ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ಪಿ.ಎಂ.ಇ-ಡ್ರೈವ್ ಯೋಜನೆಯಡಿಯಲ್ಲಿ ರಾಷ್ಟ್ರವ್ಯಾಪಿ ಇ.ವಿ. ಚಾರ್ಜಿಂಗ್ ಮೂಲಸೌಕರ್ಯವನ್ನು ಸಕ್ರಿಯಗೊಳಿಸುವ ಕುರಿತು ರಾಷ್ಟ್ರೀಯ ಸಮ್ಮೇಳನ

ಪ್ರಕಟಣಾ ದಿನಾಂಕ: 12 MAY 2026 6:24PM by PIB Bengaluru

ಭವಿಷ್ಯಕ್ಕೆ ಸಿದ್ಧವಾದ ವಿದ್ಯುತ್ ವಾಹನ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ: ಹೆಚ್.ಡಿ. ಕುಮಾರಸ್ವಾಮಿ

ಭಾರತ ಸರ್ಕಾರದ ಭಾರೀ ಕೈಗಾರಿಕಾ ಸಚಿವಾಲಯ (ಎಂ.ಎಚ್.ಐ.-MHI) ಮೇ 12, 2026 ರಂದು ಬೆಂಗಳೂರಿನಲ್ಲಿ “ಪಿ.ಎಂ.ಇ-ಡ್ರೈವ್ (PM E-DRIVE) ಯೋಜನೆಯಡಿಯಲ್ಲಿ ರಾಷ್ಟ್ರವ್ಯಾಪಿ ವಿದ್ಯುತ್ ವಾಹನ ಚಾರ್ಜಿಂಗ್ ಮೂಲಸೌಕರ್ಯವನ್ನು ಸಕ್ರಿಯಗೊಳಿಸುವುದು” ಕುರಿತು ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ, ದೇಶದ ಸ್ವಚ್ಛ ಚಲನಶೀಲತೆ  ಪರಿವರ್ತನೆಯನ್ನು ಬೆಂಬಲಿಸಲು ಆಧುನಿಕ ಮತ್ತು ವಿಶ್ವಾಸಾರ್ಹ ವಿದ್ಯುತ್ ವಾಹನ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ರಚಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಪಿ.ಎಂ.ಇ-ಡ್ರೈವ್ ಯೋಜನೆಯು ವಿದ್ಯುತ್ ಚಲನಶೀಲತೆಯನ್ನು ಕೈಗೆಟುಕುವ, ವಿಶ್ವಾಸಾರ್ಹ ಮತ್ತು ನಗರ ಹಾಗು ಗ್ರಾಮೀಣ ಭಾರತದಲ್ಲಿ ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುವ ಸರ್ಕಾರದ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ವಾಹನಗಳ ಅಳವಡಿಕೆಯನ್ನು ವೇಗಗೊಳಿಸಲು ವಿದ್ಯುತ್ ಚಾರ್ಜಿಂಗ್ ಮೂಲಸೌಕರ್ಯವನ್ನು ಬಲಪಡಿಸುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

ಕರ್ನಾಟಕದ ₹123.26 ಕೋಟಿ ವೆಚ್ಚದ 1,243 ಇವಿ ಚಾರ್ಜರ್‌ಗಳನ್ನು ಒಳಗೊಂಡಿರುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡುವುದಾಗಿ ಗೌರವಾನ್ವಿತ ಸಚಿವರು ಘೋಷಿಸಿದರು. ಇಲ್ಲಿಯವರೆಗೆ, ₹503.86 ಕೋಟಿ ಒಟ್ಟು ಆರ್ಥಿಕ ವೆಚ್ಚದ ಇವಿ ಚಾರ್ಜಿಂಗ್ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ, ಇದು ವಿವಿಧ ರಾಜ್ಯಗಳು ಮತ್ತು ಸಿಪಿಎಸ್‌ಇಗಳಲ್ಲಿ 4,874 ಇವಿ ಚಾರ್ಜರ್‌ಗಳ ಸ್ಥಾಪನೆಯನ್ನು ಒಳಗೊಂಡಿದೆ. ಅನುಮೋದಿತ ಪ್ರಸ್ತಾವನೆಗಳಲ್ಲಿ ಎಚ್‌ಪಿಸಿಎಲ್, ಐಒಸಿಎಲ್ ಮತ್ತು ಬಿಪಿಸಿಎಲ್‌ನಂತಹ ಪ್ರಮುಖ ಸಿಪಿಎಸ್‌ಇಗಳು ಹಾಗೂ ರಾಜಸ್ಥಾನ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸೇರಿವೆ.

