸೆಮಿಕಂಡಕ್ಟರ್ ಗಳು, ಎಐ, ಸೈಬರ್ ಭದ್ರತೆ, ಇಂಧನ ವಸ್ತುಗಳು ಮತ್ತು ಜೈವಿಕ ಆಣ್ವಿಕ ಮತ್ತು ಕೋಶ ತಂತ್ರಜ್ಞಾನಗಳಂತಹ ಪ್ರಮುಖ ಸಕ್ರಿಯಗೊಳಿಸುವ ತಂತ್ರಜ್ಞಾನಗಳ ಮೇಲೆ ವಿಶೇಷ ಒತ್ತು ನೀಡುವ ಮೂಲಕ ನಾವೀನ್ಯತೆ ಮತ್ತು ಸಂಶೋಧನಾ ಸಹಯೋಗಗಳನ್ನು ಹೆಚ್ಚಿಸುವುದು.

ಬಿ. ಸೆಮಿಕಂಡಕ್ಟರ್‌ಗಳು ಮತ್ತು ಸಂಬಂಧಿತ ಉದಯೋನ್ಮುಖ ತಂತ್ರಜ್ಞಾನಗಳ ಮೇಲಿನ ಭಾರತ-ನೆದರ್‌ಲ್ಯಾಂಡ್ಸ್ ಪಾಲುದಾರಿಕೆಯ ಮೇಲಿನ ತಿಳಿವಳಿಕೆ ಒಪ್ಪಂದವನ್ನು ಈ ಕೆಳಗಿನವುಗಳಿಗೆ ಬಳಸಿಕೊಳ್ಳುವುದು:

i. ಭಾರತ ಮತ್ತು ನೆದರ್‌ಲ್ಯಾಂಡ್ಸ್‌ನ ಸೆಮಿಕಂಡಕ್ಟರ್ ಉದ್ಯಮದ ನಡುವಿನ ಸಹಯೋಗದ ಮೂಲಕ ವಿಶ್ವಾಸಾರ್ಹ ಮತ್ತು ಸ್ಥಿಚೇತರಿಕೆಯ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸುವುದು.

ii. ಕೃತಕ ಬುದ್ಧಿಮತ್ತೆ, ಫೋಟೊನಿಕ್ಸ್, ಕ್ವಾಂಟಮ್ ಮತ್ತು ಸೈಬರ್-ಭದ್ರತೆಯಂತಹ ಕ್ಷೇತ್ರಗಳಲ್ಲಿ ಎರಡೂ ದೇಶಗಳಲ್ಲಿ ತಂತ್ರಜ್ಞಾನ ಮೌಲ್ಯ ಸರಪಳಿ ಪಾಲುದಾರಿಕೆಗಳನ್ನು ರೂಪಿಸುವುದು, ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಕುರಿತು ಸಹಕಾರ ವಿಸ್ತರಿಸುವುದು.

iii. ಸಹಯೋಗ, ತಂತ್ರಜ್ಞಾನ ಮತ್ತು ಪ್ರತಿಭೆ ಅಭಿವೃದ್ಧಿಯ ಮೂಲಕ ಸೆಮಿಕಂಡಕ್ಟರ್ ವಲಯವನ್ನು ನಿರ್ದಿಷ್ಟವಾಗಿ ಕೈಗಾರಿಕೆಗಳು, ಸ್ಟಾರ್ಟಪ್‌ಗಳು, ಸ್ಕೇಲ್-ಅಪ್‌ಗಳು, ಎಸ್ಎಂಇಗಳು ಮತ್ತು ಅವುಗಳ ಪೂರೈಕೆದಾರರನ್ನು ಬೆಂಬಲಿಸಲು ಮತ್ತು ಬಲಪಡಿಸಲು ಡಚ್ ಸೆಮಿಕಾನ್ ಕಾಂಪಿಟೆನ್ಸ್ ಸೆಂಟರ್ ಅನ್ನು ಭಾರತೀಯ ಸೆಮಿಕಂಡಕ್ಟರ್ ಮಿಷನ್‌ಗೆ ಸಂಪರ್ಕಿಸುವುದು.

