ಗ್ರಾಮೀಣಾಭಿವೃದ್ಧಿ ಸಚಿವಾಲಯ
ಪಾರದರ್ಶಕ ಮತ್ತು ನಾಗರಿಕ ಕೇಂದ್ರಿತ ಭೂ ನಿರ್ವಹಣೆಯನ್ನು ಪ್ರಾರಂಭಿಸಲು, ತೊಂದರೆ-ಮುಕ್ತ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ದೀರ್ಘಕಾಲೀನ ಭೂ ವಿವಾದಗಳನ್ನು ಪರಿಹರಿಸಲು ಸಹಾಯ ಮಾಡಲು ಭೂ ಸಂಗ್ರಹ ಉಪಕ್ರಮ ಯುಪಯುಕ್ತವಾಗಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಜಲಾನಯನ ಅಭಿವೃದ್ಧಿ ಘಟಕದ ಅಡಿಯಲ್ಲಿ ಪ್ರಸ್ತಾಪಿಸಲಾದ ಸಂಯೋಜಿತ ಎಂಐಎಸ್ ಮತ್ತು ಜಿಐಎಸ್ ಆಧಾರಿತ ಮೇಲ್ವಿಚಾರಣೆ- ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ 3.0 - ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಉಪ-ನೋಂದಣಿ ಕಚೇರಿಗಳನ್ನು ಆಧುನೀಕರಿಸಲಾಗುವುದು- ಶ್ರೀ ಶಿವರಾಜ್ ಸಿಂಗ್
ಪ್ರಕಟಣಾ ದಿನಾಂಕ:
08 MAY 2026 3:56PM by PIB Bengaluru
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಭೂ ಸಂಪನ್ಮೂಲ ಇಲಾಖೆಯ (ಡಿ.ಒ.ಎಲ್ .ಆರ್) ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭೂ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಶ್ರೀ ನರೇಂದ್ರ ಭೂಷಣ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ, ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮ (ಡಿ.ಐ.ಎಲ್. ಆರ್.ಎಂ.ಪಿ.) 3.0, ಸಮೀಕ್ಷೆ/ ಮರುಸಮೀಕ್ಷೆ ಚಟುವಟಿಕೆಗಳು ಮತ್ತು ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಇಲಾಖೆಯ ವಿವಿಧ ಉಪಕ್ರಮಗಳ ಅಡಿಯಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿ ವಿವರಿಸಿದರು, ಜೊತೆಗೆ ಮುಂಬರುವ ಕೆಲಸಗಳಿಗೆ ಮಾರ್ಗಸೂಚಿಯನ್ನು ಕೂಡಾ ವಿವರಿಸಿದರು.

ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮ (ಡಿ.ಐ.ಎಲ್. ಆರ್.ಎಂ.ಪಿ.) 3.0 ಇದರ ಸ್ಥಿತಿಯನ್ನು ಸಚಿವರು ಪರಿಶೀಲಿಸಿದರು. ಈ ಕಾರ್ಯಕ್ರಮವು ದೇಶಾದ್ಯಂತ ಭೂ ದಾಖಲೆಗಳ ಮೂಲಸೌಕರ್ಯಗಳ ಆಧುನೀಕರಣ ಮತ್ತು ಡಿಜಿಟಲೀಕರಣವನ್ನು ಕಲ್ಪಿಸುತ್ತದೆ ಎಂದು ಸಚಿವರಿಗೆ ತಿಳಿಸಲಾಯಿತು. ಭೂ ದಾಖಲೆಗಳ ಗಣಕೀಕರಣ, ತಹಸಿಲ್ ಮಟ್ಟದ ದಾಖಲೆ ಕೊಠಡಿಗಳ ಆಧುನೀಕರಣ, ಭೂ ಉಲ್ಲೇಖ ಮತ್ತು ವಿಶಿಷ್ಟ ಭೂ ಪಾರ್ಸೆಲ್ ಗುರುತಿನ ಸಂಖ್ಯೆಗಳ (ಯು .ಎಲ್. ಪಿ. ಐ. ಎನ್.) ನಿಯೋಜನೆ, ಆಧಾರ್ ಜೋಡಣೆ(ಸೀಡಿಂಗ್), ಭೂ ದಾಖಲೆಗಳ ದತ್ತಸಂಚಯಗಳಲ್ಲಿ ಮೊಬೈಲ್ ಸಂಖ್ಯೆ ಮತ್ತು ವಿಳಾಸ ಏಕೀಕರಣ, ಕಂದಾಯ ನ್ಯಾಯಾಲಯಗಳ ಗಣಕೀಕರಣ ಮತ್ತು ಭೂ ದಾಖಲೆ ವ್ಯವಸ್ಥೆಗಳೊಂದಿಗೆ ಅವುಗಳ ಏಕೀಕರಣ, ಕೋರ್ ಜಿಐಎಸ್ ಮತ್ತು ಲ್ಯಾಂಡ್ ಸ್ಟ್ಯಾಕ್ ಸಾಫ್ಟ್ವೇರ್ ಅಭಿವೃದ್ಧಿ ಮತ್ತು ನಗರ ಭೂ ದಾಖಲೆಗಳ ಮ್ಯಾಪಿಂಗ್ಗಾಗಿ ಪೈಲಟ್ ಯೋಜನೆಗಳ ಅನುಷ್ಠಾನವು ಪ್ರಮುಖ ಅಂಶಗಳಾಗಿವೆ ಎಂದು ಸಚಿವರಿಗೆ ತಿಳಿಸಲಾಯಿತು.