ಭಾರೀ ಕೈಗಾರಿಕೆಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ಹನೀಫ್ ಖುರೇಷಿ, “ಪಿ.ಎಂ.ಇ-ಡ್ರೈವ್ (PM E-DRIVE) ಉಪಕ್ರಮವು ಭಾರತದಾದ್ಯಂತ ಸುಗಮ ಮತ್ತು ಭವಿಷ್ಯಕ್ಕೆ ಸಿದ್ಧವಾದ ಇ.ವಿ. ಚಾರ್ಜಿಂಗ್ ನೆಟ್‌ವರ್ಕ್‌ಗೆ ಅಡಿಪಾಯ ಹಾಕುತ್ತಿದೆ ಎಂದು ಹೇಳಿದರು. ಎಂ.ಎಚ್.ಐ. ಎಲೆಕ್ಟ್ರಿಕ್ 2 ಡಬ್ಲ್ಯು.ಎಸ್.(ದ್ವಿಚಕ್ರ ವಾಹನಗಳು)  , ಇ-3 ಡಬ್ಲ್ಯು.ಎಸ್,(ತ್ರಿ ಚಕ್ರ ವಾಹನಗಳು)  ಇ-ಕಾರುಗಳು, ಇ-ಬಸ್‌ಗಳು ಮತ್ತು ಇ-ಟ್ರಕ್‌ಗಳಿಗೆ ಇ.ವಿ. ಚಾರ್ಜರ್‌ಗಳನ್ನು ಬೆಂಬಲಿಸುತ್ತದೆ. ಕೇಂದ್ರ, ರಾಜ್ಯಗಳು, ಬಿ.ಎಚ್.ಇ.ಎಲ್., ಚಾರ್ಜ್ ಪಾಯಿಂಟ್ ಆಪರೇಟರ್‌ಗಳು ಮತ್ತು ಉದ್ಯಮದ ಪಾಲುದಾರರ ನಡುವಿನ ಸಂಘಟಿತ ಪ್ರಯತ್ನಗಳು ದೇಶದಲ್ಲಿ ಮುಂದಿನ ಹಂತದ ವಿದ್ಯುತ್ ಚಲನಶೀಲತೆಯ ಬೆಳವಣಿಗೆಯನ್ನು ಬೆಂಬಲಿಸುವ ಸಾಮರ್ಥ್ಯವಿರುವ ಪರಿಣಾಮಕಾರಿ ಚಾರ್ಜಿಂಗ್ ಪರಿಸರ ವ್ಯವಸ್ಥೆಯನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

ಪಿ.ಎಂ.ಇ-ಡ್ರೈವ್ ಜೊತೆಗೆ ಎಂ.ಎಚ್.ಐ. ಇ.ವಿ. ಗಳನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಅನುಷ್ಠಾನಿಸುತ್ತಿದೆ. ಅವುಗಳೆಂದರೆ ಪಿ.ಎಲ್.ಐ. ಆಟೋ (ರೂ. 25,938 ಕೋಟಿ), ಪಿ.ಎಲ್.ಐ. ಎ.ಸಿ.ಸಿ. (ರೂ. 18,100 ಕೋಟಿ), ಪಾವತಿ ಭದ್ರತಾ ಕಾರ್ಯವಿಧಾನ (ರೂ. 3,435 ಕೋಟಿ) ಮತ್ತು ಅಪರೂಪದ ಭೂಮಿಯ ಮ್ಯಾಗ್ನೆಟ್‌ಗಳ ಯೋಜನೆ (ರೂ. 7,280 ಕೋಟಿ)