ಸಿ. ಎನ್‌ಎಕ್ಸ್‌ಪಿ, ಎಎಸ್‌ಎಂಎಲ್, ಟಾಟಾ ಮತ್ತು ಸಿಜಿ ಸೆಮಿಯಿಂದ ಬೆಂಬಲಿತವಾದ ಸೆಮಿಕಂಡಕ್ಟರ್‌ಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳಲ್ಲಿ ಎಐ-ಚಾಲಿತ ಮತ್ತು ರೋಬೋಟಿಕ್ ತಲೆ ಮತ್ತು ಮುಖ ಕಸಿ(ಬ್ರೈನ್ ಬ್ರಿಡ್ಜ್)ಗಾಗಿ ಐಂಡ್‌ಹೋವನ್ ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು ಟ್ವೆಂಟೆ ವಿಶ್ವವಿದ್ಯಾಲಯ ಮತ್ತು 6 ಭಾರತೀಯ ಪ್ರಮುಖ ತಾಂತ್ರಿಕ ಸಂಸ್ಥೆಗಳು (ಐಐಎಸ್ಸಿ ಬೆಂಗಳೂರು, ಐಐಟಿ ಬಾಂಬೆ, ಐಐಟಿ ದೆಹಲಿ, ಐಐಟಿ ಗಾಂಧಿನಗರ, ಐಐಟಿ ಗುವಾಹತಿ ಮತ್ತು ಐಐಟಿ ಮದ್ರಾಸ್) ನಡುವಿನ ಸಹಕಾರದ ಜ್ಞಾಪಕ ಪತ್ರವನ್ನು ಬೆಂಬಲಿಸುವುದು.

ಡಿ. ಉನ್ನತ ಶಿಕ್ಷಣದ ಕುರಿತು ನೆದರ್‌ಲ್ಯಾಂಡ್ಸ್-ಭಾರತ ಸಹಯೋಗದ ತಿಳಿವಳಿಕೆ ಪತ್ರವನ್ನು ಕಾರ್ಯಗತಗೊಳಿಸುವುದು, ಜ್ಞಾನ ಸಂಸ್ಥೆಗಳ ನಡುವೆ ಮತ್ತಷ್ಟು ಸಹಯೋಗ ಬೆಳೆಸಲು ಜಂಟಿ ಕಾರ್ಯ ಯೋಜನೆಯನ್ನು ಸ್ಥಾಪಿಸಲು ಮತ್ತು ಕಾರ್ಯಗತಗೊಳಿಸಲು ನಿಯಮಿತ ಸಂವಹನಗಳನ್ನು ನಡೆಸುವುದು.

. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ(ಸ್ಟೆಮ್) ಕ್ಷೇತ್ರದಂತಹ ಶೈಕ್ಷಣಿಕ ಮತ್ತು ಸಂಶೋಧನಾ ತೊಡಗಿಸಿಕೊಳ್ಳುವಿಕೆಗಳನ್ನು ಹೆಚ್ಚಿಸುವುದು ಮತ್ತು ಬಲಪಡಿಸುವುದು, ಜತೆಗೆ ಸಾಂಸ್ಥಿಕ ಪಾಲುದಾರಿಕೆಗಳಿಗೆ ವೇದಿಕೆಯನ್ನು ಅನ್ವೇಷಿಸುವುದು.

ಎಫ್. ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಡುವೆ ನಡೆಯುತ್ತಿರುವ ಬಾಹ್ಯಾಕಾಶ ಪಾಲುದಾರಿಕೆಯನ್ನು ಗುರುತಿಸುವುದು. ಹವಾಮಾನ ಬದಲಾವಣೆ, ನೀರಿನ ಸಮಸ್ಯೆಗಳು, ಆಹಾರ ಭದ್ರತೆ ಹಾಗೂ ಗಾಳಿಯ ಗುಣಮಟ್ಟ ಸೇರಿದಂತೆ ಸಾಮಾಜಿಕ ಸವಾಲುಗಳನ್ನು ಪರಿಹರಿಸುವಲ್ಲಿ ಬಾಹ್ಯಾಕಾಶ ಆಧಾರಿತ ಅನ್ವಯಿಕೆಗಳನ್ನು ಬಳಸುವುದು ಸೇರಿದಂತೆ ಸರ್ಕಾರ, ಕೈಗಾರಿಕೆ ಮತ್ತು ಶೈಕ್ಷಣಿಕ ಮಟ್ಟದಲ್ಲಿ ಮತ್ತಷ್ಟು ಸಹಯೋಗವನ್ನು ಅನ್ವೇಷಿಸುವುದು.

