ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಭಾರತವು "ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ (ಐ.ಬಿ.ಸಿ.ಎ.) ಶೃಂಗಸಭೆ"ಯನ್ನು ಜೂನ್ 1 - 2, 2026 ರಂದು ನವದೆಹಲಿಯಲ್ಲಿ ಆಯೋಜಿಸಲಿದೆ



 "ಐಬಿಸಿಎ ಶೃಂಗಸಭೆ, 2026" ರ ಜಾಲತಾಣ ಮತ್ತು ಲಾಂಛನವನ್ನು ಕೇಂದ್ರ ಪರಿಸರ ಸಚಿವರು ಬಿಡುಗಡೆ ಮಾಡಿದರು


ಈ "ದೊಡ್ಡ ಬೆಕ್ಕು (ಬಿಗ್ ಕ್ಯಾಟ್) ವಂಶ" ಶ್ರೇಣಿಯ ವಿಷಯಗಳಲ್ಲಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಈ ವರೆಗೆ ಐಬಿಸಿಎಯ ಭಾಗವಾಗಿರದ ಇತರ ದೇಶಗಳು ಒಕ್ಕೂಟಕ್ಕೆ ಸೇರಲು ಕೇಂದ್ರ ಸಚಿವರಾಧ ಶ್ರೀ ಭೂಪೇಂದರ್ ಯಾದವ್ ಅವರು ಕರೆ ನೀಡಿದರು


ಸಮಿತಿಯು ಅಂತಾರಾಷ್ಟ್ರೀಯ ಪಾಲುದಾರಿಕೆಗಳನ್ನು ಬಲಪಡಿಸುತ್ತದೆ, "ಬಿಗ್ ಕ್ಯಾಟ್ ವಂಶ" ಸಂರಕ್ಷಣೆಯಲ್ಲಿ ದಕ್ಷಿಣ-ದಕ್ಷಿಣ ಸಹಕಾರವನ್ನು ಉತ್ತೇಜಿಸುತ್ತದೆ: ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್

ಪ್ರಕಟಣಾ ದಿನಾಂಕ: 06 MAY 2026 6:39PM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಇಂದು ನವದೆಹಲಿಯಲ್ಲಿ 1 ನೇ "ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ (ಐಬಿಸಿಎ) ಶೃಂಗಸಭೆ 2026" ಇದರ ಜಾಲತಾಣ ಮತ್ತು ಲಾಂಛನವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ, ಅವರು ಶೃಂಗಸಭೆಯ ಕುರಿತು ಪ್ರಚಾರ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದರು.  ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಐಬಿಸಿಎಯ ಹಿರಿಯ ಅಧಿಕಾರಿಗಳ ಜೊತೆಗೆ "ಬಿಗ್ ಕ್ಯಾಟ್ ವಂಶ" ಶ್ರೇಣಿಯ ಸಂರಕ್ಷಣೆಯ ದೇಶಗಳ ಹಲವಾರು ಮಿಷನ್ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಂತರ-ಸರ್ಕಾರಿ ಅಂತಾರಾಷ್ಟ್ರೀಯ ಸಂಸ್ಥೆಯಾದ ಐಬಿಸಿಎಯನ್ನು - ಸಿಂಹ, ಹುಲಿ, ಚಿರತೆ, ಹಿಮ ಚಿರತೆ, ಚಿರತೆ, ಜಾಗ್ವಾರ್ ಮತ್ತು ಪೂಮಾ ಮುಂತಾದ ಏಳು "ದೊಡ್ಡ ಬೆಕ್ಕು ವಂಶ (ಬಿಗ್ ಕ್ಯಾಟ್‌)"ಗಳ ಸಂರಕ್ಷಣೆಗಾಗಿ ಸ್ಥಾಪಿಸಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಯಾದವ್ ಅವರು, ವಿಶ್ವದ ಮಹತ್ತರದ "ಬಿಗ್ ಕ್ಯಾಟ್‌"ಗಳ ಸಂರಕ್ಷಣೆಗೆ ಮೀಸಲಾಗಿರುವ ಒಂದು ಹೆಗ್ಗುರುತು ಜಾಗತಿಕ ಸಭೆಯತ್ತ ಈ ಸಂದರ್ಭವು ಒಂದು ಪ್ರಮುಖ ಮೈಲಿಗಲ್ಲಾಗಿದೆ ಎಂದು ಬಣ್ಣಿಸಿದರು. ಭಾರತವು ಜೂನ್ 1, 2026 ರಂದು ನವದೆಹಲಿಯಲ್ಲಿ ಮೊದಲ ಐಬಿಸಿಎ ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಅವರು ಮಾಹಿತಿ ನೀಡಿದರು, ಇದರಲ್ಲಿ ಸದಸ್ಯ ರಾಷ್ಟ್ರಗಳು/ಸರ್ಕಾರದ ಮುಖ್ಯಸ್ಥರು ಮತ್ತು ವೀಕ್ಷಕ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸುವ ನಿರೀಕ್ಷೆಯಿದೆ. 'ಬಿಗ್ ಕ್ಯಾಟ್‌ಗಳನ್ನು ಉಳಿಸಿ, ಮಾನವೀಯತೆಯನ್ನು ಉಳಿಸಿ, ಪರಿಸರ ವ್ಯವಸ್ಥೆಯನ್ನು ಉಳಿಸಿ' ಎಂಬ ಪರಿಕಲ್ಪನೆಯಿಂದ  ಮಾರ್ಗದರ್ಶಿಸಲ್ಪಟ್ಟ ಈ ಶೃಂಗಸಭೆಯು ಪ್ರಪಂಚದಾದ್ಯಂತದ 400 ಕ್ಕೂ ಹೆಚ್ಚು ಸಂರಕ್ಷಣಾವಾದಿಗಳು, ನೀತಿ ನಿರೂಪಕರು, ವಿಜ್ಞಾನಿಗಳು, ಬಹುಪಕ್ಷೀಯ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ಕಾರ್ಪೊರೇಟ್ ನಾಯಕರು ಮತ್ತು ಸಮುದಾಯ ಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ ಎಂದು ಹೇಳಿದರು.