ಆಧುನೀಕರಣದ ಪ್ರಯತ್ನಗಳು ನಾಗರಿಕರಿಗೆ ಹಾಗೂ ತಹಸಿಲ್ದಾರ್ಗಳು ಮತ್ತು ಪಟ್ವಾರಿಗಳು ಸೇರಿದಂತೆ ಕಂದಾಯ ಅಧಿಕಾರಿಗಳಿಗೆ ಭೂ ಸಂಬಂಧಿತ ಸೇವೆಗಳನ್ನು ಪಾರದರ್ಶಕ, ಪರಿಣಾಮಕಾರಿ ಮತ್ತು ತೊಂದರೆ-ಮುಕ್ತಗೊಳಿಸುವ ಮೂಲಕ ಅನುಕೂಲತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಒತ್ತಿ ಹೇಳಿದರು. ಪ್ರಸ್ತಾವಿತ ಲ್ಯಾಂಡ್ ಸ್ಟ್ಯಾಕ್ ಉಪಕ್ರಮವು ಭೂ ಭಾಗಗಳ ತಕ್ಷಣದ ಮತ್ತು ನಿಖರವಾದ ಮೌಲ್ಯಮಾಪನವನ್ನು ಸುಗಮಗೊಳಿಸುತ್ತದೆ ಮತ್ತು ಬ್ಯಾಂಕುಗಳಿಗೆ ಸಾಲ ಅನುಮೋದನೆ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ಗಮನಿಸಿದರು.

ನಾಗರಿಕ ಸ್ನೇಹಿ ಸೇವೆಗಳನ್ನು ಒದಗಿಸಲು ಸಬ್-ರಿಜಿಸ್ಟ್ರಾರ್ ಕಚೇರಿಗಳ ಆಧುನೀಕರಣವನ್ನು ಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಡಬ್ಲ್ಯೂ.ಡಿ.ಸಿ-ಪಿ.ಎಂ.ಕೆ.ಎಸ್ವೈ) 2.0 ಅಡಿಯಲ್ಲಿ ಜಲಾನಯನ ಅಭಿವೃದ್ಧಿ ಘಟಕದ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು.
ಡಬ್ಲ್ಯೂ.ಡಿ.ಸಿ-ಪಿ.ಎಂ.ಕೆ.ಎಸ್.ವೈ 3.0 ಅಡಿಯಲ್ಲಿ ಪ್ರಸ್ತಾವಿತ ಉಪಕ್ರಮಗಳನ್ನು ಪರಿಶೀಲಿಸಿದ ಸಚಿವರು, ಎಂಐಎಸ್ ಮತ್ತು ಜಿಐಎಸ್ -ಆಧಾರಿತ ವ್ಯವಸ್ಥೆಗಳ ಸಂಯೋಜಿತ ಬಳಕೆಯ ಮೂಲಕ ಸಮಗ್ರ ಡಿಜಿಟಲ್ ಮೇಲ್ವಿಚಾರಣೆಯ ಮಹತ್ವವನ್ನು ಸಚಿವರು ಒತ್ತಿ ಹೇಳಿದರು.
ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಸಚಿವರೊಂದಿಗೆ ಸಭೆಗಳನ್ನು ನಡೆಸುವುದಾಗಿ ಮತ್ತು ಯೋಜನೆಗಳ ಉತ್ತಮ ಸಮನ್ವಯ ಮತ್ತು ಸಕಾಲಿಕ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸುವುದಾಗಿ ಕೇಂದ್ರ ಸಚಿವರಾದ ಶ್ರೀ ಚೌಹಾಣ್ ಅವರು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಆರ್. ಆನಂದ್, ಜಂಟಿ ಕಾರ್ಯದರ್ಶಿ (ಜಲಾನಯನ) ಶ್ರೀ ನಿತಿನ್ ಖಾಡೆ, ಜಂಟಿ ಕಾರ್ಯದರ್ಶಿ (ಭೂ ಸಂಪನ್ಮೂಲ) ಶ್ರೀ ಪಿ. ನರಹರಿ, ಆರ್ಥಿಕ ಸಲಹೆಗಾರ ಶ್ರೀ ಅಬ್ದುಲ್ ಕರೀಮ್ ಮತ್ತು ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.
*****
(ಪ್ರಕಟಣೆ ಐ.ಡಿ.: 2259222)
ವಿಸಿಟರ್ ಕೌಂಟರ್ : 8