V. ಇಂಧನ ಪರಿವರ್ತನೆ, ಸುಸ್ಥಿರ ಅಭಿವೃದ್ಧಿ ಮತ್ತು ಕಡಲ ಅಭಿವೃದ್ಧಿ

ಎ. ನವೀಕರಿಸಬಹುದಾದ ಇಂಧನದ ಜಂಟಿ ಕಾರ್ಯಪಡೆಯನ್ನು ಸ್ಥಾಪಿಸುವ ಜತೆಗೆ, ಉತ್ತಮ ಅಭ್ಯಾಸಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲು, ಪರಸ್ಪರರ ಕೈಗಾರಿಕಾ ಪರಿಸರ ವ್ಯವಸ್ಥೆಗಳ ಜ್ಞಾನವನ್ನು ಉತ್ತೇಜಿಸುವುದು. ಹಸಿರು ಹೈಡ್ರೋಜನ್, ಜೈವಿಕ ಶಕ್ತಿ, ಜೈವಿಕ ರಾಸಾಯನಿಕಗಳು ಅಥವಾ ಕೈಗಾರಿಕಾ ಕಚ್ಚಾವಸ್ತುಗಳ ಮರುಬಳಕೆ, ನವೀಕರಿಸಬಹುದಾದ ಮತ್ತು ಬ್ಯಾಟರಿ ಸಂಗ್ರಹಣೆಯಲ್ಲಿ ಕೈಗಾರಿಕಾ ಪಾಲುದಾರಿಕೆಗಳ ಸಹಕಾರ ಸುಗಮಗೊಳಿಸಲು ನಿಯಮಿತ ಸಭೆಗಳನ್ನು ನಡೆಸುವುದು.

ಬಿ. ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಡುವಿನ ಹಸಿರು ಕಾರಿಡಾರ್ ಸೇರಿದಂತೆ ನವೀಕರಿಸಬಹುದಾದ ಹೈಡ್ರೋಜನ್ ಕ್ಷೇತ್ರದಲ್ಲಿ ಜಂಟಿ ಚಟುವಟಿಕೆಗಳಿಗಾಗಿ ಕ್ರಿಯಾ ಯೋಜನೆಯನ್ನು ರೂಪಿಸಲು ಸಹಕರಿಸುವುದು.

ಸಿ. ಹವಾಮಾನ ಕುರಿತ ದ್ವಿಪಕ್ಷೀಯ ಸಂಬಂಧಗಳನ್ನು ಗಾಢವಾಗಿಸಲು ಜಂಟಿ ಕಾರ್ಯಪಡೆ ಸ್ಥಾಪಿಸುವ ಮೂಲಕ ಪರಿಸರ ಕುರಿತು ಬಲವಾದ ಸಹಕಾರಕ್ಕಾಗಿ ಮಾರ್ಗಗಳನ್ನು ಅನ್ವೇಷಿಸುವುದು; ಹವಾಮಾನ ಹೊಂದಾಣಿಕೆ ಮತ್ತು ಇಂಗಾಲ ಹೊರಸೂಸುವಿಕೆ ತಗ್ಗಿಸುವಿಕೆಯ ಉತ್ತಮ ಅಭ್ಯಾಸಗಳು, ಜ್ಞಾನ ಮತ್ತು ತಂತ್ರಜ್ಞಾನವನ್ನು ಹಂಚಿಕೊಳ್ಳುವುದು.