ದೊಡ್ಡ ಬೆಕ್ಕು (ಬಿಗ್ ಕ್ಯಾಟ್‌) ವಂಶದ ಸಂರಕ್ಷಣೆಯಲ್ಲಿ ಭಾರತದ ಪ್ರಯತ್ನ ಮತ್ತು ಪ್ರಯಾಣವನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, ಬದ್ಧತೆ, ನಾವೀನ್ಯತೆ, ವೈಜ್ಞಾನಿಕ ನಿರ್ವಹಣೆ, ಸಾಂಸ್ಥಿಕ ಸಹಯೋಗ ಮತ್ತು ಸಮುದಾಯದ ಭಾಗವಹಿಸುವಿಕೆಯಿಂದ ಇದು ಗುರುತಿಸಲ್ಪಟ್ಟಿದೆ ಎಂದು ಹೇಳಿದರು. "ಪ್ರಾಜೆಕ್ಟ್ ಟೈಗರ್" ಮತ್ತು ಸಿಂಹ, ಚಿರತೆ, ಹಿಮ ಚಿರತೆ ಮತ್ತು ಚಿರತೆ ಸಂರಕ್ಷಣೆಗಾಗಿನ ಉಪಕ್ರಮಗಳ ಯಶಸ್ಸನ್ನು ಉಲ್ಲೇಖಿಸಿದ ಸಚಿವರು, ಈ ನಿಟ್ಟಿನಲ್ಲಿ "ಸಂರಕ್ಷಣೆ ಮತ್ತು ಅಭಿವೃದ್ಧಿ" ಪರಸ್ಪರ ಕೈಜೋಡಿಸಬೇಕು, ಪರಿಸರ ವ್ಯವಸ್ಥೆಗಳನ್ನು ಬಲಪಡಿಸುವುದು, ಜೀವನೋಪಾಯವನ್ನು ಸುಧಾರಿಸುವುದು, ಸ್ಥಿತಿಸ್ಥಾಪಕತ್ವ ಮತ್ತು ಹವಾಮಾನ ಸವಾಲುಗಳನ್ನು ತಗ್ಗಿಸುವುದು ಎಂದು ಭಾರತ ಪ್ರದರ್ಶಿಸಿದೆ ಎಂದು ಹೇಳಿದರು.

