ಸಂಪುಟ
3,900 ಕೋಟಿ ರೂಪಾಯಿಗೂ ಹೆಚ್ಚಿನ ಒಟ್ಟು ಹೂಡಿಕೆಯೊಂದಿಗೆ ಎರಡು ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳಿಗೆ ಸಚಿವ ಸಂಪುಟ ಅನುಮೋದನೆ
ಇಂಡಿಯಾ ಸೆಮಿಕಂಡಕ್ಟರ್ ಮಿಷನ್: ಕಾಂಪೌಂಡ್ ಸೆಮಿಕಂಡಕ್ಟರ್ ಆಧಾರಿತ ಮಿನಿ/ಮೈಕ್ರೋ ಎಲ್ ಇ ಡಿ ಡಿಸ್ ಪ್ಲೇ ಉತ್ಪಾದನೆಯಲ್ಲಿ ಭಾರತ ಮುನ್ನಡೆಯುತ್ತಿದ್ದಂತೆ ವೇಗವು ಮತ್ತಷ್ಟು ಹೆಚ್ಚಿದೆ
ಪ್ರಕಟಣಾ ದಿನಾಂಕ:
05 MAY 2026 6:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 'ಇಂಡಿಯಾ ಸೆಮಿಕಂಡಕ್ಟರ್ ಮಿಷನ್' (ಐ ಎಸ್ ಎಂ) ಅಡಿಯಲ್ಲಿ ಎರಡು ಸೆಮಿಕಂಡಕ್ಟರ್ ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ ಗ್ಯಾಲಿಯಂ ನೈಟ್ರೈಡ್ (GaN) ತಂತ್ರಜ್ಞಾನ ಆಧಾರಿತ ದೇಶದ ಮೊದಲ ವಾಣಿಜ್ಯ ಮಿನಿ/ಮೈಕ್ರೋ-ಎಲ್ ಇ ಡಿ ಡಿಸ್ ಪ್ಲೇ ಸೌಲಭ್ಯ ಮತ್ತು ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ಸೌಲಭ್ಯಗಳು ಸೇರಿವೆ.
ಅನುಮೋದನೆ ಪಡೆದ ಈ ಎರಡು ಪ್ರಸ್ತಾವನೆಗಳು ಗುಜರಾತ್ ನಲ್ಲಿ ಸುಮಾರು 3,936 ಕೋಟಿ ರೂಪಾಯಿಗಳ ಒಟ್ಟು ಹೂಡಿಕೆಯೊಂದಿಗೆ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿವೆ ಮತ್ತು ಇವುಗಳಿಂದ ಅಂದಾಜು 2,230 ನುರಿತ ವೃತ್ತಿಪರರಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಅನುಮೋದಿತ ಎರಡು ಪ್ರಸ್ತಾವನೆಗಳ ವಿವರಗಳು ಈ ಕೆಳಗಿನಂತಿವೆ:
I. ಕ್ರಿಸ್ಟಲ್ ಮ್ಯಾಟ್ರಿಕ್ಸ್ ಲಿಮಿಟೆಡ್ (ಸಿಎಂಎಲ್): ಇದು ಗುಜರಾತ್ ನ ಧೋಲೇರಾದಲ್ಲಿ ಮಿನಿ/ಮೈಕ್ರೋ-ಎಲ್ ಇ ಡಿ ಡಿಸ್ ಪ್ಲೇ ಮಾಡ್ಯೂಲ್ ಗಳ ತಯಾರಿಕೆಗಾಗಿ 'ಕಾಂಪೌಂಡ್ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್' ಮತ್ತು 'ಎಟಿಎಂಪಿ' ಯ ಸಮಗ್ರ ಸೌಲಭ್ಯವನ್ನು ಸ್ಥಾಪಿಸಲಿದೆ. ಈ ಸಮಗ್ರ ಘಟಕವು 6 ಇಂಚಿನ ವೇಫರ್ ಗಳ ಮೇಲಿನ ಎಪಿಟಾಕ್ಸಿ ಸೇರಿದಂತೆ 'GaN ಫೌಂಡ್ರಿ' ಸೇವೆಗಳನ್ನು ಸಹ ಒದಗಿಸಲಿದೆ. ಮಿನಿ/ಮೈಕ್ರೋ-ಎಲ್ ಇ ಡಿ ಡಿಸ್ ಪ್ಲೇ ಪ್ಯಾನೆಲ್ ಗಳ ಉದ್ದೇಶಿತ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು 72,000 ಚದರ ಮೀಟರ್ ಗಳು ಮತ್ತು ಮಿನಿ-ಮೈಕ್ರೋ-ಎಲ್ ಇ ಡಿ GaN ಎಪಿಟಾಕ್ಸಿ ವೇಫರ್ ಗಳ ಸಾಮರ್ಥ್ಯವು 24,000 ಆರ್ ಜಿ ಬಿ ವೇಫರ್ ಸೆಟ್ ಗಳಾಗಿವೆ. ಉದ್ದೇಶಿತ ಉತ್ಪನ್ನಗಳನ್ನು ಟಿವಿಗಳು ಮತ್ತು ವಾಣಿಜ್ಯ ಪ್ರದರ್ಶನ ಫಲಕಗಳ ದೊಡ್ಡ ಡಿಸ್ ಪ್ಲೇಗಳು, ಟ್ಯಾಬ್ಲೆಟ್ ಗಳು, ಸ್ಮಾರ್ಟ್‌ಫೋನ್ ಗಳು ಮತ್ತು ಕಾರಿನ ಒಳಗಿನ ಮಧ್ಯಮ ಗಾತ್ರದ ಡಿಸ್ ಪ್ಲೇಗಳಲ್ಲಿ ಹಾಗೂ ವಿಸ್ತೃತ ರಿಯಾಲಿಟಿ (ಎಕ್ಸ್ ಆರ್) ಗ್ಲಾಸ್ ಗಳು ಮತ್ತು ಸ್ಮಾರ್ಟ್ ವಾಚ್ ಗಳ ಮೈಕ್ರೋ-ಡಿಸ್ ಪ್ಲೇಗಳಲ್ಲಿ ಬಳಸಲಾಗುವುದು.