ಡಿ. ಜಾಗತಿಕ ಜೈವಿಕ ಇಂಧನ ಒಕ್ಕೂಟ, ಇಂಟಿಗ್ರೇಟೆಡ್ ಬಯೋರಿಫೈನರೀಸ್ ಮಿಷನ್, ಅಂತಾರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಸುಸ್ಥಿರ ತ್ಯಾಜ್ಯ ನಿರ್ವಹಣೆಯ ಕುರಿತಾದ ಬಹುಮಾರ್ಗಗಳ ಉಪಕ್ರಮಗಳ ಮೂಲಕ ಜೈವಿಕ ಇಂಧನಗಳು, ಹಸಿರು ಆರ್ಥಿಕತೆ ಮತ್ತು ತ್ಯಾಜ್ಯದಿಂದ ಇಂಧನದವರೆಗಿನ ದ್ವಿಪಕ್ಷೀಯ ಪಾಲುದಾರಿಕೆಗಳನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವುದು.

ಇ. ಸುರಕ್ಷಿತ ಮತ್ತು ಸುಸ್ಥಿರ ಕಡಲ ವಲಯಕ್ಕೆ ಕೊಡುಗೆ ನೀಡಲು ಬಂದರುಗಳು, ಒಳನಾಡಿನ ಜಲಮಾರ್ಗಗಳು ಮತ್ತು ಸಾಗಣೆಯಲ್ಲಿ ನವೀನ ಹಸಿರು ಇಂಧನ ಪರಿಹಾರಗಳನ್ನು ಉತ್ತೇಜಿಸುವ ಜತೆಗೆ, ಇತ್ತೀಚೆಗೆ ನವೀಕರಿಸಿದ ಕಡಲ ಸಹಕಾರ ಕುರಿತಾದ ತಿಳಿವಳಿಕೆ ಪತ್ರ, ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಡುವಿನ 'ಹಸಿರು ಮತ್ತು ಡಿಜಿಟಲ್ ಸಮುದ್ರ ಕಾರಿಡಾರ್' ಕುರಿತು ಒಪ್ಪಿತ ಉದ್ದೇಶ ಪತ್ರದಂತೆ ಸಹಕಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು. ಇದು ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಐರೋಪ್ಯ ಮಾರುಕಟ್ಟೆಗಳೊಂದಿಗೆ ಸಂಯೋಜಿಸುವ ಮೂಲಕ ಭಾರತದ ಹಸಿರು ಹೈಡ್ರೋಜನ್ ರಫ್ತುಗಳನ್ನು ಉತ್ತೇಜಿಸುತ್ತದೆ.

ಎಫ್. ಕಡಲ ಸಹಕಾರದ ಜಂಟಿ ಕಾರ್ಯ ಗುಂಪಿನ ಮಾರ್ಗಸೂಚಿಯೊಳಗೆ, ಎರಡೂ ದೇಶಗಳು ಸಮಗ್ರ 'ಹಸಿರು ಮತ್ತು ಡಿಜಿಟಲ್ ಸಮುದ್ರ ಕಾರಿಡಾರ್‌ನ ಮಾರ್ಗಸೂಚಿ'ಯನ್ನು ಅನ್ವೇಷಿಸುತ್ತವೆ, ಇದು ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಡುವೆ ಪರಿಸರ ಸುಸ್ಥಿರ, ಡಿಜಿಟಲ್ ಸಂಯೋಜಿತ ಮತ್ತು ಆರ್ಥಿಕವಾಗಿ ಪರಿಣಾಮಕಾರಿ ಭವಿಷ್ಯ-ಸಿದ್ಧ ಕಡಲ ಕಾರಿಡಾರ್‌ಗೆ ಕೆಲಸ ಮಾಡುವ ಗುರಿ ಹೊಂದಿದೆ.