ರಾಷ್ಟ್ರವ್ಯಾಪಿ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ವೇಗಗೊಳಿಸುವತ್ತ ಗಮನಹರಿಸಿದ ಸಮ್ಮೇಳನ

ದೇಶಾದ್ಯಂತ ಇವಿ ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯ (ಇವಿ ಪಿಸಿಎಸ್) ನಿಯೋಜನೆಯನ್ನು ವೇಗಗೊಳಿಸುವುದು ಮತ್ತು ಭಾರತದ ವಿದ್ಯುತ್ ಚಲನಶೀಲ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಚರ್ಚಿಸಲು ಸಮ್ಮೇಳನವು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಈ ಕಾರ್ಯಕ್ರಮವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಪ್ರತಿನಿಧಿಗಳು, ಚಾರ್ಜ್ ಪಾಯಿಂಟ್ ಆಪರೇಟರ್‌ಗಳು (ಸಿಪಿಒಗಳು), ಇವಿ ಮೂಲ ಸಲಕರಣೆ ತಯಾರಕರು (ಒಇಎಂಗಳು), ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು), ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿಪಿಎಸ್‌ಇಗಳು), ಆಟೋಮೊಬೈಲ್ ಉದ್ಯಮ ಸಂಘಟನೆಗಳು ಮತ್ತು ಇತರ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸಿತು.

ರಾಜ್ಯಗಳು ಹಂಚಿಕೊಂಡ ಅತ್ಯುತ್ತಮ ಅಭ್ಯಾಸ/ಪದ್ಧತಿಗಳು ಮತ್ತು ಅನುಷ್ಠಾನ ತಂತ್ರಗಳು

ಸಮ್ಮೇಳನದಲ್ಲಿ ಭಾಗವಹಿಸಿದ್ದ ಹಿರಿಯ ರಾಜ್ಯ ಅಧಿಕಾರಿಗಳೆಂದರೆ ತೆಲಂಗಾಣ ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ (ಇಂಧನ) ಶ್ರೀ ನವೀನ್ ಮಿತ್ತಲ್, ಐಎಎಸ್; ಕೇರಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ವಿದ್ಯುತ್) ಶ್ರೀ ಪುನೀತ್ ಕುಮಾರ್, ಐಎಎಸ್; ಕೇರಳ ಸರ್ಕಾರದ ಕೆಎಸ್‌ಇಬಿಯ ಸಿಎಂಡಿ ಶ್ರೀ ಮಿನ್ಹಾಜ್ ಆಲಂ; ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಇಂಧನ) ಶ್ರೀ ಗೌರವ್ ಗುಪ್ತಾ; ಮತ್ತು ಒಡಿಶಾ ಸರ್ಕಾರದ ಸಾರಿಗೆ ಆಯುಕ್ತ ಶ್ರೀ ಅಮಿತಾಭ್ ಠಾಕೂರ್. ಅಧಿಕಾರಿಗಳು ತಮ್ಮ ಅನುಭವಗಳು, ನೀತಿ ಉಪಕ್ರಮಗಳು ಮತ್ತು ಇವಿ ಚಾರ್ಜಿಂಗ್ ನಿಯೋಜನೆಯನ್ನು ಹೆಚ್ಚಿಸಲು ಮತ್ತು ಚಾರ್ಜಿಂಗ್ ಪ್ರವೇಶವನ್ನು ಬಲಪಡಿಸಲು ರಾಜ್ಯಮಟ್ಟದ ತಂತ್ರಗಳನ್ನು ಹಂಚಿಕೊಂಡರು.