ಭಾರತದ ಅನುಭವ ಮತ್ತು ಜಾಗತಿಕ ಜವಾಬ್ದಾರಿಯ ಆಳವಾದ ಪ್ರಜ್ಞೆಯು 2023 ರಲ್ಲಿ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್‌ (ದೊಡ್ಡ ಬೆಕ್ಕು)ಒಕ್ಕೂಟ (ಐಬಿಸಿಎ) ವನ್ನು ಪ್ರಾರಂಭಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವವನ್ನು ಪ್ರೇರೇಪಿಸಿತು ಎಂದು ಶ್ರೀ ಯಾದವ್ ಅವರು ಹೇಳಿದರು. ಐಬಿಸಿಎ ಏಳು ದೊಡ್ಡ ಬೆಕ್ಕು ವಂಶಗಳ ನೆಲೆಯಾಗಿರುವ ದೇಶಗಳನ್ನು ಒಟ್ಟುಗೂಡಿಸುವ ಮೊದಲ ವೇದಿಕೆಯಾಗಿದೆ ಎಂದು ಅವರು ಹೇಳಿದರು. ಇದು ಸಹಕಾರ, ಜ್ಞಾನ ಹಂಚಿಕೆ ಮತ್ತು ಪರಸ್ಪರ ಬೆಂಬಲದ ಮೂಲಕ ಸಂರಕ್ಷಣಾ ಸವಾಲುಗಳನ್ನು ಸಾಮೂಹಿಕವಾಗಿ ಪರಿಹರಿಸಬೇಕು ಎಂಬ ಭಾರತದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

ಮುಂಬರುವ ಶೃಂಗಸಭೆಯು ಜಾಗತಿಕ ಸಂರಕ್ಷಣಾ ರಾಜತಾಂತ್ರಿಕತೆಯಲ್ಲಿ ನಿರ್ಣಾಯಕ ಕ್ಷಣವಾಗಲಿದೆ ಎಂದು ಸಚಿವರು ಒತ್ತಿ ಹೇಳಿದರು, ದೊಡ್ಡ ಬೆಕ್ಕು ವಂಶ  ಸಂರಕ್ಷಣೆಯ ಭವಿಷ್ಯದ ಕುರಿತು ಚರ್ಚಿಸಲು ವಿಶ್ವ ನಾಯಕರು, ತಜ್ಞರು ಮತ್ತು ಪಾಲುದಾರರನ್ನು ಒಟ್ಟುಗೂಡಿಸುತ್ತದೆ ಎಂದು ಸಚಿವರು ಒತ್ತಿ ಹೇಳಿದರು.  ಈ ಶೃಂಗಸಭೆಯು ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ಬಲಪಡಿಸುತ್ತದೆ, ದಕ್ಷಿಣ-ದಕ್ಷಿಣ ಸಹಕಾರವನ್ನು ಉತ್ತೇಜಿಸುತ್ತದೆ, ದೊಡ್ಡ ಬೆಕ್ಕುಗಳ ವಂಶ ಶ್ರೇಣಿಯ ರಕ್ಷಣಾ ದೇಶಗಳ ನಡುವೆ ಸಾಮೂಹಿಕ ಕ್ರಮವನ್ನು ಪ್ರೇರೇಪಿಸುತ್ತದೆ ಮತ್ತು ಜಾಗತಿಕ ಜೀವವೈವಿಧ್ಯ ಮತ್ತು ಹವಾಮಾನ ಗುರಿಗಳೊಂದಿಗೆ ಸಂರಕ್ಷಣಾ ಪ್ರಯತ್ನಗಳನ್ನು ಹೊಂದಿಸುತ್ತದೆ ಎಂದು ಅವರು ಹೇಳಿದರು. ಮೊದಲ ಬಾರಿಗೆ, ವಿಶ್ವ ನಾಯಕರು ಖಂಡಗಳಾದ್ಯಂತ ದೊಡ್ಡ ಬೆಕ್ಕು ವಂಶಗಳ ಸಂರಕ್ಷಣೆಯ ಕುರಿತು ಚರ್ಚಿಸಲು ಪ್ರತ್ಯೇಕವಾಗಿ ಸಭೆ ಸೇರುತ್ತಾರೆ ಎಂದು ಅವರು ಹೇಳಿದರು.