ಜಿ. ಪ್ರಾದೇಶಿಕ ಯೋಜನೆ ಮತ್ತು ನಗರ ಅಭಿವೃದ್ಧಿ ಕುರಿತ ತಿಳಿವಳಿಕೆ ಒಪ್ಪಂದದ ಅಡಿ, ಜಂಟಿ ಕಾರ್ಯ ಗುಂಪಿನ ಮೂಲಕ ಸುಸ್ಥಿರ ನಗರ ಅಭಿವೃದ್ಧಿ ಕುರಿತು ಸಾಮರ್ಥ್ಯ ವೃದ್ಧಿ, ಜ್ಞಾನ ವಿನಿಮಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವುದು. ಘನತ್ಯಾಜ್ಯ ಮತ್ತು ನೀರು ನಿರ್ವಹಣೆ, ಹಸಿರು ಆರ್ಥಿಕತೆ, ನಗರ ಸಕ್ರಿಯ ಚಲನಶೀಲತೆ, ಇಂಗಾಲ ಶೂನ್ಯ ಹೊರಸೂಸುವಿಕೆಯ ಸಾರಿಗೆ ಮತ್ತು ಚಾರ್ಜಿಂಗ್ ಮೂಲಸೌಕರ್ಯ ಮತ್ತು ನಗರ ಸುಸ್ಥಿರತೆ ಮತ್ತು ಆಡಳಿತದ ವಿಷಯಗಳ ಅಡಿ, ಸಹಕಾರದ ಪ್ರಮುಖ ಕ್ಷೇತ್ರಗಳನ್ನು ಗುರುತಿಸುವುದು.

VI. ರಕ್ಷಣಾ ಸಹಕಾರ

ಎ. ರಕ್ಷಣಾ ಕೈಗಾರಿಕೆ ಮತ್ತು ಸಂಶೋಧನಾ ಕೇಂದ್ರಗಳ ನಡುವಿನ ಸಹಕಾರ ಸೇರಿದಂತೆ ದ್ವಿಪಕ್ಷೀಯ ಸೇನಾ ಸಹಕಾರ ಸಂಘಟಿಸಲು ಅಂತಾರಾಷ್ಟ್ರೀಯ ಮಿಲಿಟರಿ ಸಹಕಾರ ನಿರ್ದೇಶನಾಲಯಗಳ ಆಯಾ ರಕ್ಷಣಾ ಸಚಿವಾಲಯಗಳ ನಡುವೆ ರಚನಾತ್ಮಕ ಜಂಟಿ ತ್ರಿ-ಸೇವೆಗಳ ಸಂವಹನವನ್ನು ಯೋಜಿಸುವುದು.

ಬಿ. ನೌಕಾ ಅಭ್ಯಾಸಗಳಲ್ಲಿ ಪರಸ್ಪರ ಭಾಗವಹಿಸುವಿಕೆ ಮತ್ತು - ಹಿಂದೂ ಮಹಾಸಾಗರ ಪ್ರದೇಶದ ಮಾಹಿತಿ ಸಮ್ಮಿಳನ ಕೇಂದ್ರ(ಐಎಫ್‌ಸಿ-ಐಒಆರ್)ದಲ್ಲಿ ಸಮರ್ಪಕವಾಗಿ  ಒಳಗೊಳ್ಳುವಿಕೆಯ ಮೂಲಕ ಕಡಲ ಸಹಕಾರ ಹೆಚ್ಚಿಸುವುದು.

ಸಿ. ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮ(ಐಪಿಒಐ) ಮತ್ತು ಹಿಂದೂ ಮಹಾಸಾಗರ ನೌಕಾ ವಿಚಾರ ಸಂಕಿರಣ(ಐಒಎನ್ಎಸ್) ಸಂದರ್ಭದಲ್ಲಿ ಸಹಕಾರ ಹೆಚ್ಚಿಸುವ ಗುರಿ ಹೊಂದಿರುವ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ನೆದರ್‌ಲ್ಯಾಂಡ್ಸ್‌ನ ಹೆಚ್ಚುತ್ತಿರುವ ಆಸಕ್ತಿಯ ಮಾರ್ಗಸೂಚಿಯಲ್ಲಿ ಆಯಾ ಸಶಸ್ತ್ರ ಪಡೆಗಳ ನಡುವಿನ ಸಂವಹನಗಳನ್ನು ಉತ್ತೇಜಿಸುವುದು.

ಡಿ. ಆಯಾ ರಕ್ಷಣಾ ಸಚಿವಾಲಯಗಳ ನಡುವೆ ವೇದಿಕೆಗಳು ಮತ್ತು ಸಲಕರಣೆಗಳ ತಂತ್ರಜ್ಞಾನ ಸಹಯೋಗಕ್ಕೆ ಇರುವ ಮಾರ್ಗೋಪಾಯಗಳನ್ನು ಅನ್ವೇಷಿಸುವುದು.