ದೇಶಾದ್ಯಂತ ಚಾರ್ಜಿಂಗ್ ನೆಟ್ವರ್ಕ್ ಸುಧಾರಿಸುವ ಪಿ.ಎಂ.ಇ-ಡ್ರೈವ್ ಯೋಜನೆ

ಪಿ.ಎಂ.ಇ-ಡ್ರೈವ್ ಯೋಜನೆಯಡಿಯಲ್ಲಿ, ಭಾರತ ಸರ್ಕಾರವು ವಿದ್ಯುತ್ ಚಲನಶೀಲತೆಯನ್ನು ಉತ್ತೇಜಿಸಲು ಮತ್ತು ಬಹು ವಿಭಾಗಗಳಲ್ಲಿ ವಿದ್ಯುತ್ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಬೆಂಬಲಿಸಲು ಒಟ್ಟು ₹10,900 ಕೋಟಿಗಳ ವೆಚ್ಚವನ್ನು ಅನುಮೋದಿಸಿದೆ. ಈ ಯೋಜನೆಯು ವಿವಿಧ ವಾಹನ ವಿಭಾಗಗಳು ಮತ್ತು ಸಂಬಂಧಿತ ಘಟಕಗಳಲ್ಲಿ ಬೇಡಿಕೆ ಪ್ರೋತ್ಸಾಹ ಮತ್ತು ಮೂಲಸೌಕರ್ಯ ಬೆಂಬಲವನ್ನು ಒದಗಿಸುತ್ತದೆ. ಇ-ರಿಕ್ಷಾಗಳು, ಇ-ಕಾರ್ಟ್‌ಗಳು ಮತ್ತು L5 ವರ್ಗದ ವಾಹನಗಳು ಸೇರಿದಂತೆ ಸುಮಾರು 24.79 ಲಕ್ಷ ವಿದ್ಯುತ್ ದ್ವಿಚಕ್ರ ವಾಹನಗಳು (e-2Ws) ಮತ್ತು ಸುಮಾರು 3.16 ಲಕ್ಷ ವಿದ್ಯುತ್ ತ್ರಿಚಕ್ರ ವಾಹನಗಳಿಗೆ (e-3Ws) ಈ ಯೋಜನೆಯಡಿಯಲ್ಲಿ ಬೆಂಬಲ ನೀಡಲು ಪ್ರಸ್ತಾಪಿಸಲಾಗಿದೆ. ಇದರ ಜೊತೆಗೆ, ಈ ಯೋಜನೆಯು 14,028ಕ್ಕೂ ಹೆಚ್ಚು ವಿದ್ಯುತ್ ಬಸ್‌ಗಳ ನಿಯೋಜನೆಗೆ ₹4,391 ಕೋಟಿಗಳ ಬೆಂಬಲವನ್ನು ನೀಡುತ್ತದೆ. ವಾಣಿಜ್ಯ ಮತ್ತು ಸಾರ್ವಜನಿಕ ಸೇವಾ ವಿಭಾಗಗಳಲ್ಲಿ ಈ ತಂತ್ರಜ್ಞಾನ ಸ್ವೀಕಾರವನ್ನು ಉತ್ತೇಜಿಸಲು ಇ-ಆಂಬ್ಯುಲೆನ್ಸ್‌ಗಳು ಮತ್ತು ಇ-ಟ್ರಕ್‌ಗಳಿಗೆ ಮೀಸಲಾದಂತೆ ಪ್ರತ್ಯೇಕ  ಬೆಂಬಲವನ್ನು ಸಹ ಸೇರಿಸಲಾಗಿದೆ.

ಒಟ್ಟು ವೆಚ್ಚದಲ್ಲಿ, ₹3,679 ಕೋಟಿಗಳನ್ನು ಇ-2ಡಬ್ಲ್ಯೂಗಳು, ಇ-3ಡಬ್ಲ್ಯೂಗಳು, ಇ-ಆಂಬ್ಯುಲೆನ್ಸ್‌ಗಳು, ಇ-ಟ್ರಕ್‌ಗಳು ಮತ್ತು ಇತರ ಉದಯೋನ್ಮುಖ ವಿದ್ಯುತ್ ವಾಹನ ವಿಭಾಗಗಳಿಗೆ ಬೇಡಿಕೆ ಪ್ರೋತ್ಸಾಹಕ್ಕಾಗಿ ಮೀಸಲಿಡಲಾಗಿದೆ.