'ದೆಹಲಿ ಘೋಷಣೆ' ಎಂಬ ಶೀರ್ಷಿಕೆಯ ದೊಡ್ಡ ಬೆಕ್ಕು ವಂಶಗಳ ಸಂರಕ್ಷಣೆಯ ಕುರಿತಾದ ಮೊದಲ ಜಾಗತಿಕ ಘೋಷಣೆಯನ್ನು ಅಳವಡಿಸಿಕೊಳ್ಳುವುದು ಶೃಂಗಸಭೆಯ ಪ್ರಮುಖ ಫಲಿತಾಂಶವಾಗಿದೆ ಎಂದು ಕೇಂದ್ರ ಸಚಿವ ಶ್ರೀ ಯಾದವ್ ಅವರು ಮಾಹಿತಿ ನೀಡಿದರು, ಇದು ಹಂಚಿಕೆಯ ಆದ್ಯತೆಗಳನ್ನು ಸ್ಪಷ್ಟಪಡಿಸುತ್ತದೆ, ಗಡಿಯಾಚೆಗಿನ ಸಹಕಾರವನ್ನು ಬಲಪಡಿಸುತ್ತದೆ ಮತ್ತು ದೊಡ್ಡ ಬೆಕ್ಕುಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸಲು ಭೂದೃಶ್ಯ ಆಧಾರಿತ ವಿಧಾನವನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು 

ಶೃಂಗಸಭೆಯ ಸಂದರ್ಭದಲ್ಲಿ, ಜೂನ್ 1 ಮತ್ತು 2 ರಂದು 2026 ರಂದು,  ತಾಂತ್ರಿಕ ಅಧಿವೇಶನಗಳು ನಡೆಯಲಿವೆ, ಇದರಲ್ಲಿ ದೊಡ್ಡ ಬೆಕ್ಕು ವಂಶಗಳ ಶ್ರೇಣಿಯ ಸಂರಕ್ಷಣೆಯ 95 ದೇಶಗಳ ಹಿರಿಯ ಸರ್ಕಾರಿ ಅಧಿಕಾರಿಗಳು, ಸಂರಕ್ಷಣಾ ವೃತ್ತಿಪರರು, ತಜ್ಞರು ಮತ್ತು ಪಾಲುದಾರ ಸಂಸ್ಥೆಗಳ ಭಾಗವಹಿಸುವಿಕೆ ಇರುತ್ತದೆ. ಪ್ರಮುಖ ಸಂಸ್ಥೆಗಳು ಮತ್ತು ಪಾಲುದಾರರ ಸಹಯೋಗದೊಂದಿಗೆ ಬುಡಕಟ್ಟು ಕಲೆ, ದೊಡ್ಡ ಬೆಕ್ಕುಗಳ ಮೇಲಿನ ವರ್ಣಚಿತ್ರಗಳು, ತಲ್ಲೀನಗೊಳಿಸುವ ಛಾಯಾಚಿತ್ರಗಳು, ಚಲನಚಿತ್ರಗಳು, ವರ್ಚುವಲ್ ರಿಯಾಲಿಟಿ ಅನುಭವಗಳು ಮತ್ತು ದೊಡ್ಡ ಬೆಕ್ಕು ಮತ್ತು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಭಾರತದ ಅತ್ಯುತ್ತಮ ಅಭ್ಯಾಸಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸುವ ಕ್ಯುರೇಟೆಡ್ ಪ್ರದರ್ಶನವನ್ನು ಸಹ ಈ ಸಂದರ್ಭದಲ್ಲಿ ಆಯೋಜಿಸಲಾಗುವುದು.

 

ಐಬಿಸಿಎ ಶೃಂಗಸಭೆಯ ಜಾಲತಾಣ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಇದು ಸಂಪರ್ಕ, ತೊಡಗಿಸಿಕೊಳ್ಳುವಿಕೆ ಮತ್ತು ಮಾಹಿತಿ ಹಂಚಿಕೆಗಾಗಿ ಮೀಸಲಾದ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಇದು ಶೃಂಗಸಭೆಯ ದೃಷ್ಟಿಕೋನ, ಸಂರಕ್ಷಣಾ ನಿರೂಪಣೆ ಮತ್ತು ಜಾಗತಿಕ ಪ್ರಸ್ತುತತೆಯನ್ನು ಸೆರೆಹಿಡಿಯುವ ಅಧಿಕೃತ ಐಬಿಸಿಎ ಶೃಂಗಸಭೆ 2026 ಲಾಂಛನ ಚಿತ್ರ ಬಿಡುಗಡೆಯನ್ನು ಸಹ ಆಯೋಜಿಸಲಾಗಿದೆ. ಈ ಲಾಂಛನವು ಅರಿವು, ಗೋಚರತೆ ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.  ಶೃಂಗಸಭೆಯ ಅಧಿಕೃತ ಡಿಜಿಟಲ್ ಗುರುತಾಗಿ ಜಾಲತಾಣ ಕಾರ್ಯನಿರ್ವಹಿಸುತ್ತದೆ, ಎಲ್ಲಾ ಸಂವಹನಗಳಲ್ಲಿ ಸ್ಥಿರತೆ, ದೃಢೀಕರಣ ಮತ್ತು ಸ್ಪಷ್ಟತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