ಇ. ಆಯಾ ವಲಯ ಸಂಸ್ಥೆಗಳು, ಸೊಸೈಟಿ ಆಫ್ ಇಂಡಿಯನ್ ಡಿಫೆನ್ಸ್ ಮ್ಯಾನುಫ್ಯಾಕ್ಚರರ್ಸ್(ಎಸ್‌ಐಡಿಎಂ) ಮತ್ತು ನೆದರ್‌ಲ್ಯಾಂಡ್ಸ್ ಇಂಡಸ್ಟ್ರಿ ಫಾರ್ ಡಿಫೆನ್ಸ್ ಅಂಡ್ ಸೆಕ್ಯುರಿಟಿ(ಎನ್ಐಡಿವಿ) ಮೂಲಕ ರಕ್ಷಣಾ ಉದ್ಯಮ ಮತ್ತು ಸಂಶೋಧನಾ ಕೇಂದ್ರದ ನಡುವಿನ ಸಹಕಾರ ಉತ್ತೇಜಿಸಲು ಎರಡು ರಕ್ಷಣಾ ಸಚಿವಾಲಯಗಳ ನಡುವೆ ರಕ್ಷಣಾ ಕೈಗಾರಿಕಾ ಮಾರ್ಗಸೂಚಿಯ ಕಡೆಗೆ ಕೆಲಸ ಮಾಡುವುದು.

ಎಫ್. ಪರಸ್ಪರ ಸರಕು ಸಾಗಣೆ ಬೆಂಬಲ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ತರಬೇತಿ ಅಭ್ಯಾಸಗಳ ಸಮಯದಲ್ಲಿ ಮಿಲಿಟರಿ ಘಟಕಗಳು/ರಚನೆಗೆ ಸರಕು ಸಾಗಣೆ ಬೆಂಬಲವನ್ನು ಸಾಂಸ್ಥಿಕಗೊಳಿಸುವ ಕಾರ್ಯಸಾಧ್ಯತೆಯನ್ನು ಪರೀಕ್ಷಿಸುವುದು.

VII. ಭದ್ರತಾ ಸಹಕಾರ

ಎ. ರಕ್ಷಣೆ, ಕಡಲ ಭದ್ರತೆ, ಆರ್ಥಿಕ ಭದ್ರತೆ, ಜ್ಞಾನ ಭದ್ರತೆ, ಭಯೋತ್ಪಾದನೆ ನಿಗ್ರಹ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಸೈಬರ್ ಭದ್ರತೆ ಮತ್ತು ಅಂತಾರಾಷ್ಟ್ರೀಯ ಭದ್ರತೆಯ ಇತರೆ ಪರಸ್ಪರ ಒಪ್ಪಿಗೆಯ ವಿಷಯಗಳು ಸೇರಿದಂತೆ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಭದ್ರತಾ ವಿಷಯಗಳ ಕುರಿತು ನಿಯಮಿತ ವಿಚಾರ ವಿನಿಮಯದ ಮೂಲಕ ಸಹಕಾರ ಹೆಚ್ಚಿಸುವುದು.

ಬಿ. ಬಹುಪಕ್ಷೀಯ ವೇದಿಕೆಗಳಲ್ಲಿ ನಿಕಟ ಸಮನ್ವಯ ಮತ್ತು ಸಾಮರ್ಥ್ಯ ವೃದ್ಧಿ ಮತ್ತು ಜ್ಞಾನ ವಿನಿಮಯದ ಮೂಲಕ ಸೈಬರ್ ಬೆದರಿಕೆಗಳು ಮತ್ತು ಸೈಬರ್ ಅಪರಾಧಗಳನ್ನು ಎದುರಿಸಲು ಜಂಟಿ ಪ್ರಯತ್ನಗಳು ಸೇರಿದಂತೆ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಹೆಚ್ಚಿನ ಸೈಬರ್ ಸಹಕಾರ ಕುರಿತ ಉದ್ದೇಶ ಪತ್ರದ ಅನುಷ್ಠಾನವನ್ನು ಬೆಂಬಲಿಸಲು ದ್ವಿಪಕ್ಷೀಯ ಸೈಬರ್ ಸಂವಾದದ ತೊಡಗಿಸಿಕೊಳ್ಳುವಿಕೆಗಳನ್ನು ಬಲಪಡಿಸುವುದು.