II. ಸುಚಿ ಸೆಮಿಕಾನ್ ಪ್ರೈವೇಟ್ ಲಿಮಿಟೆಡ್ (ಎಸ್ ಎಸ್ ಪಿ ಎಲ್): ಇದು ಗುಜರಾತ್ ನ ಸೂರತ್ ನಲ್ಲಿ ಡಿಸ್ಕ್ರೀಟ್ ಸೆಮಿಕಂಡಕ್ಟರ್ ಗಳ ತಯಾರಿಕೆಗಾಗಿ 'ಔಟ್‌ಸೋರ್ಸ್‌ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್' (ಒ ಎಸ್ ಎ ಟಿ) ಸೌಲಭ್ಯವನ್ನು ಸ್ಥಾಪಿಸಲಿದೆ. ಸುಚಿ ಸೆಮಿಕಾನ್ ನ ಉದ್ದೇಶಿತ ಉತ್ಪಾದನಾ ಸಾಮರ್ಥ್ಯವು ವರ್ಷಕ್ಕೆ 1,033.20 ಮಿಲಿಯನ್ ಚಿಪ್ ಗಳಾಗಿವೆ. ಇವುಗಳನ್ನು ಪವರ್ ಎಲೆಕ್ಟ್ರಾನಿಕ್ಸ್, ಅನಲಾಗ್ ಐಸಿಗಳು ಮತ್ತು ಕೈಗಾರಿಕಾ ವ್ಯವಸ್ಥೆಗಳಲ್ಲಿ ಬಳಸಲಾಗುವುದು; ಇದು ವಾಹನ ಉದ್ಯಮ, ಕೈಗಾರಿಕಾ ಆಟೊಮೇಷನ್ ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಗಳಿಗೆ ಪೂರಕವಾಗಲಿದೆ.
ಈ ಎರಡು ಅನುಮೋದನೆಗಳೊಂದಿಗೆ, ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐ ಎಸ್ ಎಂ) ಅಡಿಯಲ್ಲಿ ಅನುಮೋದಿತ ಯೋಜನೆಗಳ ಒಟ್ಟು ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಒಟ್ಟು ಹೂಡಿಕೆಯು ಸುಮಾರು 1.64 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ಇದು ದೇಶದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಗಮನಾರ್ಹ ಉತ್ತೇಜನ ನೀಡಲಿದೆ.
ಇವು ದೇಶದಲ್ಲಿ ಬೆಳೆಯುತ್ತಿರುವ ವಿಶ್ವದರ್ಜೆಯ ಚಿಪ್ ವಿನ್ಯಾಸ ಸಾಮರ್ಥ್ಯಗಳಿಗೆ ಪೂರಕವಾಗಿರಲಿವೆ. ಸರ್ಕಾರವು 315 ಶೈಕ್ಷಣಿಕ ಸಂಸ್ಥೆಗಳು ಮತ್ತು 104 ನವೋದ್ಯಮಗಳಿಗೆ ನೀಡುತ್ತಿರುವ ವಿನ್ಯಾಸ ಮೂಲಸೌಕರ್ಯ ಬೆಂಬಲವು ಈ ಬೆಳವಣಿಗೆಯನ್ನು ಪ್ರೇರೇಪಿಸುತ್ತಿದೆ.
ಈಗಾಗಲೇ ಅನುಮೋದನೆಗೊಂಡ ಹತ್ತು ಯೋಜನೆಗಳು ವಿವಿಧ ಹಂತದ ಅನುಷ್ಠಾನದಲ್ಲಿದ್ದು, ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯಲ್ಲಿ ವೇಗವು ಮತ್ತಷ್ಟು ಹೆಚ್ಚುತ್ತಿದೆ. ಈಗಾಗಲೇ ಎರಡು ಯೋಜನೆಗಳು ಭಾರತದಿಂದ ವಾಣಿಜ್ಯ ಸಾಗಣೆಯನ್ನು ಪ್ರಾರಂಭಿಸಿವೆ ಮತ್ತು ಮತ್ತೆರಡು ಯೋಜನೆಗಳು ಶೀಘ್ರದಲ್ಲೇ ವಾಣಿಜ್ಯ ಸಾಗಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
******
(ಪ್ರಕಟಣೆ ಐ.ಡಿ.: 2258167)
ವಿಸಿಟರ್ ಕೌಂಟರ್ : 17