ದೇಶಾದ್ಯಂತ ಇವಿ ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ₹2,000 ಕೋಟಿ ಮೀಸಲಿಡಲಾಗಿದೆ. ಹೆಚ್ಚುವರಿಯಾಗಿ, ಭಾರೀ ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ವಾಹನ ಪರೀಕ್ಷಾ ಏಜೆನ್ಸಿಗಳ ಆಧುನೀಕರಣ ಮತ್ತು ಮೇಲ್ದರ್ಜೆೀಕರಣಕ್ಕಾಗಿ ₹780 ಕೋಟಿ ಮೀಸಲಿಡಲಾಗಿದೆ.

ವಿಶಾಲ ವ್ಯಾಪ್ತಿಯ (ಸ್ಕೇಲೆಬಲ್)  ಮತ್ತು ವಿಶ್ವಾಸಾರ್ಹ ಇವಿ ಮೂಲಸೌಕರ್ಯಕ್ಕೆ ಸಹಯೋಗ ನಿರ್ಣಾಯಕ

ದೇಶಾದ್ಯಂತ ಇವಿ ಚಾರ್ಜಿಂಗ್ ಮೂಲಸೌಕರ್ಯದ ಪ್ರಮಾಣ, ಪರಸ್ಪರ ಕಾರ್ಯಸಾಧ್ಯತೆ, ಪ್ರಮಾಣೀಕರಣ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು, ಒಎಂಸಿಗಳು, ಒಇಎಂಗಳು, ಸಿಪಿಒಗಳು ಮತ್ತು ಅನುಷ್ಠಾನ ಸಂಸ್ಥೆಗಳ ನಡುವೆ ನಿಕಟ ಸಮನ್ವಯದ ಮಹತ್ವವನ್ನು ಸಮ್ಮೇಳನವು ಒತ್ತಿಹೇಳಿತು. ಭಾಗವಹಿಸಿದವರು ಭಾರತದ ವೇಗವಾಗಿ ಬೆಳೆಯುತ್ತಿರುವ ಇವಿ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ವೇಗವಾದ ನಿಯೋಜನೆ, ಸಾಮಾನ್ಯ ತಾಂತ್ರಿಕ ಮಾನದಂಡಗಳು ಮತ್ತು ವರ್ಧಿತ ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳ ಅಗತ್ಯವನ್ನು ಉಲ್ಲೇಖಿಸಿದರು.

ಸ್ವಚ್ಛ ಚಲನಶೀಲತೆಯ ಗುರಿಗಳತ್ತ ಬದ್ಧತೆಯನ್ನು ಪುನರುಚ್ಚರಿಸಿದ ಎಂ.ಎಚ್.ಐ.

ಭಾರತದ ಸ್ವಚ್ಛ ಚಲನಶೀಲತೆಯ ಪರಿವರ್ತನೆಯನ್ನು ವೇಗಗೊಳಿಸಲು ಮತ್ತು ವಿಕಸಿತ ಭಾರತ, ಆತ್ಮನಿರ್ಭರ್ ಭಾರತ್‌ ರಾಷ್ಟ್ರೀಯ ದೃಷ್ಟಿಕೋನವನ್ನು ಮುನ್ನಡೆಸಲು ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲು ನಿರ್ಣಾಯಕವಾಗಿರುವ ಇ.ವಿ. ಚಾರ್ಜಿಂಗ್ ಮೂಲಸೌಕರ್ಯವನ್ನು ಸಕಾಲಿಕವಾಗಿ ಜಾರಿಗೊಳಿಸುವಲ್ಲಿ ರಾಜ್ಯಗಳು ಮತ್ತು ಪಾಲುದಾರರನ್ನು ಬೆಂಬಲಿಸುವ ತನ್ನ ಬದ್ಧತೆಯನ್ನು ಬೃಹತ್ ಕೈಗಾರಿಕಾ ಸಚಿವಾಲಯ ಪುನರುಚ್ಚರಿಸಿದೆ.

 

*****


(ಪ್ರಕಟಣೆ ಐ.ಡಿ.: 2260547) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Telugu