ಸಿ. ಬೆದರಿಕೆ ಮೌಲ್ಯಮಾಪನಗಳು ಮತ್ತು ಉತ್ತಮ ಅಭ್ಯಾಸಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೆಯ ಮೂಲಕ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸಹಕಾರ ಬಲಪಡಿಸುವುದು, ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಸಮಗ್ರ ಒಪ್ಪಂದವನ್ನು ಅಳವಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುವುದು.

ಡಿ. ಪರಸ್ಪರ ಕಾನೂನು ಸಹಾಯ ಒಪ್ಪಂದ ಮತ್ತು ಹೊಸ ಹಸ್ತಾಂತರ ಒಪ್ಪಂದವನ್ನು ತೀರ್ಮಾನಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದು.

ಇ. ಇಂಡೋ-ಪೆಸಿಫಿಕ್ ಸಾಗರದ ಉಪಕ್ರಮ(ಐಪಿಒಐ)ಕ್ಕೆ ನೆದರ್‌ಲ್ಯಾಂಡ್ಸ್ ಸದಸ್ಯತ್ವದ ಸಂದರ್ಭದಲ್ಲಿ ಸಹಕಾರ ಹೆಚ್ಚಿಸುವುದು.

VIII. ವಲಸೆ, ಚಲನಶೀಲತೆ ಮತ್ತು ರಾಯಭಾರಿ(ಕಾನ್ಸುಲರ್) ವಿಷಯಗಳು

ಎ. ಭಾರತ ಮತ್ತು ನೆದರ್‌ಲ್ಯಾಂಡ್ಸ್ ನಡುವಿನ ದೀರ್ಘಕಾಲದ ಮತ್ತು ಐತಿಹಾಸಿಕ ಸ್ನೇಹ ಸಂಬಂಧಗಳನ್ನು ಗುರುತಿಸುವುದು ಮತ್ತು ಅದಕ್ಕೆ ಹೊಸ ಉತ್ತೇಜನ ನೀಡುವುದು.

ಬಿ. ಎರಡೂ ದೇಶಗಳಿಗೆ ನ್ಯಾಯಯುತ ವಲಸೆ ಮತ್ತು ಚಲನಶೀಲತೆ ಸುಗಮಗೊಳಿಸಲು ನಿರ್ಧರಿಸಲಾಗಿದೆ.

ಸಿ. ಅನಿಯಮಿತ ವಲಸೆ ತಡೆಗಟ್ಟಲು ಮತ್ತು ಎದುರಿಸಲು ಜಂಟಿಯಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಡಿ. ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಡಾಕ್ಟರೇಟ್ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಯುವ ವೃತ್ತಿಪರರು ಸೇರಿದಂತೆ ಹೆಚ್ಚು ಕೌಶಲ್ಯಪೂರ್ಣ ವೃತ್ತಿಪರರ ನ್ಯಾಯಯುತ ಚಲನಶೀಲತೆಯನ್ನು ಸುಗಮಗೊಳಿಸಲು ಸಹಕರಿಸುವುದು.

ಇ. ಚಲನಶೀಲತೆ ಮತ್ತು ವಲಸೆಯ ಕುರಿತ ತಿಳಿವಳಿಕೆ ಪತ್ರವನ್ನು ಜಾರಿಗೊಳಿಸುವುದು.

ಎಫ್. ಭಾರತ-ನೆದರ್‌ಲ್ಯಾಂಡ್ಸ್ ರಾಯಭಾರಿ(ಕಾನ್ಸುಲರ್)ಗಳ ಸಂವಾದದ ಮೂಲಕ ಬಾಕಿ ಇರುವ ದೂತವಾಸ ವಿಷಯಗಳ ಕುರಿತು ನಿಯಮಿತವಾಗಿ ವಿಚಾರ ವಿನಿಮಯಗಳನ್ನು ನಡೆಸುವುದು.

IX. ಸಂಸ್ಕೃತಿ ಮತ್ತು ಜನರಿಂದ ಜನರಿಗೆ ವಿನಿಮಯ

ಎ. ನಿರಂತರ ಸಂವಾದ, ವಿನಿಮಯ ಕಾರ್ಯಕ್ರಮಗಳು ಮತ್ತು ಜಂಟಿ ಉಪಕ್ರಮಗಳ ಮೂಲಕ ದ್ವಿಪಕ್ಷೀಯ ಸಾಂಸ್ಕೃತಿಕ ಸಹಕಾರ ಹೆಚ್ಚಿಸುವುದು, ಇದರಲ್ಲಿ ಪರಂಪರೆಯ ತಾಣಗಳು ಮತ್ತು ಕಟ್ಟಡಗಳ ಸಂರಕ್ಷಣೆ ಮತ್ತು ಪುನಃಸ್ಥಾಪನೆ ಕುರಿತು ಜ್ಞಾನ ವಿನಿಮಯವೂ ಸೇರಿದೆ.

ಬಿ. ವಿನ್ಯಾಸ, ದೃಶ್ಯ ಕಲೆಗಳು, ಸಾಂಸ್ಕೃತಿಕ ಪರಂಪರೆ, ಪ್ರದರ್ಶನ ಕಲೆಗಳು ಮತ್ತು ವಸ್ತು ಸಂಗ್ರಹಾಲಯ ವಲಯಗಳಲ್ಲಿ ಸಹಯೋಗ ಬಲಪಡಿಸುವತ್ತ ಗಮನ ಹರಿಸಿ, ಸಾಂಸ್ಕೃತಿಕ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಸ್ವಾಗತಿಸುವುದು.

ಸಿ. ಆಯಾ ದೇಶಗಳ ಸಾಂಸ್ಕೃತಿಕ ಕಲಾಕೃತಿಗಳನ್ನು ಹಿಂದಿರುಗಿಸುವುದು ಮತ್ತು ಮರುಸ್ಥಾಪನೆಯ ಮನವಿಗಳನ್ನು ನಿರ್ವಹಿಸುವಲ್ಲಿ ಸಹಕಾರ ಮುಂದುವರಿಸುವುದು.

ಡಿ. ವಸ್ತು ಸಂಗ್ರಹಾಲಯಗಳ ನಡುವೆ ಪಾಲುದಾರಿಕೆ ಸ್ಥಾಪಿಸುವ ಮೂಲಕ ಪರಸ್ಪರ ಜ್ಞಾನವನ್ನು ಗಾಢವಾಗಿಸಲು, ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಉಪಕ್ರಮಗಳನ್ನು ಪ್ರೋತ್ಸಾಹಿಸುವುದು.

ಇ. ಎರಡೂ ದಿಕ್ಕುಗಳಲ್ಲಿ ಸಂಪರ್ಕಗಳು ಮತ್ತು ಪ್ರವಾಸಿಗರ ಹರಿವನ್ನು ಬೆಳೆಸುವುದು.

ಎಫ್. ದ್ವಿಪಕ್ಷೀಯ ಮತ್ತು ಸಾಂಸ್ಕೃತಿಕ ಸಂಬಂಧಗಳು ಮತ್ತು ದೀರ್ಘಕಾಲದ ಸ್ನೇಹ ಬಂಧಗಳನ್ನು ಉತ್ತೇಜಿಸುವಲ್ಲಿ ರೋಮಾಂಚಕ ಭಾರತೀಯ ಮತ್ತು ಡಚ್ ಸಮುದಾಯಗಳು ಹಾಗೂ ನೆದರ್‌ಲ್ಯಾಂಡ್ಸ್‌ನಲ್ಲಿರುವ ಗಮನಾರ್ಹ ಭಾರತೀಯ ವಲಸೆಗಾರರ ​​ಕೊಡುಗೆಗಳನ್ನು ಗುರುತಿಸುವುದು.

 

*****


(ಪ್ರಕಟಣೆ ಐ.ಡಿ.: 2261992) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , Marathi , हिन्दी , Manipuri , Bengali , Assamese , Punjabi , Gujarati , Tamil , Telugu