ಐಬಿಸಿಎ ಶೃಂಗಸಭೆಯ ಲಾಂಛನವನ್ನು ಉಲ್ಲೇಖಿಸಿದ ಕೇಂದ್ರ ಸಚಿವ ಶ್ರೀ ಯಾದವ್ ಅವರು, ಇದು ಉಪಕ್ರಮದ ಚೈತನ್ಯವನ್ನು ಸೆರೆಹಿಡಿಯುತ್ತದೆ ಎಂದು ಹೇಳಿದರು.  ಸಾಮರಸ್ಯ, ಸಮತೋಲನ ಮತ್ತು ಪರಸ್ಪರ ಸಂಬಂಧ ಹೊಂದಿರುವ ಪರಿಸರ ವ್ಯವಸ್ಥೆಗಳನ್ನು ಲಾಂಛನ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.  ಅದರ ಮೂಲದಲ್ಲಿ ಏಳು ದೊಡ್ಡ ಬೆಕ್ಕು ಪ್ರಭೇದಗಳನ್ನು ಒಳಗೊಂಡಿದೆ, ಏಕತೆ ಮತ್ತು ಹಂಚಿಕೆಯ ಜವಾಬ್ದಾರಿಯನ್ನು ಸಂಕೇತಿಸುತ್ತದೆ ಮತ್ತು ಪ್ರಕೃತಿಯ ಐದು ಅಂಶಗಳನ್ನು ಪ್ರತಿನಿಧಿಸುವ ಕಮಲದಿಂದ ಪ್ರೇರಿತ ವಿನ್ಯಾಸದಿಂದ ಆವೃತವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಶೃಂಗಸಭೆಯನ್ನು ಜಾಗತಿಕವಾಗಿ ಯಶಸ್ವಿಗೊಳಿಸುವಲ್ಲಿ ನಾಯಕತ್ವ ಮತ್ತು ನಿಶ್ಚಿತಾರ್ಥವು ನಿರ್ಣಾಯಕವಾಗಿದೆ ಎಂದು ಹೇಳಿದರು. ಐಬಿಸಿಎಯ ಭಾಗವಾಗಿರದ ದೊಡ್ಡ ಬೆಕ್ಕು ವಂಶಗಳ ಶ್ರೇಣಿಯ ಸಂರಕ್ಷಣೆಯ ದೇಶಗಳು ಈ ಜಾತಿಗಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಲವಾದ, ಅಂತರ್ಗತ ಮತ್ತು ಕ್ರಿಯಾಶೀಲ ವೇದಿಕೆಯನ್ನು ನಿರ್ಮಿಸಲು ಒಕ್ಕೂಟಕ್ಕೆ ಸೇರಲು ಅವರು ಕರೆ ನೀಡಿ ಸಚಿವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ವೇದಿಕೆಯಲ್ಲಿ ಎಂ.ಒ.ಇ.ಎಫ್‌.ಸಿ.ಸಿ. ಕಾರ್ಯದರ್ಶಿ ಶ್ರೀ ತನ್ಮಯ್ ಕುಮಾರ್; ಎಂ.ಒ.ಇ.ಎಫ್‌.ಸಿ.ಸಿ. ಕಾರ್ಯದರ್ಶಿ (ಪಶ್ಚಿಮ) ಶ್ರೀ ಸಿಬಿ ಜಾರ್ಜ್; ಎಂ.ಒ.ಇ.ಎಫ್‌.ಸಿ.ಸಿ. ಮಹಾನಿರ್ದೇಶಕರು (ಅರಣ್ಯ) ಮತ್ತು ವಿಶೇಷ ಕಾರ್ಯದರ್ಶಿ ಶ್ರೀ ಸುಶೀಲ್ ಕುಮಾರ್ ಅವಸ್ಥಿ; ಮತ್ತು ಐಬಿಸಿಎ ಮಹಾನಿರ್ದೇಶಕ ಶ್ರೀ ಎಸ್.ಪಿ. ಯಾದವ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

******


(ಪ್ರಕಟಣೆ ಐ.ಡಿ.: 2258527) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi